Pages

Ads 468x60px

Featured Posts

.

Monday, 15 June 2026

ಕಾಡು ಶರಬತ್ ಹಣ್ಣು

 


ಬಚ್ಚಲು ಮನೆಯ ನೀರು ಹೋಗುವ ತೂಬು ಕಸ ನಿಂದಂತಿದೆಯಲ್ಲ,  ನೀರು ಸರಾಗವಾಗಿ ಹೊರ ಹೋಗದಿದ್ದರೆ ಹೇಗೆ?   ಚಿಂತಿಸುತ್ತ ಹಿತ್ತಲ ಕಡೆಗಿದ್ದ ಬಾಗಿಲು ತೆರೆಯಲಾಗಿ, ಆಹ! ನಿಸರ್ಗವೇ ಮನೆ ಬಾಗಿಲಿಗೆ ಬಂದಂತಿದೆಯಲ್ಲ.  ಮೊಬೈಲು ತಂದು ಪಟ ಕ್ಲಿಕ್ಕಿಸೋಣ ಅಂದರೆ ಹೊರಗಿಳಿಯುವ ಮೆಟ್ಟಿಲು ಪಾಚಿ ಕಟ್ಟಿದಂತಿದೆ.  ಈ ಮೆಟ್ಟಿಲು ಹತ್ತಿ ಇಳಿಯುವವರೂ ಇಲ್ಲ. ನಾಳೆ ನೋಡೋಣ.


ಕುತೂಹಲಕ್ಕೆ ಮೇರೆಯಿರದ ಆ ನಾಳೆ ಬಂದಿತು.  ಇನ್ನೊಂದು ದಾರಿಯಲ್ಲಿ ಸುತ್ತಿ ಬಳಸಿ ಬಂದು ಪಟ ತಗೆದೂ ಆಯ್ತು.  ಆಕರ್ಷಕ ಹೂ,  ಶರಬತ್ ಹಣ್ಣಿನ ಮಿನಿಯೇಚರ್,  ಕಾಯಿಗಳು ಇನ್ನೂ ಆಕರ್ಷಕ.  ಮಳೆಗಾಲದಲ್ಲಿ ಈ ಬಳ್ಳಿ ಸಸ್ಯ ಅಲ್ಲಲ್ಲಿ ಕಣ್ಣಿಗೆ ಬೀಳುವುದಿದೆ,  ಮಗಳ ನೆನಪಾಯ್ತು,  ಅವಳು ಇದರ ಹಣ್ಣುಗಳನ್ನು ಆಯ್ದು ತಿನ್ನುತ್ತಿದ್ದಳು.  ಇನ್ನಷ್ಟು ವಿವರಗಳನ್ನು ತಿಳಿಯಲು ಮಗಳಿಗೆ ಪಟ ಕಳಿಸಿದ್ದೂ ಆಯ್ತು.  ಜಾಯಿಂಟ್ ಅಕೌಂಟಿನಲ್ಲಿ ಮಗನಿಗೂ ಪಟ ಲಭ್ಯ.

“ ಅವಳನ್ನೇನು ಕೇಳ್ತೀಯಾ, ನಾನೂ ತಿಂದಿದ್ದೇನೆ.. ಹಣ್ಣಾಗ್ಬೇಕು,  ಒಳ್ಳೇ ಸಿಹಿ.. “

“ ಹೌದ,  ಅದಕ್ಕೇನು ಹೆಸರು ಗೊತ್ತಾ?”

“”ಅದೆಲ್ಲ ನಂಗೊತ್ತಿಲ್ಲ..”

ಇಬ್ಬರೂ ಹಣ್ಣುಗಳನ್ನು ತಿಂದವರೇ,  ನನಗೆ ಇಬ್ಬರೂ ತಂದ್ಕೊಟ್ಟಿಲ್ಲ ಅಷ್ಟೇ.


ಮಕ್ಕಳಿಗಂತೂ ಹೆಸರು ತಿಳಿಯದು.  ಹೆಸರು ತಿಳಿಯಲು ನನಗೇನೂ ಪರದಾಡಬೇಕಿಲ್ಲ.  


ಇದು ಜ್ಯೂಸ್ ಮಾಡಿ ಸವಿಯುವ 'ಶರಬತ್ ಹಣ್ಣಿನ' (Passion Fruit) ಕಾಡು ಜಾತಿಯ ಸಸ್ಯ!  ವೈಜ್ಞಾನಿಕ ಹೆಸರು Passiflora foetida.

ಸಾಮಾನ್ಯವಾಗಿ ಇದನ್ನು ಕಾಡು ಶರಬತ್ ಬಳ್ಳಿ ಅಥವಾ ಕಾಡು ಪ್ಯಾಷನ್ ಫ್ರೂಟ್ ಎಂದು ಕರೆಯುತ್ತಾರೆ. ಇದರ ಕಾಯಿಯ ಸುತ್ತ ಇರುವ ಬಲೆಯಂತಹ ವಿಶಿಷ್ಟ ರಚನೆಯಿಂದಾಗಿ  ಇದನ್ನು ಕುಕ್ಕೆ ಬಳ್ಳಿ ಅಥವಾ ಅಜ್ಜಿ ಗಡ್ಡ ಮುಂತಾದ ಗ್ರಾಮೀಣ ಹೆಸರುಗಳಿಂದಲೂ ಗುರುತಿಸುತ್ತಾರೆ.

ಇದರ ಹೂವು ಕೂಡ ಶರಬತ್ ಬಳ್ಳಿಯ ಹೂವಿನ (ಕೃಷ್ಣಕಮಲ) ಒಂದು ಪುಟ್ಟ ರೂಪದಂತೆಯೇ ಇದೆ.   

ಕಾಯಿಗಳು ಹಣ್ಣಾದಾಗ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಹಣ್ಣಾದಾಗ ಒಳಗಿನ ತಿರುಳು ಶರಬತ್ ಹಣ್ಣಿನಂತೆಯೇ ಹುಳಿ-ಸಿಹಿಯಾಗಿರುತ್ತದೆ. ಹಳ್ಳಿಯ ಕಡೆ ಮಕ್ಕಳು ಈ ಹಣ್ಣುಗಳನ್ನು ಹುಡುಕಿಕೊಂಡು ಹೋಗಿ ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ತೋಟದಲ್ಲಿ ಅಸಲಿ ಶರಬತ್ ಬಳ್ಳಿಯ ಜೊತೆಗೆ ಅದರ ಈ ಪುಟ್ಟ ಕಾಡು ಸಂಬಂಧಿಯೂ ಹುಟ್ಟಿ ಬೆಳೆದಿರುವುದು ಪ್ರಕೃತಿಯ ಒಂದು ಸುಂದರ ವಿಸ್ಮಯ!


ಈ 'ಕಾಡು ಶರಬತ್' ಸಸ್ಯ ಕೇವಲ ಕಾಡು-ಕಳೆಯಲ್ಲ, ನಿಸರ್ಗದಲ್ಲಿ ಇದಕ್ಕೂ ಸಾಕಷ್ಟು ವಿಶಿಷ್ಟತೆ ಮತ್ತು ಮಹತ್ವಗಳಿವೆ.


