Monday, 1 July 2013
ಅಜ್ಜನ ಮೇಲೆ ಶಾಯಿಯ ಕಲೆ...ಛೆ, ಛೆ, ಏನಾಗ್ಹೋಯ್ತು...
ನಾವು ಮಕ್ಕಳೆಲ್ಲ ಮನೆಯ ಗೇಟಿನೆದುರು ಕಾದು ನಿಂತಿದ್ದೆವು. ಬಲಗಡೆಯ ರಸ್ತೆಯತ್ತಲೇ ನೋಟ. ಮನೆಯ ಎದುರು ಗಜದೂರದಲ್ಲಿ ಸರ್ಕಾರೀ ಆಸ್ಪತ್ರೆ. ಅದರ ಮುಂದುಗಡೆ ಎಲ್ಲಾ ಬಸ್ಸುಗಳೂ ನಿಲ್ಲೂದು. ಇನ್ನೇನು ಶಂಕರವಿಠ್ಠಲ್ ಬಸ್ಸು ವಿಟ್ಲದಿಂದ ಕಾಸರಗೋಡು ತಲಪಲಿದೆ, ನಮ್ಮಜ್ಜ ಬಸ್ಸಿನಿಂದ ಇಳಿಯಲಿದ್ದಾರೆ. ಶಾಲೆಯಿಂದ ಬಂದು, ಕಾಫೀ ತಿಂಡಿ ಮುಗಿಸ್ಕೊಂಡು ಶಿಸ್ತಿನ ಸಿಪಾಯಿಗಳಂತೆ, ದ್ವಾರಪಾಲಕರಂತೆ ನಿಂತ ನಮ್ಮ ನಿರೀಕ್ಷೆಯಂತೆ ಬಸ್ಸು ಬಂದಿತು. ಆಸ್ಪತ್ರೆ ಎದುರುಗಡೆ ನಿಂತಿತು. ಅಜ್ಜ ಇಳಿದರು. " ಹೋ.... ಅಜ್ಜ ಬಂದ್ರು " ಕಿರಿಯ ತಮ್ಮ ರಂಗನಾಥ್ ಒಳಗೋಡಿದ, ಸುದ್ದಿವಾಹಕನಾಗಿ ಅಮ್ಮನ ಬಳಿಗೆ.
ನಾಲ್ಕು ದಿನಗಳ ಹಿಂದೆ ಬಂದಿದ್ದ ಪೋಸ್ಟ್ ಕಾರ್ಡ್, ಅದನ್ನು ಅಪ್ಪನೇ ಓದಬೇಕಾಗಿತ್ತು. ಕುಕ್ಕಿಲ ಕೃಷ್ಣ ಭಟ್ಟರ ಮೋಡಿ ಅಕ್ಷರಗಳನ್ನು ಓದುತ್ತಿದ್ದದ್ದು ಅಪ್ಪನೇ. ಅಮ್ಮನೂ ಸಂಭ್ರಮದಿಂದ ಓಡಾಡಿಕೊಂಡಿದ್ದಳು. ಪತ್ರದಲ್ಲಿ ಬರೆದಿದ್ದೂ ಅಷ್ಟೇ, ' ಇಂಥಾ ದಿನ, ಇಂತಹುದೇ ಬಸ್ಸಿನಲ್ಲಿ ಬರಲಿದ್ದೇನೆ '......ಆಗ ಇದ್ದಿದ್ದು ಒಂದೇ ಬಸ್ಸು.
ಶ್ವೇತ ವಸನಧಾರಿ, ತಲೆಯಲ್ಲಿ ಗಾಂಧೀ ಟೋಪಿ, ಹೆಗಲಲ್ಲಿ ಚೀಲ, ತುಂಡುತೋಳಿನ ಕರಿಕೋಟು ಧರಿಸಿದ ಅಜ್ಜ ಬಸ್ಸಿನಿಂದಿಳಿಯುತ್ತಿದ್ದ ಹಾಗೆ ಮನೆ ಗೇಟಿನೆದುರು ಮಕ್ಕಳ ಸಂತೆ ನೆರೆದಿದ್ದು ಕಂಡು ಹಸನ್ಮುಖರಾಗಿ ಹೆಜ್ಜೆ ಹಾಕಿದರು.
ಅಜ್ಜನ ಕೈಚೀಲವೂ ಸಾಕಷ್ಟು ತೂಕಭರಿತವಾಗಿದ್ದನ್ನು ಕಂಡು ನಮಗೂ ಆನಂದ, ಏನಿರಬಹುದೆಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಾ, ಮೌನವಾಗಿಯೇ ಹಿಂಬಾಲಿಸಿ ಎಲ್ಲರೂ ಮನೆಯೊಳಗೆ ಬಂದೆವು. ಚೀಲದಿಂದ ನೀಲಂ ಮಾವಿನಹಣ್ಣಗಳು ಹೊರಬಿದ್ದವು.
