Pages

Ads 468x60px

Thursday, 1 November 2012

ತಗ್ಗಿ ಗಿಡದ ಮುಂದೆ ತಗ್ಗಿ ಬಗ್ಗಿ ನಡೆಯಿರಿ !


ನೈಸರ್ಗಿಕವಾಗಿ ಲಭಿಸುವ ಕಾಡುಕುಸುಮಗಳೇ ದೇವತಾರ್ಚನೆಯಲ್ಲಿ ಪ್ರಥಮ ಸ್ಥಾನ ಪಡೆದಿವೆ. ಶ್ರಾವಣ ಮಾಸ ಆರಂಭದೊಂದಿಗೆ ಇಂತಹ ವೈವಿಧ್ಯಮಯ ಹೂಗಳು ಅರಳಿ ನಲಿಯುತ್ತಿರುತ್ತವೆ. ಅದು ಕೇರಳೀಯರ ಓಣಂ ಆಗಿರಬಹುದು, ಸಾರಸ್ವತರ ಚೂಡೀ ಹಬ್ಬವೇ ಆಗಿರಬಹುದು, ಈ ಹೂಗಳ ಸಂಗ್ರಹಕ್ಕೇ ಆದ್ಯತೆ. ಈಗ ಅಲ್ಲಿ ಇಲ್ಲಿ ಅಲೆದು ಹೂ ಸಂಗ್ರಹಿಸುವ ಸಂಪ್ರದಾಯ ಹೋಗ್ಬಿಟ್ಟಿದೆ, ಏನಿದ್ದರೂ ಮಾರ್ಕೆಟ್ ಗೆ ಹೋದರಾಯಿತು.
ತೇರಿನಂತೆ ಅರಳಿ ನಿಂತಿರುತ್ತವೆ ರಥ ಹೂಗಳು, Verbenaceae ಕುಟುಂಬಕ್ಕೆ ಸೇರಿದೆ. ಇದೇ ಕುಟುಂಬದ ಇನ್ನೊಂದು ಸಸ್ಯ ತಗ್ಗಿ ಹೂ. ಸಸ್ಯಶಾಸ್ತ್ರೀಯವಾಗಿ Clerodendrum phlomidis ಎಂಬ ಹೆಸರನ್ನು ಸಸ್ಯವಿಜ್ಞಾನಿಗಳು ಇಟ್ಟಿದ್ದಾರೆ.

ಸಾಮಾನ್ಯವಾಗಿ ಆಗಸ್ಟ್ ನಿಂದ ಫೆಬ್ರವರಿವರೆಗೆ ಹೂಗಳು ಅರಳುವ ಸಮಯ. ಬಿಳಿ ಬಣ್ಣದ ಈ ಕುಸುಮಗಳಿಗೆ ಉದ್ದನೆಯ ಕೇಸರ. ಬೆಳಗಾದೊಡನೆ ದುಂಬಿಗಳು ಈ ಹೂವ ಸುತ್ತ ಹಾರಾಡುತ್ತಿರುತ್ತವೆ. ಆಘ್ರಾಣಿಸಿದರೆ ಕಡು ಸುವಾಸನೆ ! ಉತ್ತರ ಭಾರತದ ಶಿವಾಲಯಗಳಲ್ಲಿ ಈ ಹೂವೇ ಶಿವಾರ್ಚನೆಯಲ್ಲಿ ಪ್ರಧಾನ ಪುಷ್ಪ. ಅಲ್ಲಿ ' ಅಲ್ಕಾ ' ಎಂಬ ಹೆಸರೂ ಈ ಹೂಗಳಿಗಿವೆ.ಭಾರತ ಹಾಗೂ ಶ್ರೀಲಂಕಾಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಸಸ್ಯ. ರಸ್ತೆ ಪಕ್ಕಗಳಲ್ಲಿ, ನಿರುಪಯುಕ್ತ ಜಾಗಗಳಲ್ಲಿ ಬೆಳೆಯುವ ಈ ಸಸ್ಯ 4 ರಿಂದ 5 ಅಡಿ ಎತ್ತರವಿರುತ್ತದೆ. ಬೇರು ಹೋದಲ್ಲೆಲ್ಲ ಗಿಡಗಳು ಮೊಳೆಯುತ್ತವೆ. ನಮ್ಮ ಅಡಿಕೆ ತೋಟಗಳಲ್ಲಿ ಒಂದು ಕಳೆ ಸಸ್ಯದಂತೆ ಕಂಡರೂ ಇದನ್ನು ಕಡಿದು ಹಾಕವ ಗೋಜಿಗೇ ಯಾರೂ ಹೋಗುವುದಿಲ್ಲ, ಅಷ್ಟೂ ಭಯ ಭಕ್ತಿಯಿಂದ ಈ ಗಿಡದೆದುರು ತೋಟದ ಕೆಲಸಗಾರರು ನಡೆದು ಕೊಳ್ಳುವುದನ್ನು ನಾನು ಕಂಡಿದ್ದೇನೆ.

