Pages

Ads 468x60px

Saturday 8 March 2014

ಕಳೆದು ಹೋದ ಕೀಲಿ ಕೈ ?







ನಮ್ಮ ಪಯಣ ಹಳೇಬೀಡಿಗೆ ಮುಂದುವರಿಯಿತು.   ಬೇಲೂರಿನಿಂದ ಇಲ್ಲಿಗೆ ಹೆಚ್ಚು ದೂರವೇನಿಲ್ಲ.   ಬೇಲೂರಿನ ಕುಶಲಕರ್ಮಿಗಳು ಇಲ್ಲಿಗೆ ಮುಂದುವರಿದರೆಂದು ಹೇಳಿದರೂ ತಪ್ಪಾಗಲಾರದು.   ಶಿಲ್ಪ ಸೌಂದರ್ಯ,   ಕೆತ್ತನೆ ಕೆಲಸಗಳು ಬೇಲೂರಿಗಿಂತಲೂ ಅದ್ಭುತವಾಗಿವೆ.   ಕಲೆ ಎಂಬುದು ನಿಂತ ನೀರಿನಂತಲ್ಲ,   ಅದೊಂದು ನಿರಂತರ ಪ್ರವಾಹ.   ಚೆಲುವಿನ ಹೊಸ ಬೀಡನ್ನು ಕಟ್ಟಿದರೂ ಶಿಲ್ಪಿಯ ಕನಸೆಲ್ಲವನ್ನೂ ಭಗ್ನಗೊಳಿಸುವಂತಹ ದುರಾಕ್ರಮಣ ಇಲ್ಲಿ ನಡೆದಿದೆ.   ಕೈ ಮುರಿದ ದ್ವಾರಪಾಲಕರ ವಿಗ್ರಹಗಳ ಸ್ವಾಗತದೊಂದಿಗೆ ಎದುರಾಗುವ ದೇಗುಲ,   ಚರಿತ್ರೆಯ ಪುಟಗಳನ್ನು ಓದಿ ತಿಳಿದವರಿಗೆ ಕಣ್ಣಂಚು ತೇವವಾಗದಿರದು.

ಹಳೇಬೀಡಿನಲ್ಲಿ ಸುತ್ತಾಡುತ್ತಾ ಇರಬೇಕಾದರೆ ಮದ್ಯಾಹ್ನ ಆಗಿತ್ತು.   ಮಟಮಟ ಬಿಸಿಲು,   ಚಳಿಯೊಂದಿಗೆ ಬಿಸಿಲೂ ಹಿತವಾಗಿದ್ದರೂ ಬಿಸಿಲು ಬಿಸಿಲೇ ಅಲ್ಲವೇ?    " ಶೀಲಾ,  ನಂಗೇನೋ ಹಿತವಾಗ್ತಾ ಇಲ್ಲ,  ಮನೆ ತಲಪಿದ್ರೆ ಸಾಕು,  ಈಗ ಊಟಾನೂ ಬೇಡ "  ಅನ್ನುತ್ತಾ ಮುಂದುವರಿಸಿದೆ,   " ಇಲ್ಲೆಲ್ಲಾದ್ರೂ ಕುಟಜಾರಿಷ್ಟ ಸಿಗುತ್ತೋ ಇಲ್ವೋ "

