Pages

Ads 468x60px

Thursday 19 October 2017

 ಚಿಲ್ಲರೆಯ ವಿಷಯ!



 ಉಪ್ಪಳ ಪೇಟೆವರೆಗೆ ಹೋಗಿ ಬರುತ್ತೇನೆ. " ಬೈಕ್ ಏರಿ ಹೋಗಿದ್ದ ನಮ್ಮೆಜಮಾನ್ರು ಸಂಜೆಯಾಗುತ್ತಲೂ ಮನೆ ತಲುಪಿ ಮೊದಲು ಹೇಳಿದ್ದು ಹೀಗೆ, " ನಿನ್ನ ಫೇಸ್ ಬುಕ್ ವ್ಯವಹಾರಕ್ಕೆ ಫೋಟೋ... "

" ಏನೂ... "
" ನಾನು ವೈದ್ಯರಲ್ಲಿಗೆ ಹೋಗಿದ್ದು... " ಉಪ್ಪಳದ ಆಯುರ್ವೇದ ಪಂಡಿತರೂ ನಮ್ಮವರೂ ಸ್ನೇಹಿತರು.
" ಹ್ಞಾ, ಅಂತಹ ವಿಶೇಷದ ಫೋಟೋ ತೆಗೆಯಲಿಕ್ಕೆ ಏನು ಇತ್ತು ಅಲ್ಲಿ? "
" ಎಷ್ಟೊಂದು ಹಳೇ ಕಾಯಿನ್ ಕಲೆಕ್ಷನ್ ಇದೆ ಅವರ ಹತ್ತಿರ... ಅಂತಾದ್ದು ನನ್ನ ಬಳಿ ಒಂದೂ ಇಲ್ವೇ..." ಮಮ್ಮಲ ಮರುಗಿದರು ನಮ್ಮವರು.

“ ನನ್ನ ಕುತ್ತಿಗೆಯ ಪವನಿನ ಸರ… “ ಸಮಾಧಾನಿಸುತ್ತ, " ಇದೆಯಲ್ಲ ಓಬೀರಾಯನ ಕಾಲದ ಬೆಳ್ಳಿ ನಾಣ್ಯಗಳು... " ಐಫೋನ್ ಕೈಗೆತ್ತಿಕೊಂಡು ನಮ್ಮವರು ಕ್ಲಿಕ್ಕಿಸಿದ ಚಿತ್ರಗಳನ್ನು ಗಮನಿಸುತ್ತ, " ಇಂತಹ ಚಿಲ್ಲರೆ ನಾಣ್ಯಗಳು ನಮ್ಮಲ್ಲೂ ಉಂಟಲ್ಲ! "
" ಹೌದ, ಎಲ್ಲಿದೇ? ನಿನ್ನ ಬಳಿ ಹೇಗೆ ಬಂತು? " ನಮ್ಮವರ ಅಡ್ಡಪ್ರಶ್ನೆ.

"ಅದೂ ಅಪ್ಪನ ಕಪಾಟು ಉಂಟಲ್ಲ... "
" ಅಪ್ಪನ ಪೈಸ ನೀನು ಯಾಕೆ ತೆಗೆದಿಟ್ಟಿದ್ದು? "
" ಛೆ.. ಹಾಗೇನೂ ಅಲ್ಲ. ಆ ಕಪಾಟಿನಲ್ಲಿ ಇದೆ. ಒಂದು ಹಿತ್ತಾಳೆ ಲೋಟದಲ್ಲಿ ಇಟ್ಟಿದ್ದೇನೆ. ಕಪಾಟು ಬಾಗಿಲು ತೆಗೆದಾಗ ಬಲ ಮೂಲೆಯ ಮೇಲಿನ ಶೆಲ್ಫ್... ಬೇಕಿದ್ರೆ ನೋಡ್ಕೊಳ್ಳಿ. "

