Pages

Ads 468x60px

Wednesday 12 September 2012

" ಹೇಳಕ್ಕಾ .... ಗಾಂಧಾರಿ , ನಿನ್ನ ಗುಟ್ಟು ತಿಳಿಸಕ್ಕಾ .... "





ಊಟದ ಹೊತ್ತಾಗಿತ್ತು .  ಹಿಂಬಾಗಿಲಲ್ಲಿ ನಿಂತಿದ್ದೆ ,   ನನ್ನ ಕೆಲಸಗಿತ್ತಿಯನ್ನು ಕಾಯುತ್ತಾ .   ಅವಳೋ ಬಂದಳು .   ಉರಿಬಿಸಿಲಿಗೆ ಬೆವರುನೀರು ಸುರಿಸುತ್ತಾ .   " ಅಕ್ಕಾ ,  ತಣ್ಣಗೆ ಮಜ್ಜಿಗೆನೀರು ಕೊಡಿಯಕ್ಕಾ ..." ಎಂದಳು .   ನನಗೂ ಗೊತ್ತಿತ್ತು  ಅವಳ ಮಾತಿನ ಧಾಟಿ ಹೀಗೇ ಇರುತ್ತೆ ಅಂತ .   ಮಾತಾಡದೆ ಚೆಂಬು ತುಂಬಾ ಮಜ್ಜಿಗೆ ತುಂಬಿಸಿ ಕೊಟ್ಟೆ .   " ಉಪ್ಪು ಹಾಕಿದ್ದೀರಲ್ಲ "  ಅನ್ನುತ್ತ ಕೈ ಬೊಗಸೆಯಲ್ಲಿದ್ದ ಗಾಂಧಾರಿ ಮೆಣಸುಗಳನ್ನು  ತೊಟ್ಟು ಮುರಿದು ,   ಅದನ್ನು  ಮಜ್ಜಿಗೆಗೆ ಹಾಕಿ  ನುರಿದು ನುರಿದು  ಲೋಟಕ್ಕೆ ಎರೆದು  ಎರೆದು ಕುಡಿದಳು .    " ಉಸ್ ,   ಈಗ ಹೊಟ್ಟೆ ತಂಪಾಯಿತು .."    ಅನ್ನುತ್ತ  ಕೈಕತ್ತಿಯನ್ನು  ಜಾಗದಲ್ಲಿ ಭದ್ರವಾಗಿ ಇರಿಸಿದಳು .    

ಸಂಜೆಯ ವೇಳೆ ,   ನನ್ನ  ಕಲ್ಯಾಣಿ   " ಇನ್ನು ನಾಳೆಗೆ "  ಎನ್ನುತ್ತಾ  ಮನೆಗೆ ಹೊರಡುವ  ಆತುರದಲ್ಲಿ ಪುನಃ ತೋಟಕ್ಕೆ ಓಡಿದಳು .   ಕೈಯಲ್ಲಿ  ತುಂಬಾ ಗಾಂಧಾರಿ ಮೆಣಸುಗಳು ,    ಇರುಳು  ಊಟಕ್ಕೆ  ಒಣ ಮೀನಿನ   ಜೊತೆ  ನೆಂಜಿಕೊಳ್ಳಲು  ಅವಳಿಗೆ  ಬೇಕಾಗಿತ್ತು .   ತೋಟದ ಕೆಲಸವಿರಲಿ ,   ಗದ್ದೆ ಬೇಸಾಯದ ನೇಜಿ ,  ಕೊಯ್ಲು  ಸಮಯದಲ್ಲಿ  ಇವಳಂತಹ ಶ್ರಮಜೀವಿಗಳು  ಗಾಂಧಾರಿಯ  ಸವಿರುಚಿಯನ್ನೇ ಬಯಸುತ್ತಾರೆ .   " ಛೆ ,  ನನ್ನ  ಮನೆ ಹಿತ್ತಿಲಲ್ಲಿ ಒಂದು ಗಿಡವೂ ಇಲ್ಲ ..."  ಎಂದು ಪರಿತಪಿಸುತ್ತಾ ,  ತೋಟದಲ್ಲಿ ಉಚಿತವಾಗಿ ಸಿಗುವ  ಮೆಣಸುಗಳನ್ನೂ ,   ಬೇಕಿದ್ದರೆ ಗಿಡವನ್ನೇ ಕಿತ್ತು  ಹೊತ್ತೊಯ್ಯುತ್ತಾರೆ .

