Pages

Ads 468x60px

Sunday 23 October 2016

ಅವಲಕ್ಕಿ ಹಲ್ವಾ




" ಅವಲಕ್ಕೀದು ಹಲ್ವನಾ,  ಬಾಳೆಹಣ್ಣಿನ ಹಾಗೆ ಕಾಣುತ್ತಪ್ಪ.. "
" ಅಲ್ಲೇ ಇರೂದು ಒಳಗುಟ್ಟು.. "
" ಹೌದಾ,  ಹೇಗೆ ಮಾಡಿದ್ದೂ? "
" ಹೇಗೆ ಅಂತ ಕೇಳ್ತೀರಾ,  ಯಾಕೆ ಮಾಡಿದ್ದೂ ಅನ್ನಿ. "

 ಅದೇನಾಗಿತ್ತೂಂದ್ರೆ ಪತ್ತನಾಜೆ ಬಂದಿತ್ತಲ್ಲ,  ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ  ಪತ್ತನಾಜೆ ಸೇವೆ  ಇದ್ದಿದ್ದರಿಂದ ಹೋಗಿದ್ದೆವು.   ಪೂಜಾದಿಗಳೆಲ್ಲ ಮುಗಿದು ನಮಗೆ ಪ್ರಸಾದರೂಪವಾಗಿ ಕಲಸಿದ ಅವಲಕ್ಕಿ,  ಸೀಯಾಳ,  ಹಣ್ಣುಕಾಯಿ, ಹೂವು, ಗಂಧ ಎಲ್ಲ ದೊರೆಯಿತು.  ಸಮಾರಾಧನೆ ಊಟವಾಗಿ ಮನೆಗೆ ಬಂದೆವು.

ಸಂಜೆವೇಳೆಗೆ ಹಿರಣ್ಯದ ಮಹಿಷಂದಾಯ ದೈವಗುಡಿಯಲ್ಲಿ ಪತ್ತನಾಜೆ ಬಾಬ್ತು ವಿಶೇಷ ಪೂಜೆ, ತಂಬಿಲಸೇವೆ,  ಪ್ರಾರ್ಥನೆ ಇತ್ಯಾದಿ ಆದ ನಂತರ ಬಂದಂತಹ ಭಕ್ತಾದಿಗಳಿಗೆ ಪುನರ್ಪುಳಿ ಶರಬತ್ತು,   ಕಲಸಿದ ಅವಲಕ್ಕಿ....

ದೈವಸನ್ನಿಧಿಯಲ್ಲೇ ತಿಂದು ಕಸ ಮಾಡಲಿಕ್ಕುಂಟೇ,  ಪ್ರಸಾದ ಮನೆಗೆ ಬಂದಿತು.

" ನಮ್ಮ ಮನೆಯಲ್ಲಿ ಗಣಹೋಮ ಇತ್ತು. "  ಅಂದ್ಬಿಟ್ಟು ಹೇಮಕ್ಕ ಬಾಳೆಲೆ ತುಂಬ ಅವಲಕ್ಕಿ ಪ್ರಸಾದ ತಂದಿಟ್ಟಿದ್ರು.  ಅಷ್ಟದ್ರವ್ಯ ಎಂಬ ವಿಶೇಷಣದ ಇದನ್ನು ಅವಲಕ್ಕಿ ಕಲಸಿದ್ದು ಅನ್ನುವಂತಿಲ್ಲ,  ಅಷ್ಟದ್ರವ್ಯದಲ್ಲಿ ಬೆಲ್ಲ ತೆಂಗಿನಕಾಯಿ ಅವಲಕ್ಕಿ ಮಾತ್ರವಲ್ಲ, ಒಟ್ಟಾರೆಯಾಗಿ ಎಂಟು ವಿಧ ಫಲವಸ್ತುಗಳು ಇರುತ್ತವೆ,   ಅರಳು,  ಎಳ್ಳು ,  ತುಪ್ಪ, ಕಬ್ಬು, ಬಾಳೆಹಣ್ಣು ....

