Pages

Ads 468x60px

Sunday 23 September 2018

ಮಳೆಗಾಲದ ಪತ್ರೊಡೆ




        

“ ಅಕ್ಕ, ಸೊಪ್ಪು ತುಂಬ ಉಂಟು… “ ಚೆನ್ನಪ್ಪ ಅಂದಿದ್ದು ಕೆಸುವಿನ ಸೊಪ್ಪನ್ನು, ಒಂದು ಪತ್ರೊಡೆ ಮಾಡಿ ತಿನ್ನುವುದಕ್ಕಿಲ್ಲವೇ ಎಂಬುದು ಅವನ ಉದ್ಗಾರದ ಆಂತರ್ಯ.

“ ಮಾಡೋಣ.. ನಾಳೆ. “
“ ನಾಳೆ ನಾನು ಬೇರೆ ಹೋಗೂದಿದೆ.. “
“ ಹಾಗಿದ್ದರೆ ಸೊಪ್ಪು ಕಿತ್ತು ತರಬೇಡ, ನಾಳೆ ಏನೋ ಒಂದು ಉಪ್ಪಿಟ್ಟು ಮಾಡಿದರಾಯ್ತು ಬಿಡು. “

ಮಾರನೇ ದಿನ ಸಂಜೆ ಹಿತ್ತಲಲ್ಲಿ ತಿರುಗಾಡುತ್ತಿರಬೇಕಾದರೆ ಕೆಸುವಿನ ಸೊಪ್ಪು ಕೈ ಬೀಸಿ ಕರೆಯಿತು. ಸೊಂಪಾಗಿ ಬೆಳೆದಿದ್ದ ಕಾಟ್ ಕೆಸು ತಾನೇ ತಾನಾಗಿ ಮೆರೆಯುತ್ತಿತ್ತು. ಮಳೆಗಾಲದಲ್ಲಿ ಮಾತ್ರ ಸಿಗುವ ಕಾಡು ಕೆಸುವಿನ ಅಡುಗೆ ಮಾಡದಿದ್ದರೆ ಹೇಗೆ? ಕೆಸುವಿನ ಸೊಪ್ಪಿನ ಆರೋಗ್ಯಲಾಭ ದಕ್ಕಿಸಿಕೊಳ್ಳಬೇಕಿದ್ದರೆ ಪತ್ರೊಡೆ ಮಾಡಿ ತಿನ್ನಲೇ ಬೇಕು.

ಅಂದಾಜು ಇಪ್ಪತ್ತು ಎಲೆಗಳನ್ನು ಚಿವುಟಿ ತಂದೆ.
ಆಗಲೇ 2 ಲೋಟ ನುಚ್ಚಕ್ಕಿಯೂ ನೀರಿಗೆ ಬಿತ್ತು.
ಒಂದು ಹಿಡಿ ಕುಚ್ಚುಲಕ್ಕಿಯನ್ನೂ ಪ್ರತ್ಯೇಕವಾಗಿ ನೆನೆಸಲಾಯಿತು.
ಬಾಳೆ ಎಲೆ ಆಗಬೇಕು, ಪುಟ್ಟದೊಂದು ಕತ್ತಿ ಹಿಡಿದು ತೋಟದಿಂದ ಏಳೆಂಟು ಕುಡಿ ಬಾಳೆಲೆಗಳನ್ನು ತಂದೂ ಆಯ್ತು.
ಚಿಕ್ಕದೊಂದು ತೆಂಗಿನಕಾಯಿ ಸುಲಿದು, ಒಡೆದು, ಅರ್ಧ ಕಡಿ ಕಾಯಿ ತುರಿಯಲಾಯಿತು.
ನಾಲ್ಕು ಒಣಮೆಣಸು,
ಪುಟ್ಟ ಚಮಚ ಅರಸಿಣ,
ಲಿಂಬೆ ಗಾತ್ರದ ಹುಣಸೆಹಣ್ಣು,
ರುಚಿಗೆ ಉಪ್ಪು ಹಾಗೂ ಬೆಲ್ಲ ಇದ್ದರಾಯಿತು,
 ಡಬ್ಬಿಯಲ್ಲಿ ಗರಂ ಮಸಾಲೆ ಹುಡಿ ಇದ್ದಿತು, ಎರಡು ಚಮಚ ಇರಲಿ, ಕೊತ್ತಂಬ್ರಿ ಜೀರಿಗೆ ಎಂದು ಒದ್ದಾಡುವುದು ಬೇಡ.
ಕಾಳುಮೆಣಸು ಪುಡಿ ಮಾಡಿಟ್ಟಿದ್ದೂ ಇತ್ತು, ಒಂದು ಚಮಚ ಇರಲಿ.