ಔಷಧೀಯ ಗುಣಗಳು (Medicinal Uses): ನಾಟಿ ವೈದ್ಯದಲ್ಲಿ ಈ ಬಳ್ಳಿಯ ಎಲೆ ಮತ್ತು ಬೇರುಗಳಿಗೆ ವಿಶೇಷ ಸ್ಥಾನವಿದೆ. ಗಾಯ, ಕಜ್ಜಿ, ಅಥವಾ ಚರ್ಮದ ತುರಿಕೆಗೆ ಇದರ ಎಲೆಯ ರಸವನ್ನು ಹಚ್ಚುವ ಸಾಂಪ್ರದಾಯಿಕ ರೂಢಿಯಿದೆ. ಅಲ್ಲದೆ, ಇತರ ಶರಬತ್ ಜಾತಿಯ ಎಲೆಗಳಂತೆಯೇ ಇದು ಕೂಡ ನರಗಳನ್ನು ಶಾಂತಗೊಳಿಸುವ ಗುಣ ಹೊಂದಿದ್ದು, ಆತಂಕ ಮತ್ತು ನಿದ್ರಾಹೀನತೆಯನ್ನು ದೂರಮಾಡಲು ಇದರ ಕಷಾಯವನ್ನು ಕೆಲವೆಡೆ ಬಳಸುತ್ತಾರೆ.


ವಿಶಿಷ್ಟವಾದ 'ಜಾಲರಿ' (Insect-trapping mechanism): ಫೋಟೋ ಗಮನಿಸಿದರೆ, ಕಾಯಿಯ ಸುತ್ತ ಇರುವ ಆ ಬಲೆಯಂತಹ ರಚನೆ ಕೇವಲ ಅಂದಕ್ಕಲ್ಲ. ಅದರಲ್ಲಿ ಅಂಟಂಟಾದ ದ್ರವವಿರುತ್ತದೆ, ಇದು ಸಣ್ಣಪುಟ್ಟ ಕೀಟಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತದೆ. ಹೀಗೆ ಸಿಕ್ಕಿಬಿದ್ದ ಕೀಟಗಳಿಂದ ಗಿಡವು ತನಗೆ ಬೇಕಾದ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತದೆ (ಇದನ್ನು ಅರೆ-ಕೀಟಹಾರಿ ಅಥವಾ Protocarnivorous ಎನ್ನುತ್ತಾರೆ).


ಚಿಟ್ಟೆಗಳ ಆಕರ್ಷಣೆ: ಚಿಟ್ಟೆಗಳಿಗೆ  ಇದು ಬಹಳ ಪ್ರಿಯವಾದ ಗಿಡ. ತೋಟದಲ್ಲಿ ಈ ಗಿಡವಿದ್ದರೆ ವಿವಿಧ ಜಾತಿಯ ಬಣ್ಣಬಣ್ಣದ ಚಿಟ್ಟೆಗಳು ಹೂವಿನ ಮಕರಂದ ಹೀರಲು ಮತ್ತು ಮೊಟ್ಟೆ ಇಡಲು ಹುಡುಕಿಕೊಂಡು ಬರುತ್ತವೆ.


ಈ ಕಾಡು ಶರಬತ್ ಬಳ್ಳಿ (Passiflora foetida) ನೈಸರ್ಗಿಕವಾಗಿಯೇ ಅಲ್ಪಾಯುಷಿ.

ಸಾಮಾನ್ಯವಾಗಿ ಇದು ಮಳೆಗಾಲದ ಆರಂಭದಲ್ಲಿ ಮಣ್ಣಿನಿಂದ ಪುಟಿದೆದ್ದು ಹುಲುಸಾಗಿ ಬೆಳೆಯುತ್ತದೆ, ಹೂವು-ಹಣ್ಣು ಬಿಡುತ್ತದೆ, ಮತ್ತು ತನ್ನ ಬೀಜಗಳನ್ನು ಮತ್ತೆ ಮಣ್ಣಿನ ಒಡಲಿಗೆ ಸೇರಿಸಿ ಒಣಗಿಹೋಗುತ್ತದೆ. ಇದೊಂದು ಪ್ರಕೃತಿಯ ಸಹಜ ಚಕ್ರ. 


ಕನ್ನಡದಲ್ಲಿ ಗಡಿಯಾರ ಹಣ್ಣು, ಪುಚ್ಚೆ ಹಣ್ಣು,  ಕುಕ್ಕೆ ಬಳ್ಳಿ, ಸಾಲಿಗನ ಬಳ್ಳಿ,ಬುಟ್ಟಿ ಬಳ್ಳಿ, ಹೀಗೆಲ್ಲ ಹೆಸರುಗಳು,  ಆಯುರ್ವೇದದಲ್ಲಿ ವಿಶೇಷ ಗಿಡಮೂಲಿಕೆ. 


ನಮ್ಮ ಹಳ್ಳಿಗಳಲ್ಲಿ ಪ್ರತಿಯೊಂದು ಗಿಡಕ್ಕೂ ಅದರ ರೂಪ ಮತ್ತು ಗುಣವನ್ನು ಆಧರಿಸಿ ಅರ್ಥಗರ್ಭಿತ ಹೆಸರುಗಳನ್ನಿಡುವ ನಮ್ಮ ಹಿರಿಯರ ಜಾಣ್ಮೆಗೆ ಈ ಗಿಡವೇ ಒಂದು ಅದ್ಭುತ ಸಾಕ್ಷಿ:


ಗಡಿಯಾರ ಹಣ್ಣು: ಇದರ ಹೂವಿನ ಆಕಾರವು ಗಡಿಯಾರದ ಮುಳ್ಳುಗಳನ್ನು ನೆನಪಿಸುವುದರಿಂದ ಬಂದಿರುವ ಹೆಸರು.


ಕುಕ್ಕೆ ಬಳ್ಳಿ / ಬುಟ್ಟಿ ಬಳ್ಳಿ: ಕಾಯಿಯನ್ನು ಸುತ್ತುವರಿದಿರುವ ಆ ಬಲೆಯಂತಹ ರಚನೆಯು ಪುಟ್ಟ ಕುಕ್ಕೆಯಂತೆ (ಬುಟ್ಟಿ) ಕಾಣುವುದರಿಂದ.


ಸಾಲಿಗನ ಬಳ್ಳಿ: ಜೇಡರ (ಸಾಲಿಗ) ಬಲೆಯಂತೆ ಕಾಯಿಗೆ ರಕ್ಷಣೆ ನೀಡುವ ವಿಶಿಷ್ಟ ಜಾಲರಿಯಿಂದಾಗಿ.


ಪುಚ್ಚೆ ಹಣ್ಣು: ಬೆಕ್ಕಿನ (ಪುಚ್ಚೆ) ಮೈಮೇಲಿನ ನಯವಾದ ಕೂದಲಿನಂತಹ ರಚನೆ ಇರುವುದರಿಂದ.


ಇನ್ನೊಂದು ಅಚ್ಚರಿಯ ವಿಚಾರವೇನೆಂದರೆ, ನಾವು ಮಾತನಾಡುತ್ತಿರುವ ಈ 'ಕಾಡು ಶರಬತ್ ಬಳ್ಳಿ' (Passiflora foetida) ನರಗಳನ್ನು ಶಾಂತಗೊಳಿಸುವ (sedative) ಪ್ರಬಲ ಗುಣವನ್ನು ಹೊಂದಿದೆ. ನಿದ್ರಾಹೀನತೆ, ಆತಂಕ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಇದು ನೈಸರ್ಗಿಕ ಮದ್ದು. 


