Pages

Ads 468x60px

Monday 27 November 2017

ಬೀಂಬುಳಿ ಮುರಬ್ಬ



ಈಗ ನೆಲ್ಲಿಕಾಯಿಗಳ ಕಾಲ, ಪೇಟೆಗೆ ಹೋದರೆ ಘಟ್ಟದ ನೆಲ್ಲಿಕಾಯಿಗಳು ಲಭ್ಯ. ನಮ್ಮ ಮನೆಗೂ ಬಂತು, ಮುರಬ್ಬ ಮಾಡಿ ಇಟ್ಕೊಂಡೆವು, ಇರಲೀ ಎಂದು ಉಪ್ಪಿನಕಾಯಿಯನ್ನೂ ಮಾಡಿ ತಿಂದೆವು. ವರ್ಷಗಳಿಂದ ಮುರಬ್ಬ ಮಾಡಿ ಅಭ್ಯಾಸ ಆಗ್ಬಿಟ್ಟಿದೆ, ಮುರಬ್ಬಾ ಸ್ಪೆಶಲಿಸ್ಟ್ ಅಂದ್ರೂ ನಡೆದೀತು ಅನ್ನಿ.

ನಿತ್ಯದಂತೆ ಮನೆಯಂಗಳದಲ್ಲಿ ತಿರುಗಾಡುತ್ತಿದ್ದಾಗ ನಮ್ಮ ಬೀಂಬುಳಿ ವೃಕ್ಷವೂ ಫಲಭರಿತ ವೃಕ್ಷವಾಗಿ ಕಂಗೊಳಿಸುತ್ತಿದೆಯಲ್ಲ! ಒಂದು ಅಡಿಕೆಹಾಳೆ ತುಂಬ ಬೀಂಬುಳಿಗಳನ್ನು ಕೊಯ್ದು ತಂದೆ.

“ ಮಾಡೂದೆಂತಾ, ಉಪ್ಪಿನಕಾಯಿಯಾ? “

ಉಪ್ಪಿನಕಾಯಿ ದಾಸ್ತಾನು ತುಂಬಾನೇ ಇದೆ, ಮಾವಿನಕಾಯಿ ಅಂಬಟೆ ಅಂತ…. ಅದನ್ನೇ ತಿಂದು ಮುಗಿಸಲಿಕ್ಕಿಲ್ಲ, ಬೀಂಬುಳಿಯನ್ನೂ ಉಪ್ಪು ಮಸಾಲೆ ಬೆರೆಸಿಟ್ರೆ ಸಾಲದು, ತಿನ್ನುವವರೂ ಬೇಕಲ್ಲ...

“ ಈ ಬೀಂಬುಳಿಯನ್ನೂ ಯಾಕೆ ಮುರಬ್ಬ ಮಾಡಬಾರದು? “

ಆಲೋಚನೆ ಮೂಡಿದ್ದೇ ತಡ, ಬಲಿತ ಬೀಂಬುಳಿಗಳು ಕತ್ತರಿಸಲ್ಪಟ್ಟು, ಸಕ್ಕರೆ ಬೆರೆಸಲ್ಪಟ್ಟು ಜಾಡಿ ತುಂಬಿ ಕುಳಿತುವು. ಅಂಗಳದಲ್ಲಿ ಬಿಸಿಲು ಬಂದಾಗ ಜಾಡಿ ಹೊರ ಬಂದು ಬಿಸಿಲಿಗೆ ಮೈಯೊಡ್ಡಿತು. ಸಂಜೆಯಾಗುತ್ತಲೂ ಒಳ ಬಂದಿತು. ಸಕ್ಕರೆಯೆಲ್ಲ ಕರಗಿ ದ್ರಾವಣದಲ್ಲಿ ತೇಲುತ್ತಿವೆ ಬೀಂಬುಳಿ ಹೋಳುಗಳು!

