Pages

Ads 468x60px

Saturday 15 December 2018

ನೂಕಡ್ಡೆ ರಸಾಯಣ






             

ಮುಂಜಾನೆಯ ತಿಂಡಿ ತಟ್ಟೆಯನ್ನು ಈ ದಿನ ಒತ್ತುಶಾವಿಗೆಯಿಂದ ಅಲಂಕರಿಸಲಾಯಿತು.
“ಏನೂ, ನೆಂಟರು ಇದ್ರಾ? “
“ ಹಾಗೇನೂ ಇಲ್ಲ, ನಾವೇ ಇದ್ದಿದ್ದು, ತಿನ್ನಬೇಕು ಅನ್ನಿಸಿದಾಗ ಮಾಡಿಕೊಂಡು ತಿಂದೆವು…. ಮತ್ತೊಂದು ವಿಷಯ ಗೊತ್ತಾ, ನೆಂಟರು ಬಂದಾಗ ಒತ್ತುಶಾವಿಗೆ ತಂದು ಎದುರಿಗಿಟ್ರೆ ‘ ಗಂಟುಮೂಟೆ ಕಟ್ಟಿ ಹೊರಡು ‘ ಎಂಬ ಸಾಂಕೇತಿಕ ಅರ್ಥವೂ ಇದೆ. “
“ ಹೌದಾ, ಶಾವಿಗೆ ಪ್ಯಾಕೇಟು ಸಿಗುತ್ತೇ, ತಂದು ಒಗ್ಗರಣೆ ಮಸಾಲೆ ಹಾಕಿ ತಿನ್ನಲು ನಮಗೆ ಗೊತ್ತುಂಟು. “

ನಮ್ಮ ಮಕ್ಕಳು ಚಿಕ್ಕವರಿರಬೇಕಾದ್ರೆ ಒತ್ತುಶಾವಿಗೆ ಅಂದ್ರೆ ಪಂಚಪ್ರಾಣ. ನನ್ನ ಶಾವಿಗೆ ಒರಳು ಕೆಟ್ಹೋಗಿತ್ತು, ಮೇಲಕ್ಕೂ ಕೆಳಕ್ಕೂ ಹೋಗ್ತಾ ಇರಲಿಲ್ಲ. ತುಂಬ ಹಳೆಯದಾದ ಅಂದ್ರೆ ಓಬೀರಾಯನ ಕಾಲದ ಶಾವಿಗೆ ಒರಳು ನಿರುಪಯುಕ್ತ ವಸ್ತುಗಳೊಂದಿಗೆ ಅಟ್ಟ ಸೇರಿತ್ತು.

ಹೀಗಿರಬೇಕಾದ್ರೆ ಒಂದು ದಿನ ಬ್ಯಾಂಕ್ ವ್ಯವಹಾರಕ್ಕೆಂದು ಉಪ್ಪಳ ಪೇಟೆಗೆ ಹೋದ ಗೌರತ್ತೆ ಹೊಸ ಶಾವಿಗೆ ಒರಳು ಖರೀದಿಸಿ ತಂದರು. “ ಮಕ್ಕಳು ಆಸೆ ಪಡ್ತಾವೆ, ಮಾಡಿಕೊಡು ತಿನ್ನಲಿಕ್ಕೆ… “ ಅವರಿಗೂ ತಿನ್ನಬೇಕಾಗಿತ್ತು ಅನ್ನಿ.

