Tuesday, 26 February 2013
ಶೃಂಗೇರಿಯಲ್ಲಿ ಶೃಂಗಾರ ಮಾಸ
ಅಯಾಚಿತವಾಗಿ ಶೃಂಗೇರಿಗೆ ಹೋಗುವ ಯೋಗ ಒದಗಿ ಬಂದಿತು. ಶೃಂಗೇರಿಗೆ ಈ ಹಿಂದೆ ಹೋಗಿದ್ದು ಸುಮಾರು ಇಪ್ಪತೈದು ವರ್ಷಗಳ ಮೊದಲು. ಆಗ ಮಕ್ಕಳುಮರಿ ಎಂಬ ತಾಪತ್ರಯಗಳಿಲ್ಲದೇ ಹಾಯಾಗಿದ್ದ ಕಾಲ. ದಕ್ಷಿಣ ಭಾರತ ಪ್ರವಾಸದ ಹಾದಿಯಲ್ಲಿ ಶೃಂಗೇರಿ ತೀರ್ಥಕ್ಷೇತ್ರವೂ ಲಭಿಸಿತ್ತು. " ಅದಿರ್ಲಿ, ಈಗ ಯಾಕೆ ಹೋಗಿದ್ರೀ " ಅಂತೀರಾ, ಈಗಿನ ಪ್ರಸಂಗವೇ ಬೇರೆ. ಅದನ್ನೇ ಇಲ್ಲಿ ಹೇಳಹೊರಟಿರುವುದು.
ನಮ್ಮ ಹಳ್ಳಿಗಾಡಿನ ಹುಡುಗರಿಗೆ ಮದುವೆಯ ಯೋಗವೇ ಇಲ್ಲದಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿನ ಬಾಯಾರು ಗ್ರಾಮದಲ್ಲೇ ಐವತ್ತಕ್ಕೂ ಹೆಚ್ಚು ಮಂದಿ ಯುವಕರು ಅವಿವಾಹಿತರಾಗಿಯೇ ವೃದ್ಧರಾಗುತ್ತಿದ್ದಾರೆ. ಅದರಲ್ಲೂ ಬ್ರಾಹ್ಮಣ ಹುಡುಗರಿಗೆ, ಕೃಷಿ ಹಾಗೂ ಆಸ್ತಿ ವಹಿವಾಟು ಇದ್ದರಂತೂ ಕಂಕಣ ಭಾಗ್ಯ ಕೂಡಿ ಬರುವುದೇ ಇಲ್ಲ. ಮನೆಯಲ್ಲಿ ವೃದ್ಧ ತಾಯ್ತಂದೆ ಇದ್ದರಂತೂ ಆ ಗಂಡು ಯಾರಿಗೂ ಬೇಡದವನು.
ಹೀಗಿರುವಾಗ ನಮ್ಮ ಒಬ್ಬ ಗಂಡಿಗೂ ಕಲ್ಯಾಣಯೋಗ ಕೂಡಿ ಬಂತು. ಅವನೇ ಮನೆಗೆ ಬಂದು ಹೀಗೆ ಹೇಳಿದ " ಅತ್ತಿಗೇ, ನಾಡಿದ್ದು ಒಂದನೇ ತಾರೀಕಿಗೇ ಮದುವೆ, ಕಾಗದ ಪ್ರಿಂಟ್ ಮಾಡಲೂ ಪುರುಸೊತ್ತಿಲ್ಲ, ಸಿಂಪಲ್ ಆಗಿ ಆಗೂದು, ನಾವು ಒಂದು ಏಳೆಂಟು ಜನ ಹೋಗೂದು, ನೀವು ಬರಲೇ ಬೇಕಾಗ್ತದೆ, ಗಂಡಿನ ಕಡೆಯಿಂದ ಆರತಿ ಎತ್ತೋಕೆ ಒಬ್ಬರು ಬೇಕಲ್ಲ..." ಬಡಬಡನೆ ಉಸುರಿದ.