" ಅಡಿಕೆ ಮರದ ಬುಡದಲ್ಲೇ ಸೊಕ್ಕಿ ಬೆಳೆದಿದೆಯಲ್ಲ , ಕಡಿದು ಹಾಕಬಾರದೇ "
"ಹಾಗನ್ಬೇಡಿ ಅಕ್ಕ, ಅದನ್ನು ಕಡೀಬಾರ್ದಂತೆ, ದೇವ್ರಿಗೆ ತುಂಬಾ ಇಷ್ಟವಂತೆ ಈ ಹೂ " ಅನ್ನುತ್ತ ಹುಲ್ಲು ಕತ್ತರಿಸುತ್ತಿದ್ದ ಕಲ್ಯಾಣಿ ಎರಡೂ ಕೈಗಳಿಂದ ಗಿಡದೆದುರು ನಮಸ್ಕರಿಸಿದಳು.
ದೇವರಿಗೆ ಪ್ರಿಯವಲ್ಲದ ಹೂ ಯಾವುದಿದೆ, ಮರು ಮಾತಿಲ್ಲದೇ ಸುಮ್ಮನಾಗಬೇಕಾಯಿತು.

ಕೃಷಿಕರ ಬದುಕಿಗೂ ಬಹಳ ಹತ್ತಿರದ ಸಸ್ಯ. ಗದ್ದೆ ನಾಟಿ ಮಾಡುವಾಗ ಭತ್ತದ ಕಾಳುಗಳ ಮೊಳಕೆ ಬರಿಸುವಲ್ಲಿ ಕೃಷಿಕರು ಹಲವು ತಂತ್ರಗಾರಿಕೆಯನ್ನು ಅನುಸರಿಸುತ್ತಾರೆ. ಬೆಚ್ಚಗೆ ಅಟ್ಟದಲ್ಲಿ ಕುಳಿತಿದ್ದ ಬಿತ್ತನೆ ಭತ್ತದ ಮೂಟೆಯನ್ನು ಮೊದಲು ನೀರಿನಲ್ಲಿ ನೆನೆ ಹಾಕಲಾಗುತ್ತದೆ. ಸಮರ್ಥ ಕೆಲಸಗಾರರು ಭತ್ತ ತುಂಬಿದ ಗೋಣಿಯನ್ನೇ ನೀರಿನಲ್ಲಿ ಇಳಿ ಬಿಡುತ್ತಾರೆ, ಕೆರೆಯೂ ಆದೀತು. ಕರಾರುವಾಕ್ 12 ಘಂಟೆಯ ಅವಧಿಯಲ್ಲಿ ನೆನೆದ ಗೋಣಿಯನ್ನು ಮೇಲೆತ್ತಿ ತರುವ ಶ್ರಮದ ಹಿಂದೆ ಸಂಭ್ರಮವೂ ಇದೆ. ಅಷ್ಟೂ ಭತ್ತದ ಕಾಳುಗಳು ಮುಂದಿನ ವರ್ಷದ ಊಟದ ಸಿದ್ಧತೆಯ ಮೊದಲ ಹಂತ. ಗೋಣಿಯಿಂದ ನೀರು ತಾನಾಗಿಯೇ ಬಸಿದು ಹೋದ ನಂತರ 24 ಘಂಟೆ ಕಳೆದ ಮೇಲೆ, ಈ ಭತ್ತದ ರಾಶಿಗೆ ದಪ್ಪನೆಯ ಸೆಗಣಿ ಲೇಪ ಹಚ್ಚುವ ಕಾಯಕ. ನಂತರ ಬಿದಿರಿನ ಬುಟ್ಟಿಗಳಲ್ಲಿ ತಗ್ಗೀ ಎಲೆಗಳನ್ನು ಹರವಿ, ಕಾಳುಗಳನ್ನು ತುಂಬಿಸಿ, ಮೇಲಿನಿಂದ ಪುನಃ ತಗ್ಗೀ ಎಲೆಗಳನ್ನು ಧಾರಾಳವಾಗಿ ಹರಡಿ ಮುಚ್ಚುತ್ತಾರೆ. ಅತೀ ಉಷ್ಣ ಗುಣವುಳ್ಳ ಈ ಎಲೆಗಳು ಭತ್ತದ ಕಾಳುಗಳು ಮೊಳಕೆಯೊಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸೌತೇಕಾಯಿ ಬೀಜಗಳನ್ನು ನಾಟಿ ಮಾಡಬೇಕಾದರೂ ಈ ವಿಧಾನ ಅನುಸರಿಸುತ್ತಾರೆ.

