ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ರಾಗಿ ಒಂದು ಸಿದ್ಧ ವಸ್ತು, ಯಾವುದೇ ಹೊಸರುಚಿಗೆ ಸವಾಲ್ ಎಸೆಯುವಂತೆ ಓಡಿ ಓಡಿ ಬರುವಂತಹದು. ಮೊನ್ನೆ ಏನಾಯ್ತು, ಚಪಾತಿಗೆ ಹಿಟ್ಟು ಕಲಸೋಣ ಅಂದ್ಕೊಂಡು ಸಿದ್ಧತೆಗೆ ತೊಡಗಿದೆ. ಒಂದು ಕಪ್ ನೀರು, ರುಚಿಗೆ ಉಪ್ಪು, ಎರಡು ಕಪ್ ಗೋಧಿ ಹುಡಿ. ಇನ್ನು ಕಲಸುವುದೊಂದೇ ಬಾಕಿ, " ಹಾಕೋಣ ರಾಗಿ " ಅನ್ನಿಸ್ತು. ಅಳೆದೂ ಸುರಿದೂ ನಾಲ್ಕು ಚಮಚಾ ರಾಗಿ ಹುಡಿ ಸೇರಿಸಿ ಹಿಟ್ಟು ಕಲಸಿಟ್ಟು, ಮತ್ತೊಂದರ್ಧ ಗಂಟೆ ಬಿಟ್ಟು ಚಪಾತಿ ಲಟ್ಟಿಸಿ ಆಯ್ತು.
ಚಪಾತಿಗೊಂದು ಕೂಟು ಆಗ್ಬೇಡ್ವೇ, ಅತಿ ವೇಗವಾಗಿ ಮಾಡಬಹುದಾದ ಈ ರಸಂ ನನ್ನಮ್ಮ ಹೇಳಿಕೊಟ್ಟಿದ್ದು. ಅಮ್ಮಂಗೆ ಹೇಳಿಕೊಟ್ಟಿದ್ದು ಪಕ್ಕದ ಮನೆಯಾಕೆ, ಆಕೆ ಗೌಡ ಸಾರಸ್ವತ ಮಹಿಳೆ. ಹಾಗಾಗಿ ಇದನ್ನು ಗೋವಾ ಕೊಂಕಣಿಗರ ಸ್ಪೆಶಲ್ ಎಂದು ಕರೆಯಲಡ್ಡಿಯಿಲ್ಲ.
ಕತ್ತರಿಸಿದ ಟೊಮ್ಯಾಟೋ, ಈರುಳ್ಳಿ. ಎರಡೆರಡು ಸಾಕು, ಚಿಕ್ಕದಾಗಿ ಕತ್ತರಿಸಿ.
2 -3 ಚಮಚಾ ಕಡ್ಲೇ ಹುಡಿ.
2 ಚಮಚಾ ಸಾಂಬಾರು ಹುಡಿ.
2 ಚಮಚಾ ಸಕ್ಕರೆ.
ರುಚಿಗೆ ಉಪ್ಪು.
ಒಗ್ಗರಣೆ ಸಾಮಗ್ರಿಗಳು: ಸಾಸಿವೆ, ಉದ್ದಿನಬೇಳೆ, ಕಡ್ಲೆ ಬೇಳೆ, ಒಣಮೆಣಸು, ಕರಿಬೇವು.
2 ಚಮಚ ಎಣ್ಣೆ ಅಥವಾ ತುಪ್ಪ.
ಮೊದಲು ಕಡ್ಲೆಹಿಟ್ಟನ್ನು ಒಂದು ಕಪ್ ನೀರಿನಲ್ಲಿ ಗಂಟುಕಟ್ಟದಂತೆ ಕಲಸಿ ಇಡಬೇಕು.
ಬಾಣಲೆಯಲ್ಲಿ ಒಗ್ಗರಣೆ ಸಿಡಿಯುತ್ತಿದ್ದಂತೆ, ಕರಿಬೇವು, ಈರುಳ್ಳಿ, ಟೊಮ್ಯಾಟೋ ಸೇರಿಸಿ, ಬಾಡಿಸಿಕೊಳ್ಳಿ. ಉಪ್ಪು ಹಾಕಿದ್ರೆ ಬೇಗನೆ ಬೆಂದೀತು.
ಬೆಂದ ನಂತರ ಕಡ್ಲೆಹಿಟ್ಟಿನ ನೀರನ್ನು ಎರೆದು ಬಿಡಿ.
ಕುದಿಯುತ್ತಿದ್ದಂತೆ ಹಿಟ್ಟು ದಪ್ಪಗಾಯಿತೇ... ವಿಪರೀತ ದಪ್ಪ ಆಗಬಾರದು, ಅನ್ನದ ಗಂಜಿಯ ಸಾಂದ್ರತೆ ಇದ್ದರೆ ಸಾಕು. ನೀರು ಬೇಕಿದ್ದರೆ ಎರೆದು, ಸಾಂಬಾರು ಹುಡಿ, ಸಕ್ಕರೆ ಹಾಕಿ, ಕುದಿಸಿ. ನಮ್ಮ ಸಾಂಬಾರ್ ಚಟ್ನಿ ಸಿದ್ಧ. ಬೇಕಿದ್ದರೆ ಕೊತ್ತಂಬರಿ ಸೊಪ್ಪು ಉದುರಿಸಿ.
ಇದನ್ನು ಚಪಾತಿಗೆ ಮಾತ್ರವಲ್ಲದೆ ದೋಸೆ, ಇಡ್ಲಿ, ಅನ್ನದೊಂದಿಗೂ ಬಳಸಬಹುದು.
ಈ ರಾಗಿ ಚಪಾತಿ ಹಿಟ್ಟು ಕಲಸುವಾಗ ನಾನು ಎಣ್ಣೆ ಅಥವಾ ತುಪ್ಪ, ಬಾಳೆಹಣ್ಣು ಅಥವಾ ಇನ್ಯಾವುದೇ ಮೃದುತ್ವ ಕೊಡುವಂತಹ ಸಾಮಗ್ರಿಗಳನ್ನು ಹಾಕಿಲ್ಲ, ರಾತ್ರಿಯೇ ಕಲಸಿ ಇಡಲೂ ಇಲ್ಲ. ಆದರೂ ಚಪಾತಿ ಮೃದುವಾಗಿ ಬಂದಿದೆ. ಚೆನ್ನಾಗಿದೆ ಅಂದ್ಕೂಂಡ್ಬಿಟ್ಟು ಹೆಚ್ಚು ರಾಗಿ ಹಾಕಬೇಡಿ, ಚಪಾತಿ ಕಪ್ಪಗಾದೀತು.
Posted via DraftCraft app
0 comments:
Post a Comment