Pages

Ads 468x60px

Thursday 21 September 2017

ಬೆರಟಿ ಹಲ್ವಾ



ನವರಾತ್ರಿ ಬಂದಿದೆ, ಹಬ್ಬದೂಟ ಎಂದು ಪಾಯಸ ಆಗಬೇಕಿದೆ. ಆಗಬೇಕು ಆದರೆ ಪಾಯಸವನ್ನು ಉಣ್ಣಲು ಮನೆಯೊಳಗೆ ಏಳೆಂಟು ಜನರ ಉಪಸ್ಥಿತಿ ಇರಬೇಕು, ಮಾಡಿದ್ದು ಮುಗಿದೀತು. ಸಕ್ಕರೆ ಬೆಲ್ಲ ಕಾಯಿಹಾಲು ಎರೆದು ವ್ಯರ್ಥ ಮಾಡಲೇಕೆ... ಹೀಗೆಲ್ಲ ಚಿಂತನಮಂಥನ ಆಗುತ್ತಿದ್ದಂತೆ ಹಲಸಿನಹಣ್ಣಿನ ಬೆರಟಿಯ ಜಾಡಿ ಕೆಳಗಿಳಿಯಿತು.
ಒಂದು ಒಣ ಸೌಟಿನಲ್ಲಿ ಮೂರು ಮುದ್ದೆ ಬೆರಟಿ ತೆಗೆದು ಪಾತ್ರೆಗೆ ಹಾಕಲಾಗಿ, “ ಬೆರಟಿ ಪಾಯಸವೇನೋ ಆದೀತು, ತಿಂದು ಮುಗಿದೀತೇ... “ ಚಿಂತೆಗಿಟ್ಟುಕೊಂಡಿತು.
ಬೆರಟಿಗೆ ತುಸು ನೀರೆರೆದು ಕೈಯಲ್ಲಿ ಹಿಸುಕಿ ದ್ರವರೂಪಕ್ಕೆ ತರುವ ಸಾಹಸ, ಹಲಸಿನಹಣ್ಣಿನ ನಾರು ಎಳೆ ಎಳೆಯಾಗಿ ಎದ್ದು ಬಂದಾಗ, ಅದನ್ನೂ ತಿಕ್ಕಿ ತಿಕ್ಕಿ ತೆಗೆದಾಯಿತು.
“ ನಾರು ಬಂದಿದ್ದು ಹೇಗೆ? “

“ ತುಳುವೆ ಹಲಸಿನ ಹಣ್ಣಿನಲ್ಲಿ ನಾರು ಜಾಸ್ತಿ, ಎಲ್ಲೋ ಈ ಬೆರಟಿ ತುಳುವ ಹಣ್ಣಿನದ್ದು. “

“ ನಾರು ತೆಗೆಯದಿದ್ದರೆ ಏನಾಗುತ್ತದೆ? “

“ ಪಾಯಸ ಕುಡಿಯುವಾಗ ಗಂಟಲಲ್ಲಿ ನೂಲಿನೆಳೆ ಅಥವಾ ಕಸ ಸಿಕ್ಕಂತೆ ಆದೀತು ಅಷ್ಟೇ. “
ಒಂದು ಅಚ್ಚು ಬೆಲ್ಲ ಹಾಕಿ, ಒಲೆಯ ಮೇಲಿಟ್ಟು ಸೌಟು ಆಡಿಸುತ್ತ ಇದ್ದಾಗ, “ ತುಪ್ಪ ಹಾಕಿದ್ರೆ ಹಲ್ವಾ ಆಯ್ತು ಅಲ್ವ... “ ಐಡಿಯಾ ಬಂದಿತು.
ಹೊರಚಾವಡಿಯಲ್ಲಿ ಇಂಟರ್ ನೆಟ್ ವ್ಯಾಸಂಗದಲ್ಲಿ ತೊಡಗಿರುವ ನಮ್ಮೆಜಮಾನ್ರ ಬಳಿ ಒಂದು ಮಾತು ಕೇಳದಿದ್ದರೆ ಹೇಗಾದೀತು?
“ ನೋಡ್ರೀ... ಬೆರಟಿ ಪಾಯಸ ಮಾಡಲೋ, ಹಲ್ವಾ ಆದೀತೊ? “

ನಮ್ಮವರು ಒಳ ಬಂದಾಗ ಬೆರಟಿಯೊಂದಿಗೆ ಬೆಲ್ಲ ಕರಗಿ ಮಿಳಿತವಾಗಿ ಹಲ್ವದ ಹದಕ್ಕೆ ಬಂದಿತ್ತು.

“ ಹಲ್ವವೇ ಚೆನ್ನ... “ ಉತ್ತರ ದೊರೆಯಿತು.

“ ಸರಿ ಹಾಗಿದ್ದರೆ. “ ಎರಡು ದೊಡ್ಡ ಚಮಚ ತುಪ್ಪ ಎರೆದು ಕಾಯಿಸುತ್ತ ಇದ್ದ ಹಾಗೆ ಗೋಡಂಬಿಯೂ ತುಪ್ಪದಲ್ಲಿ ಹುರಿಯಲ್ಪಟ್ಟು ಬಿದ್ದಿತು.

ಗೋಡಂಬಿ ಹುರಿದ ತುಪ್ಪದಲ್ಲಿ ಎರಡು ಚಮಚ ಗೋಧಿಹುಡಿಯನ್ನು ಘಮಘಮಿಸುವಂತೆ ಹುರಿದು ಹಾಕುವಲ್ಲಿಗೆ ಹಲ್ವದ ಸಾಂದ್ರತೆ ಇನ್ನಷ್ಟು ಗಾಢವಾಗಿ ಬೆರಟಿ ಹಲ್ವಾ, ನಮ್ಮ ನವರಾತ್ರಿಯ ಸಿಹಿತಿನಿಸು ಆಗಿಹೋಯಿತು.


          

0 comments:

Post a Comment