Pages

Ads 468x60px

Wednesday 29 July 2020

ಅರಸಿಣ ಎಲೆ ಕಡುಬು






ನಾಗಪಂಚಮಿಗೆ ತಿಂಡಿಯೇನು ಎಂದು ಚಿಂತಿಸುವುದಕ್ಕಿಲ್ಲ,  ಅರಸಿಣದ ಎಲೆಯ ಕಡುಬು ಮಾಡುವ ರೂಢಿಯಾಗ್ಬಿಟ್ಟಿದೆ.   ಮನೆಹಿತ್ತಲಲ್ಲಿ ಸಾಕಷ್ಟು ಅರಸಿಣ ಗಿಡಗಳನ್ನು ಕಡುಬು ಮಾಡಲಿಕ್ಕೆಂದೇ ನೆಟ್ಟು ಸಲಹಿರುವಾಗ,  ಯಾವುದೋ ಸಂತೆಯಿಂದ ಸೊಪ್ಪುತಂದು ತಿಕ್ಕಿ ತಿಕ್ಕಿ ತೊಳೆಯುವ ಕೆಲಸ ನಮ್ಮಲ್ಲಿಲ್ಲ.


ಮಧ್ಯಾಹ್ನದ ಊಟ ಆಗುತ್ತಲೇ 2 ಲೋಟ ಬೆಳ್ತಿಗೆ ಅಕ್ಕಿ ತೊಳೆದು ನೀರು ಎರೆದು ಇಡುವುದು.

ಸಂಜೆಯ ಚಹಾ ಆದ ನಂತರ ಕೈಲೊಂದು ಪುಟ್ಟ ಕತ್ತಿ ಹಿಡಿದು ಹಿತ್ತಲಿಗೆ ಹೋಗಿ ಬೇಕಿದ್ದಷ್ಟು ಅರಸಿಣ ಎಲೆಗಳನ್ನು ಕುಯ್ದು ತರುವುದು. 

ಹತ್ತರಿಂದ ಹನ್ನೆರಡು ಎಲೆಗಳು ಇದ್ದರೆ ಸಾಕು.

ಒಂದು ಉದ್ದವಾದ ಎಲೆಯಿಂದ ಎರಡು ಕಡುಬು ಮಾಡಬಹುದು.


ಒಂದು ಹಸಿ ತೆಂಗಿನಕಾಯಿ ತುರಿಯುವುದು ಕಾಯಿತುರಿಯಲ್ಲಿ ದೊಡ್ಡ ಹೋಳುಗಳಿದ್ದರೆ ಮಿಕ್ಸಿಯಲ್ಲಿ ತಿರುಗಿಸಿ ತೆಗೆಯಿರಿ.

ಒಂದು ಅಚ್ಚು ಬೆಲ್ಲ ಚೂರಿಯಲ್ಲಿ ಹೆರೆದು ಇರಿಸುವುದು.

ಬೆಲ್ಲ ತೆಂಗಿನತುರಿಗಳಿಗೆ ನಿರ್ದಿಷ್ಟ ಅಳತೆಯೇನೂ ಬೇಡ ಎರಡನ್ನೂ ಬೆರೆಸಿ ನಾನ್ ಸ್ಟಿಕ್ ಬಾಣಲೆಯಲ್ಲಿ ಬೆಚ್ಚಗೆ ಮಾಡಿ ಇರಿಸುವುದು ಪಾಕ ಮಾಡಲಿಕ್ಕೇನೂ ಇಲ್ಲ.

ರುಚಿಗೆ ತಕ್ಕಷ್ಟು ಉಪ್ಪು ಸಹಿತವಾಗಿ ಅಕ್ಕಿಯನ್ನು ಅರೆಯಿರಿ ನೀರು ಮಿತವಾಗಿ ಹಾಕಿರಿ ಅರೆದ ಹಿಟ್ಟು ನುಣ್ಣಗಾಗಬೇಕು ತರಿ ತರಿ ಆದರೆ ಸಾಲದು.


ಅರಸಿಣ ಎಲೆಗಳನ್ನು ಬಟ್ಟೆಯಲ್ಲಿ ಒರೆಸಿ ಇಡುವುದು.

