Pages

Ads 468x60px

Monday, 19 September 2022

ಪಚ್ಚೆಸ್ರು ದೋಸೆ

 

ಪಚ್ಚೆಸ್ರು ಕಾಳು ಓಣಂ ಸಂದರ್ಭದಲ್ಲಿ ಕೇರಳ ರಾಜ್ಯದ ಉಚಿತ ರೇಶನ್ ಕಿಟ್ ಸಾಮಗ್ರಿಗಳಲ್ಲಿ ಒಂದು.  ಭರ್ತಿ ಒಂದು ಕಿಲೋ ಬಂದಿತ್ತು.   ಅಲ್ಲಾಂದ್ರೂ ಅಡುಗೆಮನೆಯಲ್ಲಿ ಪಚ್ಚೆಸ್ರು ಇತ್ತು,  ಮಗಳು ಇದ್ದಾಗ  ತರಿಸಿದ್ದು,  ಅವಳಿಗೆ ಪಚ್ಚೆಸ್ರು ಹಿಡಿಸಲಿಲ್ಲ, ಡಬ್ಬ ತುಂಬ ಇದೆ,  ಈಗ ಓಣಂ ಪಚ್ಚೆಸ್ರು ಬಂದಿದೆ.   ಉಪಯೋಗಿಸದೆ ಇಟ್ಟರೆ ಹುಳ ಹಿಡಿದು ಹಾಳಾದೀತು.  ಏನೋ ಒಂದು ಮಾಡೋಣ.


ನೆನೆಸಿಟ್ಟ ಪಚ್ಚೆಸ್ರು ಹಾಗೂ ಅಕ್ಕಿ ಅರೆದು ತೆಳ್ಳಗೆ ನೀರುದೋಸೆಯಂತೆ ಎರೆದು ಮಕ್ಕಳಿಗೆ ತಿನ್ನಿಸಬಹುದು.  ಪ್ರೊಟೀನ್ ಅತ್ಯಧಿಕ ಇರುವ ಕಾರಣದಿಂದ ಬೆಳವಣಿಗೆಗೆ ಪೂರಕ.   ಶರ್ಕರಪಿಷ್ಠ,  ಕೊಬ್ಬು,  ಖನಿಜಾಂಶಗಳಿಂದ ಕೂಡಿದ ಪಚ್ಚೆಸ್ರು ಹಿರಿಕಿರಿಯರಿಗೆಲ್ಲರಿಗೂ ಒಳ್ಳೆಯ ಆಹಾರ.  ಒಳ್ಳೆಯದೆಂದು ಅತಿಯಾಗಿ ತಿನ್ನಲೂ ಬಾರದು.  ಅಜೀರ್ಣಕ್ಕೆ ದಾರಿಯಾದೀತು.


ಪಚ್ಚೆಸ್ರು ಒಂದು ಲೋಟ ನೆನೆಯಲು ಇಡುವುದು.

ಒಂದು ಲೋಟ ಚಿರೋಟೆ ರವೆ ಯಾ ಬಾಂಬೇ ಸಜ್ಜಿಗೆ ಮುಳುಗುವಷ್ಟು ನೀರು ಎರೆದಿರಿಸಿ.

ನೆನೆದ ಪಚ್ಚೆಸ್ರು ಕಾಳುಗಳನ್ನು ಅರೆಯಿರಿ.

ದೊಡ್ಡ ನೀರುಳ್ಳಿ,  ಎರಡು ಹಸಿಮೆಣಸು, ಶುಂಠಿ ಕೂಡಿ ಅರೆಯಿರಿ.  ಇದ್ದರೆ ಕೊತ್ತಂಬರಿ ಸೊಪ್ಪು ಕೂಡಾ ಹಾಕಿ.


ಸಜ್ಜಿಗೆಯ ನೀರು ಬಸಿದು, 

ಎಲ್ಲವನ್ನೂ ಕೂಡಿಸಿ,  ರುಚಿಗೆ ಉಪ್ಪು ಬೆರೆಸಿ.

ದೋಸೆ ಹಿಟ್ಟಿನ ಹದಕ್ಕೆ ತನ್ನಿ.