ಅವನು ಹೇಳಿದ್ದು ಸರಿಯೇ. ಅವನಿಗೂ ಬೇರೆ ಹೆಣ್ಣುದಿಕ್ಕಿಲ್ಲ. ಎಂಬತ್ತು ದಾಟಿದ ಅಮ್ಮ ಒಬ್ಬರೇ ಇರುವುದು. " ಬೆಳಿಗ್ಗೆ ಮೂರು ಗಂಟೆಗೆಲ್ಲಾ ಎದ್ದು ಹೊರಟು ಬಿಡಿ, ವ್ಯಾನ್ ಮೊದಲು ಹಿರಣ್ಯಕ್ಕೇ ಬರ್ತದೆ " ಅಂದ.
ನಮ್ಮವರು ಮನೆಗೆ ಬಂದೊಡನೆ ಶ್ರೀಪಾದ ಹೀಗ್ಹೀಗೆ ಸುದ್ದಿ ಹೇಳಿದಾ... ಅಂತ ವರದಿ ಒಪ್ಪಿಸಿದೆ. ಇವರಿಗೂ ಭಲೇ ಖುಷಿಯಾಗಿ ಬಿಡ್ತು. " ಅವಂಗೂ ಮದ್ವೆ ಆಗ್ದೇ ಇದ್ರೆ ಆ ಮನೆತನಾನೇ ನಿಂತ್ಹಾಗೇ ಅಲ್ವೇ, ನೀನೂ ಹೊತ್ತಿಗೆ ಸರಿಯಾಗಿ ಹೊರಡು ಮತ್ತೆ "
ನಾನೂ ರಾತ್ರಿ ಮೂರು ಗಂಟೆಗೇ ಎದ್ದು ತಯಾರಾಗುವುದೇನೋ ಸರಿ. ಮನೆಯಲ್ಲಿ ಮಗಳೂ ಇದ್ದಳಲ್ಲ, " ನಿನ್ನ ಊಟತಿಂಡಿ ನೀನೇ ಮಾಡ್ಕೋ ಆಯ್ತಾ "
ಅವಳು ಮಹಾಜಾಣೆ, " ಅತ್ತೆ ಬರ್ತಾರಂತೆ " ಅಂದಳು. ನಮ್ಮ ಪಕ್ಕದಮನೆಯಲ್ಲಿ ನಮ್ಮವರ ಅಕ್ಕ ಊರಿಗೆ ಬಂದೋರು ಉಳಕೊಂಡಿದ್ದರು.
" ಆದರೂ ನೋಡಿಕೋ, ಅನ್ನ ಸಾರು ಮಾಡಿಕೊಳ್ಳಲು ತಿಳಿದಿರಬೇಕು " ಅನ್ನುತ್ತಾ ಆ ದಿನದ ಮದ್ಯಾಹ್ನದ ಅಡುಗೆಯನ್ನು ಅವಳ ಮೇಲುಸ್ತುವಾರಿಯಲ್ಲೇ ಮಾಡಿಸಿಯೂ ಆಯ್ತು.
ಮೂರು ಗಂಟೆಗೆಲ್ಲಾ ಎದ್ದು ಕಾಫಿ ತಿಂಡಿ ತಿನ್ನುವ ಹೊತ್ತಲ್ಲ. " ನೀನೇನು ಮಾಡ್ಕೋತೀಯ "
ಅದಕ್ಕೂ " ಅತ್ತೆ ಇದ್ದಾರಲ್ಲ " ಅಂದಳು.
" ಆಯ್ತು, ಅತ್ತೆ ಸೊಸೆ ಏನ್ಬೇಕಾದ್ರೂ ಮಾಡ್ಕೊಳ್ಳಿ "
" ಮಲಗೋ ಮೊದಲು ಹಂಡೆಯಲ್ಲಿ ನೀರು ಕಾಯಿಸಿ ಇಡು ಅಮ್ಮಾ", ಉಚಿತ ಸಲಹೆ ಬೇರೆ ಸಿಕ್ಕಿತು. " ಯಾವ ಸೀರೆ ಉಡ್ತೀಯ? "
" ಯಾವ್ದೋ ಒಂದು, ಮೊನ್ನೆ ಕಾಸರಗೋಡಿಗೆ ಹೋಗಿದ್ವಲ್ಲ, ಆ ಸೀರೇನೇ ಸಾಕೀಗ "
ಎದ್ದು ಈಚೆ ಬರಬೇಕಾದ್ರೆ ಶ್ರೀಪಾದಂದೂ ಫೋನ್ ರಿಂಗಣಿಸಿತು, " ಎದ್ರಾ ಅತ್ತಿಗೇ ?"