ಅಷ್ಟೇ ಏಕೆ ,  ಪರಿಚಿತರು ಮನೆಗೆ ಬಂದರು . ....
" ಬಾಯಾರಿಕೆ ಏನು ತರಲೀ "   
" ನೋಡು ,  ನಿನ್ನ ಕಾಪೀ ಗೀಪೀ ಏನೂ  ಬೇಡಾ ,  ಮಜ್ಜಿಗೆನೀರು  ಸಾಕು ,  ಒಂದು  ಸಣ್ಣ ಗಾಂಧಾರಿ ಹಾಕು ಆಯ್ತಾ ..."
ಹೇಳುತ್ತಿದ್ದಂತೆ  ಗಾಂಧಾರಿ ಪೇಯ ಬಂದಿತು .



ಈ ಸೂಜಿ ಮೆಣಸನ್ನು ಮೊದಲ ಬಾರಿ ಉಪಯೋಗಿಸುವವರು ಸಾಕಷ್ಟು ಮುಂಜಾಗ್ರತೆ ವಹಿಸುವುದು ಅವಶ್ಯ .     ತೊಟ್ಟು  ಮುರಿದು  ಕತ್ತರಿಸಿ ,  ನಂತರ ನಿಮ್ಮ ಕೈಯನ್ನು ನಾಲಿಗೆ ,  ಕಣ್ಣು ,  ಕಿವಿ ,  ಮೂಗುಗಳ  ಹತ್ತಿರ ತರುವಂತಿಲ್ಲ .    ಅಂತಹ  ಪ್ರಖರತೆ  ಇದಕ್ಕಿದೆ .   " ಉರಿ ,  ಉರಿ "   ಎಂದು ಬೊಬ್ಬೆ ಹಾಕುವುದೊಂದೇ  ಗತಿ ಆದೀತು .    ಎಷ್ಟು  ತಂಬಿಗೆ ನೀರು  ಕುಡಿದರೂ  ಶಮನವಾಗದು .   ಜಾಗ್ರತೆ ವಹಿಸಿ ,  ಅಗತ್ಯ ಬಿದ್ದಲ್ಲಿ   1 ಕಪ್  ಮೊಸರು  ಸೇವಿಸಿ . 

ಮೆಣಸು ಅಷ್ಟು ಖಾರವಿದ್ದರೂ  ಎಲೆಗಳನ್ನು  ಇನ್ನಿತರ ಸೊಪ್ಪುಗಳಂತೆ  ಅಡುಗೆಯಲ್ಲಿ  ಬಳಸಬಹುದಾಗಿದೆ .  ಕಟು ರುಚಿಯೂ ಇಲ್ಲ ,   ಪರಿಮಳವೂ ಇಲ್ಲ ,  ಯಾವ ಸೊಪ್ಪನ್ನು  ನಿಮ್ಮ ಖಾದ್ಯಕ್ಕೆ  ಬಳಸಿದ್ದೀರಿ ಎಂದು ಮೂರನೆಯವರಿಗೆ ತಿಳಿಯುವಂತಿಲ್ಲ .   

ತಂಬುಳಿ  ಹೀಗೆ  ಮಾಡಿ  : 

  25  -  30  ಎಲೆಗಳನ್ನು  ಸಣ್ಣಗೆ  ಕತ್ತರಿಸಿ ,  ತುಪ್ಪದಲ್ಲಿ ಚೆನ್ನಾಗಿ ಬಾಡಿಸಿ .    ತೆಂಗಿನತುರಿಯೊಂದಿಗೆ  2  ಬೆಳ್ಳುಳ್ಳಿ ,   1  ನೀರುಳ್ಳಿ ,   1 ಗಾಂಧಾರಿ ಮೆಣಸು ಹಾಕಿ  ನುಣ್ಣಗೆ  ಕಡೆದು  1 ಲೋಟ ದಪ್ಪ ಮಜ್ಜಿಗೆ ಸೇರಿಸಿ  ಒಗ್ಗರಣೆ  ಕೊಟ್ಟು ಬಿಡಿ .   ಮಜ್ಜಿಗೆ  ಹಾಕದಿದ್ದರೆ ಚಟ್ನಿ  ಎಂದು ಹೆಸರು ಕೊಡಿ .   
 