ಎಲೆಯ ಎರಡು ತುದಿಗಳನ್ನು ಕತ್ತರಿಸಿ.

ಉದ್ದವಾದ ಎಲೆಗಳನ್ನು 2 ರಿಂದ 3 ತುಂಡು ಮಾಡುವುದು ಇಡ್ಲಿ ಪಾತ್ರೆಯೊಳಗೆ ಇಡಲು ಸಾಧ್ಯವಾಗುವಂತಿರಬೇಕು.

ಬಾಳೆ ಎಲೆಯಂತೆ ಅರಸಿಣ ಎಲೆಯನ್ನು ಬಾಡಿಸುವುದಕ್ಕಿಲ್ಲ

ಬಾಡಿಸಿದ ಬಾಳೆಯಂತೆ ಇದನ್ನು ಬೇಕಿದ್ದಂತೆ ಮಡಚಿ ಇಡಲಿಕ್ಕೆ ಆಗುವುದಿಲ್ಲ ಅಂತಹ ಪ್ರಯತ್ನ ಮಾಡಿದ್ದೇ ಆದಲ್ಲಿ ಕೋಮಲವಾದ ಎಲೆ ಹರಿದು ಹೋದೀತು.


ಚಿಕ್ಕದಾದ ಸೌಟಿನಲ್ಲಿ ಅಕ್ಕಿ ಹಿಟ್ಟನ್ನು ಅರಸಿಣ ಎಲೆಯ ಮೇಲೆ ಎರೆದುತೆಳ್ಳಗಾಗಿ ಉಜ್ಜಿದಾಗ ಎಲೆ ತುಂಬ ಹರಡಿಕೊಳ್ಳಬೇಕು.

ಚಮಚದಲ್ಲಿ ಬೆಲ್ಲ ತೆಂಗಿನ ಮಿಶ್ರಣವನ್ನು ಮಧ್ಯದಲ್ಲಿ ಉದ್ದವಾಗಿ ಇರಿಸಿಎಲೆಯನ್ನು ಮಡಚಿಹಗುರಾಗಿ ಒತ್ತಿ..

 ಹೊತ್ತಿನಲ್ಲಿ ಅಟ್ಟಿನಳಗೆ ( ಇಡ್ಲಿಪಾತ್ರೆ ) ಯಲ್ಲಿ ನೀರು ಕುದಿಯುತ್ತಿರಬೇಕು.


ಎಲ್ಲ ಅರಸಿಣ ಎಲೆಗಳನ್ನೂ ಮೇಲೆ ಹೇಳಿದ ಪ್ರಕಾರವಾಗಿ ಅಟ್ಟಿನಳಗೆಯೊಳಗೆ ಇಟ್ಟುಭದ್ರವಾಗಿ ಮುಚ್ಚಿ ಹದಿನೈದರಿಂದ ಇಪ್ಪತ್ತು ನಿಮಿಷ ಬೇಯಿಸಿ.


ಸಂಜೆಯ ವೇಳೆ ಮಾಡಿಟ್ಟು ಮಾರನೇ ದಿನ ನಾಗಪಂಚಮಿಯ ಲೆಕ್ಕದಲ್ಲಿ ಸ್ವಾಹಾ ಮಾಡುವುದು ಇದರೊಂದಿಗೆ ಕೂಡಿ ತಿನ್ನಲು ಚಟ್ಣಿ ಸಾಂಬಾರು ಗೊಜ್ಜು ಇತ್ಯಾದಿ ಏನೂ ಬೇಡ.   ತುಪ್ಪ ಎರೆದು ಸವಿಯಿರಿ.

ಇದೀಗ ಹಬ್ಬಗಳು ಸಾಲಾಗಿ ಬರಲಿವೆ ಗಿಡದಲ್ಲಿ ಅರಸಿಣ ಎಲೆಗಳು ಒಣಗುವ ತನಕ  ಕಡುಬು ಮಾಡಲಡ್ಡಿಯಿಲ್ಲ.