ತಾಯಿಯ ಕಡೆಯಿಂದ ಸೋದರ ಸಂಬಂಧ ಹೊಂದಿರುವ ಸೇಡಿಯಾಪು ಕೃಷ್ಣಭಟ್ಟರು ಮಾನಸಿಕ ಅಶ್ವಸ್ಥರಿಗೆ ಮಂತ್ರವಾದದ ಔಷಧಿಯೆಂದು ಯಾವುದೋ ಒಂದು ಬಗೆಯ ಸೊಪ್ಪಿನ ಔಷಧ ನೀಡುತ್ತಿದ್ದರಂತೆ, ರೋಗಿಗಳು ಗುಣಮುಖರಾಗಿಯೇ ತೆರಳುತ್ತಿದ್ದರಂತೆ… ನನ್ನಮ್ಮನ ಹೇಳಿಕೆ ಈಗ ನೆನಪಾಯಿತು.

ಹಾಗಾಗಿ, ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸಲು  ಸೇಡಿಯಾಪು ಅಜ್ಜ ಬಳಸುತ್ತಿದ್ದ ಆ 'ಯಾವುದೋ ಸೊಪ್ಪು' ಬಹುಶಃ ಇದೇ ಕುಕ್ಕೆ ಬಳ್ಳಿಯಾಗಿರುವ ಸಾಧ್ಯತೆಗಳೂ ದಟ್ಟವಾಗಿವೆ!  ಸಂಸ್ಕೃತ ಭಾಷೆಯ ಅಗಾಧ ವಿದ್ವಾಂಸರಾಗಿದ್ದ ಸೇಡಿಯಾಪು ಕೃಷ್ಣರು ಮಂತ್ರಗಳ ಉಚ್ಚಾರಣೆಯ ಜೊತೆಗೆ ಇಂತಹ ನಾಟಿ ಔಷಧಗಳನ್ನು ನೀಡುತ್ತಿದ್ದರು ಎನ್ನುವುದು ಆ ಕಾಲದ ಜ್ಞಾನಪರಂಪರೆಯ ಆಳವನ್ನು ತೋರಿಸುತ್ತದೆ. ಪ್ರಾಚೀನ ಕಾಲದಲ್ಲಿ ಮಂತ್ರವಾದ, ಆಯುರ್ವೇದ ಹಾಗೂ ನಿಸರ್ಗ ಚಿಕಿತ್ಸೆಗಳೆಲ್ಲವೂ ಒಂದಕ್ಕೊಂದು ನಿಕಟವಾಗಿ ಬೆಸೆದುಕೊಂಡಿದ್ದವು ಎಂದೇ ನಾವು ತಿಳಿಯಬೇಕಾಗಿದೆ.





Wednesday, 27 May 2026

ನೆಲಕಂಚಿ

 



ಮಳೆ ಆರಂಭವಾದ ಮೇಲೆ ಮುಂಜಾನೆಯ ತಿಂಡಿಯ ನಂತರ, ತುಂಟಿಗೆ ಎರಡು ದೋಸೆಯ ಚೂರುಗಳನ್ನು ಹಾಕಿ,  ಮೊಬೈಲ್ ಹಿಡಿದು ಅಂಗಳಕ್ಕಿಳಿದರೆ,  ಮುಂದಿನ ಅರ್ಥ ಗಂಟೆ ಸಸ್ಯ ಸಾಮ್ರಾಜ್ಯದೊಂದಿಗೆ ನನ್ನ ಮಾತುಕತೆ.  ಕಲ್ಲಿನ ದರೆಯ ಮೇಲೆ ಲಿಲ್ಲಿ ಹೂಗಳು ಅರಳಿವೆ,   ಥಂಡರ್ ಲಿಲ್ಲಿ ವಾರವಾದರೂ ಬಾಡದು,  ನೆನೆದು ಮುದ್ದೆಯೂ ಆಗದು.    ಕೆಳಗೆ ನಾನು ನಿಂತ ನೆಲದಲ್ಲಿ ಸೂಗದೆ ಬಳ್ಳಿ ಹಬ್ಬುತ್ತಲಿದೆ.  ಇದೂ ಒಂದು ಔಷಧೀಯ ಸಸ್ಯ,  ಪ್ರಕೃತಿಯಲ್ಲಿ ಔಷಧೀಯ ಗುಣವಿಲ್ಲದ ಸಸ್ಯವಿಲ್ಲ.    ಲಿಲ್ಲಿ ಕೂಡಾ ಔಷಧೀಯ ಸಸ್ಯವಂತೆ.   ಅಲ್ಲೊಂದು ಬಿಳಿ ಹೂ ಕಾಣಿಸುತ್ತಿದೆಯಲ್ಲ.  ಹೂವೇ ಚಂದ, ಎಲೆಗಳೂ ಆಕರ್ಷಕ.  ಮಳೆಗಾಲದ ವೈಭವ ಎಂದರೆ ಹೀಗೆ ಮನೋಹರ ದೃಶ್ಯಗಳು.  ಬಿಳಿ ಹೂ ಮೊಬೈಲಲ್ಲಿ ಇಳಿಯಿತು.   ಮನೆಗೆ ತೆರಳೋಣ. ಇದೇನೂ ನಾನು ಇದುವರೆಗೂ ಕಾಣದ ಹೂವಲ್ಲ,  ಹಿಂದೆ ಮನೆ ತುಂಬ ಮಹಿಳೆಯರು ಇದ್ದ ಕಾಲ,  ತುರುಬು ಕಟ್ಟಿ ಹೂವಿನ ದಂಡೆಯನ್ನು ಸಿಕ್ಕಿಸುವಲ್ಲಿಗೆ ಕೇಶ ಶೃಂಗಾರ ಮುಗಿಯಿತು.  ಮಲ್ಲಿಗೆ, ಸೇವಂತಿಗೆ, ಅಬ್ಬಲಿಗೆ ಯಾವುದೂ ಆದೀತು. ಮಳೆಯ ಅವತರಣದೊಂದಿಗೆ ನೆಲದಿಂದೇಳುವ ಕಾಡು ಹೂಗಳೂ ನಡಿದೀತು,  ಹಳ್ಳಿಯ ಮನೆಯಲ್ಲಿದ್ದ ನನ್ನ ದೊಡ್ಡಮ್ಮನ ತಲೆಯಲ್ಲಿ ಈ ಹೂವನ್ನು ಕಂಡಿದ್ದೇನೆ.  “ ಈ ಹೂ ಯಾವುದು ದೊಡ್ಡಮ್ಮ? “  ಅವರೇನೋ ಉತ್ತರ ಕೊಟ್ಟಿದ್ದರು.   ಬಾಲ್ಯಸಹಜವಾಗಿ ಹೆಸರು ಮರೆತು ಹೋಗಿತ್ತು.


