Pages

Ads 468x60px

Saturday, 22 March 2014

ಮುರಬ್ಬಾ ಹಬ್ಬದೀಪಾವಳಿ ಬರುತ್ತಿದ್ದ ಹಾಗೇ ನೆಲ್ಲಿಕಾಯಿಯೂ ಮಾರುಕಟ್ಟೆಗೆ ಹಾಜರು.   ತುಳಸೀಪೂಜೆಯ ಸಂಭ್ರಮದಲ್ಲಿ ನೆಲ್ಲಿಕಾಯಿಗಳದ್ದೇ ತೋರಣ.   ಗೋಪೂಜೆ,  ಬಲೀಂದ್ರಪೂಜೆ,  ಅಂಗಡಿಪೂಜೆ ( ಲಕ್ಷ್ಮೀಪೂಜೆ ),  ಎಲ್ಲವೂ ಬದುಕು ಸಂಪತ್ಭರಿತವಾಗಿರಲಿ ಎಂದೇ ಹಾರೈಸುವ ಕ್ರಿಯೆಗಳಾಗಿವೆ.   ದೀಪಗಳ ಹಬ್ಬ ಐಶ್ವರ್ಯದ ಸಂಕೇತ.   ಐಶ್ವರ್ಯದ ಅಧಿದೇವತೆ ಲಕ್ಷ್ಮಿಯೊಂದಿಗೆ ನೆಲ್ಲಿಮರವನ್ನೂ ನಮ್ಮ ಹಿರಿಯರು ಸಮೀಕರಿಸಿ ಇಟ್ಟಿದ್ದಾರೆ, ಯಾಕೋ ತಿಳಿಯದು.

ದೀಪಾವಳಿ ಬಂದಿತೇ,  ನಮ್ಮನೆಗೂ ನೆಲ್ಲಿಕಾಯಿ ಬಂದಿತು.   ಮಗಳೂ ಮನೆಯಲ್ಲಿದ್ದಳು.   ಅವಳಿಗಾಗಿ ತಂದಿದ್ದ ನೆಲ್ಲಿಕಾಯಿಯನ್ನು ತಿನ್ನದೇ ಹಾಗೇ ಇಟ್ಟಿದ್ದಳು.

   " ಯಾಕೇ ತಿನ್ಲಿಲ್ಲ?  ತುಂಬಾ ಒಳ್ಳೇದು,  ವಿಟಮಿನ್ ಸಿ ಕಂಡಾಬಟ್ಟೆ ಇದ್ಯಂತೆ "

" ಹೋಗಮ್ಮ,  ಅದನ್ನೇ ತಿಂತಾ ಇರಲು ನಾನೇನು ಪುಟ್ಟು ಮಗುವಾ "  ಅಂದಳು.   " ಬೇಕಿದ್ರೆ ಉಪ್ಪಿನಕಾಯಿ ಹಾಕಿಕೋ "

ಉಪ್ಪಿನಕಾಯಿ ಹಾಕಬಹುದಿತ್ತು,   ಸೌತೆಕಾಯೀದು ಉಪ್ಪಿನಕಾಯಿ ಜಾಡಿ ತುಂಬಾ ಇತ್ತು.   ಒಂದು ಪ್ರತಿ ಮುಗಿಯದೆ ಮತ್ತೊಂದು ಜಾಡಿ ಉಪ್ಪಿನಕಾಯಿ ವ್ಯರ್ಥ ಶ್ರಮ ಅಂದ್ಕೊಂಡು ಸುಮ್ಮನಾಗಬೇಕಾಯಿತು.   ಮಗಳ ಅಪ್ಪನೂ ನೆಲ್ಲಿಕಾಯಿ ತಿನ್ನುವ ಸುದ್ದಿಗೇ ಬರಲಿಲ್ಲ.   ಹಾಗೇ ಟೇಬಲ್ ಮೇಲೆ ಕಂಗಾಲಾಗಿ ಕೂತಿದ್ದ ನೆಲ್ಲಿಕಾಯಿಗಳಿಗೆ ಒಂದು ಗತಿ ಕಾಣಿಸದಿದ್ದರೆ ಹೇಗೆ?   ಮುರಬ್ಬಾ ನೆನಪಿಗೆ ಬಂದಿತು.   ಸಕ್ಕರೆಪಾಕದಲ್ಲಿ ಹಾಕಿಟ್ಟು ತಿನ್ನುವಂತಹದು,  ಮಾಡಿ ನೋಡಿದ್ರೆ ಏನಾದೀತು ?   

