Pages

Ads 468x60px

Monday, 6 February 2017

ಕೊಲ್ಲೂರಿನಲ್ಲಿ ಕೇಶ ವಿನ್ಯಾಸ
                                     


ಕಾರ್ಯನಿಮಿತ್ತ ಕೊಲ್ಲೂರಿಗೆ ಹೋಗಬೇಕಾಗಿ ಬಂದಿತ್ತು.  ನಮ್ಮ ತೋಟದೊಳಗೊಂದು ನಾಗಬನ.  ನಾಗಬನ ನಮ್ಮ ಸಂಸ್ಕೃತಿಯ ಕೊಂಡಿ ಎಂದರೂ ತಪ್ಪಲ್ಲ.   ಸುಮಾರು ಐನ್ನೂರು ವರ್ಷಗಳ ಇತಿಹಾಸ ಹೊಂದಿದ, ತನ್ನ ಪಾಡಿಗೆ ತಾನಿದ್ದ ನಾಗಬನದಲ್ಲಿ ಜೀರ್ಣೋದ್ಧಾರದ ಪ್ರಕ್ರಿಯೆಯಲ್ಲಿ,  ಇತ್ತೀಚೆಗೆ ಹಲವು ವೈದಿಕ ಹಾಗೂ ತಾಂತ್ರಿಕ ಉಪಾಸನೆಗಳು ಜರುಗಿದುವು.  ನಾಗನನ್ನು ನಿಷ್ಠೆಯಿಂದ ಕಾಣುವ ನಮ್ಮ ಊರ ಪರವೂರ ಜನರೂ,  ಊರಿನ ಮಹನೀಯರೂ,  ಹಿರಣ್ಯ ಕುಟುಂಬವರ್ಗವೂ,  ಹಿರಣ್ಯಸ್ಥಳ ವಾಸಿಗಳೂ ಸೇರಿ ಎರಡು ಮೂರು ದಿನ ಜಾತ್ರೆಯ ವಾತಾವರಣವಿದ್ದಿತು.  ಪೂಜಾದಿಗಳೆಲ್ಲ ಮುಗಿದ ನಂತರ  ವೈದಿಕರ ಅಪ್ಪಣೆಯಂತೆ ಕೊಲ್ಲೂರಿಗೆ ಹೋಗುವ ಸಂಭ್ರಮ.

ಕೊಲ್ಲೂರಿಗೆ ನಮ್ಮ ಬಾಯಾರು ಮುಳಿಗದ್ದೆಯಿಂದ ಸರಿಸುಮಾರು ಐದು ಗಂಟೆಯ ಪಯಣವಿದೆ.   ಹಾಗಾಗಿ ಬೆಳ್ಳಂಬೆಳಗ್ಗೆ  ಬೆಡ್ ಕಾಫೀ ಕುಡಿದು ಹೊರಡುವ ತೀರ್ಮನಕ್ಕೆ ಬರಲಾಯಿತು.   ನಮ್ಮ ಜೊತೆಗೇ ಬರಬೇಕಾಗಿದ್ದ ಬಾಲಕೃಷ್ಣ ಶೆಟ್ಟಿ ಹಾಗೂ ವೆಂಕಪ್ಪ ಶೆಟ್ರು ಮಂಗಳೂರಿನಿಂದ ಸೇರಿಕೊಳ್ಳುವ ವ್ಯವಸ್ಥೆಯೂ ಆಯ್ತು.

 ಅದೂ ನಾವೀಗ ದೈವದರ್ಶನಕ್ಕೆ ಹೊರಟಿರುವ ಹೊತ್ತಿನಲ್ಲಿ,  ನಮ್ಮಕ್ಕ ಅದೇನಿದ್ರೂ ಹೋಟಲ್ ತಿಂಡಿ ಮುಟ್ಟುವವಳಲ್ಲ.   ನಾನೂ ಬೆಳಗಾಗುತ್ತಲೇ ಸ್ನಾನ ಮುಗಿಸಿ,  ಸಜ್ಜಿಗೆ ಉಪ್ಪಿಟ್ಟು ಮಾಡಿಟ್ಟು,  ಹೋಗುವಾಗ ದಾರಿಯಲ್ಲಿ ತಿನ್ನಲಿಕ್ಕೆ ಕಟ್ಟಿಕೊಂಡಿದ್ದೂ ಆಯ್ತು,  ಜೊತೆಗೆ ಅವಲಕ್ಕಿ,  ಬಾಳೆಹಣ್ಣು,  ಗಟ್ಟಿಮೊಸರೂ...


ನಾನ್ ಸ್ಟಾಪ್ ಡ್ರೈವಿಂಗ್ ಮಾಡ್ತಾ ನಮ್ಮ nissanxshift ಮುಂದುವರಿಯಿತು.   ಕುಂದಾಪುರ ತಲಪಿದಾಗ ಹಸಿವಿನ ಗೋಚರವಾದಾಗ,  ಕಾರು ರಸ್ತೆಪಕ್ಕ ಯಾರಿಗೂ ತೊಂದರೆಯಾಗದಂತೆ ನಿಂತಿತು,  ಅವಲಕ್ಕಿ ಉಪ್ಪಿಟ್ಟು ಸ್ವಾಹಾ ಆಯ್ತು.


