Pages

Ads 468x60px

Sunday 28 July 2019

ಕಟ್ ಸಾರು




ಏನಾಯ್ತು, ಜೋರಾಗಿ ಮಳೆ ಬರುತ್ತಾ ಇದೆ, ಅಡುಗೆಮನೆಯಲ್ಲಿ ಒಂದೇ ಒಂದು ತರಕಾರಿ ಇಲ್ಲ.. ಇಷ್ಟು ಸಾಲದೇ, ನನ್ನ ಕಿಟಿಕಿಟಿ ಶುರುವಾಯ್ತು.

" ಕಿರಿಕಿರಿ ಮಾಡ್ಬೇಡ, ಮಳೆ ಬರೂದು ಕಾಣಿಸ್ತಾ ಇಲ್ಲವೇ.. "

" ಅಲ್ಲೊಂದು ನಿಂಬೆಹಣ್ಣು ಇದ್ಹಾಂಗಿತ್ತು.. " ಗೌರತ್ತೆ ಒರಲಿದರು.

" ಅದನ್ನೆಂತದು ಮಾಡೂದು, ಮಳೆಗೆ ಶರಬತ್ತು ಕುಡಿಯೋಣ ಅಂತೀರಾ.. ಮತ್ತೆ ಕೆಮ್ಮು ಶುರುವಾಯ್ತು ಅನ್ನಿ.."

" ಒಂದು ಕಟ್ ಸಾರು ಮಾಡಿ, ಹಲಸಿನಹಪ್ಪಳ ಹುರಿದು ಇಡು, ಊಟಕ್ಕೆ ಸಾಕು. "

" ಹೌದಲ್ವೇ, ಈ ನಿಂಬೆಹುಳಿ ಚೆನ್ನಾಗಿಯೇ ಇದೆ.. " ಕಟ್ ಸಾರು ಮಾಡೋಣ.

ಕರಿಬೇವು ನಿನ್ನೆ ಹಿತ್ತಲ ಗಿಡದಿಂದ ತಂದದ್ದು ಇದೆ, ಇಂಗು ಸಾಕಷ್ಟು ಇದೆ, ತೊಗರಿಬೇಳೆಯೂ ಡಬ್ಬ ತುಂಬ ಇದೆ. ಹಸಿಮೆಣಸು ಶುಂಠಿ ಇದ್ದರೆ ಹಾಕಬಹುದಾಗಿತ್ತು,


ಕೊತ್ತಂಬರಿ ಸೊಪ್ಪೂ ಇಲ್ಲ, ಹಿತ್ತಲ ತೋಟದಲ್ಲಿ ಬಿತ್ತಿದ ಕೊತ್ತಂಬರಿ ಬೀಜ ಕುಡಿಯೊಡೆದಿದೆ ಅಷ್ಟೇ..

ಇಲ್ಲದಿರುವುದರ ಬಗ್ಗೆ ಚಿಂತೆ ಮಾಡಬೇಕಿಲ್ಲ, ಈಗ ಇರುವ ಪರಿಕರಗಳನ್ನು ಹೊಂದಿಸಿ ಕಟ್ ಸಾರು ಮಾಡಿಕೊಳ್ಳೋಣ.

ಎರಡು ಹಿಡಿ ತೊಗರಿಬೇಳೆ, ಚೆನ್ನಾಗಿ ತೊಳೆದು, ಮೂರು ಲೋಟ ನೀರು ಎರೆದು ಕುಕ್ಕರಿನಲ್ಲಿ 5 - 6 ಸೀಟಿ ಕೂಗಿಸಿ.
ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಸೌಟಿನಲ್ಲಿ ತಿರುಗಿಸಿ, ಬೇಳೆ ಹಾಗೂ ನೀರು ಹೊಂದಿಕೊಳ್ಳಲಿ.

ಕಟ್ ಸಾರು ಎಂಬ ಹೆಸರು ಇಡಬೇಕಾಗಿರುವುದರಿಂದ ಎರಡು ಲೋಟ ನೀರು ಎರೆಯಿರಿ, ತೆಳ್ಳಗಾಯ್ತು. ರುಚಿಗೆ ಉಪ್ಪು ಬೆರೆಸಿ ಕುದಿಯಲು ಇಡುವುದು.

ಸಾರು ಕುದಿದಿದೆ, ಸ್ಟವ್ ಆರಿಸಿ,
2 ಚಮಚ ತುಪ್ಪದಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಕೂಡಿದ ಒಗ್ಗರಣೆ,
ನೀರಿನಲ್ಲಿ ಕರಗಿಸಿ ಇಟ್ಟ ಉದ್ದಿನಬೇಳೆ ಗಾತ್ರದಇಂಗು,
ನಿಂಬೆಹಣ್ಣಿನ ರಸ ಹಾಗೂ ನಿಂಬೆಯ ಸಿಪ್ಪೆಯನ್ನೂ ಹಾಕಿ ಮುಚ್ಚಿ ಇಡುವುದು.

ಉಣ್ಣುವ ಹೊತ್ತಿಗೆ ಮೆತ್ತಗಾದ ನಿಂಬೆ ಸಿಪ್ಪೆಯನ್ನೂ ಬೇಕಿದ್ದವರು ತಿನ್ನಿ, ಒಳ್ಳೆಯದು.

