Pages

Ads 468x60px

Saturday 3 March 2018

ಗುಜ್ಜೆ ಉಪ್ಪಿನಕಾಯಿ



" ಅಕ್ಕ, ಹಲಸಿನಕಾಯಿ ತರಲೇ... " ಕೇಳಿದ್ದು ಚೆನ್ನಪ್ಪ.
" ಆದೀತು, ತಂದಿಡು. "

ಸಂಜೆಯ ಹೊತ್ತಿಗೆ ತೋಟದಿಂದ ಎರಡು ಗುಜ್ಜೆಗಳು ಬಂದುವು.

ಈ ವರ್ಷದ ಮೊದಲ ಫಲ ಬಂದಿದೆ. ನಾಳೆ ಪಲ್ಯ ಮಾಡೋಣ.
ಮುಂಜಾನೆಯ ತಿಂಡಿ ಮುಗಿಸಿ, ಚೆನ್ನಪ್ಪ ಬರುವ ಮೊದಲು ನಾನೇ ಖುದ್ದಾಗಿ ಮುತುವರ್ಜಿಯಿಂದ ಹಲಸಿನಕಾಯಿ ಹೆಚ್ಚಿಟ್ಟೆ,

ಹಲಸಿನಕಾಯಿ ಅಂದ್ರೆ ಸುಮ್ಮನೆ ಆಗುತ್ಯೇ, ಟೀವಿ ನೋಡುತ್ತಾ ಟೇಬಲ್ ಮೇಲೆ ಚಾಕು, ಮಣೆ ಇಟ್ಕೊಂಡು ಕೊಚ್ಚಲಿಕ್ಕೆ ಅದೇನು ಈರುಳ್ಳಿಯೇ?
ಮೆಟ್ಟುಗತ್ತಿ ಆಗಬೇಕು, ಹಲಸಿನಕಾಯಿಗೆಂದೇ ದೊಡ್ಡ ಗಾತ್ರದ ಮೆಟ್ಟುಕತ್ತಿ (ಈಳಿಗೆಮಣೆ) ಇದೆ, ಅದು ಹಲಸಿನ ಕಾಲ ಮುಗಿಯುತ್ತಲೂ ಯಾರೂ ಕೇಳುವವರಿಲ್ಲದೆ ಮೂಲೆಗೆ ಒತ್ತರಿಸಲ್ಪಟ್ಟಿದೆ. ಅದನ್ನು ಕಬ್ಬಿಣದ ಆಚಾರಿಯಲ್ಲಿಗೆ ಒಯ್ದು ಸಿಂಗರಿಸದೆ ಇದ್ದರೆ ನಾವು ಹೇಳಿದಂತೆ ಕೇಳದು. ಅದೆಲ್ಲ ಚೆನ್ನಪ್ಪನ ಡ್ಯೂಟಿ, ಮಾಡ್ತಾನೆ ಬಿಡಿ.

ಈಗ ಅಡುಗೆಮನೆಯ ಒಳಗಿರುವ ನಿತ್ಯ ಬಳಸುತ್ತಿರುವ ಮೆಟ್ಟುಗತ್ತಿಯನ್ನು ಹೊರ ಕೊಂಡೊಯ್ಯಲೋ, ಬೇಡ, ಹಲಸಿನ ಗುಜ್ಜೆಯೇ ಒಳಗೆ ಬಂದಿತು.
ಬಕೆಟ್ ತುಂಬ ನೀರು ಇರಲಿ,
ಇಬ್ಭಾಗವಾದ ಹಲಸಿನಿಂದ ಮಯಣ ಹೊರ ಚೆಲ್ಲುವ ಮೊದಲೇ ಸುರಿಯುವ ನೀರಿನ ಕಳಗೆ ಹಿಡಿದು ಸ್ನಾನ ಮಾಡಿಸಿದಾಗ ಮಯಣ ತೊಳೆದು ಹೋಯ್ತು, ಇನ್ನು ಬೇಕಿದ್ದಂತೆ ಹೋಳು ಮಾಡಲು ತೊಂದರೆಯಿಲ್ಲ. ನಮ್ಮ ಕತ್ತಿಗೂ ಮಯಣ ಅಂಟುವ ಭಯವಿಲ್ಲ. ಇದು ಮಯಣ ನಿವಾರಣೆಯ ಸುಲಭೋಪಾಯ. ಆದರೂ ಅಂಗೈಗಳಿಗೆ ತೆಂಗಿನೆಣ್ಣೆ ಸವರಿಕೊಳ್ಳುವುದು ಉತ್ತಮ.

ಅರ್ಧ ಹಲಸಿನ ಗುಜ್ಜೆಯ ಹೋಳುಗಳು ಸಿದ್ಧವಾಗಿವೆ, ಪಲ್ಯಕ್ಕೆ ಬೇಕಾದಷ್ಟಾಯಿತು.
“ ಉಳಿದ ಅರ್ಧ ಗುಜ್ಜೆ ಏನ್ಮಾಡ್ತೀರಾ? ನಾಳೆಗೂ ಪಲ್ಯವೇ? “



ಬೇಡ ಬಿಡಿ, ಉಪ್ಪಿನಕಾಯಿ ಹಾಕೋಣ. ಹೇಗೂ ಈ ವಾರದಲ್ಲಿ ಮಗಳು ಬರುವವಳಿದ್ದಾಳೆ,  
“ ಗುಜ್ಜೆ ಉಪ್ಪಿನಕಾಯಿ ಆಗುತ್ತಾ, ನಮಗೆ ಗೊತ್ತೇ ಇಲ್ಲರೀ… “

ಗುಜ್ಜೆಯ ಆಗಮನದೊಂದಿಗೆ ಹೊಸ ಹುಣಸೆಯ ಹಣ್ಣು ಸಿದ್ಧವಾಗಿರುತ್ತದೆ. ಹುಣಸೆಯ ಹುಳಿಯೂ, ಗುಜ್ಜೆಯೂ ಸೇರಿ, ಉಪ್ಪು ಖಾರ ಕೂಡಿದಾಗ ಉಪ್ಪಿನಕಾಯಿ ಆಗೇ ಹೋಯ್ತು.