ಹಳೇಬೀಡಿನಿಂದ ಮೂವರೂ ಹೋಟಲ್ ಊಟಕ್ಕೆ ತೆರಳಿದರು.   ನಾನು ಮಾತ್ರ ಕಾರಿನೊಳಗೆ ಉಪವಾಸ ವ್ರತಧಾರಿಯಾಗಿ ಕುಳಿತಿರಬೇಕಾಯಿತು.    ಹೋಟಲಿನಿಂದ ಬರುತ್ತಿದ್ದಂತೆ ಗಿರೀಶ್ ಸೋಡಾ ಬಾಟಲ್ ತಂದ.   ಅದನ್ನು ಎರಡು ಗುಟುಕು ಕುಡಿದಾಗ ಡರ್ರನೆ ತೇಗು ಬಂದು ಶರೀರ ಹಗುರಾಗಿ ಮನ ಹಕ್ಕಿಯಂತಾಯಿತು.   ದಾರಿಗುಂಟ ಹೋಗುವಾಗ ಅಲ್ಲಲ್ಲಿ ಮೆಡಿಕಲ್ ಶಾಪ್ ಕಂಡಾಗ ಇಳಿದು ಕುಟಜಾರಿಷ್ಟ ಇದೆಯೋ ಅಂತ ಕೇಳೂದೂ,  ಇಲ್ಲಾಂತ ವಾಪಸ್ಸಾಗುವುದೂ ನಡೆಯಿತು.    ಚಿಕ್ಕಮಗಳೂರಿಂದ ಮುಂದೆ ಹೋದಂತೆ ಮೂಡಿಗೆರೆ,  ಅರಣ್ಯ ವಲಯ ಎದುರಾಯಿತು.   ನಿರ್ಜನ ಪ್ರದೇಶ,   ದಾರಿಯುದ್ದಕ್ಕೂ ಮಂಗಗಳು ಸ್ವಾಗತ ಕೋರಿದವು,  ಶೀಲಾ ಮಂಗಗಳ ವಿಧ ವಿಧವಾದ ಫೋಟೋ ಕಾರಿನೊಳಗಿಂದಲೇ ಕ್ಲಿಕ್ಕಿಸಿದಳು.




" ಈಗ ಹೀಗೇ ಧರ್ಮಸ್ಥಳ ರೂಟಿನಲ್ಲಿ ಹೋದ್ರೆ ಐದಕ್ಕೆಲ್ಲಾ ಮನೆಯಲ್ಲಿರ್ತೀವಿ ತಿಳೀತಾ ..."

" ಹ್ಞೂ,  ಸರಿ.   ಆದ್ರೆ ನಮ್ಮ ಸೀರೆ ಪರ್ಚೇಸ್ ಬಿಟ್ ಬಿಡೂದಾ "

" ಇಲ್ಲಿಂದ ಸೀರೇನಾ...."

" ಬೇಡ ಬಿಡಿ,  ಹಾಗಿದ್ರೆ ಮನೆಗೆ ಹೋದ್ಮೇಲೆ ದುಬೈ ಸೀರೆ ತರಿಸ್ತೇನೆ,  ನಂಗೊಂದು,  ಶೀಲಾಗೊಂದು "

" ದಾರಿಯಲ್ಲಿ ಮಡಂತ್ಯಾರ್ ಬರ್ತದೆ,  ಅಲ್ಲಿ ದೊಡ್ಡ ಜವುಳಿ ಅಂಗಡಿ ಇದೆಯಂತೆ,  ನನ್ನ ಫ್ರೆಂಡ್ ಹೇಳಿದ್ದು,   ಅಲ್ಲಿಂದ ಸೀರೆ...." ಅಂದ ಗಿರೀಶ್.

ಸೀರೆ ಸಮಸ್ಯೆ ಬಗೆಹರಿಯಿತು.   ಒಂದು ಪುಸ್ತಕ ಬೇಲೂರಿನಿಂದ ಖರೀದಿಸಿ ಆಗಿತ್ತು.   ಅದೇನೂ ವಿಶೇಷವಾದದ್ದಲ್ಲ,  ಹೀಗೇ ಸುಮ್ಮನೆ ಪ್ರವಾಸಿಗರ ಕೈಪಿಡಿ.   ಬೇಲೂರು,  ಹಳೇಬೀಡು ಹಾಗೂ ಇನ್ನಿತರ ಚಾರಿತ್ರಿಕ ಸ್ಮಾರಕಗಳ ಬಗ್ಗೆ ಅಲ್ಪಸ್ವಲ್ಪ ವಿವರಣೆ ಅದರಲ್ಲಿತ್ತು.