" ನಾನೇ ತುಂಡು ಮಾಡಿ ಕೊಡ್ತೇನೆ, ಅಲ್ಲಿರ್ಲಿ " ಅಜ್ಜನ ಅರ್ಡ.
" ಈಗಲೇ ಅಜ್ಜಂಗೆ ಉಪದ್ರ ಕೊಡ್ಬೇಡಿ, ಕಾಫೀ ತಿಂಡಿ ಆಗ್ಲೀ " ಅಮ್ಮನ ಮಿಂಚುವಾಣಿ ಅಡುಗೆಮನೆಯಿಂದ ತೇಲಿ ಬಂದಿತು.
" ಮಿಂಚೂ, ರಾತ್ರೀಗೆ ಏನಡಿಗೆ ಮಾಡ್ತೀಯ " ಅಜ್ಜನ ಧ್ವನಿ.
ಕುಕ್ಕಿಲದ ಮನೆಸುದ್ದಿ, ಅತ್ತೆಸೊಸೆಯರ ತಾಕಲಾಟ, ನೆರೆಕರೆಯವರ ಹಕೀಕತ್ತು, ಗೇಣಿಗಿದ್ದವರ ಡೌಲು, ಇತ್ಯಾದಿ ಸಮಾಚಾರಗಳೆಲ್ಲ ಅಮ್ಮನ ಮುಂದೆ.
ಅಜ್ಜ ಕುಕ್ಕಿಲ ಕೃಷ್ಣ ಭಟ್ಟರು ಬಹು ಶ್ರುತ ವಿದ್ವಾಂಸರು ಮಾತ್ರವಲ್ಲದೆ ದೊಡ್ಡ ಜಮೀನ್ದಾರರಾಗಿದ್ದುಕೊಂಡು, ಸ್ವತಃ ಕೃಷಿ ಪಂಡಿತರು. ಅವರೇ ನೆಟ್ಟ ಮಾವಿನ ಮರದ ಹಣ್ಣುಗಳನ್ನು ನಾವೆಲ್ಲ ತಿನ್ನದಿದ್ದರೆ ಹೇಗೆ ?
ಕತ್ತಲಾಗುತ್ತಿದ್ದಂತೆ ಅಜ್ಜ " ಚೆಸ್ ಬೋರ್ಡ್ ತಾ " ಎಂದರು. ರಂಗನಾಥ ಅದಕ್ಕಾಗಿಯೇ ಕಾದಿದ್ದವನಂತೆ ಬೋರ್ಡ್ ಬಿಡಿಸಿ, ಕಾಯಿಗಳನ್ನು ಜೋಡಿಸಿ ಅಜ್ಜನ ಮುಂದೆ ಕುಳಿತ. ಆಯ್ತು, ಇನ್ನು ಇಹಲೋಕದ ಪರಿವೆಯೇ ಇಲ್ಲದೆ ಅಜ್ಜ ಮೊಮ್ಮಗ ಆಡುತ್ತಿರುತ್ತಾರೆ. ನಾನೂ ಮೆಲ್ಲನೆದ್ದು ಬಂದು ಡ್ರಾಯಿಂಗ್ ಶೀಟ್ ಹರಿದು ತಂದು ಪೆನ್ಸಿಲ್ ಹಿಡಿದು ಅಲ್ಲೇ ಒಂದು ಕುರ್ಚಿ ಎಳೆದು ಕುಳಿತೆ. ಅಜ್ಜನೂ ಗಮನಿಸಿದರು. ನನ್ನ ಪಾಡಿಗೆ ಸುಮ್ಮನೆ ಗೆರೆಗಳನ್ನು ಎಳೆಯುತ್ತಾ ಬಂದೆ. ಸೊಳ್ಳೆ ಕಚ್ಚುತ್ತೇಂತ ಅಜ್ಜ ಒಂದು ಬೈರಾಸನ್ನು ತಲೆಗೆ ಎಳೆದು ಮುಸುಕು ಹಾಕಿಕೊಂಡಿದ್ದರು. ಒಂದೇ ಭಂಗಿಯಲ್ಲಿ ಚೆಸ್ ಬೋರ್ಡ್ ಕಡೆ ದೃಷ್ಟಿ ನೆಟ್ಟಿದ್ದ ಚಿತ್ರಣ ನನ್ನ ಪೆನ್ಸಿಲ್ ಸ್ಕೆಚ್ ನಲ್ಲಿ ದಾಖಲಾಯಿತು. ಇವೆಲ್ಲ ನಡೆದು ಸುಮಾರು ನಲ್ವತ್ತು ವರ್ಷಗಳೇ ಕಳೆದಿವೆ. ಆ ಚಿತ್ರ ಬಿಡಿಸಿದ ಕಾಗದದ ತುಂಡು ಈಗಲೂ ಇದೆ.
