ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಉರಿ ಬಿಸಿಲಿಗೆ ದೇಹವನ್ನು ತಂಪಾಗಿರಿಸುವ ಹಾಗೂ ಆರೋಗ್ಯವನ್ನು ಕಾಪಾಡುವ ಊಟ ನಮ್ಮದಾಗಿರಬೇಕು. ಅದಕ್ಕಾಗಿಯೇ ಇಂದು ನಮ್ಮದು ಬಸಳೆ ಸೊಪ್ಪಿನ ಸಾರು ಸಿದ್ಧವಾಗಿದೆ.
ಮನೆಯ ಅಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ಒಂದು ಚಿಕ್ಕ ಚಪ್ಪರ ಹಾಕಿ ಬಸಳೆ ಬಳ್ಳಿ ಹಬ್ಬಿಸಿದರೆ, ನೋಡಲೂ ಅಂದ, ಉಣ್ಣಲೂ ಚಂದ. ದಪ್ಪನೆಯ, ರಸಭರಿತವಾದ ಎಲೆಗಳ ಈ ಬಳ್ಳಿ ಕಣ್ಣಿಗೆ ಎಷ್ಟು ತಂಪೋ, ದೇಹಕ್ಕೂ ಅಷ್ಟೇ ತಂಪು.
ಬಸಳೆಯ ವಿಶೇಷತೆಗಳು:
ಬಸಳೆ ಬೆಳೆಯುವುದು ಬಹಳ ಸುಲಭ. ಒಂದೆರಡು ಕಡ್ಡಿ ನೆಟ್ಟರೂ ಸಾಕು, ಹುಲುಸಾಗಿ ಬೆಳೆದು ಚಪ್ಪರವನ್ನು ಆವರಿಸಿಕೊಳ್ಳುತ್ತದೆ. ಅಡುಗೆಮನೆಯ ಕಸ ಬಸಳೆಗೆ ಉತ್ತಮ ಗೊಬ್ಬರ, ನೀರೂ ಅವಶ್ಯಕ.
ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಯಥೇಚ್ಛವಾಗಿದೆ.
ಇದರ ದಪ್ಪನೆಯ ಎಲೆಗಳು ಮತ್ತು ನಾರಿನಂಶವುಳ್ಳ ಕಾಂಡಗಳು ಅಡುಗೆಗೆ ಅದ್ಭುತ ರುಚಿ ಕೊಡುತ್ತವೆ.
ಬೇಸಿಗೆಯಲ್ಲಿ ಬಸಳೆಯ ಉಪಯೋಗ:
ದೇಹಕ್ಕೆ ತಂಪು: ಬೇಸಿಗೆಯ ತಾಪಕ್ಕೆ ದೇಹವನ್ನು ನೈಸರ್ಗಿಕವಾಗಿ ತಂಪಾಗಿರಿಸಲು ಬಸಳೆ ಅತ್ಯುತ್ತಮ. ಜೀರ್ಣಕ್ರಿಯೆಗೆ ಸಹಕಾರಿ: ಇದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ.
ಶಕ್ತಿದಾಯಕ: ಬಸಳೆಯಲ್ಲಿರುವ ಪೋಷಕಾಂಶಗಳು ಬೇಸಿಗೆಯಲ್ಲಿ ಕಾಡುವ ಸುಸ್ತು ಮತ್ತು ಆಯಾಸವನ್ನು ದೂರ ಮಾಡಿ ದೇಹಕ್ಕೆ ಚೈತನ್ಯ ನೀಡುತ್ತವೆ.
ಬೇಗನೇ ಅಡುಗೆ ಆಗಲು ಎಳೆಯ ಕುಡಿ ಕಾಂಡಗಳನ್ನು ಕುಯ್ಯುವುದು, ಬೇಕಾದಂತೆ ಕತ್ತರಿಸಿ ಇಡುವುದು.
ಮೊದಲಾಗಿ ಹೆಸ್ರುಕಾಳುಗಳನ್ನು ಬೇಯಲಿಡುವುದು. 3 ಚಮಚ ಸಾಕು ಕಣ್ರೀ. ಅತಿಯಾಗಿ ಕಾಳು ಹಾಕಿದಿರಾದರೆ ಸಾರು ಹೋಗಿ ಗಸಿ ಆದೀತು.
ಆಕರ್ಷಕ ಬಣ್ಣಕ್ಕಾಗಿ ಬೀಟ್ರೂಟ್ ಹೋಳುಗಳನ್ನು ಹಾಕುವುದು.
ಹುಳಿ ರುಚಿಗಾಗಿ ಟೊಮೇಟೋ ಮಾತ್ರ ಸಾಲದು, ಸ್ವಲ್ಪ ಹುಣಸೆಹಣ್ಣು ಅಥವಾ ಪುನರ್ಪುಳಿ ಇರಲಿ. ನಾನು ಪುನರ್ಪುಳಿಯನ್ನೇ ಹಾಕಿದ್ದು, ಮೂರು ಒಣಸಿಪ್ಪೆ ಸಾಕು.
ರುಚಿಗೆ ಉಪ್ಪು, ಸಿಹಿಗೆ ಬೆಲ್ಲ.
ಸಾರು ಅಲ್ಲವೇ, ಚಿಟಿಕೆ ಅರಸಿನ. ಇಂಗು ಇರಲಿ.
ಕರಿಬೇವು, ಸಾಕಷ್ಟು ಬೆಳ್ಳುಳ್ಳಿ ಎಸಳುಗಳ ಒಗ್ಗರಣೆ ಕಡ್ಡಾಯ. ಒಗ್ಗರಣೆಗೆ ಜೀರಿಗೆಯೂ ಇರಲಿ, ಪರಿಮಳ ಜಾಸ್ತಿ.


0 comments:
Post a Comment