ಇದ್ದಿದ್ದು ಒಂದ್ ಹದಿನೈದು ನೆಲ್ಲಿಕಾಯಿಗಳು.   ನೆಲ್ಲಿಕಾಯಿ ಬೇಯಿಸಲು ನೀರು ಕುದಿಯಲಿಟ್ಟಾಯ್ತು,  ನೀರು ಗಳಗಳನೆ ಕುದಿಯಿತೇ,  ಪೇಟೆಯಿಂದ ತಂದ ಆ ನೆಲ್ಲಿಕಾಯಿಗಳನ್ನು ತೊಳೆದು ಕುದಿನೀರಿಗೆ ಹಾಕಿದ್ದಾಯ್ತು.   ಒಂದು ತಪಲೆಯಲ್ಲಿ ಒಂದು ಕಪ್ ಸಕ್ಕರೆಗೆ ನೀರೆರೆದು ಕುದಿಸಿದ್ದರಲ್ಲಿ ಸಕ್ಕರೆಪಾಕ ಆಗ್ಹೋಯ್ತು.   ಬೆಂದ ನೆಲ್ಲಿಕಾಯಿಗಳನ್ನು ಪುನಃ ಈ ದ್ರಾವಣಕ್ಕೆ ಹಾಕಿ ಕುದಿಸುತ್ತಿರಬೇಕಾದರೆ ನಮ್ಮೆಜಮಾನ್ರು ಅಡುಗೆಮನೆಗೆ ಆಗಮಿಸಿದರು.  " ಇದೇನ್ಮಾಡ್ತಾ ಇದ್ದೀ,  ಓ,  ನೆಲ್ಲಿಕಾಯಿ ಹೀಗೂ ಆಗುತ್ತಾ..." ರಾಗ ಎಳೆದರು.

" ಇದು ತಣಿಯಲಿ,  ಆಮೇಲೆ ತಿಂದು ಹೇಳಿ "  ಅನ್ನುತ್ತಾ ಒಲೆಯಲ್ಲಿದ್ದ ತಪಲೆಯನ್ನು ಕೆಳಗಿರಿಸಿ  " ಅದೇನೋ ಚ್ಯವನಪ್ರಾಶ ಅಂತ ತಂದಿಟ್ಕೊಂಡಿದೀರಲ್ಲ,  ಅದ್ರಲ್ಲಿರೂದು ಇದೇ ನೆಲ್ಲಿಕ್ಕಾಯ್ "  ಅಂತಂದು ನಾನೊಂದು ನೆಲ್ಲಿಕಾಯಿಯನ್ನು ತೆಗೆದು ಬಾಯಿಗೆ ಹಾಕ್ಕೊಂಡೆ.

" " ಓ ಹೌದ,  ಹಾಗಿದ್ರೆ ಇನ್ನೂ ಸ್ವಲ್ಪ ಮಾಡಿಡು... ಒಳಗಿನ ಕಾಯಿ ತೆಗೆದಿದ್ದರೆ ಚೆನ್ನಾಗಿತ್ತು "

" ಇದ್ರೆ ತೊಂದರೆ ಎಂಥದು,  ಆಚೆ ಎಸೆದ್ರಾಯ್ತು "

ಸಂಜೆ ಪೇಟೆಯಿಂದ ಬರಬೇಕಾದರೆ ಪುನಃ ನೆಲ್ಲಿಕಾಯಿಗಳು ಆಗಮಿಸಿದುವು.   ಭರ್ತಿ ಎರಡು ಕಿಲೊ ಇದ್ಹಾಂಗಿತ್ತು.   " ಇಷ್ಟು ನೆಲ್ಲಿಕಾಯಿ ಯಾತಕ್ಕೆ ತಂದ್ರಿ,  ಏನು ಮಾಡ್ಲೀ ?"

