Pages

Ads 468x60px

Saturday 11 August 2018

ಪೆಲತ್ತರಿಯ ಪುಲಾವ್





ಹಲಸಿನ ಸೊಳೆಗಳನ್ನು ಆಯ್ದು ಇಡುವಾಗ ಬೇಳೆಗಳನ್ನು ಬಿಸಾಡುವುದಕ್ಕಿಲ್ಲ, ತೆಗೆದಿರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ನನ್ನ ಉಪಯೋಗಕ್ಕೆ ಬಾರದಿದ್ದರೂ ಕಲ್ಯಾಣಿ ಇದನ್ನು ಒಯ್ಯುವಾಕೆ, ಬೇಳೆಗಳನ್ನು ಭದ್ರವಾಗಿ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟೂ ಕಾಪಾಡಿಕೊಳ್ಳಬಹುದು ಎಂಬ ಗುಟ್ಟನ್ನು ಅವಳು ಪ್ಲಾಸ್ಟಿಕ್ ಚೀಲಗಳ ಆಗಮನದೊಂದಿಗೇ ಕಂಡುಕೊಂಡಿದ್ದಳು. ಮಳೆಗಾಲದ ಆಟಿ ತಿಂಗಳಲ್ಲಿ ಹಲಸಿನಬೇಳೆಯ ತಿನಿಸುಗಳನ್ನು ಮಾಡಿ ತಿನ್ನಬೇಕು ಎಂದು ರೂಢಿಯೂ ಇದೆ. ಇದಕ್ಕೆ ಕಾರಣವಿಲ್ಲದಿಲ್ಲ. ಬಿರುಸಾಗಿ ಮಳೆ ಹುಯ್ಯುತ್ತಿರುವಾಗ, ಕೂಲಿಕಾರ್ಮಿಕರಿಗೆ ಕೆಲಸವಿಲ್ಲ, ದುಡ್ಡುಕಾಸು ಕೈಯಲ್ಲಿ ಇಲ್ಲ. ಒಂದು ಹೊತ್ತಿನ ಊಟ ಮಾಡಬೇಕಾದರೆ ಗದ್ದೆಯ ಕೊಯಿಲು ಮುಗಿದು ಭತ್ತ ಅಕ್ಕಿಯಾಗಿ ಸಿಗುವ ತನಕ ಉಪವಾಸವೇ ಗತಿ. ಅಂತಹ ಸಂದರ್ಭದಲ್ಲಿ ಜೋಪಾನವಾಗಿ ಇಟ್ಟಂತಹ ಹಲಸಿನಬೇಳೆ, ನಮ್ಮ ಆಡುಮಾತು ತುಳುವಿನಲ್ಲಿ ‘ ಪೆಲತ್ತರಿ ‘ ಆಹಾರವಸ್ತು. ಈ ಪೆಲತ್ತರಿಯಿಂದ ಬಗೆಬಗೆಯ ಖಾದ್ಯಗಳನ್ನು ಮಾಡಬಲ್ಲವರು ನಾವು. ಪಲ್ಯ, ಗಸಿ, ಕೂಟು, ರೊಟ್ಟಿ, ವಡೆ ಸಾಲದುದಕ್ಕೆ ಹೋಳಿಗೆಯ ಹೂರಣವನ್ನೂ ಹಲಸಿನಬೇಳೆಯಿಂದಲೇ ಮಾಡುವ ಪಾಕತಜ್ಞರು ನಮ್ಮಲ್ಲಿದ್ದಾರೆ.

“ ಹೋಳಿಗೆ ಆಗುತ್ತದಾದರೆ ಪರೋಟಾ ಕೂಡಾ ಮಾಡಬಹುದಲ್ಲ... “
“ ಆಗದೇನು, ಪರೋಟವೂ ಮಾಡಿಕೋ… ಆದ್ರೆ ಜಾಸ್ತಿ ತಿನ್ಬೇಡ. “ ಎಚ್ಚರಿಸುವ ಸರದಿ ಗೌರತ್ತೆಯದು.
“ ಏನೇ ತಿಂಡಿ ತಿನಿಸು ಮಾಡಿದ್ರೂನೂ ಹಿತಮಿತವಾಗಿ ತಿನ್ನಲೂ ತಿಳಿದಿರಬೇಕು. “
“ ಹಂಗಂತೀರಾ, ಆದ್ರೆ ಹಿಂದಿನಕಾಲದಲ್ಲಿ ಹಲಸಿನಬೇಳೆ ತಿಂದೇ ಜೀವನ… ಅಂತ ಕತೇನೂ ಚೆನ್ನಾಗಿ ಹೇಳ್ತೀರಲ್ಲ! “
“ ಅದನ್ನೆಲ್ಲ ವಿವರವಾಗಿ ತಿಳಿಯಬೇಕಿದ್ದರೆ ನಿನ್ನ ಚೆನ್ನಪ್ಪನನ್ನೇ ಕೇಳಿಕೋ… “ ಎಂದರು ಗೌರತ್ತೆ.