ಮುಂಜಾನೆ ದೋಸೆ ಎರೆಯಿರಿ.  ತೆಳ್ಳಗೆ ಪೇಪರ್ ದೋಸೆಯಂತೆ ಎದ್ದು ಬರುತ್ತದೆ.


ಚಿರೋಟಿ ರವೆಯ ಬದಲು ಅಕ್ಕಿ ಹಿಟ್ಟೂ ಆದೀತು.

ಮೆಣಸು ಶುಂಠಿ ಇತ್ಯಾದಿಗಳಿಂದ ದೋಸೆಯ ರುಚಿ ಜಾಸ್ತಿ.  ಚಟ್ಣಿ ಇಲ್ಲದಿದ್ದರೂ ಆದೀತು.  ಬೆಣ್ಣೆ, ಸಕ್ಕರೆ ಕೂಡಿ ತಿನ್ನಿ.


ಈ ಮಾದರಿಯ ದೋಸೆಗೆ ನಮ್ಮ ಕೊಂಕಣಿಗರು ಪೆಸ್ರಟ್ ದೋಸೆ ಎಂದು ಹೆಸರಿಸಿದ್ದಾರೆ.  ಜಯಾ ಶೆಣೈಯವರ ಅಡುಗೆ ಪುಸ್ತಕದಲ್ಲಿ ಈ ಹೆಸರು ದೊರೆಯಿತು.  ಇನ್ನುಳಿದಂತೆ ಗೂಗಲ್ ಸಾಮ್ರಾಜ್ಯದಲ್ಲಿ ಇದು ಪೆಸರಟ್ಟು.


ಹೆಸ್ರು ಬೇಳೆಯಿಂದಲೂ ಇದೇ ಕ್ರಮದಲ್ಲಿ ದೋಸೆ ಮಾಡಬಹುದಾಗಿದೆ.   ಅರೆಯುವಾಗ ಮಸಾಲೆಗಳನ್ನು ಹಾಕದಿದ್ದರೂ ಪರವಾಗಿಲ್ಲ,  ತೆಂಗಿನಕಾಯಿ ಚಟ್ಣಿ ಮಸಾಲೆಗಳಿಂದ ಸಮೃದ್ಧವಾಗಿರಲಿ.






Monday, 12 September 2022

ನೀರ್ ಮಾವು ಪಲ್ಯ

 

ಈ ವರ್ಷ ನಮ್ಮಲ್ಲಿ ಮಾವಿನಹಣ್ಣು ಧಾರಾಳ,  ಮಕ್ಕಳೆಲ್ಲ ಮನೆಯಿಂದ ದೂರ ಇರುವಾಗ ತೋಟದಿಂದ ಮಾವಿನ ಹಣ್ಣು ತರುವ ಉಸಾಬರಿಗೆ ನಾವು ಹೋಗದೇ ವರ್ಷಗಳಾಯಿತು.  ಸುಯೋಗವೋ ಎಂಬಂತೆ ಮಗಳು ಅಳಿಯ  ಬಂದಿಳಿದರು.  ರಜಾಅಂತೇನಿಲ್ಲ,  ಅದೇನಿದ್ದರೂ work from home ಅಲ್ವೇ..

ಕಂಪ್ಯೂಟರ್ ಮುಂದೆ ಕೂತಿದ್ದರಾಯಿತೇ,  ತೋಟ ಗುಡ್ಡ ಸುತ್ತದಿದ್ದರೆ ಹೇಗೆ?  ಅಳಿಯ ಮಾವು ಹಲಸು ಗೇರು ಮರಗಳ ಒಡನಾಡಿ ಆದ.  ಅಂತೂ ಮನೆ ತುಂಬ ಫಲವಸ್ತುಗಳು ಬಂದು ಕೂಡಿದುವು ಅನ್ನಿ.


