Pages

Ads 468x60px

Saturday, 19 December 2020

ಧಾನ್ಯಗಳ ದೋಸೆ

 



ಈ ಬಾರಿ ಮಧು ಊರಿಗೆ ಬಂದಾಗ ವಿವಿಧ ಬಗೆಯ ಧಾನ್ಯಗಳ ಹಿಟ್ಟುಗಳೂ ಬಂದುವು.  " ಅಮ್ಮ, ದಿನಾ ಒಂದೇ ಕ್ರಮದಲ್ಲಿ ನೀರುದೋಸೆ ತಿನ್ನುತ್ತಿದ್ದರೆ ನಮ್ಮ ದೇಹಕ್ಕೆ ಬೇಕಾದ ಪ್ರೊಟೀನ್ಸ್ ಸಿಗಬೇಕಲ್ಲ.. "


ಹೌದಲ್ವೇ..  ಉದ್ದು,  ಅಕ್ಕಿ ಹಾಕಿದಲ್ಲಿ ನಮ್ಮ ಉದ್ದಿನ ದೋಸೆ ಆಗಿಬಿಡುತ್ತದೆ.   ಈ ಪ್ಯಾಕೆಟ್ ಹಿಟ್ಟಿನಲ್ಲಿ ಏನೆಲ್ಲ ಧಾನ್ಯಗಳಿವೆಯೋ ತಿಳಿಯದು. 


ನಾನೂ ದೋಸೆಯ ತಯಾರಿಗೆ ಹೊರಟೆ.  ಒಂದು ಲೋಟ ಬೆಳ್ತಿಗೆ ಅಕ್ಕಿ,

ಒಂದು ಹಿಡಿ ಉದ್ದು

ಒಂದು ಹಿಡಿ ಹೆಸ್ರುಬೇಳೆ

ಹತ್ತಾರು ಕಾಳು ಕಡ್ಲೆಬೇಳೆ

ಒಂದು ಚಮಚ ತೊಗರಿಬೇಳೆ

ಒಂದು ಚಮಚ ಮೆಂತೆ

ಒಟ್ಟಿಗೆ ತಪಲೆಗೆ ತುಂಬಿ ನೀರೆರೆದು ಇಡುವುದು.

ಕೊನೆಯದಾಗಿ ಒಂದು ಲೋಟ ಕುಚ್ಚುಲಕ್ಕಿ ಕುದಿಯುವ ನೀರು ಎರೆದು ಇಡುವುದು.


ಅರೆಯುವ ಹೊತ್ತು,  ಬೆಳ್ತಿಗೆ ಅಕ್ಕಿ ಹಾಗೂ ಬೇಳೆಕಾಳುಗಳನ್ನು ತೊಳೆದು ನುಣ್ಣಗೆ ಅರೆಯುವುದು.

ಬಿಸಿನೀರಿನಲ್ಲಿ ನೆನೆದ ಕುಚ್ಚುಲಕ್ಕಿಯನ್ನು ಕೂಡಾ ತೊಳೆದು ನುಣ್ಣಗೆ ಅರೆದು ಸೇರಿಸಿ.  ಮಿಕ್ಸಿಯಲ್ಲಿ ಹೀಗೆ ಕುಚ್ಚುಲಕ್ಕಿ ಅರೆಯುವ ಕ್ರಮ ನನ್ನದು.   ಕೈಯಲ್ಲೇ ತಿರುಗಿಸುವ ಅರೆಯುವ ಕಲ್ಲಿನಲ್ಲಿ ಎಲ್ಲವನ್ನೂ ಒಟ್ಟಿಗೆ ಹಾಕಿ ಅರೆಯುವ ಕಾಲವೊಂದಿತ್ತು.  ಅದೆಲ್ಲ ಈಗ ನೆನಪಿನ ಕಾಲಕ್ಕೆ ಸಂದಿದೆ.