ಹಿರಣ್ಯದ ನೆಲದೊಡತಿಯಾದ ನಂತರ,  ಇಂಟರ್ನೆಟ್ ಮೊಬೈಲುಗಳ ಒಡನಾಟ, ಸಹಜವಾಗಿಯೇ ಪ್ರಕೃತಿಯತ್ತ ಚಿತ್ತ ಹರಿಸುವಂತಾಗಿದೆ.  ನೆಲಕಂಚಿ ಎಂಬ ಹೆಸರಿನ ಈ ಬಿಳಿ ಮಲ್ಲಿಗೆಯಂತಹ ಹೂವು, ಪ್ರತಿ ವರ್ಷವೂ ನನ್ನ ಮೊಬೈಲ್ ನಲ್ಲಿ ದಾಖಲಿಸಲ್ಪಡುತ್ತಲಿದೆ.  ಸಸ್ಯವಿಜ್ಞಾನದಲ್ಲಿ naregamia alata,  ನೆಲದ ಮೇಲೆಯೇ ಹರಡಿದ ನಕ್ಷತ್ರಗಳಂತೆ ಕಾಣುವ ಇದರ ಹೂವುಗಳು ಪರಿಸರವನ್ನು ಒಂದು ನೈಸರ್ಗಿಕ ಔಷಧೀಯ ವನವನ್ನಾಗಿಸಿದೆ ಎಂದರೂ ತಪ್ಪಾಗಲಾರದು. 

ಆಯುರ್ವೇದ ಮತ್ತು ನಾಟಿ ವೈದ್ಯದಲ್ಲಿ ಇದೊಂದು ಅತ್ಯಂತ ಬೆಲೆಬಾಳುವ ಗಿಡಮೂಲಿಕೆ. ನಮ್ಮ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೆಚ್ಚಾಗಿ ಕಂಡುಬರುವ ಇದನ್ನು ಉಸಿರಾಟದ ತೊಂದರೆ (ಕಫ, ಶೀತ), ಪಿತ್ತ ನಿವಾರಣೆಗೆ ಹಾಗೂ ಗಾಯಗಳನ್ನು ಗುಣಪಡಿಸಲು ಬಹಳ ಹಿಂದಿನಿಂದಲೂ ಬಳಸುತ್ತಿದ್ದಾರೆ.


ಮಳೆಯ ಮೊದಲ ಸಿಂಚನಕ್ಕೆ ತಾನಾಗಿಯೇ ಹುಟ್ಟಿ ಬಂದಂತಹ  ಈ ಸಸ್ಯಗಳು ತೋಟದ ಮಣ್ಣಿನ ಜೀವಂತಿಕೆಯನ್ನು ತೋರಿಸುತ್ತಿವೆ ಎಂದರೆ ಅತಿಶಯೋಕ್ತಿಯಾಗಲಾರದು.  ಮಳೆಯ ಆಗಮನ ಪ್ರಕೃತಿಗೆ ಒಂಥರಾ ಜಾದೂ ಮಾಡಿದಂತೆ! ತಿಂಗಳುಗಟ್ಟಲೆ ಮಣ್ಣಿನಲ್ಲಿ ಸುಪ್ತವಾಗಿ ಮಲಗಿದ್ದ ಬೀಜಗಳು ಮತ್ತು ಬೇರುಗಳು ಮಳೆಯ ನೀರು ತಾಗಿದ ತಕ್ಷಣವೇ ಜೀವ ಪಡೆದು ಹೀಗೆ ಮೇಲೆದ್ದು ನಳನಳಿಸುತ್ತವೆ.






Wednesday, 20 May 2026

ಪಚ್ಚಬಾಳೆಯ ದೋಸೆ

 



ಸಂಜೆ ಡೈರಿಯಿಂದ ಹಾಲು ತರುವಾಗ ಅಗತ್ಯವಿರುವ ಹಣ್ಣು ಹಂಪಲು, ತರಕಾರಿ ತರಿಸುವ ರೂಢಿ.   ಆ ಸಮಯಕ್ಕೆ ನಮ್ಮ ಡ್ರೈವರು ರಾಜಣ್ಣ “ ಹಾಲು ನಾನೇ ತರ್ತೇನೆ. “. ಎಂದು ಹೊರಟ.  ಅವನಿಗೆ ನಮ್ಮ ಕನ್ನಡ, ತುಳು ಬಾರದು,  ಹಿಂದಿಯಲ್ಲಿ ವದರಬೇಕು.   ನನ್ನದು ಹೈಸ್ಕೂಲ್ ಹಿಂದಿ, ಉಳಿದಂತೆ ಹಿಂದಿ ಸಿನಿಮಾ,  ಧಾರಾವಾಹಿಗಳೇ ನಮ್ಮ ಪಠ್ಯ.


ನೇಂದ್ರ ಬಾಳೆ ಹಣ್ಣು ತಾ ಅಂದಿದ್ದಕ್ಕೆ ಪಚ್ಚಬಾಳೆ ಬಂದಿದೆ.  ನನಗೂ ಮೊದಲು ತಿಳಿಯಲಿಲ್ಲ.   ತಿನ್ನಬಹುದಿತ್ತು,  ನನಗೋ ಶೀತಗಾಳಿ ಬಡಿದಿದೆ.  ತಿನ್ನಲು ರುಚಿ ಆದರೂ ಶೀತ ಜಾಸ್ತಿ ಆದೀತು.


ಹೊರಗೆ ಮೊಬೈಲ್ ಹಿಡಿದು ಕೂತಿದ್ದ ರಾಜಣ್ಣ,  ಅವನಿಗೇ ಎರಡು ಹಣ್ಣು ಸಂದಾಯ ಆಯ್ತು.  ನಮ್ಮವರೂ ಒಂದು ಹಣ್ಣು ತಿಂದರು.


ತಿಂಡಿ ತಿನಿಸು ತಯಾರಿಕೆಗೆ ಪಚ್ಚಬಾಳೆ ಉತ್ತಮ,  ಬನ್ಸ್, ಪೂರಿ, ಚಪಾತಿ ಎಲ್ಲ ನೆನಪಾಯ್ತು,  ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಯಾಕಾದರೂ ಮಾಡಬೇಕು, ಮಕ್ಕಳು, ಮೊಮ್ಮಕ್ಕಳು ಬೆಂಗಳೂರಿನ ವಾಸ್ತವ್ಯ.


ದೋಸೆ ಮಾಡಿಯೇ ಸಿದ್ಧ,  ಒಂದೂವರೆ ಲೋಟ ಅಕ್ಕಿ ನೀರಿಗೆ ಬಿತ್ತು,  ತೆಂಗಿನ ಕಾಯಿ ಒಡೆದು ಅರ್ಧ ಕಡಿ ತುರಿದೂ ಆಯ್ತು.  ತುರಿದ ಕಾಯಿಯಲ್ಲಿ ಅರೆವಾಸಿ ನಾಳೆಯ ಚಟ್ಣಿಗೆ ತೆಗೆದಿರಿಸಲಾಯಿತು.  ಒಂದು ಚಮಚ ದಪ್ಪ ಅವಲಕ್ಕಿ ಇರಲಿ,  ಅದನ್ನೂ ನೀರಿನಲ್ಲಿ ಮುಳುಗಿಸಿ ಇಡುವುದು.


ರಾತ್ರಿ ಊಟದ ನಂತರ ಎಲ್ಲವನ್ನೂ ನುಣ್ಣಗೆ ಅರೆಯುವುದು,  ರುಚಿಗೆ ಉಪ್ಪು,  ತುಂಡು ಬೆಲ್ಲ ಕೂಡಿಸಿ ಇಡುವುದು,  ಮುಂಜಾನೆ ದೋಸೆ ಎರೆಯುವುದು.


ಈ ಹಿಟ್ಟಿನಿಂದ ಸೆಟ್ ದೋಸೆಯೂ ಆದೀತು, ತೆಳ್ಳಗೆ ಪೇಪರ್ ದೋಸೆಯೂ ನಡೆದೀತು,  ಗುಳಿಯಪ್ಪವೂ ಭಲೇ ಭಲೇ ಅಂದೀತು.