ಮೊದಲು ಕುಚ್ಚುಲಕ್ಕಿ ತೊಳೆದು ಮಿಕ್ಸಿಗೆ ಹಾಕಿ ತಿರುಗಿಸಿ, ಅರ್ಧಂಬರ್ಧ ಹುಡಿ ಆದಾಗ, ತೆಂಗಿನತುರಿ ಇತ್ಯಾದಿ ಮಸಾಲೆ ಸಾಮಗ್ರಿಗಳನ್ನು ಹಾಕಿ,
ದಪ್ಪ ಸಿಹಿ ಮಜ್ಜಿಗೆ ಎರೆದು ಅರೆಯಿರಿ.
ಇದೀಗ ನುಚ್ಚಕ್ಕಿಯ ಸರದಿ, ತೊಳೆದು ಅರೆಯುವುದು, ನುಚ್ಚಕ್ಕಿಯ ವಿಶೇಷ ಏನಪ್ಪಾ ಅಂದ್ರೆ ಎಷ್ಟೇ ಅರೆದರೂ ತರಿತರಿಯಾಗಿಯೇ ಇರುವ ಗುಣ. ಇಡ್ಲಿ ಮಾಡಲೂ ನುಚ್ಚಕ್ಕಿಯೇ ಹಿತ.
ಅರೆದ ಹಿಟ್ಟನ್ನು ಅಗಲವಾದ ತಪಲೆಗೆ ಹಾಕಿ ಇಡಬೇಕು.

ಕೆಸುವಿನೆಲೆಗಳನ್ನು ಶುಭ್ರವಾದ ಬಟ್ಟೆಯಲ್ಲಿ ಒರೆಸಿ, ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆದು, ಕೆಸುವಿನಲೆಗಳನ್ನು ಒಟ್ಟಿಗೆ ಚಿಕ್ಕದಾಗಿ ಚೂರಿಯಲ್ಲಿ ಚಕಚಕನೆ ಕತ್ತರಿಸಿ ಇಡಬೇಕು.

ಬಾಳೆ ಎಲೆಗಳನ್ನೂ ಒದ್ದೆ ಬಟ್ಟೆಯಲ್ಲಿ ಒರೆಸಿ, ಗ್ಯಾಸ್ ಜ್ವಾಲೆಗೆ ಹಿಡಿದು ಬಾಡಿಸಬೇಕು.
ಅಟ್ಟಿನಳಗೆ ಯಾ ಇಡ್ಲಿ ಪಾತ್ರೆ ಒಲೆಗೇರಲಿ,
ನೀರು ಕುದಿಯಲಿ,
ಹಿಟ್ಟು, ಮಸಾಲೆ ಹಾಗೂ ಕೆಸುವಿನ ಸೊಪ್ಪನ್ನು ಜೊತೆಗೂಡಿಸಿ, ಕೈಯಲ್ಲಿ ಬೆರೆಸಿ, ಹಿಟ್ಟು ಈಗ ಮುದ್ದೆಯಾಗಿ ಅಂಗೈಯಲ್ಲಿ ಹಿಡಿಯಲು ಬರುವಂತಿರಬೇಕು.


         


ನನ್ನ ಬರವಣಿಗೆ ಮುಂದುವರಿಯುತ್ತಿದ್ದಂತೆ ಗೌರತ್ತೆ, “ಈಗ ಯಾವ ಅಡಿಗೆ ಬರೆಯುತ್ತ ಇದ್ದೀ... “ ಎನ್ನುತ್ತ ಬಂದರು.

