Pages

Ads 468x60px

Friday 18 May 2018

ಹಪ್ಪಳದ ಸಂಪುಟ

   


 

ಒಂದೆರಡು ಮಳೆ ಬಂದ ನಂತರ ತೋಟದೊಳಗೆ ಕೆಲಸ ಕಡಿಮೆ, ಚೆನ್ನಪ್ಪ ಕಳೆದ ನಾಲ್ಕಾರು ದಿನಗಳಿಂದ ನಾಪತ್ತೆಯಾಗಿದ್ದವನು ಇಂದು ಹತ್ತು ಗಂಟೆಗೆ ಬಂದ. ಎಲ್ಲೋ ತಿರುಗಾಟಕ್ಕೆ ಹೋಗಿದ್ದಾಂತ ಕಾಣುತ್ತೆ, ಬೆಳ್ಳಗಿನ ಪೋಷಾಕು ಧರಿಸಿದ್ದ.

“ ಕೆಲ್ಸಕ್ಕೆ ಬಂದಿದ್ದೋ, ಹೀಗೇ ಸುಮ್ಮನೆ ಬಂದಿದ್ದೋ? “ ನನ್ನ ಪ್ರಶ್ನೆ.
“ ಯಾನ್ ಇಂಚನೇ ಬತ್ತುನೆ… “ (ಸುಮ್ಮನೆ ಬಂದದ್ದು ) ಅಂದವನು ತೋಟದಲ್ಲಿ ತೆಂಗಿನಕಾಯಿ ಬಿದ್ದಿರುವುದನ್ನು ತರಲು ಹೊರಟ.
“ ಒಂದು ಚಾ ಕುಡಿದು ಹೋಗು, ಹಲಸಿನ ಹಣ್ಣಿನ ಕೊಟ್ಟಿಗೆ ಇದೆ… “
“ ಹ್ಞೂ… “ ಅನ್ನುತ್ತ ಅವನೂ ಚಹಾ ಸೇವನೆಗೆ ಸಿದ್ಧನಾದ.
“ ಹಲಸಿನಕಾಯಿ ಬೆಳೆದದ್ದು ಇದ್ದರೆ ತಾ. “
ಬರುವಾಗ ಮೂರು ಫನ ಗಾತ್ರದ ಹಲಸಿನ ಕಾಯಿಗಳು ಬಂದವು.
“ ಇದನ್ನು ಏನು ಮಾಡೋದು ಅಂತೀಯ? “
“ ಒಂದು ಹಣ್ಣಿಗಿರಲಿ, ಬೇಕಿದ್ರೆ ಹಪ್ಪಳ ಮಾಡುವ… “
“ ಈಗ ಊಟಕ್ಕಾಯ್ತು, ಹಪ್ಪಳದ ಸಂಗತಿ ನಾಳೆಗಾಯ್ತು... “
“ ಹಪ್ಪಳದ ಸಾಹಿತ್ಯ ಹುಡುಕಿ ಆಗಬೇಕಷ್ಟೆ, ಕಡೆಯುವ ಕಲ್ಲು ತೊಳೆದು ಕ್ಲೀನು ಆಗಬೇಕು, ಗುದ್ದಲಿಕ್ಕೆ ಒನಕೆ ಎಲ್ಲಿದೇಂತ ನೋಡಬೇಕು, ಹಲಸಿನಕಾಯಿ ಬೇಯಿಸುವ ವ್ಯವಸ್ಥೆ ಎಲ್ಲಿ? ಗ್ಯಾಸ್ ಒಲೆ, ಕುಕರ್ ಆಗಲಿಕ್ಕಿಲ್ಲ, ಆ ಪೇರಳೆ ಮರದ ಬುಡದಲ್ಲಿ ಒಂದು ಕಲ್ಲಿನ ಒಲೆ ತಯಾರು ಮಾಡಬೇಕು, ಸೌದೆ ಆಗಬೇಕು, ಹಿತ್ತಾಳೆಯ ದೊಡ್ಡ ಅಟ್ಟಿನಳಗೆ ಉಪ್ಪರಿಗೆಯಿಂದ ತಂದು ತೊಳೆದು ಇಡಬೇಕು… “