ಬೇಗ ಬೇಗ ಸ್ನಾನ ಮುಗಿಸಿ, ಒಳ ಬರುತ್ತಿದ್ದ ಹಾಗೇ ಹೊರಗಿನಿಂದ ವ್ಯಾನ್ ಬಂದೆನೆಂದು ಕೂಗಿಕೊಂಡಿತು.
ನಮ್ಮವರೂ ಪಂಚೆ ಸುತ್ತಲೋ ಇಲ್ಲ ಪ್ಯಾಂಟ್ ಧರಿಸಲೋ ಎಂದು ಮೀನಮೇಷ ಎಣಿಸುತ್ತಿದ್ದಂತೆ ಬರ್ಮುಡಾ ಮೇಲೊಂದು ಬಿಳೀ ಪಂಚೆಯೇರಿಸಿ ಸಿದ್ಧರಾದರು.
ಆತುರಾತುರವಾಗಿ ಹೊರಟು, ಮಲಗಿದ್ದ ಮಗಳನ್ನು ಎಬ್ಬಿಸಿ, ಅವಳೂ ಬಾಗಿಲು ಹಾಕಿ ಪುನಃ ಮಲಗಿಕೊಂಡಳು. ರಸ್ತೆ ಪಕ್ಕ ನಿಂತಿದ್ದ ವ್ಯಾನ್ ಬಳಿ ಬಂದೆವು. ನೋಡಿದ್ರೆ ಡ್ರೈವರು ಗೊರಕೆ ಹೊಡೆಯುತ್ತಿದ್ದಾನೆ. ನಮಗೊಂದು ಹಾರ್ನ್ ಬೆಲ್ ಮಾಡ್ಬಿಟ್ಟು ಇವನು ಹಾಯಾಗಿ ಕಾಲು ಚಾಚಿ ಮಲಗಿದ್ದು ನೋಡಿ ಸಿಟ್ಟು ಬಂತು, ಜೊತೆಗೇ ಮರುಕವೂ ಕೂಡ.
" ಇವನನ್ನು ಏಳ್ಸೂದು ಹೇಗೆ ?"
ನಮ್ಮವರು ಹಿಂದಿನಿಂದ ಬರ್ತಾ ಇದ್ದರು. " ಏನು, ನಿದ್ದೆ ಮಾಡಿದ್ದಾನಾ ? ಓಽಽಽಯ್ ಡ್ರೈವರೇ, ಲಕ್ಕ್ ಲೇಽಽಽ "
ಊಹುಂ, ಅವನು ಜಗ್ಗಲಿಲ್ಲ. ಬಾಗಿಲು ಸದ್ದು ಮಾಡಿದ್ರೂ ಇಲ್ಲ, ಕಿಟಿಕಿ ಕುಟ್ಟಿದ್ರೂ ಇಲ್ಲ. ಅಂತೂ ಏಳಿಸುವಷ್ಟರಲ್ಲಿ ನಾವು ಸುಸ್ತು.