ಬರೆಯಲು ಮರೆತದ್ದು,  ಅರೆಯುವಾಗ ಮೂರು ಬಾಳೆಹಣ್ಣು ಕೂಡಿ ಅರೆಯಿರಿ.  







Wednesday, 13 May 2026

ಶರಬತ್ ಹಣ್ಣು

 


ಆರೇಳು ವರ್ಷಗಳ ಹಿಂದಿನ ಮಾತು,  ನಾಗಬನ ಜೀರ್ಣೋದ್ಧಾರಗೊಂಡು ಭಕ್ತಮಹನೀಯರು ಪುಳಕಿತರಾದಾಗ, ಇಲ್ಲೊಂದು ಹಸಿರುವನ ನಿರ್ಮಾಣವಾಗಿ ಬಿಟ್ಟಿತು,  ವಿಧ ವಿಧ ಸಸ್ಯಗಳು ಓಡೋಡಿ ಬಂದವು.  ಅವುಗಳಲ್ಲಿ ಈ ಶರಬತ್ ಬಳ್ಳಿಯೂ ಸೇರಿತ್ತು.   ಅದರಲ್ಲಿಯೂ ಎರಡು ಬಣ್ಣ,  ಹಸಿರು ಹಾಗೂ ನಸು ನೇರಳೆ,   ನಾಗದೇವರಿಗೆ ತಂಪು ಇರಬೇಕು,  ಶರಬತ್ ಬಳ್ಳಿಯೂ ಚಪ್ಪರದಂತೆ ಹಬ್ಬಿತು,   ಇಂತಹ ಸುಡುಬೇಸಿಗೆಯಲ್ಲಿ ತೊನೆದಾಡುವ ಹಣ್ಣುಗಳು,  ಹೂವುಗಳ ನೋಟವೇ ಕಣ್ಣು ತಣಿಸುವಂತಹುದು,   ನಮಗೂ ಶರಬತ್ ಹಣ್ಣು ಹೊಸದು, ಹಾಗೇನೇ ಕತ್ತರಿಸಿ, ಸಕ್ಕರೆ ಬೆರೆಸಿ ತಿಂದು ನೋಡಿದ್ದೂ ಆಯ್ತು,  “ಪರಿಮಳವೇನೋ ಮಸ್ತ್ … ಹುಳಿಯೂ ಉಂಟಲ್ಲ..” ನಮ್ಮವರ ಗೊಣಗಾಟ.   “ ಹೆಚ್ಚು ಮಾರ್ಕು ಇರೂದು ಒಳಗಿನ ಬೀಜ ಗೊತ್ತಾ,  ಅದನ್ನೂ ತಿನ್ನಿ.” ನನ್ನ ಒತ್ತಾಯ.


ಮಳೆಗಾಲ ಆರಂಭದ ನಂತರ, ಜಡಿಮಳೆಗೆ ಅಂಗಳಕ್ಕೂ ಇಳಿಯುವವರು ನಾವಲ್ಲ,  ಒಂದು ಹಂತದ ಮಳೆಯ ಅವತರಣ ಮುಗಿದು,  ಶ್ರಾವಣ ಬಂದ ನಂತರ ತೋಟದ ಕೆಲಸಕ್ಕೆ ಕಾರ್ಮಿಕರ ಪಡೆ ಬಂದಿದೆ.   ಬಂದವರೇ ಅನಗತ್ಯ ಸೊಪ್ಪುಸದೆ, ಕಳೆಗಿಡಗಂಟಿಗಳೆಲ್ಲ ಕತ್ತಿಪ್ರಹಾರಕ್ಕೆ ನೆಲಕಚ್ಚಿವೆ,  ಆ ಸಮಯದಲ್ಲಿ ನಮ್ಮ ಶರಬತ್ ಬಳ್ಳಿಯೂ ಹೋಯ್ತು. ನೆಟ್ಟವರು ಯಾರೋ, ಕಡಿದವರು ಯಾರೋ, ನಮಗೆ ಶರಬತ್ ಕುಡಿಯುವ ಯೋಗ ತಪ್ಪಿತು.


ಶ್ರಾವಣ ಬಂದಾಗ, ಮೊದಲು ಬರುವುದೇ ನಾಗಪಂಚಮಿ,  ನಮ್ಮ ಬಾಯಾರು ಕಂಬಳಗುತ್ತು ಮನೆತನದ ಬಂಟ ಸಮುದಾಯ ಬಾಂಧವರು ಬಂದು ಸೇರಿ ನಾಗಪಂಚಮಿ ಆಚರಣೆ.   ಸಸಿ ನೆಟ್ಟ ಲಿಂಗಪ್ಪ ಶೆಟ್ಟಿ ಪುನಃ ತಂದು ನೆಟ್ಟ ಶರಬತ್ ಬಳ್ಳಿಯನ್ನು ನಾವೂ ಜಾಗರೂಕತೆಯಿಂದ ಪಾಲನೆ, ಪೋಷಣೆ ಮಾಡಿದ ಸಾಹಸದಿಂದ ಈಗ ಶರಬತ್ ಕುಡಿದಾಯಿತು.


ಈಗ ಆ ಹೊಸ ಬಳ್ಳಿ ನಮ್ಮ ಹಿತ್ತಲಿನ ಪೇರಳೆ ಮರವನ್ನು ಅಪ್ಪಿಕೊಂಡು ಬೆಳೆಯುತ್ತಿದೆ. ಮರದ ಆಸರೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಹಬ್ಬಿರುವ ಈ ಬಳ್ಳಿಯಲ್ಲಿ ಕೃಷ್ಣಕಮಲದಂತಹ ಅದ್ಭುತ ಹೂವುಗಳು ಅರಳಿದಾಗ ಪ್ರಕೃತಿಯ ಕಲಾಕೃತಿಗೆ ಬೆರಗಾಗಲೇಬೇಕು. ಕೇವಲ ಕಣ್ಣಿಗಷ್ಟೇ ಅಲ್ಲ, ಈ ಶರಬತ್ ಹಣ್ಣು (ಪ್ಯಾಷನ್ ಫ್ರೂಟ್) ಆರೋಗ್ಯಕ್ಕೂ ದೊಡ್ಡ ಆಸರೆ. ಇದರಲ್ಲಿರುವ ವಿಟಮಿನ್ ಸಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಇದರ ಬೀಜ ಮತ್ತು ತಿರುಳು ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ರಕ್ತದೊತ್ತಡ ನಿಯಂತ್ರಿಸುವ ಮತ್ತು ಆಯಾಸ ನೀಗಿಸುವ ಗುಣವೂ ಇದರಲ್ಲಿದೆ.


ಮೊನ್ನೆ ರಂಗಣ್ಣ ತಂದುಕೊಟ್ಟ ತಾಜಾ ಹಣ್ಣುಗಳನ್ನು ಕತ್ತರಿಸಿ, ಅದರ ರಸ ತೆಗೆದು ಜ್ಯೂಸ್ ಮಾಡಿ ಸವಿದಾಗ, ಅಂದಿನ ಆ 'ಗೊಣಗಾಟ'ದ ನೆನಪಾಗಿ ಮುಖದಲ್ಲಿ ನಗು ಮೂಡಿತು. ಹುಳಿ-ಸಿಹಿ ಬೆರೆತ ಆ ತಂಪು ಪಾನೀಯ ಗಂಟಲೊಳಗೆ ಇಳಿಯುತ್ತಿದ್ದಂತೆ, ಒಮ್ಮೆ ಕಳೆದುಕೊಂಡರೂ ಪ್ರಕೃತಿ ಮತ್ತೆ ಒಲಿದು ನೀಡಿದ ಈ ಉಡುಗೊರೆಗೆ ಮನಸ್ಸು ತುಂಬಿ ಬಂತು.



