Pages

Ads 468x60px

Tuesday 18 December 2012

ನೆಲಹಾಸು







ಹೊತ್ತು ಕಳೆಯುವ ವೇಳೆ
ಹಳೆ ಬಟ್ಟೆಗೆ ಹೊಸ ಕಳೆ
ರಂಗು ರಂಗಿನ ಚಿತ್ತಾರದ ಕಲೆ |

ಬಣ್ಣಗಳ ಹೂವರಳಿಸಿ
ಬನ್ನಿ ಒಳಗೆ ಕಾಲೊರಸಿ |

ಟೇಪಿನಂತೆ ಕತ್ತರಿಸಿ ಬಟ್ಟೆಗೆ
ಸಿಕ್ಕು ಸಿಕ್ಕು ನೆಯಿಗೆ
ಸರಳ ಈ ಹೊಲಿಗೆ |

ಗಂಟಿನೊಳಗೊಂದು ಗಂಟು
ಟೇಪಿಗೊಂದು ತೇಪೆ
ಹಾಕುತ್ತಾ
ವೃತ್ತ ಆಯತ ಬೇಕಾಬಿಟ್ಟಿ 
ಹೊಸೆಯುತ್ತಾ
ಅರ್ಧ ಗಂಟೆಯ ಹೊತ್ತು |




ಮಗಳ ಲಂಗ
ನನ್ನವರ ಲುಂಗಿ
ಹರಿದ ಸೀರೆಯ ಸೆರಗು
ಏನಿದೆ ಏನಿಲ್ಲ ಇದೇ ಒಂದು ಬೆರಗು |

ಆಗಾಗ ತೊಳೆಯುತ್ತಿರಿ
ಆಗುವುದು ಪುನಃ ಮಿರಿಮಿರಿ |

ಹಳತಾಯಿತೇ
ಹರಿದು ಹಾಳಾಯಿತೇ 
ಕಾಸು ಕೊಟ್ಟ ಸರಕಲ್ಲ
ಚಿಂತೆಯೇನೂ ಬೇಕಿಲ್ಲ |

ಹೀಗೂ ಉಂಟೇ ಗುಡಿಕೈಗಾರಿಕೆ
ಹಂಚಿ ನೆಂಟರಿಷ್ಟರಿಗೆ ಒಲವಿನ ಕಾಣಿಕೆ |

ಚಿತ್ರಗಳೊಂದಿಗೆ ಕವನ 
ಆಯಿತು ಕಣ್ಮನ ಪಾವನ |



Posted via DraftCraft app

Wednesday 12 December 2012

ಬಚ್ಚಂಗಾಯ್ ಬಂದಿದೇ ಹಾಯ್ ......






ಮೊನ್ನೆ ದೊಡ್ಡ ಗಾತ್ರದ ಬಚ್ಚಂಗಾಯಿ ಮನೆಗೆ ಬಂದಿತು.   ಅಪ್ಪ, ಮಗಳು ಮಂಗಳೂರಿಗೆ ಗಿರೀಶ್ ಮನೆಯ ಔತಣಕೂಟಕ್ಕೆ ಹೋದೋರು ಬರುವಾಗ ಉಪ್ಪಳ ಪೇಟೆಯಿಂದ ತಂದರು.  

" ಈಗ ತಿನ್ನಲು ಹಸಿವಿಲ್ಲ,  ನಾಳೆ ಹತ್ತು ಗಂಟೆಗೆ..." ಅನ್ನುತ್ತ ಮಗಳು ಕಂಪ್ಯೂಟರ್ ಮುಂದೆ ಕುಕ್ಕರಿಸಿದಳು.

" ಊಟಕ್ಕೇನೇನು ಸ್ಪೆಶಲ್ ಇತ್ತೇ ಅಲ್ಲಿ..." ಕೇಳುತ್ತಿದ್ದಂತೆ

" ಹ್ಞಾಂ,  ಹೋಳಿಗೆ ಕೊಟ್ಟಿದ್ದಾಳೆ ಶೀಲಕ್ಕ..." ಬ್ಯಾಗಿನಿಂದ ಈಗ ಹೋಳಿಗೆ ಪ್ಯಾಕ್ ಹೊರ ಬಂತು.

ಬೆಳಗಾಯಿತು.   ಗಂಟೆ ಹತ್ತೂ ಆಯಿತು.   " ಇಷ್ಟು ದೊಡ್ಡದಾಗಿದೆಯಲ್ಲ,  ಅಪ್ಪನ ಹತ್ರಾನೇ ತುಂಡು ಮಾಡಿ ಕೊಡಲು ಹೇಳು ಆಯ್ತಾ " ಅಂತಂದು ಹಿತ್ತಿಲ ತೋಟದಿಂದ ನೆಲಬಸಳೆ ಚಿವುಟಿ  ತರುವಷ್ಟರಲ್ಲಿ ಅಪ್ಪ ಮಗಳು ಸೇರಿ ಬಚ್ಚಂಗಾಯಿ ಸ್ವಾಹಾ.. ಮಾಡಲು ಪ್ರಾರಂಭಿಸಿದ್ದರು.

" ತುಂಡು ಮಾಡಿ ಆಯ್ತಾ,  ಇನ್ನು ನಾನೇ ಹೋಳು ಮಾಡಿ ತಟ್ಟೆಗೆ ಹಾಕಿ ಕೊಡ್ತೇನೆ "

" ಏನೂ ಬೇಡಾ,  ಹಾಗೇ ತಿಂತೇವೆ "

ನನಗಾಗಿ ಇಟ್ಟಿದ್ದ ತುಂಡುಗಳ ಕೆಂಪಾದ ಭಾಗವನ್ನು ಅಚ್ಚುಕಟ್ಟಾಗಿ ಕತ್ತರಿಸಿ ತಿಂದಾಯ್ತು.                          

