Pages

Ads 468x60px

Tuesday 7 November 2017

ಮಾವಿನಕಾಯಿ ಸಾರು



                                           


ನಾಗಬನದಲ್ಲಿ ತಂಬಿಲ ಸೇವೆಗೆಂದು ಬಂದಿದ್ದ ಉಷಕ್ಕ, ಮನೆ ಹಿತ್ತಲಲ್ಲಿ ಬಿದ್ದು ಹಾಳಾಗುತ್ತಿದ್ದ ಮಾವಿನಕಾಯಿಗಳನ್ನೂ ತಂದಿದ್ದರು. " ಒಳ್ಳೆಯ ಕಸಿ ಮಾವಿನಕಾಯಿ, ಈ ರಣಬಿಸಿಲಿಗೆ ಬಿದ್ದು ಹಾಳಾಗುತ್ತ ಇದೆ... ಒಂದು ಸಾರು ಮಾಡಿ ನೋಡೂ. "
" ಆಯ್ತು, ಅಪ್ಪೆಸಾರು ಅಂತೇನೋ ಮಾಡ್ತಾರಲ್ಲ, ಅದು ಹೇಗೆ ಗೊತ್ತಾ? "
" ಮಾವಿನಕಾಯಿ ಬೇಯಿಸಿ, ಚೆನ್ನಾಗಿ ಗಿವುಚಿ, ಉಪ್ಪೂ ಬೆಲ್ಲ ಹಾಕಿ, ಬೆಳ್ಳುಳ್ಳಿ ಒಗ್ಗರಣೆ ಕೊಟ್ರಾಯ್ತು. "
" ಅಷ್ಟೇನಾ, ನಾನು ಏನೋ ಅಂದ್ಕೊಂಡಿದ್ದೆ… ನಾಳೆ ಮಾಡೂದು. "
" ಇದು ಕಸಿ ಮಾವು, ಮಾವಿನಕಾಯಿದು ಸಿಪ್ಪೆ ತೆಗೆದೇ ಬೇಯಿಸು, ಇಲ್ಲಾಂದ್ರೆ ಕಹಿಯಾದೀತು. "
" ಓ, ಹಾಗೂ ಉಂಟೋ… "
" ಹ್ಞಾ ಮತ್ತೇ, ನಮ್ಮ ಊರಿನ ಕಾಟ್ ಮಾವಿನಕಾಯಿದು ಆದ್ರೆ ಸಿಪ್ಪೆ ಕೂಡಾ ಬೇಯಿಸಬಹುದು, ಬೆಲ್ಲ ಹಾಕದೇ ಮಾಡ್ಬೇಡಾ. "

ಅಂತೂ ಎರಡು ಮಾವಿನಕಾಯಿಗಳ ಸಿಪ್ಪೆ ತೆಗೆದು, ಒಳಗಿನ ಎಳೆಯ ವಾಟೆಯನ್ನೂ ತೆಗೆದು ನೀರೆರೆದು ಬೇಯಿಸಿ, ಆರಿದ ನಂತರ ಕೈಯಲ್ಲಿ ಗಿವುಚಿ, ಉಪ್ಪೂ ಬೆಲ್ಲ ಕೂಡಿಸಿ, ಅಗತ್ಯದ ನೀರೆರೆದು ಕುದಿಸಿದಾಗ, ಬೆಳ್ಳುಳ್ಳಿ ಕರಿಬೇವಿನ ಒಗ್ಗರಣೆಯಲ್ಲಿ ಸಾರು ಸಂಭ್ರಮ ಪಟ್ಟಿತು.

ಸಾರಿನೂಟ ಸವಿಯುತ್ತಿದ್ದಾಗ ನಮ್ಮ ಅಂಬಟೆ, ಬೀಂಬುಳಿ, ನಕ್ಷತ್ರ ಹಣ್ಣು, ರಾಜನೆಲ್ಲಿಕಾಯಿ, ಚೆರಿ ಇತ್ಯಾದಿ ಕಾಟಂಗೋಟಿ ಹಣ್ಣುಗಳಿಂದಲೂ ಈ ವಿಧದ ಸಾರು ಮಾಡಬಹುದೆಂದು ಟ್ಯೂಬ್ ಲೈಟ್ ಹೊತ್ತಿ ಉರಿಯಿತು.

