Pages

Ads 468x60px

Tuesday, 31 January 2017

ಬೆಟ್ಟದಾವರೆ
                                               


ಕನ್ನಡದ ಬೆಟ್ಟದಾವರೆ,  ತಮಿಳಿನಲ್ಲಿ ವಟ್ಟತಾಮರೈ ಭರತಖಂಡದ ಸಸ್ಯವಾಗಿದ್ದು ಮಧ್ಯಮ ಗಾತ್ರದ ನಿತ್ಯಹರಿದ್ವರ್ಣದ ಮರವಾಗಿದೆ.  ಕೇರಳೀಯರಿಗೆ ಉಪ್ಪಿಲ,  ತೊಡುಕಣ್ಣಿ,  ವಟ್ಟಕಣ್ಣಿ ಆಗಿದ್ದರೆ ನಮ್ಮ ಕರಾವಳಿಯ ತುಳುವರ ಪಾಲಿಗೆ ಉಪ್ಪಳಿಕ, ಉಪ್ಪಲಿಗೆ.  ಹೆಸರಿನ ಹಿಂದೆ ಕಾರಣವೂ ಇದೆ.


ಹಿಂದೆ ನಮ್ಮ ತೋಟ ಗದ್ದೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಇದ್ದಾಗ ಅವರ ಅಡುಗೆಗೆಂದೇ ಪ್ರತ್ಯೇಕ ವ್ಯವಸ್ಥೆ ಇದ್ದಿತು.  ಅಡುಗೆ ಏನೇ ಆಗಿದ್ದರೂ ಊಟದೊಂದಿಗೆ ಉಪ್ಪು ಇರಲೇಬೇಕು,  ಐಯೋಡೈಸ್ಡ್ ಸಾಲ್ಟ್ ಅಥವಾ ಟೇಬಲ್ ಸಾಲ್ಟ್ ಇತ್ಯಾದಿ ಯಾವುದೂ ಆಗ ಚಾಲ್ತಿಯಲ್ಲಿರಲಿಲ್ಲ,  ಇದ್ದರೂ ಗಂಜಿಯೂಟಕ್ಕೆ ಅದು ಆಗದು.  ಕಲ್ಲುಪ್ಪನ್ನು ಜೋಪಾನವಾಗಿ ಉಪ್ಪಲಿಗೆ ಎಲೆಯಲ್ಲಿ ತುಂಬಿಸಿ,  ತೆಂಗಿನ ಗೆರಟೆಯ ತಟ್ಟೆಯೊಳಗೆ ಭದ್ರವಾಗಿ ಇಡುತ್ತಿದ್ದಳು ನನ್ನ ಕೆಲಸದಾಕೆ ಕಲ್ಯಾಣಿ.


" ಅದ್ಯಾಕೇ ಈ ಸೊಪ್ಪು ಇಟ್ಕಂಡಿದೀಯಾ.. ?

" ನಮ್ಮ ಬಳಿ ಕರಡಿಗೆ ಎಲ್ಲುಂಟು?, ಇದರಲ್ಲಿ ಇಟ್ಟರೆ ಉಪ್ಪು ಕರಗುವುದಿಲ್ಲ. "  ಅವಳ ನೇರಾ ಉತ್ತರ.


ಔಷಧೀಯ ಗುಣ ಹಾಗೂ ಉಪಯುಕ್ತ ಮರವಾಗಿರುವ ಬೆಟ್ಟದಾವರೆಯ ಮರದ ಎಲೆಯೂ ಆಕರ್ಷಕ,  ಹತ್ತು ಹಲವಾರು ಮರಗಳೆಡೆಯಲ್ಲಿ ವಿಭಿನ್ನವಾಗಿ ನಿಲ್ಲುವ ಈ ಮರವನ್ನು ಎಲ್ಲಿದ್ದರೂ ಗುರುತಿಸಬಹುದಾಗಿದೆ.  ಬೆಟ್ಟದಾವರೆ ಹೆಸರು ಕೂಡಾ ಅರ್ಥವತ್ತಾಗಿದೆ.  

