Pages

Ads 468x60px

Monday 1 January 2018

ತಗತೇ ಕೂರ್ಮಾ





ಸೊಸೆ ಅಡುಗೆಮನೆಗೆ ಬಂದಳೆಂದರೆ ಏನೇನೋ ಮಸಾಲಾ ಪೊಟ್ಟಣಗಳೂ ಒಳ ಬರುತ್ತವೆ, ಅವಳೇ ತನಗೆ ಬೇಕಾದ್ದನ್ನು ತರುತ್ತಾಳೆ ಅಷ್ಟೇ. ಅನ್ನದಿಂದ ತಯಾರಿಸುವ ಖಾದ್ಯಗಳು ಅವಳ ಆಯ್ಕೆ. ಪುಲಾವ್ ಮಾಡಲೆಂದು ತಂದಿರಿಸಿದ ತರಕಾರಿಗಳೂ, ಕೊತ್ತಂಬರಿ ಸೊಪ್ಪಿನ ಕಟ್ಟೂ, ಪುಲಾವ್ ಮಸಾಲೆಯೂ, ಶುಂಠಿ ಬೆಳ್ಳುಳ್ಳಿ ಪೇಸ್ಟೂ, ಗರಂ ಮಸಾಲಾ ಹುಡಿಯೂ, ಲವಂಗ ಚಕ್ಕೆ ಗಸಗಸೆಯಂತಹ ಸಿದ್ಧ ವಸ್ತುಗಳ ಪ್ಯಾಕೇಟೂ....

ಅವಳು ಬೆಂಗಳೂರಿಗೆ ತೆರಳಿದ ನಂತರ " ನಮ್ಮನ್ಯಾರೂ ಕೇಳೋರಿಲ್ವೇ... " ಎಂಬಂತೆ ಈ ಪೊಟ್ಟಣಗಳು ಬಾಯ್ಬಿಟ್ಟು ಕೂತಿದ್ದುವು. ಎಲ್ಲವನ್ನೂ ತೆಗೆದಿಟ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗೆ ಒಂದು ಗತಿಗಾಣಿಸಲು ನಿರ್ಧಾರ ಮಾಡಿದ್ದಾಯ್ತು. ಅದೇ ಹೊತ್ತಿಗೆ ನಮ್ಮವರೂ ಸಂತೇ ತರಕಾರಿಗಳನ್ನು ತಂದಿಟ್ಟರು. ಏನೇನಿದೆ? ಪುಟಾಣಿ ಆಲೂಗೆಡ್ಡೆಗಳು, ಬಜ್ಜಿ ಮೆಣಸಿನಕಾಯಿಗಳು, ಸೀಮೆ ಬದನೆ...

ಎರಡು ದಿನ ಮೊದಲು ಚೆನ್ನಪ್ಪ ತಂದಿಟ್ಟಿದ್ದ ತಗತೇ ಸೊಪ್ಪು, ಉಪ್ಪಳಿಕ ಸೊಪ್ಪಿನ ಚೀಲದೊಳಗೆ ಅಡಗಿ ಕುಳಿತಿದ್ದದು ಹೊರಗೆ ಬಂತು, ಸ್ವಲ್ಪವೂ ಬಾಡಿಲ್ಲ. ತಗತೇ ಸೊಪ್ಪು ಹಾಗೂ ಆಲೂ ಸೇರಿಸಿ ಒಂದು ಪದಾರ್ಥ ಮಾಡೋಣ.

ಏನೇ ಪದಾಥ೯ ಮಾಡುವುದಿದ್ದರೂ ತೆಂಗಿನಕಾಯಿ ತುರಿಯಿರಿ, ಅರ್ಧ ಕಡಿ ಸಾಕು.
ಬೇಳೆಕಾಳುಗಳ ಬೆಲೆ ಸಿಕ್ಕಾಪಟ್ಟೆ ಇಳಿದಿದೆ, ತೊಗರಿಬೇಳೆ ಒಂದು ಹಿಡಿ ಜಾಸ್ತಿಯೇ ಬೇಯಿಸೋಣ.
ಪುಟಾಣಿ ಆಲೂ ಅಲ್ವೇ, ಹತ್ತರಿಂದ ಹದಿನೈದು ಗೆಡ್ಡೆಗಳು ಸಾಕು. ಮಣ್ಣು ಹೋಗುವಂತೆ ತೊಳೆದು ಕುಕ್ಕರಿನಲ್ಲಿ ಬೇಯಿಸಿ. ಮೂರು ಸೀಟಿ ಕೂಗಿದ್ರೆ ಸಾಕು.
ಆರಿದ ನಂತರ ಸಿಪ್ಪೆ ತೆಗೆಯಿರಿ.
ತಗತೇ ಸೊಪ್ಪನ್ನು ಆಯ್ದು ಚಿಕ್ಕದಾಗಿ ಹೆಚ್ಚಿಟ್ಟು, ತೊಗರಿಬೇಳೆಯೊಂದಿಗೆ ರುಚಿಗೆ ಉಪ್ಪು ಸಹಿತವಾಗಿ ಬೇಯಲಿ.