“ ಏನಿಲ್ಲ ಬಿಡಿ, ಅದೇ ನಿನ್ನೆ ಮಾಡಿದ ಪತ್ರೊಡೆ... “

“ ಅಚ್ಚುಕಟ್ಟಾಗಿ ಬಾಡಿಸಿದ ಬಾಳೆ ಎಲೆಯಲ್ಲಿ ಹಿಟ್ಟು ತುಂಬಿಸಿ... ಅಂತ ಬರೆದ್ರೆ ಮುಗೀತು, ಪೇಟೆಯಲ್ಲಿರುವವರಿಗೆ ಬಾಳೆ ಎಲೆ ಎಲ್ಲಿಂದ ಬರಬೇಕು? “

“ ತರ್ತಾರೆ ಬಿಡಿ, ಸೂಪರ್ ಮಾರ್ಕೆಟ್ಟೂ ಉಂಟಲ್ಲ.. “ ನನ್ನ ಸಮಜಾಯಿಷಿಗೆ ಗೌರತ್ತೆ ಬಗ್ಗಲಿಲ್ಲ, ಹಂಗೇನೆ ಅವರಿಂದ ಉದ್ಗರಿಸಲ್ಪಟ್ಟ ಸುಲಭೋಪಾಯಗಳು ಇಲ್ಲಿವೆ.

 ಬಾಳೆ ಎಲೆ ಇಲ್ಲದಿದ್ದರೆ ಹಿಟ್ಟಿನ ಮುದ್ದೆಯನ್ನು ಅಗಲವಾದ ತಟ್ಟೆಯಲ್ಲಿ ತುಂಬಿಸಿ ಅಟ್ಟಿನಳಗೆಯೊಳಗಿಟ್ಟು ಬೇಯಿಸಬಹುದಾಗಿದೆ.

ಇಡ್ಲಿ ಬೇಯಿಸುವ ಪುಟ್ಟ ಪುಟ್ಟ ತಟ್ಟೆಗಳಲ್ಲಿ ತುಂಬಿಸಿ ಬೇಯಿಸಿದರೆ ಸಮಯವೂ ಕಡಿಮೆ ಸಾಕು, ಮಾಮೂಲಿಯಾಗಿ ಇಡ್ಲಿ ಬೇಯಿಸುವ ಸಮಯವೇ ಸಾಕು, ಅರ್ಧ ಗಂಟೆ, ಮುಕ್ಕಾಲು ಗಂಟೆ ಅಂತ ಒದ್ದಾಡಬೇಕಿಲ್ಲ.

ಬಾಳೆ ಎಲೆಯ ಬದಲು ಉಪ್ಪಳಿಕನ ಎಲೆ, ಸಾಗುವಾನಿ ಎಲೆ, ಮುತ್ತುಗದ ಎಲೆ ಕೂಡಾ ಬಳಸಬಹುದು.

ಬಾಡಿಸಿದ ಬಾಳೆ ಎಲೆಯ ಯೋಗ್ಯತೆ ಇನ್ಯಾವುದೇ ಎಲೆಗೆ ಇಲ್ಲ, ಬಾಳೆ ಎಲೆಯೊಳಗೆ ಹಿಟ್ಟು ಇಟ್ಟು, ಅಚ್ಚುಕಟ್ಟಾಗಿ ಮಡಚಿ, ನೀರು ಕುದಿಯುತ್ತಿರುವ ಅಟ್ಟಿನಳಗೆಯೊಳಗಿಟ್ಟು, ಭದ್ರವಾಗಿ ಮುಚ್ಚಿ, ಅರ್ಧ ಗಂಟೆ ಬೇಯಿಸಿ.