ಇದಕ್ಕೆ ಬೆಲ್ಲ ಹಾಕುವುದಕ್ಕಿಲ್ಲ, ಅತಿಯಾಗಿ ಮಸಾಲೆಗಳನ್ನೂ ಹಾಕಬೇಕಿಲ್ಲ. ಪುಟ್ಟ ಮಕ್ಕಳಿಗೂ ಅನ್ನದೊಂದಿಗೆ ತಿನ್ನಿಸಬಹುದು. ಮಳೆಗಾಲದ ಶೀತಹವೆಗೆ ಕಟ್ ಸಾರು ಎಲ್ಲ ವಯೋಮಾನದವರಿಗೂ ಹಿತಕರ.

ತೆಂಗಿನ ತುರಿ ಬೇಕಾಗಿಲ್ಲ, ತೆಂಗಿನಕಾಯಿಯೊಂದಿಗೆ ಗುದ್ದಾಟ ಇಲ್ಲಿಲ್ಲ.
ಡಯಟಿಂಗ್ ಸೂತ್ರ ಅನುಸರಿಸುವವರಿಗೂ,
ಡಯಾಬಿಟೀಸ್ ಎನ್ನುತ್ತ ಸಕ್ಕರೆ ಬೆಲ್ಲ ತಿನ್ನದವರಿಗೂ,
ಅನಾರೋಗ್ಯವೆಂದು ಪಥ್ಯದೂಟ ತಿನ್ನುವವರಿಗೂ,
ಅಂತೂ ಇಂತೂ ಏನೇ ಕಾಯಿಲೆಗಳಿದ್ದರೂ ಕಟ್ ಸಾರು ಉಣ್ಣಲು ಚಿಂತೆ ಮಾಡಬೇಕಿಲ್ಲ.



Monday 22 July 2019

ಬಣ್ಣದ ತೆಳ್ಳವು





" ಈ ಸಕ್ಕರೆ ಚೀಲಕ್ಕೆ ಈಗಲೇ ಇರುವೆ ಹತ್ತಲು ಶುರು..." ಚೆನ್ನಪ್ಪ ಚೀಲದ ಬಾಯ್ಕಟ್ಟಿ ಒಳಗಿಟ್ಟ. ಅಂದಾಜು ಹತ್ತು ಕಿಲೋ ಇದ್ದೀತು, ದೊಡ್ಡ ಸ್ಟೀಲ್ ಡ್ರಮ್ ಒಳಗೆ ಹೋಯ್ತು ಸಕ್ಕರೆ, ಹೇಗೂ ಮುಂದಿನ ಸಂಕ್ರಾಂತಿಯ ದುರ್ಗಾಪೂಜೆಗೆ ಬೇಕಾಗುತ್ತೆ, ನಾಗರಪಂಚಮಿಯೂ ಬರಲಿದೆ, ತಂಬಿಲಸೇವೆಗೂ ಬೇಕಾದೀತು.

" ಇಲ್ನೋಡು, ಹಸಿಮೆಣಸು ಶುಂಠಿ... ಛೇ, ಕೊತ್ತಂಬರಿ ಸೊಪ್ಪು ಈಗಲೇ ಹಾಳಾಗಲಿಕ್ಕೆ ಹತ್ತಿದೆ, " ಅನ್ನುತ್ತ ಗೌರತ್ತೆ, ಅಡುಗೆಶಾಲೆಯ ತಪಾಸಣೆ ಮಾಡ ಹೊರಟರು.

" ಹಾಳಾದ್ದು ಎಲ್ಲಿ ಹೇಗೆ ಇಟ್ರೂ ಕೊಳೆಯುತ್ತೆ, ಕೇವಲ ಕುಡಿಯುವ ಮಜ್ಜಿಗೆ ನೀರಿಗೆ ಮಾತ್ರ ಕೊತ್ತಂಬರಿ ಸೊಪ್ಪು ಹಾಕಿದ್ದು ಅಡುಗೆಯ ಗಣಪಣ್ಣ.. "

" ಟೊಮೆಟೋ ಸಾರಿಗೂ ಹಾಕಿದ್ಹಾಂಗಿತ್ತು.. ಮಜ್ಜಿಗೆ ನೀರು ಘಮಘಮಾ ಅಂತಿತ್ತು. ಈಗ ಇರೂದನ್ನು ಚಟ್ಣಿ ತಂಬುಳಿ ಮಾಡಬಹುದಲ್ಲ.. " ಗೌರತ್ತೆಯ ಪ್ಲಾನು.

" ಆಯ್ತು, ತಂಬುಳಿ ಮಾಡುವಾ, ನಾಳೆ ತನಕ ಇದು ಫ್ರೆಶ್ ಆಗಿ ಇರಬೇಕಲ್ಲ, ಏನು ಮಾಡೂದು? "

" ನೀರಿನಲ್ಲಿ ಬೇರು ಮಾತ್ರ ತಾಕುವಂತೆ ಇಡು, ನಾಳೆ ಎಲೆಯೆಲ್ಲ ಅರಳಿ ನಿಲ್ತಾವೆ.."
ಕೊತ್ತಂಬರಿ ಸೊಪ್ಪನ್ನು ನೀರ ಪಸೆಯಲ್ಲಿ ಒಂದು ಲೋಟದೊಳಗೆ ಇರಿಸಲಾಯಿತು.