ರುಬ್ಬಿದ ಹಿಟ್ಟಿಗೆ ಮಧು ತಂದಂತಹ ಧಾನ್ಯಗಳ ಹಿಟ್ಟು ಕೂಡಾ ಸೇರಿಕೊಂಡಿತು.  ಒಂದು ಲೋಟ ಧಾನ್ಯಗಳ ಹಿಟ್ಟನ್ನು ನೀರು ಬೆರೆಸಿ ಕೂಡಿಸಲಾಯಿತು.   ಹುದುಗು ಬರಲು ಮುಚ್ಚಿ ಇರಿಸುವುದು.  ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹಾಕಿಯೇ ಇರಿಸಬೇಕು.


ಮಾರನೇ ದಿನ ದೊಸೆ ಎರೆಯಿರಿ,  ತೆಂಗಿನಕಾಯ್ ಚಟ್ಣಿ ,  ಬೆಲ್ಲದ ಸಿಹಿಪಾಕವೂ,  ಬಿಸಿ ಕಾಫಿಯೂ ಇದ್ದರಾಯಿತು.  ಮೊಸರುಪ್ರಿಯರು ಮೊಸರಿನಲ್ಲಿ ಅದ್ದಿ ತಿನ್ನಿ.




Wednesday, 9 December 2020

ಮಂಜಾಲ್ ದೋಸೆ

 




ಅಂಗಳದ ಒಂದು ಮೂಲೆಯಲ್ಲಿ ಇದ್ದಂತಹ ತೆಂಗಿನಕಾಯಿ ರಾಶಿಯನ್ನು ತಪಾಸಿಸುತ್ತಿದ್ದಾಗ ಹಸೀ ತೆಂಗಿನಕಾಯಿ ಗೋಚರವಾಯಿತು.   ಎತ್ತಿ ನೋಡಿದಾಗ ತುಂಬ ಭಾರವಿದೆ,  ಅಂದರೆ ಇದು ಇನ್ನೂ ತೆಂಗಿನಕಾಯಿ ಆಗಿಲ್ಲ,  ಒಳಗಿನ ತಿರುಳು ದೋಸೆಗೆ ಲಾಯಕ್ಕು ಎಂದು ಸುಲಿದೇ ಒಳಗೆ ತಂದು, ಒಡೆದು,  ಒಳಗಿನ ನೀರು ಕುಡಿದು,  ತಿರುಳನ್ನು ತುರಿದು ಇಟ್ಟಾಯ್ತು.

ಎರಡು ಲೋಟ ಬೆಳ್ತಿಗೆ ಅಕ್ಕಿ ನೀರಿಗೆ ಬಿತ್ತು.

ಸಂಜೆ ಅರೆಯುವುದು.

ಅರೆಯುವ ಹೊತ್ತಿಗೆ ನನ್ನ ಅರಸಿಣ ಗೆಡ್ಡೆ ನೆನಪಾಯ್ತು.   ಅಡುಗೆ ಮನೆಯಲ್ಲೇ ಸ್ವಲ್ಪ ಹಸಿ ಗೆಡ್ಡೆಗಳನ್ನು ಕಾಣುವಂತೆ ಇಟ್ಟಿರುವಾಗ,  ಅರ್ಧ ಇಂಚು ಉದ್ದದ ಅರಸಿಣ ಗೆಡ್ಡೆ ಚೂರಿಯಲ್ಲಿ ಚೂರು ಚೂರಾಗಿ ಅರೆಯುವ ಸಾಧನದೊಳಗೆ ಬಿದ್ದಿತು.  ಹಳದೀ ಬಣ್ಣದ ದೋಸೆಹಿಟ್ಟು ದೊರೆಯಿತು.


ನಾಳೆ ದೋಸೆ ಎರೆಯಲಿಕ್ಕಾಗಿ ಮುಚ್ಚಿ ಇರಿಸಲ್ಪಟ್ಚಿತು.

ಮುಂಜಾನೆ ಈ ದೋಸೆ ತೆಳ್ಳಗೆ ಪೇಪರ್ ದೋಸೆಯಂತೆ ಎರೆಯಲ್ಪಟ್ಟಿತು.