ಮನೆಯಲ್ಲಿ ಮಕ್ಕಳಿದ್ದಿದ್ರೆ ಕ್ಷಣ ಮಾತ್ರದಲ್ಲಿ ತಿಂದು ಮುಗಿಸ್ತಿದ್ರು,   ಈ ಅವಲಕ್ಕಿ ವೈವಿಧ್ಯಗಳನ್ನು ನಾವಿಬ್ಬರು ಎಷ್ಟು ತಿನ್ನಲಾದೀತು?

ಅದೂ ಅಲ್ಲದೆ ಸೆಕೆಗಾಲದ ಬಾಳೆಗೊನೆ ಕೂಡಾ ಹಣ್ಣಾಗಿ ಕಳಿತು,  ಕುಳಿತಿದೆ.   ಕೊಳೆತು ಹೋಗುವ ಮೊದಲೇ ಹಲ್ವ ಮಾಡಿ ತಿನ್ನಬೇಕಾಗಿದೆ.

ಎಂದಿನಂತೆ ಸಿಪ್ಪೆ ತೆಗೆದು ಹಣ್ಣಿನ ಒಳ್ಳೆಯ ಭಾಗ ಕಟ್ ಕಟ್ ಆಗಿ ಒಲೆಯ ಮೇಲೇರಿತು.  ದಪ್ಪ ಬಾಣಲೆಗೆ ಎಳ್ಳೆಣ್ಣೆ ಸವರಿ ಒಲೆಯ ಮೇಲಿಟ್ಟರೆ ಅಡಿ ಹಿಡಿಯುವುದಿಲ್ಲ (ತಳ ಹತ್ತುವುದಿಲ್ಲ).

ಚಿಕ್ಕ ಉರಿಯಲ್ಲಿ ಆಗಾಗ ಸೌಟಾಡಿಸುತ್ತಿದ್ದ ಹಾಗೆ ತುಪ್ಪ 2 - 3 ಚಮಚ ಬಿದ್ದಿತು.   ತುಪ್ಪದ ಸುವಾಸನೆಯೊಂದಿಗೆ ಬೆಂದ ಪರಿಮಳ ಬಂದಿತೇ,  ಹಣ್ಣಿನ ಗಾತ್ರದಷ್ಟೇ ಬೆಲ್ಲ ಪುಡಿಪುಡಿಯಾಗಿ ಬಾಣಲೆಗೆ ಇಳಿಯಿತು.

ಬೆಲ್ಲ ಕರಗಿ ಕರಗಿ ರಸಪಾಕವಾಗುತ್ತಿದ್ದಾಗ ತಲೆಯಲ್ಲಿ ಸೂಪರ್ ಐಡಿಯಾ ಬಂದಿತು,   ಮೂರು ಪ್ರತಿ ಅವಲಕ್ಕಿಗಳಿದ್ದುವಲ್ಲ,  ಒಂದು ಪ್ರತಿ ಹೇಗೋ ತಿಂದು ಮುಗಿಸಿದ್ದಾಗಿತ್ತು,  ಮತ್ತೊಂದು ಹಳಸಲು ಪರಿಮಳ ಬಂದಿದೆಯೆಂದು ಹೊರಗೆ ಹೋಗಿತ್ತು.  ಇನ್ನೊಂದು ಉಳಿದ ಅವಲಕ್ಕಿ ಪ್ರತಿ ಚೆನ್ನಾಗಿಯೇ ಇದ್ದಿತು.   ಅದನ್ನು ತಂದು ಬಾಂಡ್ಲಿಗೆ ಸುರುವಿ ಸೌಟಾಡಿಸುತ್ತಾ ಇದ್ದ ಹಾಗೆ ಗಟ್ಟಿಪಾಕ ಬಂದೇ ಬಿಟ್ಟಿತು!   ಸಂಜೆಯ ಚಹಾ ಜೊತೆ ತಿನ್ನಲು ಬೇಕಾದಷ್ಟಾಯಿತು....  ನಾಲ್ಕಾರು ದಿನ ಇಟ್ಟುಕೊಳ್ಳಲೂ ತೊಂದರೆಯಿಲ್ಲ.