“ ನಾಳೆ ಬೆಳಗ್ಗೆ ಬೇಗ ಬರುತ್ತೇನೆ. “

          


ಮುಂಜಾನೆ ಎಂಟೂವರೆಗೆ ಹಲಸಿನ ಸೊಳೆ ಬಿಡಿಸಲು ಮೆಟ್ಟುಗತ್ತಿಯೊಂದಿಗೆ ಗುದ್ದಾಡುತ್ತ ಆರಂಭ. ಚೆನ್ನಪ್ಪ 'ಹಲಸಿನಕಾಯಿ ಕಾಳಗದಲ್ಲಿ ಮಗ್ನನಾಗಿದ್ದಂತೆ ಉಪ್ಪರಿಗೆಯ ಮೂಲೆಯಲ್ಲಿದ್ದಂತಹ ದೊಡ್ಡ ಹಿತ್ತಾಳೆಯ ಅಟ್ಟಿನಳಗೆಯನ್ನು { ಉಗಿಪಾತ್ರೆ ಯಾ steam cooker ) ಹಾಗೂ ಒನಕೆಯನ್ನು ನಾನು ಕೆಳಗಿಳಿಸಿದೆ. ಹಪ್ಪಳ ಒತ್ತುಮಣೆ ( ರೊಟ್ಟಿಮಣೆ ), ಆಗಾಗ್ಗೆ ಬಳಸುತ್ತಿರುವುದರಿಂದ ಅಡುಗೆಮನೆಯಲ್ಲಿ ಇದ್ದಿತು, ಅದನ್ನೂ ಚೆನ್ನಪ್ಪನ ಉಪಯೋಗಕ್ಕಾಗಿ ಹೊರಗಿಡಲಾಯಿತು.

“ ಹಲಸಿನಕಾಯಿ ಸೊಳೆ ಬಿಡಿಸಿ ಆಯ್ತು. “
“ ಈ ಅಟ್ಟಿನಳಗೆಯನ್ನು ತೊಳೆದು ಒಲೆಯ ಮೇಲೆ ಇಡು. “
ಪೇರಳೆಯ ಮರದ ಬುಡದಲ್ಲಿ ತಾತ್ಕಾಲಿಕ ನಿರ್ಮಾಣದ ಒಲೆಯ ಮೇಲೇರಿದ ಅಟ್ಟಿನಳಗೆ, ಹಲಸಿನ ಸೊಳೆಗಳನ್ನು ತುಂಬಿ ಬೇಯಲು ಇಟ್ಟಾಯ್ತು.
ಹಳ್ಳಿ ಮನೆಯ ಆವರಣದಲ್ಲಿ ಕಟ್ಟಿಗೆಗೆ ಕೊರತೆಯಿಲ್ಲ.
ಅರೆಯುವ ಕಲ್ಲು ತೊಳೆಯಲ್ಪಟ್ಟಿತು. ಮೂಲೆ ಸೇರಿರುವ ಅರೆಯುವ ಕಲ್ಲು ಇಂತಹ ವಿಶೇಷ ಸಂದರ್ಭದಲ್ಲಿ “ನಾನಿಲ್ಲದೆ ಹಪ್ಪಳವಾಗದು” ಅಂದಿತು.
“ ಅಕ್ಕ, ಹಪ್ಪಳಕ್ಕೆ ಉಪ್ಪು ಖಾರ ಎಲ್ಲುಂಟು? “.
“ ಉಪ್ಪು, ಮೆಣಸಿನಹುಡಿ, ಎಳ್ಳು... ಸಾಕು. “ ಬೇಕಿದ್ದಷ್ಟು ತಟ್ಟೆಯಲ್ಲಿ ಜೋಡಿಸಿ ಕೊಟ್ಟಾಯ್ತು.
“ ಹಲಸಿನಕಾಯಿ ಚೆನ್ನಾಗಿ ಬೇಯಬೇಕು, ಇಲ್ಲಾಂದ್ರೆ ಹಪ್ಪಳಕ್ಕೆ ರುಚಿಯಿಲ್ಲ, ಒನಕೆಯಲ್ಲಿ ಗುದ್ದುವಾಗಲೂ ಅಷ್ಟೇ, ಬರೇ ನಾಲ್ಕು ಪೆಟ್ಟು ಹಾಕಿ ತೆಗಿಯೂದಲ್ಲ, ಮೆತ್ತಗೆ ಆಗಬೇಕು… “ ನನ್ನ ರನ್ನಿಂಗ್ ಕಮೆಂಟರಿ.

