Monday, 15 July 2013
ಚಿಗುರೆಲೆಗಳ ತಂಬುಳಿ
ಮಳೆ ಬಿಟ್ಟಿತ್ತು, ಬಿಸಿಲು ಬಂದಿತ್ತು. ಅಡುಗೆಮನೆಯಿಂದ ಹೊರಗಿಣುಕದಿದ್ದರೆ ಹೇಗೆ ? ಹಾಗೇ ತೋಟದೆಡೆಗೆ ನನ್ನ ಪಯಣ. ತೋಟವೆಲ್ಲ ಹಚ್ಚ ಹಸಿರು, ಎಲ್ಲಿ ಅಡಗಿದ್ದವು ಈ ಸಸ್ಯರಾಶಿ ? ಚಿಗುರೊಡೆದ ಸಸ್ಯಗಳು, ಅಂಬಟೆ ಮರದ ಅಕ್ಕಪಕ್ಕ ಹಲವು ಅಂಬಟೆ ಸಸಿಗಳು ಮೇಲೆದ್ದಿವೆ. ಓ, ಅಲ್ಲೋಂದು ಗೇರು ಸಸಿಯೂ ನಗುನಗುತ್ತಿದೆಯಲ್ಲ ! ನೆಟ್ಟು ನಾಲ್ಕಾರು ವರ್ಷವಾದರೂ ಫಲ ಕೊಡದ ರಾಜನೆಲ್ಲಿಕಾಯಿ ಗಿಡ ತುಂಬಾ ಗೆಜ್ಜೆ ಕಟ್ಟಿದಂತೆ ನೆಲ್ಲಿಕಾಯಿಗಳೂ... ನೋಡುತ್ತ, ನೋಡುತ್ತ ಕೈ ತಾನಾಗಿಯೇ ಗಿಡಗಳ ಚಿಗುರುಗಳನ್ನು ಚಿವುಟಿ ಮುಷ್ಠಿ ತುಂಬಾ ಹಿಡಿದುಕೊಂಡು, ರಾಜನೆಲ್ಲಿಕಾಯಿ ಉಪ್ಪಿನಕಾಯಿ ಹಾಕುವ ಪಾಕವಿಧಾನ ಯಾವ ಅಡುಗೆ ಪುಸ್ತಕದಲ್ಲಿರಬಹುದೆಂಬ ಚಿಂತನೆಯೊಂದಿಗೆ ಮನೆಯೊಳಗೆ ಬಂದೆ.
ಈ ಕುಡಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ, ಒಂದು ಮೆಣಸು ಹಾಗೂ ಜೀರಿಗೆಯೊಂದಿಗೆ ಮೆತ್ತಗೆ ಬೇಯಿಸಿ ಆಯಿತು. ಒಂದು ಕಡಿ ತೆಂಗಿನ ತುರಿಯೊಂದಿಗೆ ನುಣ್ಣಗೆ ಅರೆದು, ಸಿಹಿ ಮಜ್ಜಿಗೆ ಎರೆದು, ಬೇಯಿಸಲು ಉಪಯೋಗಿಸಿದ ನೀರನ್ನೂ ಎರೆದು ಒಗ್ಗರಣೆ ಕೊಡುವಲ್ಲಿಗೆ ತಂಬುಳಿ ಸಿದ್ಧವಾಯಿತು. ಸಿಹಿ ಬೇಕಿದ್ದರೆ ಬೆಲ್ಲವನ್ನೂ ಹಾಕಿದರಾಯಿತು. ಇದು ಒಂದು ಹೊತ್ತು ಮಾತ್ರ ಉಪಯೋಗಿಸಿ ಉಳಿದದ್ದನ್ನು ಚೆಲ್ಲುವಂತಹ ತಂಬುಳಿಯಲ್ಲ. ಕುದಿಸಿಟ್ಟುಕೊಂಡು 2 -3 ದಿನ ಉಪಯೋಗಿಸುವಂತಹುದು.
ಹಲವು ಕುಡಿಗಳಿಂದ ತಯಾರಿಸಲ್ಪಡುವ ಈ ತಂಬುಳಿ ನಮ್ಮ ಆಡುನುಡಿಯಲ್ಲಿ ಹೊಲಕ್ಕೊಡಿ ತಂಬುಳಿ ಎಂದೇ ಹೆಸರಿಸಿಕೊಂಡಿದೆ.
