Pages

Ads 468x60px

Friday, 14 March 2014

ಮಹಿಳಾವಾದವೂ, ಮಾವಿನಕಾಯಿ ಸ್ವಾದವೂ....


" ಮಹಿಳೆಯರ ದಿನ ಬಂದಾಯ್ತು "
" ಅಯ್ಯೊ ಬಿಡು,  ಮುದುಕರ ದಿನಾನೂ ಬರುತ್ತೆ "
" ಒಂದಲ್ಲ ಒಂದು ದಿನ ಬರ್ತದೆ,  ನಿಮ್ದು ಉಪ್ಪಿನಕಾಯಿ ಹಾಕಿ ಆಯ್ತಾ ಅತ್ತೇ ?"
" ಅದನ್ನೇನು ಕೇಳ್ತೀಯ,  ಹಾಕದಿದ್ರೆ ಆಗುತ್ತಾ,  ಒಂದ್ ಸಾವಿರ ಮಿಡಿ ಉಪ್ಪು ಬೆರೆಸಿ ಇಟ್ಟಿದ್ದೇನೆ "
" ಮಾವಿನ ಮಿಡಿ ಸಿಕ್ತು ಹಂಗಿದ್ರೆ... ಪುಡಿ ಉಪ್ಪು ಹಾಕಿದ್ದಾ ?"
" ಛೆ, ಅದಾಗಲಿಕ್ಕಿಲ್ಲ,   ಕಲ್ಲುಪ್ಪು...ಎರಡು ಕೇಜಿ ಬೇಕು ನೋಡು,  ಇನ್ನು ಮಿಡಿ ಚಿರುಟಿದ ಮೇಲೆ ಬಾಕಿ ಕೆಲ್ಸ "
" ಮೆಣಸು, ಸಾಸಿವೆ ಎಲ್ಲಾ ರೂಢಿಗೆ ಮಾಡಿಟ್ಟಾಯ್ತಾ ಅತ್ತೇ ?"
" ಹೂಂ,  ಮೂಡಿತ್ತಾಯರ ಮಿಲ್ಲು ಇದೆಯಲ್ಲ,  ಪೈವಳಿಕೆಯಿಂದ ಸ್ವಲ್ಪ ಮುಂದೆ.."
" ಗೊತ್ತಾಯ್ತು,  ನಾವೂ ಅಲ್ಲಿಂದಾನೇ ತಂದಿದ್ದು "
" ಹಾಗ್ಹೇಳು ಮತ್ತೆ,  ಒಂದ್ಕೇಜಿ ಮೆಣಸಿನ ಹುಡಿ,  ಸಾಸಿವೆ,  ಕಾಲು ಕಿಲೊ ಅರಸಿನ ಪುಡಿ ತಂದಿದೆ "
" ಅದನ್ನೇನು ಹಾಗೇ ಬೆರೆಸಿಡೂದಾ "
" ಐದಾರು ದಿನ ಆಗೂವಾಗ ಮಾವಿನ ಮಿಡಿಯಲ್ಲಿ ಉಪ್ಪು ನೀರು ಏಳ್ತದೆ,   ಆ ನೀರಿನಲ್ಲಿ ಸಾಸಿವೆ ಪುಡಿ ಅರೆಯಬೇಕು "
" ಓ,  ಸಾಸಿವೆ ಹುಡಿ ಅರೆಯಬೇಕಾ ?"
" ಹೂಂ ಮತ್ತೆ,  ಹುಡಿ ತರಿ ತರೀ ಇರ್ತದೆ,  ನುಣ್ಣಗೆ ನೊಂಪಣ್ಣನ ಥರ ಆಗ್ಬೇಕಲ್ಲ,  ಮಿಕ್ಸೀಯಲ್ಲೇ ಕಡೆಯಬಹುದು "
" ಸರಿ,  ಮಿಕ್ಸಿ ಚೆನ್ನಾಗಿ ತೊಳೆದು ಬಿಸಿಲಿಗಿಟ್ಟು ಒಣಗಿಸಿಟ್ರಾಯ್ತಲ್ಲ "