 ಉಪ್ಪು  ಹುಳಿಯೊಂದಿಗೆ  ಮಸಾಲೆ  ಸಾಮಗ್ರಿ  ಅರೆಯುತ್ತೀರಿ ,   ಸ್ವಲ್ಪ ಗಾಂಧಾರಿ ಮೆಣಸು ಸೇರಿಸಿ ಅರೆಯಿರಿ ,  ಖಾದ್ಯಗಳ ರುಚಿ  ನೋಡಿ .   

  ಉಪ್ಪಿನಕಾಯಿಗೆ  ಮಸಾಲೆ ತಯಾರಿಸುವಾಗ ಇದರ ಒಣಮೆಣಸುಗಳನ್ನೂ ಸೇರಿಸಿ .    

ನಿಂಬೆ ಹಣ್ಣಿನ ಉಪ್ಪಿನಕಾಯಿಗೆ ಹಸಿಮೆಣಸು ,   ಶುಂಠಿ  ಹಚ್ಚಿ  ಹಾಕುವ  ಕ್ರಮ  ಇದೆ .   ಹಸಿಮೆಣಸಿನ  ಬದಲಾಗಿ  ಗಾಂಧಾರಿ ಮೆಣಸನ್ನು  ಎರಡಾಗಿ  ಸಿಗಿದು  ಹಾಕಿಕೊಳ್ಳಿ .   ಉಪ್ಪು  ಹುಳಿಗಳ  ಸಮ್ಮಿಶ್ರಣದೊಂದಿಗೆ  ಇದರ  ಖಾರವೂ  ಪರಿಮಳವೂ  ಬೆರೆತು  ಜ್ವರ ,  ಶೀತಪೀಡಿತರಿಗೆ  ಊಟದೊಂದಿಗೆ  ನಂಜಿಕೊಳ್ಳಲು  ಹಾಯೆನಿಸುವುದು .   ಮಿಶ್ರ  ತರಕಾರಿಗಳ  ಉಪ್ಪಿನಕಾಯಿಗೂ  ಇದನ್ನು  ಸೇರಿಸಿಕೊಳಬಹುದು .  


 ಅಡುಗೆಯಲ್ಲಿ ಉಪಯೋಗಿಸುವ ಕಲೆ  ತಿಳಿದಾಯ್ತು .  
 ವೈದ್ಯಕೀಯ ಮಹತ್ವ  ಹೇಗಿದೆ  ಎಂದು ನೋಡೋಣ  ,

ಸಂಧಿವಾತ ,   ಕೀಲುಗಳಲ್ಲಿ ಉರಿಯೂತಗಳಿಗೆ  ರಾಮಬಾಣ ,  ಆಶ್ಚರ್ಯ ಆಗ್ತಿದೆಯಾ ,  ಪ್ರಯೋಗ ಶುರು  ಮಾಡಿ .   ಕಮರು ತೇಗು ,  ಹೊಟ್ಟೆ ಉಬ್ಬರಿಕೆ ,  ಅಜೀರ್ಣ  ಇತ್ಯಾದಿ  ವಾಯು ಪ್ರಕೋಪಗಳಿಗೆ  ಶಾಮಕ ,  ನಿವಾರಕ .