" ಮಾಡು ಅದನ್ನೇ,  ಸಕ್ಕರೆ ಹಾಕಿದ್ದು ಚೆನ್ನಾಗಿತ್ತು "

" ಹೀಗೋ ಸಂಗತಿ,  ಆದ್ರೆ ಸಕ್ಕರೆ ತರಬೇಕಾಗಿತ್ತು "

" ಈಗ ಇರುವ ಸಕ್ಕರೆಯಲ್ಲಿ ಮಾಡು "

ಡಬ್ಬದಲ್ಲಿರುವ ಸಕ್ಕರೆಯನ್ನೆಲ್ಲ ಸುರುವಿ ಮಾಡಬಹುದಾಗಿತ್ತು,   ಹೀಗೆ ಸುಮ್ ಸುಮ್ನೆ ಸಕ್ಕರೆಪಾಕದಲ್ಲಿ ಹಾಕಿಟ್ಟ ನೆಲ್ಲಿಕಾಯಿಗಳು ಎಷ್ಟು ದಿನಾಂತ ಚೆನ್ನಾಗಿರ್ತವೋ ಅದೂ ಗೊತ್ತಿಲ್ಲ.   ಈ ಮುರಬ್ಬ ಎಷ್ಟಾದರೂ ಉತ್ತರಭಾರತೀಯರ ತಿನಿಸು.   ನಾವು ಮಾಡೋದೇನಿದ್ರೂ ಉಪ್ಪಿನಕಾಯಿ,  ನೆಲ್ಲಿಂಡಿ,  ನೆಲ್ಲಿಸಟ್ಟು,   ನೆಲ್ಲಿಪುಡಿ,  ಹಾಗೇನೇ ಒಣಗಿಸಿ ಇಟ್ಟುಕೊಳ್ಳೂದು.  ಈ ಥರ ಬಿಟ್ರೆ ಬೇರೆ ಪಂಚಾಯ್ತಿ ಇಲ್ಲ.
ಅಂತರಜಾಲಾಟದಲ್ಲಿ ಒಂದು ಹಿಂದಿ ಬ್ಲಾಗ್ ಸಿಕ್ಕಿತು.   ನಾನು ಮಾಡಿದ ವಿಧಾನ ತಪ್ಪಿಲ್ಲ,  ಆರು ತಿಂಗಳು ಇಟ್ಟುಕೊಳ್ಳಬಹುದೆಂದೂ ತಿಳಿಯಿತು.

ಈಗ ಎರಡು ಕಿಲೊ ನೆಲ್ಲಿಕಾಯಿಗಳ ಮುರಬ್ಬ ಮಾಡೋಣ.