ವ್ಯಾನು ಹೊರಟಿತು. ದಾರಿಯಲ್ಲಿ ಮದುಮಗ, ಜೊತೆಗೆ ಪುರೋಹಿತರು, ಸ್ನೇಹಿತ ಇಷ್ಟು ಮಂದಿ ಅಲ್ಲಲ್ಲಿ ವಾಹನವೇರಿದರು. ಶೃಂಗೇರಿ ಪ್ರಯಾಣ ಮುಂದುವರಿಯಿತು. ಬಜೆಗೋಳಿ ತಲಪುವಾಗ ಗಂಟೆ ಆರೂ ಮುಕ್ಕಾಲು. " ಕಾಫೀ ಹೊತ್ತು ಇನ್ನೂ ಆಗಿಲ್ಲ, ಇಲ್ಲೇ ತಿಂಡಿ ತಿನ್ನೋಣ ". ಹೋಟಲ್ ಇಡ್ಲೀ ಕಾಫೀ ಪ್ರಸಾದ ಆಯ್ತು. ನಿಗದಿತ ವೇಳೆಗೆ ಶೃಂಗೇರಿ ತಲಪಿದೆವು. ಅಲ್ಲಿಯೂ ಉಪ್ಪಿಟ್ಟು, ಶಿರಾ ನಮ್ಮನ್ನು ಕಾಯುತ್ತಾ ಇತ್ತು.
ಮದುವೆಯ ವಿಧಿ ವಿಧಾನಗಳನ್ನು ಅಲ್ಲಿನ ಅರ್ಚಕರು ಚುಟುಕಾಗಿ ಮುಗಿಸಿದರು. ಶ್ಲೋಕಗಳನ್ನು ಹೇಳುತ್ತ, " ಹೀಗ್ಹೀಗೆ ಮಾಡು " ಎಂದು ಕನ್ನಡದಲ್ಲೂ ಬೋಧಿಸುತ್ತ ಮಾಡಿದ ವಿವಾಹವಿಧಿಯ ಕ್ರಮ ಕುವೆಂಪು ಅವರ ಆದರ್ಶವನ್ನು ನೆನಪಿಗೆ ತಂದಿತು.
ಊಟದ ವೇಳೆಗೆ ಮುಂಚಿತವಾಗಿ ದೇವಸ್ಥಾನಕ್ಕೆ ಹೊರಟೆವು. ಪ್ರದಕ್ಷಿಣೆ ಬಂದು, ಪ್ರಸಾದಗಳಿಗೂ ಚೀಟಿ ಮಾಡಿಸಿ, ಮಂಗಳಾರತಿ ಆಗುವ ತನಕ ಗೋಪುರದಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತು ಒಳಾಂಗಣದ ಸೊಬಗು, ಶಿಲಾಕೆತ್ತನೆ ಕೆಲಸಗಳನ್ನು ನೋಡುತ್ತಾ ಕಾಲ ಕಳೆದೆವು. ಎಲ್ಲವೂ ಅಚ್ಚುಕಟ್ಟು. " ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು... ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ.." ಇತ್ಯಾದಿ ಕವನದ ಸಾಲುಗಳು ಮನದೊಳಗೆ ಆಲಾಪನೆ. ಹೊಸ ಪ್ರವೇಶದ್ವಾರದ ನಿರ್ಮಾಣಕಾರ್ಯ ಆಗುತ್ತಾ ಇತ್ತು, ಹಾಗಾಗಿ ದೇಗುಲದ ಸೌಂದರ್ಯ ಗೋಚರವಾಗುತ್ತಿರಲಿಲ್ಲ
ಇದಕ್ಕಿಂತಲೂ ಪುರಾತನ ದೇವಾಲಯ ಕಣ್ಗೋಚರದಲ್ಲೇ ಇದೆ. ಅಲ್ಲಿ ಬಾಗಿಲು ತೆರೆಯೋದು ಸಂಜೆ ಐದರ ನಂತರವಂತೆ. ದೇಗುಲದ ಹೊರನೋಟ ಮಾತ್ರದಿಂದಲೇ " ಹಂಸಗೀತೆ " ಚಲನಚಿತ್ರದ ಕೊನೆಯ ದೃಶ್ಯದ ಹಾಡು ನೆನಪಾಯಿತು. ಡಾ. ಬಾಲಮುರಳೀಕೃಷ್ಣ ಹಾಡಿರೂದು, ಅನಂತನಾಗ್ ಅಭಿನಯದ ಈ ಚಿತ್ರದಲ್ಲಿ ಸಂಗೀತ ಕಲಾವಿದ ತಾನು ದೇವರ ಮುಂದೆ ಮಾತ್ರ ಹಾಡುವುದಾಗಿ ಹೇಳಿಕೊಳ್ಳುತ್ತ ಭೈರವೀ ರಾಗದಲ್ಲಿ ಕೀರ್ತನೆಯೊಂದನ್ನು ಹಾಡಿ, ಕೊನೆಯದಾಗಿ ತನ್ನ ನಾಲಗೆಯನ್ನೇ ಕತ್ತರಿಸಿಕೊಳ್ಳುವ ದೃಶ್ಯದ ಚಿತ್ರೀಕರಣ ಇಲ್ಲಿಯೇ ಮಾಡಿದ್ದಾಗಿರಬೇಕು ಎಂದು ಆ ಕ್ಷಣದಲ್ಲೇ ಹೊಳೆಯಿತು.