" ತಿಂದುಳಿದದ್ದು ಆಚೆ ಎಸಿಯೋದು " ಅಂತೀರಾ,

ಛೆ, ಛೆ ಬೇಡ,  ಲಕ್ಷಣವಾಗಿ ಹಸಿರು ಸಿಪ್ಪೆಯನ್ನು ಚಾಕುವಿನಲ್ಲಿ ಹೆರೆದು ತೆಗೆಯಿರಿ.   ಇನ್ನುಳಿದ ಬಿಳಿ ಭಾಗವನ್ನು ತುರಿಮಣೆಯಲ್ಲಿ ತುರಿದು,  ಉಪ್ಪು ಬೆರೆಸಿ ಅಗತ್ಯವಿದ್ದಷ್ಟು ಮೊಸರು ಎರೆದು ಇಂಗು ಹಾಕಿದ ಬೇವಿನಸೊಪ್ಪಿನ ಒಗ್ಗರಣೆ ಕೊಟ್ಟು ಬಿಟ್ಟರಾಯ್ತು.  ಮೊಸರು ಗೊಜ್ಜು ತಯಾರಾಗಿ ಬಿಟ್ಟಿತು,  ನಾನಂತೂ ಮಾಡದೆ ಬಿಡ್ತೇನಾ,

  " ತುಂಬಾ ಚೆನ್ನಾಗಿದೆ "  ಶಿಫಾರಸೂ ಸಿಕ್ಕಿತು. 

ಸಂಜೆ ವೇಳೆಗೆ ಇನ್ನಷ್ಟು ಬಚ್ಚಗಾಯಿ ಓಡುಗಳು ನನ್ನ ಮುಂದೆ ಕುಳಿತವು.   " ಇದನ್ನೇ ದೋಸೆ ಮಾಡೂದು ಬೇಡ,  ನಂಗೆ ಉದ್ದಿನದೋಸೆಯೇ ಆಗ್ಬೇಕು " ಸುಪ್ರೀಂ ಕೋರ್ಟು ಆರ್ಡ ವಾಣಿ ತೇಲಿ ಬಂದಿತು.

" ಆಯ್ತೂ ..."

ಒಂದು ಬಟ್ಟಲು ತುಂಬಾ ತುರಿದಿಟ್ಟುಕೊಳ್ಳಿ.   
ಎರಡು ಕಪ್ ಅಕ್ಕಿಗೆ ಒಂದು ಕಪ್ ಉದ್ದು ಹಾಕ್ತೀರಾ,  ಅಷ್ಟು ಬೇಡ.  ಅರ್ಧ ಕಪ್ ಉದ್ದು ಸಾಕು.  ಎರಡು ಚಮಚಾ ಮೆಂತ್ಯ ಇರಲಿ.
ಇವನ್ನೆಲ್ಲ ತುರಿದಿಟ್ಟ ಬಚ್ಚಂಗಾಯಿ ತುರಿಯೊಂದಿಗೆ ಸೇರಿಸಿ ನುಣ್ಣಗೆ ಅರೆದು ಮುಚ್ಚಿಡಿ.  ಅರೆಯುವಾಗ ಬೇರೆ ನೀರು ಹಾಕಬೇಕಾಗಿಯೇ ಇಲ್ಲ.  ಮಾರನೇ ದಿನ ಸೊಗಸಾದ ಉದ್ದಿನ ದೋಸೆ ಮಾಡಬಹುದು.   ಕೊತ್ತಂಬರೀ ಸೊಪ್ಪಿನ ಚಟ್ನಿ ಜತೆಗಿರಲಿ.

ಉದ್ದು ಹಾಕದೆಯೂ ಮಾಡಬಹುದು.   ಕೇವಲ  ಅಕ್ಕಿಯೊಂದಿಗೆ  ಇದರ ತುರಿ ಹಾಕಿ  ಅರೆದು  ತೆಳ್ಳವು  ( ನೀರು ದೋಸೆ )  ಎರೆದರಾಯಿತು.  ಹುಳಿ ಬರಿಸುವ ಅಗತ್ಯವಿಲ್ಲ,  ಇದು ದಿಢೀರ್ ದೋಸೆ.

ಇನ್ನಷ್ಟು  ಬಚ್ಚಂಗಾಯಿ ಸಿಪ್ಪೆಗಳು ಬಾಕಿಯಿದ್ದವು.   ಅವನ್ನೂ  ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಪಲ್ಯ ಮಾಡಿಯೂ ಆಯ್ತು.

ಪಲ್ಯಕ್ಕೆ ಬೇಯಿಸುವ ಮೊದಲು ಅರ್ಧ ಕಪ್ ತಗೆದಿರಿಸಿ,  ಎರಡು ಟೊಮ್ಯಾಟೋ,  ಒಂದು ಹಸಿಮೆಣಸು,  ಚಿಕ್ಕ ತುಂಡು ಶುಂಠಿ ಸಣ್ಣಗೆ ಹಚ್ಚಿಟ್ಟು,  ಉಪ್ಪು ಬೆರೆಸಿ ಸಲಾಡ್ ಕೂಡಾ ಮಾಡಿಕೊಳ್ಳಿ.

ಪಾಯಸ,  ಇಡ್ಲಿ,  ಕಡುಬು,  ಗುಳಿಯಪ್ಪ ಇತ್ಯಾದಿಗಳನ್ನು ಮಾಡಬಹುದಾಗಿತ್ತು.   ಬಚ್ಚಂಗಾಯಿ  ಮುಗಿದಿತ್ತು

.



ನಮ್ಮೂರಿನ ಬಚ್ಚಂಗಾಯಿ ಅಖಂಡ ಕರ್ನಾಟಕ ವ್ಯಾಪ್ತಿಯಲ್ಲಿ ಕಲ್ಲಂಗಡಿ ಹಣ್ಣು ಎಂದೂ ಜನಪ್ರಿಯತೆ ಗಳಿಸಿದೆ.  ಸಸ್ಯಶಾಸ್ತ್ರೀಯವಾಗಿ Citrullus lanatus.  ದೊಡ್ಡ ಗಾತ್ರದ ಇದರ ಕೌಟುಂಬಿಕ ವ್ಯಾಪ್ತಿಯೂ Cucurbitaceae  ಸಾಕಷ್ಟು ದೊಡ್ಡದಿದೆ,   ಬೂದುಗುಂಬಳಕಾಯಿ,  ಚೀನೀಕಾಯಿ ಇತ್ಯಾದಿ ...  ಇನ್ನಿತರ ಫಲಗಳಂತೆ ಬಚ್ಚಂಗಾಯಿ ಕೂಡಾ ವಿಟಮಿನ್ C ಯಿಂದ ಸಮೃದ್ಧವಾಗಿದೆ.  ಶೇಕಡಾವಾರು 92 ಪಾಲು ನೀರಿನಂಶ ಇರುವುದರಿಂದ ಆಂಗ್ಲ ಭಾಷೆಯಲ್ಲಿ watermelon ಎಂದೇ ಖ್ಯಾತವಾಗಿದೆ.  6 ಶೇಕಡಾ  ಸಕ್ಕರೆಯೂ ಈ  ಫಲದಲ್ಲಿದೆ.   ಬಿಸಿಲಿನ ತಾಪದಿಂದ ಬಳಲಿದವರಿಗೆ ಇದರ ನೋಟ ಮಾತ್ರದಿಂದಲೇ  ಬಳಲಿಕೆ ದೂರವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ.   ದಕ್ಷಿಣ ಆಫ್ರಿಕಾ ಮೂಲಸ್ಥಾನವಾಗಿರುವ ಈ ಹಣ್ಣು ಅಲ್ಲಿನ ಒಂದು ಕಾಡು ಬೆಳೆ.