ಇನ್ನೂರಕ್ಕೂ  ಹೆಚ್ಚು  ವೈಜ್ಞಾನಿಕ  ಸಂಶೋಧನೆಗಳು  ಇದರ  ರಸಸಾರದ  ಬಗ್ಗೆ  ನಡೆಯುತ್ತ  ಬಂದಿವೆ .    ಮನುಷ್ಯ ವರ್ಗದ  ಜೀವಿಗಳಲ್ಲಿ ,   ಸಸ್ತನಿಗಳಲ್ಲಿ  ಸ್ಪರ್ಶೆಂದ್ರಿಯಗಳನ್ನು  ಪ್ರಚೋದಿಸುವ ,   ನರನಾಡಿಗಳಲ್ಲಿ  ಉತ್ಸಾಹವನ್ನು  ತುಂಬಿಸುವ ,   ರೋಗನಿರೋಧಕ  ಶಕ್ತಿಯನ್ನು  ಹೆಚ್ಚಿಸುವ ,  ಲೈಂಗಿಕೋತ್ಸಾಹವನ್ನು. ಉತ್ತೇಜಿಸುವ ,  ಬಾಯಿರುಚಿಯನ್ನು  ಹೆಚ್ಚಿಸುವ ,  ವೇದನೆಯನ್ನು  ನಿವಾರಿಸುವ  ಈ  capsaicin  ಎಂಬ ಗಾಂಧಾರಿಯ  ರಸಸಾರವನ್ನು  ಪ್ರತ್ಯೇಕವಾಗಿ ಹಿಡಿದಿರಿಸುವ ಬಗ್ಗೆ  ಸಂಶೋಧನೆಗಳು  ನಡೆಯುತ್ತಲಿವೆ .    ಕೊಲೆಸ್ಟರಾಲ್ ,  ರಕ್ತದೊತ್ತಡ  ನಿಯಂತ್ರಣ ,  ತನ್ಮೂಲಕ ಹೃದಯಕ್ಕೆ  ರಕ್ತ  ಹರಿಯುವಿಕೆಯನ್ನು  ಸರಾಗಗೊಳಿಸುವುದು .   ಪುರುಷರಲ್ಲಿ  ವೀರ್ಯೋತ್ಪತ್ತಿ  ಹೆಚ್ಚಿಸುವುದು .   ಇವೆಲ್ಲ  ಅಧ್ಯಯನಗಳಿಂದ ತಿಳಿದು  ಬಂದ  ವಿಷಯಗಳಾಗಿವೆ . 

" ಏನು  ತಿಂದರೂ  ಗ್ಯಾಸ್  "  ಅನ್ನುವವರಿದ್ದಾರೆ .   ಅವರಿಗೆ  ಉತ್ತರ  ಗಾಂಧಾರಿಯಲ್ಲಿದೆ  ನೋಡಿ .   ಇದರ  ರಸಸಾರವು  ಕ್ಷಾರಯುಕ್ತವಾಗಿದ್ದು ,  ಜಠರ ಹಾಗೂ  ಕರುಳುಗಳ  ಕಾರ್ಯಕ್ಷಮತೆಯನ್ನು  ವೃದ್ಧಿಸಿ ,  ಅಸಿಡಿಟಿ  ಅಥವಾ  ಆಮ್ಲೀಯತೆಯನ್ನು ಹತ್ತಿರ  ಸುಳಿಯಲೂ  ಬಿಡದು .

ಈ  ಚೋಟುದ್ದ  ಮೆಣಸು  ಪೌಷ್ಟಿಕಾಂಶಗಳ  ಆಗರ .   ಕ್ಯಾಲ್ಸಿಯಂ ,  ಫಾಸ್ಪರಸ್ ,  ಕಬ್ಬಿಣ ,  ಮೆಗ್ನೆಶಿಯಂ ,  ವಿಟಾಮಿನ್  ಬಿ ,  ಬಿ 2 ,   ಹಾಗೂ ನಿಯಾಸಿನ್ ಗಳಿಂದ  ಸಮೃದ್ಧವಾಗಿದೆ .   ನಿಯಮಿತ  ಸೇವನೆಯಿಂದ  ಸುಖನಿದ್ರೆಯೂ  ನಿಮ್ಮದಾಗಲಿದೆ .   ಸದಾ ಲವಲವಿಕೆ .   ಖಿನ್ನತೆ ಎಂದೂ  ಬಾರದು .   ತಲೆನೋವು  ಹತ್ತಿರ  ಸುಳಿಯದು .

ಹವಾಮಾನ  ಬದಲಾದಂತೆ  ಶೀತ ,  ನೆಗಡಿ ,  ಫ್ಲೂ  ಬಾಧೆ  ಸಾಮಾನ್ಯ .   ಈ ಮೆಣಸಿನ  ಘರಂ  ಪ್ರತಿರೋಧಕ  ಶಕ್ತಿಯಿಂದಾಗಿ  ಇಂತಹ  ಉಪಟಳಗಳು  ಕಾಣಿಸಲಾರವು .   ಶರೀರದ ಮೆಟಾಬಾಲಿಸಂ  ವೃದ್ಧಿ .