ಹೂಲಗದ್ದೆ, ಗುಡ್ಡಗಾಡುಗಳು ಅಧಿಕವಾಗಿದ್ದಲ್ಲಿ ಇಂತಹ ಚಿಗುರೆಲೆಗಳನ್ನು ಸಂಗ್ರಹಿಸುವುದು ಸುಲಭ. ಹಟ್ಟಿಯಲ್ಲಿ ಜಾನುವಾರುಗಳು ಇರುವಲ್ಲಿ, ' ದನ ಮೇಯ್ದು ಬರಲೀ ' ಎಂದು ಮುಂಜಾನೆಯೇ ಹಾಲು ಕರೆದು, ಅಕ್ಕಚ್ಚು ಕೊಟ್ಟು, ' ಸಂಜೆ ಮನೆಗೆ ಬಾರಮ್ಮ ' ಎಂದು ಹೊರ ಬಿಟ್ಟರಾಯಿತು. ಹಸುಗಳು ಮೇಯ್ದು ಬರುವಂತಹ ಗುಡ್ಡದ ಸಸ್ಯಗಳು ಔಷಧದ ಗಣಿಗಳಾಗಿರುತ್ತವೆ. ಇಂತಹ ಹಸುವಿನ ಹಾಲು ಕೂಡಾ ಶ್ರೇಷ್ಠ ಗುಣವುಳ್ಳದ್ದಾಗಿದೆ ಎಂದೇ ತಿಳಿಯಿರಿ. ' ಆಡು ಮುಟ್ಟದ ಸೊಪ್ಪಿಲ್ಲ ' ಎಂಬ ಮಾತು ಈಗ ಸಹಜವಾಗಿ ನೆನಪಿಗೆ ಬಂದೀತು. ಗಾಂಧೀ ತಾತ ಆಡಿನ ಹಾಲನ್ನೇ ಬಳಸುತ್ತಿದ್ದರೆಂಬುದನ್ನು ಮರೆಯದಿರೋಣ. ಕೃತಕವಾಗಿ ಮೊಳಕೆ ಬರಿಸಿ ದವಸಧಾನ್ಯಗಳನ್ನು ಅಡುಗೆಯಲ್ಲಿ ಬಳಸುವುದಿಲ್ಲವೇ, ಹಾಗೇನೇ ನೆಲದಲ್ಲಿ ಸಹಜವಾಗಿ ಚಿಗುರೊಡೆದ ಸಸ್ಯಗಳ ಕುಡಿ ಆರೋಗ್ಯಕ್ಕೆ ಅತ್ಯುತ್ತಮ ಸಂಜೀವಿನಿ.
ಪೇರಳೆ, ಸೀತಾಫಲ, ಮಾವು, ಬೇವು, ಗೇರು, ಹಲಸು, ನೇರಳೆ, ಪುನರ್ಪುಳಿ, ದಾರೆಹುಳಿ, ಕುಂಟಲ, ಕುಟಜ, ಅಂಟುವಾಳ, ಶೀಗೆ ದಡ್ಡಾಲ, ನೆಕ್ಕರಿಕ, ಚೇರೆ, ತಗ್ಗಿ, ಎಂಜಿರ ಹೀಗೆ ಪರಿಚಿತ ಸಸ್ಯಗಳ ಪಟ್ಟಿ ಮಾಡಿಟ್ಟುಕೊಂಡಲ್ಲಿ ಸಂಗ್ರಹಣೆ ಸಾಧ್ಯ.
ಕಾಟ್ ಕಿಸ್ಕಾರ, ತಗತೆ, ಚಕ್ರಮುನಿ, ತುಳಸಿ, ಲಿಂಬೆ ಜಾತಿಯ ಗಿಡಗಳು.
ಸಾಂಬ್ರಾಣಿ, ಭೃಂಗರಾಜ, ನೆಲನೆಲ್ಲಿಯಂತಹ ಚಿಕ್ಕಪುಟ್ಟ ಸಸ್ಯಗಳು.