ಟಿಪ್ಪಣಿ:  ಓಡು ಎಂಬ ಶಬ್ದಾರ್ಥ =  ಕುಂಬಳಕಾಯಿ ತಿರುಳು,  ಹೋಳು ಕತ್ತರಿಸಿ ತೆಗೆದು ಉಳಿದ ಸಿಪ್ಪೆಯನ್ನು ಓಡು ಎಂದು ಹೇಳುವ ಕ್ರಮ ನಮ್ಮ ಊರಿನ ಆಡುನುಡಿಯಲ್ಲಿದೆ.   ಕುಂಬಳ ಓಡು ಪಲ್ಯಕ್ಕೆಂದೇ ಸಣ್ಣಗೆ ಹಚ್ಚಿಟ್ಟು ಮಾಡುವುದು ಸಾಂಪ್ರದಾಯಿಕ ವಿಧಾನ.  ಕೆಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ತಯಾರಿಸುವುದೂ ಇದೆ.

Posted via DraftCraft app


ಟಿಪ್ಪಣಿ:   24/ 4/ 2016 ರಂದು ಹೊಸ ಚಿತ್ರದೊಂದಿಗೆ ವಿಸ್ತರಿಸಿ ಬರೆದಿದ್ದೇನೆ.

                                                                         ಬಚ್ಚಂಗಾಯ್ ಪಾನಕ


ಬೇಸಿಗೆಯ ಔತಣಕೂಟ,  ಉಪನಯನಕ್ಕೆ ಹೋಗಿದ್ದೆವು.   ಇಲ್ಲೇ ಹತ್ತಿರ,   ಬಾಯಾರು ಶ್ರೀ ಪಂಚಲಿಂಗೇಶ್ವರ ದೇಗುಲದ ಸಭಾಂಗಣದಲ್ಲಿ ಊರ ಮಂದಿ,  ನೆಂಟರಿಷ್ಟರು ಎಲ್ಲರೂ ತುಂಬಿ ತುಳುಕುತ್ತಿದ್ದಂತೆ ಉಪನಯನದ ಧಾರ್ಮಿಕ ವಿಧಿವಿಧಾನಗಳನ್ನು ಅವಲೋಕಿಸುತ್ತ,  ಅಲ್ಲೊಂದು ಸಂಗೀತ ಕಛೇರಿಯೂ ಏರ್ಪಾಡಾಗಿತ್ತು.

ಈ ಎಲ್ಲ ಸಂಭ್ರಮಗಳ ಎಡೆಯಲ್ಲಿ ಮಹಿಳೆಯರ ಪಟ್ಟೇ ಸೀರೆಗಳ ಹಾರಾಟ,  ಮಲ್ಲಿಗೆಯ ಮಾಲೆಗಳ ಮೇಲಾಟ,  ಮಟ ಬಿಸಿಲಿಗೆ ಬೆವರಧಾರೆಯಾಟ,  " ಒಂದು ಆಸರಿಗೆ ಕುಡಿಯದಿದ್ದರಾಗದು. "
" ಎದುರುಗಡೆ ಇತ್ತಲ್ಲ,  ಬರುವಾಗ್ಲೇ ಕುಡಿಯೂದಲ್ವ? "  ಅಂದ್ರು ಗೌರತ್ತೆ.
" ಹೌದಾ, ನಾ ನೋಡ್ಲಿಲ್ಲ...  ಈಗ ಹೋಗಿಕುಡಿದು ಬರೋಣ. "  ಪಾನಕ ಇದ್ದಲ್ಲಿಗೆ ಎದ್ದು ಹೋದೆವು.
" ವಾಹ್... ಬಚ್ಚಂಗಾಯ್ ಪಾನಕ! "  ಎರಡೆರಡು ಲೋಟ ಶರಬತ್ತು ಕುಡಿದು ತಟ್ಟೆಯಲ್ಲಿಡುತ್ತಿದ್ದಂತೆ ನಮ್ಮ ಸೋದರಳಿಯ ವೆಂಕಟೇಶ ಎದುರಾದ.
" ಅತ್ತೇ,  ಶರಬತ್ತು ಕುಡಿದ್ರಾ? "
" ಹ್ಞೂ,  ತುಂಬಾ ಚೆನ್ನಾಗಿತ್ತು,  ಹ್ಯಾಗೇ ಮಾಡಿದ್ದೂ... ನೋಡಿದ್ದೀಯಾ? "   ಅವನೋ ಮುನ್ನಾದಿನವೇ ಹಾಜರಾಗಿದ್ದ,  ಸರ್ವಸುಧರಿಕೆಗಳನ್ನೂ ನಿಭಾಯಿಸಬೇಡ್ವೇ...
ಅದಾ,  ಬಚ್ಚಂಗಾಯ್ ಸಿಪ್ಪೆ,  ಬೀಜ ತೆಗೆದು ಕೆಂಪು ತಿರುಳನ್ನು ಮಿಕ್ಸೀಯಲ್ಲಿ ತಿರುಗಿಸ್ಬೇಕು,  ನೀರು ಹಾಕ್ಬೇಕೂ,   ಸಕ್ರೆಯೂ ಬೀಳ್ಬೇಕೂ..."
" ಅಷ್ಟೇಯಾ...  "
" ಅತ್ತೇ,  ಈ ಪಾನಕಕ್ಕೆ ಕಾಳುಮೆಣಸಿನ ಹುಡಿ ಹಾಕ್ಲೇ ಬೇಕು,  ಉಪ್ಪೂ ಹಾಕ್ಬೇಕು. "
" ಹಾಗ್ಹೇಳು...  "  ಇಲ್ಲಿದೆ ಒಳಗುಟ್ಟು.
" ಶುಂಠಿ ಹಾಕಿದ್ರೂ ಆದೀತು. "
" ಹ್ಞೂಂ... ಕಬ್ಬಿನ ಹಾಲಿಗೆ ಶುಂಠಿ,  ಇದಕ್ಕೆ ಕಾಳುಮೆಣಸು ಅನ್ನೂ. "
"ಬಚ್ಚಂಗಾಯಿ ಶೀತ ಅಲ್ವೇ,  ಕಾಳುಮೆಣಸು ಶೀತಕ್ಕೆ ಪರಿಹಾರ "  ಅಂದ್ರು ಗೌರತ್ತೆ.