ಕತ್ತರಿಸಿದ ಎಲೆ ಗೆಲ್ಲುಗಳಿಂದ ಒಸರುವ ಅಂಟುದ್ರವ,  ಗುಹ್ಯರೋಗದ ವ್ರಣಗಳಿಗೆ ಲೇಪನ.

ಎಲೆ ಹಾಗೂ ತೊಗಟೆಯ ಕಷಾಯ ಹುಣ್ಣುಗಳನ್ನು ತೊಳೆಯಲು ಉಪಯುಕ್ತ.

ಕಿಡ್ನಿಯ ಕಲ್ಲುಗಳ ನಿವಾರಣೆಗಾಗಿ ತೊಗಟೆಯ ಕಷಾಯ ಸೇವನೆ.

ತಾಜಾ ತೊಗಟೆಯ ಹಸಿ ದ್ರವ,  ಕಬ್ಬಿಣದ ಕಡಿತದ ಗಾಯಕ್ಕೆ ಔಷಧ.

ಜಜ್ಜಿದ ಎಳೆಯ ಕಾಯಿಗಳನ್ನು ತೆಂಗಿನೆಣ್ಣೆ ಬೆರೆಸಿಟ್ಟು,  ಮೂಳೆಮುರಿತಕ್ಕೆ ಲೇಪಿಸುವುದು.

ಆ್ಯಂಟಿ ಓಕ್ಸಿಡೆಂಟ್,  ಆ್ಯಂಟಿ ಮೈಕ್ರೋಬಿಯಲ್ ಗುಣಧರ್ಮಗಳಿಂದ ಕೂಡಿದ ಉಪ್ಪಳಿಗೆ ಮರ ನಿರ್ಲಕ್ಷಿತವಾಗಬಾರದು.


ಕೈಗಾರಿಕಾ ವಲಯದಲ್ಲಿಯೂ ಉಪ್ಪಲಿಗೆ ಮರ ಬೇಡಿಕೆಯುಳ್ಳದ್ದಾಗಿದೆ,  ಹಗುರವಾದ ಸಸ್ಯಕಾಂಡವು ಬೆಂಕಿಪೆಟ್ಟಿಗೆ, ಪೆನ್ಸಿಲ್ ತಯಾರಿಕೆಗೆ ಉಪಯೋಗದಲ್ಲಿದೆ.  ಮರದ ಒಣ ಹುಡಿಯಿಂದ ರಾಳ ತಯಾರಿಸಲ್ಪಡುತ್ತದೆ.


ಅಗಲವಾಗಿ ತಾವರೆಯ ಎಲೆಯಂತಿರುವ ಉಪ್ಪಲಿಗೆ ಎಲೆಯಿಂದ ಕರಾವಳಿಯ ತುಳುವರು ಅಡ್ಯ ( ಕಡುಬು, ಇಡ್ಲಿ, ಅಕ್ಕಿಪುಂಡಿ ) ಇಂತಹ ಉಗಿಯಲ್ಲಿ ಬೇಯಿಸುವ ತಿಂಡಿತಿನಿಸು ತಯಾರಿಸುತ್ತಾರೆ.   " ಬಾಳೆ ಎಲೆ ಇಲ್ಲದ ನಮ್ಮಂತವರು ಈ ಎಲೆಯಲ್ಲಿ ಅಡ್ಯ ಮಾಡುವುದು. "  ಅನ್ನುತ್ತಿದ್ದಳು ಕಲ್ಯಾಣಿ.   ನಿಸರ್ಗದ ಮಕ್ಕಳಾಗಿ ಬಳೆದವರಿಗೆ ಮಾತ್ರ ಆರೋಗ್ಯದ ಗುಟ್ಟು ತಿಳಿದಿದೆ.


