Pages

Ads 468x60px

Saturday, 7 January 2017

ಅನಾನಸ್ ರಸದೂಟ
   
ಮಾವಿನಹಣ್ಣಿನ ಕಾಲದಲ್ಲೇ ಸಿಗುವ ಅನಾನಸ್ ಅಡಿಕೆ ತೋಟದ ಒಂದು ಉಪಬೆಳೆ.    ತೋಟದಂಚಿನಲ್ಲಿ,  ಬೇಲಿಯಂತೆ ನೆಟ್ಟು ಬಿಡಬಹುದಾದ ಅನಾನಸ್ ಹಣ್ಣುಗಳು ಕಾಡುಪ್ರಾಣಿಗಳ ಕಾಟದಿಂದಾಗಿ ಕೃಷಿಕರ ಕೈಗೆ ಸಿಗಲು ಹರಸಾಹಸ ಪಡುವಂತಾಗಿದೆ.   ಆದರೂ ಮನೆ ಮುಂದಿನ ಅಂಗಳದಲ್ಲಿ,  ಹಿತ್ತಲಲ್ಲಿ ಸಾಧ್ಯವಿದ್ದ ಹಾಗೆ ಬಳೆಸಿಕೊಳ್ಳಬಹುದಾಗಿದೆ.  ಉಷ್ಣವಲಯದ ಹಣ್ಣಾಗಿರುವುದರಿಂದ ಹೆಚ್ಚಿನ ನೀರನ್ನು ಬಯಸದು.  ನೀರು, ಗೊಬ್ಬರಗಳ  ವಿಶೇಷ ಆರೈಕೆ ದೊರೆತಲ್ಲಿ ಬೃಹತ್ ಗಾತ್ರದ ಫಲಗಳನ್ನು ನಿರೀಕ್ಷಿಸಬಹುದಾಗಿದೆ.   ಹಲಸಿನ ಕಾಯಿಯಂತೆ ಮುಳ್ಳುಗಳಿಂದ ಕೂಡಿದ ಈ ಹಣ್ಣನ್ನು ಕೇರಳೀಯರು  ' ಫರಂಗಿ ಚಕ್ಕ' ಅಂದಿದ್ದಾರೆ.   ಕೃಷಿಯ ಕ್ರಾಂತಿಯಿಂದಾಗಿ ಅನಾನಸ್ ಹಣ್ಣು ಈಗಂತೂ ವರ್ಷಪೂರ್ತಿ ಲಭ್ಯ.


ಬೇಸಿಗೆಯ ಫಲವಾಗಿರುವುದರಿಂದ ಜ್ಯೂಸ್ ಸವಿಯಲು ಚೆನ್ನ.    " ಅಮ್ಮ,  ನಿನ್ನ ಜ್ಯೂಸು ಗೀಸು ಏನೂ ಬೇಡ,  ಹಾಗೇ ಸುಮ್ಮನೆ ತಿಂತೇವೇ... "  ಅನ್ನುವ ಮಕ್ಕಳು,   ಹಾಗಾಗಿ ಅನಾನಸ್ ಜ್ಯೂಸು ನಾನು ಮಾಡಿಯೇ ಇಲ್ಲ.   ಆದರೂ ಜ್ಯೂಸ್ ಮಾಡೋದು ಹೇಗೇಂತ ತಿಳಿದಿರಬೇಡವೇ?


ಅನಾನಸ್ ಜ್ಯೂಸ್:   ಹುಳಿ ಮಿಶ್ರಿತ ಹಣ್ಣಾಗಿರುವುದರಿಂದ,  ಅವಶ್ಯಕತೆಗೆ ತಕ್ಕಷ್ಟು ಹೋಳುಗಳನ್ನು ಮಿಕ್ಸಿಯಲ್ಲಿ ತಿರುಗಿಸಿ,  ಸಿಹಿಗೆ ಸಕ್ಕರೆ,   ಚಿಟಿಕೆ ಉಪ್ಪು,  ಕಾಳುಮೆಣಸಿನಹುಡಿ ಉದುರಿಸಿ,  ಸಾಕಷ್ಟು ನೀರು ಕೂಡಿಸಿ,  ಬೇಕಿದ್ದರೆ ಐಸ್ ಚೂರುಗಳನ್ನೂ ಹಾಕಿಟ್ಟು ಕುಡಿಯಿರಿ.


