Pages

Ads 468x60px

Thursday 2 November 2017

ಸುರಂಗದತ್ತ ಪಯಣ



ಚೆನ್ನಪ್ಪನ ಎರಡು ತಿಂಗಳ ಸಂಬಳ ಎಣಿಸಿ ಕೊಟ್ಟಾಗಿತ್ತು. “ ನಾಳೆ ಬರ್ತಾನೋ ಇಲ್ಲವೋ... ಕೇಳಿ ಬಿಡು. “

“ ಗಂಟುನೋವಿನ ಮದ್ದು ತರಲಿಕ್ಕೆ ಸುಳ್ಯಕ್ಕೆ ಹೋಗುವುದಿದೆಯಂತೆ… “

“ ಅವನಿಗಿಷ್ಟವಾದ ಕೆಲಸ ನೆನಪಿಸಿ ಬಿಡು, ಬೇಗ ಬರುತ್ತಾನೆ. “

“ ತೋಟದಲ್ಲಿ ಸುರಂಗದ ಕೆರೆ ರಿಪೇರಿ ಆಗಲಿಕ್ಕುಂಟಲ್ಲ… “ ಎಂದು ಅವನತ್ತ ಬಾಣ ಎಸೆದಿದ್ದೂ ಆಯ್ತು.

ಚೆನ್ನಪ್ಪ ಸುಳ್ಯಕ್ಕೆ ಹೋದನೋ ಬಿಟ್ಟನೋ…. ಮಾರನೇ ದಿನ ನಾವು ತಿಂಡಿ ತಿನ್ನುತ್ತಿರಬೇಕಾದ್ರೆ ಹಾಜರಾದ.

ಇವತ್ತು ನಾವು ಅಡಿಕೆ ತೋಟದ ಅಭಿವೃದ್ಧಿಗೆ ಅವಶ್ಯವಿರುವ ನೀರಿನ ಸೆಲೆ ಇರುವಲ್ಲಿಗೆ ಪಯಣ ಬೆಳೆಸುವವರಿದ್ದೇವೆ. ಇದುವರೆಗೆ ಮಳೆಗಾಲವೆಂದು ತೋಟಕ್ಕೆ ಕಾಲಿಟ್ಟಿಲ್ಲ. ಹೋಗಬೇಕಾದ ದಾರಿಯುದ್ದಕ್ಕೂ ಮುಳ್ಳುಕಂಟಿ ಗಿಡಗಳನ್ನು ಸವರಬೇಕಾದ ಅನಿವಾರ್ಯತೆ ಇದೆ.

                                 

ಅಡಿಕೆ ತೋಟವೆಂದರೆ ಬಯಲು ಪ್ರದೇಶವಲ್ಲ. ನಮ್ಮ ಹಿಂದಿನವರು ಗುಡ್ಡಗಳನ್ನು ಕಡಿದು ತೋಟ ನಿರ್ಮಾಣ ಮಾಡಿದವರಾಗಿದ್ದಾರೆ. ಅಂತೆಯೇ ನಮ್ಮ ತೋಟವೂ ಮೂರು ಅಂತಸ್ತುಗಳ ಕಟ್ಟಡದಂತೆ ಮೂರು ತಟ್ಟುಗಳಲ್ಲಿದೆ. ಆ ಮೂರನೇ ತಟ್ಟಿನಲ್ಲಿದೆ ಸುರಂಗದ ಕೆರೆ ಹಾಗೂ ಝಳಝಳ ನಿನಾದದಿಂದ ಹರಿದು ಬರುತ್ತಿರುವ ನೀರು…

ಇಂತಹ ಸುರಂಗದ ನೀರಿನಿಂದಾಗಿ ಕಾಸರಗೋಡು ಜಿಲ್ಲೆ ಪ್ರಸಿದ್ಧಿಯನ್ನೂ ಪಡೆದಿದೆ. ಹೆಚ್ಚಿನ ಭೂಮಾಲಿಕರಲ್ಲಿ ಬದುಕಿನ ಸೆಲೆಯಾದ ಸುರಂಗದ ನೀರು ಇದ್ದೇ ಇದೆ.

ಸುರಂಗವೆಂದರೇನು ಎಂಬ ಪ್ರಶ್ನೆಗೂ ಚಿತ್ರಸಹಿತ ವಿವರಣೆ ಇಲ್ಲಿದೆ. ಅದು ಕೊಳವೆ ಬಾವಿಯಲ್ಲ, ಕೆರೆಕಲ್ಯಾಣಿ ಕಟ್ಟೆಯೂ ಅಲ್ಲ, ಬಾವಿಯಂತೂ ಅಲ್ಲ. ಗೋಡೆಯಂತಹ ಕಲ್ಲಿನ ದರೆಯನ್ನು ನೇರವಾಗಿ ಕಡಿಯುತ್ತ, ಗುಹಾದ್ವಾರದ ಪಯಣದಂತೆ ಮುಂದಕ್ಕೆ ಸಾಗುತ್ತ, ನೀರಿನ ಒಸರು ಸಿಗುವ ತನಕ ಮುಂದುವರಿಯುವ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ನೀರು ಸಿಗದಿದ್ದರೆ ಅಥವಾ ಆಮ್ಲಜನಕದ ಕೊರತೆ ಕಂಡು ಬಂದರೆ ಸುರಂಗದ ಮುಂದುವರಿಕೆ ಇಲ್ಲ. ಬೇರೊಂದು ನಿಟ್ಟಿನಲ್ಲಿ ಮುಂದುವರಿಸುವ ರೂಢಿ. ಇಂತಹ ಹಲವು ಸುರಂಗಗಳು ನಮ್ಮ ತೋಟದೊಳಗೆ ಇವೆ, ಮನೆಯ ದಿನಬಳಕೆಗೆ ಕೂಡಾ ಸುರಂಗದ ನೀರು ಹರಿದು ಬರುವ ವ್ಯವಸ್ಥೆ ನಮ್ಮದಾಗಿದೆ.

                         

0 comments:

Post a Comment