ಕೇರಳೀಯರ ಸಾಂಪ್ರದಾಯಿಕ ಪಾಕವಿಜ್ಞಾನದಲ್ಲಿ  ಈ  kanthari mulagu    ( കാന്താരി  മുലഗ് )     ಸೇರಿ ಕೊಂಡಿದೆ .   ಮುಖ್ಯವಾಗಿ ಸಮುದ್ರೋತ್ಪನ್ನವಾದ ಮೀನು ಇಲ್ಲಿನ ಬಹು ಮುಖ್ಯ ಆಹಾರವಾಗಿರುವುದೇ ಇದಕ್ಕೆ ಕಾರಣ .   ಇಷ್ಟು  ಚಿಕ್ಕ ಗಾತ್ರದ ಮೆಣಸು ,   ಜಗತ್ತಿನಲ್ಲೇ ಅತಿ ಖಾರವೆಂಬ  ಗಿನ್ನೆಸ್  ದಾಖಲೆಯನ್ನೂ ಪಡೆದಿದೆ .    ಆಂಗ್ಲ ಭಾಷಿಕರು  " bird's eye chili "   ಎಂದು ಬಹು ಮುದ್ದಾದ ಹೆಸರಿಟ್ಟಿದ್ದಾರೆ .     ಎಲ್ಲಾ  ವರ್ಗದ ಮೆಣಸುಗಳಿಗೆ  ಮೆಕ್ಸಿಕೋ  ತವರು .   ಸಸ್ಯಶಾಸ್ತ್ರೀಯವಾಗಿ  ಇದು   Capsicum chinense .

ನೈಸರ್ಗಿಕ  ಕೀಟನಾಶಕ ,   ನೀರಿನಲ್ಲಿ  ಇದರ  ದ್ರಾವಣ  ತಯಾರಿಸಿ ,  ಗಿಡಬಳ್ಳಿಗಳನ್ನು  ಕೀಟಬಾಧೆಯಿಂದ ಮುಕ್ತಗೊಳಿಸಿ .   ನಮ್ಮ ಊರಿನ  ಯಾವ  ಪ್ರದೇಶದಲ್ಲಿ  ಬೇಕಾದರೂ  ಬೆಳೆಯಬಹುದು .   ಗೊಬ್ಬರದ ಅವಶ್ಯಕತೆ  ಇಲ್ಲ .   ಆರೈಕೆಯೇನೂ  ಬೇಡ .   ನಮ್ಮ  ಅಡಿಕೆ ತೋಟಗಳಲ್ಲಿ  ಬಹುಮಟ್ಟಿಗೆ  ಒಂದು  ಕಳೆ  ಸಸ್ಯ .   ಹಣ್ಣಾದ ಕಾಯಿಗಳು  ಮಾರನೆ  ದಿನ  ಕಾಣಿಸುವುದೇ  ಇಲ್ಲ .    ಹಕ್ಕಿಗಳು  ತಿಂದು ಹಾಕಿರುತ್ತವೆ .   ಕಡಿದು  ಹಾಕಿದರೂ  ಇನ್ನಷ್ಟು  ಶಕ್ತಿಯುತವಾಗಿ  ಚಿಗುರಿ  ನಳನಳಿಸುತ್ತವೆ .    ನನ್ನ  ಕಲ್ಯಾಣಿಯಂತೂ  ತೋಟದ  ಹುಲ್ಲು  ಕತ್ತರಿಸುವಾಗ   " ಕಡಿದು ಹಾಕೇ  ಅದನ್ನು "  ಎಂದು  ಎಷ್ಟು  ಗೋಗರೆದರೂ  ಕೆಳುವವಳಲ್ಲ .   " ಇರಲಿ  ಬಿಡಿ  ಅಕ್ಕಾ "  ಎನ್ನುತ್ತಾ  ಇನ್ನಷ್ಟು  ಮೆಣಸು  ಕೊಯಿದು  ತನ್ನ  ಬುಟ್ಟಿಗೆ  ಹಾಕಿಕೊಳ್ಳುವವಳು . 

ಕೃಷಿ ಪಂಡಿತರೇ ,   ವಾಣಿಜ್ಯ  ದೃಷ್ಟಿಯಿಂದಲೂ  ಬೆಳೆದು  ಹಣ  ಗಳಿಸಬಹುದು .   ಹಣ್ಣಾದ  ಕೂಡಲೇ  ಕೊಯಿದು  ಒಣಗಿಸಿ .   ಮಾರುಕಟ್ಟೆ  ಇದೆ .   ಅಷ್ಟೇ  ಬೇಡಿಕೆಯೂ ಇದೆ .   ಉತ್ತಮ  ಧಾರಣೆಯೂ ಇದೆ . 