ಕಡುಬು ಬೇಯಿಸುವ ಪಾತ್ರೆ ಇಲ್ಲದಿದ್ದರೆ ಕುಕ್ಕರಿನಲ್ಲಿ ಮಾಡಲೂ ತೊಂದರೆಯಿಲ್ಲ ವೆಯಿಟ್ ಹಾಕದಿದ್ದರಾಯಿತು.

ಅರಸಿಣ ಎಲೆಗಳು ಸಿಗದಿದ್ದರೆ ಬಾಳೆ ಎಲೆಯಲ್ಲಿ ಮಾಡಬಹುದು ಸುವಾಸನೆಗಾಗಿ ಒಂದು ಅರಸಿಣ ಎಲೆಯನ್ನು ಇಟ್ಟರೂ ಸಾಕಾಗುತ್ತದೆ.

ಬೆಲ್ಲತೆಂಗಿನ ಮಿಶ್ರಣ ಮುಗಿಯಿತು ಅಕ್ಕಿ ಹಿಟ್ಟು ಉಳಿದಿದೆ..  ಚಿಂತೆ ಬೇಡ,   ಕೇವಲ ಅಕ್ಕಿ ಹಿಟ್ಟನ್ನು ಬಾಳೆ ಎಲೆಯಲ್ಲಿ ತೆಳ್ಳಗೆ ಸವರಿಚಾಪೆಯಂತೆ ಸುರುಳಿ ಸುತ್ತಿ ಬೇಯಿಸಿಪಜೆಮಡಿಕೆ ಎಂದು ತಿನ್ನುವುದು.


ಪಕ್ಕದ ಮನೆಯಲ್ಲಿ ನಮ್ಮವರ ಅಣ್ಣ ಅತ್ತಿಗೆ ಇದ್ದಾರೆ ಮುಂಜಾನೆಯೇ ಅಲ್ಲಿಗೂ ಕೊಟ್ಟಿದ್ದಾಯ್ತು.

ಇನ್ನೀಗ ಪೂಜೆಗೆ ಭಟ್ರು ಬರಲಿಕ್ಕಾಯಿತು ಅವರಿಗೂ ಉಂಟಲ್ಲ.. " 

ಉಂಟು ಮಂಜೇಶ್ವರದಿಂದ ನಮ್ಮ ನೆಂಟ್ರೂ ಬರುವವರಿದ್ದಾರೆ ಎಲ್ಲರಿಗೂ ಉಂಟು.. "


ಭಾರತದ ಸಾಂಬಾರ ಪದಾರ್ಥಗಳಲ್ಲಿ ಪ್ರಸಿದ್ಧವಾದ ಅರಸಿಣವು ಸಂಸ್ಕೃತದಲ್ಲಿ ಹರಿದ್ರಾ ಎಂದೂವೈಜ್ಞಾನಿಕ ಪರಿಭಾಷೆಯಲ್ಲಿ curcuma longa ಆಗಿರುತ್ತದೆ.


ನಮ್ಮ ದಿನಬಳಕೆಯ ಅಡುಗೆಯನ್ನು ಅರಸಿಣ ಹುಡಿ  ಹಾಕದೇ  ಮಾಡಲಿಕ್ಕಿಲ್ಲ.  

ದೈವಾರಾಧನೆಯಲ್ಲಿ ಕೂಡಾ ಅರಸಿಣ ಹುಡಿ ಇದ್ದೇ ತೀರಬೇಕು.

ಅರಸಿಣ ಎಲೆಯ ವಿಶೇಷತೆಯೇನು?

ಪ್ರಭಾವಶಾಲಿ ಆ್ಯಂಟಿ ಓಕ್ಸಿಡೆಂಟ್,  

ಜೀರ್ಣಶಕ್ತಿ ವೃದ್ಧಿ,  

ವಾಯುಪ್ರಕೋಪ ನಿವಾರಕ,

ಗಂಟುಗಳ ಉರಿಯೂತ ಶಾಮಕ,

ಸಂಧಿವಾತದ ಬಳಲಿಕೆಗೂ ಉತ್ತಮ.

ಒಳ್ಳೆಯದೆಂದು ಅತಿ ಬಳಕೆ ತರವಲ್ಲ.






0 comments:

Post a Comment