" ಹ್ಹ..ಹ್ಹ...ಮಿಕ್ಸೀ ಹಾಳಾದೀತು, ಜಾರ್ ತೊಳೆದಿಡು .....ಒಂದು ಗ್ಲಾಸು ಸಾಸಿವೆ ಉಪ್ಪು ನೀರಿನಲ್ಲಿ ಅರೆದು,  ಅಷ್ಟೇ ಮೆಣಸಿನ ಹುಡಿ ಹಾಕಿ ಎರಡು ಸುತ್ತು ತಿರುಗಿಸಿದರಾಯ್ತು... ಅರೆಯುವಾಗ ಹರಳುಪ್ಪು ಸ್ವಲ್ಪ ಸೇರಿಸಿಕೊಂಡ್ರೆ ಒಳ್ಳೇದು,  ಉಪ್ಪು ಕಮ್ಮಿಯಾಗಬಾರದು...."
" ಅರಸಿನ ಹುಡಿ ಎಷ್ಟು ?"
" ಒಂದು ದೊಡ್ಡ ಚಮಚ ಸಾಕು "
" ನೋಡೂ ಸಾವಿರ ಮಿಡಿ ಹಾಕಿದ್ರಲ್ಲಿ ಎಲ್ಲವೂ ಚೆನ್ನಾಗಿರುವುದಿಲ್ಲ,  ಕೆಟ್ಟು ಹೋದದ್ದು,  ಮೆತ್ತಗಾಗಿದ್ದು,  ಕಪ್ಪಗಾಗಿದ್ದು ಯಾವುದೂ ಬೇಡ,  ಚಿಕ್ಕ ಚಿಕ್ಕ ಮಿಡಿ ಆದ್ರೆ ಒಳ್ಳೇದು "
" ಸಾವಿರ ಮಿಡಿ ಅಂದ್ರೆ ಭರಣಿ ಎಷ್ಟಾದೀತು ?"
" ಅದೂ ಮಿಡಿ ಸೈಜಿನಲ್ಲಿದೆ,   ಚಿರುಟಿದ ಮಾವಿನಕಾಯಿ ಚಿಕ್ಕದಾಗುತ್ತದಲ್ಲ,  ಅದನ್ನು ನೋಡಿಕೊಂಡು ಭರಣಿ ಲೆಕ್ಕಾಚಾರ.....  ಮಾವಿನ ಕಾಯಿಯ ಪರಿಮಳ ಇರೂದೆಲ್ಲಾ ಅದರ ಸೊನೆಯಲ್ಲಿ "
" ಸೊನೆ ಅಂದ್ರೆ ತೊಟ್ಟಿನ ಬುಡದಲ್ಲಿ ಮೇಣದ ಹಾಗೆ ಜಿನುಗುತ್ತದಲ್ಲ ಅದಲ್ವ ?"
" ಹಾಂ ಅದೇ,  ತೊಟ್ಟು ಮುರಿಯುವಾಗಲೂ ಜಾಗ್ರತೆ ಬೇಕೂ...  ಸುಮ್ಮನೇ ತಟಪಟ ತೊಟ್ಟು ಮುರಿಯುವುದಲ್ಲ  "
" ಸರಿ,  ಗೊತ್ತಾಯ್ತು..."
" ಮಿಡಿಗೆ ಅರೆದ ಮಸಾಲೆ ದಪ್ಪಗಿರಬೇಕು,  ಇಡ್ಲಿ ಹಿಟ್ಟಿನ ಹಾಗೆ, ಉಪ್ಪಿನಕಾಯಿ ಹಸಿ ಹಿಟ್ಟು ತುಂಬಾ ಖಾರ .... ಕೈಗೆ ಗ್ಲೌಸ್ ಹಾಕಿಕೊಂಡರೆ ಉತ್ತಮ "
" ಅತ್ತೇ,  ಮಾವಿನಕಾಯೀದು ಉಪ್ಪುನೀರು ಉಂಟಲ್ಲ,  ಅದ್ರಲ್ಲಿ ಕೈ ಅದ್ದಿ ತೆಗೆದ್ರೆ ಕೈ ಏನೂ ಹೊಗೆಯುವುದಿಲ್ಲ "
" ಹೌದಾ,  ಅದು ನಂಗೂ ಗೊತ್ತಿರಲಿಲ್ಲ,  ನೀ ಹೇಳಿದ್ದು ಒಳ್ಳೇದಾಯ್ತು "