<><><> <><><> <><><>
ಕಂಪ್ಯೂಟರ್ ಹಾಗೂ ಟೀವಿ ತಾಂತ್ರಿಕತೆಯಲ್ಲಿ ಏನೇ ಹೊಸ ಆವಿಷ್ಕಾರ ಬಂದರೂ ನಮ್ಮ ಮನೆಗೆ ಬಂದೇ ಬರುತ್ತದೆ ಎಂದು ಈ ಹಿಂದೆಯೇ ಬರೆದಿದ್ದೇನೆ. ಹಾಗೇನೇ ಐಫೋನ್ ಕೂಡಾ ಬಂದಿತು. ಆ ನಂತರದ್ದು ಆಪಲ್ ಟಿವಿ. ಇದೂಂದು ಪುಟ್ಟ ಪೆಟ್ಟಿಗೆ. ಆ್ಯಪಲ್ ಟಿವಿಯ ವಿಶೇಷತೆಯೆಂದರೆ ಐಫೋನ್, ಐಪ್ಯಾಡ್ ನಿಂದ ವಿಡಿಯೋವನ್ನು ಟಿವಿಯಲ್ಲಿ ಕಾಣುವಂತೆ ಮಾಡಬಹುದು. ಕಂಪ್ಯೂಟರ್ ಇದ್ದರೆ ಅದರಲ್ಲಿ ಪ್ಲೇ ಮಾಡಿದ ವಿಡಿಯೋ ಅಥವಾ ಚಲನಚಿತ್ರವನ್ನು ಟಿವಿಯಲ್ಲಿ ನೋಡಬಹುದು. ಇದು ಕೂಡಾ ಭಾರತೀಯ ಮಾರುಕಟ್ಟೆಗೆ ಬರುವ ಮೊದಲೇ ನಮ್ಮ ಹಿರಣ್ಯಕ್ಕೆ ಬಂದಾಗಿದೆ. ಆ ಸಮಯದಲ್ಲಿ ನಮ್ಮ ಸೋದರಳಿಯ ಕೃಷ್ಣಕುಮಾರ್ ಕೆನಡಾದಲ್ಲಿದ್ದ, ಅವನು ಊರಿಗೆ ಬರಬೇಕಾದರೆ ಈ ಬಾಕ್ಸ್ ಕೂಡಾ ನಮ್ಮವರ ಅಣತಿಯಂತೆ ಬಂದಿದೆ.
ಐಫೋನ್ ಯಾವಾಗ ಮನೆಗೆ ಬಂದಿತೋ, ಆಗಲೇ ನಮ್ಮವರು ಹೇಳಿದ್ದು,
" ನೋಡು, ನಿನ್ನ ಹಳೇ ಚಿತ್ರ ಎಲ್ಲ ತಂದ್ಕೊಡು, ಫೋಟೋ ತಗೆದಿಟ್ಕೊಂಡ್ರೆ ಯಾವತ್ತಿಗೂ ಉಳಿಯುತ್ತೆ, ಇಲ್ಲಾಂದ್ರೆ ಹಾಳಾಗೋದೇ..."
ಇರಬಹುದೇನೋ, ಚಿತ್ರಗಳ ಫೈಲ್ ಬಿಡಿಸಿ, ಒಂದೊಂದಾಗಿ ಇವರೆದುರು ಇಡುತ್ತಾ ಬಂದೆ. ಇವರೂ ಕ್ಲಿಕ್ಕಿಸುತ್ತಾ ಹೋದರು....
" ಅರೆ, ಇದೇನಿದು ನನ್ನಜ್ಜನ ಚಿತ್ರ, ಯಾರು ಶಾಯಿ ಚೆಲ್ಲಿದ್ದು.." ಬೇಜಾರಾಗಿ ಬಿಟ್ಟಿತು.
ಇದನ್ನು ಅಳಿಸಲು ಸಾಧ್ಯವೇ, ಅದೂ ಈ ಹರುಕುಮುರುಕು ಕಾಗದದಿಂದ.
" ಛಿ, ಏನಾಗ್ಹೋಯ್ತು....ಎಲ್ಲ ಮಕ್ಕಳ ಕೆಲಸ, ಆಗಾಗ ತೆಗ್ದು ನೋಡೂದು, ಹಾಳು ಮಾಡೂದು ..."
" ಅದು ಇರ್ಲಿ ಹಾಗೇ, ಅದನ್ನೆಲ್ಲ ಸರಿ ಮಾಡೂದು ಸುಲಭ. Picture apps ಬೇಕಾದಷ್ಟು ಇವೆ. ನಿಧಾನವಾಗಿ ಕಲಿ. ಈ ಫೋಟೋ ಎಲ್ಲಾನೂ Dropbox ನಲ್ಲಿ ಹಾಕಿಡೂದು. ಬೇಕಾದಾಗ ನೋಡಿದ್ರಾಯ್ತು...ಎಲ್ಲಾನೂ ಕಲೀ..."