ಶುಭ ಸಮಾರಂಭದ ಅವಶ್ಯಕತೆಗೆಂದು ಕದಳೀ ಬಾಳೆಗೊನೆಗಳನ್ನು ತೋಟದಿಂದ ಕಡಿದು ತಂದು ಇಟ್ಟಾಗಿದೆ. ಇನ್ನೂ ಹಣ್ಣಾಗುವ ಲಕ್ಷಣವೇ ಕಾಣಿಸುತ್ತಿಲ್ಲ. ಅದಕ್ಕೂ ಇಲ್ಲಿದೆ ಉಪಾಯ. ಬಾಳೆಗೊನೆಗಳ ಮೇಲೆ ಲಕ್ಷಣವಾಗಿ ತಗ್ಗೀ ಎಲೆಗಳನ್ನು ಹರಡಿ ಬಿಡಿ, ಮೇಲಿನಿಂದ ಗೋಣೀ ಚೀಲ ಮುಚ್ಚಿ ಬಿಡಿ, ಆಗುವ ಮ್ಯಾಜಿಕ್ ನೋಡಿ.ದಶಮೂಲಾರಿಷ್ಟವನ್ನು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ತಂದಿಟ್ಟುಕೂಳ್ಳುತ್ತೇವೆ. ಮಲಬದ್ಧತೆ, ಗ್ಯಾಸ್ ಟ್ರಬಲ್ ಇತ್ಯಾದಿ ಸಮಸ್ಯೆಗಳಿಗೆ ಆಯುರ್ವೇದಿಕ್ ಟಾನಿಕ್. ಇದರ ತಯಾರಿಗೆ ಬೇಕಾಗುವ ಬೇಕಾಗುವ ಗಿಡಮೂಲಿಕೆಗಳಲ್ಲಿ ತಗ್ಗೀ ಬೇರು ಕೂಡಾ ಸೇರಿದೆ.

ಆಯುರ್ವೇದ, ಯುನಾನಿ ಮತ್ತು ಸಿದ್ಧ ವೈದ್ಯ ಚಿಕಿತ್ಸಾ ಪದ್ಧತಿಯಲ್ಲಿ ತಗ್ಗೀ ಗಿಡ ಪ್ರಾಮುಖ್ಯತೆ ಗಳಿಸಿದೆ. ತಗ್ಗೀ ಎಲೆಗಳನ್ನು ಅರೆದ ಲೇಪನದಿಂದ ಚರ್ಮದ ಮೇಲಿನ ಗಾಯ, ಬಾವುಗಳು ಶೀಘ್ರ ಚೇತರಿಕೆ.
ಚರ್ಮರೋಗಗಳಾದ ತೊನ್ನು, ಕುಷ್ಠ ರೋಗಗಳಿಗೂ ಎಲೆಗಳು ಸಿದ್ಧೌಷಧ. ಗಂಭೀರ ಸ್ವರೂಪದ ಕೆಮ್ಮು, ಶ್ವಾಸನಾಳದ ಸೋಂಕು, ಮಲೇರಿಯಾ ಜ್ವರಗಳಿಗೆ ಈ ಎಲೆಗಳಿಂದ ಚಿಕಿತ್ಸೆ.

ಪಾರಂಪರಿಕ ಔಷಧೀಯ ಸಸ್ಯವಾಗಿರುವ ಇದರ ಬಳಕೆಯಲ್ಲಿ ಗ್ರಾಮೀಣ ಮಹಿಳೆಯರು ಬಹಳ ಮುಂದೆ ಇದ್ದಾರೆ. ಅರಿಷ್ಟ ಲೇಹ್ಯಗಳು ಕೈಗೆಟುಕದಿದ್ದಲ್ಲಿ ತಗ್ಗೀ ಬೇರಿನ ತಂಬುಳಿ ಮಾಡಿ ಉಣ್ಣುವ ಚಾಣಾಕ್ಷತನ ಅವರಲ್ಲಿದೆ.