ಐದಾರು ದಿನಗಳಿಂದ ಡ್ರೈವಿಂಗ್ ಸೀಟಿನಲ್ಲಿ ವಿರಾಜಮಾನನಾಗಿದ್ದ ಗಿರೀಶ್ ನಿಜವಾಗಿಯೂ ಆಯಾಸಗೊಂಡಿದ್ದ.  ಕಾರು ಸಾವಧಾನವಾಗಿ ಚಲಿಸಿತು.   ಸಂಜೆ ಹೊತ್ತಿಗೆ ಮಡಂತ್ಯಾರ್ ತಲಪಿದೆವು,   ಮೊದಲೇ ನಮ್ಮೆಜಮಾನ್ರು ಅಂದಂತೆ ಈ ಹೊತ್ತಿಗೆ ನಾವು ಮನೆ ತಲಪಬೇಕಾಗಿತ್ತು.   ಜವುಳಿ ಅಂಗಡಿಯೆದುರು ಕಾರು ನಿಂತಿತು.   ಬಹುಶಃ ಮೂರು ಮಹಡಿಗಳ ದೊಡ್ಡ ಕಟ್ಟಡ,   ಲಿಫ್ಟ್ ಸೌಕರ್ಯ ಕೂಡಾ ಇದೆ.   ಬೆಂಗಳೂರನ್ನೂ ಮೀರಿಸುವ ಅತ್ಯಾಧುನಿಕತೆ ಈ ಹಳ್ಳಿಯಂತಹ ಪರಿಸರದಲ್ಲೂ ಇದೆ!

ನನಗೊಂದು ಮಗ್ಗದ ಸೀರೆ ಆಯ್ಕೆ ಮಾಡಿಟ್ಟು ತೆಪ್ಪಗೆ ಒಂದು ಕಡೆ ಕುಳಿತು  ಕಾಲಹರಣ ಮಾಡಬೇಕಾಯಿತು.  ಶೀಲಾ ಸೀರೆಯೊಂದಿಗೆ ಚೂಡಿದಾರ್,  ಇನ್ನೂ ಏನೇನೋ ಖರೀದಿಸುತ್ತ ಮೇಲೆ ಹತ್ತುತ್ತ,  ಕಳಗಿಳಿದು ಬರಬೇಕಾದರೇ ಸುಮಾರು ಹೊತ್ತಾಯಿತು.    ಗಿರೀಶ್ ಬಟ್ಟೆ ಮಳಿಗೆಯೊಳಗೆ ನಾಪತ್ತೆಯಾಗಿದ್ದ.   ಹೋಟಲ್ ನಲ್ಲಿ ಗಡದ್ದಾಗಿ ತಿಂಡಿ ತಿಂದು ಶೀಲಾ ಬಂದು ಕಾರು ಹತ್ತಿ ಕುಳಿತಳು. 
 
 " ಹಾಕೂದು ಕರೀ ಪ್ಯಾಂಟು,  ಬಿಳೀ ಶರಟು,   ಅದನ್ನು ಸೆಲೆಕ್ಟ್ ಮಾಡ್ಬೇಕಾದ್ರೇ ಗಂಟೆಗಟ್ಟಳೆ ....."  ಅಂದಿದ್ದು ಶೀಲಾ.

ನಾವು ಮನೆ ತಲಪಿದ ಹಾಗೆ ಬಾಗಿಲು ತೆಗೆಯುವ ಬಗೆ ಹೇಗೆ ಎಂಬ ಚಿಂತೆಯಲ್ಲಿ ತೊಡಗಿದ್ದೆವು.   " ಕೀಲಿಕೈ ಕಳೆದುಹೋಗಿದೆ ಅಂತ ಇನ್ನು ಗಿರೀಶನ ಬಳಿ ಹೇಳಬೇಕಾಗ್ತದೆ,  ಆದ್ರೆ ಅವನೂ ಮನೆ ತನಕ ಬರೂದು ಬೇಡ,  ಅದನ್ನು ಹೇಗಾದ್ರೂ ತಪ್ಪಿಸಬೇಕು "  ಎಂದರು ನಮ್ಮವರು.   ಸುಮ್ಮನೇ ನಮ್ಮ ಪಡಿಪಾಟಲಿನಲ್ಲಿ ಅವನೂ ಭಾಗಿಯಾಗುವ ಅವಶ್ಯಕತೆ ಇಲ್ಲವಷ್ಟೆ? 