ಹಾಗೇ ಸುಮ್ಮನೆ ತಿನ್ನಲು ಅವಲಕ್ಕಿ ಹಾಗೂ ಬಾಳೆಹಣ್ಣು ಸೊಗಸಾಗಿಯೇ ಇರುತ್ತದೆ,  ಈ ಸಂಯೋಜನೆಯ ರಸಪಾಕ ಕೂಡಾ ಚೆನ್ನಾಗಿ ಬಂದಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.  ನನ್ನದಂತೂ ಹೊಸ ಪ್ರಯೋಗ,  ನೀವೂ ಮಾಡಿ ನೋಡಿ.  ಹ್ಞಾಂ,  ಸುಮ್ ಸುಮ್ಮನೇ ಅವಲಕ್ಕಿಗೆ ಬೆಲ್ಲ ಕಾಯಿತುರಿ ಹಾಕಿ ಕಲಸದಿರಿ.   ಒಂದು ಪಾವು ಅವಲಕ್ಕಿಯನ್ನು ಹುರಿದು ಪುಡಿ ಮಾಡ್ಬಿಟ್ಟು ಬಾಳೆಹಣ್ಣಿನ ಪಾಕಕ್ಕೆ ಸೇರಿಸಿ.  ದ್ರಾಕ್ಷಿ , ಗೋಡಂಬಿ, ಏಲಕ್ಕಿ ಹಾಕಿದ್ರೆ ಇನ್ನೂ ಚೆನ್ನ.



                                    



   ಅಡಿಕೆ ತೋಟ ಇರುವಲ್ಲಿ ಬಾಳೆ ಇದ್ದೇ ಇರುತ್ತದೆ.   ಬಾಳೆಗೊನೆ ಹಣ್ಣಾಗಿ ದೊರೆತಾಗ ಇನ್ನಮ್ಮೆ ಕೇವಲ ಅವಲಕ್ಕಿ ಮಾತ್ರ ಉಪಯೋಗಿಸಿ ಮಾಡಿದ್ದೂ ಆಯ್ತು.
ಸಾಮಾನ್ಯ ಅಳತೆಯ ಪ್ರಮಾಣ ಹೀಗಿರಲಿ,

ಹತ್ತರಿಂದ ಹದಿನೈದು ಬಾಳೆಹಣ್ಣುಗಳು,   ತೆಳ್ಳಗೆ ಕತ್ತರಿಸಿ.
ದೊಡ್ಡ ಅಚ್ಚು ಬೆಲ್ಲ,  ಪುಡಿ ಮಾಡಿದ್ರಾ,  ಎರಡು ಲೋಟ ತುಂಬ ಇರಲಿ.
ಎರಡರಿಂದ ಮೂರು ಚಮಚ ಸುವಾಸನೆಯುಳ್ಳ ತುಪ್ಪ.
ಒಂದು ಲೋಟ ಅವಲಕ್ಕಿ,  ನಾನ್ ಸ್ಟಿಕ್ ತವಾದಲ್ಲಿ ಹುರಿದು, ಮಿಕ್ಸಿಯಲ್ಲಿ ಬೀಸಿದ್ದು.
ಮಾಡುವ ವಿಧಾನ:  ಪುನಃ ಮೊದಲು ಬರೆದಿದ್ದನ್ನು ಓದಿಕೊಳ್ಳುವುದು... 


                       


ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  ' ಉತ್ಥಾನ ' ದಲ್ಲಿ ಪ್ರಕಟಿತ ಬರಹ.  ಸಪ್ಟಂಬರ್, 2016.


Saturday 8 October 2016

ಸೌತೇ ಕಾೖ ದೋಸೆ




    