Wednesday, 6 May 2026

ಗೋಧಿ ಪಾಯಸ

 


ಗೋಧಿಕಡಿ ಇಡ್ಲಿ, ದೋಸೆ ಸವಿದಾಯ್ತು,  ಅದರೂ ಮಧುಕರ ತಂದುಕೊಟ್ಟ ಮಂಗಳೂರಿನ ಬಾಳಿಗಾ ಸ್ಟೋರ್ ನ ಗೋಧಿಕಡಿ ಮುಗಿದಿರಲಿಲ್ಲ.  ಹಿರಣ್ಯ ದೇವಸ್ಥಾನದಲ್ಲಿ ಸವಿದ ಅಕ್ಕಿಪಾಯಸದ ಮಾದರಿಯಲ್ಲೇ ಗೋಧಿ ಪಾಯಸ ಮಾಡಿದರಾದೀತು.  

ಗೋಧಿ ಪಾಯಸಕ್ಕೆ ಬೆಲ್ಲವೇ ಸೂಕ್ತ,  ಎರಡು ಅಚ್ಚು ಸಾಕಾದೀತು ಎಂದು ಬೆಲ್ಲದ ಡಬ್ಬ ತೆರೆದಾಗ, ಬೆಲ್ಲ ದ್ರವರೂಪಕ್ಕೆ ಹೊರಳುವಂತಿದೆಯಲ್ಲ!  ಬಹುಶಃ ಸೆಕೆಗೆ ಹೀಗಾಗಿದೆ. ಬೆಲ್ಲವನ್ನು ಕೈಗೆತ್ತಿಕೊಂಡಾಗ ಬೆಲ್ಲದ ಕಡು ವರ್ಣವನ್ನು ಕಳೆದುಕೊಂಡಂತೆ, ಸಕ್ಕರೆಯ ಅಚ್ಚಿನಂತೆ ಭಾಸವಾಯಿತು.  ಗಟ್ಟಿಕಲ್ಲಿನಂತೆ ಇದ್ದ ಅಚ್ಚನ್ನು ಕಷ್ಟಪಟ್ಟು ಚೂರಿಯಲ್ಲಿ ತುಂಡರಿಸಿ ಬಾಯಿಗೆ ಹಾಕಿದಾಗ ಇದು ಸಕ್ಕರೆ,  ಬೆಲ್ಲವಲ್ಲ ಎಂದು ತಿಳಿಯಿತು.  ಸಕ್ಕರೆ ಇರುವಾಗ ನಾನೇಕೆ ಈ ಬೆರಕೆ ಸಕ್ಕರೆ ಉಪಯೋಗಿಸಲಿ?  ಇನ್ನೂ ಬೇರೇನನ್ನು ಸೇರಿಸಿರುತ್ತಾರೋ ತಿಳಿಯದು.


ಅಂತೂ ಮನೆಯ ಸದಸ್ಯರೊಂದಿಗೆ ಸಮಾಲೋಚಿಸಿ ಬೆಲ್ಲವನ್ನು ಬಿಸಾಡುವ ತೀರ್ಮಾನಕ್ಕೆ ಬರಲಾಯಿತು.

ನಿನ್ನೆ ರಂಗಣ್ಣ ಬಂದಿದ್ದ,  “ನೋಡೂ ಬೆಲ್ಲ ಹೀಗಾಗಿದೆ,   ಈಗ ಅಂಗಡಿಯಿಂದ ಕೇವಲ ಅರ್ಧ ಕಿಲೋ ಬೆಲ್ಲ ತಂದ್ಕೊಂಡು. “

ರಂಗಣ್ಣ ಕಲಬೆರಕೆ ಬೆಲ್ಲವನ್ನು ತೆಂಗಿನ ಮರದ ಬುಡಕ್ಕೆ ಚೆಲ್ಲಿ ಬಂದ,  ಹೊಸದಾದ ಬೆಲ್ಲವೂ ಬಂದಿತು.  ಇನ್ನೀಗ ಪಾಯಸದ ವ್ಯವಹಾರ ನೋಡಿಕೊಳ್ಳೋಣ.



ನಿಧಾನಗತಿಯಲ್ಲಿ ಬೇಯುವ ಗೋಧಿಗೆ ಕುಕ್ಕರ್ ಅವಶ್ಯವಿದೆ.   ಇಬ್ಬರಿಗೆ ಬೇಕಾಗುವಷ್ಟೇ ಪಾಯಸ ಮಾಡಬೇಕಾಗಿದೆ.  ಐದು ಚಮಚ ಗೋಧಿ ಕಡಿ ಅಳೆಯಿರಿ.  ಕುಕ್ಕರಿಗೆ ಮೂರು ದೊಡ್ಡ ಲೋಟ ನೀರು ಎರೆಯಿರಿ.

ದೊಡ್ಡ ಉರಿಯಲ್ಲಿ ಮೂರು ಸೀಟಿ ಹಾಕಲಿ.  ನಂತರ ಉರಿಯನ್ನು ಕನಿಷ್ಠ ಡಿಗ್ರಿಯಲ್ಲಿರಿಸಿ,  ಹತ್ತು ನಿಮಿಷ ಬಿಟ್ಟು ಉರಿಯನ್ನು ಆರಿಸಿ,  ಇಂತಹ ವ್ಯವಹಾರಗಳಿಗೆ ಇಂಡಕ್ಷನ್ ಸ್ಟವ್ ಸೂಕ್ತ.

ಒಂದೇ ಸ್ಟೀಲ್ ಕುಕರ್ ಇದ್ದುದರಿಂದ ಮೊದಲು ಗೋಧಿಯನ್ನು ಬೇಯಿಸಿ,  ಅದನ್ನು ಇನ್ನೊಂದು ದಪ್ಪ ತಳದ ಸ್ಟೀಲ್ ಪಾತ್ರೆಗೆ ಬದಲಿಸಿದ್ದೂ ಆಯ್ತು, ಎರಡು ಅಚ್ಚು ಬೆಲ್ಲ ಹಾಕಿರಿಸುವುದು, ನಧಾನಗತಿಯಲ್ಲಿ ಕರಗುತ್ತಿರಲಿ.  ಇದೀಗ ಕುಕರ್ ಅನ್ನ ಬೇಯಿಸಲು ಹೊರಟಿದೆ ಅನ್ನಿ.


ಅರ್ಧ ತೆಂಗಿನಕಾಯಿ ತುರಿದು ದಪ್ಪ ಹಾಲು ತೆಗೆಯಿರಿ,  ನೀರುಕಾಯಿಹಾಲನ್ನು ಬೆಲ್ಲ ಕರಗುತ್ತಲಿರುವ ಪಾಯಸದ ತಪಲೆಗೆ ಎರೆಯಿರಿ.