ಚಟ್ಣಿ ಆಗ್ಬೇಡವೇ,  ಮಾಂಙನ್ನಾರಿಯೂ ಇರುವಾಗ ಹಸಿಮೆಣಸು, ಕೊತ್ತಂಬರಿ ಸೊಪ್ಪು, ತೆಂಗಿನತುರಿಯೊಂದಿಗೆ ಒಂದು ಚಟ್ಣಿ ಎದ್ದುಬಂದಿತು.


ಮಾಂಙನ್ನಾರಿ ಚಟ್ಣಿಯೂ ಅರಸಿಣ ಗೆಡ್ಡೆಯೂ ಕೂಡಿದ ಸುವಾಸಿತ ದೋಸೆ ನಮ್ಮ ಮುಂಜಾನೆಯ ತಿನಿಸು.


ಉಳಿದ ಚಟ್ಣಿ ಹಾಗೂ ದೊಸೆ ಹಿಟ್ಟು ಬೆರೆತು ಫ್ರಿಜ್ ಪೆಟ್ಟಿಗೆ ಸೇರಿದುವು. ಸಂಜೆಗೊಂದು ಪರಿಮಳಿತ ಪಡ್ಡು ಬರಲಿದೆ.


ಪಡ್ಡು ಮಾಡಲಿಕ್ಕೆ ಬೇರೆ ಯಾವುದೇ ಮಸಾಲೆ ಬೇಕಾಗಲಿಲ್ಲ,  ಚಟ್ಣಿಯಲ್ಲೇ ಎಲ್ಲ ಇತ್ತಲ್ಲ..


ನಾವೂ ತಿಂದೆವು,  ನಾಯಿಯೂ ಕುಣಿಕುಣಿದು ತಿಂದಿತು.


“ ಅದ್ಯಾಕೆ ಮಂಜಾಲ್ ದೋಸೆ ಅಂದಿದ್ದೂ? "


ಅಂದ ಹಾಗೆ ಮಂಜಾಲ್ ಅಂದ್ರೆ ನಮ್ಮೂರಿನ ಆಡು ಭಾಷೆ ತುಳುವಿನಲ್ಲಿ ಅರಸಿಣ ಎಂದರ್ಥ,  ಹಳದಿ ಬಣ್ಣವೂ ತುಳುವಿನಲ್ಲಿ ಮಂಜಾಲ್ ಎಂದಾಗಿರುತ್ತದೆ.


" ಅಷ್ಟೇನಾ,  ಸರಿ.  ಗೊತ್ತಾಯ್ತು ಬಿಡಿ.. "

" ಅಲ್ವೇ ಮತ್ತೇ,  ದೋಸೆ ಬರಹಕ್ಕೊಂದು ಹೆಸರು ಇಡದಿದ್ದರೆ ಹೇಗೆ? "





Monday, 30 November 2020

ಹೂವು - ಮಾವು

 

ಎದುರುಗಡೆ ಎತ್ತರದ ದರೆ,  ಅದರಲ್ಲಿಯೂ ಬೆಳೆದಂತಹ ಏನೇನೋ ಹೆಸರೇ ತಿಳಿಯದ ಕುರುಚಲು ಸಸ್ಯಗಳು.  ಅವುಗಳೆಡೆಯಿಂದ ಇಣುಕುತ್ತಿರುವ ಹೂವುಗಳು.   ಯಾವ ಹೂವೂ ಅಂತ ತಲೆ ತುರಿಸುವುದಕ್ಕಿಲ್ಲ.   ವಿಶೇಷವಾಗಿ  ಶ್ರೀದೇವಿಯ ಪೂಜೆಗೆ ಬಳಸುವ ಅಪೂರ್ವ ಹೂವು ಕಿಸ್ಕಾರ.

ನಾಳೆಯೇನೂ ಸಂಕ್ರಾಂತಿ ಪೂಜೆಯ ದಿನವಲ್ಲ,  ಈ ಎರಡು ಹೂ ಗೊಂಚಲು ಆ ದಿನಕ್ಕಾಗುವಾಗ ಉದುರಿ ಹೋದೀತು.  ಅಂತೂ ಹೂ ಗೊಂಚಲು ನನ್ನೊಂದಿಗೆ ಮನೆಯೊಳಗೆ ಬಂದಿತು.