ಬೀಂಬುಳಿ ಸಾರು ಮಾಡೋಣ, ಕೇವಲ ಬೀಂಬುಳಿ ಚೆನ್ನಾಗಿರದು, ಒಂದು ಟೊಮ್ಯಾಟೋ, ಕ್ಯಾರೆಟ್ ತುಂಡು ಹಾಗೂ ನಾಲ್ಕು ಬೀಂಬುಳಿಗಳನ್ನು ಕತ್ತರಿಸಿ ಬೇಯಿಸಿದ್ದಾಯ್ತು, ಬೆಂದ ನಂತರ ಮಿಕ್ಸಿಯಲ್ಲಿ ತಿರುಗಿಸಲಾಗಿ ಒಂದು ಬಣ್ಣದ ದ್ರಾವಣ ದೊರೆಯಿತು. ರುಚಿಕರವಾಗಿ ತಿನ್ನಲು ಉಪ್ಪು ಹಾಗೂ ಬೆಲ್ಲ ಕೂಡಿಸಿ, ಅಂದಾಜಿನ ನೀರೆರೆದು ಕುದಿಸಿ, ಬೆಳ್ಳುಳ್ಳಿ, ಕರಿಬೇವು ಒಗ್ಗರಣೆ ಕೊಡುವಲ್ಲಿಗೆ ಬೀಂಬುಳಿ ಸಾರು ಬಂದೆನೆಂದಿತು.

ಎಪ್ರಿಲ್, ಮೇ ತಿಂಗಳ ಅಂತ್ಯವಾಗುತ್ತಿದ್ದಂತೆ ತಾಜಾ ಪುನರ್ಪುಳಿ ಹಣ್ಣುಗಳ ಕಾಲ, ಕೆಂಪು ಕೆಂಪಾದ ಪುನರ್ಪುಳಿ ಸಾರು ಕೂಡಾ ಮೇಲಿನ ಮಾದರಿಯಲ್ಲೇ ಸಿದ್ಧಪಡಿಸುವುದು, ಬೇಸಿಗೆಯ ರಣರಣ ಸೆಕೆಯಲ್ಲೂ ಪುನರ್ಪುಳಿ ಸಾರು ಒಂದಿದ್ದರೆ ಸಾಕು, ಸುಖವಾಗಿ ಊಟ ಮುಗಿಸಿ ಮೇಲೇಳಬಹುದು.

ಈ ಮೇಲೆ ಹೇಳಿದ ಸಾರುಗಳಿಗೆ ತೆಂಗಿನಕಾಯಿಹಾಲು ಸೇರಿಸಿದರಂತೂ ಇನ್ನಷ್ಟು ರುಚಿಕರ, ಊಟದ ಶ್ರೀಮಂತಿಕೆಯನ್ನೂ ಹಚ್ಚಿಸುವಂತಹುದು ಕಾಯಿಹಾಲು, ದೇಹಕ್ಕೂ ತಂಪು.

ಅಂದ ಹಾಗೆ, ಅಪ್ಪೆಸಾರು ಎಂಬ ಪದದ ಬಳಕೆ ನಮ್ಮ ದಕ್ಷಿಣಕನ್ನಡಿಗರಲ್ಲಿ ಇಲ್ಲ. ಏನಿದ್ದರೂ ಮಾವಿನಕಾಯಿ ಸಾರು, ಬೀಂಬುಳಿ ಗೊಜ್ಜು ... ಈ ಥರ ಆಯಾ ತರಕಾರಿಗಳ ಹೆಸರಿನಲ್ಲಿ ನಾಮಕರಣ. ನಮ್ಮ ಕಡೆ ತುಳು ಪದಗಳ ಬಳಕೆ ಜಾಸ್ತಿ. ಒಂದು ವೇಳೆ ನಾನು, " ಚೆನ್ನಪ್ಪಾ, ಅಪ್ಪೆಸಾರು ಬಡಿಸಲೋ..? " ಎಂದು ಕೇಳಿದ್ರೆ ಅವನ ಉತ್ತರ ಹೆಂಗಿರುತ್ತೆ?

" ಅವು ಎಂಚಿನ, ಅಪ್ಪೆನ ಸಾರು! ಎಡ್ಡೆ ಇಪ್ಪು, ಬಳಸುಲೇ... " ಅನ್ತಿದ್ದ. ( ಅದ್ಯಾವುದು ಅಮ್ಮನ ಸಾರು! ಚೆನ್ನಾಗಿದ್ದೀತು, ಬಡಿಸಿರಿ... )

ಹಿತ್ತಲಲ್ಲಿ ದಾರೆಹುಳಿ ಇದೆಯಾ, ಇದು ಹುಳಿಯೊಂದಿಗೆ ಸಿಹಿಮಿಶ್ರಿತ ಹಣ್ಣು. ಇದನ್ನೂ ಸಾರು ಮಾಡಿ ಉಣ್ಣಬಹುದು. ಒಗ್ಗರಣೆಯಲ್ಲಿ ಬೆಳ್ಳುಳ್ಳಿ ಇಷ್ಟ ಪಡದವರೂ ಇರುತ್ತಾರೆ, ಇಂಗು, ಕರಿಬೇವು ಇತ್ಯಾದಿ ಇದೆಯಲ್ಲ.