ದ್ರಾಕ್ಷಿ, ಗೋಡಂಬಿ,  ಏಲಕ್ಕಿಗಳನ್ನು ಸಿದ್ಧಪಡಿಸಿ,  ನನ್ನ ಬಳಿ ಪಿಸ್ತಾ ಇದ್ದಿತು,  ಅದನ್ನೇ ನಾಲ್ಕು ಚೂರು ಹಾಕುವುದು.

ಅನ್ನದ ಕೆಲಸ ಆಯ್ತು,  ಇದೀಗ ಇಂಡಕ್ಷನ್ ಸ್ಟವ್ ಪಾಯಸ ಕುದಿಸಲು ತಯಾರ್ ಎಂದಿತು.

ಬೆಲ್ಲ ಕರಗಿ ಸಾಂದ್ರವಾಗಬೇಕಿದೆ.   ಗರಿಷ್ಠ ಉಷ್ಣತೆಯಲ್ಲಿ ಕುದಿಸುತ್ತಾ, ಸೌಟಿನಲ್ಲಿ ಕೆದಕುತ್ತಾ,  ಉಷ್ಣತೆಯನ್ನು ಕಡಿಮೆ ಮಾಡುತ್ತಾ ಇದ್ದಂತೆ, ಮೆತ್ತಗೆ ಬೆಂದಂತಹ ಪಾಯಸದ ದ್ರಾವಣಕ್ಕೆ, ದಪ್ಪ ಕಾಯಿಹಾಲು ಎರೆಯುವ ಸಮಯ ಬಂದಿದೆ.   ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿಗಳಿಂದ ಅಲಂಕರಿಸೋಣ.  ಸಾಲದೂ ಎಂಬಂತೆ ಏಲಕ್ಕಿ, ಪಿಸ್ತಾ…


ಮರೆತೇ ಬಿಟ್ಟಿದ್ದೆ,  ಮಧುಕರ ತಂದುಕೊಟ್ಟಂತಹ ವೆನಿಲಾ ಕೋಡುಗಳು, ಮೊನ್ನೆ ತಾನೇ ತಂದಿದ್ದ,  ನನ್ನ ಬಳಿ ಅಡಿಕೆತೋಟದಲ್ಲಿ ಆದಂತಹ ವೆನಿಲಾ ದಾಸ್ತಾನೂ ಇತ್ತು,  ಹೊಸತು ಬಂದಿರುವಾಗ ಹಳೆಯದರ ಹಂಗೇಕೆ ಅಂದುಕೊಳ್ಳುತ್ತ  ಎರಡು ಇಂಚು ಉದ್ದ ವೆನಿಲಾ ಕತ್ತರಿಸಿ ಗೋಧಿ ಬೇಯುವಾಗಲೇ ಹಾಕಿದ್ದನ್ನು ಬರೆಯದಿದ್ದರೆ ನನ್ನ ಸ್ಪೆಶಲ್ ಪಾಯಸದ ಸವಿ ಓದುಗರಿಗೆ ತಿಳಿಯುವುದಾದರೂ ಹೇಗೆ?  ವೆನಿಲಾ ಸ್ವಾದದ ಪಾಯಸ ಸಿದ್ಧವಾಗಿದೆ.



Wednesday, 15 April 2026

ಪಾಲ್ಪಾಯಸಂ

 

ನಿನ್ನೆ ಹಿರಣ್ಯ ದೇಗುಲದಲ್ಲಿ ಸಂಕ್ರಾಂತಿಯ ಸಡಗರ,  ವಿಷು ಸಂಕ್ರಾಂತಿಯಾದುದರಿಂದ ಭಕ್ತಾದಿಗಳ ದಟ್ಟಣೆ.  ಮುಂಜಾನೆಯಿಂದಲೇ ಪೂಜೆ ಪ್ರಾರಂಭ,  ಪಕ್ಕದಲ್ಲೇ ಕೆಳಗೆ ನಾಗಬನ, ಅಲ್ಲಿಯೂ ಪೂಜಾಕೈಂಕರ್ಯ.   ಅಪರಾಹ್ನ ಕಾಲದ ಪೂಜಾ ನಂತರ ಅನ್ನ ಪ್ರಸಾದ.  ದೇವಸ್ಥಾನದ ಊಟವೆಂದರೆ ಅನ್ನ,ಪಲ್ಯ ಸಾರು ಸಾಂಬಾರು, ಸಿಹಿ, ಮಜ್ಜಿಗೆ, ಉಪ್ಪಿನಕಾಯಿ..

ಗುಜ್ಜೆ ಪಲ್ಯನಿನ್ನೆಯ ವಿಶೇಷ,  ಈಗ ಹಲಸಿನಕಾಯಿಯದೇ ದರ್ಬಾರು,  ಬಿಡುವಂತಿಲ್ಲ ಎಂಬಂತೆ ಮಾವಿನ ಹಣ್ಣಿನ ಮೆಣಸ್ಕಾಯಿ ಇದ್ದಿತು.

ಕ್ಷೀರ,  ಹೆಸ್ರು ಪಾಯಸ, ನೈವೇದ್ಯದ ವಿಶೇಷ ಪಾಲ್ಪಾಯಸಂ ಇದ್ದಿತು.

ಈ ಪಾಲ್ಪಾಯಸ ಮಾಡಿದ ಕ್ರಮ ಹೇಗೆಂದು ತಿಳಿಯಲು ಅಡುಗೆಪಂಡಿತರನ್ನೇ ಕೇಳೋಣಾ ಅಂತಿದ್ರೇ ಯಾರನ್ನೂ ಕಾಣಿಸಲಿಲ್ಲ.   ಚಿಂತೆಯಿಲ್ಲ,  ಮನೆಗೆ ಹೋದ್ಮೇಲೆ ಅಮ್ಮನ ಡೈರಿ ತೆಗೆದು ನೋಡಿದ್ರಾಯ್ತಪ..


ಅಮ್ಮ ಟೀವಿಯಲ್ಲಿ ಬರುತ್ತಿದ್ದಂತಹ ನಳಪಾಕಗಳನ್ನು ನೋಡುತ್ತ ಬರೆದೂ ಇಡ್ತಿದ್ರು. ಅದಕ್ಕೂ ಮೊದಲು ಸುಧಾ ವಾರಪತ್ರಿಕೆಯಲ್ಲಿ ಮಹಿಳೆಯರಿಗೆಂದೇ ಎರಡು ಪುಟಗಳ ಕಾಮಧೇನು ಅಂಕಣದಲ್ಲಿ ಪ್ರಕಟವಾಗುತ್ತಿದ್ದ ಅಡುಗೆ ಪುಟಗಳನ್ನು ಜೋಪಾನವಾಗಿ ಕತ್ತರಿಸಿ, ತೆಗೆದಿರಿಸುತ್ತಿದ್ದರು.  ಸೂಕ್ತ ಸಂದರ್ಭ ದೊರೆತಾಗ ಅಡುಗೆಯ ಪ್ರಯೋಗ, ನನಗೆ ಈಗಲೂ ಚೆನ್ನಾಗಿ ನೆನಪಿದೆ,  ಟೊಮೇಟೋ ಕಾಯಿರಸ ಎಂಬ ವ್ಯಂಜನ ಸುಧಾ,  ಕಾಮಧೇನು ವಿಭಾಗದಲ್ಲಿ ಬಂದದ್ದು, ತುಂಬ ರುಚಿಕರವಾದ ಈ ಪದಾರ್ಥವನ್ನು ನಾನು ಹಿರಣ್ಯದಲ್ಲೂ ಮಾಡಿದ್ದೇನೆ,  ಬ್ಲಾಗ್ ನಲ್ಲೂ ಇದೆ.  ಆಸಕ್ತರು. ಹುಡುಕಿ ಓದಿರಿ.


