Pages

Ads 468x60px

Monday 13 February 2017

ಊತಪ್ಪಂ




   



ಮುಂಜಾನೆ ಉದ್ದಿನ ದೋಸೆ ತಿಂದಿದ್ದು,  ಹತ್ತು ಗಂಟೆಯ ಟಿಫಿನ್ ಗೂ ದೋಸೆ..


" ಪುನಃ  ಸಂಜೆಗೂ ಇದೇ ದೋಸೆಯಾ.. "


ಅದೂ ಇದ್ದಿದ್ದೂ ಎರಡೇ ಸೌಟು ಹಿಟ್ಟು,  ಸಂಜೆಯ ಹೊತ್ತಿಗೆ ಸಾಕು.   ಆದ್ರೆ ಅದೇ ದೋಸೆ ಬೋರು... 


" ಏನ್ಮಾಡೋಣಾ? "


ನೀರುಳ್ಳಿ ಇದೇ,  ಶುಂಠಿ,  ಹಸಿಮೆಣಸು,  ಕೊತ್ತಂಬ್ರಿ ಸೊಪ್ಪು...  ಎಲ್ಲ ಇದೆ.  ತೋಟದಿಂದ ಬೇಕಿದ್ರೆ ಬೇವಿನಸೊಪ್ಪು ತರಬಹುದೂ...


" ಎಲ್ಲ ಹಾಕಿ ಏನ್ಮಾಡ್ತೀರಾ? "


ಒಂದು ನೀರುಳ್ಳಿ ಚಿಕ್ಕದಾಗಿ ಕತ್ತರಿಸಿಕೊಳ್ಳುವುದು.

ಅರ್ಧ ಹಸಿಮೆಣಸು,  ಇನ್ನೂ ಚಿಕ್ಕದಾಗಿ ಕತ್ತರಿಸಿಕೊಳ್ಳುವುದು.

ಕೊತ್ತಂಬ್ರಿ ಸೊಪ್ಪನ್ನು ನಾಳೆಗೇ ಅಂತ ಇಡೋದು ಬೇಡ,  ಹಾಳಾಗುವ ಮಾಲು..  ಇದಕ್ಕೂ ಒಂದು ಗತಿಗಾಣಿಸುವುದು.

ಅರ್ಧ ಇಂಚು ಉದ್ದದ ಶುಂಠಿಯ ಸಿಪ್ಪೆ ತೆಗೆಯಿರಿ.  


" ಹೇಗೇ? "


ಕೈ ಉಗುರಿನಿಂದಲೇ ಸಿಪ್ಪೆ ಹೆರೆದು ತೆಗೆಯಿರಿ.   ಇದನ್ನೂ ಚಿಕ್ಕದಾಗಿ ಕತ್ತರಿಸಿಕೊಳ್ಳುವುದು.

ಇರುವ ಎರಡು ಸೌಟು ಹಿಟ್ಟಿಗೆ ಇಷ್ಟು ಸಾಕು.

ಶುಂಠಿ,  ಕೊತ್ತಂಬ್ರಿ ಸೊಪ್ಪು,  ಹಸಿಮೆಣಸುಗಳನ್ನು ಹಿಟ್ಟಿನೊಂದಿಗೆ ಕಲಸಿಕೊಳ್ಳಿ.   ನೀರುಳ್ಳಿ ಪ್ರತ್ಯೇಕ ಇರಿಸಿಕೊಳ್ಳಿ.


ತುಪ್ಪ ಸವರಿ ತವಾ ಕಾಯಲಿಟ್ಟು,  ಮೇಲಿನಿಂದ ತುಸು ನೀರು ಚಿಮುಕಿಸಿ ಬಿಸಿಯಾಗಿದೆಯೆಂದು ಖಾತ್ರಿ ಪಡಿಸಿಕೊಳ್ಳಿ.   ದೋಸೆ ಹಿಟ್ಟನ್ನು ಎರೆದು ತುಸು ಹರಡಿ,  ಮೇಲಿನಿಂದ ನೀರುಳ್ಳಿ ಚೂರುಗಳನ್ನು ಬೀಳಿಸಿ,  ಮುಚ್ಚಿ ಬೇಯಿಸಿ.