ಉಪವಾಸ ವ್ರತದಲ್ಲಿದ್ದ ನನಗೆ ಮುಸುಂಬಿ ಜ್ಯೂಸ್ ಬಂದಿತು.   ತೊಂದರೆಯಿಲ್ಲ ಅಂತ ಅದನ್ನು ಕುಡಿದಾಯ್ತು.   ಗಿರೀಶ್ ಬರಲು ಮತ್ತೂ ತಡವಾಯ್ತು.   ಕಾರಣವೇನೂ ಅಂತ ವಿಚಾರಿಸಿದಾಗ ಪ್ಯಾಂಟ್ ಹೊಲಿಯಲು ಕೊಟ್ಟಿದ್ದನೆಂದು ತಿಳಿಯಿತು.   ನಿಧಾನವೇ ಪ್ರಧಾನವಾಗಿ ಹೊರ ಬಂದ ಗಿರೀಶ್ ಕಾರು ಮುನ್ನಡೆಸಿದ.   

ಮನೆ ಸಮೀಪಿಸುತ್ತಿದ್ದಂತೆ ಗಿರೀಶನಿಗೂ ನಮ್ಮ ಸಮಸ್ಯೆ ಬಗ್ಗೆ ಹೇಳಲಾಯಿತು.   ಮನೆ ಮುಂದಿನ ರಸ್ತೆಯಲ್ಲೇ ಕಾರನ್ನು ನಿಲ್ಲ ಹೇಳಿದ ನಮ್ಮೆಜಮಾನ್ರು  " ಮೊದಲು ಮನೆಗೆ ಹೋಗಿ ನಿನ್ನ ವ್ಯಾನಿಟಿ ಬ್ಯಾಗ್ ಒಳಗೆ ಕೀಲಿ ಕೈ ಇದೆಯಾ ನೋಡು " ಅಂದರು.   ನಾನು ಇಳಿದೆ,  ರಾತ್ರಿಯಾಗಿತ್ತು.   ತಿಂಗಳ ಬೆಳಕಿನಲ್ಲಿ ಮನೆಗೆ ಬಿರಬಿರನೆ ಇಳಿದು ಬಂದು ವರಾಂಡದ ಜಗಲಿಯಲ್ಲಿ ವ್ಯಾನಿಟಿ ಬ್ಯಾಗ್ ಬಿಡಿಸಿ ಒಳಗಿದ್ದ ಸರಕುಗಳನ್ನೆಲ್ಲ ಹೊರ ಹಾಕಲಾಗಿ,  ಉಹ್ಞು.. ಕೀಲಿ ಕೈ ಇರಲಿಲ್ಲ.    ಮನೆಗೆ ಅಂಟಿಕೊಂಡಂತಿರುವ ಇನ್ನೊಂದು ಕಟ್ಟಡದಲ್ಲಿ ಸ್ನಾನಗೃಹ ಇದ್ದಿದ್ದರಿಂದ ವೆರಾಂಡದಿಂದ ಇಳಿದು ಚೆನ್ನಾಗಿ ನೀರೆರೆದು ಕೈಕಾಲು ತೊಳೆದು ಬರುವ ಹೊತ್ತಿಗೆ ಕಾರಿನಲ್ಲಿದ್ದ ಲಗ್ಗೇಜ್ ಸಹಿತವಾಗಿ ಎಲ್ಲರೂ ಮನೆಗೆ ಬಂದರು.   

