Pages

Ads 468x60px

Saturday 14 September 2013

ಪುಳಿಂಜಿಯ ರಸಪಾಕ!




ಪ್ರತಿವರ್ಷವೂ ಓಣಂ ಬರುತ್ತದೆ.  ಹಾಗೇ ಆ ವರ್ಷವೂ ಬಂದಿತು.   ಶಾಲೆ ಹಾಗೂ ಸರಕಾರೀ ಸಂಸ್ಥೆಗಳಿಗೆ ಫುಲ್ ರಜೆ,   ಕರ್ನಾಟಕದ ದಸರಾ ಇದ್ದ ಹಾಗೆ.   ನನ್ನಮ್ಮ ಚಿಕ್ಕಮಕ್ಕಳೊಂದಿಗೆ ಕಾಸರಗೋಡಿನಿಂದ ವಿಟ್ಲದ ಸಮೀಪವಿರುವ ಕುಕ್ಕಿಲದ ತಾಯಿಮನೆಗೆ ಹೋದರು.   ಮನೆಯಲ್ಲಿದ್ದ ಬಾಣಸಿಗನೂ ರಜಾ ತೆಗೆದುಕೊಂಡು ಅವನೂರಿಗೆ ಹೋದ.  ಅಪ್ಪನ ಕೋರ್ಟುಕಛೇರಿಗಳಿಗೆ ರಜಾ ಇರಲಿಲ್ಲ,  ತಿರುವೋಣಂ ದಿನ ಮಾತ್ರ ಒಂದು ದಿನದ ರಜೆ.  ನಾನು ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದುದರಿಂದ,  ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕಾಗಿದ್ದುದರಿಂದ,  ಅಪ್ಪನ ಊಟತಿಂಡಿಗಳ ಮೇಲ್ವಿಚಾರಕಿಯಾಗಿ ಮನೆಯಲ್ಲಿ ಇರಬೇಕಾಗಿತ್ತು.   ಆಗ ಇಂದಿನಂತೆ ಗ್ಯಾಸ್,  ಓವನ್,  ಹೀಟರ್,  ಗ್ರೈಂಡರ್ ಯಾವುದೂ ಇರಲಿಲ್ಲ ಕಣ್ರೀ,  ಒಂದು ಚಿಮಿಣೀ ಸ್ಟವ್ ಇತ್ತು.

ನೀರು ಸೇದಲು ಬಾವಿಕಟ್ಟೆಗೆ ಬಂದಾಗ ಅಕ್ಕಪಕ್ಕದ ಹೆಂಗಳೆಯರಿಗೆ ನನ್ನಮ್ಮ ಊರಿಗೆ ಹೋಗಿದ್ದಾರೆಂಬ ವಾಸ್ತವ ಅರಿವಿಗೆ ಬಂದು,  ನನಗೆ ತಮ್ಮ ಕೈಲಾದ ಅಡುಗೆಕೋಣೆ ವ್ಯವಹಾರಗಳನ್ನು ಹೇಳಿ ಕೊಡಲು ಮುಂದಾದರು.   ಆದರೆ ನನಗೆ ಆಸಕ್ತಿ ಇದ್ದರಲ್ಲವೇ?  ತಕ್ಕಮಟ್ಟಿಗೆ ಅಡುಗೆಯ ಒಳಗುಟ್ಟುಗಳನ್ನು ನನ್ನಪ್ಪ ತಿಳಿದಿದ್ದರು.   ಕಟ್ಟಿಗೆಯ ಒಲೆ ಹೊತ್ತಿಸುವ ವಿಧಾನ ಅಪ್ಪನೇ ಹೇಳಿಕೊಟ್ಟರು.   ತೆಂಗಿನ ಗೆರಟೆಗೆ ಹಿಡಿಬೂದಿ ತುಂಬಿಸಿ,  ಅದಕ್ಕೆ ಚಿಮಿಣಿ ಎಣ್ಣೆ ಎರೆದು ಒಲೆಯೊಳಗಿಟ್ಟು,  ಬೆಂಕಿಕಡ್ಡಿ ಗೀರಿ ಹೊತ್ತಿಸಿ,  ಮೇಲಿನಿಂದ ಸೌದೆ ತುಂಡುಗಳನ್ನು ಒಂದರಮೇಲೊಂದರಂತೆ ಇಟ್ಟುಬಿಟ್ಟರೆ ಮುಗೀತು.   ಅನ್ನದ ತಪಲೆಗೆ ನೀರು ತುಂಬಿಸಿ ಒಲೆ ಮೇಲೆ ಇಟ್ಟರಾಯಿತು.   

ನೀರು ಕುದಿಯಬೇಕಾದರೆ ಕುಚ್ಚುಲಕ್ಕಿ ತೊಳೆದು ಹಾಕಿ,  ನಿಧಾನಗತಿಯಲ್ಲಿ ಬೇಯುವ ಈ ಅಕ್ಕಿ ಕುದಿಯುತ್ತಾ ಇರಬೇಕು,  ಊಟದ ಹೊತ್ತಿಗೆ ಬೆಂದಿರುತ್ತದೆ.   ನಂತರ ಗಂಜಿನೀರು ಬಸಿಯಲು ಅದಕ್ಕಾಗಿಯೇ ಮೀಸಲಾದ ಮರದ ತಟ್ಟೆ ಮುಚ್ಚಿ ಬಗ್ಗಿಸುವುದು,  ಗಂಜಿನೀರು ಶೇಖರಿಸಲು ಇನ್ನೊಂದು ಅಗಲ ಬಾಯಿಯ ಪಾತ್ರೆ.  ಈ ಪಾತ್ರೆ ಕೇವಲ ಗಂಜಿನೀರು ಶೇಖರಣೆಗೆ ಮೀಸಲು,  ಅಡಿಮಂಡಗೆ ಅಥವಾ ಓಡಮರಿಗೆ ಎಂದು ಆಡುನುಡಿಯಲ್ಲಿ ಹೇಳುವ ವಾಡಿಕೆ.  ಹಾಗೇನೇ ಮರದ ತಟ್ಟೆಗೆ ಚರ್ಂಬುತ್ತಿ ಅಥವಾ ಎಸಿಮುಚ್ಚಲು ಅಂತಾನೂ ಹೆಸರಿದೆ,  ಇರಲಿ.   ಅನ್ನ ಆಯಿತು,  ಅನ್ನದೊಂದಿಗೆ ಯಾವ ವ್ಯಂಜನ?   ತೆಂಗಿನಕಾಯಿ ತುರಿದು,  ಅರೆದು,  ಮಸಾಲೆ ಹುರಿದು ಕೊಡಲು ನನಗೆಲ್ಲಿ ತಿಳಿದಿತ್ತು?   " ಪುಳಿಂಜಿ ಮಾಡುವಾ "  ಅಂದರು ಅಪ್ಪ.   ಉಪ್ಪು,  ಹುಳಿ,  ಬೆಲ್ಲಗಳನ್ನು ಒಂದು ತಪಲೆಯಲ್ಲಿ ಹಾಕಿಟ್ಟು,  ನೀರು ಎರೆದು ಗಿವುಚಿ,  ಎರಡು ನೀರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿದ್ರೆ ನಮ್ಮ ಪುಳಿಂಜಿ ಆಯ್ತು,  ಹಸಿಮೆಣಸೂ ಹಾಕ್ತಿದ್ದರು ನಮ್ಮಪ್ಪ.

                                               <><><>    <><><>

ಮದುವೆಯಾದ ಮೇಲೆ,  ಎರಡು ಮಕ್ಕಳೂ ಆದ ಮೇಲೆ ನನ್ನಮ್ಮ ಹಿರಣ್ಯಕ್ಕೆ ಬಿಡುವು ಮಾಡಿಕೊಂಡು ಆಗಾಗ್ಗೆ ಬರುವ ರೂಢಿ,  ಅಪ್ಪನೇ ಕಳಿಸ್ತಾ ಇದ್ದರು.   ದೂರವೇನಿಲ್ಲ,  ಜೀಪಿನಲ್ಲಿ ಬರಬೇಕಾದರೆ ಇಪ್ಪತ್ತು ನಿಮಿಷದ ಹಾದಿ.   " ಪೊಸಡಿಗುಂಪೆ ಗುಡ್ಡದಿಂದಾಗಿ ತುಸು ದೂರ ಹೆಚ್ಚು ನೋಡು...ನೇರ ಹಾದಿ ಇರುತ್ತಿದ್ದರೆ ಕೇವಲ ಏಳು ಮೈಲು ದೂರದೊಳಗೆ ಹೋಗಿ ಬಂದು ಮಾಡ ಬಹುದಾಗಿತ್ತು "  ಇದು ಅಪ್ಪನ ಲೆಕ್ಕಾಚಾರ.

ಅಮ್ಮ ಬಂದಿದ್ದಾಗ  " ನೀನು ಏನೇ ಹೇಳು ಅಮ್ಮಾ,  ನಂಗೆ ಅಡುಗೆ ಕಲಿಸಿದ್ದು ಅಪ್ಪನೇ .."

" ಹೌದು,  ಹೇಳಿ ಕೊಟ್ಟಿರ್ತಾರೆ ಪುಳಿಂಜಿ....ನಾನು ಟೀವಿ ನೋಡಿ ಬರೆದಿಟ್ಟಿರೂದು ಈ ಡೈರಿಯಲ್ಲಿದೆ,  ಒಂದು ಹೊಸಾ ಐಟಂ ಮಾಡೋಣ " ಅಂದರು ಹೊಸರುಚಿಗೆ ಸಿದ್ಧತೆ ನಡೆಸುತ್ತಾ.