" ಅಬ್ಬಾ ಏನು ಸೆಕೇ...  ನೀರು ಕುಡಿದೂ ಕುಡಿದೂ ಸಾಕಾಯ್ತು."
" ಬರೇ ನೀರು ಕುಡಿದ್ರೇನು ಬಂತು,  ತಂಪು ಆಹಾರ ತಿನ್ಬೇಕು..." ಅಂದ್ರು ಗೌರತ್ತೆ.
" ಬೆಳಗಾದ್ರೆ ಎದ್ದು ಐಸ್ ಕ್ರೀಂ ತಿನ್ನೂ ಅಂತೀರಾ? "
" ಹಹ... ಹಾಗಲ್ಲ ಮಾರಾಯ್ತಿ... ತಿನ್ನುವ ತರಕಾರಿ ಉಂಟಲ್ಲ,  ಬದನೇಕಾಯಿ ನಂಜು,  ಹಾಗಲ ಪಿತ್ತ,  ಬಾಳೆಕ್ಕಾಯಿ ವಾತ ಹೀಗೆಲ್ಲ ಹೇಳ್ತಾರಲ್ಲ... ಸೌತೆಗೆ ಅಂತಹ ದೋಷ ಯಾವುದೂ ಇಲ್ಲ.   ಉಷ್ಣವೂ ಅಲ್ಲ,  ಶೀತವೂ ಇಲ್ಲ,  ಶರೀರಕ್ಕೂ ತಂಪು ಗೊತ್ತಾ. "  ಲೆಕ್ಚರ್ ಬಿಗಿದರು ಗೌರತ್ತೆ,  ಮೂಲೆಯಲ್ಲಿ ಸಾಲಾಗಿ ಪೇರಿಸಿಟ್ಟಿದ್ದ ಸೌತೆಕಾಯಿಗಳನ್ನು ನೋಡುತ್ತಾ.

ಸೌತೆಕಾಯಿಗಳನ್ನು ನೆರೆಮನೆಯ ರವೀಂದ್ರನ್ ತಂದ್ಕೊಟ್ಟಿದ್ದ,  ನಮ್ಮ ತೋಟದ ಕೆರೆಯಿಂದ ನೀರು ಅವನ ತರಕಾರಿ ಹಿತ್ತಿಲಿಗೆ ಹೋಗುತ್ತೆ,  ಅವನೂ ಆಗಾಗ ಏನೇನೋ ತರಕಾರಿ ತಂದಿಟ್ಟಿರುತ್ತಾನೆ.   ನನ್ನ ತರಕಾರಿ ಬೆಳೆ ಅಷ್ಟಕ್ಕಷ್ಟೇ,  ಬದನೆಕಾಯಿ ಒಂದು ಸಾಲು ಬಿಟ್ರೆ ಮತ್ತೇನಿಲ್ಲ.

" ಹೌದೂ,  ಸೌತೇದು ಹುಳಿಮೆಣಸು ಮಾಡೂ ಅಂತೀರಾ? "
" ಅಯ್ಯೋ,  ಅದೆಲ್ಲ ಬೇಡ...  ಪದಾರ್ಥಕ್ಕೆ ಬದನೆ ಉಂಟಲ್ಲ,  ನಾಳೆ ಸೌತೆಕಾಯಿ ದೋಸೆ ಮಾಡಬಹುದಲ್ಲ. " 
" ಇವತ್ತು ಉದ್ದಿನ ಕೊಟ್ಟಿಗೆ ತಿಂದಾಯ್ತು,  ನಾಳೆ ಪುನಃ ಉದ್ದು ಹಾಕಿ ಸೌತೆಕಾಯಿ ದೋಸೆಯಾ...  "
"ಉದ್ದು ಹಾಕ್ಬೇಡ,  ಬರೇ ಅಕ್ಕಿ ಮತ್ತು ಸೌತೆ ಹಾಕಿ ಅರೆದಿಡು,  ತಿಳೀತಾ... "

ಗೌರತ್ತೆ ಅಂದಂತೆ ಮೂರು ಪಾವು ಅಕ್ಕಿ ನೀರಿನಲ್ಲಿ ನೆನೆ ಹಾಕಿದ್ದಾಯ್ತು.
ಸಂಜೆಯಾಗುತ್ತಲೂ ಸೌತೆಕಾಯಿ ಸಿಪ್ಪೆ ಹಾಗೂ ಬೀಜಗಳನ್ನು ಹೊರಗೆಸೆದು ತುರಿದು ಇಟ್ಕೊಂಡಿದ್ದಾಯ್ತು.
ಬೇಸಿಗೆಯಲ್ವೇ,  ಸಂಜೆಯ ವೇಳೆ ಇನ್ನೇನೋ ಕೆಲಸಗಳಿರುತ್ತವೆ.   ಮುಖ್ಯವಾಗಿ ಕೈದೋಟದ ಗಿಡಗಳಿಗೆ ನೀರು ಹಾಕೋದು.   ಈ ಹೊರಕೆಲಸಗಳನ್ನು ಮುಗಿಸಿ,  ಒಳ ಬಂದು ಹಾಲು ಕಾಯಿಸಲಿಟ್ಟು,  ಅನ್ನ ಬಿಸಿ ಮಾಡಿ,  ದೇವರಿಗೊಂದು ದೀಪ ಹಚ್ಚಿಟ್ಟು,   ಸ್ವಲ್ಪ ಹೊತ್ತು ಫೇಸ್ ಬುಕ್ಕು ಓದಿ,   ಊಟದ ಟೇಬಲ್ ರಾತ್ರಿಯೂಟಕ್ಕೆ ತಯಾರಾಗಿ ನಿಂತಾಗ ನನ್ನ ದೋಸೆ ಅರೆಯುವ ವೇಳೆ ಬಂದಿತು.