ಅಜ್ಜ ಕುಕ್ಕಿಲ ಕೃಷ್ಣ ಭಟ್ಟರ ಮಡಿಲಲ್ಲೇ ಆಡಿ ದೊಡ್ಡವಳಾದವಳಾದರೂ ಅವರ ಬಗ್ಗೆ ಬರೆಯುವ ಶಕ್ತಿ ನನಗೆ ಇಲ್ಲ. ಆದರೂ ಇಲ್ಲಿ ಸ್ವಲ್ಪವಾದರೂ ಬರೆಯಲೇ ಬೇಕಾಗಿದೆ. ಬಹು ಭಾಷಾ ಪಂಡಿತರಾದ ಅವರ ಕೊನೆಯ ಪ್ರಕಟಿತ ಕೃತಿ - ದ್ರಾವಿಡ ಛಂದಸ್ಸು, ಇದು ಅವರ ಮರಣಾನಂತರ ಶತಾವಧಾನಿ ಡಾ.ಅರ್. ಗಣೇಶರ ಸಂಪಾದಕತ್ವದಲ್ಲಿ ಪ್ರಕಟಿತವಾಯಿತು. ಸಂಗೀತ ಹಾಗೂ ನೃತ್ಯ ಶಾಸ್ತ್ರಗಳ ಆಳವಾದ ಅಧ್ಯಯನ ಹಾಗೂ ಜ್ಞಾನದಿಂದ ಯಕ್ಷಗಾನದ ಶಾಸ್ತ್ರೀಯತೆಯನ್ನು ಪ್ರಕಟಪಡಿಸಿದವರೂ, ಪಾರ್ತಿಸುಬ್ಬನ ಯಕ್ಷಗಾನಗಳು - ಕೃತಿಯ ಸಂಪಾದನೆ ಕುಕ್ಕಿಲರ ಸಂಶೋಧನಾ ಪ್ರವೃತ್ತಿಗೆ ಸಾಕ್ಷಿಯಾಗಿವೆ. ಇದಲ್ಲದೆ ಭಾರತೀಯ ಸಂಗೀತ ಶಾಸ್ತ್ರ, ಶಿಲಪ್ಪದಿಕಾರಂ ( ತಮಿಳು ಕಾವ್ಯದ ಅನುವಾದ ), ನಾಗವರ್ಮನ ಛಂದೋಂಬುಧಿ ( ಸಂಪಾದಿತ ). 1975ರಲ್ಲೇ ಅವರು ಬರವಣಿಗೆಯನ್ನು ನಿಲ್ಲಿಸಿದ್ದರು, ವಿಟ್ಲದ ಸಮೀಪವಿರುವ ಕುಕ್ಕಿಲದ ಸ್ವಗೃಹದಲ್ಲಿ ವಿಶ್ರಾಂತ ಜೀವನ ನಡೆಸಿದವರು. 1960 -70ರ ದಶಕದಲ್ಲಿ ಮೈಸೂರಿನಲ್ಲಿ ವಾಸವಾಗಿದ್ದ ಕುಕ್ಕಿಲ ಕೃಷ್ಣಭಟ್ಟರು ಮಾನಸಗಂಗೋತ್ರಿಯ ಸಂಶೋಧಕ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿದ್ದರು. ಪಂಡಿತಶ್ರೇಷ್ಠರಾದ ಸೇಡಿಯಾಪು ಕೃಷ್ಣ ಭಟ್ಟರು ಹಾಗೂ ನನ್ನಜ್ಜ ಬಾಲ್ಯ ಸ್ನೇಹಿತರು. ಇವರಿಬ್ಬರ ಅಜ್ಜನಮನೆ ಬಡೆಕ್ಕಿಲ ಆಗಿದ್ದುದರಿಂದ ಸಂಬಂಧಿಕರೂ ಆಗಿದ್ದರು.
ಶಾಯಿಕಲೆಯನ್ನು ಅಳಿಸಿದಾಗ, ಇಷ್ಟು ದಿನವೂ photo apps ಗಳೊಂದಿಗೆ ಏನೇನೋ ಬೆರಳ ತುದಿಯ ಕೈಚಳಕಗಳ ಪ್ರಯೋಗಗಳನ್ನು ಮಾಡುತ್ತಾ ಇದ್ದಿದ್ದು ಸಾರ್ಥಕವಾಯ್ತು ಅಂತ ಅನ್ನಿಸದಿರಲಿಲ್ಲ.
Posted via DraftCraft app
Subscribe to:
Post Comments (Atom)
0 comments:
Post a Comment