ನೆನಪಿರಲಿ,  ತೆಳ್ಳಗೆ ಹರಡುವಂತಿಲ್ಲ,  ನಾವು ಹಾಕಿದಂತಹ ಸಾಮಗ್ರಿಗಳಿಂದಾಗಿ ಹರಡಲೂ ಸಾಧ್ಯವಾಗದು.   ತುಸುಹೊತ್ತು ಬಿಟ್ಟು ಮೇಲಿನಿಂದ ಒಂದು ಚಮಚ ತುಪ್ಪ ಎರೆದು ಕವುಚಿ ಹಾಕಿ,  ಅರೆಘಳಿಗೆ ಬಿಟ್ಟು ತೆಗೆಯಿರಿ.


ಬೆಣ್ಣೆ,  ಸಕ್ಕರೆ,  ತುಪ್ಪ,  ಜೇನು...  ಹೀಗೆ ಯಾವುದೂ ಆದೀತು,  ಕೂಡಿಕೊಂಡು ಬಿಸಿಯಿರುವಾಗಲೇ ಟೀ ಅಥವಾ ಕಾಫಿಯೊಂದಿಗೆ ಸವಿಯಿರಿ.   ಆಹ!   ಊತಪ್ಪ ಅಂದ್ರೆ ಇದಪ್ಪ...   ಸಂಜೆಗೆ ಸೊಗಸಾದ ತಿನಿಸು.


ದೋಸೆ ಹಿಟ್ಟೇ ಆಗಬೇಕೆಂದಿಲ್ಲ,  ಇಡ್ಲಿ ಹಿಟ್ಟು ಮಿಕ್ಕಿದ್ದು ಇದ್ದರೆ ಅದೂ ಆದೀತು.   ಯಾವ ಹಿಟ್ಟೂ ಇಲ್ವೇ,  ಚಿರೋಟಿ ರವೆಯನ್ನು ಮೊಸರಿನಲ್ಲಿ ಕಲಸಿಟ್ಟು,  ಮೇಲೆ ಹೇಳಿದಂತಹ ಸಾಮಗ್ರಿಗಳನ್ನು ಹಾಕಿಯೂ ಮಾಡಬಹುದು.   ಆದರೆ ಈ ತಿನಿಸನ್ನು ಸಜ್ಜಿಗೆ ರೊಟ್ಟಿ ಅನ್ನುವ ವಾಡಿಕೆ.


ಟೊಮ್ಯಾಟೋ,  ಕಾಯಿತುರಿ,  ಕ್ಯಾರೆಟ್,  ಕ್ಯಾಪ್ಸಿಕಂ...  ಹೀಗೆ ಬೇರೆ ಬೇರೆ ಸಾಮಗ್ರಿಗಳ ಸಂಯೋಜನೆಯಿಂದ ಊತಪ್ಪವನ್ನು ವೆಜಿಟೇಬಲ್ ದೋಸೆ ಎಂದೂ ಹೆಸರಿಸಬಹುದು.


ಕೇರಳದ ಪಾರಂಪರಿಕ ತಿನಿಸು ಈ ಊತಪ್ಪಂ,  ಸಾಯಂಕಾಲದ ತಿನಿಸುಗಳಲ್ಲಿ ಒಂದಾದರೂ ಬೇಕಿದ್ದರೆ ಬೆಳಗ್ಗಿನ ಉಪಹಾರಕ್ಕೂ ಯೋಗ್ಯ.