ಬೆಂದಿದೆ ಎಂದು ತಿಳಿಯುವುದು ಹೇಗೆ?
ಒಂದು ಚಮಚವನ್ನು ಆಳವಾಗಿ ಚುಚ್ಚಿ ತೆಗೆದಾಗ ಚಮಚದಲ್ಲಿ ಹಿಟ್ಟು ಅಂಟಿಕೊಂಡಿರಬಾರದು, ಬೆಂದಿದೆ ಎಂದೇ ತಿಳಿಯಿರಿ.
ತೆಂಗಿನತುರಿ ಹಾಗೂ ದಪ್ಪ ಮಜ್ಜಿಗೆಯ ಬಳಕೆಯಿಂದ ಪತ್ರೊಡೆ ಮೃದುವಾಗಿ ಇಡ್ಲಿಯಂತೆ ಬರುವುದು.
ಕೆಸುವಿನ ಸೊಪ್ಪು ಜಾಸ್ತಿ ಇದ್ದಷ್ಟೂ ಪತ್ರೊಡೆ ಮೃದುವಾಗಿ ಬರುತ್ತದೆ. ಚಿಕ್ಕದಾಗಿ ಕತ್ತರಿಸಿದಷ್ಟೂ ಚೆನ್ನ.
ಬಾಳೆ ಎಲೆ ಯಾ ಇನ್ಯಾವುದೇ ಎಲೆ ಲಭ್ಯವಿಲ್ಲವೆಂದು ಚಿಂತಿಸದಿರಿ, ತಟ್ಟೆಯಲ್ಲಿ ತುಂಬಿಸಿ ಗುಜರಾತಿ ಧೋಕ್ಲಾ ಮಾದರಿಯಲ್ಲಿ ಬೇಯಿಸಿ. ಬೇಯಲು ನೀರು ಕುದಿದ ನಂತರ ಅಂದಾಜು ಅರ್ಧ ಗಂಟೆ ಬೇಕು.
ಮಳೆಗಾಲದ ಕಾಡು ಕೆಸುವಿನ ಎಲೆಗಳು ಇಪ್ಪತ್ತು - ಇಪ್ಪತೈದು ಬೇಕಾದೀತು, ಎಲೆಗಳ ಗಾತ್ರದ ಮೇಲೆ ಸಂಖ್ಯೆ ಅವಲಂಬಿಸಿದೆ.
ಕರಿ ಕೆಸುವಿನ ಎಲೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ, ಇಂತಹ ಎಲೆಗಳು ಮೂರು ಯಾ ನಾಲ್ಕು ಸಿಕ್ಕಿದರೂ ಸಾಕು, ಪತ್ರೊಡೆ ಮಾಡಬಹುದು.
ಕರಿಕೆಸು ಎಲೆಗಳನ್ನು ಕತ್ತರಿಸುವಾಗ ದಂಟುಗಳನ್ನು ತೆಗೆದು ಇಟ್ಟುಕೊಳ್ಳಿ, ಎರಡು ದಿನ ಬಿಟ್ಟು ಬೋಳು ಹುಳಿ ಮಾಡಬಹುದು.
ಕೆಸುವಿನೆಲೆ ಜಾಸ್ತಿ ಆಯ್ತೇನೋ ಎಂದು ಚಿಂತಿಸಬೇಕಿಲ್ಲ, ಮಿಕ್ಸಿಯಲ್ಲಿ ಚಿಕ್ಕದಾಗಿ ಪುಡಿ ಮಾಡ್ಬಿಟ್ಟು ಹಿಟ್ಟಿಗೆ ಸೇರಿಸಿ. ಹುಣಸೆಯ ಹುಳಿ ಹಾಗೂ ಮಜ್ಜಿಗೆ ಇರುವುದರಿಂದ ತುರಿಸುವ ಭಯವಿಲ್ಲ. ಗೌರತ್ತೆಯ ಸಲಹೆಯಂತೆ ನನ್ನ ಕೆಸುವಿನ ಸೊಪ್ಪು ಮಿಕ್ಸಿಯಲ್ಲಿ ಪುಡಿ ಪುಡಿ ಆಗ್ಬಿಟ್ಟು ಹಿಟ್ಟಿನೊಂದಿಗೆ ಸೇರಿದೆ. ಅರ್ಧಾಂಶ ಸೊಪ್ಪನ್ನು ಮಿಕ್ಸಿಗೆ ಹಾಕಿ, ಉಳಿದರ್ಧ ಚೂರಿಯಲ್ಲಿ ಕೊಚ್ಚಿಕೊಂಡು ಕೂಡಾ ಹಾಕಿದರೂ ಆದೀತು.

ಬೆಂದಿದೆ, ರಾತ್ರಿಯೂಟದ ಸಮಯ, ಒಂದೇ ಗಾತ್ರದಲ್ಲಿ ಕತ್ತರಿಸಿ, ಊಟದೊಂದಿಗೆ ಸವಿಯಿರಿ.
“ ರುಚಿಯಾಗಿದೆ… “ ಶಿಫಾರಸ್ ಸಿಕ್ಕಿತು.


        


ಮುಂಜಾನೆಯ ತಿಂಡಿಗಾಗಿ ನಮ್ಮ ಪತ್ರೊಡೆ ಹುಡಿ ಹುಡಿ ಆಯ್ತು, ಬಾಣಲೆಗೆ ನಾಲ್ಕು ಚಮಚ ಎಣ್ಣೆ ಎರೆದು, ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ, ಬೆಲ್ಲದ ಹುಡಿ, ತುಸು ಉಪ್ಪು ನೀರಿನಲ್ಲಿ ಕರಗಿಸಿ ಎರೆದು, ಪತ್ರೊಡೆ ಹುಡಿಯನ್ನು ಹಾಕಿ, ಮೇಲಿಂದ ಕಾಯಿತುರಿ ಹಾಕಿ, ಸೌಟಾಡಿಸಿ ಸ್ವಲ್ಪ ಹೊತ್ತು ಮುಚ್ಚಿಟ್ಟು ಸ್ಟವ್ ಆರಿಸಿ, ಪತ್ರೊಡೆಯ ಸಿಹಿ ಉಪ್ಕರಿ ಸಿದ್ಧವಾಗಿದೆ.