ಒಂದು ನೀರುಳ್ಳಿ, ಮೂರು ಬಜ್ಜಿ ಮೆಣಸು ಹೆಚ್ಚಿಟ್ಟು,
ತವಾ ಬಿಸಿ ಮಾಡಿಟ್ಟು ತುಪ್ಪದ ಪಸೆಯಲ್ಲಿ ಹುರಿಯಿರಿ. ಆರಿದ ನಂತರ ಅರೆದು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಜೊತೆ ಇರಿಸಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಇಲ್ಲವೇ, ನೀರುಳ್ಳಿ ಅರೆಯುವಾಗ ಒಂದು ತುಂಡು ಶುಂಠಿ ಹಾಗೂ ನಾಲ್ಕು ಎಸಳು ಬೆಳ್ಳುಳ್ಳಿಗಳನ್ನು ಕೂಡಿ ಅರೆಯಿರಿ.

ತೆಂಗಿನ ಮಸಾಲೆ ಏನೇನು?
2 ಚಮಚ ಕೊತ್ತಂಬರಿ
ಒಂದು ಚಮಚ ಜೀರಿಗೆ
3 ಒಣಮೆಣಸು
ನೆಲ್ಲಿ ಗಾತ್ರದ ಹುಣಿಸೆ ಹುಳಿ ( ಟೊಮ್ಯಾಟೋ ಇರಲಿಲ್ಲ )
ಚಿಟಿಕೆ ಅರಸಿಣ
ಹುರಿಯುವುದೇನೂ ಬೇಡ, ನೀರು ಹಾಕದೆ ಅರೆಯಿರಿ.

ಬಾಣಲೆಗೆ ಎರಡು ಚಮಚ ತುಪ್ಪ ಎರೆದು ಬಿಸಿಯಾದಾಗ ತುಸು ಜೀರಿಗೆ ಬೀಳಲಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ನೀರುಳ್ಳಿ ಮೆಣಸುಗಳನ್ನು ಅರೆದು ಇಟ್ಟದ್ದನ್ನು ಹಾಕಿ ಪರಿಮಳ ಬರುವಷ್ಟು ಹುರಿಯಿರಿ. ಗರಂ ಮಸಾಲಾ ಹುಡಿ ಕೂಡಾ ಇದೆ, ಅದನ್ನೂ ಹಾಕುವುದು. ಅರೆದಿಟ್ಟ ತೆಂಗಿನ ಅರಪ್ಪನ್ನೂ ಹಾಕಿ ಹುರಿಯುವುದು. ಹುರಿಯುವಿಕೆಯ ಈ ಹಂತದಲ್ಲಿ ನೀರು ಎರೆಯಬೇಕಾಗಿದೆ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕುವುದು.
ಕುದಿಯಲು ಪ್ರಾರಂಭವಾದಾಗ -
ಬೇಯಿಸಿಟ್ಟ ತೊಗರಿಬೇಳೆ, ತಗತೆ, ಆಲೂಗಡ್ಡೆಗಳನ್ನು ಹಾಕುವ ಸಮಯ ಬಂದಿದೆ.
ಎಲ್ಲವೂ ಸೇರಿ ರಸಪಾಕವಾಗುತ್ತ ಬಂದಾಗ -
ಕೊತ್ತಂಬರಿ ಸೊಪ್ಪು ಬಿದ್ದಿದೆ.  
ಈಗ ತಗತೇ ಕೂರ್ಮಾ ಅನ್ನ ಚಪಾತಿ, ದೋಸೆ ಇಡ್ಲಿಗಳೊಂದಿಗೆ ಸವಿಯಲು ಸಿದ್ಧವಾಗಿದೆ.


" ತಗತೇ ಸೊಪ್ಪು ಅಂದರೆ ಯಾವುದೂ? "

ಇದಪ್ಪ ಪ್ರಶ್ನೆ ಅಂದರೆ, ಸಾಮಾನ್ಯವಾಗಿ ಮೊದಲ ಮಳೆ ಬಿದ್ದೊಡನೆ ನೆಲದಿಂದ ಪುಟಿದೇಳುವ ಸಸ್ಯರಾಶಿಗಳಲ್ಲಿ ತಗತೆಯೂ ಒಂದು. ಸಸ್ಯ ವಿಜ್ಞಾನವು ಇದಕ್ಕೆ cassia tora ಎಂದು ಹೆಸರಿಟ್ಟಿದೆ.