" ವ್ಯಾನಿಟಿ ಬ್ಯಾಗಲ್ಲಿ ಇಲ್ಲ " ಅಂತಂದೆ ಅಂಗಳದಲ್ಲಿದ್ದ ನಾನು.   ಬಟ್ಟೆಬರೆಗಳಿದ್ದ ಚೀಲಗಳೆಲ್ಲ ತಪಾಸಣೆಗೊಳಪಟ್ಟವು.   

" ಸಿಕ್ಕಿತು..." ಅನ್ನುತ್ತಾ ಶೀಲಾ ಕೈಯೆತ್ತಿದಳು.  

" ಎಲ್ಲಿತ್ತು ?"  ಅಂಗಳದಿಂದ ಒಳ ಬಂದೆ.

" ಈ ಪರ್ಸಿನಲ್ಲಿ " ಅನ್ನುತ್ತಾ ಒಂದು ದೊಡ್ಡದಾದ ಕಪ್ಪು ಪರ್ಸನ್ನು ಎತ್ತಿ ತೋರಿಸಿದಳು ಶೀಲಾ.
ನನಗೋ ನಮ್ಮವರಿಗೆ ಎರಡೇಟು ಬಾರಿಸುವಷ್ಟು ಸಿಟ್ಟು ಬಂದಿತು.

ಅದೇನಾಗಿತ್ತೂಂದ್ರೆ ನಾವು ಹೊರಡುವ ತಯಾರಿ ನಡೆಸುತ್ತಿದ್ದಾಗ ಚಳಿಗೆ ಕೋಟೂ ಇರಲಿ ಎಂದು ಕಪಾಟು ತಡಕಾಡಿ ಇದ್ದಬದ್ದ ಕೋಟುಗಳನ್ನೆಲ್ಲ ಹೊರಹಾಕಿದ್ದೆನಲ್ಲ,  ಆವಾಗ ಒಂದು ದೊಡ್ಡ ಹ್ಯಾಂಡ್ ಪರ್ಸ್ ಹೊರ ಬಂದಿತ್ತು.   " ಇಷ್ಟು ಚೆನ್ನಾಗಿದೆ ಈ ಪರ್ಸು,  ಒಳಗೆ ಕಟ್ಟಿಟ್ಟು ಏನ್ಮಾಡ್ತೀಯಾ?  ಪ್ರವಾಸ ಹೋಗುವಾಗ ಇದೂ ಇರಲಿ "  ಅಂತಂದು ತೆಗೆದಿಟ್ಟಿದ್ರು.   ಯಾರೂ ಕೇಳುವವರಿಲ್ಲದೆ ಕಾರಿನೊಳಗೇ ಬಿದ್ದುಕೊಂಡಿದ್ದ ಪರ್ಸಿನೊಳಗೆ ಭದ್ರವಾಗಿ ಇತ್ತು ನಮ್ಮ ಮನೆ ಬಾಗಿಲಿನ ಕೀಲಿ ಕೈ. ಕೀಲಿ ಕೈ ಬಿಟ್ರೆ ಬೇರೇನೂ ಆ ಪರ್ಸಿನೊಳಗೆ ಇರಲೂ ಇಲ್ಲ.

" ಅಂತೂ ಸಿಕ್ಕಿತಲ್ಲ,  ಇನ್ನು ಊಟ ಮಾಡಿಯೇ ಹೋಗಿ..." ಎಂದರು ಮನೆ ಯಜಮಾನ್ರು.   ನಾನೂ ಬೇಗನೇ ಒಳ ಹೋಗಿ ಅನ್ನಕ್ಕೆ ನೀರಿಟ್ಟೂ ಆಯ್ತು.


ಒಟ್ಟು ಹನ್ನೊಂದು ಕಂತುಗಳಲ್ಲಿ ಬರೆದಿರುವ ಈ ಪ್ರವಾಸ ಕಥನ ಇಲ್ಲಿಗೆ ಮುಗಿಯಿತು.




Posted via DraftCraft app

0 comments:

Post a Comment