ಪತ್ರೊಡೆ ಧೋಕ್ಲಾ

ಇದು ಸಂಜೆಯ ಚಹಾಕೂಟಕ್ಕಾಗಿ,
ಪತ್ರೊಡೆಯನ್ನು ಒಂದೇ ಗಾತ್ರದಲ್ಲಿ ಚೂರಿಯ ಸಹಾಯದಿಂದ ಕತ್ತರಿಸುವುದು.
ಬಾಣಲೆ ಬಿಸಿಗಿಟ್ಟು ಎಣ್ಣೆ ಯಾ ತುಪ್ಪ ಎರೆದು ಸಾಸಿವೆ ಸಿಡಿಸಿ ಪತ್ರೊಡೆ ಹೋಳುಗಳನ್ನು ಹಾಕಿ, ಒಂದೆರಡು ಚಮಚ ಸಕ್ಕರೆ ಉದುರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿಯಾಗಿ ತಿನ್ನಿರಿ. ಪತ್ರೊಡೆ ಧೋಕ್ಲಾ ಅನ್ನಿ.

         
ಪತ್ರೊಡೆಯ ತಿನಿಸನ್ನು ಚಹಾ ಜೊತೆ ಮೆಲ್ಲುತ್ತ “ ಹೌದೂ, ಇನ್ನೂ ಉಂಟಲ್ಲ ಪತ್ರೊಡೆ ಅಟ್ಟಿನಳಗೆಯಲ್ಲಿ? “ ಎಂದು ವಿಚಾರಿಸಿದ ಗೌರತ್ತೆ, “ ನಾಳೆ ಹೀಗೆ ಕಟ್ ಕಟ್ ಮಾಡಿ ಪತ್ರೊಡೆ ಸಾಂಬಾರ್ ಮಾಡಬಹುದಲ್ಲ… “

“ ಅದನ್ನೂ ಮಾಡುವ, ಮೇಲಾರ, ಜೀರಿಗೆ ಬೆಂದಿಯೂ ಆದೀತಲ್ಲ.. “

“ ಅದೆಲ್ಲ ಬೇಡ, ಸಾಂಬಾರ್ ಮಾಡು.. ತೊಗರಿಬೇಳೆ ಹಾಕಿ, ಸಾಂಬಾರ್ ಹುಡಿ ಉಂಟಲ್ಲ... ಬೆಳ್ಳುಳ್ಳಿ ಒಗ್ಗರಣೆ ಇರಲಿ. “

ಪತ್ರೊಡೆಯ ಪುಳಿ ಕೊಳಂಬು

ಮಾಡಿದ್ದು ಹೇಗೆ?
ಚೌಕಾಕೃತಿಯಲ್ಲಿ ಕತ್ತರಿಸಿದ ಪತ್ರೊಡೆ ತುಂಡುಗಳು, ಹತ್ತು - ಹನ್ನೆರಡು ಸಾಕು.
ಒಂದು ಹಿಡಿ ಬಟಾಣಿಕಾಳು ನೆನೆಸಿ, ತೊಗರಿಬೇಳೆಯೊಂದಿಗೆ ಬೇಯಿಸಿಕೊಳ್ಳುವುದು.
ಬೆಂದ ಬೇಳೆಗೆ ಹಿತವಾಗುವಷ್ಟು ಹುಣಸೆ ರಸ ಹಾಗೂ ಉಪ್ಪು ಮತ್ತು ಬೆಲ್ಲ ಹಾಕುವುದು.
ಒಂದು ಚಮಚ ಸಾಂಬಾರಿನ ಹುಡಿ ಹಾಕುವುದು.
ಅಗತ್ಯವಿದ್ದ ಹಾಗೆ ನೀರು ಎರೆದು ಕುದಿಯಲು ಇಡುವುದು.
ಕುದಿಯುತ್ತಿದ್ದ ಹಾಗೆ ಪತ್ರೊಡೆ ತುಂಡುಗಳನ್ನು ಹಾಕುವುದು.
ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ತುಪ್ಪದಲ್ಲಿ ಕೊಡುವುದು.
ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸುವುದು.



