Pages

Ads 468x60px

Saturday 1 March 2014

ಚನ್ನಕೇಶವನ ಪ್ರಾಣಸಖೀ....









ಬೇಲೂರಿನ ಶಿಲ್ಪಕಲಾವೈಭವದ ದೃಶ್ಯಚಿತ್ರಗಳನ್ನು ಮಾತ್ರ ನೋಡಿದ್ದ ನನಗೆ ಪ್ರವಾಸದ ಸುವರ್ಣಾವಕಾಶ ಈಗ ದೊರೆಯಿತು. ಅನೇಕ ಐತಿಹಾಸಿಕ ಕಥಾನಕಗಳು ಬೇಲೂರಿನ ಶಿಲ್ಪಕಲಾವೈಭವವನ್ನು ಕೇಂದ್ರೀಕರಿಸಿ ಬರೆಯಲ್ಪಟ್ಟಿವೆ. ಕೆ.ವಿ. ಅಯ್ಯರ್ ಬರೆದಿರುವ ಐತಿಹಾಸಿಕ ಕಾದಂಬರಿ ' ಶಾಂತಲಾ ' ಅವುಗಳಲ್ಲೂಂದು. 1964ರಲ್ಲಿ ಬೇಲೂರಿನ ಹಿನ್ನಲೆಯಲ್ಲೇ ಕನ್ನಡ ಚಲನಚಿತ್ರವೂ ಬಂದಿದೆ. ' ಅಮರಶಿಲ್ಪಿ ಜಕಣಾಚಾರಿ ' ಎಂಬ ಈ ಸಿನೆಮಾ ಆ ಕಾಲದ ಮೊದಲ ವರ್ಣಚಿತ್ರವೂ ಆಗಿ ಖ್ಯಾತಿ ಪಡೆದಿದೆ, ಎಂದೂ ಮರೆಯಲಾಗದ ಮಧುರ ಗೀತೆಗಳೂ ಇದರಲ್ಲಿವೆ, ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಮಂಕುತಿಮ್ಮನ ಕಗ್ಗದಂತಹ ಆದ್ಯಾತ್ಮ ಲಹರಿಯನ್ನು ಬರೆದಿರುವ ಡಿ.ವಿ. ಗುಂಡಪ್ಪನವರೂ ಇಲ್ಲಿನ ನೃತ್ಯಶಿಲ್ಪಗಳ ಮೇಲೆ ಶೃಂಗಾರ ಕಾವ್ಯವನ್ನೇ ಬರೆದಿದ್ದಾರೆ.