ನನಗೂ ಚಿಂತೆಗಿಟ್ಟುಕೊಂಡಿತು. ಮಾವ ಇದ್ದಾಗ ಅವರ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದೆನಲ್ಲದೆ ಕಪಾಟಿನಲ್ಲಿ ಇದ್ದಿರಬಹುದಾದ ಹಳೆ ಚಿಲ್ಲರೆ ನಾಣ್ಯಗಳನ್ನು ಹುಡುಕಿ ತೆಗೆದಿರಿಸುವಷ್ಟು ವ್ಯವಧಾನ ಇದ್ದರಲ್ಲವೇ... ಮಾವನವರೂ ಇಂತಹ ಕಿಲುಬುಕಾಸೂ ಬೆಲೆಯಿಲ್ಲದ ನಾಣ್ಯಗಳನ್ನು ಇಟ್ಟುಕೊಂಡಂತಿಲ್ಲ. ಹಳೆಯ ಪುಸ್ತಕಗಳೂ, ಹಳೆಯ ಕಾಲದ ಪಾತ್ರೆಪರಡಿಗಳೂ, ಮಣ್ಣಿನ ಒಟ್ಟೆ ಕುಡಿಕೆಗಳೂ ಎಲ್ಲೆಂದರೆ ಅಲ್ಲಿ ಮನೆಯ ಉಪ್ಪರಿಗೆ ಅಟ್ಟದಲ್ಲಿ ಬಿದ್ದುಕೊಂಡಿದ್ದ ಕಾಲವೊಂದಿತ್ತು.

ವಿದ್ಯಾರ್ಥಿ ದಿನಗಳಲ್ಲಿ ಸ್ಟಾಂಪ್ ಸಂಗ್ರಹ, ನಾಣ್ಯ ಸಂಗ್ರಹ ನನ್ನ ಹವ್ಯಾಸಗಳಲ್ಲಿ ಸೇರಿದ್ದವು, ಹೀಗೇ ಮನೆಯ ಯಾವುದೋ ಮೂಲೆಯಲ್ಲಿ ಸಿಕ್ಕಿದಂತಹ ನಾಣ್ಯಗಳನ್ನು ನಾನೇ ಒಂದೆಡೆ ಇರಿಸಿರುವ ಸಾಧ್ಯತೆ ಇದೆ.

" ಈ ನಾಣ್ಯಗಳೆಲ್ಲ ಕಪ್ಪುಕಪ್ಪಾಗಿವೆ, ಇದನ್ನು ಮಡಿ ಮಾಡುವುದು ಹೇಗೆ? "
" ಬಿಡಿ, ಹುಳಿಮಜ್ಜಿಗೆ ಇದೆ. ಅದರಲ್ಲಿ ಅರ್ಧ ಗಂಟೆ ಮುಳುಗಿಸಿಟ್ಟರೆ ಫಳಫಳ ಆದೀತು... "
ಆ ನಾಣ್ಯಗಳನ್ನು ಚೆಲ್ಲಲು ಇಟ್ಟಿದ್ದ ಹುಳಿಮಜ್ಜಿಗೆಯಲ್ಲಿ ಹಾಕಿಟ್ಟು, ತೊಳೆದೂ ಕೊಟ್ಟೆ.

" ಇದು ಸಾಲದು, ಹುಣಸೇಹುಳಿ ಇಲ್ಲವೇ... ಕೊಡು, ನಾನೇ ತೊಳೆದು ತರುತ್ತೇನೆ. " ಅಂತೂ ಹುಣಸೇಹುಳಿಯಲ್ಲಿ ಮಿಂದ ನಾಣ್ಯಗಳು ಮಡಿಮಡಿಯಾಗಿ ಟೇಬಲ್ ಮೇಲೆ ಕುಳಿತವು.
ಈ ಒಟ್ಟೇಮುಕ್ಕಾಲು ಉಂಟಲ್ಲ, ಹಣೆಗೆ ಕುಂಕುಮ ಇಟ್ಟುಕೊಳ್ಳಲಿಕ್ಕೆ ನಮ್ಮ ಉಪಯೋಗ.. ಕುಂಕುಮ ಕರಡಿಗೆಯೊಟ್ಟಿಗೆ ಇಟ್ಟಿದ್ದ ಒಂದು ಒಟ್ಟೇಮುಕ್ಕಾಲು ಮನೆ ಕ್ಲೀನು ಮಾಡುವಾಗ ಬಿಸಾಡಿಯೇ ಹೋಯ್ತು... "

"ಅದಕ್ಕೆಲ್ಲ ಯಾಕೆ ತಲೆ ಕಡಿಸ್ಕೋತೀಯ, ಈಗ ಇರುವುದನ್ನು ನೋಡಿ ಆನಂದ ಪಡು. "



0 comments:

Post a Comment