ತಂಬ್ಳಿ, ಚಟ್ಣಿ ಬೇಡ, ನಾಳೆಯ ದೋಸೆಗೆ ಬಣ್ಣವನ್ನೂ ಪರಿಮಳವನ್ನೂ ತರುವಂತಹ ಐಡಿಯಾ ಹೊಳೆಯಿತು. ಈ ಸೂಪರ್ ಐಡಿಯಾ ತಲೆಯೊಳಗೆ ಮೊಳಗಿದ್ದೇ ತಡ, ಒಂದು ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ಹಾಕಿರಿಸಲಾಯಿತು.

" ಕೇವಲ ಒಂದು ಲೋಟ ಅಕ್ಕಿ ಸಾಕೇ.. "

ಸಾಲದು, ಒಂದು ಲೋಟ ಅಕ್ಕಿ ಹುಡಿ ಸೇರಿಸೋಣ. ಪ್ಯಾಕೆಟುಗಳಲ್ಲಿ ಬರುವ ಅಕ್ಕಿ ಹುಡಿ ( ಅಕ್ಕಿಹಿಟ್ಟು ) ನುಣುಪಾಗಿರುತ್ತೆ, ಮಿಕ್ಸೀಯಲ್ಲಿ ಅರೆದದ್ದು ನುಣುಪು ಎಂದು ಆಗುವುದೇ ಇಲ್ಲ, ದೋಸೆ ಹಿಟ್ಟು ನುಣುಪಾದಷ್ಟೂ ಒಳ್ಳೆಯದು, ಅವಶ್ಯವೆಂದು ತೋರಿದಾಗ, ಅಕ್ಕಿಹಿಟ್ಟು ತಂದದ್ದು ಇದ್ದಾಗ ಹೀಗೂ ದೋಸೆ ಮಾಡುವ ರೂಢಿ ಆಗಿ ಬಿಟ್ಟಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಅಡುಗೆ ವ್ಯವಸ್ಥೆಯೂ ಇರುವುದರಿಂದ ಪಾಯಸದೂಟಕ್ಕಾಗಿ ಅಕ್ಕಿ ಹುಡಿ ಬೇಕಾಗುವುದೂ, ಅದರಲ್ಲಿ ಅಲ್ಪಾಂಶ ಮಾತ್ರ ಭೂರಿ ಭೋಜನದಲ್ಲಿ ಬಳಸಲ್ಪಟ್ಟು ಉಳಿದದ್ದು ನನ್ನ ಅಡುಗೆ ಉಗ್ರಾಣದೊಳಗೆ ಶೇಖರಣೆಯಾಗುತ್ತ ಇರುತ್ತವೆ. ಇಂತಹ ವಿವಿಧ ಹುಡಿಗಳನ್ನು ಏನೋ ಒಂದು ಅಡುಗೆ ಮಾಡಿ ಮುಗಿಸುವುದೂ ನಮ್ಮ ಕರ್ತವ್ಯ ಅಲ್ವೇ..

ಅಕ್ಕಿಯನ್ನು ತೊಳೆದು ಇರಿಸುವುದು.
ಒಂದು ಕಟ್ಟು ಕೊತ್ತಂಬರಿ ಸೊಪ್ಪನ್ನು ಸ್ವಚ್ಛಗೊಳಿಸಿ, ಹೆಚ್ಚಿಟ್ಟುಕೊಳ್ಳುವುದು.
ಒಂದು ಚಿಕ್ಕ ಶಂಠಿ, ಸಿಪ್ಪೆ ಹೆರೆದು ಇಡುವುದು
2 ಹಸಿಮೆಣಸು, ತೊಟ್ಟು ಮುರಿದು ಇಡುವುದು.

ಅಕ್ಕಿಯನ್ನು ಅರೆಯುವಾಗ ರುಚಿಗೆ ಉಪ್ಪು ಸಹಿತವಾಗಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿಗಳನ್ನು ಕೂಡಿಕೊಂಡು ಅರೆಯಿರಿ.

ಒಂದು ಲೋಟ ಅಕ್ಕಿ ಹುಡಿಗೆ ನೀರೆರೆದು ಗಂಟುಗಳಾಗದಂತೆ ಕಲಸಿ ಅರೆದಿಟ್ಟ ಹಿಟ್ಟಿಗೆ ಕೂಡಿಸಿ, ತೆಳ್ಳವು ಎರೆಯಲು ಬರುವಂತೆ ನೀರು ಕೂಡಿಸಿ.