                
  


Wednesday 5 December 2012

" ಮಜ್ಜಿಗೆಯೊಳಗಿನ ಬೆಣ್ಣೆಯಂತೇ ......"



ಸಂಸ್ಕೃತದಲ್ಲಿ ' ಘೃತ ' ಎಂದರೆ ತುಪ್ಪ ಎಂದರ್ಥ. ಇಂಗ್ಲಿಷ್ ನ ghee ಶಬ್ದವೂ ಸಂಸ್ಕೃತದಿಂದಲೇ ಬಂದಿದೆ. ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲೇ ತುಪ್ಪ ಇರಬೇಕಾದರೆ ತುಪ್ಪದ ಇತಿಹಾಸ ವೇದಕಾಲದಿಂದ ಆರಂಭವೆಂದು ಚಿಟಿಕೆ ಹೊಡೆಯುವಷ್ಟರಲ್ಲೇ ತಿಳಿದುಕೊಳ್ಳಬಹುದಾಗಿದೆ. ಇತಿಹಾಸ ತಿಳಿಸುವಂತೆ ವೇದಕಾಲವು ಹೈನುಗಾರಿಕೆಯನ್ನೇ ಪ್ರಧಾನ ವೃತ್ತಿಯನ್ನಾಗಿ ಸ್ವೀಕರಿಸಿತ್ತು. ಇಂತಿಷ್ಟು ಗೋವುಗಳ ಒಡೆಯನೆಂಬುವಲ್ಲಿ ಒಬ್ಬ ವ್ಯಕ್ತಿಯ ಸ್ಥಾನಮಾನ ನಿರ್ಣಯದ ಕಾಲವಾಗಿತ್ತು ಅಂದು. ವೈದಿಕ ಸಾಹಿತ್ಯವೂ ಶ್ರೀಕೃಷ್ಣನನ್ನು ಗೋಪಾಲಕನನ್ನಾಗಿ ಸ್ವೀಕರಿಸಿದೆ.

ದಾಸ ಸಾಹಿತ್ಯದಲ್ಲಿಯೂ ಪುರಂದರದಾಸರು ಲಕ್ಷ್ಮಿಯನ್ನು " ಮಜ್ಜಿಗೆಯೊಳಗಿನ ಬೆಣ್ಣೆಯಂತೇ...." ಎಂದು ಕೊಂಡಾಡಿದ್ದಾರೆ. ಲಕ್ಷ್ಮಿ ಸಮುದ್ರಮಥನದಿಂದ ಬಂದವಳು ಎಂದು ಪುರಾಣಗಳು ಹೇಳುತ್ತವೆ.
ಹಾಲಿನ ಸಮುದ್ರದಲ್ಲಿ ಮಂದರ ಪರ್ವತವನ್ನು ಕಡಗೋಲಾಗಿ ನಿಲ್ಲಿಸಿ, ವಾಸುಕಿ ಎಂಬ ಮಹಾಸರ್ಪವನ್ನು ಅದಕ್ಕೆ ಸುತ್ತಿ ನಡೆಸಿದ ಸಮುದ್ರಮಥನವನ್ನು ನಮ್ಮಂಥ ಜನಸಾಮಾನ್ಯರು ಕಾಣೆವು. ಮೊಸರು ಕಡೆದಾಗ ಮಜ್ಜಿಗೆಯೊಳಗೆ ಬೆಣ್ಣೆ ತೇಲಿ ಬರುವುದೊಂದು ಗೊತ್ತು. ಶ್ರೇಷ್ಠ ದರ್ಜೆಯ ತುಪ್ಪವೂ ಗೊತ್ತು. ಇಂತಹ ಘನವಾದ ತುಪ್ಪವನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯೊಂದಿಗೆ ' ಸಕ್ಕರೆ ತುಪ್ಪ ಕಾಲುವೆ ಹರಿಸಿ...ಶುಕ್ರವಾರದ ಪೂಜೆಯ ವೇಳೆಗೆ...ಬಾರಮ್ಮ' ಎಂದು ಸಮೀಕರಿಸಿದ್ದಾರೆ ನಮ್ಮ ದಾಸವರೇಣ್ಯರು. ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಬೇಕಾದರೂ ಶುಕ್ರವಾರದ ದಿನವೇ ಆಗಬೇಕು ನಮ್ಮ ಸಂಪ್ರದಾಯ ಶರಣರಿಗೆ.