ಅಡಿಕೆಹಾಳೆಯಲ್ಲಿ ತುಂಬಿ, ಉಪ್ಪುಖಾರ ಕೂಡಿದ ಹಲಸಿನಸೊಳೆ ಮುದ್ದೆಯಂತಾಗಿ ನನ್ನೆದುರು ಬಂದಿತು.
ಪುಟ್ಟ ಬಟ್ಟಲಲ್ಲಿ ತೆಂಗಿನೆಣ್ಣೆ ಇಟ್ಟು,
ಅಂಗೈಗಳಿಗೆ ಎಣ್ಣೆ ಸವರಿ,
ಲಿಂಬೆಗಾತ್ರದ ಉಂಡೆ ಮಾಡಿಟ್ಟು,
ಪುನಃ ಚೆನ್ನಪ್ಪನೆಡೆಗೆ ಪಯಣ.

ಹಪ್ಪಳದ ಮಣೆಗೆ ಎರಡು ಪ್ಲಾಸ್ಟಿಕ್ ಶೀಟುಗಳನ್ನು ಸಿದ್ಧಪಡಿಸಿ,
ಅದಕ್ಕೂ ಎಣ್ಣೆ ಸವರಿ,
ಒಂದೊಂದೇ ಉಂಡೆಯನ್ನು ಒತ್ತಿದಾಗ ಮಟ ಮಟ ಮಧ್ಯಾಹ್ನ.
ಒಣಗಿಸುವುದು.
ಎರಡು ದಿನ ಒಣಗಲು ಬೇಕು.

ನಂತರ ಹತ್ತು ಹಪ್ಪಳಗಳನ್ನು ಜೋಡಿಸಿ ಕಟ್ಟಿ ಇಡುವುದು.
ಕಟ್ಟಿ ಇಟ್ಟಂತಹ ಹಪ್ಪಳಗಳನ್ನು ಪುನಃ ಬಿಸಿಲಿಗಿರಿಸುವುದು.
ಏಳು ಯಾ ಎಂಟು ಬಿಸಿಲು ಸಿಕ್ಕರೆ ಸಾಕು.
 ಹಪ್ಪಳದ ಕಟ್ಟು ದಾಸ್ತಾನು ಡಬ್ಬಿಯಲ್ಲಿ ತುಂಬಿಸಿ ಇಡುವುದು.
ದಿನವೂ ಸಂಜೆ ಮರೆಯದೆ ಹಪ್ಪಳ ಕರಿದು ತಿನ್ನುವುದು.
ಬೆಲ್ಲವೂ ಜೊತೆಗಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಕೇಳಾ,
ಸ್ನೇಹಿತರು ಬಂದಾಗ ಚಹಾಪಾನವೂ, ಹಪ್ಪಳದ ಸತ್ಕಾರ,
ನೆಂಟರಿಷ್ಟರು ಬಂದಾಗ ಮರೆಯದೇ ಅವರ ಕೈಗೆ ಹಪ್ಪಳದ ಪೊಟ್ಟಣ,
ಇರಿಸುವುದು ನಮ್ಮ ಆದ್ಯ ಕರ್ತವ್ಯ…. ಭೂಪತಿ ಕೇಳೆಂದ.


          









Saturday 12 May 2018

ಪೇರಳೆಯ ಪಾನಕ

 


                                                 



ತೋಟದಿಂದ ಮಾವಿನಹಣ್ಣುಗಳು ಬಂದುವು, ಚೀಲದಿಂದ ಗೋಣಿತಾಟಿಗೆ ಸುರುವಿದಾಗ ಎರಡು ಪೇರಳೆ ಹಣ್ಣುಗಳೂ…. ಅದೂ ಕೆಂಪು ತಿರುಳಿನ ಪೇರಳೆ, ಇದರಲ್ಲಿ ಬೀಜ ಜಾಸ್ತಿ. ಹೇಳಿಕೊಳ್ಳುವಂತಹ ರುಚಿಯೂ ಇಲ್ಲ.  