ಮೊದಲೆಲ್ಲ ಮನೆಗೆ ಬರುತ್ತಿದ್ದ ನೆಂಟರು ತಿಂಗಳಾನುಗಟ್ಟಲೆ ಝಂಡಾ ಊರುತ್ತಿದ್ದರು, ಆ ಕಾಲವೇ ಹಾಗಿತ್ತು, ಒಂದೂರಿಂದ ಮತ್ತೊಂದೂರಿಗೆ ನಡೆದೇ ಪ್ರಯಾಣ, ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲ, ಇದ್ದರೂ ಕೈಯಲ್ಲಿ ದುಗ್ಗಾಣಿಯಿಲ್ಲ. ಮಕ್ಕಳುಮರಿ ಸಮೇತ ಬಂದ ನೆಂಟರು ಮಳೆಗಾಲ ಮುಗಿಯದೆ ಹೊರಡಲಿಕ್ಕಿಲ್ಲ. ಬಂದವರು ಅದೆಷ್ಟೇ ಆತ್ಮೀಯ ಬಳಗವಾಗಿದ್ದರೂ ಊಟೋಪಚಾರ, ಅತಿಥಿಸತ್ಕಾರ ಎಲ್ಲವೂ ನಾಲ್ಕಾರು ದಿನಕ್ಕೆ ಸೀಮಿತ. ‘ ಬಂದವರು ಹೋಗಲಿ ‘ ಎಂಬ ಸೂಚನೆಯನ್ನು ಸೇಮಿಗೆ ರಸಾಯನ ಮಾಡಿ ಸತ್ಕರಿಸುವುದರ ಮೂಲಕ ತಿಳಿಯಪಡಿಸುವ ರೂಢಿ ಇದ್ದಿತು. ಒತ್ತಾಯದಿಂದ ಬಂದ ಅತಿಥಿಗಳನ್ನು ಬಲವಂತವಾಗಿಯಾದರೂ ಹೊರ ತಳ್ಳುವಂತೆ ಒತ್ತುಶಾವಿಗೆಯು ಒಂದು ವಿಶೇಷವಾದ ತಿನಿಸೂ ಹೌದು. ತಯಾರಿಸಲು ಶ್ರಮವೂ ಅನಿವಾರ್ಯ ಆಗಿದ್ದ ಕಾಲ ಅದಾಗಿತ್ತು. ಸೇರಕ್ಕಿ ಅರೆದು, ಕಾಯಿಸಿ, ಹಬೆಯಲ್ಲಿ ಬೇಯಿಸಿ, ನೂಲಿನೆಳೆಯಂತೆ ಒತ್ತಿ ಹೊರ ಬಂದ ಸೇಮಿಗೆಯು ನೂಕಡ್ಡೆ ಎಂದೂ ಹೆಸರು ಪಡೆದಿದೆ.  

ನಾನೂ ಶಾವಿಗೆ ಮಾಡದೆ ತುಂಬ ಸಮಯವಾಗಿತ್ತು, ಮೊದಲು ಶಾವಿಗೆ ಒತ್ತು ಯಂತ್ರ ಎಲ್ಲಿದೆಯೆಂದು ಹುಡುಕಿ, ಹೊರತಂದು ಶುಚಿಗೊಳಿಸಿ, ಯಂತ್ರದ ನಟ್ಟು ಬೋಲ್ಟುಗಳೆಲ್ಲ ಸಮರ್ಪಕ ಸ್ಥಿತಿಯಲ್ಲಿವೆ ಎಂಬ ತೀರ್ಮಾನಕ್ಕೆ ಬಂದು…

ಗದ್ದೆ ಬೇಸಾಯ ಇದ್ದ ಕಾಲದಲ್ಲಿ ಕುಚ್ಚುಲಕ್ಕಿಯಿಂದಲೇ ಶಾವಿಗೆ ಮಾಡುವ ರೂಢಿ ಇಟ್ಕೊಂಡಿದ್ದೆವು. ಅದನ್ನು ಬೇಯಿಸಲು ಜಾಸ್ತಿ ಸಮಯ ಬೇಕು, ಕಟ್ಟಿಗೆಯ ಒಲೆಯೂ ಇದ್ದ ಕಾಲ ಅದು, ಅರೆಯಲಿಕ್ಕೂ ಗ್ರೈಂಡಿಗ್ ಮೆಶೀನ್ ಅನಿವಾರ್ಯ. ಕುಚ್ಚುಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ಸಮಪ್ರಮಾಣದಲ್ಲಿ ಹಾಕಿ ಶಾವಿಗೆಮಾಡುವುದೂ ಇದೆ. ಏನೇ ಆದರೂ ಈಗಿನ ವೇಗದ ಜೀವನಶೈಲಿಯಿಂದಾಗಿ ಹಳೆಯ ಪದ್ಧತಿಗಳು ಮೂಲೆಗುಂಪಾಗಿವೆ.