ತೋಟದ ನಿರ್ಮಲೀಕರಣದೊಂದಿಗೆ ಮನೆ ಹಿತ್ತಲು ಕೂಡಾ ಕತ್ತಿ ಪಿಕ್ಕಾಸುಗಳ ಹಾರಾಟದಿಂದ ಶುಚಿಯಾಗಿದೆ,  ಮಣ್ಣಿನೊಳಗೆ ಹುದುಗಿದ್ದ ಅರಸಿಣ ಗೆಡ್ಡೆಗಳು,  ಮಾವಿನ ಶುಂಠಿ ಗೆಡ್ಡೆಗಳು ಮೇಲೆದ್ದು ಅಡುಗೆ ಮನೆ ಪ್ರವೇಶದೊಂದಿಗೆ ಗೆಡ್ಡೆ ಗೆಣಸುಗಳನ್ನು ಅಡುಗೆಯಲ್ಲಿ ಬಳಸುವ ವ್ಯವಹಾರವೂ ನನ್ನದಾಗಿದೆ.


ಒಂದು ಹೊಸ ವಿನ್ಯಾಸದ ತಂಬುಳಿ ಮಾಡೋಣ.


ಕಿಸ್ಕಾರದ ಹೂವುಗಳು ಶುಚಿಗೊಳಿಸಲ್ಪಟ್ಟುವು,  ದೇವರ ಪೂಜೆಗೆಂದು ಆಯ್ದು ಇಡುವುದಿಲ್ಲವೇ,  ಅದೇ ಥರ ಅನ್ನಿ.

ಎರಡಿಂಚು ಉದ್ದದ ಮಾವಿನಶುಂಠಿಯನ್ನು ಮಣ್ಣು ಹೋಗಲು ತಿಕ್ಕಿ ತಿಕ್ಕಿ ತೊಳೆದು ವೃತ್ತಾಕಾರದ ಬಿಲ್ಲೆಗಳಂತೆ ಕತ್ತರಿಸಿಟ್ಟು,

ಒಂದು ಹಿಡಿ ತೆಂಗಿನತುರಿ ತೆಗೆದಿರಿಸಲಾಯಿತು.

ತಾಜಾ ಮಜ್ಜಿಗೆ ಫ್ರಿಜ್ ಪೆಟ್ಟಿಗೆಯಿಂದ ಹೊರ ಬಂದಿತು.  ಅರ್ಧ ಲೋಟ ಸಾಕು.

ಎಲ್ಲವನ್ನೂ ನುಣ್ಣಗೆ ಅರೆದು.

ಮಜ್ಜಿಗೆ ಎರೆದು,

ಹೊಂದುವಷ್ಟು ನೀರನ್ನೂ ಎರೆದು,

ರುಚಿಗೆ ಬೇಕಾದ ಉಪ್ಪೂ,

ಪುಟ್ಟದೊಂದು ಒಗ್ಗರಣೆಯೂ ಬೀಳುವಲ್ಲಿಗೆ 

ಮಾವಿನ ಪರಿಮಳದ ತಂಬುಳಿ ಬಂದಿತಲ್ಲ.

ಹೂವಿನ ಬಣ್ಣವೂ ಕೂಡಿತಲ್ಲ..

ಈ ತಂಬುಳಿಗೆ ನಾವು ಮಾಮೂಲಿಯಾಗಿ ಹಾಕುವಂತಹ ಜೀರಿಗೆ ಯಾ ಕಾಳುಮೆಣಸನ್ನು ನಾನು ಹಾಕಿಲ್ಲ.  ಮಾವಿನಶುಂಠಿಯ ತಾಜಾ ಸುವಾಸನೆಯೇ ಸಾಕು.