ಭಾರತೀಯ ಭಾಷೆಗಳಲ್ಲೇ ನೂರಾರು ಹೆಸರುಗಳಿಂದ ಗುರುತಿಸಿಕೊಂಡಿರುವ ಉಪ್ಪಲಿಗೆ,  ಸಸ್ಯಶಾಸ್ತ್ರೀಯವಾಗಿ ಕೂಡಾ ಹಲವಾರು ಹೆಸರು ಇದರದ್ದು.  macaranga indica,  macaranga flexuosa wt,  macaranga peltata ...


 ಎಲೆಗಳಲ್ಲಿ ಪೊಟ್ಯಾಷ್ ಹಾಗೂ ಸಾರಜನಕಗಳು ಇರವುದರಿಂದ ಗದ್ದೆ, ತೋಟಗಳಿಗೆ ಅತ್ಯುತ್ತಮ ಹಸಿರು ಗೊಬ್ಬರವಾಗಿದೆ..  ಸದಾ ಕಾಲವೂ ಹಸಿರೆಲೆಗಳಿಂದ ತುಂಬಿರುವ ಉಪ್ಪಲಿಗೆ ಮರವನ್ನು ತೋಟದ ಬದಿಯಲ್ಲಿ ತಂಪಿಗಾಗಿ ಬೆಳೆಸುವುದಿದೆ.

 

ಹೌದೂ,  ಇಷ್ಟೆಲ್ಲ ಪ್ರವರ ತಿಳಿದಾಯ್ತು,  ಉಪ್ಪಲಿಗೆ ಎಲೆಯಿಂದ ಕಡುಬು ಮಾಡೋದು ಹೇಗೆ?  ತಿಳಿಯಬೇಕಿದೆ.

ಮರದ ಕೊಂಬೆಯಿಂದ ಒಳ್ಳೆಯ ಎಲೆಗಳನ್ನು ಕೊಯ್ದು ತನ್ನಿರಿ.  ಬಟ್ಟೆಯಿಂದ ಒರೆಸಿ ಇಡುವುದು.


ಪತ್ರೊಡೆ ಹಿಟ್ಟು ಮಾಡಿದ್ದಾಗಿದೆ,  ಕೆಸುವಿನೆಲೆ ಬೆರೆಸಿ ಇಟ್ಟಿದ್ದೀರಾ,

ಇಡ್ಲಿ ಪಾತ್ರೆಯಲ್ಲಿ ನೀರು ಗಳಗಳನೆ ಕುದೀತಾ ಇದೆ,

ಇನ್ನೇಕೆ ತಡ, 

ಉಪ್ಪಲಿಗೆ ಸೊಪ್ಪಿನೊಳಗೆ ಹಿಟ್ಟು ತುಂಬಿ,  ಅಗಲವಾದ ಎಲೆಯಲ್ವೇ,  ಎಲೆಯಿಂದಲೇ ಸುತ್ತಿ ಒಳಗಿರಿಸಿ.

ಇದೇ ಪ್ರಕಾರವಾಗಿ ಅಕ್ಕಿ ಪುಂಡಿ, ಸಿಹಿಗಡುಬು,  ಇಡ್ಲಿಗಳನ್ನೂ ಮಾಡಬಹುದು.  ಇದನ್ನು ಎಲೆ ಅಡ್ಯ ಎಂದರೂ ನಡೆದೀತು.   ತನ್ನದೇ ಆದ ಕಮ್ಮನೆ ಹಾಗೂ ಬಣ್ಣವನ್ನು ಉಪ್ಪಲಿಗೆ ಆಯಾ ತಿಂಡಿಗಳಿೆ ನೀಡುತ್ತದೆ.

ಬಾಳೆ ಎಲೆಯ ತಕರಾರು ಇಲ್ಲಿಲ್ಲ,  ಎಲೆಗಳನ್ನು ಒಂದೇ ಗಾತ್ರದಲ್ಲಿ ಕತ್ತರಿಸಿ ಇಡಬೇಕು,  ಗ್ಯಾಸ್ ಉರಿಯಲ್ಲಿ ಬಾಡಿಸಬೇಕು ಇತ್ಯಾದಿ ರಗಳೆ ಇಲ್ಲ.


.0 comments:

Post a Comment