Pages

Ads 468x60px

Sunday 3 September 2017

ಉಪ್ಪುಸೊಳೆಯ ಸೋಂಟೆ

 
              






ಜಾಡಿಯಲ್ಲಿರುವ ಹಿಂದಿನ ವರ್ಷದ ಉಪ್ಪುಸೊಳೆಯನ್ನು ಪಲ್ಯ,  ಹುಳಿಬೆಂದಿ,  ಮೇಲಾರ ಇತ್ಯಾದಿಗಳನ್ನು ಮಾಡಿ ತಿಂದರೂ ಮುಗಿಯದಾಯಿತು.   ಅಷ್ಟಕ್ಕೂ ಜಾಡಿಯಲ್ಲಿ ತುಂಬಿಸಿದ ಸೊಳೆಗಳು ಕೇವಲ ಒಂದೇ ಹಲಸಿನಕಾಯಿಯದ್ದು!   ಉಂಡ್ಳಕಾಳು,  ಸೊಳೆರೊಟ್ಟಿಗಳನ್ನು ತಿನ್ನಲು ಮಕ್ಕಳ ಸೈನ್ಯ ಮನೆಯಲ್ಲಿದ್ದರಾಗುತ್ತಿತ್ತು.


ಸೋಂಟೆ ಮಾಡಿದರೆ ಹೇಗೆ?  ಈಗ ಜಿಟಿಜಿಟಿ ಮಳೆ ಬೇರೆ,  ಕುರುಕುರು ತಿನ್ನಲು ಸೋಂಟೆ ಉತ್ತಮ ಎಂದು ಅಭಿಪ್ರಾಯ ಮೂಡಿತು.   ಜಾಡಿಯಲ್ಲಿ ಬೆಚ್ಚಗೆ ಕೂತಿದ್ದ ಸೊಳೆಗಳು ಹೊರ ಬಂದಾಗ ತಣ್ಣಗೆ ನೀರಿನಲ್ಲಿ ಹಾಕಿಟ್ಟು ಜಾಡಿಯನ್ನು ತೊಳೆದಿರಿಸಲು ಚೆನ್ನಪ್ಪನ ಸುಪರ್ದಿಗೆ ಬಿಟ್ಟೂ ಆಯಿತು.


ನೀರಿನಿಂದ ಹೊರ ತೆಗೆದ ಸೊಳೆಗಳು ಉಪ್ಪು ಬಿಟ್ಕೊಂಡಿವೆ,   ಒಂದೇ ಗಾತ್ರದಲ್ಲಿ ಸಿಗಿದಿಡುವುದು.   ಶುದ್ಧವಾದ ಹತ್ತಿಯ ಬಟ್ಟೆ ಮೇಲೆ ಹರಡಿದರೆ ಉತ್ತಮ,  ಸೊಳೆಯ ನೀರಿನಂಶವನ್ನು ಬಟ್ಟೆ ಹೀರಿಕೊಂಡು ಕರಿಯುವ ಕೆಲಸ ಬೇಗನೆ ಆದೀತು.


ಬಾಣಲೆಯಲ್ಲಿ ಎಣ್ಣೆಯಿಟ್ಟು,  ಬಿಸಿಯೇರಿದಾಗ ಎಣ್ಣೆಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ಹಾಕಿ ಕರಿಯಿರಿ.   ಹೊಂಬಣ್ಣ ಬಂದಾಗ,  ಎಣ್ಣೆಯ ಸದ್ದು ನಿಂತಾಗ ತೆಗೆದು ರಂಧ್ರದ ತಟ್ಟೆಗೆ ಹಾಕಿ,  ಬಿಸಿಯಾರಿದ ನಂತರ ತಿನ್ನಿ,  ಹಾಗೂ ಡಬ್ಬದಲ್ಲಿ ತುಂಬಿಸಿಟ್ಟು ಆಗಾಗ ತಿನ್ನುತ್ತ ಮಳೆಗಾಲದ ಮಜಾ ಅನುಭವಿಸಿ.  ಹ್ಞಾ,  ರುಚಿಗೆ ಉಪ್ಪು ಹಾಕುವ ಕೆಲಸ ಇಲ್ಲಿಲ್ಲ,   ಬೇಕಿದ್ದರೆ ನಿಮ್ಮ ಆಯ್ಕೆಯ ಮಸಾಲಾ ಹುಡಿಗಳನ್ನು ಉದುರಿಸಿ.



ಅಂತೂ ಇಂತೂ ಉಪ್ಪುಸೊಳೆ ಖಾಲಿ ಮಾಡಿದ್ದಾಯ್ತು.   ಈ ವರ್ಷ ನಾಲ್ಕು ಹಲಸಿನಕಾಯಿಗಳ ಉಪ್ಪುಸೊಳೆ ಹಾಕಿರಿಸಲಾಗಿದೆ! 




0 comments:

Post a Comment