ಮಹಿಳೆಯರಿಗೆ ಇಂತಹ ಹಳ್ಳಿಗಾಡಿನ ಪ್ರಯಾಣದಲ್ಲಿ ಶೌಚಾಲಯ ವ್ಯವಸ್ಥೆಯುದ್ದೇ ಸಮಸ್ಯೆ.   ನಾವು ಟಿಫಿನ್ ಮುಗಿಸಿ ಕೈ ತೊಳೆಯುವ ಹೊತ್ತಿಗೆ ನಮ್ಮೊಂದಿಗೆ ಇದ್ದ ಶೆಟ್ರು ಹತ್ತಿರದ ಮನೆಯವರ ಪರಿಚಯ ಮಾಡಿಕೊಂಡಾಗಿತ್ತು.   ಶೆಟ್ರ ಶಿಫಾರಸು ಮೇರೆಗೆ ನಾವಿಬ್ಬರು ಹೆಂಗಸರು ಟಾಯ್ಲೆಟ್ ಹುಡುಕಿಕೊಂಡು ಆ ಮನೆಗೆ ಹೋದೆವು.   ಅಲ್ಲಿ ನೋಡಿದ್ರೆ ಟಾಯ್ಲೆಟ್ ಮುಂದುಗಡೆ  ತೆಂಗಿನಕಾಯಿ ಸಿಪ್ಪೆಯ ರಾಶಿ,  ಅದರ ಮೇಲೆ ಹತ್ತಿ ಇಳಿದು ದೇಹಬಾಧೆ ತೀರಿಸುವ ಸಾಹಸಕ್ಕಿಂತ   " ಕಾರಿನಲ್ಲಿ ಕೂತಿದ್ದು,  ಕೊಲ್ಲೂರಿನಲ್ಲಿ ಉತ್ತಮ ವ್ಯವಸ್ಥೆಯಿದೆ,  ಅಲ್ಲೇ ನೋಡ್ಕೊಳ್ಳೋಣಾ... " ಎಂಬ ತೀರ್ಮಾನಕ್ಕೆ ನಾವು ಬದ್ಧರಾಗಬೇಕಾಯಿತು.


ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ನಾವು ಕೊಲ್ಲೂರು ಕ್ಷೇತ್ರ ತಲುಪಿದೆವು.   ದೇವರದರ್ಶನ,  ಕಾಣಿಕೆಹುಂಡಿ ಇತ್ಯಾದಿಗಳೆಲ್ಲ ಆದ ಹಾಗೆ ಭೋಜನ ಸಮಯವೂ ಬಂದಿತು.


ದೇವಾಲಯದ ಸಮಾರಾಧನೆ ಊಟ ಮುಗಿಸಿ ಹೊರ ಬಂದು ನಮ್ಮ ಕಾರು ಇದ್ದೆಡೆ ಹೊರಡುತ್ತಿದ್ದಂತೆ ನಮ್ಮ ದೇಹಬಾಧೆಯ ನೆನಪಾಗಿ,  ಟಾಯ್ಲೆಟ್ ಹುಡುಕಿ,  ಅಲ್ಲಿಯೂ ಮೂರು ರೂಪಾಯಿ ಕಾಣಿಕೆ ಕೊಟ್ಟು ಬಂದಿದ್ದಾಯ್ತು.


ಶೆಟ್ರ ಪರಿವಾರ ಇನ್ನೂ ಊಟ ಮುಗಿಸಿದಂತಿಲ್ಲ,  ಕಾರಿನ ಪಕ್ಕ ನಿಂತು ಕಾಯುತ್ತಿದ್ದಾಗ ಅಲ್ಲೊಂದು ವಿಶೇಷ ದೃಶ್ಯ.   " ಅದೇನಪ್ಪಾ ಅಂತೀರಾ... "


ಅದೊಂದು ಗೊಂಬೆ,  ಮನುಷ್ಯ ಗಾತ್ರದ್ದು.  ಒಬ್ಬಾತ ಗೊಂಬೆಯ ನೀಳ ಕೂದಲನ್ನು ಬಾಚುವುದೂ,  ಅದೇನೋ ವಿನ್ಯಾಸದಲ್ಲಿ ಕೂದಲನ್ನು ಸುರುಳಿ ಸುತ್ತುವುದೂ ಮಾಡ್ತಿದ್ದ.   ಒಂದಿಬ್ಬರು ಹೆಂಗಸರು ಅವನ ಕಲಾಪ್ರೌಡಿಮೆಯನ್ನು ವೀಕ್ಷಿಸಿ  " ನಮಗ್ಯಾಕೇ... " ಅನ್ನೋ ಥರ ಅಲ್ಲಿಂದ ತೆರಳಿದರು.   ನಮ್ಮೆಜಮಾನ್ರ ಕಣ್ಣಿಗೆ ಬಿದ್ದಿದ್ದೇ ತಡ,  " ಬಾ,  ನಿನ್ನ ಹೇರ್ ಸ್ಟೈಲ್ ನೋಡೋಣ... " ಅನ್ನೋದೇ!
                    " ಥತ್,  ಈ ಕಾರು ಪಾರ್ಕಿಂಗ್ ಮೈದಾನದಲ್ಲಿ...  ನಂಗೇನೂ ಸ್ಟೈಲ್ ಬೇಡ. "

" ಗಂಡಾನೇ ಹೇಳಿದ್ಮೇಲೆ ಯಾಕೆ ಬೇಡಾಂತೀಯ,  ಹೋಗು ನೋಡೋಣ. " ಅಂದಳು ಅಕ್ಕಯ್ಯ.