ರಾಜಾಶ್ರಯವೇ ಕುಶಲಕಲೆಗಳಿಗೆ ಮೂಲ ಬಂಡವಾಳ, ಇತಿಹಾಸದ ಪುಟಗಳನ್ನು ಅವಲೋಕಿಸಿದಂತೆ ತಿಳಿದು ಬರುವ ವಾಸ್ತವ. ಇಂತಹ ಐತಿಹಾಸಿಕ ಸ್ಮಾರಕಗಳನ್ನು ಸಂದರ್ಶಿಸುವ ಮೊದಲು ಸ್ವಲ್ಪವಾದರೂ ಇತಿಹಾಸದ ಪಠ್ಯಗಳನ್ನು ಓದಿಕೊಳ್ಳುವುದು ಉತ್ತಮ. ಅಂದ ಹಾಗೆ ನಾವು ಹೋದ ದಿನ ಶಾಲಾ ವಿದ್ಯಾರ್ಥಿಗಳ ಪ್ರವಾಹವೇ ಅಲ್ಲಿತ್ತು. ಅಧ್ಯಾಪಕರ ಹಿಂದೆ ಶಿಸ್ತಿನ ಸಿಪಾಯಿಗಳಂತೆ ವಿದ್ಯಾರ್ಥಿಗಳ ಸಮೂಹ. ಬೇಲೂರಿನ ಇತಿಹಾಸವನ್ನು ಹೇಳುವಂತಹ ಪುಸ್ತಕಗಳೂ ಮಾರಾಟದ ಸರಕುಗಳಾಗಿ ಲಭ್ಯವಿದ್ದವು. ಉಳಿಯ ಪೆಟ್ಟಿನಿಂದ ಮೈದಳೆದಿರುವ ಈ ಶಿಲಾ ಕೋಮಲಾಂಗಿಯರ ವರ್ಣನೆ ಲೇಖನಿಗೆ ನಿಲುಕುವಂತಹುದಲ್ಲ, ನೋಡಿಯೇ ಆನಂದಿಸಬೇಕು. ನೋಡುತ್ತಾ, ನೋಡುತ್ತಾ ಮುಂದುವರಿದಂತೆ ನೆಲದ ಮೇಲೆ ಹಾಸಿರುವ ಕಲ್ಲುಗಳ ಮೇಲೂ ಏನೇನೋ ರೇಖೆಗಳು. ಗಮನಿಸಿದಾಗ ಪಗಡೆಯಾಟದ ಹಾಸು, ಚೆನ್ನೆಯಾಟದ ಗುಳಿಗಳು ಕಾಣಿಸಿದುವು. ಇಂತಹವೇ ರಚನೆಗಳು ಹಳೇಬೀಡಿನಲ್ಲೂ ಇವೆ, ಚದುರಂಗದಾಟದ ಕಳವೂ ಅಲ್ಲಿ ಇದ್ದಿತು. ಒಳಾಂಗಣ ಕ್ರೀಡೆಗಳ ಹಾಸುಗಳು ಇಂತಹ ಬಟಾಬಯಲಿನಲ್ಲಿ ಏಕಿವೆ ?

ನನಗೋ ಆಶ್ಚರ್ಯ, " ನೋಡಿ ಇಲ್ಲಿ, ಇದು ಚೆನ್ನೆಮಣೆ ಗುಳಿ ಅಲ್ವೇ ?"

" ಇರಬಹುದು, ಆ ಕಾಲದಲ್ಲೂ ಜನರಿಗೆ ಹೊತ್ತು ಕಳೆಯಲು ಆಟಗಳು ಬೇಕಲ್ಲ " ಅಂದರು ನಮ್ಮೆಜಮಾನ್ರು " ನಮ್ಮ ಹಾಗೆ ದಿನವಿಡೀ ಬೆಳಕು ಎಲ್ಲಿಂದ.... ಸಂಜೆಗತ್ತಲಾದ ಮೇಲೆ ಮೂಲೇಲಿ ಕೂತ್ಕೊಂಡು ಆಡ್ತಿರಬಹುದು " ನಮ್ಮೆಜಮಾನ್ರ ಕಲ್ಪನಾ ಲಹರಿ ಮುಂದುವರಿಯುತ್ತಾ " ಆಡಿ ಸಾಕಾಯ್ತು ಅನ್ಸಿದಾಗ ಹಾಸುಗಲ್ಲು ಆಗ್ಹೋಗಿದೆ ...."

" ಇರಬಹುದೇನೋ "

ಬೇಲೂರಿನ ಕೆತ್ತನೆ ಕೆಲಸಗಾರರು ಇಲ್ಲಿ ಕುಶಲಕಲೆಯನ್ನು ಅರ್ಧಕ್ಕೇ ನಿಲ್ಲಿಸಿದಂತಹ ಶಿಲೆಗಳೂ ಎದುರಾದುವು. ತೃಪ್ತಿ ಎಂಬುದು ಯಾವ ಕಲಾವಿದನಿಗೂ ಸಿಗುವಂತಹುದಲ್ಲ, ಬಹುಶಃ ಅವರ ಕೆಲಸಗಳು ಮುಂದೆಲ್ಲಿಯೋ ಮುಂದುವರಿದಿವೆ. ನಾವೂ ಮುಂದುವರಿಯೋಣ.






Posted via DraftCraft app

0 comments:

Post a Comment