ಪತ್ರೊಡೆಯ ಪೋಡಿ

ಕಡ್ಲೆ ಹಿಟ್ಟು ಹಾಗೂ ಅಕ್ಕಿಹಿಟ್ಟು ಬೆರೆಸಿ ನೀರೆರೆದು ಇಡ್ಲಿ ಹಿಟ್ಟಿನ ಸಾಂದ್ರತೆಗೆ ತಂದು, ರುಚಿಗೆ ಉಪ್ಪು, ಬೇಕಿದ್ದರೆ ಖಾರದ ಪುಡಿ ಯಾ ಗರಂ ಮಸಾಲೆ ಹಾಕಿ ಪರಿಮಳಯುಕ್ತವಾಗಿಸಿ, ಪತ್ರೊಡೆ ಹೋಳುಗಳನ್ನು ಈ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿದರೆ ಪತ್ರೊಡೆ ಪೋಡಿ ಯಾ ಪಕೋಡ ಸಿದ್ಧ.

ವಿಟಮಿನ್ ಗಳ ಆಗರ, ಎ ಹಾಗೂ ಸಿ ವಿಟಮಿನ್ ಅಲ್ಲದೆ ಬಿ ಕಾಂಪ್ಲೆಕ್ಸ್ ಅಧಿಕವಾಗಿ ಹೊಂದಿರುವ ಎಲೆಗಳು.
ಮ್ಯಾಂಗನೀಸ್, ಕಾಪರ್, ಪೊಟಾಶಿಯಂ, ಕಬ್ಬಿಣದ ಧಾತುಗಳಿಂದ ಕೂಡಿವೆ ಕೆಸುವಿನ ಎಲೆ, ಕ್ಯಾಲ್ಸಿಯಂ ಕೂಡಾ ಪಡೆಯುವಿರಿ.
ಅತ್ಯಲ್ಪ ಪ್ರಮಾಣದಲ್ಲಿ ಕೊಬ್ಬು ಇರುವ ಈ ಎಲೆಗಳ ಸೇವನೆ ದೇಹತೂಕ ನಿವಾರಕವೂ ಹೌದು.
ವಿಟಮಿನ್ ಕೊರತೆ ಇಲ್ಲಿ ಇಲ್ಲ,
ರಕ್ತಹೀನತೆಯ ಬಳಲಿಕೆ ಬಾಧಿಸದು,
ಬೊಜ್ಜು ತುಂಬಿ, ಮೈಭಾರ ಇಳಿಸುವ ಸಾಹಸಕ್ಕೆ ಕೆಸುವಿನೆಲೆ ನಿಮಗೆ ನೆರವಾಗಲಿದೆ.
ನಾರುಯುಕ್ತ ಎಲೆಗಳು, ಮಲಬದ್ಧತೆಯ ಸಮಸ್ಯೆಗೆ ಪರಿಹಾರ.

ಸೊಪ್ಪನ್ನು ಹಸಿಹಸಿಯಾಗಿ ತಿನ್ನಲು ಬಾರದು, ಬೇಯಿಸಿದರೂ ಕೆಲವೊಂದು ಜಾತಿಯ ಎಲೆಗಳು ನಾಲಿಗೆ ತುರಿಕೆಯುಂಟು ಮಾಡುವಂತಹವು. ತುರಿಕೆ ಯಾ ನವೆ ಹೋಗಲಾಡಿಸಲು ನಾವು ಹುಣಸೆಹುಳಿ, ಮಜ್ಜಿಗೆ, ಬೀಂಬುಳಿ ಹಣ್ಣು ಇತ್ಯಾದಿ ಹುಳಿಯುಕ್ತ ಪದಾರ್ಥಗಳಿಂದಲೇ ಇದರ ಅಡುಗೆ ಮಾಡಬೇಕಾಗುತ್ತದೆ.

Colocasia escalenta ಹೆಸರಿನಿಂದ ಶೋಭಿಸುವ ಕೆಸು, ನೂರಾರು ಜಾತಿಗಳನ್ನೂ ಹೊಂದಿದೆ. ಗೆಡ್ಡೆಯೂ ಆಹಾರವಸ್ತು. ಕೈದೋಟದಲ್ಲಿ ಬೆಳೆಸಬಹುದಾದ ಒಂದು ಅಲಂಕಾರಿಕ ಸಸ್ಯ.

         





       
         

0 comments:

Post a Comment