ನೆರೆಕರೆಯ ಒಂದು ಮದುವೆಗೆ ಹೋಗಬೇಕಾಗಿ ಬಂದಿತ್ತು.   ಊರಿನ ಹತ್ತೂ ಸಮಸ್ತರು ಸೇರಿದಂತಹ ಸಭೆಯಲ್ಲಿ ನಮಗೂ ಮಗನ ಮದುವೆಯ ಆಮಂತ್ರಣ ಪತ್ರಿಕೆಯ ಬಟವಾಡೆಯೂ ಒಂದು ಉದ್ಧೇಶವಾಗಿತ್ತು.   ಈ ಮದುವೆಯ ಔತಣಕೂಟದಲ್ಲಿ ನನಗಂತೂ ಒಂದು ಹೊಸರುಚಿ ಲಭ್ಯವಾಯಿತು.   ಈ ಮೊದಲು ತಿಂದಿದ್ದೂ ಇಲ್ಲ,  ಅನಾನಸ್ ಪಾಯಸವೂ ಆಗುತ್ತೇಂತ ಗೊತ್ತೂ ಇರಲಿಲ್ಲ ಕಣ್ರೀ...


" ಗೇರುಬೀಜ,  ದ್ರಾಕ್ಷಿ,  ಏಲಕ್ಕಿ ಸುರಿಯಿರಿ,  ಬಾಳೇದಂಡೂ ಪಾಯಸಕ್ಕೆ ಆದೀತು.. "  ಅನ್ನೋರು ನಮ್ಮ ಗೌರತ್ತೆ.   ಆದ್ರೆ ಈ ಪಾಯಸವಂತೂ ಸಿಹಿ ಹುಳಿ ರುಚಿಯಿಂದಾಗಿ,  ಅಮೋಘ ಸುವಾಸನೆಯಿಂದಾಗಿ ತಿಂಡಿಪೋತರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.


ಊಟವಾದ ನಂತರ ಅಡುಗೆಶಾಲೆಗೆ ಹೋಗಿ ಅಡುಗೆ ಮುಖ್ಯಸ್ಥರ ಬಳಿ ಮಾಡೋ ವಿಧಾನವನ್ನು ಕೂಲಂಕುಷವಾಗಿ ತಿಳಿದೂ ಆಯ್ತು.   ನನ್ನ ಹಿತ್ತಲಿನಲ್ಲಿ ಕೆಲವಾರು ಅನಾನಸ್ ಹಣ್ಣುಗಳಿದ್ದುವು.   ಮಳೆಗಾಲ ಅಲ್ವೇ,  ಹಾಗೇ ಸುಮ್ಮನೆ ಹಣ್ಣು ತಿನ್ನುವ ಮಕ್ಕಳೂ ಮನೆಯಲ್ಲಿಲ್ಲ.   ಒಂದು ಪುಟಾಣಿ ಅನಾನಸ್ ಕಿತ್ತು ತಂದಿದ್ದಾಯ್ತು.


ನಮ್ಮ ಅಗತ್ಯವೆಷ್ಟೆಂದು ನೋಡಿಕೊಂಡೇ ಸಿಹಿತಿಂಡಿಗಳನ್ನು ಮಾಡುವ ಅಭ್ಯಾಸ ಉತ್ತಮ,   ನೆಂಟರಿಷ್ಟರು ಇದ್ದರೆ ಲೆಕ್ಕಾಚಾರ ಮಾಡುವುದಕ್ಕಿಲ್ಲ.   ಇರೋರು ನಾವಿಬ್ಬರು,  ಜೊತೆಗೊಬ್ಬ ಚೆನ್ನಪ್ಪ,   ಅಳತೆಯ ಪ್ರಮಾಣ ಒಂದು ಲೀಟರ್ ಸಾಕು.

ಅನಾನಸ್ ನಾಲ್ಕಾರು ಹೋಳುಗಳು ಸಾಕು.  ಮಿಕ್ಸಿಯಲ್ಲಿ ತಿರುವಿ ರಸ ಮಾಡಿದ್ರಾಯ್ತು,   ಜಾಲರಿ ತಟ್ಟೆಯಲ್ಲಿ ಶೋಧಿಸುವ ಅಗತ್ಯವಿಲ್ಲ.