ಬರೆದಿಟ್ಕೊಂಡಿದ್ದನ್ನು ಅದ್ಯಾವ ಹೊತ್ತಿನಲ್ಲಿ ನನ್ನ ಮಗ ನೋಡಿದ್ನೋ ಗೊತ್ತಿಲ್ಲ,  " ಇಷ್ಟೆಲ್ಲ ಬರೆದಿದ್ದೀಯಲ್ಲ ಎರಡು ಸೌಟು ಹಿಟ್ಟಿನ ಕಥೆ...  ಉದ್ದಿನ ದೋಸೆ ಹಿಟ್ಟು ಹ್ಯಾಗೇ ಮಾಡೋದೂ ಅಂತಾನೂ ಬರೀ.. "


" ನಮ್ಮ ಬೆಂಗಳೂರಲ್ಲಿ ದೋಸೆ ಹಿಟ್ಟು ಪ್ಯಾಕೆಟ್ ಸಿಗುತ್ತೇ,  ಅದನ್ನು ತಂದು ಎರೆಯುವುದು. "  ಯಾವಾಗಲೋ ಅಂದಿದ್ದು ನೆನಪಾಯ್ತು.   ದೋಸೆ ಹಿಟ್ಟು ಈಗ ನಮ್ಮ ಹಳ್ಳಿಗೂ ಬಂದಿದೆ,   ಆದ್ರೆ ಅದಕ್ಕೆ ಮನೆಯ ರುಚಿ ಎಲ್ಲಿಂದ ಬರಬೇಕು?


ಉದ್ದಿನ ದೋಸೆಯ ಅಳತೆ ಪ್ರಮಾಣ:


ಬೆಳ್ತಿಗೆ ಅಕ್ಕಿ ಯಾ ದೋಸೆ ಅಕ್ಕಿ 2ಲೋಟ,  ಒಂದು ಲೋಟ ಇಡ್ಲಿ ಅಕ್ಕಿ  

ನಮ್ಮ ಪಾಕಶಾಸ್ತ್ರ ಪುಸ್ತಕ ಬರೆದ ಕಡಂಬಿಲ ಸರಸ್ವತಿಯವರ ಲೆಕ್ಕಾಚಾರದಂತೆ ಬೆಳ್ತಿಗೆ ಅಕ್ಕಿ ಹಾಗೂ ಕುಚ್ಚುಲಕ್ಕಿಗಳನ್ನು ಸಮಪ್ರಮಾಣದಲ್ಲಿ ಹಾಕಿರಬೇಕು.  ಈಗ ನಾವು ಬರೆದಿರುವ ಇಡ್ಲಿ ಅಕ್ಕಿಯು ಕುಚ್ಚುಲಕ್ಕಿಗೆ ಪರ್ಯಾಯವೆಂದು ತಿಳಿಯಿರಿ.


ಉದ್ದು ಒಂದು ಲೋಟ

ಇನ್ನುಳಿದಂತೆ ಮೆಂತೆ, ಹೆಸ್ರುಬೇಳೆ, ಕಡ್ಲೆಬೇಳೆ, ತೊಗರಿಬೇಳೆ, ಅವಲಕ್ಕಿ ದವಲಕ್ಕಿ ಎಲ್ಲವನ್ನೂ ನಮ್ಮ ಇಷ್ಟದಂತೆ,  ಮನೆಯೊಳಗೆ ಇದ್ದರೆ ಕೂಡಿಸಿಕೊಳ್ಳಬಹುದು.


ನಾನಂತೂ ಉದ್ದಿನಬೇಳೆಯ ಅಳತೆಯಲ್ಲಿ  ಅರ್ಧದಷ್ಟೇ ಹಾಕುವುದು,  ಮೆಂತೆ ಒಂದೆರಡು ಚಮಚ,  ಬೇರೇನನ್ನೂ ಹಾಕಲಿಕ್ಕಿಲ್ಲ.   ಚೆನ್ನಾಗಿ ನೆನೆದ ಅಕ್ಕಿಬೇಳೆಗಳನ್ನು ಅರೆಯುವಾಗ ಎರಡು ಅಥವಾ ಮೂರು ಕದಳಿ ಬಾಳೆ ಹಣ್ಣು ನುರಿದು  ಸೇರಿಸುವ ಪದ್ಧತಿ ನನ್ನದು,  ದೋಸೆಯೂ ಚೆನ್ನಾಗಿ ಬರುತ್ತದೆ,  ಉದ್ದು ಕೂಡಾ ಉಳಿತಾಯ.



ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಡಿಸೆಂಬರ್, 2016.




 

0 comments:

Post a Comment