ಎಳೆಯ ತರಕಾರಿಗಳನ್ನು ಹಸಿಯಾಗಿ ಉಪ್ಪು ಖಾರ ಸೇರಿಸಿ ತಿನ್ನಲಾಗುವಂತೆ ನಮ್ಮ ಹಲಸಿನ ಗುಜ್ಜೆ ಎಷ್ಟೇ ಎಳೆಯದಾದರೂ ಹಸಿಯಾಗಿ ತಿನ್ನುವಂತಿಲ್ಲ, ಹಾಗೇ ಸುಮ್ಮನೆ ಮಸಾಲೆ ಬೆರೆಸಿ ಉಪ್ಪಿನಕಾಯಿ ಆಯ್ತು ಅನ್ನುವಂತಿಲ್ಲ.

ಬೇಯಿಸಬೇಕು. ಒಂದೇ ಗಾತ್ರದಲ್ಲಿ ಹೆಚ್ಚಿಟ್ಟ ಹೋಳುಗಳನ್ನು ಕುಕ್ಕರ್ ಒಳಗೆ ತುಂಬಿಸಿ, ಒಂದು ಲೋಟ ನೀರು ಎರೆದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನೆಲ್ಲಿ ಗಾತ್ರದ ಹುಣಸೆ ಹುಳಿಯನ್ನೂ ಹಾಕಿ, ಒಂದು ಸೀಟಿ ಕೇಳುವ ತನಕ ಬೇಯಿಸಿ.
ಪ್ರೆಶರ್ ಇಳಿದ ನಂತರವೇ ಮುಚ್ಚಳ ತೆರೆದು, ಹುಣಸೆಯ ರಸ ಹೋಳುಗಳಿಗೆ ದಕ್ಕಿದ್ದು ಸಾಕು, ಬೇಯಲು ಎರೆದಂತಹ ನೀರನ್ನು ಬಸಿಯಿರಿ, ಹುಣಸೆಯನ್ನೂ ತೆಗೆಯಿರಿ.

ಉಪ್ಪಿನಕಾಯಿ ಮಸಾಲೆ ಸಿದ್ಧಪಡಿಸೋಣ.
10 - 12 ಒಣಮೆಣಸು
3 ಚಮಚ ಸಾಸಿವೆ
ಪುಟ್ಟ ಚಮಚ ಅರಸಿಣ
3 ಚಮಚ ಉಪ್ರು
ಒಂದು ಲೋಟ ಕಾದಾರಿದ ನೀರು (ಕುದಿಸಿ ತಣಿದ ನೀರು)
ಮೆಣಸು ಹಾಗೂ ಸಾಸಿವೆಯನ್ನು ಅಗತ್ಯವಿರುವಷ್ಟೇ ನೀರು ಎರೆದು ಅರೆಯಿರಿ, ಉಪ್ಪು, ಅರಸಿಣ ಪುಡಿ ಹಾಕ್ಕೊಳ್ಳಿ.
ಇದೀಗ ಉಪ್ಪಿನಕಾಯಿ ಹಸಿ ಮಸಾಲೆ (ಹೊರಡಿ) ಸಿದ್ಧವಾಗಿದೆ.
ಇನ್ನೇಕೆ ತಡ, ಹಲಸಿನ ಗುಜ್ಜೆಗೆ ಬೆರೆಸಿ, ಶುಭ್ರವಾದ ಜಾಡಿಯಲ್ಲಿ ತುಂಬಿಸಿ, ಎಷ್ಟು ಸುಲಭ ಅಲ್ವೇ…

“ ಉಪ್ಪಿನ್ಕಾಯಿ ಆಯ್ತು… “ ಅನ್ನುತ್ತ ಚೆನ್ನಪ್ಪನ ಹಾಳೆ ಬಟ್ಟಲಿಗೂ ಧಾರಾಳವಾಗಿ ಬಿತ್ತು ಗುಜ್ಜೆ ಉಪ್ಪಿನಕಾಯಿ.

“ ಕುಚ್ಚುಲಕ್ಕಿ ಅನ್ನ, ಪರಿಮಳದ ತುಪ್ಪ, ಗಟ್ಟಿ ಮೊಸರು, ಗುಜ್ಜೆ ಉಪ್ಪಿನಕಾಯಿ ಇರುವಾಗ ಅನ್ನದ ತಪಲೆ ಖಾಲಿಯಾಗಲಿಕ್ಕೆ ಎಷ್ಟು ಹೊತ್ತು? ನೋಡ್ತಿರು… “    
ಹೌದೂ, ರಾತ್ರಿ ಊಟವಾದ ಮೇಲೆ ನೋಡ್ತೀನಿ, ಅನ್ನದ ತಪಲೆ ಖಾಲಿ ಆಗ್ಬಿಟ್ಟಿದೆ!

ಅಂದ ಹಾಗೆ ಈ ಗುಜ್ಜೆ ಉಪ್ಪಿನಕಾಯಿ ಹೆಚ್ಚು ದಿನ ಇಟ್ಟುಕೊಳ್ಳುವಂತದ್ದಲ್ಲ, ಹೆಚ್ಚೆಂದರೆ ಒಂದು ವಾರದ ಬಾಳ್ವಿಕೆ ಬಂದೀತು.




0 comments:

Post a Comment