ಒಂದು ತೆಂಗಿನಕಾಯಿ,  ಅರೆದು ಹಾಲು ತಗೆಯಿರಿ.  ದಪ್ಪ ಹಾಲು,  ನೀರು ಹಾಲು ಪ್ರತ್ಯೇಕ ಇರಿಸಿ.

4 - 5  ಚಮಚ ಅಕ್ಕಿಹಿಟ್ಟು.

ಸಿಹಿಗೆ ಬೆಲ್ಲ.   ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಎರಡು ವಿಧ ಪಾಯಸಗಳಿರುತ್ತವೆ,  ಸಕ್ಕರೆಯ ಸಿಹಿ ಹಾಗೂ ಬೆಲ್ಲದ ಸಿಹಿ,  ಈ ಥರ.   ನಾನು ಉಂಡ ಪಾಯಸ ಬೆಲ್ಲ ಹಾಕಿದುದಾಗಿತ್ತು.   ನಾವೂ ಈಗ ಬೆಲ್ಲವನ್ನೇ ಹಾಕೋಣ,   ಅದೂ ಒಂದು ಬಗೆಯ ಕಲರ್ ಕೊಡುತ್ತೆ.


ದಪ್ಪತಳದ ಪಾತ್ರೆ ಒಲೆಗೇರಲಿ.

ಅಕ್ಕಿಹಿಟ್ಟು ನೀರು ಕಾಯಿಹಾಲಿನಲ್ಲಿ ಬೇಯಲಿ.

ತಳ ಹಿಡಿಯದಂತೆ ಸೌಟು ಆಡುತ್ತಿರಲಿ.


ಹಿಟ್ಟು ಬೆಂದಿತು.

ಬೆಲ್ಲ ಹಾಗೂ ಅನಾನಸ್ ರಸ ಎರೆಯಿರಿ.

ಬೆಲ್ಲ ಕರಗಿತು.

ಅನಾನಸ್ ಸುವಾಸನೆ ಬಂದಿತು.

ದಪ್ಪ ಕಾಯಿಹಾಲು ಎರೆಯಿರಿ.

ದ್ರಾಕ್ಷಿ ಗೇರುಬೀಜಗಳನ್ನು ಹಾಕಿದಷ್ಟೂ ಚೆನ್ನ,  ಏಲಕ್ಕಿ ಬೇಡ,  ಅನಾನಸ್ ಸುವಾಸನೆಯ ಮುಂದೆ ಏಲಕ್ಕಿ ಹಾಕಿದ್ರೂ ಗೊತ್ತಾಗದು.


ಶೀಘ್ರಗತಿಯಲ್ಲಿ ಮಾಡಬಹುದಾದ ಈ ಪಾಯಸವನ್ನು ನಾನಂತೂ ಮುಗಿಯುವ ತನಕ ಕುದಿಸಿ ಇಟ್ಕೊಂಡೆ,  ಕೊನೆಯ ಹಂತದಲ್ಲಿ ಪಾಯಸವು ಹಾಲುಬಾಯಿ ಆಗಿಹೋಯಿತು!


ಮುಂದೆ ನಡೆಯಲಿರುವ ಮಗನ ಮದುವೆಯ ಔತಣಕೂಟದಲ್ಲಿ  ' ಅನಾನಸ್ ಪಾಯಸ ಮಾಡ್ಸಿಯೇ ಸಿದ್ಧ. '  ಅಂದ್ಕೊಂಡಿದ್ದೂ ಆಯ್ತು.


 ಮದುವೆಯ ಔತಣಕೂಟದಲ್ಲಿ ಪಾಯಸ ಒಂದಿದ್ದರೆ ಸಾಕೇ,  ಹೋಳಿಗೆ ಇರಲೇಬೇಕು.  ಕಡ್ಲೆಬೇಳೆ, ಹೆಸ್ರಬೇಳೆ,  ತೊಗ್ರಿಬೇಳೆ...  ಮುಗಿಯದ ಬೇಳೆಕಾಳುಗಳ ಪಟ್ಟಿ.