ಮಾವಿನ ಮಿಡಿ ಉಪ್ಪಿನಕಾಯಿ ಹಾಕುವ ವಿಧಾನ ಪ್ರಾದೇಶಿಕ ವೈವಿಧ್ಯತೆಯ ಅನುಸಾರ ವಿವಿಧವಾಗಿರುತ್ತವೆ.   ಇಲ್ಲಿ ಹೇಳಿದ್ದು ದಕ್ಷಿಣ ಕನ್ನಡಿಗರ ಸಾಂಪ್ರದಾಯಿಕ ವಿಧಾನ.  ಕಡಂಬಿಲ ಸರಸ್ವತಿ ಬರೆದಿರುವ  ' ಅಡಿಗೆ '  ಎಂಬ ಪಾಕಪುಸ್ತಕದಲ್ಲಿ ಇದನ್ನು ಸವಿವರವಾಗಿ ಬರೆದಿರುತ್ತಾರೆ.   ಉಪ್ಪಿನಕಾಯಿ ಹಾಕುವ ಮೊದಲು ಅದರಲ್ಲಿ ಬರೆದಿರುವ ಲೆಕ್ಕಾಚಾರ ಓದಿಕೊಂಡೇ ನನ್ನಂತಹ ಗೃಹಿಣಿಯರು ಮುಂದುವರಿಯುವುದು.   ಮೊದಲ ಬಾರಿ ಪ್ರಯತ್ನಿಸುವಾಗ ಹಿರಿಯರ ಮಾರ್ಗದರ್ಶನ ಪಡೆದೇ ಮಾಡಿದರೆ ಉತ್ತಮ.

ಮಿಡಿ ಉಪ್ಪಿನಕಾಯಿಯನ್ನು ಹಾಕಿದ ಕೂಡಲೇ ತಿನ್ನುವುದಕ್ಕಿಲ್ಲ,   2 -3 ತಿಂಗಳು ಕಟ್ಟಿಟ್ಟು ನಂತರ ತೆಗೆದು ತಿನ್ನಬಹುದು,  ಆ ಹೊತ್ತಿಗೆ ಮಳೆಗಾಲವೂ ಬಂದಿರುತ್ತದೆ.   ಗಾಳಿ ಸೋಕದಂತೆ,  ಬೆಚ್ಚಗೆ ಇಟ್ಟುಕೊಳ್ಳಬೇಕಾದ ಅಗತ್ಯವೂ ಇದೆ.

ಶುದ್ಧವಾದ ಇಂಗು,  ಪುಡಿಯುಪ್ಪು ಕೊನೆಯದಾಗಿ ಭರಣಿಯ ಬಾಯಿ ಬಿಗಿದು ಕಟ್ಟುವ ಮೊದಲು ಹಾಕಿ ಇಡವುದೂ ಇದೆ.   ಎರಡು ವರ್ಷಕ್ಕೂ ಮೇಲ್ಪಟ್ಟು ಇಡಬಹುದಾದ ಮಿಡಿಯಾಗಿದ್ದಲ್ಲಿ ಪಚ್ಚ ಕರ್ಪೂರವನ್ನೂ ಹಾಕಿಟ್ಟುಕೊಳ್ಳುವವರಿದ್ದಾರೆ, ಮಾವಿನ ಮಿಡಿಯನ್ನು ಹೆಚ್ಚು ಕಾಲ ಕಾಪಿಡಬೇಕಾದರೆ ಉಪ್ಪಿನಕಾಯಿ ಮಸಾಲೆ ಅರೆಯುವಾಗ ಹೊಸದಾಗಿ ತಯಾರಿಸಿದಂತಹ ಕಾದಾರಿದ ಉಪ್ಪು ನೀರನ್ನು ಬಳಸಬೇಕು.  ಇದೆಲ್ಲ ದೊಡ್ಡ ಪ್ರಮಾಣದಲ್ಲಿ ಮಾಡುವುದಿದ್ದರೆ ಮಾತ್ರ.

                                    
                 

0 comments:

Post a Comment