ದೇವಿ ದೇಗುಲದ ಕೆಳಗಿನ ತಟ್ಟಿನಲ್ಲಿ ಒಂದು ಮಾಮರ,  ದೇಗುಲ ದರ್ಶನಕ್ಕೆ ಬಂದ ಭಕ್ತರಿಗೆ ಕಣ್ಣು ಕುಕ್ಕುವಂತೆ ಹೂ ಬಿಟ್ಟಿತ್ತು, ಹಾಗೇನೇ ಮಿಡಿಯಾಗಿ ಕಾಯಾಗಿ ಹಣ್ಣೂ ಆಯ್ತು.  ಹಿಂದಿನ ವರ್ಷವೂ ಫಲ ಕೊಟ್ಟಿದ್ದರೂ ಹೇಳುವಷ್ಟಿರಲಿಲ್ಲ,  ಬಿದ್ದ ಹಣ್ಣುಗಳು ಹೆಕ್ಕಲಿಕ್ಕೆ ಸಿಗುವಷ್ಟೂ ಇಲ್ಲ,  ಅಲ್ಲೊಂದು ಇಲ್ಲೊಂದು ಅಷ್ಟೇ.   ಈ ಬಾರಿ ಬುಟ್ಟಿ ಬುಟ್ಟಿ ಹಣ್ಣುಗಳು...


 ಈ ಹಣ್ಣು,  ಸಾರು ಗೊಜ್ಜು ಸಾಸಮೆ ಮಾಡಿ ತಿಂದು ಮುಗಿಯುವಂತದ್ದಲ್ಲ.  ಅಕ್ಕಪಕ್ಕದ ಮನೆಗಳಿಗೆ ಕೊಡಲಿಕ್ಕೆ ಅಲ್ಲಿಯೂ ಮಾವಿನಹಣ್ಣುಗಳ ಭರಾಟೆ.   ಹೆಕ್ಕಿ ತಂದ ಮಾವಿನ ಹಣ್ಣುಗಳ ಸದ್ಬಳಕೆ ಹೇಗೆ?  ಮಾಂಬಳ ಮಾಡುವುದಕ್ಕೂ ಇಲ್ಲ,  ದಿನವೂ ಮಳೆ ಆಗಲೇ ಆರಂಭವಾಗಿತ್ತು.   " ಉಪ್ಪಿನಲ್ಲಿ ಹಾಕಿಡೋಣ "  ನಮ್ಮ ಯಜಮಾನರೇ ಉಪಾಯ ಸೂಚಿಸಿದರು.


ಮಾವನೂ ಅಳಿಯನೂ ಸೇರಿ ಮಾವಿನಹಣ್ಣುಗಳನ್ನು ಉಪ್ಪಿನಲ್ಲಿ ಹಾಕಿಟ್ಟರು.


ಹೇಗೆ?

ಮಾವಿನಹಣ್ಣುಗಳನ್ನು ತೊಳೆದು ಒರೆಸಿ ಇಡುವುದು. ಒಡೆದದ್ದು, ಬಿದ್ದು ಪೆಟ್ಟಾದ ಹಣ್ಣುಗಳು ಬೇಡ.

ಭರಣಿ ಉತ್ತಮ,  ತಳದಲ್ಲಿ ಕಲ್ಲುಪ್ಪು ಮೊದಲು,  ನಂತರ ಮಾವಿನ ಹಣ್ಣುಗಳು,  ಪುನಃ ಉಪ್ಪು ಈ ಥರ ತುಂಬಿಸುತ್ತ ಬರುವುದು.  ಒಟ್ಟಾರೆಯಾಗಿ ನಮ್ಮ ಮಾವಿನ ಹಣ್ಣುಗಳಿಗೆ ಎರಡು ಕಿಲೋ ಉಪ್ಪು ಬೇಕಾಯಿತು.  ಇದಕ್ಕೆಲ್ಲ ಪುಡಿ ಉಪ್ಪು ಅಂದರೆ ಟೇಬಲ್ಸಾಲ್ಟ್  ಬಳಸಲಿಕ್ಕಿಲ್ಲ.  ಕೊನೆಗೆ ಗಾಳಿ ಹೋಗದಂತೆ ಮುಚ್ಚಿ ಇರಿಸುವುದು.  ಇಷ್ಟು ಮಾಡಿದರಾಯ್ತು,  ಮಳೆಗಾಲದಲ್ಲಿ ಮಾವಿನಕಾಯಿ ಅಡುಗೆ ಮಾಡಿಕೊಳ್ಳಬಹುದು.


ಇಷ್ಟೆಲ್ಲ ಪ್ರವರ ಹೇಳಿದ ನಂತರ ಅಡುಗೆ ಮಾಡದಿದ್ದರೆ ಆದೀತೇ,  ಮಾಡೋಣ.  