ದೋಸೆ ಎರೆಯುವ ತವಾ ಅಥವಾ ಕಾವಲಿಗೆ ಅಡುಗೆಯ ಎಣ್ಣೆ ಯಾ ತುಪ್ಪ ಸವರಿ ಒಲೆಯ ಮೇಲಿರಿಸುವುದು.
ಹಿಟ್ಟನ್ನು ಸೌಟಿನಲ್ಲಿ ಕದಡುತ್ತ ಬಿಸಿಯೇರಿದ ನಂತರ ವೃತ್ತಾಕಾರದಲ್ಲಿ ಹಾರಿಸಿ ಎರೆಯುವುದು.
ಹಿಡಿಕೆ ಇರುವ ಕಾವಲಿ ಅತ್ಯುತ್ತಮ, ಎರೆದು ಅತ್ತಿತ್ತ ಆಡಿಸಿದರೂ ಸಾಕು, ಹಿಟ್ಟು ತಾನಾಗಿ ಹರಡಿಕೊಳ್ಳುತ್ತೆ.
ಮುಚ್ಚಿ ಬೇಯಿಸಿ, ಒಂದು ಬದಿ ಬೆಂದರೆ ಸಾಕು, ಸಟ್ಟುಗದಲ್ಲಿ ಎಬ್ಬಿಸಿ ತಟ್ಟೆಗೆ ಹಾಕಿ, ಮಡಚಿ ಇಡುವುದು, ಇಲ್ಲಾಂದ್ರೆ ದೋಸೆಗಳು ಒಂದಕ್ಕೊಂದು ಅಂಟಿಕೊಳ್ಳುತ್ತೆ.
ಹಿಡಿಕೆ ಇರುವ ತವಾ ಆಗಿದ್ರೆ ಸಟ್ಟುಗದ ಅಗತ್ಯವೂ ಇಲ್ಲ, ಕಾವಲಿಯಿಂದಲೇ ತಟ್ಟೆಗೆ ಕವುಚಿ ಹಾಕಿದ್ರಾಯ್ತು.

ತಾಜಾ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ವಿಶಿಷ್ಠವಾದ ಪರಿಮಳದಿಂದ ಬಾಯಿರುಚಿಯನ್ನೂ ಹೆಚ್ಚಿಸುತ್ತದೆ. ಉಸಿರಿನ ದುರ್ವಾಸನೆಯೂ ದೂರ, ಬಾಯಿಹುಣ್ಣು ಆಗಿದ್ದಲ್ಲಿ ನೋವು ನಿವಾರಕವೂ ಹೌದು.

ನಿನ್ನೆ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಚಂಡಿಕಾಹೋಮ ನಡೆದಿತ್ತು, ರಾತ್ರಿ ಎಂದಿನಂತೆ ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನಪೂಜೆ ಇತ್ಯಾದಿ ಕಾರ್ಯಕಲಾಪಗಳ ನಂತರ ಅನ್ನಸಂತರ್ಪಣೆಯೂ ಇದ್ದಿತು.
ನಂತರ ಉಳಿಕೆಯಾದ ಸಾಮಗ್ರಿಗಳಲ್ಲಿ ದೊರೆತ ಕೊತ್ತಂಬರಿ
ಸೊಪ್ಪಿನಿಂದ ಬಣ್ಣದ ತೆಳ್ಳವು ಬಂದಿದೆ, ಇದೇನೂ ಮೊದಲ ಪ್ರಯೋಗವಲ್ಲ, ಅತಿಯಾಗಿ ಕೊತ್ತಂಬರಿ ಸೊಪ್ಪು ತಂದರೆ ನನ್ನದು ದೋಸೆಯ ಅಡುಗೆ.

ಅಂದ ಹಾಗೆ ಕೊತ್ತಂಬರಿ ಸೊಪ್ಪು ಮನೆಯಲ್ಲೇ ಸಾಕಿ ಸಲಹಬಹುದು. ನಾನಂತೂ ಕುಂಡದಲ್ಲಿ ಬೆಳೆಸಿದ್ದೇನೆ. ಅಂಗಡಿಯಿಂದ ತಂದ ಕೊತ್ತಂಬರಿ ಬೀಜಗಳನ್ನು ತುಸು ಜಜ್ಜಿ ಎರಡಾಗಿಸಿ,
ಕಾಂಪೋಸ್ಟ್ ಮಣ್ಣಿನಲ್ಲಿ ಬೆರೆಸಿ,
ಮಣ್ಣಿನಲ್ಲಿ ತೇವಾಂಶ ಇರಬೇಕು
ಹತ್ತು ಹನ್ನೆರಡು ದಿನಗಳಲ್ಲಿ ಮೊಳಕೆ,
ಇರುವೆಗಳ ಕಾಟ ಇರದಂತೆ ಎಚ್ಚರವಹಿಸಿ.
ಮೂವತ್ತು ದಿನಗಳಲ್ಲಿ ತಾಜಾ ಸೊಪ್ಪು ಲಭ್ಯ.
ಅರುವತ್ತು ದಿನಗಳಾದಾಗ ಹುಲುಸು ಬೆಳೆ.
ಬೇರೆ ಬೇರೆ ಪಾತಿ ಯಾ ಕುಂಡಗಳನ್ನು ಹೊಂದಿಸಿ ಇಟ್ಟುಕೊಂಡಲ್ಲಿ ಬೆಳವಣಿಗೆಯ ಲೆಕ್ಕಾಚಾರ ನೋಡಿಕೊಂಡು ವರ್ಷವಿಡೀ ಕೊತ್ತಂಬರಿ ಸೊಪ್ಪು ಕೊಯ್ಯುತ್ತಿರಬಹುದು. 

Thursday 11 July 2019

ಬಸಳೆಯ ಪತ್ರೊಡೆ





ಬಸಳೆಸೊಪ್ಪು ತೆಗೆದಿಟ್ಟಿದ್ದೆನಲ್ಲ, ನಾಲ್ಕಾರು ಬಾಳೆಲೆ ತಂದಿಟ್ಟಿರಲು ಹೇಳಿದ್ದರೂ ಚೆನ್ನಪ್ಪ ತಂದಿರಲಿಲ್ಲ, ಪುಟ್ಟ ಕತ್ತಿ ಹಿಡಿದು ತೋಟಕ್ಕಿಳಿದು 2 ಬಾಳೆಲೆ ತರಬೇಕಾಯ್ತು.

" ಪತ್ರೊಡೆ ಈ ತುಂಡು ಬಾಳೆಲೆಯಲ್ಲಿ ಹ್ಯಾಗೆ ಮಾಡ್ತೀಯ? " ಅಚ್ಚರಿ ಪಟ್ಟರು ಗೌರತ್ತೆ.

" ನೋಡ್ತಾ ಇರಿ, ಇರೂದು ನಾವಿಷ್ಟೇ ಜನ, ಐವತ್ತು ಬಾಳೆಲೆ ಕೊಯ್ದು ಯಾಕೆ ಹಾಳ್ಮಾಡೋದು... "







ಮಗಳ ಮದುವೆಯ ಜೆಂಬ್ರದ ಅಡುಗೆ ಸಾಮಾನುಗಳ ಲಿಸ್ಟ್ ನಮ್ಮ ಅಡುಗೆ ಗಣಪಣ್ಣ ಬರೆಯುತ್ತ ಇದ್ದಾಗ ನಾನೂ ಅಲ್ಲೇ ಇದ್ದುಕೊಂಢು ಗಮನಿಸುತ್ತ ಇದ್ದೆ. ಮಂಜಾನೆಯ ಇಡ್ಲಿ ಸಾಂಬಾರ್ ಪಟ್ಟಿಯಲ್ಲಿ ಉದ್ದಿನಬೇಳೆಯೊಂದಿಗೆ ಅಕ್ಕಿರವೆಯೂ ಇದ್ದಿತು. ಅಡುಗೆ ಭಟ್ಟರ ಇಡ್ಲಿಯ ಸುಲಭ ವಿಧಾನ ಈವಾಗ ತಿಳಿಯುವಂತಾಯಿತು. ಊಟೋಪಚಾರಗಳ ನಂತರ ಉಳಿಕೆಯಾದ ಜೀನಸು, ತರಕಾರಿಗಳು ಮನೆಗೆ ಬಂದದ್ದರಲ್ಲಿ ಅಕ್ಕಿ ರವೆಯೂ ಇತ್ತು. ಅಕ್ಕಿರವೆಯ ಇಡ್ಲಿಯೇನೋ ಮಲ್ಲಿಗೆಯಂತೆ ಆಗಿತ್ತು. ಈಗ ಅದೇ ಅಕ್ಕಿರವೆಯಿಂದ ಪತ್ರೊಡೆ ಮಾಡೋಣ.

ಬಸಳೆ ಸೊಪ್ಪನ್ನು ಆಯ್ದು, ತೊಳೆದು ಚಕಚಕನೆ ಕತ್ತರಿಸಿದಾಗ ತಪಲೆ ತುಂಬಿತು.

ಮಳೆಗಾಲ ಅಲ್ವೇ, ಯಾವಾಗ ಕರೆಂಟ್ ಹೋಗುತ್ತೆ, ಯಾವಾಗ ಬರುತ್ತೆ ಅನ್ನೋ ಹಾಗಿಲ್ಲ, ಬೇಗನೆ ಕೆಲಸ ಮುಗಿಸೋಣ.
ಕೊತ್ತಂಬ್ರಿ ಜೀರಿಗೆ ಎಂದು ಮಸಾಲಾ ಸಾಮಗ್ರಿ ಹಾಕುವುದಕ್ಕಿಲ್ಲ, ಜೆಂಬ್ರದ ಅಡುಗೆಯಲ್ಲಿ ಉಳಿದ ಗರಂಮಸಾಲಾ ಪ್ಯಾಕೆಟ್ ಇದೆ, ಅರ್ಧ ಚಮಚ ನಮ್ಮ ಪತ್ರೊಡೆಗೆ ಸಾಕು.