 ಮನೆಯ  ಕೈತೋಟದಲ್ಲಿ  ತರಹೇವಾರಿ ಗಿಡಗಳನ್ನು  ಸಾಕುತ್ತೀರಿ .   ಇದನ್ನೂ  ತಂದಿಟ್ಟುಕೊಳ್ಳಿ .   ಕುಂಡದಲ್ಲಿಯೂ ನೆಡಬಹುದು .   ಹೆಚ್ಚು  ಬಿಸಿಲೇನೂ  ಬೇಕಾಗಿಲ್ಲ .   ಇರುತ್ತದೆ  ಅದರ  ಪಾಡಿಗೆ .   ಹೂವಾಗಿ ,  ಕಾಯಾಗಿ ,  ಹಣ್ಣಾಗುವ  ವಿವಿಧ  ಹಂತಗಳಲ್ಲಿ  ಅಲಂಕಾರಿಕ  ವರ್ಣಮಯ  ಸೊಗಸು .    ಇದರಲ್ಲಿಯೂ ಬೇರೆ ಬೇರೆ  ಪ್ರಬೇಧಗಳಿವೆ .   ಅತಿ  ಚಿಕ್ಕ ಗಾತ್ರದ್ದು  ಹೆಚ್ಚು  ಖಾರ .   ಇನ್ನಿತರ ಮೆಣಸು  ನಾಲ್ಕು  ಹಾಕುವಲ್ಲಿ  ಇದು  ಒಂದು  ಹಾಕಿದರೆ  ಸಾಕು .   ರಸಗೊಬ್ಬರದ  ಅವಶ್ಯಕತೆಯಿಲ್ಲ ,  ಪರಿಸರ ಮಾರಕ  ಕೀಟನಾಶಕಗಳನ್ನು  ಸಿಂಪಡಿಸಬೇಕಾಗಿಲ್ಲ ,  ಪರಿಪೂರ್ಣ ಜೈವಿಕ  ಬೆಳೆ  !   ಖಾರವಿರುವುದೆಲ್ಲ  ಬೀಜಗಳನ್ನು  ಸುತ್ತುವರಿದಿರುವ  ನರಗಳಲ್ಲಿ .   ಹಕ್ಕಿಗಳು  ತಿನ್ನುವುದೇ  ಪ್ರೋಟೀನ್ ಗಳ  ಗಣಿಯಾಗಿರುವ  ಬೀಜಗಳನ್ನು  ಮಾತ್ರ .   ಯಾವುದೋ  ಮೆಕ್ಸಿಕೋ  ದೇಶದಿಂದ ,   ಇನ್ಯಾವುದೋ  ಆಫ್ರಿಕಾ ಖಂಡದಿಂದ  ಹೊತ್ತು  ತಂದಿವೆ  ಪುಟಾಣಿ  ಹಕ್ಕಿಗಳು  !     ನಾವು ,  ವೈದ್ಯರು  ಕೊಡುವ  ಆರೋಗ್ಯದ  ಸಲಹೆಯಂತೆ  ಪ್ರೋಟೀನ್  ಟ್ಯಾಬ್ಲೆಟ್ ಗಳನ್ನು ,   ವಿಟಾಮಿನ್  ಮಾತ್ರೆಗಳನ್ನು  ನುಂಗಿ  ಬದುಕುತ್ತಿದ್ದೇವೆ .   ಬನ್ನಿ  ,   ನಿಸರ್ಗದೊಂದಿಗೆ  ಕೈ  ಜೋಡಿಸೋಣ .   ಪಕ್ಷಿಗಳಂತೆ  ಸ್ವತಂತ್ರ  ಬದುಕು  ನಮ್ಮದಾಗಿಸೋಣ .