ಗೊಜ್ಜು ಸಾರು ಅಂತೆಲ್ಲ ಬೇಡ,  ನಾವು ಪಲ್ಯ ಮಾಡುವವರಿದ್ದೇವೆ.


ಇಬ್ಬರಿಗೆ ನಾಲ್ಕು ಮಾವಿನಕಾಯಿ ಸಾಕು.


ದಾಸ್ತಾನು ಭರಣಿಯಿಂದ ಹೊರ ತೆಗೆದು ತೊಳೆಯಿರಿ.  ದೊಡ್ಡ ಗಾತ್ರದ ಮಾವಿನ ಮಿಡಿಯಂತೆ ಕಾಣಿಸುವ ನಮ್ಮ ತೋಟದ ಮಾವಿನಹಣ್ಣು,  ಸಿಹಿಯೊಂದಿಗೆ ಹುಳಿಯೂ ಇದ್ದಿತು.  

ತೊಟ್ಟು ತೆಗೆದು ಎರಡೂ ಬದಿ ಹೆರೆದು ಹೋಳುಗಳಂತೆ ಕತ್ತರಿಸಿ.  ಗೊರಟೂ ಇರಲಿ.


ಬಾಣಲೆಗೆ ಎಣ್ಣೆ ಎರೆಯುವುದಕ್ಕಿಲ್ಲ,  ನಾವಿಂದು ಎಣ್ಣೆರಹಿತ ಪಲ್ಯ ಮಾಡುವವರಿದ್ದೇವೆ.

ಮೊದಲಾಗಿ ಒಂದೆರಡು ಚಮಚ ಎಳ್ಳು ಹುರಿದು ತೆಗೆಯಿರಿ.

ನಂತರ ಉದ್ದಿನಬೇಳೆ, ಸಾಸಿವೆ, ಜೀರಿಗೆ, ಒಂದೆರಡು ಒಣಮೆಣಸು ಹುರಿಯಿರಿ.  ಒಂದೆಸಳು ಕರಿಬೇವು ಹಾಕತಕ್ಕದ್ದು.  ನಂತರ ಪಲ್ಯಕ್ಕೆ ಬೇಕಾದಂತಹ ಕಾಯಿತುರಿಯನ್ನೂ ಹಾಕಿ ಬಾಡಿಸಿ.

ಮಿಕ್ಸಿಯಲ್ಲಿ ಎರಡು ಸುತ್ತು ತಿರುವಿ ತೆಗೆದಿಟ್ಟುಕೊಳ್ಳಿ.


ಇದೀಗ ಅದೇ ಬಾಣಲೆಗೆ ಮಾವಿನ ಗೊರಟು ಸಹಿತವಾಗಿ ಹೋಳುಗಳನ್ನು ಹಾಕಿ ಬೇಯಿಸಿ. ಹೇಗೆ?  ಎಣ್ಣೆಯಿಲ್ಲ, ಒಗ್ಗರಣೆಯಿಲ್ಲ ಅಂತೀರಾ... ಚಿಂತೆ ಬೇಡ. ನೀರೆರೆದು ಬೇಯಿಸಿ.  ಉಪ್ಪಿನಲ್ಲಿ ಹಾಕಿದಂತಹ ಮಾವಿನಕಾಯಿಗಳಲ್ಲವೇ, ಉಪ್ಪು ಬೇಕಾಗಿಲ್ಲ.

ಸಿಹಿಗೆ ಸೂಕ್ತವೆನಿಸುವಂತೆ ಬೆಲ್ಲ ಹಾಕಿದರೆ ರುಚಿಕರ.

ಬೇಗನೇ ಬೇಯುವ ಸಾಮಗ್ರಿ ಇದು. ಅರೆದ ಮಸಾಲೆಯನ್ನು ಹಾಕಿ ಕೈಯಾಡಿಸಿ,  ನೀರು ಆರುವ ತನಕ ಚಿಕ್ಕ ಉರಿಯಲ್ಲಿ ಇರಲಿ.   ಎಣ್ಣೆರಹಿತ ಮಾವಿನ ಪಲ್ಯ ಆಯಿತು ಅನ್ನಿ.  ಅನ್ನದೊಂದಿಗೆ ಕೂಡಿ ತಿನ್ನಲು ಸೊಗಸಾದ ವ್ಯಂಜನ ನಮ್ಮದಾಯಿತು.