ನನ್ನ ಪರಿಸರದಲ್ಲಿ ಲಭ್ಯವಿರುವ, ತಿಳಿದಿರುವ ಕೆಲವೊಂದು ಸಸ್ಯಗಳ ಹೆಸರುಗಳನ್ನು ಬರೆದಿರುತ್ತೇನೆ. ಇನ್ನಷ್ಟು ಸಸ್ಯಪ್ರಕಾರಗಳನ್ನು ತಿಳಿದವರಿಂದ ಕೇಳಿ ತಿಳಿದುಕೊಳ್ಳುವುದು ಉತ್ತಮ. ಪ್ರಕೃತಿಯಲ್ಲಿ ಸಸ್ಯವೈವಿಧ್ಯಕ್ಕೆ ಕೊರತೆಯಿಲ್ಲ. ನಮಗೆ ಚಿರಪರಿಚಿತವಿರುವ ಸಸ್ಯಗಳ ಕುಡಿಗಳನ್ನು ಆಯ್ದು ತರುವುದಷ್ಟೇ ಕೆಲಸ. ನಾಲ್ಕು ಅಥವಾ ಐದು ಸಸ್ಯಗಳ ಕುಡಿಗಳಿದ್ದರೂ ಸಾಕು, ತಂಬುಳಿ ಮಾಡುವ ರೂಢಿ ಇಟ್ಟುಕೊಳ್ಳೋಣ.
ಮರೆತ ಮಾತು: ಒಂದೆಲಗವನ್ನು ಈ ತಂಬುಳಿಯಲ್ಲಿ ಸೇರಿಸುವಂತಿಲ್ಲ, ಸೊಪ್ಪುಗಳನ್ನು ಬೇಯಿಸುವ ವರ್ಗದಲ್ಲಿ ಒಂದೆಲಗ ಇಲ್ಲ.
ಸಸ್ಯವರ್ಗಗಳ ಸಚಿತ್ರ ಮಾಹಿತಿಗಿಂತ ಸಸ್ಯಶಾಸ್ತ್ರೀಯ ಹೆಸರುಗಳನ್ನು ಬರೆಯುವುದೇ ಓದುಗರಿಗೆ ಉಪಯುಕ್ತವಾದೀತು ಎಂಬ ಅನಿಸಿಕೆಯಿಂದ ಒಂದು ಕಿರುಪಟ್ಟಿ ಇಲ್ಲಿ ಬರೆದಿದ್ದೇನೆ.
ಅಂಬಟೆ, ಅಮಟೆ Indian Hog plum Spondias pinnatam
ಅತ್ತಿ, Ficus glomerata, Ficus racemosa ಔದುಂಬರ ವೃಕ್ಷ ( ಸಂಸ್ಕೃತ )
ಅಂಟುವಾಳ, Sapindus Trifoliatus
ಕಿಸ್ಕಾರ, Ixora coccinea
ಕುಟಜ, Hollarhena antidysenterica
ಭೃಂಗರಾಜ, Eclipta alba
ಗೇರು, cashew plant, Anacardium occidentale
ಪೇರಳೆ, Psidium guava
ತಗತೆ, Cassia tora
ತಗ್ಗಿ, cleodendrum viscosum/c infortunatum.
ದಡ್ಡಾಲ, Careya arborea
ದಾರೆಹುಳಿ, Averrhoa carambola
ನೆಲನೆಲ್ಲಿ, Phyllanthus Niruri
ತುಳಸಿ, Ocimum tenuiflorum
ಮಾವು, Mangifera indica
ಶೀಗೆ, Acacia concinna
ಪುನರ್ಪುಳಿ, Garcinia indica
ಸಾಂಬ್ರಾಣಿ, Plectranthus amboinicus
ಹೊನಗೊನ ಸೊಪ್ಪು, Alternanthera sessilis
ಕಾಚಿಸೊಪ್ಪು, Solanum nigrum
ಚಕ್ರಮುನಿ, sauropus androgynus
ಆಡುಸೋಗೆ, Adhatoda Vasica
ಸೀತಾಫಲ, sugar apple, Annona squamosa
Posted via DraftCraft app
Subscribe to:
Post Comments (Atom)
0 comments:
Post a Comment