ತೊಳೆದ ನೆಲ್ಲಿಕಾಯಿಗಳನ್ನು ಚೂರಿಯಲ್ಲಿ ಗೀರು ಹಾಕಿ ಇಟ್ಟುಕೊಳ್ಳಿ.
ಮುಳುಗುವಷ್ಟು ನೀರೆರೆದು ಕುದಿಸಿ,  ಆರಲು ಬಿಡಿ.
ನೀರು ಬಸಿಯಿರಿ,  ತೂತಿನ ಪಾತ್ರೆಗೆ ಹಾಕಿದರೆ ಉತ್ತಮ.
ಆರು ಕಪ್ ಸಕ್ಕರೆಗೆ ಮುಳುಗುವಷ್ಟು ನೀರೆರೆದು ಕುದಿಸಿ,  ಒಂದೆಳೆ ಪಾಕ ಬರಲಿ.
ಬೆಂದ ನೆಲ್ಲಿಕಾಯಿಗಳನ್ನು ಪಾಕಕ್ಕೆ ಹಾಕಿ ಪುನಃ ಕುದಿಸಿ.
ಸಿಹಿಯೊಂದಿಗೆ ಉಪ್ಪು ಅವಶ್ಯವಿದೆ,  ಒಂದು ಚಮಚ ಉಪ್ಪು ಬೀಳಲಿ.
ಚಿಕ್ಕ ಉರಿಯಲ್ಲಿ 20 - 30 ನಿಮಿಷ ಬೇಯುತ್ತಿರಲಿ.
ಏಲಕ್ಕಿ,  ಇನ್ನಿತರ ಸುವಾಸನಾ ದ್ರವ್ಯಗಳನ್ನೂ ಹಾಕಬಹುದು,  ನಾನು ಹಾಕಿಲ್ಲ.
ಚೆನ್ನಾಗಿ ಆರಿದ ನಂತರ ಶುದ್ಧವಾದ ಒಣ ಜಾಡಿಯಲ್ಲಿ ತುಂಬಿಸಿ.

ಹೀಗೆ ಗಳಗಳನೆ ಕುದಿದ ನೆಲ್ಲಿಕಾಯಿಗಳು ಸಕ್ಕರೆಯನ್ನೂ ಹೀರಿ ಮೃದುವಾಗಿರುತ್ತವೆ, ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದವರಿಗೆ ತಿನ್ನಬಹುದು.   ಬೆಳಗೆದ್ದು ತಿಂಡಿಗೆ ಮೊದಲು ಒಂದು ನೆಲ್ಲಿಕಾಯಿ,  ಊಟದ ಮೊದಲು ಇನ್ನೊಂದು,  ರಾತ್ರಿ ಮಲಗುವ ಮೊದಲು ಮತ್ತೊಂದು.   ಹೀಗೆ ತಿನ್ನುತ್ತಾ ಇರಿ,  ನವತಾರುಣ್ಯ ಗಳಿಸಿರಿ.

                                             
       


ಸಂಸ್ಕೃತದಲ್ಲಿ ಅಮಲಕವಾಗಿರುವ ನೆಲ್ಲಿಕಾಯಿ, ದೇವದಾನವರು ಸಮುದ್ರಮಥನ ಮಾಡುತ್ತಿದ್ದಾಗ  ಅಕಸ್ಮಿಕವಾಗಿ ಭೂಮಿಗೆ ಬಿದ್ದಂತಹ ಅಮೃತಬಿಂದುಗಳಿಂದ ಉಗಮವಾದ ಸಸ್ಯವೆಂದು ಪುರಾಣದಲ್ಲಿನ ಪುರಾಣ ಹೇಳುತ್ತದೆ.   ಅಮೃತ ತುಲ್ಯವಾದ ನೆಲ್ಲಿಕಾಯಿ ಸರ್ವರೋಗ ಪರಿಹಾರಕ,  ಧೀರ್ಘಾಯುಸ್ಸಿನ ಧಾತುಶಕ್ತಿ ಹೊಂದಿರುವಂತಹದೂ ಆಗಿದೆಯೆಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.   ನೆಲ್ಲಿಕಾಯಿ ಮಾತ್ರವಲ್ಲ,  ಇದರ ಹೂ,  ಬೀಜ,  ಎಲೆ,  ಕಾಂಡದ ತೊಗಟೆ, ಬೇರು ಕೂಡಾ ಆಯುರ್ವೇದ ಹಾಗೂ ಯುನಾನೀ ವೈದ್ಯಕೀಯ ಪದ್ಧತಿಯಲ್ಲಿ ಔಷಧಿಯಾಗಿ ಬಳಕೆಯಲ್ಲಿವೆ.   ವಾತ, ಕಫ, ಪಿತ್ತ ಎಂಬಂತಹ ತ್ರಿದೋಷಗಳನ್ನು ಶರೀರದಲ್ಲಿ ಸಮಪ್ರಮಾಣದ ನಿಯಂತ್ರಣ ಮಾಡಬಲ್ಲ ಶಕ್ತಿ ಇದರಲ್ಲಿದೆ.