ಮಾವಿನ ವಾಟೆ ಅಂದಾಗ ನೆನಪಾಯ್ತು, ಮಾವಿನಲ್ಲಿ ಗೊರಟು ಕಟ್ಟಬೇಕಾದರೆ ಮಾವಿನಕಾಯಿ ಬೆಳೆದಿರಬೇಕು, ಅದಕ್ಕೂ ಮೊದಲ ಹಂತದಲ್ಲಿ ಇರುವ ಎಳೆಯ ತಿರುಳು, ಯಾಕೋ ತಿಳಿಯದು, ನಮ್ಮ ಕಡೆ ಇಂತಹ ಎಳೆಯ ತಿರುಳನ್ನು ' ಕೋಗಿಲೆ ' ಅನ್ನುವ ವಾಡಿಕೆ, ಇದು ಕೂಡಾ ಅಡುಗೆಯಲ್ಲಿ ಬಳಸಲ್ಪಡುತ್ತದೆಂದು ಒಂದು ಸಮಯದಲ್ಲಿ ತಿಳಿದು ಬಂತು. ಆಗ ನಾನು ಕಾಲೇಜು ವಿದ್ಯಾರ್ಥಿನಿಯಾಗಿದ್ದೆ, ಒಂದು ಭಾನುವಾರ ಹೀಗೇ ಸುಮ್ಮನೆ ಸ್ನೇಹಿತೆ ಹೇಮಾ ಮನೆಗೆ ಹೋಗಿದ್ದೆ. " ಊಟ ಮಾಡ್ಬಿಟ್ಟು ಹೋಗು. " ಅವಳ ಅಜ್ಜಿ ಹಾಗೂ ಅಮ್ಮಂದು ಒತ್ತಾಯ, ನಿರಾಕರಿಸಲಾಗುತ್ತದೆಯೇ. ಅಂತೂ ಅವರ ಮನೆಯವರಲ್ಲೊಬ್ಬಳಂತೆ ಉಂಡಾಯಿತು. ಮನೆಯಲ್ಲಿ ಅಜ್ಜಿಯಂದಿರಿದ್ದರೆ ಅಡುಗೆಯ ರುಚಿಯೇ ಬೇರೆ, ನನಗಂತೂ ತಂಬುಳಿಯ ಹಾಗೇ ಇದ್ದ ಒಂದು ವ್ಯಂಜನ ತುಂಬಾ ಇಷ್ಟವಾಗಿ ಬಿಟ್ಟಿತು. ಯಾವುದು, ಏನು, ಹೇಗೆ ಎಂದು ವಿವರ ತಿಳಿಯಲಾಗಿ ಅದು ಕೇವಲ ಮಾವಿನ ವಾಟೆಯ ತಂಬುಳಿ!

ಕೋಗಿಲೆಯ ತಂಬುಳಿ, ಮಾಡಿದ್ದು ಹೇಗೆ?

ಎರಡು ಮಾವಿನ ವಾಟೆಯ ತಿರುಳು.
ಚಿಕ್ಕದಾಗಿ ಕತ್ತರಿಸಿಕೊಂಡು ತುಪ್ಪದ ಪಸೆಯಲ್ಲಿ ಹುರಿಯಿರಿ.
ಒಂದು ಹಸಿಮೆಣಸು, ತುಸು ಜೀರಿಗೆ, ಒಂದು ಹಿಡಿ ಕಾಯಿತುರಿ.
ರುಚಿಗೆ ತಕ್ಕಷ್ಟು ಉಪ್ಪು.
ಎಲ್ಲವನ್ನೂ ಅರೆಯಿರಿ.
ಒಂದು ಸೌಟು ಸಿಹಿ ಮಜ್ಜಿಗೆ ಕೂಡಿಸಿ, ನೀರನ್ನೂ ಎರೆದು ತೆಳ್ಳಗಾಗಿಸಿ, ಒಗ್ಗರಣೆ ಕೊಡುವುದು.
ಅರೆಯುವಾಗ ಮೆಣಸು ಇಲ್ಲದಿದ್ದರೂ ನಡೆಯುತ್ತದೆ, ಖಾರಕ್ಕೆ ಒಗ್ಗರಣೆ ಮೆಣಸೂ ಸಾಕು.
ಮಳೆಗಾಲದ ಅಡುಗೆಗೆಂದು ಉಪ್ಪಿನಲ್ಲಿ ಮಾವಿನಕಾಯಿ ಹಾಕಿಡುವುದಿದೆಯಲ್ಲ, ಅದರ ವಾಟೆಯನ್ನೇ ಅಡುಗೆಗೆ ಉಪಯೋಗಿಸುವುದು, ಹೀಗೇ ಸುಮ್ಮನೆ ತಿಂದೆಸೆದ ವಾಟೆ ಆಗದು. ವಾಟೆಯನ್ನು ಜಜ್ಜಿ ಒಳತಿರುಳನ್ನು ಬೇರ್ಪಡಿಸಲು ಪ್ರಯಾಸವೇನೂ ಇಲ್ಲ.