ಈ ಪಲ್ಯವನ್ನು ಮುಗಿಯುವ ತನಕ ಇಟ್ಟುಕೊಳ್ಳಬಹುದು.

ನೀರ್ ದೋಸೆಯೊಂದಿಗೆ ಕೂಡಿ ತಿನ್ನಲೂ ಹಿತ.

ಮಸಾಲೆ ಮಾಡಿಕೊಳ್ಳಲು ಸಾಧ್ಯವಿಲ್ಲದವರು ಪುಳಿಯೋಗರೆ ಮಸಾಲಾ ಪ್ಯಾಕ್ ತನ್ನಿ.

ಉಪ್ಪಿನಲ್ಲಿ ಹಾಕಿದ ಮಾವು ಎಲ್ಲುಂಟು ಅಂತೀರಾ,  ಆನ್ ಲೈನ್ ಮೂಲಕ ಸಿಗದ ವಸ್ತು ಯಾವುದಿದೆ ಅನ್ನಿ.






Sunday, 4 September 2022

ಹಾಲು ದೋಸೆ


 

" ಮಧ್ಯಾಹ್ನ ಊಟಕ್ಕೆ ನಾನಿಲ್ಲ,  ಹೋಗುವುದಿದೆ..."  ಹತ್ತು ಗಂಟೆಯ ಚಹಾ ಕುಡಿದು,  ಮನೆ ಯಜಮಾನರು ಕಾರು ಹತ್ತಿ ಹೋದರು.   ಮೊಬೈಲಲ್ಲಿ ಸುಡೊಕು ಅಂಕಿಯಾಟದಲ್ಲಿ ಹೊತ್ತು ಹೋದದ್ದು ತಿಳಿಯಲೂ ಇಲ್ಲ.   


" ಓಹ್...  ಗಂಟೆ ಹನ್ನೊಂದಾಯ್ತು...  ಇನ್ನು ಕುಚ್ಚುಲಕ್ಕಿ ಅನ್ನ ಬೇಯುವುದೆಷ್ಟು ಹೊತ್ತಿಗೆ? "  ಅಂದುಕೊಳ್ಳುತ್ತ ಊಟದ ಬೆಳ್ತಿಗೆ ಅಕ್ಕಿಯನ್ನು ಡಬ್ಬದಿಂದ ಹೊರ ತೆಗೆದು ಒಂದು ಪಾವಕ್ಕಿ ಅನ್ನ ಮಾಡಿದ್ದಾಯ್ತು.   ಮುಂಜಾನೆ ಇಡ್ಲಿಗಾಗಿ ಮಾಡಿದಂತಹ ತೆಂಗಿನಕಾಯಿ ಚಟ್ಣಿ ಉಳಿದಿತ್ತು.    " ಚಟ್ಣಿ ಸಾಕು..  ಮೊಸರು,  ಉಪ್ಪಿನಕಾಯಿ ಇದೆ.  "

ರಾತ್ರಿಗೆ ತಪಲೆಯಲ್ಲಿ ಏನೂ ಇಲ್ಲ ಎಂದಾಗಬಾರದು,  ಕೆಸುವಿನ ದಂಟಿನ ಸಾರು ಸಿದ್ಧವಾಯಿತು.


ಪಾಯಸದೂಟ ಉಂಡು ನಮ್ಮವರು ಮನೆಗೆ ಬಂದರು.   ಅನ್ನ ರಾತ್ರಿಗೆ ಮುಗಿಯಲಾರದು ಎಂದು ತಲೆಗೆ ಹೊಳೆದ ಕೂಡಲೇ ಉಳಿದ ಅನ್ನದಿಂದ ದೋಸೆ ಎಂದು ತೀರ್ಮಾನಿಸಿ,  ಎರಡು ಲೋಟ ಅಕ್ಕಿ ನೆನೆ ಹಾಕಿದ್ದಾಯ್ತು.


ರಾತ್ರಿ ನನ್ನದು ಫಲಾಹಾರ,  ಅಂದ್ರೆ ಮೂರು ಚಪಾತಿ ತಿಂದ್ಬಿಟ್ಟು ಒಂದು ಲೋಟ ಹಾಲು,  ಇದ್ದರೆ ಒಂದು ಕದಳಿ ಬಾಳೆ ಹಣ್ಣು.   ಹಾಗಾಗಿ ಅನ್ನ ಸಾಕಷ್ಟು ಉಳಿದಿದೆ.  ತುಂಟಿ ನಾಯಿಗೂ ಚಪಾತಿಯ ಬದಲು ಅನ್ನ ಮೊಸರು ಹಾಕಲಾಯಿತು.  ಆದರೂ ಅನ್ನ ಉಳಿಯಿತು.


ಆಗ್ಗಿಂದಾಗ್ಗೆ ಚಹಾ, ಕಾಫಿ, ಹಾಲು  ಕುಡಿಯುವವರೂ ಮನೆಯಲ್ಲಿ ಇಲ್ಲವಾಗಿ ಹಾಲಿನ ತಪಲೆ ತುಂಬಿಕೊಂಡಿದೆ.  "ಚಿಂತೆಯಿಲ್ಲ, ದೋಸೆ ಅರೆಯುವಾಗ ನೀರು ಹಾಕದಿದ್ದರಾಯಿತು,  ಹಾಲನ್ನೇ ಎರೆಯೋಣ.."   ಇಂತಹ ಘನ ವಿಚಾರ ಹೊಕ್ಕಿದ್ದೇ ತಡ,  ಒಂದು ದೊಡ್ಡ ಲೋಟ ಹಾಲು ದೋಸೆ ಹಿಟ್ಟಿಗೆ ಸೇರಿಕೊಂಡಿತು.


ಮಾರನೇ ಮುಂಜಾನೆ ದೋಸೆ ತಿನ್ನುತ್ತ ನಮ್ಮ ಯಜಮಾನರು,  "ಹೌದೂ,  ಬನ್ನಂಗಾಯಿ ದೋಸೆ ಹ್ಯಾಗೇ ಮಾಡಿದ್ದೂ...  ಎಲ್ಲಿತ್ತು ತೆಂಗಿನಕಾಯಿ" ಎಂದು ಕೇಳಿಯೇ ಬಿಟ್ಟರು.

" ಅಹಹ... ಇದಪ್ಪ ಪ್ರಶ್ನೆ.. " ಮಾಡಿದ್ದು ಹೇಗೇಂತ ಪುನಃ ಹೇಳಲಾಯಿತು.  ಅಂತೂ ಹಾಲೂ + ಅನ್ನ ದೋಸೆ ಗೆದ್ದಿತು.


ಎರಡು ಲೋಟ ಅಕ್ಕಿಗೆ  ಅಷ್ಟೇ ಅನ್ನ ಸೇರಿಸಿದರೆ ಸಾಕು,  ಇದೆಯೆಂದು ಹೆಚ್ಚು ಹಾಕದಿರಿ,  ದೋಸೆ ಮೆತ್ತಗಾಗಿ ಕಾವಲಿಯಿಂದ ಏಳಲಾರದು.


ಮಿಕ್ಸಿ ಯಂತ್ರದಲ್ಲಿ ಎಲ್ಲವನ್ನೂ ಒಂದೇ ಬಾರಿ ಅರೆಯಲಾಗದು.  ಅವಶ್ಯವಿದ್ದಷ್ಟೇ ನೀರು ಎರೆದು ಅಕ್ಕಿಯನ್ನು ನುಣ್ಣಗೆ ಅರೆದು ತೆಗೆಯಿರಿ.

ಹಾಲು ಹಾಗೂ ಅನ್ನವನ್ನು ಒಟ್ಟಿಗೆ ಅರೆದು ಅಕ್ಕಿ ಹಿಟ್ಟಿಗೆ ಕೂಡಿಸಿ,  ರುಚಿಗೆ ಉಪ್ಪು ಬೆರೆಸಿ...

ಹಿಟ್ಟು ಹುಳಿ ಬರಬೇಕೆಂದೇನೂ ಇಲ್ಲ.