" ಬೆಲೆ ಎಷ್ಟು ಗೊತ್ತೇನಕ್ಕಾ? " ಕೇಳಿದ ನೆರೆಮನೆ ಈಚಣ್ಣನೇ ಉತ್ತರ ಕೊಟ್ಟಿದ್ದು ಹೀಗೆ,  " ಕೇಜೀಗೆ ಇನ್ನೂರು ರುಪಾಯಿ ಕೆಳಗೆ ಯಾವ ಬೇಳೆಕಾಳೂ ಸಿಗಲ್ಲ.. "


ಅಂತೂ ಅನಾನಸು ಪಾಯಸಕ್ಕೆ ಎಲ್ಲರ ಅನುಮೋದನೆ ದೊರೆತು,  ಔತಣದೂಟದಲ್ಲಿ ಜಯಭೇರಿ ಭಾರಿಸಿತು ಎಂದು ಬೇರೆ ಹೇಳಬೇಕಾಗಿಲ್ಲ.   ನಮ್ಮ ಮನೆಯ ಹಿರಿಯ ಸದಸ್ಯೆ ಗೌರತ್ತೆ ಕೂಡಾ  " ಇಲ್ಲಿಯತನಕ  ಅನಾನಸು ಪಾಯಸ ತಿಂದು ಗೊತ್ತೇ ಇಲ್ಲ... " ಅನ್ನುವವರೆಗೆ ಪ್ರಚಾರ ಗಿಟ್ಟಿಸಿಕೊಂಡ ಪಾಯಸ ಇದು.   ಕೆಲವರಂತೂ ಯಾವ ಬಗೆಯ ಪಾಯಸವೆಂದು ತಿಳಿಯದೇ ನನ್ನ ಬಳಿ ಕೇಳಿ ತಿಳಿದುಕೊಂಡರು.


" ಅಕ್ಕ,  ಈ ಮಳೆಗಾಲದ ಹಣ್ಣು,  ಸಾರು ಮಾಡಲಿಕ್ಕೆ ಫಸ್ಟು. " ಎಂದ ಚೆನ್ನಪ್ಪ.

" ಹ್ಞೂ,  ಅದೂ ಮಾಡೋಣ,   ಮಾವಿನಹಣ್ಣು ಸಾರಿನ ಹಾಗೆ ಮಾಡಿದ್ರಾಯ್ತಲ್ಲ. "


ಅನಾನಸ್ ಹೋಳುಗಳನ್ನು ಅರೆದುಕೊಳ್ಳಿ.   ನೀರು, ರುಚಿಗೆ ಉಪ್ಪು,  ಸಿಹಿಗೆ ಬೆಲ್ಲ ಕೂಡಿಸಿ ಕುದಿಸಿ ಒಗ್ಗರಣೆ ಕೊಡುವಲ್ಲಿಗೆ ಸಾರು ಬಂದಿತು.   ಕುದಿಸದೇ ಇಟ್ಕೊಂಡಿರಾ,  ಹಸಿಗೊಜ್ಜು ಅನ್ನಿ.   ಅಂತೂ ಮಾವಿನಹಣ್ಣಿನ ರಸವತ್ತಾದ ಅಡುಗೆಗಳೆಲ್ಲವನ್ನೂ ಅನಾನಸ್ ಒದಗಿಸುವುದನ್ನು ಕಂಡು ಬಾಯಿ ಚಪ್ಪರಿಸುತ್ತಾ ಉಣ್ಣಲು ಕಲಿಯಿರಿ.

ಅನಾನಸ್ ಶಿರಾ:


ಒಂದು ಪಾವು ಚಿರೋಟಿ ರವೆ,  ಹುರಿಯಿರಿ.

ಮಧ್ಯಮ ಗಾತ್ರದ ಅನಾನಸ್,  ಅರ್ಧ ಸಾಕು,  ಹೆಚ್ಚು ಹಾಕಿದ್ರೆ ಹುಳಿಯಾದೀತು.

ಒಂದೂವರೆ ಪಾವು ಸಕ್ಕರೆ.

ಅರ್ಧ ಪಾವು ತುಪ್ಪ.