ಮಾವಿನಶುಂಠಿ ಯಾ ಮಾಂಙನ್ನಾರಿಯ ಬಗ್ಗೆ ಸವಿವರ ಬರಹ ಈ ಬ್ಲಾಗ್ ನಲ್ಲಿ ಹಿಂದೆಯೇ ಬರೆದಿದ್ದೇನೆ.

ಕಿಸ್ಕಾರ ಯಾ ಕೇಪುಳ ಹೂವು ಕೂಡಾ ಬ್ಲಾಗ್ ಬರಹವಾಗಿ ಈ ಮೊದಲೇ ಬಂದಿದೆ.  ಪುನರಪಿ ಬರೆಯವ ಅವಶ್ಯಕತೆಯಿಲ್ಲ.  ಆಸಕ್ತರು  ಹುಡುಕಿ ಓದಿರಿ.






Tuesday, 24 November 2020

ತಿಳಿಸಾರು

 


ಏನಾಯ್ತು,  ಮಾಡಿದ್ದ ಸಾಂಬಾರ್ ಮುಗಿದೇ ಹೋಯ್ತು,  ರಾತ್ರಿಯೂಟಕ್ಕೆ ಹೊಸದಾಗಿ ಸಾಂಬಾರ್ ಅಟ್ಟಣೆ ಮಾಡುವುದೇ,  ಎಲ್ಲಾದ್ರೂ ಉಂಟೇ..  ತೆಳ್ಳಗಿನ ಒಂದು ತಿಳಿಸಾರು ಮಾಡಿ ಬಿಡೋಣ.


ಅಷ್ಟಕ್ಕೂ ಸಾಂಬಾರು ಮುಗಿಯಲಿಕ್ಕೆ ಊಟದ ಹೊತ್ತಿಗೆ ನೆಂಟರ ಆಗಮನವಾಗಿರಲಿಲ್ಲ.  ನಾವೇ ಇದ್ದಿದ್ದು.    “ ತೋಟದಲ್ಲಿ ಇಬ್ಬರು ಕೆಲಸ ಮಾಡ್ತಿದಾರೆ,  ಅನ್ನ ತಂದಿದಾರಂತೆ,  ಸ್ವಲ್ಪ ಉಪ್ಪಿನಕಾಯಿ ಕೊಟ್ರೆ ಸಾಕಂತೆ,  ಇದ್ದರೆ ಮಜ್ಜಿಗೆ ಕೊಡು.. "


ಉಪ್ಪಿನಕಾಯಿ ಮಜ್ಜಿಗೆಗಿಂತ ಸಾಂಬಾರೇ ವಾಸಿ ಅಂದ್ಬಿಟ್ಟು ನಾನೇ ಸಾಂಬಾರ್ ಕೊಟ್ಟು ಇದೀಗ ರಾತ್ರಿಯಡುಗೆಯ ಚಿಂತೆಯೂನನ್ನದೇ..


ಸಂಜೆಗೂ ಮುಂಚೆ ಸಾರು ಮಾಡ್ಬೇಕಾದ್ರೆ ಪುನಃ ತೊಗರಿಬೇಳೆ ಬೇಯಿಸುವುದೇ,  ವ್ಯರ್ಥ ಕೆಲಸ.


ಬಾಣಲೆ ಒಲೆಗೇರಿತು,  ಬಿಸಿಯೇರಿತು.

ಒಂದು ಚಮಚ ಎಣ್ಣೆ ಬಿದ್ದಿತು.

ಅನುಕ್ರಮವಾಗಿ,

ಉದ್ದಿನ ಬೇಳೆ ಗಾತ್ರದ ಇಂಗು

ಒಂದು ಚಮಚ ತೊಗರಿಬೇಳೆ

ಎರಡು ಒಣಮೆಣಸು

ಎರಡು ಚಮಚ ಕೊತ್ತಂಬರಿ

ತುಸು ಜೀರಿಗೆ

ಕೊನೆಗೆ ಒಂದೆಸಳು ಕರಿಬೇವು

ಹುರಿಯಲ್ಪಟ್ಟಿತು,   ಘಮ್ ಘಮ್ ಪರಿಮಳ ಎದ್ದಿತು.