 ಇತಿಹಾಸ ಕೆದಕಿದಾಗ ಆದಿ ಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರವನ್ನು ಗಮನಿಸಿ.   ದ್ವಾದಶಿಯ ದಿನ ಬಿಕ್ಷೆಗೆಂದು ಬಂದ ಯತಿಗಳಿಗೆ ನೀಡಲು ಮನೆಯೊಳಗೆ ಏನೂ ಇಲ್ಲದ ಬ್ರಾಹ್ಮಣ ಸ್ತ್ರೀ ತನ್ನ ಬಳಿಯಿದ್ದ ಒಣ ನೆಲ್ಲಿಕಾಯಿಯೊಂದನ್ನು ಕೊಟ್ಟಳಂತೆ.   ಆಕೆಯ ಬಡತನ ಕಂಡು ಮಮ್ಮಲ ಮರುಗಿದ ಶಂಕರಾಚಾರ್ಯರು ದೇವಿ ಮಹಾಲಕ್ಷ್ಮಿಯನ್ನು ಕನಕಧಾರಾ ಸ್ತೋತ್ರ ಮುಖೇನ ಪ್ರಾರ್ಥಿಸಿದರು,  ಲಕ್ಷ್ಮಿ ಒಲಿದಳು.   ಈಗಲೂ ಕೇರಳದಲ್ಲಿ ಶಂಕರಾಚಾರ್ಯರಿಗೆ ನೆಲ್ಲಿಕಾಯಿಯ ಬಿಕ್ಷೆ ನೀಡಿದ ಆ ಮನೆತನ ಇದೆ.

ನೆಲ್ಲಿಮರದ ಮೂಲ ನೆಲೆ ಭಾರತವೇ ಆಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.   ಕನ್ನಡ,  ತುಳು ಹಾಗೂ ತಮಿಳು ಭಾಷೆಗಳಲ್ಲಿ ನೆಲ್ಲಿಕಾಯಿ ಎಂದಾದರೆ ಮಲಯಾಳಂನಲ್ಲಿ ನೆಲ್ಲಿಕ್ಕ (നെല്ലിക്ക). ಸಸ್ಯಶಾಸ್ತ್ರೀಯವಾಗಿ phyllanthus emblica ಎಂದಾದರೆ ಆಂಗ್ಲ ಭಾಷೆಯಲ್ಲಿ Indian gooseberry ಆಗಿರುತ್ತದೆ.