               

ಇದೆಲ್ಲ ಬೇಡ, ಬೇಗನೆ ಆಗುವಂತಹ ಬೆಳ್ತಿಗೆ ಅಕ್ಕಿಯೇ ಹಿತ, ಮಲ್ಲಿಗೆಯಂತಹ ಒತ್ತುಶಾವಿಗೆ ತಿನ್ನೋಣ.  
2 ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ತೊಳೆದು ನೆನೆಯಲು ಇರಿಸುವುದು. ಅಕ್ಕಿಯ ಗುಣಮಟ್ಟ ಚೆನ್ನಾಗಿದ್ದಷ್ಟೂ ಶಾವಿಗೆ ರುಚಿಕರವಾಗಿರುತ್ತದೆ.

ನಾಲ್ಕಾರು ಗಂಟೆ ನೆನೆದ ಅಕ್ಕಿಯ ನೀರು ಬಸಿದು ಮಿಕ್ಸಿ ಯಂತ್ರದಲ್ಲಿ ಅರೆಯಿರಿ.
2 ಲೋಟ ಅಕ್ಕಿ ಅಳೆದಿದ್ದೇವೆ, ಮೂರು ಲೋಟ ನೀರು ಅರೆಯಲಿಕ್ಕೆಂದು ಅಳೆದು ಇರಿಸಿಕೊಳ್ಳಿ.
ಮಿಕ್ಸಿಯ ಜಾರ್ ಒಳಗೆ ಅದರ ಸಾಮರ್ಥ್ಯ ಇರುವಷ್ಟೇ ಅಕ್ಕಿ ಹಾಕಿ, ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರು ಹಾಕಿ ಅರೆಯಿರಿ. ಎಲ್ಲ ಅಕ್ಕಿಯೂ ಅರೆಯಲ್ಪಟ್ಟಿತು, ರುಚಿಗೆ ತಕ್ಕಷ್ಟು ಉಪ್ವು ಬೀಳಲಿ. ಅಳೆದು ಇಟ್ಕೊಂಡ ಮೂರು ಲೋಟ ನೀರು ಮುಗಿದಿಲ್ಲ ಅಲ್ಲವೇ,

ದಪ್ಪ ತಳದ ಬಾಣಲೆಗೆ ಈ ಹಿಟ್ಟನ್ನು ಸುರಿದು, ಉಳಿಕೆಯಾಗಿರುವ ನೀರನ್ನು ಎರೆಯಿರಿ. ಇದೀಗ ನೀರು ದೋಸೆಯ ಹಿಟ್ಟಿನಂತಾಗಿದೆ. ಶಾವಿಗೆ ನೂಲೆಳೆಯಂತೆ ಬರಬೇಕಾದರೆ ನಾವು ಎರೆಯುವ ನೀರಿನ ಅಂದಾಜು ಸರಿಯಾಗಿರಬೇಕು. ನೀರು ಕಡಿಮೆಯಾದರೆ ಹಿಟ್ಟು ಸರಿಯಾಗಿ ಬೇಯದೇ ಹೋದೀತು, ಬೆಂದರೂ ಶಾವಿಗೆ ಯಂತ್ರದಿಂದ ಕೆಳಗಿಳಿಸಲು ಹರಸಾಹಸ ಪಡಬೇಕಾದೀತು. ನೀರಿನ ಅಳತೆ ಜಾಸ್ತಿ ಆದ್ರೂನೂ ಒತ್ತಿದ ಶಾವಿಗೆ ಪಿಚಿ ಪಿಚಿಯಾಗಿ ಮುದ್ದೆಯಾದೀತು. ಇವಿಷ್ಟು ಮುಂಜಾಗ್ರತೆಯ ಸಲಹೆಗಳನ್ನು ಶಾವಿಗೆ ಒತ್ತುಮಣೆಯನ್ನು ತಂದ ಗೌರತ್ತೆ ಹೇಳಿದ್ದು.