ಬಿಸಿ ಆರಿದ ನಂತರ ಮಿಕ್ಸಿ ಪುಡಿ ಮಾಡಿ ಕೊಟ್ಟಿತು.

ಇನ್ನೇನು ಮಾಡೋಣಾ ಅಂದರೆ,

ಒಂದು ತಪಲೆಯಲ್ಲಿ  ಅಂದಾಜು ಒಂದೂವರೆ ಲೋಟ ನೀರು ಎರೆದು ರುಚಿಕರವಾಗುವಷ್ಟು ಉಪ್ಪು ಹಾಗೂ ಬೆಲ್ಲ ಹಾಕುವುದು.  

ಮಧ್ಯಾಹ್ನದ ಅಡುಗೆಗೆ ಗಿವುಚಿದ ಹುಣಸೆಯ ಹುಳಿ ಇತ್ತು,  ಅದಕ್ಕೇ ಪುನಃ ನೀರೆರೆದು ರಸ ಶೋಧಿಸಿ ಎರೆಯಲಾಯಿತು.  

ಈ ರಸದ್ರವವನ್ನು ಒಲೆಯ ಮೇಲೆ ಇಡುವುದು.  

ಕುದಿಯಲಿ,

ಈಗ ಮಾಡಿದಂತಹ ತಾಜಾ ಸಾರಿನ ಹುಡಿ ಬೀಳಲಿ.  

ಚಿಟಿಕೆ ಅರಸಿಣ ಪುಡಿ ಹಾಕಲೇ ಬೇಕು.  

ಫ್ರಿಜ್ ಒಳಗೆ ಇದ್ದಂತಹ ಕೊತ್ತಂಬರಿ ಸೊಪ್ಪು ಹೆಚ್ಚಿ ಹಾಕುವುದು.   

ಹುರಿಯುವಾಗ ಇಂಗು ಹಾಕಿದ್ರೂ ಕುದಿಯುವಾಗ ಇನ್ನೊಮ್ಮೆ ಇಂಗಿನ ನೀರು ಎರೆಯುವುದು.

ಕೊನೆಗೆ ತುಪ್ಪದಲ್ಲಿ ಒಗ್ಗರಣೆ ಕೊಟ್ಟು ತಿಳಿ ಸಾರು ಆಯ್ತು ಅನ್ನಿ.

 

ಊಟ ಮಾಡುವಾಗ ಮದುವೆಮನೆಯ ಸಾರು,  ದೇವಸ್ಥಾನಗಳಲ್ಲಿ ಅನ್ನಪ್ರಸಾದ ಉಣ್ಣುವಾಗ ಬಡಿಸುವ ಸಾರು ನೆನಪಾಗದಿರಲಿಲ್ಲ...


ಬೆಲ್ಲ ಹಾಕಲೇ ಬೇಕೆಂದಿಲ್ಲ,  ನಾವು ಬೆಲ್ಲ ಪ್ರಿಯರಾಗಿರುವುದರಿಂದ ಬೆಲ್ಲ ಹಾಕಲಾಗಿದೆ.


ಹಾಗೇನೇ ಕುಡಿಯಲೂ ಯೋಗ್ಯ ಈ ತಿಳಿಸಾರು.

ಕರಿದ ಹಪ್ಪಳ ಸಂಡಿಗೆ ಇದ್ದರಂತೂ ತಿಳಿಸಾರಿನೂಟ ರಸವತ್ತಾಗಿರುತ್ತೆ.


ತೆಂಗಿನಕಾಯಿ ತುರಿಯುವ ಶ್ರಮ ಇಲ್ಲಿಲ್ಲ.

ಟೊಮ್ಯಾಟೋ ಹಸಿಮೆಣಸಿನಕಾಯಿ ಶುಂಠಿ ಬೇಕಿಲ್ಲ.

ಕೊತ್ತಂಬರಿ ಸೊಪ್ಪು ಕಡ್ಡಾಯವಲ್ಲ.