" ಆಯ್ತು,  ಹಂಗಿದ್ರೆ... "  ನಾನೂ ಕೇಶವಿನ್ಯಾಸ ಈ ತನಕ ಮಾಡಿಸಿಕೊಂಡಿದ್ದಿಲ್ಲ,  ದಿನಕ್ಕಮ್ಮೆ ಜಡೆ ಹೆಣೆದು ಬಿಗಿಯಾಗಿ ಕಟ್ಟಿದ್ರೆ ಮುಗೀತು ನನ್ನ ಕೇಶ ಶೃಂಗಾರ.  ಅದಕ್ಕೂ ಅರ್ಧ ಗಂಟೆಯ ಬಿಡುವು ಬೇಕಾಗುತ್ತ ಇರುವಾಗ ಇನ್ನು ವಿನ್ಯಾಸ,  ಸಿಂಗಾರದ ಮಾತೇ ನನ್ನ ಬಳಿಯಿಲ್ಲ.


ಅಂತೂ ಕ್ಷಣಮಾತ್ರದಲ್ಲಿ ಕೇಶ ವಿನ್ಯಾಸ ಆಗ್ಹೋಯ್ತು,  " ಹೇಗ್ಬಂತೂ ನೋಡ್ರೀ... "


" ಒಂದು ಗುಲಾಬಿ ಹೂ ಇಟ್ಟಿದ್ರೆ... "


 ಹೇರ್ ಸ್ಟೈಲ್ ಧಾರಿಣಿಯಾಗಿ ಕಾರು ಹತ್ತಿದ್ದಾಯ್ತು.  ಮನೆ ತಲಪುವಾಗ ರಾತ್ರಿ ಒಂಭತ್ತು ದಾಟಿತ್ತು.   ಏನೇ ಮನೆಕೆಲಸ ಆರಂಭಿಸುವ ಮೊದಲು ಈ ತಲೆಕಟ್ಟಾಣ ಬಿಡಿಸ್ಕೊಳ್ಳೋಣ ಅಂತಿದ್ರೆ ಸಮಸ್ಯೆ ಎದುರಾಯ್ತು.   ಆ ಹೇರ್ ಕ್ಲಿಪ್ ಕೂದಲುಗಳೆಡೆಯಿಂದ ಹೊರ ಬರಲು ಒಪ್ಪದೇ ಗಟ್ಟಿಯಾಗಿ ಕೂತಿತ್ತು.   ನಮ್ಮಕ್ಕ ಪಕ್ಕದಲ್ಲಿದ್ದ ಅವಳ ಮನೆಗೆ ಹೋಗಿದ್ದಳು.  ಈ ತಡ ರಾತ್ರಿ ಹೊತ್ತಿನಲ್ಲಿ,   "ತಲೆ ಬಿಡಿಸು ಬಾರೇ... "  ಕರೆಯುವುದಾದರೂ ಹೇಗೆ?   ಬೇರೆ ಉಪಾಯವಿಲ್ಲದೆ ನಮ್ಮೆಜಮಾನ್ರ ಮೊರೆ ಹೋಗಬೇಕಾಯ್ತು.


ತಲೆಕೂದಲು ಗಂಟುಕಟ್ಟಿಕೊಳ್ಳದಂತೆ ಹೇಗೆಲ್ಲ ಶ್ರಮ ಪಟ್ಟೆನೆಂದು ಈಗ ಬರೆಯಲು ಬಾರದು.  ಅಂತೂ ಕ್ಲಿಪ್ಪು ಹೊರ ತೆಗೆದ ನಮ್ಮವರು,  " ಈ ಕ್ಲಿಪ್ ಉಪಯೋಗಿಸಿಯೇ ಕೂದಲು ಕಟ್ಟಲು ಅಭ್ಯಾಸ ಮಾಡಿಕೋ.. "  ಎಂದು ಉಚಿತ ಸಲಹೆಯನ್ನೂ ಕೊಟ್ಟಿದ್ದಂತೂ ಹೌದು.   ನಾನು  " ಆ ಹೇರ್ ಕ್ಲಿಪ್ ಎಲ್ಲಿ ಇಟ್ಟೇ ಆಂತ ಗೊತ್ತಿಲ್ಲರೀ... "  ಅಂದಿದ್ದೂ ಹೌದು.
                     0 comments:

Post a Comment