ವಾಣಿಜ್ಯ ಉದ್ದೇಶದಿಂದ ನೆಲ್ಲಿಯನ್ನು ಬೆಳೆಸುವುದು ಕಡಿಮೆ.   ತೋಟಗಳಲ್ಲಿ ಅಲ್ಲೊಂದು ಇಲ್ಲೊಂದು ನೆಟ್ಟುಕೊಳ್ಳುವವರಿದ್ದಾರೆ.   ಇದರ ಸಾಕುವಿಕೆಗೆ ಅಂತಹ ಕಟ್ಟುಪಾಡುಗಳೇನೂ ಇಲ್ಲ.   ಕಸಿ ಕಟ್ಟಿದ ಗಿಡ ಬೇಗನೆ ಫಲ ನೀಡುವುದು.   ಹಾಗೇ ಸುಮ್ಮನೆ ಹುಟ್ಟಿದ ಗಿಡ ಫಲಭರಿತವಾಗಲು ವರ್ಷಾನುಗಟ್ಟಳೆ ಕಾಯಬೇಕಾದೀತು.   ವಿಟಮಿನ್ ಸಿ ಅಧಿಕವಾಗಿರುವ ಫಲ,   ಹಸಿ ನೆಲ್ಲಿಕಾಯಿ ತಿನ್ನುವುದಕ್ಕಿಂತ ಬೇಯಿಸಿದ್ದು ಉತ್ತಮ,  ಬೇಯಿಸಿದರೂ,  ಒಣಗಿಸಿ ಪುಡಿ ಮಾಡಿದರೂ ವಿಟಮಿನ್ ನಷ್ಟವಾಗದಿರುವುದೇ ಇದರ ವಿಶೇಷ ಗುಣ.   ಉಪ್ಪಿನಕಾಯಿ,  ಮುರಬ್ಬಗಳಂತೆ ಹಣ್ಣಿನ ಪಾಕದ ಜೆಲ್ಲಿ ಮಾಡಿದರೂ ಚೆನ್ನಾಗಿರುತ್ತದೆ.    ಜೆಲ್ಲಿ ಮಾಡಬೇಕಿದ್ದಲ್ಲಿ ಬೇಯಿಸಿದ ನೆಲ್ಲಿಕಾಯಿಗಳ ಬೀಜ ತೆಗೆದು ಸಕ್ಕರೆ ಪಾಕದಲ್ಲಿ ಕುದಿಸಿ ಇಡುವುದು,  ಹೆಚ್ಚುಕಮ್ಮಿ ಮುರಬ್ಬ ತಯಾರಿಸಿದ ವಿಧಾನವನ್ನೇ ಬಳಸಿದರಾಯಿತು.   ನೆಲ್ಲಿಂಡಿ ಮಾಡಬೇಕಾದಲ್ಲಿ ಬೇಯಿಸಿದ ನೆಲ್ಲಿಕಾಯಿಗಳ ಬೀಜ ತೆಗೆದು ಉಪ್ಪಿನ ದ್ರಾವಣದಲ್ಲಿ ಕುದಿಸಿ ಮುದ್ದೆಗಟ್ಟಿ ಭರಣಿಯಲ್ಲಿ ತುಂಬಿಸಿ ಇಟ್ಟುಕೊಳ್ಳುವುದು,  ಇದರ ಉಪಯೋಗ ಅಜೀರ್ಣವಾದಾಗ ತಂಬುಳಿ ಮಾಡಿ ಉಣ್ಣುವುದು ಅಷ್ಟೇ ಮತ್ತೇನಿಲ್ಲ.  ಹಿಂದಿನ ಕಾಲದವರು ಅಂದರೆ ನನ್ನತ್ತೆ,  ಅಜ್ಜಿ ಈ ಥರ ಮಾಡಿ ಹೊಗೆ ತಾಗುವ ಅಟ್ಟದಲ್ಲಿ ಕೆಡದಂತೆ ಇಟ್ಟುಕೊಳ್ಳುವ ವಾಡಿಕೆ ಇತ್ತು.  

  ಒಣಗಿಸಿದ ನೆಲ್ಲಿ ಪುಡಿಯನ್ನು ತಲೆಗೆ ಪೇಸ್ಟ್ ತರಹ ಸವರಿಕೊಂಡು ಸ್ನಾನ ಮಾಡಿ,   ಹೊಳೆಯುವ ಕಾಂತಿಯುಕ್ತ ಕೂದಲನ್ನು ಪಡೆಯಿರಿ.   ಕೂದಲುದುರುವಿಕೆಯನ್ನೂ ತಡೆಗಟ್ಟಿರಿ.   ಕೇಶವರ್ಧಿನೀ ತೈಲಗಳಲ್ಲಿ ನೆಲ್ಲಿಕಾಯಿಯ ಸಾರವನ್ನೂ ಬಳಸಲಾಗುತ್ತದೆಂಬುದನ್ನೂ ಮರೆಯದಿರಿ.

Posted via DraftCraft app

0 comments:

Post a Comment