Pages

Ads 468x60px

Tuesday 7 January 2020

ತಿಮರೆ ಪಚ್ಚಡಿ







ತೋಟದ ಕಳೆಹುಲ್ಲು ತೆಗೆಯುತ್ತಿದೆ. " ಅಕ್ಕ, ಏತ್ ಎಡ್ಡೆ ತಿಮರೆ ಬಳತ್ತ್ಂಡ್, ಒಂಜಿ ಚಟ್ಣಿ ಮನ್ಪುಗೊ.. " ಎನ್ನುತ್ತ ಬೇರುಗಡ್ಡೆ ಸಹಿತವಾಗಿ ತಿಮರೆ ಸೊಪ್ಪಿನ ರಾಶಿಯೇ ಬಂದಿತು, ನಾನೂ ಇದ್ದೇನೆ ಎಂಬಂತೆ ಗಾಂಧಾರಿ ಮೆಣಸುಗಳೂ...

ಇದುವರೆಗೂ ನಾನು ಇಷ್ಟೂ ತಿಮರೆ ಸೊಪ್ಪಿನ ಚಟ್ಣಿ ಮಾಡಿದ್ದಿಲ್ಲ. ಹೇಗೂ ಬಂದಿದೆ, ಹಾಳು ಮಾಡುವುದೆಂತಕೆ ಎಂಬ ಸೂತ್ರದಲ್ಲಿ ಚಟ್ಣಿ ತಯಾರಾಯ್ತು.

ತಿಮರೆ ಸೊಪ್ಪು ಮುಂಜಾನೆ ತಿಂದರೆ ಒಳ್ಳೆಯದು ಎಂಬ ಗೌರತ್ತೆಯ ಹಿತವಚನದಂತೆ ಮುಂಜಾನೆಯ ದೋಸೆಗೆ ಚಟ್ಣಿ ಮಾಡಲಾಯ್ತು.

ದೋಸೆಯೊಳಗೆ ಹೂರಣದಂತೆ ಈ ಚಟ್ಣಿ ಸವರಿಟ್ಟು ತಿಂದೆವು. ಆರೋಗ್ಯಕ್ಕೂ ಮಿದುಳಿನ ಕಾರ್ಯಚಟುವಟಿಕೆಗಳಿಗೂ ಈ ಸೊಪ್ಪು ಓಳ್ಳೆಯದೆಂದು ತಿಳಿದು ಮೈತ್ರಿಗೂ ಖುಷಿ ಆಯ್ತೂ ಅನ್ನಿ. ಆಲೂ ಬಾಜಿ ದೋಸೆ ತಿನ್ನುವ ಬದಲು ಈ ಥರ ಪ್ರಾಕೃತಿಕ ವೈವಿಧ್ಯಗಳ ಬಳಕೆ ಬಹಳ ಉತ್ತಮ ಎಂಬ ಶಿಫಾರಸನ್ನು ಮೈತ್ರಿ ತಿಮರೆ ಚಟ್ಣಿಗೆ ಲಗತ್ತಿಸಿದಳು.

ಈಗ ತಿಮರೆ ಪಚ್ಚಡಿ ಹೇಗೆ ಮಾಡಿದ್ದೆಂದು ನೋಡೋಣ.