ಇಂತಿಪ್ಪ ಬೆಣ್ಣೆ ಪುರಾಣವನ್ನು ಯಾಕೆ ಹೇಳ್ತಾ ಇದ್ದೀನಂದ್ರೆ ನಾನು ಮದುವೆಯಾಗಿ ಬಂದ ಈ ಮನೆಯಲ್ಲಿ ಕರೆಯುವ ಹಸುಗಳೂ, ಎಮ್ಮೆಗಳೂ ಜೊತೆಗೊಂದು ಆಡು ಕೂಡಾ ಇತ್ತು. ವಸ್ತುಶಃ ಹಾಲಿನ ಹೊಳೆಯೇ ಹರಿಯುತ್ತಿತ್ತು. ಹಸುವಿನ ಹಾಲು, ಎಮ್ಮೆ ಹಾಲು ಒಟ್ಟಿಗೇ ಹಾಕಿ ಕಾಯಿಸುವಂತಿಲ್ಲ. ಪ್ರತ್ಯಪ್ರತ್ಯೇಕವಾಗಿ ಕಾಯಿಸಿ, ಬೇರೆ ಬೇರೆ ಮಜ್ಜಿಗೆ, ಮೊಸರು, ತುಪ್ಪ ಮಾಡಿ ಇಡುವ ಸಂಪ್ರದಾಯ. ದನದ ಹಾಲು, ತುಪ್ಪ ಶ್ರೇಷ್ಠ ದರ್ಜೆಯದೆಂದು, ಪೂಜೆ, ಹೋಮ, ಹವನಗಳಿಗೆ ಮೀಸಲು. ಎಮ್ಮೆ ಹಾಲು ಎರಡನೇ ದರ್ಜೆಯದು. ಆಡಿನ ಹಾಲು ನಮ್ಮತ್ತೆಯವರ ಕಾಫಿ, ಚಹಾಗಳಿಗೆ ಆಗಿ ಉಳಿದದ್ದು ಮುದ್ದಿನ ಬೆಕ್ಕುಗಳಿಗೆ. ಇಷ್ಟೆಲ್ಲಾ ಹಾಲಿನ ಸಮೃದ್ಧಿ ಇರುವಾಗ ನನ್ನತ್ತೆ ಯಾಕಾಗಿ ಆಡನ್ನೂ ಸಾಕುತ್ತಿದ್ದರು ಎಂದು ಹುಬ್ಬೇರಿಸಿ ಪ್ರಶ್ನೆ ಕೇಳಿಯೇ ಕೇಳ್ತೀರಾ. ಹೊಸ ಸೊಸೆಯಾಗಿ ಬಂದಿದ್ದ ನಾನೂ ಮನೆಯೊಳಗೆ ಮುದ್ದಾದ ಆಡನ್ನು ಕಂಡು ಕಣ್ ಕಣ್ ಬಿಟ್ಟಿದ್ದೆ. ಆಗ್ಗಿದಾಗ್ಗೆ ಬಾಧಿಸುತ್ತಿದ್ದ ಅಸ್ತಮಾ ಖಾಯಿಲೆಯ ನಿಯಂತ್ರಣಕ್ಕಾಗಿ ನನ್ನತ್ತೆ ಆಡಿನ ಹಾಲಿನ ಪಥ್ಯ ಮಾಡುತ್ತಿದ್ದರು ಅಷ್ಟೇ.

ಹಾಲು ಮಜ್ಜಿಗೆ ವಹಿವಾಟು ಆಗ ನನಗೆ ತಿಳಿದಿರುವುದಾದರೂ ಹೇಗೆ ? ಎಲ್ಲವನ್ನೂ ಅತ್ತೆಯೇ ಹೇಳಿ ಕೊಟ್ಟಿದ್ದು. ಅಚ್ಚುಕಟ್ಟಾಗಿ ತುಪ್ಪ ಹೀಗೆ ತಯಾರಿಸೋಣ:




ಹಾಲು ಕೆನೆ ಕಟ್ಟುವ ತನಕ ಮಂದಾಗ್ನಿಯಲ್ಲಿ ಕಾಯಿಸಿ. ಕೆನೆ ಕಟ್ಟಿದ ಹಾಲು ಚೆನ್ನಾಗಿ ತಣಿದ ಮೇಲೆ ಮುಚ್ಚಿಡಿ. ಕೆನೆಯೇ ಬೆಣ್ಣೆಯ ಮೂಲ. ಮೊಸರು ಮಾಡಬೇಕಾದರೆ ಹಾಲು ಚೆನ್ನಾಗಿ ತಣಿದಿರಬೇಕು. ಅಗತ್ಯವಿದ್ದಷ್ಟೇ ಮಜ್ಜಿಗೆ ಅಥವಾ ಮೊಸರು ಒಂದು ಚಿಕ್ಕ ಸೌಟಿನಲ್ಲಿ ತಣಿದ ಹಾಲಿಗೆ ಎರೆದರೆ ಮೊಸರು ಎಂಟು ಗಂಟೆಯೊಳಗೆ ಸಿದ್ಧ. ಉಪಯೋಗಕ್ಕೆ ಬೇಕಾದಷ್ಟೇ ಮೊಸರನ್ನು ಪ್ರತ್ಯೇಕವಾಗಿ ಮಾಡಿಕೊಳ್ಳಿ. ಉಳಿದ ಹಾಲನ್ನು ಕೆನೆಸಮೇತವಾಗಿ ಮೊಸರು ಮಾಡಿ.

ಕೈಯಲ್ಲಿ ಹಗ್ಗ ಹಿಡಿದು ಮೊಸರು ಕಡೆಯುವ ಶ್ರಮ ಈಗ ಇಲ್ಲ. ಎಲ್ಲ ಕೆಲಸಗಳಿಗೂ ಯಂತ್ರಗಳಿವೆ. ಮಿಕ್ಸಿಯಲ್ಲೇ ತಿರುಗಿಸಿದರಾಯಿತು. ಸಂಗ್ರಹಿಸಿದ ಬೆಣ್ಣೆಯನ್ನು ಮಜ್ಜಿಗೆಯಲ್ಲೇ ಇಡಬೇಕು. ಬೆಣ್ಣೆಯನ್ನು ಪ್ರತಿದಿನವೂ ಹೊಸ ಮಜ್ಜಿಗೆಗೆ ರವಾನಿಸುತ್ತಿದ್ದರೆ ಮಾತ್ರ ಸುವಾಸನಾಭರಿತ ತುಪ್ಪ ಪಡೆಯಲು ಸಾಧ್ಯ. ನಾಲ್ಕನೇ ದಿನ ಈ ಬೆಣ್ಣೆಮುದ್ದೆಯನ್ನು ಮಜ್ಜಿಗೆಯಿಂದ ತೆಗೆದು ಚೆನ್ನಾಗಿ ತೊಳೆಯಿರಿ. ತೊಳೆಯುವ ಮೊದಲು ಅಂಗೈಯನ್ನು ಬಿಸಿನೀರಿನಲ್ಲಿ ಅದ್ದಿ ತಗೆಯಿರಿ, ಇಲ್ಲಾಂದ್ರೆ ಬೆಣ್ಣೆ ಕೈಗಳಿಗೆ ಹತ್ತಿಕೊಂಡೀತು. ಏಳೆಂಟು ಬಾರಿ ನೀರು ಬದಲಾಯಿಸಿ ತೊಳೆದು ಮಜ್ಜಿಗೆಯ ವಾಸನೆ ಹೋಗಲಾಡಿಸಿ. ಶುಕ್ರವಾರ ಹಾಗೂ ಮಂಗಳವಾರದಂದೇ ದನದ ತುಪ್ಪ ಕಾಯಿಸಬೇಕೆಂಬ ಸಂಪ್ರದಾಯ ಇದೆ. ಈಗ ನಾವು ತರುವ ಪ್ಯಾಕೆಟ್ ಹಾಲು ಇಂತಹ ರೂಲ್ಸ್ ಕೇಳುವುದಿಲ್ಲ ಬಿಡಿ.