ಹತ್ತು ಗಂಟೆಯಾಯಿತೇ, ಚೆನ್ನಪ್ಪನ ಚಹಾ ವೇಳೆ. “ ಹೌದ ಚೆನ್ನಪ್ಪ, ನಿನ್ನೆ ಮಾಡಿದ ತಿಂಡಿ ಇತ್ತಲ್ಲ, ಅದೇ ಕಡಿಯಕ್ಕಿ ಉಪ್ಪಿಟ್ಟು, ಅದನ್ನು ಹಲಸಿನಬೇಳೆ ಹಾಕಿಯೂ ಮಾಡಬಹುದಲ್ಲವೇ? “ ನನ್ನ ಪ್ರಶ್ನೆಯ ಬಾಣ.
“ ಅಕ್ಕಿ ಯಾಕೆ, ಬರೇ ಪೆಲತ್ತರಿ ( ಹಲಸಿನಬೇಳೆ ) ಬೇಯಿಸೂದು, ಆ ಮೇಲೆ ಪುಡಿ ಪುಡಿ ಮಾಡೂದು, ಬೆಲ್ಲ ಕಾಯಿತುರಿ ಹಾಕಿ ತಿನ್ನೂದು ಅಷ್ಟೇಯ… “
“ ಹಾಗಾದ್ರೆ ಅಕ್ಕಿ ಇಲ್ಲದೇ ತಿಂಡಿ ಆಗುತ್ತೇ… “
“ ನಾನು ಚಿಕ್ಕೋನಿದ್ದಾಗ ಅಕ್ಕಿ ಎಲ್ಲಿಂದ ಬರಬೇಕು, ಹೀಗೇ ಪೆಲತ್ತರಿಯೇ ನಮ್ಮ ಹೊಟ್ಟೆಗೆ, ಅದೂ ಇಲ್ಲವಾದರೆ ಹಲಸಿನ ಹಣ್ಣನ್ನು ಇರುವಲ್ಲಿಂದ ಕೇಳಿ ತಂದು ಬೇಯಿಸಿ ತಿನ್ನುವುದು, ಅಕ್ಕಿಯೇ ಇಲ್ಲ ಆಗ… “
ಹಲಸಿನ ಬೇಳೆಯು ಪೆಲತ್ತರಿ ಹೇಗಾಯ್ತು ಎಂದು ಈಗ ಅರ್ಥವಾಯಿತು, ಪೆಲಕ್ಕಾಯಿತ ಅರಿ ಎಂದು ಬಿಡಿಸಿ ಓದಿದಾಗ ತುಳು ಭಾಷೆಯ ಈ ಶಬ್ದಾರ್ಥ ಹಲಸಿನಕಾಯಿಯ ಅಕ್ಕಿ ಎಂದಾಯಿತು. ಹಲಸಿನಕಾಯಿ ಒಳಗಿರುವ ಬೇಳೆಯನ್ನು ಅಕ್ಕಿಯಾಗಿ ಉಪಯೋಗಿಸುವ ಮರ್ಮ ಇಲ್ಲಿದೆ.

ಹೌದು, ಬೇಸಾಯದ ಗದ್ದೆ ಕಟಾವ್ ಆಗುವ ತನಕ, ಕೊಯ್ಲು ಕೆಲಸ ಆದ ನಂತರ ಗದ್ದೆಯ ಯಜಮಾನ ಕೂಲಿ ಮಜೂರಿ ಎಂದು ಭತ್ತ ಅಳೆದು ಕೊಡುವ ತನಕ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಮಂದಿ ಅಕ್ಕಿಯನ್ನು ಕಾಣಲಿಕ್ಕಿಲ್ಲ ಎಂದು ನನ್ನ ಅಪ್ಪ ಎಂದೋ ಹೇಳಿದ್ದು ನೆನಪಾಯಿತು.

“ ಹೌದಂತೆ, ಕೊಯ್ಲು ಆದ ನಂತರ ಗದ್ದೆಯಲ್ಲಿ ಬಿದ್ದ ಭತ್ತವನ್ನೂ ಆಯ್ದು ಕೊಂಡೊಯ್ಯುತ್ತಿದ್ದರಂತೆ… “ ಅನ್ನುವಲ್ಲಿಗೆ ನಮ್ಮ ಮಾತುಕತೆ ಮುಗಿಯಿತು.

ಈಗ ಹೇಗೂ ಆಷಾಢಮಾಸ, ಹಲಸಿನಬೇಳೆಯನ್ನು ಹೇಗೋ ಒಂದು ವಿಧವಾಗಿ ತಿನ್ನೋಣವೆಂದು ಪುಲಾವ್ ಎಂಬ ಜನಪ್ರಿಯ ತಿಂಡಿಯನ್ನು ಆಯ್ಕೆ ಮಾಡಿದ್ದಾಯಿತು.