ಅನಾನಸ್ ಹಣ್ಣುಗಳನ್ನು ಅರೆದು ರಸ ಮಾಡಿದ್ರಾ,


ಒಂದು ಪಾವು ಚಿರೋಟಿ ರವೆ ಬೇಯಲು ಎರಡು ಪಾವು ನೀರು ಬೇಕು,   ಅನಾನಸ್ ರಸ ಹಾಗೂ ಹಾಲು ಕೂಡಿ ಬೇಯಿಸಿದರಾಯಿತು.


ಬೆಂದ ನಂತರ ಸಕ್ಕರೆ ಹಾಕುವುದು.  ಸಕ್ಕರೆ ಕರಗುತ್ತ ಬಂದಂತೆ ತುಪ್ಪವನ್ನೂ ಎರೆಯುತ್ತಾ ಪಾಕ ಬರುವ ತನಕ ಸೌಟಾಡಿಸುತ್ತಾ ಕಾಯಿಸಿ.  ಬಾಣಲೆಯಿಂದ ಏಳುವ ಹಂತ ಬಂದಾಗ ಉಳಿದ ತುಪ್ಪವನ್ನೂ ಎರೆದು ದ್ರಾಕ್ಷಿ,  ಗೇರುಬೀಜಗಳನ್ನು ಉದುರಿಸಿ,  ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ ಬೇಕಾದ ಹಾಗೆ ತೆಗೆದು ತಿನ್ನಿ.


ತುಪ್ಪ ಹಾಗೂ ಸಕ್ಕರೆ ದುಪ್ಪಟ್ಟು ಹಾಕಿದ್ರಾ,   ಕೇಸರಿಬಾತ್ ಬಂದಿತು!


ಅನಾನಸ್ ಮೆಣಸ್ಕಾಯಿ:


ಊಟದೊಂದಿಗೆ ಬಳಸಬಹುದಾದ ಈ ವ್ಯಂಜನ,  ಔತಣಕೂಟಗಳಲ್ಲಿ ಪ್ರಮುಖಸ್ಥಾನ ಪಡೆದಿದೆ.  ಮಾಡೋಣ ಹೀಗೆ, 


2 ಚಮಚ ಕೊತ್ತಂಬರಿ

1 ಚಮಚ ಉದ್ದಿನಬೇಳೆ

4 - 6 ಒಣಮೆಣಸು

3 ಚಮಚ ಎಳ್ಳು

ಹುರಿಯಿರಿ.

ಅರ್ಧ ಕಡಿ ತೆಂಗಿನತುರಿಯೊಂದಿಗೆ ಅರೆಯಿರಿ. ಚಿಟಿಕೆ ಅರಸಿಣ,


ಅನಾನಸ್ ಹೋಳುಗಳನ್ನು ಉಪ್ಪು, ಬೆಲ್ಲದೊಂದಿಗೆ ಬೇಯಿಸಿ,  ಅರೆದ ಮಸಾಲೆ ಹಾಕಿ ಕುದಿಸಿ, ಒಗ್ಗರಣೆ ಕೊಡುವಲ್ಲಿಗೆ ಮೆಣಸ್ಕಾಯಿ ಸಿದ್ಧ.


ಅನಾನಸ್ ಆರೋಗ್ಯದಾಯಕ ಹಣ್ಣೆಂಬುದರಲ್ಲಿ ಸಂಶಯಕ್ಕೆಡೆಯಿಲ್ಲ.   ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವ ಈ ಹಣ್ಣನು ನಿಯಮಿತವಾಗಿ ಸೇವಿಸಿ.   ಸಸ್ಯಶಾಸ್ತ್ರೀಯವಾಗಿ ananas comosus ಎಂಬ ನಾಮಕರಣ ಪಡೆದಿರುವ,  ವಿದೇಶೀ ನೆಲದಿಂದ ಬಂದಂತಹ ಈ ಪೈನ್ಆ್ಯಪಲ್ ನಮ್ಮ ಮಣ್ಣಿನ ಗುಣಧರ್ಮಗಳಿಗೆ ಹೊಂದಿಕೊಂಡು ರಸವತ್ತಾದ ಅಡುಗೆಗಳಿಗೂ ಇದನ್ನು ಬಿಟ್ರೆ ಇನ್ನೊಂದಿಲ್ಲ ಎಂಬಂತೆ ಮೆರೆಯುತ್ತಿದೆ.  ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ನವಂಬರ್, 2016.                                                 


0 comments:

Post a Comment