ಬೆಣ್ಣೆಯನ್ನು ಉರಿಯಲ್ಲಿಡಿ. ಕುದಿಯುತ್ತಿದ್ದಂತೆ ಉರಿ ತಗ್ಗಿಸಿ. ನೀರಿನಂಶ ಆರಿದೊಡನೆ ಕುದಿಯುವ ಸದ್ದು ನಿಂತು ಸುವಾಸನೆ ಬರುತ್ತಿದ್ದಂತೆ ಕೆಳಗಿಳಿಸಿ, ಆರಲು ಬಿಡಿ. ತಣಿದ ಮೇಲೆ ಶುದ್ಧವಾದ ಒಣ ಜಾಡಿಗೆ ಎರೆಯಿರಿ.




ಇಂತಹ ಘನವಾದ ತುಪ್ಪದಿಂದ ಒಂದು ವಿಶೇಷವಾದ ಖಾದ್ಯ ತಯಾರಿಸೋಣ:
ಅಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೇಹಣ್ಣು ಕಚ್ಛಾವಸ್ತುವಾಗಿ ತಯಾರಿಸುವ ನೆಯ್ಯಪ್ಪಂ ನಮ್ಮ ದೇವಸ್ಥಾನಗಳಲ್ಲಿ ಪ್ರಸಾದರೂಪವಾಗಿ ವಿತರಣೆಯಾಗುವ ಸಿಹಿಭಕ್ಷ್ಯ. ಆ ಸಾಂಪ್ರದಾಯಿಕ ವಿಧಾನದ ಅನುಸರಣೆಯಿಲ್ಲದೇ ಸುಲಭವಾಗಿ ಮಾಡೋಣ.

ಹೇಗೂ ಮುಜಾನೆಗೊಂದು ತಿಂಡಿ ತಯಾರಿಸುತ್ತೀರಿ. ಅದು ನೀರುದೋಸೆಯಾಗಿರಲಿ. ದೋಸೆಹಿಟ್ಟು ಎರಡು ಲೋಟದಷ್ಟು ಉಳಿದಿದೆ, ಅದೇ ಸಾಕು.
7-8 ಖರ್ಜೂರಗಳನ್ನು ಬೀಜ ಬಿಡಿಸಿ ಮಿಕ್ಸಿಯಲ್ಲಿ ಪುಡಿ ಪುಡಿ ಮಾಡಿಕೊಳ್ಳಿ. ಖರ್ಜೂರ ಸಿಹಿಯಾಗಿರುವುದರಿಂದ ಹೆಚ್ಚು ಬೆಲ್ಲ ಬೇಡ.
ಬೆಲ್ಲವನ್ನು ಹುಡಿ ಮಾಡಿ ಬಾಣಲೆಗೆ ಹಾಕಿ, ಸ್ವಲ್ಪ ನೀರುದೋಸೆ ಹಿಟ್ಟನ್ನೇ ಎರೆದು ಬೆಲ್ಲ ಕರಗಿಸಿ. ಮಂದಾಗ್ನಿಯಲ್ಲಿ ಸೌಟಿನಿಂದ ಕೆದಕುತ್ತಾ, ಖರ್ಜೂರದ ಹುಡಿಯನ್ನೂ ಹಾಕಿ, ಉಳಿದ ದೋಸೆಹಿಟ್ಟನ್ನೂ ಎರೆಯಿರಿ.
ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಾ, ತೆಳ್ಳಗಿದ್ದ ಹಿಟ್ಟು ದಪ್ಪವಾದೊಡನೆ ಕೆಳಗಿಳಿಸಿ. ಅಲ್ಲಲ್ಲಿ ದಪ್ಪಗಟ್ಟಿದ ಹಿಟ್ಟನ್ನು ಸೌಟಿನಲ್ಲಿ ಕೆದಕಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ. ಈಗ ಅರೆ ಬೆಂದ ಹಿಟ್ಟು ತಯಾರಾಯಿತು.
ಅಪ್ಪದ ಗುಳಿಗಳಿಗೆ ತುಪ್ಪ ಎರೆದು ಬೆಂಕಿಯ ಮೇಲಿಡಿ. ತುಪ್ಪದ ಶಾಖದಲ್ಲೇ ಇದು ಬೇಯುವ ಕಾರಣ ಗುಳಿಗಳಿಗೆ ಸ್ವಲ್ಪ ತುಪ್ಪದ ಪಸೆ ಮಾಡಿದರೆ ಸಾಲದು, ಚೆನ್ನಾಗಿ ಎರಡು ಚಮಚದಷ್ಟು ತುಪ್ಪ ಬೀಳಲಿ. ಚಿಕ್ಕ ಸೌಟಿನಲ್ಲಿ ತುಪ್ಪದ ಬಿಸಿಯೇರಿದ ಗುಳಿಗಳಿಗೆ ಹಿಟ್ಟಿನ ಮುದ್ದೆಯನ್ನು ಎರೆಯಿರಿ. ಬೇಯುತ್ತಿದ್ದಂತೆ ತಳ ಬಿಟ್ಟು ಬರುವ ಅಪ್ಪಗಳನ್ನು ಕವುಚಿ ಹಾಕಿ. ಎರಡೂ ಬದಿ ಕೆಂಪಗಾದ ಮೇಲೆ ತೆಗೆಯಿರಿ.