ಒಂದೇ ಹದನಾದ ಉರಿಯಲ್ಲಿ ಮರದ ಸಟ್ಟುಗದಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತ ಇದ್ದ ಹಾಗೆ ನೀರಿನಂತಿದ್ದ ಹಿಟ್ಟು ಘನ ರೂಪಕ್ಕೆ ಬಂದಿದೆ, ಕೈಗಳಿಗೆ ಹಸಿ ಹಿಟ್ಟಿನಂತೆ ಅಂಟಿಕೊಳ್ಳಬಾರದು. ಪರೀಕ್ಷಿಸಿ ಸರಿಯಾದ ಹೊತ್ತಿಗೆ ಸ್ಟವ್ ಆರಿಸಿ, ಬಾಣಲೆ ಕೆಳಗಿಳಿಸಿ. ಅಕ್ಕಿ ಹಿಟ್ಟಿನ ಮುದ್ದೆಯನ್ನು ಇನ್ನೊಂದು ತಪಲೆಗೆ ಆ ಕೂಡಲೇ ವರ್ಗಾಯಿಸಿ.

ತುಸು ಆರಿದ ನಂತರ, ಶಾವಿಗೆ ಒರಳೊಳಗೆ ಹಿಡಿಸುವಂತಹ ಉಂಡೆ ಮಾಡಿಟ್ಟು, ಅಟ್ಟಿನಳಗೆ ಯಾ ಇಡ್ಲಿಪಾತ್ರೆಯೊಳಗೆ ಜೋಡಿಸಿ ಇಡುವುದು.

ಮುಂಜಾನೆ ಎದ್ದೊಡನೆ ಅಟ್ಟಿನಳಗೆಯನ್ನು ಒಲೆಗೇರಿಸಿ, ನೀರು ಕುದಿದು, ಹದಿನೈದು ನಿಮಿಷಗಳಲ್ಲಿ ಉಂಡೆಗಳು ಬೆಂದಿರುತ್ತವೆ. ಭಾನವಾರದ ರಜಾ ದಿನ ಒತ್ತುಶಾವಿಗೆಯ ಆಟಕ್ಕೆ ಸೂಕ್ತವಾಗಿದೆ. ಮನೆಯ ಸದಸ್ಯರ ಸಹಾಯವನ್ನು ಪಡೆದುಕೊಳ್ಳಿ. ಒಂದೊಂದೇ ಉಂಡೆಯನ್ನು ಶಾವಿಗೆ ಒರಳೊಳಗೆ ತುಂಬಿಸಿ ಒತ್ತುವುದು, ನೂಕಡ್ಡೆ ಸಿದ್ಧ.

ಹಿಂದೆ ಕೂಡು ಕುಟುಂಬಗಳಿದ್ದ ಕಾಲದಲ್ಲಿ ಮನೆಯ ಸ್ಥಿತಿವಂತಿಕೆಯನ್ನೂ ಶಾವಿಗೆ ಯಂತ್ರದಿಂದಲೇ ಅಳೆಯಬಹುದಾಗಿತ್ತು. ಶಾವಿಗೆ ಒರಳನ್ನು ವೈವಿಧ್ಯಮಯ ವಿನ್ಯಾಸಗಳಲ್ಲಿ ಕಾಣಬಹುದಾಗಿತ್ತು. ಮರದ ಕುಸುರಿ ಕಲೆಗಳಿಂದ, ಕಣ್ಸೆಳೆಯುವ ವಿನ್ಯಾಸಗಳಿಂದಲೂ ಕೂಡಿದ ಪುರಾತನ ಶಾವಿಗೆ ಒತ್ತುಮಣೆಗಳು ನಮ್ಮ ಆಧುನೀಕರಣಗೊಂಡ ಜೀವನಶೈಲಿಯಿಂದಾಗಿ ಅಟ್ಟ ಸೇರಿ ಮೂಲೆಗುಂಪಾಗಿರುವ ಸಾಧ್ಯತೆ ಅಧಿಕ.

                    

      
ಸಿದ್ಧವಾದ ಒತ್ತು ಶಾವಿಗೆಯನ್ನು ತಿನ್ನುವ ಬಗೆ ಹೇಗೆ?