ಮಕ್ಕಳು ಚಿಕ್ಕವರಿದ್ದಾಗ ತೋಟಕ್ಕೆ ಹೋಗಿ, ಮರ ಹತ್ತಿ, ಕೊಕ್ಕೆಯಲ್ಲಿ ಆಡಿಸಿ ಕೊಯ್ದು ತಿಂದೇ ಬರುತ್ತಿದ್ದರು. ಹಾಗಂತ ಪೇರಳೆ ಕೊಯ್ಯಲಿಕ್ಕೆ ಹಾಗೂ ತಿನ್ನಲಿಕ್ಕೆ ತೋಟಕ್ಕೆ ಹೋಗಿಯೇ ಆಗಬೇಕೆಂದೇನೂ ಇಲ್ಲ, ಮನೆ ಹಿತ್ತಲಲ್ಲೇ ಒಂದು ಮರ ಇದೆ, ಕಸಿ ಪೇರಳೆ, ಬಿಳಿ ತಿರುಳಿನ ಇದು ರುಚಿಯಾದ ಹಣ್ಣು. ಬೀಜಗಳೂ ತುಸು ಕಡಿಮೆ ಎಂದೇ ಹೇಳಬೇಕು.

ಪೇರಳೆಯೊಳಗಿನ ಬೀಜಗಳ ಹಾವಳಿಯಿಂದಾಗಿ ಹಲ್ಲು ಸರಿಯಿಲ್ಲದವರು ಅಥವಾ ಹಲ್ಲು ಗಟ್ಟಿ ಇಲ್ಲದವರು ಅದನ್ನು ತಿನ್ನುವ ಉಸಾಬರಿಗೇ ಬರಲಾರರು. “ ಪೇರಳೆಯಾ, ನಂಗೆ ಬೇಡ. “ ಇದು ನಮ್ಮೆಜಮಾನ್ರ ಮಾಮೂಲಿ ಉತ್ತರ. ಈಗ ನಮ್ಮವರೇ ಹೆಕ್ಕಿ ತಂದ ಪೇರಳೆ ಬಂದಿದೆ, “ ಏನೋ ಒಂದು ವಿಧವಾಗಿ ತಿನ್ನಲು ಕೊಡೋಣ. “ ಅಂತ ಅಂದ್ಕೊಂಡಾಗ ನೆನಪಾಗಿದ್ದು ಜ್ಯೂಸ್.

ಅಂಗಳದ ಕಸಿಪೇರಳೆ ಹಣ್ಣು ಕೂಡಾ ಬಿದ್ದು ಕೈಗೆ ಸಿಕ್ಕಿತು.  
ತಿರುಳು ಜಾಸ್ತಿ ಇರುವ ಕಸಿ ಪೇರಳೆಯೂ,
 ಕೆಂಪು ಬಣ್ಣದಿಂದ ಶೋಭಿಸುವ ಪೇರಳೆಯೂ,
ಎರಡನ್ನೂ ಆಯ್ದು,
 ಸಿಪ್ಪೆಯನ್ನು ತೆಳ್ಳಗೆ ಹೆರೆದು,
ಚಿಕ್ಕ ಚಿಕ್ಕ ಚೂರುಗಳನ್ನಾಗಿಸಿ,
ಮಿಕ್ಸಿಯ ಜಾರ್ ಒಳಗೆ ತುಂಬಿಸಿ,
ಒಂದು ಲೋಟ ನೀರೆರೆದು ಟೊರ್ ರ್… ಟೊರ್ ತಿರುಗಿಸಿ,
ಪೇರಳೆ ಹಣ್ಣಿನ ದಪ್ಪ ರಸ ಬಂದಿತು.
ಆದರೇನಂತೆ, ಬೀಜ ಸಹಿತವಾಗಿರುವ ಈ ರಸವನ್ನು ಕುಡಿಯಲಸಾಧ್ಯ, ಜಾಲರಿಯಲ್ಲಿ ಶೋಧಿಸಲಾಯಿತು.
ಸಿಹಿಗೆ ತಕ್ಕಷ್ಟು ಸಕ್ಕರೆ ಅಥವಾ ನಮ್ಮ ಬಾಯಿರುಚಿಗೆ ಬೇಕಾದ ಹಾಗೆ ಸಕ್ಕರೆ ಹಾಕುವುದು.
ರುಚಿಗೆ ತುಸು ಉಪ್ಪು ಇರಲಿ.
ದಪ್ಪವಾಗಿರುವ ಈ ರಸಕ್ಕೆ ಶರಬತ್ತು ಎಂಬ ಹೆಸರು ನೀಡಲು ಸಾಕಾಗುವಷ್ಟು ನೀರು ಎರೆದು,
ತಂಪು ಪೆಟ್ಟಿಗೆ ಯಾ ರೆಫ್ರಿಜರೇಟರ್ ಒಳಗೆ ಅರ್ಧ ಗಂಟೆ ಇಟ್ಟು,
ಸಂಜೆಯ ಹೊತ್ತು,
ಲೋಟಗಳಿಗೆ ಪೇರಳೆಯ ಪಾನಕ ತುಂಬಿಸಿ ಹಾಯಾಗಿ ಕುಡಿಯುವುದು.
ಇದಕ್ಕೆ ಹುಳಿ ರುಚಿ ಏನೇನೂ ಇಲ್ಲ, ಇದ್ದರೆ ಒಂದು ನಿಂಬೆಯ ರಸ ಹಾಕಬಹುದಿತ್ತು.
ಈ ಪಾನಕಕ್ಕೆ ನಾನು ಕೇವಲ ಎರಡು ಪೇರಳೆ ಹಾಕಿರೋದು, ಅದೂ ಹಣ್ಣಾಗಿರಬೇಕು, ಕತ್ತರಿಸಿದಾಗ ಹುಳ ಗಿಳ ಏನೂ ಇರಕೂಡದು, ತಿಳಿಯಿತಲ್ಲ.

ಪೇರಳೆಯ ಲಸ್ಸಿ

ಮೇಲೆ ಹೇಳಿದಂತೆ ಪೇರಳೆಯ ರಸ ಮಾಡಿಟ್ಟು,
ಒಂದು ಲೋಟ ಹಣ್ಣಿನ ರಸಕ್ಕೆ
ಒಂದು ಲೋಟ ಮಜ್ಜಿಗೆ ಯಾ ತಾಜಾ ಮೊಸರು
ಹಾಗೂ ಒಂದು ಲೋಟ ನೀರು
ರುಚಿಗೆ ಉಪ್ಪು, ಸಿಹಿಗೆ ಸಕ್ಕರೆ, ಖಾರಕ್ಕೆ ಹಸಿಮೆಣಸು
ಮಿಶ್ರಣ ಮಾಡುವಲ್ಲಿಗೆ ಲಸ್ಸಿ ಬಂದಿದೆ.
ಬಾಯಿರುಚಿಯಲ್ಲಿ ವೈವಿಧ್ಯತೆ ಬೇಕಾದಲ್ಲಿ ಇಷ್ಟವಾದ ಮಸಾಲೆ ಹುಡಿಗಳನ್ನು ಸೇರಿಸಿ ಕುಡಿಯಿರಿ.

ಪೇರಳೆಯ ಮಿಲ್ಕ್ ಶೇಕ್

ಒಂದು ಲೋಟ ಪೇರಳೆಯ ಸಕ್ಕರೆ ಮಿಶ್ರಿತ ರಸ
ಒಂದು ಲೋಟ ತಣ್ಣಗಿನ ಹಾಲು
ಮಿಶ್ರಗೊಳಿಸಿ ಸ್ವಲ್ಪ ಹೊತ್ತು ತಂಪು ಪೆಟ್ಟಿಗೆಯಲ್ಲಿರಿಸಿ ಕುಡಿದರೂ ಆರಾಮದಾಯಕ.

ರಾತ್ರಿ ಮಿತ ಆಹಾರವನ್ನು ಸೇವಿಸುವ ವಯಸ್ಸಾದವರಿಗೆ ಮಿಲ್ಕ್ ಶೇಕ್ ಯಾ ಲಸ್ಸಿಯನ್ನು ಸಂಜೆ ಹೊತ್ತು ಕುಡಿಯುವುದು ಉತ್ತಮ, ರಾತ್ರಿಯೂಟ ಬೇಕೆನಿಸದು ಹಾಗೂ ಮುಂಜಾನೆಯ ಮಲಬದ್ಧತೆ ಕಾಡದು. ಕರುಳಿನ ಚಲನಶಕ್ತಿಯನ್ನು ಚುರುಕಾಗಿಸುತ್ತದೆ ಪೇರಳೆ.
 ಮೆಟಾಬಾಲಿಸಂ, ಶರೀರದ ಜೀವರಾಸಾಯನಿಕ ಕ್ರಿಯೆಯ ಸಮರ್ಪಕ ನಿರ್ವಹಣೆಗಾಗಿ ಪೇರಳೆಯನ್ನು ತಿನ್ನಿರಿ.
ವಿಟಮಿನ್ ಸಿ ಹಾಗೂ ಕಬ್ಬಿಣಾಂಶ ಇರುವ ಈ ಹಣ್ಣು ಉಸಿರಾಟದ ಸಮಸ್ಯೆಗೂ ಪರಿಹಾರ ನೀಡುವುದು, ಶ್ವಾಸಕೋಶದ ಸೋಂಕು ನಿವಾರಕ.
ವಿಟಮಿನ್ ಎ, ಕಣ್ಣುಗಳ ಆರೋಗ್ಯ ರಕ್ಷಕ.
ಪೇರಳೆ ಹಾಗೂ ಬಾಳೆಹಣ್ಣುಗಳಲ್ಲಿ ಪೊಟಾಶಿಯಂ ಸಮಾನವಾಗಿರುವುದು.
ಅ್ಯಂಟಿ ಓಕ್ಸಿಡೆಂಟುಗಳ ಇರುವಿಕೆಯಿಂದಾಗಿ ಚರ್ಮದ ಕಾಂತಿ ರಕ್ಷಕ ಹಾಗೂ ಸುಕ್ಕುಗಟ್ಟುವಿಕೆಯನ್ನು ತಡೆಯುವುದು.
ಮೆಗ್ನೇಶಿಯಂ, ಮೂಳೆಗಳ ಬಲವರ್ಧನೆ. ಹಲ್ಲುನೋವು ನಿವಾರಕ.
ವಿಟಮಿನ್ ಸಿ, ಕಿತ್ತಳೆಗಿಂತಲೂ ಜಾಸ್ತಿ ಇದೆ.
ವಿಟಮಿನ್ ಬಿ, ಕೂದಲಿನ ಆರೈಕೆ ಹಾಗೂ ಬೆಳವಣಿಗೆ.
ಹೇರಳ ಖನಿಜಾಂಶಗಳ ಲಭ್ಯತೆಯಿಂದಾಗಿ ರಕ್ತದಲ್ಲಿ ಹಿಮೋಗ್ಲೊಬಿನ್ ವೃದ್ಧಿ.
ಪಿತ್ತಕೋಶದಲ್ಲಿ ಕಲ್ಲು! ಸಮಸ್ಯೆಯೇ ಅಲ್ಲ, ದಿನವೂ ಪೇರಳೆ ತಿನ್ನಿ, ಆರೋಗ್ಯವಂತರಾಗಿ.
ಪೇರಳೆಯ ಎಲೆಗಳೂ ಆರೋಗ್ಯದಾಯಕ, ದಿನವೂ ಒಂದೆರಡು ಎಲೆಗಳನ್ನು ಅಗಿದು ಉಗಿಯಿರಿ, ದಂತಾರೋಗ್ಯ ಉಳಿಸಿಕೊಳ್ಳಿ.
10 -15 ಪೇರಳೆಯ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ, ಆರಿದ ನಂತರ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಕಾಂತಿಯುತ ಕೂದಲು ನಿಮ್ಮದಾಗಿಸಿ, ಕೂದಲು ಉದುರುವ ಸಮಸ್ಯೆ ತೊಲಗಿಸಿ.


       








Saturday 5 May 2018

ಮ್ಯಾಂಗೋ ಲಸ್ಸಿ




ಬದನೆಕಾಯಿ ಸಾರು ಮಾಡಿದ್ದಾಯ್ತು. ಮಾವಿನಹಣ್ಣುಗಳೂ ಇರುವಾಗ, ಏಳೆಂಟು ಮಾವಿನಹಣ್ಣುಗಳನ್ನು ತೊಳೆದು, ತೊಟ್ಟು ತೆಗೆದು, ಸಿಪ್ಪೆ ಬಿಡಿಸಿ...

ಗಿವುಚಿ ರಸ ತೆಗೆದು,
ರುಚಿಗೆ ಉಪ್ಪು,
ಒಂದು ಸೌಟು ಬೆಲ್ಲದ ಪಾಕ ( ಮಾಡಿಟ್ಕೊಂಡಿದ್ದು ಇತ್ತು ),
ಒಂದು ಗಾಂಧಾರಿ ಮೆಣಸು ನುರಿದು,
ಉದ್ದಿನಬೇಳೆಯಷ್ಟು ಇಂಗು ಕದಡಿ ಇಡುವಲ್ಲಿಗೆ ಮಾವಿನಹಣ್ಣಿನ ಹಸಿಗೊಜ್ಜು ಪ್ರತ್ಯಕ್ಷವಾಯಿತು!

ಮೊಸರು ತುಂಬಿದ ತಪಲೆ, ಮಾವಿನಹಣ್ಣಿನ ಹಸಿಗೊಜ್ಜು ಊಟದ ಟೇಬಲ್ ಇರಿಸುತ್ತಿದ್ದಂತೆ, “ ಇನ್ನೊಂದು ಸವಿರುಚಿ ಮಾಡಬಹುದಲ್ಲ. “ ಅಂದರು ಗೌರತ್ತೆ. “ ಈ ಬೇಸಿಗೆಗೆ ತಂಪೂ... “

“ ಹೌದಲ್ಲವೇ, “ ಅನ್ನುತ್ತ, ಮೂರು ಸೌಟುಗೊಜ್ಜಿನ ರಸ, ಎರಡು ಸೌಟು ಸಿಹಿ ಮೊಸರು ಕೂಡಿಸಿ…
“ ಮಿಕ್ಸಿಯೇನೂ ಬೇಡ…. ಈ ಬಾಟಲ್ ಗೆ ತುಂಬಿಸಿ ಗಡಗಡ ಆಡಿಸಿ, ಆ ತಂಪು ಪೆಟ್ಟಿಗೆಯಲ್ಲಿಡು ತಿಳೀತಾ… ಸಂಜೆ ತೋಟ ಸುತ್ತಿ ಬಂದ ಮೇಲೆ ಕುಡಿಯೋಣ. “

ಮೊಸರು ಇಲ್ಲವಾದರೆ ಮಜ್ಜಿಗೆಯೂ ಆದೀತು.
ಲಸ್ಸಿ ವಿಪರೀತ ದಪ್ಪ ಆಗಿದ್ದರೆ ತುಸು ನೀರು ಎರೆಯಲಡ್ಡಿಯಿಲ್ಲ.
ಸಿಹಿಯಾಗಿ ಕುಡಿಯಬಯಸುವವರು ಸಕ್ಕರೆ ಹಾಕಿ.
ಗಾಂಧಾರಿ ಮೆಣಸು ಇಲ್ಲದಿದ್ದರೆ ಪುದಿನಾ ಸೊಪ್ಪು ಆದೀತು, ತೊಂದರೆಯಿಲ್ಲ.
ಹೇಗೆ ಬೇಕೋ ಹಾಗೆ, ಅಡುಗೆಮನೆಯೊಳಗೆ ಲಭ್ಯವಿರುವ ಮಸಾಲಾ ಸಾಮಗ್ರಿಗಳ ಹಿತಮಿತವಾದ ಬಳಕೆಯಿಂದ ಇಂತಹ ನೂರಾರು ಬಗೆಯ ಲಸ್ಸಿಯನ್ನು ಈ ಬೇಸಿಗೆಯಲ್ಲಿ ಸವಿಯಿರಿ. ಬಿಸಿಲ ತಾಪವನ್ನು ದೂರ ತಳ್ಳಿರಿ.