ಮಾವಿನಮಿಡಿ ಉಪ್ಪಿನಕಾಯಿ ಇದೆಯಲ್ಲ, ಎರಡು ಮೂರು ವರ್ಷಗಳ ಕಾಲ ಉಳಿಯುವಂತಹ ಮಿಡಿ ಉಪ್ಪಿನಕಾಯಿಗಳನ್ನು ತಿಂದು ತಿಂದು ಹಳೆಯದಾಯಿತು ಅಂತಾದರೂ ಮಿಡಿಯ ಒಳಗಿನ ' ಕೋಗಿಲೆ ' ತಂಬುಳಿ ಮಾಡಿ ಸವಿಯಬಹುದಾಗಿದೆ. ಉಪ್ಪು, ಮಸಾಲೆಯ ಖಾರ, ಮಾವಿನ ಸೊನೆ ಪರಿಮಳ ಹೊಂದಿರುವ ಈ ಕೋಗಿಲೆಯನ್ನು ಹುರಿಯಬೇಕೆಂದಿಲ್ಲ, ನೀರಿನಲ್ಲಿ ತೊಳೆದರೆ ಸಾಕು.

ಮಳೆಗಾಲ ಬಂದೊಡನೆ ತಿಂದು ಬಿಸುಟ ಮಾವಿನ ವಾಟೆ ಮೊಳಕೆಯೊಡೆದು ಎಳೆ ಚಿಗುರೆಲೆಗಳು ಮೂಡಿದಾಗ ಇಂತಹ ಚಿಗುರುಗಳ ತಂಬುಳಿಯೂ ರುಚಿಕರ. ಆಗ ತಾನೇ ಕುಡಿಯೊಡೆದ ಮಾವಿನ ವಾಟೆಯ ಒಳ ತಿರುಳು ಹೆಚ್ಚು ಸತ್ವಭರಿತವಾಗಿದ್ದು, ಕುಡಿಯೊಡೆದ ಕೋಗಿಲೆಯ ತಂಬುಳಿ ಈ ಮಳೆಗಾಲದಲ್ಲಿ ಮಾಡಿ ನೋಡಬೇಕೆಂದಿದೆ. ಮಳೆಗಾಲ ಬಂದರೆ ಸಾಕು, ನಮ್ಮ ಮಕ್ಕಳು ಗೇರುಮರಗಳ ಬುಡದಲ್ಲಿ ಅಡ್ಡಾಡಿ ಮೊಳಕೆಯೊಡೆದ ಗೇರುಬೀಜಗಳನ್ನು ಕೂಡಾ ಹುಡುಕಿ ತಿನ್ನುವ ಜಾಯಮಾನದವರು. " ಮಾವಿನ ಕೋಗಿಲೆಯೇನು ಮಹಾ... ಗೇರುಬೀಜದ ಮೊಳಕೆ ( ಮುಂಙೆ ) ತಿಂದು ಗೊತ್ತಾ.. " ಅನ್ನುವಂತಹ ಪ್ರಚಂಡರು ಹಳ್ಳಿಯಲ್ಲೇ ಹುಟ್ಟಿ ಬಳೆದ ಮಕ್ಕಳು.. ಹೌದೂ ಅನ್ನಿ.

ಟಿಪ್ಪಣಿ:   ಉತ್ಥಾನ ಮಾಸಪತ್ರಿಕೆಯ ಸಪ್ಟಂಬರ್, 2017ರ ಸಂಚಿಕೆಯಲ್ಲಿ ಪ್ರಕಟಿತ ಬರಹ.

0 comments:

Post a Comment