" ತಂಬುಳಿ ಹೀಗೆ ಮಾಡ್ತಿದ್ರು " ಗೌರತ್ತೆ ನೆನಪಿನ ಪುಟ ಬಿಡಿಸಿ ಹೇಳಿದ್ದು ಹೀಗೆ.
ತಗ್ಗೀ ಬೇರಿನ ಹೊರಸಿಪ್ಪೆಯನ್ನು ಚೂರಿಯಿಂದ ಕೆತ್ತಿ ತೆಗೆದಿಟ್ಟು , ಈ ಸಿಪ್ಪೆ ಚೂರುಗಳನ್ನು ತುಪ್ಪದಲ್ಲಿ ಹುರಿಯಬೇಕು. ಕಾಯಿತುರಿ, ಮಜ್ಜಿಗೆಯೊಂದಿಗೆ ನುಣ್ಣಗೆ ಕಡೆದು, ಕುದಿಸಿ, ಒಗ್ಗರಣೆ ಕೊಟ್ಟರಾಯಿತು.
" ಏನು ಪರೀಮಳ ಇರ್ತದೆ ಗೊತ್ತಾ "
" ಹೌದೇ , ನಾನೂ ಮಾಡಿ ನೋಡ್ತೇನೆ "
" ಹಾಗೇ ಸುಮ್ಮನೆ ಮಾಡುವುದು ಬೇಡಾ "
ಔಷಧೀಯ ವನಸ್ಪತಿ ಸಸ್ಯಗಳ ಬಳಕೆ ಅನಿವಾರ್ಯವಾಗಿದ್ದಲ್ಲಿ ಮಾತ್ರ ಎಂಬ ಕಿವಿಮಾತೂ ಹೇಳಿದ್ರು ಗೌರತ್ತೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣ ಸಿಗುವ ತಗ್ಗೀ ಹೂ ಬಿಳಿ ವರ್ಣದ್ದು, ವೃತ್ತಾಕೃತಿಯ ಅಗಲ ಎಲೆಗಳಿಂದ ಕೂಡಿದೆ. ಸಸ್ಯಶಾಸ್ತ್ರೀಯವಾಗಿ ಇದು cleodendrum viscosum/c infortunatum. ಇದೇ ವಿಭಾಗಕ್ಕೆ ಸೇರಿದ ಇನ್ನೂ ನೂರಾರು ವರ್ಣಮಯ ಗಿಡಗಳು ನಿಸರ್ಗದಲ್ಲಿವೆ.


Posted via DraftCraft app


ಟಿಪ್ಪಣಿ: ಈ ಕಳಗೆ ಬರೆದಿದ್ದು ದಿನಾಂಕ 19, ಸಪ್ಟಂಬರ್, 2013.ಬಂದಿದೆ ಶ್ರಾವಣ
ಹೂಗಳ ತೋರಣ
ಹಸಿರಿನ ಸಿರಿಯ ಉಲ್ಲಾಸ
ನವ ಶೃಂಗಾರ ವಿಳಾಸ|

ಕಾಡು ಕುಸುಮವಿದೇನು
ತೇರಿನಂತರಳಿಹುದೇನು
ದುಂಬಿಗಳ ಗುಂಯ್ ಗುಟ್ಟುವಿಕೆಯೇನು
ಆಘ್ರಾಣಿಸೆ ಸುವಾಸನೆಯಿದೇನು|

ದಿನವೊಂದಾಗೆ ಉದುರಿ ಬೀಳುವಂತಹುದಲ್ಲ
ನೀರೆರೆದಿಲ್ಲ
ಗೊಬ್ಬರವೇನೂ ಬೇಕಿಲ್ಲ
ರೋಗಬಾಧೆ ಇಲ್ಲಿಲ್ಲ
ಕೀಟನಾಶಕಗಳ ಹಂಗಿಲ್ಲ|

ಅರಳಿ ನಿಂತಿಹ ವೈಚಿತ್ರ್ಯವಿದೇನು
ಜೈವಿಕ ಗಡಿಯಾರವಿದೇನು
ಋತುಗಾನವಿದೇನು
ಶ್ರಾವಣ ಮುಗಿಯುವ ತನಕ|

0 comments:

Post a Comment