ಇದನ್ನು ಬರೆಯುವಾಗ ಸಹಜವಾಗಿ ನನ್ನ ಮಾವನವರ ನೆನಪಾಗದೆ ಇದ್ದೀತೆ, ವೃದ್ಧರಾಗಿದ್ದ ನನ್ನ ಮಾವ ಡಯಾಬಿಟೀಸ್ ಕಾಯಿಲೆಯನ್ನೂ ಅಂಟಿಸಿಕೊಂಡಿದ್ದರು, ಸಾಲದಿದ್ದಕ್ಕೆ ಅದೇನೋ ಕೊಲೆಸ್ಟರಾಲ್ ಭೀತಿಯೂ ಅವರದಾಗಿತ್ತು. “ ನೋಡು, ನಿನ್ನ ರಸಾಯನ, ಒಗ್ಗರಣೆ ಯಾವುದೂ ಬೇಡ, ನನಗೆ ಶಾವಿಗೆ ಇರುವ ಹಾಗೆ ತಿನ್ನಲಿಕ್ಕೆ ಇಟ್ಟಿರು… “

ಬಾಳೆಹಣ್ಣು ರಸಾಯನ ಇದಕ್ಕೆ ಸೊಗಸಾಗಿ ಹೊಂದಿಕೆಯಾಗುವಂತಹುದಾಗಿದೆ, ನನ್ನ ಬಳಿ ಇವತ್ತು ಬಾಳೆಹಣ್ಣು ಇಲ್ಲ, ಅಂಗಡಿಯಿಂದ ತಂದ ಖರ್ಜೂರದ ಪ್ಯಾಕೆಟ್ ಇದೆ, ಖರ್ಜೂರದಿಂದ ರಸಾಯನ ಮಾಡೋಣ.

ಖರ್ಜೂರ ಹತ್ತೂ ಹದಿನೈದು ಇರಲಿ.
ಬಿಡಿಸಿ ಬೀಜ ತೆಗೆದು ಕುದಿಯುವ ನೀರು ಎರೆದು ಮುಚ್ಚಿ ಇರಿಸಿ.
ಒಂದು ಕಡಿ ತೆಂಗಿನಕಾಯಿ ತುರಿದು, ಅರೆದು ಕಾಯಿಹಾಲು ಮಾಡಿರಿಸಿ, ದಪ್ಪ ಹಾಲು ಮಾತ್ರ ಸಾಕು.
ಮೆತ್ತಗಾಗಿರುವ ಖರ್ಜೂರವನ್ನು ಕೈಯಲ್ಲಿ ತುಸು ಹಿಸುಕಿ ಇಟ್ಟು,
ಒಂದು ಅಚ್ಚು ಬೆಲ್ಲ ಪುಡಿ ಮಾಡಿ ಸೇರಿಸಿ,
ಅರ್ಧ ಚಮಚ ಎಳ್ಳು ಹುರಿದು ಗುದ್ದಿ,
ದಪ್ಪ ಕಾಯಿಹಾಲು ಎರೆಯುವಲ್ಲಿಗೆ
ರಸಾಯನ ಆಯ್ತು ಅನ್ನಿ.
ದ್ರಾಕ್ಷಿ ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿದಾಗ ಇನ್ನೂ ಸ್ವಾದಿಷ್ಟ ರಸಾಯನ ನಮ್ಮದಾಯಿತು.

ಕೇವಲ ಬೆಲ್ಲ ಹಾಗೂ ತೆಂಗಿನಕಾಯಿಹಾಲುಗಳ ಮಿಶ್ರಣವೂ ಶಾವಿಗೆಯ ರಸದೂಟಕ್ಕೆ ಸಾಕಾಗುತ್ತದೆ, ಇದನ್ನು ನಮ್ಮ ಕಡೆ ಬೆಲ್ಲಕಾಯಿಹಾಲು ಅನ್ನುವ ರೂಢಿ.

ಒತ್ತು ಶಾವಿಗೆ ಇದ್ದರೆ ಸಾಕು, ಶಾವಿಗೆ ಉಪ್ಕರಿ, ಶಾವಿಗೆ ಪುಳಿಯೋಗರೆ, ಶಾವಿಗೆ ಚಿತ್ರಾನ್ನ, ಶಾವಿಗೆ ಪುಲಾವ್, ಶಾವಿಗೆ ವೆಜಿಟೆಬಲ್ ಬಾತ್…. ಹೀಗೆ ಅಡುಗೆಯ ರಸರುಚಿಗಳನ್ನು ಜೋಡಿಸುತ್ತ ಹೋಗಬಹುದು.

               





                 

0 comments:

Post a Comment