ಟಿಪ್ಪಣಿ: ಹಿರಣ್ಯ ದೇವಸ್ಥಾನದ ಪಾಲ್ಪಾಯಸದ ಈ ವಿಧಾನ ನನಗೆ ಸಿಕ್ಕಿದ್ದು ಅಮ್ಮನ ಹಳೆಯ ಕೈಬರಹದ ಪುಸ್ತಕದಲ್ಲಿ. ಹಬ್ಬದ ದಿನ ಅಮ್ಮನ ಕೈರುಚಿಯ ನೆನಪು ಈ ಪಾಯಸದ ಸಿಹಿಯನ್ನು ಇನ್ನಷ್ಟು ಹೆಚ್ಚಿಸಿದೆ.





ಹಿರಣ್ಯ ದುರ್ಗಾಪರಮೇಶ್ವರಿ ದೇವಸ್ಥಾನದ ಆ ನೈವೇದ್ಯದ ಪರಿಮಳ ಮತ್ತು ರುಚಿಯನ್ನು ಮನೆಯಲ್ಲೇ ಮರುಸೃಷ್ಟಿಸಲು ಇಲ್ಲಿದೆ ವಿಧಾನ. 


ದೇವಸ್ಥಾನದ ಭಟ್ಟರು ಕಟ್ಟಿಗೆಯ ಒಲೆಯ ಮೇಲೆ ಗಂಟೆಗಟ್ಟಲೆ ಕುದಿಸಿ ಆ ವಿಶೇಷ ರುಚಿಯನ್ನು ತರುತ್ತಾರೆ. ಆದರೆ ನಮ್ಮ ಮನೆಯ ಇಂಡಕ್ಷನ್ ಒಲೆಯ ಮೇಲೆಯೇ, ದಪ್ಪ ತಳದ ಕುಕ್ಕರ್ ಬಳಸಿ ಅದೇ ಹದವನ್ನು ಸುಲಭವಾಗಿ ತರಬಹುದು.

ಬೇಕಾಗುವ ಸಾಮಗ್ರಿಗಳು:

ಪೂರ್ಣ ಕೆನೆಯುಕ್ತ ಹಾಲು - ಒಂದು ಲೀಟರ್

ನೀರು -  ಅರ್ಧ ಲೀಟರ್ (ಹಾಲು ತಳ ಹಿಡಿಯದಿರಲು)

ಬೆಳ್ತಿಗೆ ಅಕ್ಕಿ - ಕೇವಲ 3 ರಿಂದ 4 ಚಮಚ (ಅಕ್ಕಿ ಕಡಿಮೆ ಇದ್ದಷ್ಟೂ ಪಾಯಸದ ಹದ ಚೆನ್ನಾಗಿರುತ್ತದೆ)

ಸಕ್ಕರೆ -  ಅರ್ಧ ಲೋಟ (ಅತಿಯಾದ ಸಿಹಿಯಿಲ್ಲದ, ಹಿತವಾದ ರುಚಿಗೆ ಇದು ಸರಿಯಾದ ಅಳತೆ)

ಏಲಕ್ಕಿ ಪುಡಿ - ಒಂದು ಚಿಕ್ಕ ಚಮಚ

ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿ

ಪಚ್ಚ ಕರ್ಪೂರ (Edible camphor) - ಒಂದು ಸಣ್ಣ ಚಿಟಿಕೆ (ಇದೇ ದೇವಸ್ಥಾನದ ಪಾಯಸದ ಸುವಾಸನೆಯ ಗುಟ್ಟು!)

ಮಾಡುವ ವಿಧಾನ:

ಅಕ್ಕಿಯ ತಯಾರಿ: ಅಕ್ಕಿಯನ್ನು ಚೆನ್ನಾಗಿ ತೊಳೆದು 10 ನಿಮಿಷ ನೆನೆಯಲು ಬಿಡಿ. ಪಾಯಸದಲ್ಲಿ ಅಕ್ಕಿ ಕರಗಿ ಹೋಗಬಾರದು ಎಂದರೆ, ತೊಳೆದ ಅಕ್ಕಿಯನ್ನು ಸ್ವಲ್ಪ ತುಪ್ಪದಲ್ಲಿ ಲಘುವಾಗಿ ಹುರಿದುಕೊಳ್ಳಬಹುದು.

ಕುದಿಸುವಿಕೆ (ಮುಖ್ಯ ಹಂತ): ದಪ್ಪ ತಳದ ಕುಕ್ಕರ್‌ನಲ್ಲಿ ಹಾಲು ಮತ್ತು ನೀರನ್ನು ಸೇರಿಸಿ ಕುದಿಯಲು ಇಡಿ. ಹಾಲು ಉಕ್ಕಿ ಬರುವಾಗ, ಅಕ್ಕಿಯನ್ನು ಸೇರಿಸಿ.

ಮಂದ ಉರಿಯ ಬೇಯಿಸುವಿಕೆ: ಕುಕ್ಕರ್ ಮುಚ್ಚಳ ಮುಚ್ಚಿ,  ವೆಯಿಟ್ ಹಾಕದಿರಿ.

ಕುದಿಯುವಾಗ ಉರಿಯನ್ನು ಸಂಪೂರ್ಣ ಕಡಿಮೆ ಮಾಡಿ,  30-40 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ನಡುವೆ ಒಂದೆರಡು ಬಾರಿ ಸೌಟಿನಿಂದ ತಿರುಗಿಸಿ. ಹಾಲು ನಿಧಾನವಾಗಿ ಕುದಿದು, ತಿಳಿ ಗುಲಾಬಿ ಅಥವಾ ಕೆನೆ ಬಣ್ಣಕ್ಕೆ ತಿರುಗುತ್ತದೆ.

ಸಕ್ಕರೆ ಸೇರಿಸುವಿಕೆ: ಅಕ್ಕಿ ಸಂಪೂರ್ಣವಾಗಿ ಬೆಂದು, ಹಾಲು ಗಟ್ಟಿಯಾದ ಮೇಲೆ ಮಾತ್ರ ಸಕ್ಕರೆ ಸೇರಿಸಿ. ಮೊದಲೇ ಸಕ್ಕರೆ ಹಾಕಿದರೆ ಅಕ್ಕಿ ಸರಿಯಾಗಿ ಬೇಯುವುದಿಲ್ಲ. ಸಕ್ಕರೆ ಕರಗಿ, ಪಾಯಸ ಮಂದವಾದ ನಂತರ ಮತ್ತೆ 5 ನಿಮಿಷ ಕುದಿಸಿ.

ಒಗ್ಗರಣೆ ಮತ್ತು ಪರಿಮಳ: ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಆ ಒಂದು ಚಿಟಿಕೆ ಪಚ್ಚ ಕರ್ಪೂರವನ್ನು ಸೇರಿಸಿ ಒಲೆ ಆರಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿದರೆ, ದೇವಸ್ಥಾನದ ಭಟ್ಟರ ಕೈರುಚಿಯ ಪಾಲ್ಪಾಯಸ ಸವಿಯಲು ಸಿದ್ಧ.