ಸಂಜೆಯ ಟೀ, ಕಾಫೀಯೊಂದಿಗೆ ಸವಿಯಿರಿ. ಪ್ರಾಯೋಗಿಕವಾಗಿ ತಯಾರಿಸಿದ ಈ ವಿಧಾನದ ನೆಯ್ಯಪ್ಪಂ ಈಗ ನನ್ನ ಮಗಳ ಅಚ್ಚುಮೆಚ್ಚಿನದು. " ಇನ್ನು ಯಾವಾಗಲೂ ಹೀಗೇ ಮಾಡಮ್ಮ" ಅಂದಿದ್ದಾಳೆ.

ನಮ್ಮಜ್ಜೀ ಕಾಲದಲ್ಲಿ ತುಪ್ಪ ಹಾಗೂ ಜೇನು ಸೇರಿಸಿ ಹಾಲುಹಸುಳೆಗಳಿಗೆ ದಿನಂಪ್ರತಿ ಚಮಚಾದಲ್ಲಿ ಕುಡಿಸುವ ಪದ್ಧತಿ ಇತ್ತು. ಬಸುರಿ ಬಾಣಂತಿಯರಿಗೆ ತುಪ್ಪ ಹಾಕಿಯೇ ಅನ್ನ ಕಲಸಿ ತಿನ್ನುವ ಸಂಪ್ರದಾಯ. ಜಠರಾಗ್ನಿಯನ್ನು ಪ್ರಚೋದಿಸಿ ಜೀರ್ಣಕ್ರಿಯೆ ಸರಾಗವಾಗಿ ನಡೆಸುವ ಶಕ್ತಿ ಇದರಲ್ಲಿದೆ. ಅಡುಗೆಗೆ ಬಳಸುವ ಇತರ ವನಸ್ಪತಿ ಎಣ್ಣೆಗಳು ಹೆಚ್ಚು ತಾಪವನ್ನು ತಾಳಿಕೊಳ್ಳುವ ಶಕ್ತಿ ಹೊಂದಿಲ್ಲ. ದೇವತಾ ಪೂಜಾವಿಧಿಗಳಲ್ಲಿ ಪ್ರಸಾದರೂಪವಾಗಿ ವಿತರಣೆಯಾಗುವ ಪಂಚಾಮೃತದಲ್ಲಿ ಹಾಲು, ಜೇನು, ಸಕ್ಕರೆ, ಮೊಸರುಗಳೊಂದಿಗೆ ತುಪ್ಪವೂ ಇರಬೇಕು. ಹೋಮ ಹವನಗಳಲ್ಲಿ ಅಗ್ನಿಯನ್ನು ಉದ್ದೀಪನಗಳಿಸಲು ಬಳಸುವ ಹಸುವಿನ ತುಪ್ಪದ ಧೂಮವು ವಾತಾವರಣ ಶುದ್ಧಿಕಾರಕವೆಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ, ತನ್ಮೂಲಕ ಓಝೋನ್ ವಲಯದ ರಕ್ಷಣೆ. ಕಲುಷಿತ ಪ್ರಕೃತಿಯನ್ನು ಶುದ್ಧೀಕರಿಸುವ ಶಕ್ತಿ ಈ ತುಪ್ಪಕ್ಕೆ ಇದೆ. ಅಂದಮೇಲೆ ಪ್ರಕೃತಿಯ ಒಂದು ಭಾಗವೇ ಆಗಿರುವ ಮನುಷ್ಯ ಶರೀರಕ್ಕೆ ತುಪ್ಪದ ಸೇವನೆ ಹಿತವೆಂಬುದರಲ್ಲಿ ವಿವಾದಕ್ಕೆಡೆಯಿಲ್ಲ. ಹಸುವಿನ ತುಪ್ಪ ಹಳೆಯದಾದರೂ ಬೆಲೆ ಬಾಳುವಂತಹುದು. ಪ್ರಾಚೀನ ವೈದ್ಯಶಾಸ್ತ್ರವಾಗಿರುವ ಆಯುರ್ವೇದ ಕ್ರಮ ರೀತ್ಯಾ ತಯಾರಾಗುವ ಲೇಹ್ಯಗಳಲ್ಲಿ ತುಪ್ಪ ಒಂದು ಪ್ರಮುಖ ಆಕರ ವಸ್ತು ಎಂಬುದನ್ನು ಮರೆಯದಿರೋಣ.



ಟಿಪ್ಪಣಿ:  27 / 11 / 2016 ರಂದು ಮುಂದುವರಿದ ಬರಹ.


ಮೊಸರನ್ನು ಕಡೆದು ಬೆಣ್ಣೆ ತೆಗೆದಿದೆ,  ತುಪ್ಪವೂ ಆಯ್ತು.   ಮನೆಯಲ್ಲಿ ಮಕ್ಕಳೂ ಇದ್ದರು.   ಸಂಜೆಯ ಟೀ ಹೊತ್ತಿಗೆ ಒಂದು ವಿಶೇಷ ತಿನಿಸು ಆಗಲೇಬೇಕು,  ನೆಯ್ಯಪ್ಪಂ ಮಾಡೋಣ.


ಘಮಘಮಿಸುವ ತುಪ್ಪವೇ ಇಲ್ಲಿ ಮುಖ್ಯವಾಗಿದೆ.


ಒಂದು ಪಾವು ಬೆಳ್ತಿಗೆ ಅಕ್ಕಿ,  ಎರಡು ಗಂಟೆ ನೆನೆದಿರಬೇಕು.

ಅರ್ಧ ಕಡಿ ತೆಂಗಿನ ತುರಿ.

ದೊಡ್ಡ ಅಚ್ಚು ಬೆಲ್ಲ,  ಸಿಹಿಗೆ ಬೇಕಾದಷ್ಟು.

ರುಚಿಗೆ ಉಪ್ಪು.

ಬಾಳೆಗೊನೆಯೂ ಹಣ್ಣಾಗಿದೆ,  ಒಂದು ಬಾಳೆಹಣ್ಣು ನುರಿದು ಇಡುವುದು.


ಅಕ್ಕಿಯನ್ನು ಚೆನ್ನಾಗಿ ತೊಳೆದು,  ಬಾಳೆಹಣ್ಣು,  ತೆಂಗಿನ ತುರಿ, ರುಚಿಗೆ ಉಪ್ಪು ಕೂಡಿಕೊಂಡು ಅರೆಯಿರಿ.