ಗ್ರಾಮೀಣ ಜನಸಮುದಾಯ ಇದರ ಅಡುಗೆಯಲ್ಲಿ ಪರಿಣತರು. ತಂಬುಳಿ, ಚಟ್ಣಿ ಮಾತ್ರವಲ್ಲದೆ ಪತ್ರೊಡೆ, ಪಲ್ಯ, ಸಾಂಬಾರುಗಳನ್ನು ಮಾಡಿ ಉಣಬಹುದು. ರೋಟಿ, ಪರೋಟಾ ಕೂಡಾ ಮಾಡಿಸಿಕೊಳ್ಳಬಹುದಾದ ತಗತೇ ಸೊಪ್ಪು ನಮ್ಮ ಅಡುಗೆಮನೆಯಲ್ಲಿ ಆಧುನಿಕತೆಯ ಸ್ಪರ್ಶವನ್ನೂ ಪಡೆದಿದೆ.

ಮಳೆ ಆರಂಭವಾದ ನಂತರದ ದಿನಗಳಲ್ಲಿ ಎಲ್ಲಿಗೇ ಹೊರ ಹೊರಟರೂ ನನ್ನ ದೃಷ್ಟಿ ತಗತೆಯ ಕಡೆಗೆ. ಹಳ್ಳಿಯ ರಸ್ತೆಯಲ್ಲವೇ, ಎಲ್ಲ ಕಡೆಯೂ ಮುದ್ದೆಮುದ್ದೆಯಾಗಿ ಬೆಳೆದಿರುತ್ತದೆ. ಮನೆಯ ಕಡೆ ಹಿಂತಿರುಗಿ ಬರುವಾಗ ನಮ್ಮ ವಾಹನವನ್ನು ನಿಲ್ಲಿಸಿ ಸಾಕಷ್ಟು ಚಿಗುರೆಲೆಗಳನ್ನು ಕೊಯ್ದು ತರುವುದೊಂದು ರೂಢಿಯಾಗಿ ಬಿಟ್ಟಿದೆ. ಪಲ್ಯ, ಪತ್ರೊಡೆ, ಗಸಿ... ಏನು ಬೇಕೋ ಅದನ್ನು ಮಾಡಿಕೊಳ್ಳಲಡ್ಡಿಯಿಲ್ಲ. ಆಷಾಢ ಮಾಸ ಬಂದಾಗ ಇದನ್ನು ಅಡುಗೆ ಮಾಡಿ ಉಣ್ಣುವುದರಿಂದ ಮಳೆಗಾಲದ ರೋಗರುಜಿನಗಳಿಂದ ಮುಕ್ತರಾಗಬಹುದೆಂಬ ನಂಬಿಕೆಯೂ ಇಲ್ಲಿದೆ. ಬಹುಶಃ ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಎಂಬ ಸತ್ಯವನ್ನು ಶಾಲಾಕಾಲೇಜುಗಳನ್ನು ಕಂಡಿರದಿದ್ದ ನಮ್ಮ ಪೂರ್ವಿಕರು ಜೀವನಾನುಭವದಿಂದಲೇ ತಿಳಿದಿದ್ದರು.

ಇದರ ವಿಶೇಷತೆಗಳೇನು?

ಎಲೆಗಳು ಉತ್ತಮ ಪ್ರೊಟೀನ್ ಯುಕ್ತ ಸೊಪ್ಪು ತರಕಾರಿ, ಹೂವುಗಳನ್ನೂ ಅಡುಗೆಯಲ್ಲಿ ಬಳಸಬಹುದಾಗಿದೆ. ಬೇರು, ಕಾಂಡ ಇತ್ಯಾದಿಯಾಗಿ ಎಲ್ಲವನ್ನೂ ಆಯುರ್ವೇದವು ಔಷಧಿಯಾಗಿ ಪರಿಗಣಿಸಿದೆ. ಬೇರು ರಕ್ತಶುದ್ಧಿಕಾರಕ, ಕಾಂಡವೂ ಸುಗಂಧಭರಿತವಾಗಿದ್ದು ನೀರಿನಲ್ಲಿ ಕುದಿಸಿ ಕುಡಿಯಬಹುದಾಗಿದೆ. ಬೀಜಗಳನ್ನು ಒಣಗಿಸಿ ಹುರಿದು ಪುಡಿ ಮಾಡಿ ಕಾಫಿಯಂತೆ ಸೇವಿಸಬಹುದು. ತಗತೆಯು ಆಯುರ್ವೇದದಲ್ಲಿ ಚಕ್ರಮರ್ದ ಎಂದು ಖ್ಯಾತವಾಗಿದ್ದು ಚರ್ಮರೋಗದ ಔಷಧಿಯೆಂದು ಪರಿಗಣಿಸಲ್ಪಟ್ಟಿದೆ. ಒಳ್ಳೆಯದೆಂದು ಅತಿಸೇವನೆ ಒಳ್ಳೆಯದಲ್ಲ!




ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ ಬರಹ, ನವಂಬರ್, 2017.

0 comments:

Post a Comment