7 - 8 ಹಲಸಿನಬೇಳೆಗಳು. ಹೊರಸಿಪ್ಪೆಯನ್ನು ತೆಗೆದು, ಚೂರಿಯಲ್ಲಿ ಒಂದೇಗಾತ್ರದ ತುಂಡುಗಳನ್ನಾಗಿಸಿ, ಕುಕ್ಕರಿನಲ್ಲಿ ಬೇಯಿಸಿ ಇಡುವುದು.
ಒಂದು ಲೋಟ ಸೋನಾಮಸೂರಿ ಅಕ್ಕಿಯಿಂದ ಉದುರುದುರಾದ ಅನ್ನ ಮಾಡಿ ಇಡುವುದು.
ಅನ್ನ ಮಾಡುವಾಗಲೇ ಉಪ್ಪು ಹಾಕಿಕೊಳ್ಳಿ, ಅನ್ನ ಮುದ್ದೆಗಟ್ಟುವುದಿಲ್ಲ ಹಾಗೂ ಪುನಃ ಉಪ್ಪು ಹಾಕದಿದ್ದರಾಯಿತು.
ತರಕಾರಿಗಳ ಆಯ್ಕೆ ನಿಮ್ಮದು. ಬೇಗನೆ ಬೇಯುವಂತಹ ನೀರುಳ್ಳಿ, ಟೊಮ್ಯಾಟೋ, ಬೀನ್ಸ್, ಕ್ಯಾರೆಟ್ ಇತ್ಯಾದಿಗಳನ್ನು ಅಗತ್ಯವಿದ್ದ ಹಾಗೆ ಒಂದೇ ಗಾತ್ರದಲ್ಲಿ ಕತ್ತರಿಸಿ ಇಡುವುದು.
ಹಸಿರು ಬಟಾಣಿ ಯಾ ಇನ್ಯಾವುದೇ ಕಾಳು ಈ ದಿನ ಬೇಡ, ನಾವು ಹಲಸಿನಬೇಳೆ ಹಾಕುವವರಿದ್ದೇವೆ.

ಬಾಣಲೆಗೆ ಅಡುಗೆಯ ಎಣ್ಣೆ ಯಾ ತುಪ್ಪ ಎರೆದು,
ಲವಂಗ ಚಕ್ಕೆ ಚೂರುಗಳನ್ನು ಹಾಕಿ,
ಜೀರಿಗೆ, ಕಾಳುಮೆಣಸಿನ ಹುಡಿಯನ್ನೂ ಹಾಕಿ ಹುರಿಯಿರಿ.

ನೀರುಳ್ಳಿ, ಜಜ್ಜಿ ಇಟ್ಟ ಶುಂಠಿ ಬೆಳ್ಳುಳ್ಳಿ ಹಾಕಿ, ಹಸಿವಾಸನೆ ಹೋಗುವ ತನಕ ಬಾಡಿಸಿ.
ಟೊಮ್ಯಾಟೋ ಹಾಗೂ ಇತರ ತರಕಾರಿಗಳನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ, ಸೌಟಾಡಿಸಿ.
ಈ ಹಂತದಲ್ಲಿ ತುಪ್ಪ ಸಾಕಾಗದಿದ್ದರೆ ಇನ್ನಷ್ಟು ಎರೆಯಿರಿ.
ಬೇಯಿಸಿಟ್ಟ ಹಲಸಿನಬೇಳೆ ಹಾಕಿ,
ನಿಮ್ಮ ರುಚಿಗನುಸಾರ ಪುಲಾವ್ ಮಸಾಲೆ ಹುಡಿ ಉದುರಿಸಿ.
ಮಾಡಿಟ್ಟ ಅನ್ನ, ಒಂದು ಹಿಡಿ ಕಾಯಿತುರಿ ಬೆರೆಸಿ, ಕೊತ್ತಂಬರಿ ಸೊಪ್ಪಿನ ಅಲಂಕರಣ ಇರಲಿ.
ಬಿಸಿಬಿಸಿಯಾಗಿ ಬಡಿಸಿಕೊಂಡು ತಿನ್ನಿರಿ.
ಕೂಡಿಕೊಳ್ಳಲು ದಪ್ಪ ಮೊಸರು ಸಾಕು,
“ದಪ್ಪ ಮೊಸರಿಗೆ ಒಗ್ಗರಣೆ ಹಾಕಿ, ಸ್ವಲ್ಪ ಉಪ್ಪು… “ ಗೌರತ್ತೆಯ ವಗ್ಗರಣೆ ಬಂದಿತು.

         



0 comments:

Post a Comment