Posted via DraftCraft app

8 comments:

  1. ಗಾ೦ಧರಿ ಮೆಣಸುಗಳನ್ನು ನುರಿದು ಮಜ್ಜಿಗೆ ಕುಡಿದು ಹೊಟ್ಟೆ ತ೦ಪಾಗುವುದೇ ? ವಿರೋದಾಭಾಸ, ಅಕ್ಕಾ ~. ಗಾ೦ಧಾರಿ ಮೆಣಸಿನ ಗಿಡಗಳನ್ನು ಕಳೆದ ಕೆಲ ವರ್ಷಗಳಿ೦ದ ಗಮನಿಸುತ್ತಿದ್ದೇನೆ, ಹಿತ್ತಲಲ್ಲಿ, ನೇರೆ ಬಿಸಿಲಿರುವಲ್ಲಿ ಚೆನ್ನಾಗಿ ಬರುವುದು ಬಿಡಿ, ಬದುಕುವುದೇ ಇಲ್ಲ, ಅಡಿಕೆ ತೋಟದಲ್ಲಿ ಸೊ೦ಪಾಗಿ ಬೆಳೆಯುತ್ತದೆ, ಮೆಣಸು ಕೆ೦ಪಾಗಿ ಮಿ೦ಚುತ್ತದೆ, ಆಗೊಮ್ಮೆ ಈಗೊಮ್ಮೆ ಉಪಯೋಗಕ್ಕೆ ಸಿಕ್ಕುತ್ತದೆ. ಚೆನ್ನಾಗಿದೆ ಬರಹ

    ReplyDelete
    Replies
    1. Yes , it is difficult to plant by us . Only birds can do that miracle !

      Delete
  2. ಗಾಂಧಾರಿ ಮೆಣಸಿನ ಬಗ್ಗೆ ಇಂಥ ಸವಿವರ ಓದಿ ಚುರುಕ್ ಅಂತ ಅನಿಸಿ ಒಂದು ಗಿಡ ನೆಡಲೇಬೇಕು ಮನೆಯಂಗಳದಲ್ಲಿ ಎಂದೆನಿಸಿತು.
    ಮಾಲಾ

    ReplyDelete
  3. ಸೂಪರ್.ಅಕ್ಕಾ. ವಾವ್,ನಮ್ಮನೆಯಲ್ಲಿ ಹಸಿಮೆಣಸು ತರುವುದೇ ಇಲ್ಲ. ಚಟ್ನಿ,ಗೊಜ್ಜು,ತ೦ಬುಳಿ ಇವಕ್ಕೆಲ್ಲ ಈ ಸೂಜಿ ಮೆಣಸೇ ಆಧಾರ. ನನ್ನ ಫ಼ೇವರಿಟ್.ಅದು. ಅದರ ಎಲೆಯಿ೦ದ ಚಟ್ನಿ ತ೦ಬುಳಿ ಮಾಡುದು ಗೊತ್ತಿರಲಿಲ್ಲ ತಿಳಿಸಿದ್ದಕ್ಕೆ ಧನ್ಯವಾದ.. ಖ೦ಡಿತ ಸೂಜಿ ಮೆಣಸಿನ ಎಲೆಯ ಚಟ್ನಿ ತ೦ಬುಳಿ ಮಾಡಿಸಿ ಸವಿಯುವೆ.

    ReplyDelete
  4. ಕ್ಷಮಿಸಬೇಕು ಅಕ್ಕಾ~, ಈಗಷ್ಟೇ ನನ್ನ ಯಜಮಾನತಿ ನನ್ನ ಕಿವಿ ಹಿ೦ಡಿದಳು, ನಮ್ಮ ಹಿತ್ತಲಲ್ಲಿ ಇದರ ಗಿಡಗಳು ಮೊಳೆಯುತ್ತಿವೆ ! ಕಾರಣ ಇಷ್ಟೇ, ಕಳೆದ ತಿ೦ಗಳು, ಮುಷ್ಟಿ ಹಣ್ಣು ಮೆಣಸನ್ನು ಒಣಗಿಸಿ ಪುಡಿ ಮಾಡಿ ಬಳಸಲು ಅ೦ತ ಒಲೆ ಮೇಲೆ ಹರಡೀದ್ದೆವು, ಇರುವೆ ಕಾಟದಿ೦ದ ಕೆಲವಾರು ಮೆಣಸಿನ ಬೀಜ ಹಿತ್ತಲಿಗೆ ಹೋಗಿ ಗಿಡವಾಗಿವೆ, ಈಗ ಗಾ೦ಧಾರಿ ಮೆಣಸಿನ ಸಸಿ ಮಾರಾಟಕ್ಕೆ ನಾನು ರೆಡಿ !!

    ReplyDelete
  5. Oh , amazing ! All credit goes to your wife ....:)

    ReplyDelete