ಟೀವಿ ನೋಡಿ ಹೊಸರುಚಿಗಳನ್ನು ಬರೆದಿಟ್ಟುಕೊಳ್ಳುವ ಅಮ್ಮನ ಚಾಳಿ ನನಗೂ ಅಂಟಿತು.  ಸಿಕ್ಕಾಪಟ್ಟೆ ಚಾನಲ್ಲುಗಳು ಲಭ್ಯವಿದ್ದುದರಿಂದ ಎಲ್ಲಾ ಭಾಷೆಯ ಅಡುಗೆ ನೋಡುವ ಗೀಳು ಹಿಡಿಯಿತು.   ಆಗ ಕನ್ನಡದಲ್ಲಿ ಟೀವಿ ಮಾಧ್ಯಮ ಪ್ರಾರಂಭಿಕ ಹಂತದಲ್ಲಿತ್ತು.  ಮಲಯಾಳಂನಲ್ಲಿ ಏಷಿಯಾನಟ್ ಪ್ರಭಾವಶಾಲೀ ಮಾಧ್ಯಮವಾಗಿ ಗುರುತಿಸಿಕೊಂಡಿತ್ತು.   ವೈವಿಧ್ಯಮಯ ಕಾರ್ಯಕ್ರಮಗಳೂ,   ಓಣಂ ಸಂದರ್ಭದಲ್ಲಿ ಬರುತ್ತಿದ್ದ ವಿಶೇಷ ಅಡುಗೆಗಳೂ.....ನೋಡುತ್ತಿದ್ದ ಹಾಗೆ ಒಬ್ಬ ಬಾಣಸಿಗ,  ಗೆರೆಗೆರೆಯ ಲುಂಗಿ ಉಟ್ಟಿದ್ದ,  ತಲೆಗೊಂದು ಅಂತಹುದೇ ಬೈರಾಸು ಸುತ್ತಿಕೊಂಡು ಸಾಮಾನ್ಯ ಮಲಯಾಳೀ ಉಡುಪಿನಲ್ಲಿ ಬಂದ,  ದೊಡ್ಡ ಕಟ್ಟಿಗೆಯ ಒಲೆ ಮೇಲೆ ಮತ್ತೂ ದೊಡ್ಡದಾದ ಕಂಚಿನ ಕಡಾಯಿ (ಉರುಳಿ) ಇಟ್ಟು ಮೇಲಿಂದ ಕೇಜಿಗಟ್ಲೆ ಉಪ್ಪು,  ಹುಳಿ,  ಬೆಲ್ಲಗಳನ್ನು ಸುರುವಿ,  ಧಾರಾಳವಾಗಿ ನೀರು ಎರೆದು ಕುದಿಸಿ,  ಪಾಕ ಬಂದ ದ್ರಾವಣಕ್ಕೆ ಡಬರಿಯಲ್ಲಿ ಕತ್ತರಿಸಿಟ್ಟುಕೊಂಡಿದ್ದ ಶುಂಠಿಯನ್ನೂ ಹಾಕಿದ.    ಪುನಃ ಗಳಗಳನೆ ಕುದಿಯಲಾರಂಭಿಸಿದ ಈ ರಸಪಾಕಕ್ಕೆ ಒಂದು ಒಗ್ಗರಣೆಯೂ ಬಿದ್ದಿತು,  ಅದೂ ಎಳ್ಳೆಣ್ಣೆಯೇ ಆಗಬೇಕು.   ಮರದ ಸೌಟಿನಲ್ಲಿ ಗೊಟಾಯಿಸುತ್ತಾ,  ಪಾಕವನ್ನು ಪರಿಶೀಲಿಸುತ್ತಾ  " ಇದಾಣ್ ಪುಳಿಂಜಿ..." ಅನ್ನುತ್ತಾ ಸೌಟಿನಿಂದ ತನ್ನ ಅಂಗೈಗೆ ಸುರಿದು ನೆಕ್ಕಿ ಬಾಯಿ ಚಪ್ಪರಿಸಿಯೇ ಬಿಟ್ಟ ಭೂಪ!   

" ಓ,  ನನ್ನಪ್ಪನ ಪುಳಿಂಜಿ ಇದು...."  ಟ್ಯೂಬ್ ಲೈಟ್ ಹೊತ್ತಿತು.

ಭರಣಿಯಲ್ಲಿ ಶೇಖರಿಸಿಟ್ಟು ಬೇಕಾದ ಹಾಗೆ ಉಪಯೋಗಿಸಿಕೊಳ್ಳಿ.   
ತಿಂಗಳುಗಟ್ಳೆ ಇಟ್ಟುಕೊಳ್ಳಿ,   ಏನೂ ಕೆಡುವುದಿಲ್ಲ.
ಒಗ್ಗರಣೆಗೆ ನಿಮಗಿಷ್ಟವಾದ ಉಪ್ಪಿನಕಾಯಿ ಮಸಾಲೆ ಹಾಕಿದ್ರೆ ಇನ್ನೂ ಚೆನ್ನಾಗಿರುತ್ತದೆ. 
ಪುಳಿಯೊಗರೆ ಥರ ದಿಢೀರ್ ರೈಸ್ ಬಾತ್ ಮಾಡಿಕೊಳ್ಳಬಹುದು.  
ಇನ್ನೂ ಏನೇನೋ ಮಾಡಬಹುದು,  ಎಲ್ಲವೂ ನಿಮ್ಮ ಕಲ್ಪನೆಯ ವ್ಯಾಪ್ತಿಗೆ ಬಿಟ್ಟಿದ್ದು.




Posted via DraftCraft app

0 comments:

Post a Comment