ಅಂತೂ ಮದ್ಯಾಹ್ನದ ಭೋಜನಕೂಟವೂ ಮುಗಿಯಿತು. ಅದಾಗಲೇ ಮದುಮಗಳ ಸೋದರತ್ತೆ ನನ್ನ ಬಳಿ ಆತ್ಮೀಯತೆ ಬೆಳೆಸಿಕೊಂಡಾಗಿತ್ತು. ಊಟವಾಗಿ ಕುಳಿತಿದ್ದಂತೆ ಅವರು ತಮ್ಮ ಚೀಲದಿಂದ ಪುಟ್ಟ ಗಂಟು ಬಿಡಿಸಿದರು.
" ಇದೇನು ಅಡಿಕೆಪುಡಿಯಾ ?"
" ಹೂಂ, ನಾನೇ ಮಾಡಿರೂದು, ನೋಡಿ ಸ್ವಲ್ಪ " ನನ್ನ ಕೈಗೂ ಬಿತ್ತು ಅಡಿಕೆಪುಡಿ. " ಕೊಬ್ರೀ ತುರಿ, ಸಕ್ರೆ ಹಾಕಿದ್ದೀನಿ ನೋಡ್ರೀ "
" ಇದಕ್ಕೆ ಏಲಕ್ಕಿ, ಲವಂಗ ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ ಅಲ್ವಾ ?"
" ಹೌದ್ಹೌದು "
" ಹೀಗೆ ಕೆಂಪು ಬಣ್ಣ ಬರೂದು ಹೇಗೆ ?"
" ಅದೂ ಬೇಯಿಸ್ತೀವಲ್ಲ, ಆಗ ಬಣ್ಣ ಬರೂದಿಕ್ಕೆ ಒಂದು ಪುಡಿ ಹಾಕ್ತೀವಿ " ಯಾವ್ದೋ ಮರದ ಕೆತ್ತೆಯ ಹೆಸರೂ ಹೇಳಿದ್ರು.
" ಆಗ್ಲಿ, ನಾನೂ ಮನೆಗೆ ಹೋಗಿ ಮಾಡ್ತೇನೆ " ಅಂದೆ.
" ಇದನ್ನ ನೀವು ಇಟ್ಕೊಳ್ರೀ " ಅಡಿಕೇಪುಡಿ ಗಂಟು ನನ್ನ ಕೈ ಸೇರಿತು.
ಊಟವಾಗಿ ವಿಶ್ರಾಂತಿ ಬೇಡವೇ, ಅಲ್ಲೇ ಇದ್ದ ಅರ್ಚಕರ ಮನೆಯೊಳಗೆ ಹೊಕ್ಕೆವು. ಚೊಕ್ಕವಾಗಿದ್ದ ಮನೆ. " ಮಲಗ್ತೀರಾ ಆಂಟೀ " ಅನ್ನುತ್ತಾ ಅರ್ಚಕರ ಮಗಳು ದಿಂಬು ಕೊಟ್ಟಳು. ಸ್ವಲ್ಪ ಹೊತ್ತಿನಲ್ಲಿ ನಮ್ಮವರೂ ಬಂದ್ರು, ಅರ್ಚಕರೂ ಇವರೂ ಮತಾಡ್ತಾ ಇದ್ದದ್ದು ಕೇಳಿಸ್ಕೊಳ್ಳುತ್ತಾ ಒಂದು ಸಣ್ಣ ನಿದ್ದೆ ತೆಗೆದೆ.