ಅಕ್ಕಿ,  ಅಂದ್ರೆ ಬೆಳ್ತಿಗೆ ಅಕ್ಕಿಯನ್ನು ಈಗ ದೋಸೆ ಅಕ್ಕಿ, ಇಡ್ಲಿ ಅಕ್ಕಿ ಎಂದು ವರ್ಗೀಕರಿಸಿ ಹೇಳುತ್ತಿರುವುದು ನನಗೂ ವಿಸ್ಮಯ ತಂದಿದೆ.   ಇದೇನು ವಿಚಿತ್ರ ಅಂತಿದ್ದ ಈ ಹೊಸ ಸಬ್ಜೆಕ್ಟು,  ಬೆಂಗಳೂರಿಗೆ ಹೋಗಿದ್ದಾಗ ನಿವಾರಣೆ ಆಯ್ತು.   ಬೆಂಗಳೂರಿನ ನಮ್ಮದೇ ಮನೆಗೆ ಹೋಗಿದ್ದೆವು,  ಪ್ರಕಾಶನ ಹೆಂಡ್ತಿ ಗೀತಾ,  ಎರಡೂ ಪ್ರತಿ ಅಕ್ಕಿ ಡಬ್ಬಗಳನ್ನು ಬಿಡಿಸಿ  " ಅತ್ತೇ,  ಇದು ದೋಸೆ ಅಕ್ಕಿ,  ಅರೆಯುವಾಗ ನೊಂಪು ನೊಂಪಾಗಿ ನುಣ್ಣಗಾಗುತ್ತೆ,   ಇಡ್ಲಿ ಅಕ್ಕಿ ಉಂಟಲ್ಲ,  ಎಷ್ಟೇ ಅರೆದ್ರೂ ತರಿ ತರಿ... " ಅಂದಳು.
" ಅಷ್ಟೇನಾ,  ಎರಡೂ ಬೆಳ್ತಿಗೆ ಅಕ್ಕೀನೇ.... "

ಈಗ ನೆನೆ ಹಾಕಿಟ್ಟಿರುವ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು,   ಸೌತೆಕಾಯಿ ತುರಿಯೊಂದಿಗೆ ಅರೆಯಿರಿ.   ಬೇರೆ ನೀರು ಕೂಡಿಸದಿರಿ,  ಸೌತೆಯಲ್ಲಿ ಶೇಕಡಾವಾರು 80 ಕ್ಕೂ ಅಧಿಕ ನೀರು ಇದೆ.   ನುಣ್ಣಗಾದ ಹಿಟ್ಟನ್ನು ರುಚಿಗೆ ಉಪ್ಪು ಕೂಡಿಸಿ ಮುಚ್ಚಿಟ್ಟಿರಿ.  ಹುದುಗು ಬಂದ ಹಿಟ್ಟನ್ನು ಮಾರನೇ ದಿನ ದೋಸೆ ಎರೆಯಿರಿ.  ತೆಂಗಿನಕಾಯಿ ಚಟ್ಣಿ,  ಮೊಸರು,  ಬೆಲ್ಲದ ಜೇನುಪಾಕ ಕೂಡಿಕೊಂಡು ದೋಸೆ ಸವಿಯಿರಿ.   ಹಿಟ್ಟನ್ನು ಅರೆದ ಕೂಡಲೇ  ದೋಸೆ ಎರೆಯಬೇಕಿದ್ದರೆ ನೀರು ದೋಸೆ ಥರ ಹಾರಿಸಿ ಎರೆದರಾಯಿತು.  