ಚಿತ್ರದಲ್ಲಿ ಇರುವಷ್ಟೂ ತಿಮರೆ ಸೊಪ್ಪು ಗೆಡ್ಡೆ ಸಹಿತವಾಗಿ ಚೂರಿಯಲ್ಲಿ ಕೊಚ್ಚುವುದು.
ಒಂದು ಹಿಡಿ ಕಾಯಿತುರಿ,
4 - 6 ಗಾಂಧಾರಿ ಮೆಣಸು,
ರುಚಿಗೆ ತಕ್ಕಷ್ಟು ಉಪ್ಪು,
ಹಿತವೆನಿಸುವಷ್ಟು ಹುಣಸೆಯ ಹುಳಿ,
ನೀರು ಬೇಕಾಗಿಲ್ಲ.
ಮಿಕ್ಸಿ ಪಚ್ಚಡಿ ಮಾಡಿ ಕೊಟ್ಟಿತು. ಹಸಿರಿನ ಮುದ್ದೆಯಂತಹ ಪಚ್ಚಡಿಯನ್ನು ಮುಂಜಾನೆಯ ದೋಸೆಯ ತರುವಾಯ ಮಧ್ಯಾಹ್ನದ ಊಟದಲ್ಲಿ ಬಳಸಲಾಯ್ತು. ಉಳಿದದ್ದನ್ನು ಎಸೆಯದೆ ನಾಳೆ ಮುಂಜಾನೆ ತಿನ್ನುವವರಿಗಾಗಿ ತಂಪು ಪೆಟ್ಟಿಗೆಯಲ್ಲಿ ಇಡಲಾಯಿತು.

Centella asiatica, ಬ್ರಾಹ್ಮೀ, ಸರಸ್ವತೀ, ಉರಗೆ, ಒಂದೆಲಗ... ಹತ್ಚುಹಲವು ಹೆಸರುಗಳಿಂದ ಶೋಭಿತವಾಗಿರುವ ಪುಟ್ಟ ಸಸ್ಯ ತುಳುವಿವಲ್ಲಿ ತಿಮರೆ ಎಂದು ಕರೆಯಲ್ಪಡುತ್ತದೆ.

ಇದನ್ನೇ ಹೋಲುವ ದೊಡ್ಡ ಎಲೆಗಳೂ ಹೊವುಗಳೂ ಇರುವಂತಹ ಇನ್ನೊಂದು ಸಸ್ಯವರ್ಗ ಇದೆ, ನಾನೂ ಎಲ್ಲಿಂದಲೋ ತಂದು ಸಾಕುತ್ತ ಇದ್ದೇ ಅನ್ನಿ. ಉರಗೆಯಲ್ಲಿ ದೊಡ್ಡ ಜಾತಿಯದು, ತಂಬ್ಳಿ ಚಟ್ಣಿಗೆ ಆಗುತ್ತೆ ಅಂತ ಕೊಟ್ಟವರು ಅಂದಿದ್ದರು.

" ಈ ಹೈಬ್ರೀಡು ಎಲೆಗಳಿಗೆ ನಮ್ಮ ತೋಟದ ಉರಗೆಯ ರುಚಿಯೂ ಇಲ್ಲ, ಪರಿಮಳದ ಸಂತಾನವಿಲ್ಲ.." ಎಂದು ಗೌರತ್ತೆ ತೀರ್ಮಾನ ಕೊಟ್ಟಾಗಿನಿಂದ ನಾನೂ ಅದರ ಸುದ್ದಿಗೆ ಹೋಗಿಲ್ಲ.

ಇತ್ತೀಚೆಗೆ ಅಂತರ್ಜಾಲದಲ್ಲಿ ಅಲೆದಾಡುತ್ತಿದ್ದಾಗ ಹೈಬ್ರಿಡ್ ಒಂದೆಲಗ ಸಿಕ್ಕಿತು, Dollarweeds, Hydrocotyle app, Pennywort ಎಂದಿರುವ ಇದು ವಿದೇಶೀ ಕಳೆ ಸಸ್ಯ. ಒಳ್ಳೆಯ ನೀರಿನಾಸರೆಯಲ್ಲಿ ತಾವರೆಯ ಎಲೆಯಂತೆ ಸೊಕ್ಕಿ ಬೆಳೆಯುವ ಈ ಸಸ್ಯವು ನಮ್ಮ ಒಂದೆಲಗದ ಔಷಧೀಯ ಗುಣಧರ್ಮಗಳನ್ನು ಒದಗಿಸಲಾರದು. ಆದರೂ ಇನ್ನಿತರ ಸೊಪ್ಪು ಸದೆಗಳಂತೆ ಅಡುಗೆಯಲ್ಲಿ ಬಳಸಬಹುದು.


0 comments:

Post a Comment