ಕೆಸುವಿನ ಪತ್ರೊಡೆಗೆ ಹಾಕುವ ಹುಣಸೆಯ ಹುಳಿ ಇದಕ್ಕೆ ಬೇಡ, ತುರಿಸುವ ಭಯವೇ ಇಲ್ಲ, ಆದರೂ ರುಚಿಕರವಾಗಲು ಒಂದು ಲೋಟ ಸಿಹಿ ಮೊಸರು ಇರಬೇಕು, ದಪ್ಪ ಮಜ್ಜಿಗೆಯೂ ಆದೀತು.
ರುಚಿಗೆ ಉಪ್ಪು.
ಹಸಿ ಅರಸಿಣ ಇದೆ, ಚಿಕ್ಕ ತುಂಡು ಹಾಕೋಣ, ಅರಸಿಣ ಹುಡಿಯೂ ಆದೀತು. ಪುಟ್ಟ ಚಮಚದಲ್ಲಿ ಅಳೆದು ಹಾಕಿರಿ.
ಅರ್ಧ ಕಡಿ ತೆಂಗಿನ ತುರಿ.
ಇಲ್ಲಿ ನಾವು ಅರೆಯಬೇಕಾಗಿರುವುದು ತೆಂಗಿನತುರಿ ಹಾಗೂ ಅರಸಿಣ ಗೆಡ್ಡೆ ಮಾತ್ರ, ಮಿಕ್ಸಿಯಲ್ಲಿ ಹೊರಳಿಸಿ ಪುಡಿ ಮಾಡಿದ್ದಾಯ್ತು.

2 ಲೋಟ ಅಕ್ಕಿರವೆಯನ್ನು ತಪಲೆಗೆ ಹಾಕಿಕೊಳ್ಳಿ.
ಒದ್ದೆಯಾಗುವಷ್ಟು ನೀರೆರೆದು ಕಲಸಿ ಇಡುವುದು.
ಮೊಸರು, ಉಪ್ಪು, ಗರಂಮಸಾಲಾ, ಅರೆದ ತೆಂಗಿನ ತುರಿ ಹಾಕಿ ಬೆರೆಸಿ.

ಇದೀಗ ಇಡ್ಲಿ ಹಿಟ್ಟಿನ ಸಾಂದ್ರತೆ ಬಂತೇ, ಬಾರದಿದ್ದರೆ ನೀರು ಎರೆದು ಪುನಃ ಕಲಸಿ,
ಹೆಚ್ಚಿಟ್ಟ ಬಸಳೆ ಸೊಪ್ಪು ಬೆರೆಸುವಲ್ಲಿಗೆ ನಮ್ಮ ಪತ್ರೊಡೆ ಹಿಟ್ಟು ತಯಾರಾದಂತೆ.

ಇಡ್ಲಿ ಬೇಯಿಸುವ ಪಾತ್ರೆ ಒಲೆಗೇರಲಿ. ನೀರು ಕುದಿಯಿತೇ, ತಂದಿಟ್ಟ ಬಾಳೆ ಎಲೆಯನ್ನು ತಟಕ್ಕನೆ ನೀರಿಗೆ ಅದ್ದಿ ತೆಗೆಯಿರಿ, ಇದೀಗ ಬಾಡಿಸಿದ ಬಾಳೆ ಸಿದ್ಧ.

ಇಡ್ಲಿ ಪಾತ್ರೆಯೊಳಗೆ ಇಡಲು ಸಾಧ್ಯವಾಗುವ ತೂತುಗಳ ಜಾಲರಿ ಬಟ್ಟಲು ಇರಬೇಕು. ಅದನ್ನು ಇಡ್ಲಿ ಪಾತ್ರೆಯೊಳಗಿಟ್ಟು, ಅದರ ಮೇಲೆ ಬಾಡಿಸಿದ ಬಾಳೆಯನ್ನಿಟ್ಟು ಹಿಟ್ಟನ್ನು ಸುರಿಯಿರಿ. ಮುಚ್ಚಿ ಅರ್ಧ ಗಂಟೆ ಬೇಯಿಸಿ.

ಬಿಸಿಬಿಸಿಯಾದ ಪತ್ರೊಡೆಯನ್ನು ಟೇಬಲ್ ಮೇಲಿಟ್ಟು ಬಾಳೆ ಎಲೆಯಿಂದ ಬಿಡಿಸಿ ಕವುಚಿ ಹಾಕಿದಾಗ, "ವಾ... ಬಸಳೆಯ ಕೇಕ್... " ಅನ್ನುವುದೇ ನಮ್ಮ ಗೌರತ್ತೆ!

" ಹೌದಲ್ವೇ, ಇವತ್ತು ಯಾರದ್ದು ಬರ್ತ್ ಡೇ.. "
" ಇದ್ದೀತು ನಿನ್ನ ಫೇಸ್ ಬುಕ್ ಫ್ರೆಂಡುಗಳದ್ದು.." ನಗೆಚಟಾಕಿ ಗೌರತ್ತೆಯದು.



Monday 8 July 2019

ಬಸಳೆಯ ಮಜ್ಜಿಗೆಹುಳಿ








ಬೇಸಿಗೆಯಲ್ಲಿ ತಂದು ನೆಟ್ಟ ಬಸಳೆ, ಚಪ್ಪರಕ್ಕೆ ಹಬ್ಬಿಸಲು ವ್ಯವಧಾನವಿಲ್ಲದೆ ಈಗ ಮಳೆ ಪ್ರಾರಂಭವಾದ ಮೇಲೆ ನೆಲದಲ್ಲೇ ಎತ್ತೆತ್ತಲೋ ಸಾಗುತ್ತಿರುವುದನ್ನು ಕಂಡು ಮರುಗಿದ ಚೆನ್ನಪ್ಪ, ಬಿಸಿಲು ಬಂದಾಗ ನಾಲ್ಕು ಗೂಟ ನೆಟ್ಟು ಚಪ್ಪರ ಹಾಕಲು ಉದ್ಯುಕ್ತನಾದ.

ಅವನು ಚಪ್ಪರದ ಸಿದ್ಧತೆ ಮಾಡುತ್ತಿದ್ದಾಗ ನಾನು ಅಡುಗೆಮನೆಯಲ್ಲಿ ಟೊಮ್ಯಾಟೋ ರಸಂ ಮಾಡಲೋ, ಬೀನ್ಸ್ ಪಲ್ಯಕ್ಕೆ ಕೊಚ್ಚಲೋ ಎಂಬ ಚಿಂತನೆಯಲ್ಲಿದ್ದಾಗ ಬಸಳೆ ಕುಡಿಗಳು ಅಡುಗೆಮನೆಗೆ ಬಂದವು.
" ಅದೇನಿಲ್ಲಕ್ಕ, ಎಲ್ಲವನ್ನೂ ಚಪ್ಪರಕ್ಕೆ ಎತ್ತಿ ಕಟ್ಟುವುದಕ್ಕಾಗುವುದಿಲ್ಲ ಅಂತ ಇಷ್ಟು ಕುಯ್ದು ತಂದೆ. " ಎಂದ ಚೆನ್ನಪ್ಪ.
" ಚೆನ್ನಾಯ್ತು ಬಿಡು, ಈಗ ಪದಾರ್ಥಕ್ಕಾಯ್ತು. " ಟೊಮ್ಯಾಟೋ ಮೂಲೆಗೆ ಒತ್ತರಿಸಲ್ಪಟ್ಟಿತು.

ಬಸಳೆ, ಏನಿದ್ರೂ ಮಳೆಗಾಲದ್ದು, ಅಲ್ಲದೇ ನೆಲದಲ್ಲಿ ತೆವಳಿಕೊಂಡು ಹೋದಂತಾದ್ದು, ಸೊಪ್ಪು ದಂಟುಗಳನ್ನು ಪರೀಕ್ಷಿಸಿಯೇ ಅಡುಗೆ ಮಾಡಬೇಕಾಗಿದೆ.

ದಪ್ಪ ಹಾಗೂ ದೊಡ್ಡ ಎಲೆಗಳನ್ನು ನಾಳೆಯ ಪತ್ರೊಡೆಗಾಗಿ ತೆಗೆದಿರಿಸಲಾಯಿತು. ಎಳೆಯ ದಂಟು ಹಾಗೂ ಕುಡಿಎಲೆಗಳು ಇವತ್ತಿನ ಪದಾರ್ಥ ತಯಾರಿಯಲ್ಲಿ ಭಾಗಿಯಾದುವು.

" ಹೌದು, ಏನು ಪದಾರ್ಥ ಹಾಗಿದ್ರೆ? " ಗೌರತ್ತೆಯ ಪ್ರಶ್ನೆ.
" ಸಾಂಬಾರು ಮಾಡಲಿಕ್ಕೆ ಪಚ್ಚೆಸ್ರು ಕಾಳು ಅಥವಾ ಹುರುಳಿಕಾಳು ಹಾಕಿದ್ರೆ ಚೆನ್ನಾಗಿರೋದು, ಯಾವ್ದೂ ಇಲ್ವಲ್ಲ..."
" ಬಸಳೆ ಮೇಲಾರ ಮಾಡು.." ಗೌರತ್ತೆಯ ಸೂಚನೆ, ಅನುಮೋದಿತವೂ ಆಯ್ತು.
" ಹ್ಞೂ, ದೊಡ್ಡದಾದ ತೆಂಗಿನಕಾಯಿ ಇದೆ, ಈಗ ಕಡೆದ ಸಿಹಿ ಮಜ್ಜಿಗೆಯೂ ಇದೆ.. "
ಮೂಲೆಯಿಂದ ಹಸಿ ಅರಸಿಣ, " ನಾನೂ ಇದ್ದೇನೆ.. " ಅಂದಿತು. " ತೆಂಗಿನಕಾಯಿ ಅರೆಯುವಾಗ ಒಂಚೂರು ಅರಸಿಣ ತುಂಡು ಮಾಡಿ ಹಾಕು, ಹಾಗೇ ಆ ತರಕಾರಿ ಬುಟ್ಟಿಯಲ್ಲಿ ದೊಡ್ಡ ಮೆಣಸು ಕಾಣ್ತಾ ಇದೆ, ಅದನ್ನೂ ಹಾಕು.. ಪರೀಮಳ. " ಎಂದರು ಗೌರತ್ತೆ.
" ಹೌದಲ್ವೇ, ಕ್ಯಾಪ್ಸಿಕಂ ಇದ್ರೆ ಮೇಲಾರದ ರುಚಿ ಜಾಸ್ತಿ. "

ಈಗ ಬಸಳೆಯ ಮೇಲಾರ ಮಾಡೋಣ. 

ಪಚ್ಚೆಸ್ರು ಇಲ್ಲದ ಬಾಬ್ತು ಈಗ ಎರಡು ಹಿಡಿ ತೊಗರಿಬೇಳೆ ಬೇಯಿಸೋಣ. ಕುಕ್ಕರ್ ಮೂರು ಸೀಟಿ ಹಾಕಲಿ.

ತದನಂತರ ಹೆಚ್ಚಿಟ್ಟ ಬಸಳೆಯನ್ನು ಹಾಕಿ, ರುಚಿಗೆ ಉಪ್ಪು ಸಹಿತವಾಗಿ ಅದೇ ಕುಕ್ಕರಿನಲ್ಲಿ ಬೆಂದ ತೊಗರಿಯೊಂದಿಗೆ ಬೇಯಿಸುವುದು. ಬಸಳೆ ದಂಟು ನಿಧಾನಗತಿಯಲ್ಲಿ ಬೇಯುವ ವಸ್ತು. ಒಂದು ಸೀಟಿ ಹಾಕಿದ ನಂತರ ಗಂಟೆ ನೋಡುವುದಾದರೆ 15 ನಿಮಿಷ, ಸೀಟಿಯನ್ನೇ ಕೇಳಬೇಕೆಂದಿದ್ದರೆ 7ಸೀಟಿ. ಈ ಥರ ಲೆಕ್ಕಾಚಾರ ಇಟ್ಕೊಳ್ಳಿ.

ಬಸಳೆ ಬೇಯುವುದರ ಒಳಗಾಗಿ ತೆಂಗಿನ ಅರಪ್ಪು ಸಿದ್ಧವಾಗಬೇಕಿದೆ. ದೊಡ್ಡ ತಂಗಿನಕಾಯಿ ಇತ್ತಲ್ಲ, ಅರ್ಧ ಹೋಳು ತೆಂಗಿನ ತುರಿ ಸಾಕು, ತುರಿದಾಯ್ತು.

ಮಗಳು ತಂದಿಟ್ಟ ಮಿಕ್ಸೀ ಇದೆ, " ತುಂಬ ನುಣ್ಣಗೆ ಅರೆದು ಕೊಡುತ್ತೆ.. " ಅಂದಿದ್ಳು. ನೋಡೇ ಬಿಡೋಣ, ಮಜ್ಜಿಗೆಹುಳಿಯ ತೆಂಗಿನಕಾಯಿ ನುಣ್ಣಗಾದಷ್ಟೂ ಚೆನ್ನ.

ತೆಂಗಿನತುರಿ, ಚಿಕ್ಕತುಂಡು ಹಸಿ ಅರಸಿಣ, ಒಂದು ಲೋಟ ಸಿಹಿಮಜ್ಜಿಗೆ ಅರೆಯಲು ಬೇಕಿದ್ದಷ್ಟೇ ಎರೆದು ಅರೆಯುವುದು.

ಬಸಳೆ ಬೆಂದಿದೆ,  
ಗೌರತ್ತೃ ಕ್ಯಾಪ್ಸಿಕಂ ಹೋಳು ಮಾಡಿಟ್ಟಿದ್ರು, 
ಅದನ್ನು ಬೇಯಸಿಟ್ಟ ಬಸಳೆಗ ಬೆರೆಸಿ, 
ಪುನಃ ಗ್ಯಾಸ್ ಉರಿಯ ಮೇಲಿರಿಸುವುದು,
ತೆಂಗಿನ ಅರಪ್ಪು ಕೂಡಿಸಿ,
ಸಾಂದ್ರತೆಯ ಅನುಸಾರ ಮಜ್ಜಿಗೆ ಯಾ ನೀರು ಎರೆಯುವುದು.
ಉಪ್ಪು ಬೇಕಿದ್ದರೆ ಹಾಕುವುದು.
ಬೆಲ್ಲ ಹಾಕುವುದಕ್ಕಿಲ್ಲ.
ಕ್ಯಾಪ್ಸಿಕಂ ಇಲ್ಲದಿದ್ದರೆ ಹಸಿಮೆಣಸು ಸಿಗಿದು ಹಾಕಿ. ಖಾರ ಆಗಬಾರದು, ಮೆಣಸಿನ ಪರಿಮಳ ಬಂದರೆ ಸಾಕು.
ಕುದಿಸಿ, ಒಂದು ಕುದಿ ಬಂದಾಗ ಕೆಳಗಿಳಿಸಿ.
ಕರಿಬೇವಿನ ಒಗ್ಗರಣೆ ಬೀಳಲಿ, ಒಗ್ಗರಣೆಗೆ ಒಂದು ಒಣಮೆಣಸು ಮುರಿದು ಹಾಕಿ.
ಮಜ್ಜಿಗೆ ಹುಳಿ ಖಾರವೂ ಆಗಬಾರದು, ಹುಳಿಯೂ ಇರಬಾರದು, ಸಾರಿನಂತೆ ನೀರು ಎರೆದಂತಿರಬಾರದು. ಪಲ್ಯದಂತೆ ಗಟ್ಟಿಮುದ್ದೆಯೂ ಆಗುವಂತಿಲ್ಲ. ಇವಿಷ್ಟು ಸೂಕ್ಷ್ಮಗಳನ್ನು ಅರಿತರೆ ಮಜ್ಜಿಗೆಹುಳಿಯ ಮರ್ಮ ತಿಳಿದಂತೆ ಎಂದು ತಿಳಿಯಿರಿ.