ಸಸ್ಯಶಾಸ್ತ್ರೀಯವಾಗಿ Cucumis sativus ಎಂದಿರುವ ನಮ್ಮ ಊರ ಸೌತೆಗೆ ಎಷ್ಟೊಂದು ನಾಮಧೇಯಗಳಿವೆ ಎಂಬ ವಿಷಯ ಗೂಗಲ್ ರಿಸರ್ಚ್ ಮಾಡಿದಾಗಲೇ ತಿಳಿದದ್ದು.

ಬೆಂಗಳೂರಿಗರು ಇದನ್ನು ಮಂಗಳೂರು ಸೌತೆ ಅಂತಾರೇ,  ಬಣ್ಣದ ಸೌತೆಯೂ ಹೌದು.    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌತೆಯ ಬೆಳೆ ಕರಾವಳಿಯುದ್ದಕ್ಕೂ ಇರುವುದರಿಂದ ಇದು ಮಲಬಾರ್ ಸೌತೆಯೂ ಹೌದು.  ಕೊಂಕಣಿಗರು ಈ ಸೌತೆಯಿಂದ ವಿಧ ವಿಧವಾದ ಖಾದ್ಯಗಳನ್ನೂ ತಯಾರಿಸುತ್ತಾರೆ.

ದೋಸೆ ಮಾಡಿದ ವಿಧಾನ ನೋಡಿದ್ರಲ್ಲ,  ಕಡುಬು ಕೂಡಾ ಮಾಡಿಕೊಳ್ಳಬಹುದು.   ಈಗ ಇಡ್ಲಿ ಅಕ್ಕಿ ಉಪಯೋಗಿಸಿದ್ರಾಯ್ತು.    ಇಲ್ಲಿ ಹಿಟ್ಟನ್ನು ಹುಳಿ ಬರಿಸಬೇಕಾಗಿಲ್ಲ.   ತೆಂಗಿನ ತುರಿ ಹಾಗೂ ಬೆಲ್ಲ ಕೂಡಿ ಅರೆದು,  ಬಾಡಿಸಿದ ಬಾಳೆ ಎಲೆಯಲ್ಲಿ ಸುತ್ತಿಟ್ಟು,  ಅಟ್ಟಿನಳಗೆ ಯಾ ಇಡ್ಲಿ ಪಾತ್ರೆ ಅಥವಾ ಪ್ರೆಶರ್ ಕುಕ್ಕರ್ ಒಳಗೆ ಹಬೆಯಲ್ಲಿ ಬೆಂದಂತಹ ಕಡುಬು ರುಚಿಕರ ತಿನಿಸು.   

ಈ ಸೌತೆಯ ಇನ್ನೊಂದು ವಿಶೇಷ ಗುಣ ಏನಪ್ಪಾಂದ್ರೆ ಚೆನ್ನಾಗಿ ಬೆಳೆದ ಸೌತೆಕಾಯಿಗಳನ್ನು ದೀರ್ಘಕಾಲ ಇಟ್ಟುಕೊಳ್ಳಬಹುದು.   ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಕಟಾವ್ ಆಗುವಂತೆ ಬೆಳೆದರೆ ಮಳೆಗಾಲಕ್ಕೆ ತರಕಾರಿಯ ಕೊರತೆ ಬಾರದಂತೆ ಕಾಪಿಟ್ಟುಕೊಳ್ಳಬಹುದಾಗಿದೆ.   

  ಅಧಿಕ ನೀರಿನಂಶ ಹೊಂದಿರುವ ಈ ತರಕಾರಿ ಮೂತ್ರವರ್ಧಕ,   ಮಲಬದ್ಧತೆಯನ್ನು ಹೋಗಲಾಡಿಸುತ್ತ ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು.   ತರಕಾರಿ ತಿನ್ನಲೊಪ್ಪದ ಮಕ್ಕಳಿಗೆ ಈ ತೆರನಾದ ತಿಂಡಿಗಳ ಮೂಲಕ ತರಕಾರಿ ತಿನ್ನಿಸಿದ ಹಾಗೂ ಆಯಿತು.


                         



  ಟಿಪ್ಪಣಿ:  ಈ ಬರಹ ಜುಲೈ, 2016   ' ಉತ್ಥಾನ ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ.