Pages

Ads 468x60px

Sunday, 9 September 2012

ಕೈತೋಟದಲ್ಲಿ ಟೊಮ್ಯಾಟೋ ಆಟ


ಹಾಗೇ ಸುಮ್ಮನೆ ಮನೆ ಹಿತ್ತಿಲಲ್ಲಿ ಅಡ್ದಾಡುತ್ತಿದ್ದೆ . ದೊಡ್ಡ ಮಳೆಗಾಲ ಮುಗಿದಿತ್ತು . ಏನೇನೋ ಗಿಡಗಂಟಿಗಳು ಅತ್ತಿತ್ತ ಓಲಾಡುತ್ತಾ , ಅದೇನನ್ನೋ ಪಿಸುಗುಟ್ಟುತ್ತಿದ್ದಂತೆ ......... ಅರೆ , ......ಇದೇನಿದು , ನೆಲದಲ್ಲಿ ವಿಸ್ತಾರವಾಗಿ ಹರಡಿ ಮಲಗಿಕೊಂಡಿತ್ತು ಟೊಮ್ಯಾಟೋ ಸಸಿ , ಎಷ್ಟಿವೆ ..... ಮೆಲ್ಲಗೆ ಅತ್ತಿತ್ತ ಸರಿಸಿ ನೋಡಿದಾಗ .... ನಾಲ್ಕೋ , ಐದೋ ಇವೆ . ಹೆಚ್ಚು ತಡವಿದರೆ ಗಿಡವೆಲ್ಲಿ ನಲುಗುವುದೋ .......ಆಗಲೇ ಪುಟ್ಟ ಪುಟ್ಟ ಹೀಚುಗಾಯಿಗಳು !

" ಹ್ಞೂಂ , ಇರಲಿ ನೋಡೋಣ , ಬಿಡಬಾರದು ....." ಪ್ರತಿದಿನವೂ ನೀರು ಹಾಕುತ್ತಾ ಬಂದೆ . ಅಡುಗೆಮನೆಯ ವ್ಯರ್ಥ ನೀರು ಅಲ್ಲಿಗೇ ಹರಿದು ಬರುವಂತೆ ಒಂದು ಪೈಪ್ ಸಂಪರ್ಕ ಕೊಟ್ಟು ಸುಮ್ಮನಾದೆ .

ಮತ್ತೊಂದಷ್ಟು ದಿನ ಕಳೆದು ನನ್ನ ಸಂಜೆಯ ತಿರುಗಾಟ ಪುನಃ ಟೊಮ್ಯಾಟೋ ಇದ್ದಲ್ಲಿಗೆ ಬಂದಿತು . ಕೆಂಪು ಕೆಂಪು ಟೊಮ್ಯಾಟೋ ಹಣ್ಣುಗಳು , ನಗುತ್ತಿದ್ದುವು . ಹಣ್ಣಾದವುಗಳನ್ನು ಕಿತ್ತು ಸೀರೆಯ ಸೆರಗಿನಲ್ಲಿ ಕಟ್ಟಿಕೊಂಡು ಮನೆಯ ಕಡೆ ತಿರುಗಿದೆ . " ನಾಳೆಗೊಂದು ಸಾರು ಉಚಿತ ಕೊಡುಗೆ ......." ದೊರೆಯಿತು .

ನಾಲ್ಕು ದಿನಕ್ಕೊಮ್ಮೆ ನೋಡಿ , ಕಿತ್ತು ತರುವುದೂ , ಸಾರು ಮಾಡುವುದೂ , ಸಾರು ಮಾಡುವುದೂ ಮುಂದುವರಿಯಿತು . " ಸಾರು ಮಾಡುತ್ತಾ ಇರು , ಮುಗಿಯಲಾರೆ ....." ಬುಟ್ಟಿಯ ತುಂಬಾ ಕುಳಿತಿದ್ದ ಟೊಮ್ಯಾಟೋ ಹಣ್ಣು ನಕ್ಕು ಬಿಟ್ಟಿತು .

" ಬಿಡ್ತೇನಾ , ನಗುತ್ತಿರು ...."
ದಿನಾ ಸಂಜೆ ಟೊಮ್ಯಾಟೋ ಜ್ಯೂಸ್ .......


Posted via DraftCraft app

<><><> <><><>


ಟಿಪ್ಪಣಿ: ದಿನಾಂಕ 10, ಅಕ್ಟೋಬರ್, 2013ರಂದು ಮುಂದುವರಿಸಿ ಬರೆದದ್ದು.
ಟೊಮ್ಯಾಟೋ ಸಾಸ್:
4 ಟೊಮ್ಯಾಟೋ, ದೊಡ್ಡ ಗಾತ್ರದ್ದು
ಒಂದು ಹಸಿಮೆಣಸು, ಖಾರ ಇಲ್ಲದ್ದು
ರುಚಿಗೆ ಉಪ್ಪು, ಸಕ್ಕರೆ
1-2 ಚಮಚ ತುಪ್ಪ ಅಥವಾ ಎಣ್ಣೆ

ಟೊಮ್ಯಾಟೋ ಹಾಗೂ ಹಸಿಮೆಣಸನ್ನು ಇಡಿಯಾಗಿ ಬೇಯಿಸಿ. ತಣಿದ ಮೇಲೆ ಸಿಪ್ಪೆ ತೆಗೆದು ಅರೆದುಕೊಳ್ಳಿ, ನೀರು ಬೇಡ. ತಣ್ಣೀರಿನಲ್ಲಿ ಹಾಕಿಟ್ಟರೆ ಬೇಗನೆ ಸಿಪ್ಪೆ ತೆಗೆಯಬಹುದು.

ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿಕೊಳ್ಳಿ. ಅರೆದ ಮಿಶ್ರಣವನ್ನು ಎರೆಯಿರಿ. ಕುದಿಯುತ್ತಿದ್ದ ಹಾಗೆ ಉಪ್ಪು, ಸಕ್ಕರೆ ಹಾಕಿ ದಪ್ಪಗಟ್ಟುತ್ತಿದ್ದ ಹಾಗೇ ಸೌಟಿನಲ್ಲಿ ಕೈಯಾಡಿಸಿ, ಕೆಳಗಿಳಿಸಿ.
ಅತಿ ಶೀಘ್ರವಾಗಿ ತಯಾರಿಸಬಹುದು, ಮಕ್ಕಳ ಮೆಚ್ಚುಗೆಗೆ ಪಾತ್ರರಾಗಿ ಬ್ರೆಡ್, ಚಪಾತಿ, ಪೂರಿ, ನಾನ್, ತೆಳ್ಳವು ಜೊತೆ ಸವಿಯಿರಿ. ಒಂದೆರಡು ದಿನ ಇಟ್ಟುಕೊಳ್ಳಬಹುದು.

ಅದೇನೇ ಹೊಸ ರುಚಿ ಓದಲು ಅಥವಾ ಟೀವಿಯಲ್ಲಿ ನೋಡಲು ಹೊರಟಿರೋ, ಟೊಮ್ಯಾಟೋ ಪ್ಯುರೀ ಇಲ್ಲದ ಅಡುಗೆಯೇ ಇಲ್ಲ. ಕೇವಲ ಟೊಮ್ಯಾಟೋ ಮಾತ್ರ ಬೇಯಿಸಿ, ಅರೆದು, ದಪ್ಪಗಟ್ಟುವಷ್ಟು ಕಾಯಿಸಿ ಇಟ್ಟಲ್ಲಿ ಟೊಮ್ಯಾಟೋ ಪ್ಯುರೀ ಆಯ್ತು, ಇದನ್ನು ಟೊಮ್ಯಾಟೋ ಹಾಕಿ ಮಾಡಬಹುದಾದ ಅಡುಗೆಯಲ್ಲಿ ಉಪಯೋಗಿಸಿ. ಸಕ್ಕರೆ, ತುಪ್ಪ ಹಾಕಿ ಜಾಮ್ ಕೂಡಾ ಮಾಡಿಕೊಳ್ಳಬಹುದು.ಟೊಮ್ಯಾಟೋ ಸೂಪ್:
ಸಾಸ್ ಮಾಡ್ತಿದ್ದ ಹಾಗೇ ಸೂಪ್ ಮಾಡಿಕೊಳ್ಳೋಣ, ಹೇಗೂ ಕುಚ್ಚುಲಕ್ಕಿ ಗಂಜಿ ಬಸಿದಿದ್ದ ತೆಳಿ ( ಗಂಜಿನೀರು ) ಇತ್ತು. ಸೂಪ್ ಕುಡಿಯುವ ಮಂದಿ ನಾವಿಬ್ಬರೇ ಇದ್ದಿದ್ದು, ಎರಡು ಪುಟ್ಟ ಬಟ್ಟಲು ತೆಳಿ ಅಳೆದು ತಪಲೆಗೆರೆದಾಯ್ತು. ಒಂದು ಪುಟ್ಟ ಸೌಟಿನಲ್ಲಿ ಕುದಿಯುತ್ತಿದ್ದ ಟೊಮ್ಯಾಟೋ ಸಾಸ್ ತೆಗೆದು, ತಪಲೆಗೆರೆದು, ನಾಲ್ಕು ಕಾಳುಮೆಣಸು ಜಜ್ಜಿಹಾಕಿ, ರುಚಿ ನೋಡಿ, ಸ್ವಲ್ಪ ಸಕ್ಕರೆ ಹಾಕಿ ಇನ್ನೊಮ್ಮೆ ಕುದಿಸಿ ಒಂದು ಚಮಚಾ ತುಪ್ಪ ಎರೆಯುವಲ್ಲಿಗೆ ಈ ಸರಳವಾದ ಚಳಿ ಬಿಡಿಸುವ ಟೊಮ್ಯಾಟೋ ಸೂಪ್ ರೆಡಿ.ಟೊಮ್ಯಾಟೋ ಸಾರು:
4 ಟೊಮ್ಯಾಟೋ ಹಣ್ಣು
2 ಹಸಿಮೆಣಸು
ಚಿಕ್ಕ ತುಂಡು ಶುಂಠಿ
ಒಂದು ಹಿಡಿ ತೆಂಗಿನ ತುರಿ
ಉಪ್ಪು, ಬೆಲ್ಲ
ಕರಿಬೇವಿನೆಸಳು/ಕೊತ್ತಂಬರಿ ಸೊಪ್ಪು
ಅರ್ಧ ಕಪ್ ತೊಗರಿಬೇಳೆ
ತೊಗರಿಬೇಳೆ, ಟೊಮ್ಯಾಟೋ, ಹಸಿಮೆಣಸು, ಶುಂಠಿಗಳನ್ನು ಬೇಯಿಸಿ.

ಮಸಾಲೆಗೆ ಬೇಕಾದ ಸಾಮಗ್ರಿ:
2 ಕುಮ್ಟೆ ಮೆಣಸು
2 ಚಮಚ ಕೊತ್ತಂಬರಿ
ಜೀರಿಗೆ, ಮಂತೆ ಸ್ವಲ್ಪ
ಇಂಗು, ಉದ್ದಿನಕಾಳಿನಷ್ಟು

ಹುರಿದುಕೊಳ್ಳಿ, ತೆಂಗಿನ ತುರಿಯೊಂದಿಗೆ ಅರೆಯಿರಿ, ನೀರು ಹಾಕದೇ ಅರೆದರೆ ಉತ್ತಮ.
ಬೇಯಿಸಿಟ್ಟ ಸಾಮಗ್ರಿಗೆ ಈ ಮಸಾಲೆ ಸೇರಿಸಿ. ಅವಶ್ಯವಿದ್ದಷ್ಟು ನೀರು ಎರೆಯಿರಿ. ಉಪ್ಪು, ಬೆಲ್ಲ ಕೂಡಿಸಿ ಕುದಿಸಿ. ಕುದಿಯುವಾಗ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ. ತುಪ್ಪದಲ್ಲಿ ಕರಿಬೇವಿನ ಒಗ್ಗರಣೆಯನ್ನೂ ಮರೆಯದಿರಿ.
ಟೊಮ್ಯಾಟೋ ಇಲ್ಲದಿದ್ದರೂ ಈ ಸಾರನ್ನು ಮಾಡಿಕೊಳ್ಳಬಹುದು, ಹುಣಸೇಹಣ್ಣು ಹಾಕಿ, ಕೊತ್ತಂಬ್ರಿ ಸಾರು ಅನ್ನಿ.
ಟೊಮ್ಯಾಟೋ ಸಲಾಡ್:
ಟೊಮ್ಯಾಟೋದೊಂದಿಗೆ ಹಸಿಯಾಗಿ ಬಳಸಬಹುದಾದ ಎಲ್ಲಾ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿಟ್ಟು, ಊಟದ ಹೊತ್ತಿಗೆ ಉಪ್ಪು ಬೆರೆಸಿದರಾಯಿತು. ಮೊದಲೇ ಉಪ್ಪು ಹಾಕಿದ್ರೆ ಹಸಿ ತರಕಾರಿಗಳು ನೀರು ಬಿಟ್ಟಂತಾಗಿ ತಾಜಾತನ ಇಲ್ಲವಾದೀತು.ಟೊಮ್ಯಾಟೋ ಗೊಜ್ಜು:
ಸಲಾಡ್ ತಯಾರಿಸುವ ವಿಧಾನವನ್ನೇ ಇಲ್ಲಿ ಮಾಡಿ, ಸಾಕಷ್ಟು ಮೊಸರು ಅಥವಾ ಕಡೆದ ಮಜ್ಜಿಗೆ ಎರೆದು ಒಗ್ಗರಣೆ ಕೊಡಿ.
0 comments:

Post a Comment