“ ಇದನ್ನು ಇನ್ನೇನ್ಮಾಡೋದೂ? “

ಹತ್ತು ಗಂಟೆಯ ಚಹಾ ಸಮಯ, ಚಮಚಾ ತಟ್ಟೆಯೊಂದಿಗೆ ನಮ್ಮೆಜಮಾನ್ರ ಮುಂದೆ ಬೀಂಬುಳಿ ಮುರಬ್ಬ ಬಂದಿತು. “ ಹುಳಿಯೆಲ್ಲ ಬಿಟ್ಕೊಂಡಿದೆ, ತಿನ್ನಬಹುದು. “ ಎಂಬ ಸಮಾಧಾನಕರ ಉತ್ತರ ದೊರೆಯಿತು.

ನಾನೂ “ ವಾರೆವ್ಹಾ… ಹುಳಿ ಸಿಹಿ ಕೂಡಿದ ರುಚಿ ಕಣ್ರೀ…. “ ಗುಳುಂಕ್, ಗುಳುಂಕ್ ಎಂದು ತಿಂದಿದ್ದಾಯ್ತು.

ಬೀಂಬುಳಿ ಹೋಳುಗಳನ್ನು ತಿಂದು ಮುಗಿಸಿದ ನಂತರ ಉಳಿದ ಹುಳಿ ಮಿಶ್ರಿತ ಸಕ್ಕರೆ ರಸವನ್ನು ಜಾಡಿಯಲ್ಲಿ ಶೇಖರಿಸಿಟ್ಟು ಶರಬತ್ ಮಾಡಿ ಕುಡಿಯೋಣಾ, ಏನಂತೀರ? ಎರಡು ಏಲಕ್ಕಿ ಗುದ್ದಿ ಹಾಕಿ ಸುವಾಸನೆಯನ್ನೂ ಕೊಟ್ಟರಾಯಿತು. ಇನ್ನೊಂದು ಆಯ್ಕೆ ಏನಪ್ಪಾ ಅಂದ್ರೆ ಹುಣಸೆರಸದ ಬದಲು ಇದನ್ನೇ ಅಡುಗೆಗೆ ಬಳಸಿ ಮುಗಿಸಬಹುದು.

“ ಬೀಂಬುಳಿಯನ್ನು ಏನು ಬೇಕಾದ್ರೂ ಮಾಡ್ಕೊಳ್ಳಿ, ಸ್ಟೀಲು ಪಾತ್ರೆ, ತಟ್ಟೆ ಚಮಚ ಉಪಯೋಗಿಸುವಂತಿಲ್ಲ, ಪಾತ್ರೆಯ ಹೊಳಪು ಹೋಗ್ಬಿಟ್ಟು ಕಪ್ಪಾಗುವ ಸಾಧ್ಯತೆ ಇದೆ. ಪಿಂಗಾಣಿ ಯಾ ಗಾಜಿನ ಪಾತ್ರೆಗಳು ಉತ್ತಮ. “ ಎಂದರು ಗೌರತ್ತೆ.
“ ಹೌದೂ… “ ಅನ್ನುತ್ತ ನಾನು ಫೋಟೋ ತೆಗೆದಿದ್ದ ಸ್ಟೀಲು ತಟ್ಟೆಯನ್ನು ಕೂಡಲೇ ತೊಳೆದೂ ಇಟ್ಬಿಟ್ಟೆ.

ಅಳತೆ ಹೀಗಿರಲಿ,
ಒಂದು ಲೋಟ ತುಂಬ ಬೀಂಬುಳಿ ಹೋಳುಗಳು
ಅರ್ಧ ಲೋಟ ಸಕ್ಕರೆ
ಒಂದು ದಿನದ ಬಿಸಿಲು
ಅಡುಗೆಯ ಆಟವನ್ನಾಡುವ ಪುಟ್ಟ ಮಗು ಕೂಡಾ ಈ ನಳಪಾಕವನ್ನು ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.






0 comments:

Post a Comment