" ಏಳು, ಎಲ್ಲಾರ್ದೂ ಊಟ ಆಯ್ತು, ಇನ್ನು ಮಠ ನೋಡ್ಕೊಂಡು ವಾಪಸ್ಸಾಗೋದೇ "
ಪುನಃ ಹೊರಟೆವು. ಚಪ್ಪಲಿ ಹಾಕೂ ಹಾಗಿಲ್ಲ, ಕಾಲು ಬಿಸಿಯ ತಾಪವನ್ನು ಸಹಿಸಕೊಳ್ಳುತ್ತ ನಡಿಗೆ ಮುಂದುವರಿಯಿತು. ಬಂದ ಕೆಲಸದ ಒತ್ತಡ ಮುಗಿದಿದ್ದರಿಂದ ಎಲ್ಲರೂ ನಿರಾಳವಾಗಿ ಅಂಗಡಿಗಳಿಗೂ ಹೊರಟರು. ನನಗೂ ಒಂದು ಕೆಜಿ ಕಾಫೀ ಹುಡಿ, ಚಹಾ ಹುಡಿ ಬಂತು, ಬೇಡಾ ಅನ್ನೋದು ಯಾಕೆ ? ಇರಲಿ ಅಲ್ವೇ.
ವಾಪಸ್ ಹೊರಡುವಾಗ ನಮ್ಮೊಂದಿಗೆ ನವವಧು ಹಾಗೂ ಅವಳ ತಮ್ಮ ಜೊತೆಯಾಗಿ ಸೇರಿದರು. ಮೂಡಬಿದ್ರೆ ತಲಪುವಾಗ ಗಂಟೆ ಒಂಭತ್ತು. ಎಲ್ಲರೂ ಹೋಟಲ್ ಹೊಕ್ಕರು. ಮಧ್ಯಾಹ್ನದ ಊಟವೇ ಇನ್ನೂ ಅಲುಗಾಡಿಲ್ಲ, ನಂಗೇನೂ ಬೇಡವೆಂಬ ಕಣ್ಸನ್ನೆ ಹೋಯಿತು.
" ಏನೂ ಬೇಡ್ವೇ, ಅಲ್ಲೊಂದು ಕಬ್ಬಿನಹಾಲು ಇರೋ ಹಂಗಿದೆ, ಬಾ "
" ಒಂಚೂರು ಶುಂಠಿಯೂ ಹಾಕು " ಅನ್ನುತ್ತಾ ಅಲ್ಲಿ ಹೋಗಿ ಕುಕ್ಕರಿಸಿದೆ.
ಕಬ್ಬಿನ ಹಾಲು ಹಿಂಡುತ್ತಿದ್ದ ಧಡಿಯನಿಗೂ ಕಿರುನಗು. ನಿಂಬೆಹಣ್ಣು ಕೂಡಾ ಹಾಕ್ದ. ಉಳಿದವರೆಲ್ಲ ಸಾವಕಾಶವಾಗಿ ಹೋಟಲ್ ಭೋಜನ ಸವಿಯುತ್ತಾ ಇನ್ನಷ್ಟು ಹೊತ್ತು ಕಳೆದರು. ಎಲ್ಲರನ್ನೂ ಅವರವರ ತಾಣದಲ್ಲಿ ಇಳಿಸಿದ ವ್ಯಾನ್ ಕೊನೆಯದಾಗಿ ನಮ್ಮನ್ನು ಮನೆಗೆ ತಲಪಿಸುವಷ್ಟರಲ್ಲಿ ಗಂಟೆ ರಾತ್ರಿ ಹತ್ತೂವರೆಯಾಗಿತ್ತು.
ಗಂಡಿಗೊಂದು ಹೆಣ್ಣು ತಂದು
ಹೆಣ್ಣಿಗೊಂದು ಬಾಳು ಬಂದು
ಬದುಕ ಪಯಣ ಸಾಗುತಿಹುದು|
Posted via DraftCraft app
Subscribe to:
Post Comments (Atom)
0 comments:
Post a Comment