ಬೆಲ್ಲವನ್ನು ದಪ್ಪ ಬಾಣಲೆಯಲ್ಲಿ ಕರಗಿಸಿ,  ಸಾಂದ್ರವಾಗುತ್ತ ಬಂದಾಗ ರುಬ್ಬಿದ ಅಕ್ಕಿಹಿಟ್ಟನ್ನು ಎರೆದು,  ಉರಿ ಸಣ್ಣದಾಗಿಸಿ,   ಒಂದೆರಡು ಬಾರಿ ಸೌಟಾಡಿಸಿ ಕೆಳಗಿಳಿಸಿ.


ಏಲಕ್ಕಿ ಪುಡಿ ಇದ್ದರೆ ಹಾಕಬಹುದು.


ಅಪ್ಪಂ ಕಾವಲಿಯನ್ನು ಚೆನ್ನಾಗಿ ಒರೆಸಿ,  ಗುಳಿಗಳಿಗೆ ಎರಡೆರಡು ಚಮಚ ತುಪ್ಪ ಎರೆದು ಗ್ಯಾಸ್ ಸ್ಟವ್ ಮೇಲಿರಿಸಿ.  ಕಾವಲಿ ಬೆಚ್ಚಗಾದಾಗ ಗುಳಿಗಳಿಗೆ ಹಿಟ್ಟು ತುಂಬಿಸಿ,  ಎರಡೂ ಬದಿ ಬೇಯಿಸಿದಾಗ ರುಚಿಕರವಾದ ನೆಯ್ಯಪ್ಪಂ ಸಿದ್ಧ.


ಸಾಮಾನ್ಯವಾಗಿ ಕೇರಳದ ದೇವಾಲಯಗಳಲ್ಲಿ ಪ್ರಸಾದರೂಪವಾಗಿ ನೆಯ್ಯಪ್ಪಂ ಇರುತ್ತದೆ.   ದೇವತಾಪೂಜಾವಿಧಿಗಳ ಕೆಲವಾರು ಹೋಮಹವನಗಳಲ್ಲೂ ನೆಯ್ಯಪ್ಪಂ ದೇವರಿಗೆ ಮುಖ್ಯ ನೈವೇದ್ಯವಾಗಿರುತ್ತದೆ.   ವಿಶೇಷವಾಗಿ ಕಾಸರಗೋಡು ಮಧೂರು ಕ್ಷೇತ್ರದ ಅಪ್ಪಂ ಪ್ರಸಾದವು ಬಹಳ ಪ್ರಸಿದ್ಧಿಯನ್ನು ಪಡೆದಿರುವಂತದ್ದಾಗಿದೆ.


ತುಪ್ಪದಿಂದ ಮಾಡಿದಂತಹ ಈ ಸಿಹಿಭಕ್ಷ್ಯವು ಕೆಲವಾರು ದಿನ ಕೆಡದೆ ಇರಬೇಕಾದರೆ ತೆಂಗಿನ ತುರಿಯನ್ನು ಹುರಿದುಕೊಳ್ಳುವುದು ಉತ್ತಮ.


ಬಾಳೆಹಣ್ಣು ಹಾಕಿಯೂ,  ಹಾಕದೆಯೂ ಅಪ್ಪಂ ಮಾಡಬಹುದು.  ಬಾಳೆಹಣ್ಣು ಹಾಕಿದಂತಹ ತಿನಿಸು ಪ್ರತ್ಯೇಕವಾಗಿ ಉಣ್ಣಿಯಪ್ಪಂ ಎಂದು ಹೆಸರು ಪಡೆದಿದೆ.


ತುಂಬ ಹಳೆಯಕಾಲದ ಸಿಹಿಭಕ್ಷ್ಯವಾದ ನೆಯ್ಯಪ್ಪಂ ತಯಾರಿಗೆ ಜನಸಾಮಾನ್ಯರ ಬಳಕೆಗೆ ಮಣ್ಣಿನ ಕಾವಲಿಗಳೂ,  ದೇವಾಲಯಗಳಲ್ಲಿ ಕಂಚಿನ ಯಾ ತಾಮ್ರದ ಘನಗಾತ್ರದ ಕಾವಲಿಗಳೂ,  ಮೂರು ಕುಳಿಗಳಿಂದ ಪ್ರಾರಂಭವಾಗುವ ಕಾವಲಿಗಳ ಗುಳಿ ಗಾತ್ರಕ್ಕನುಗುಣವಾಗಿ ಹದಿನೈದು, ಇಪ್ಪಂತ್ತೊಂದರ ಗುಳಿಗಳ ವರೇಗೆ ಯಾ ಮತ್ತೂ ಹೆಚ್ಚು ವಿಸ್ತರಿತವಾಗಿವೆ.   ಗ್ಯಾಸ್ ಸ್ಟವ್ ಮೇಲಿರಿಸಲು ಹಿಂಡಾಲಿಯಂ ಕಾವಲಿ ಉತ್ತಮ.  ಆಧುನಿಕ ಗೃಹಿಣಿಯರಿಗೆ ನಾನ್ ಸ್ಟಿಕ್ ಅಪ್ಪಂ ತವಾ,  ಇಂಡಕ್ಷನ್ ಕುಕ್ಕಿಂಗ್ ಪ್ರಿಯರಿಗೆ ಇಂಡಕ್ಷನ್ ಬೇಸ್ ಇರುವಂತಹ ಅಪ್ಪಂ ತವಾ ಕೂಡಾ ಮಾರುಕಟ್ಟೆಯಲ್ಲಿದೆ!



   

Tuesday 27 November 2012

ಪಪ್ಪಾಯ ಹಣ್ಣು ತಿನ್ನುವ ಉಪಾಯ !





ನಮ್ಮ ಪರಿಸರದಲ್ಲಿ ಏನೂ ಕಾಸು ಖರ್ಚಿಲ್ಲದೆ ಬೆಳೆಸಬಹುದಾದ ಫಲ ಸಸ್ಯ ಪಪ್ಪಾಯಿ ಗಿಡ.   ಏನೇನೋ ಗಿಡಗಂಟಿಗಳು ಮಳೆಗಾಲದಲ್ಲಿ ಹುಲುಸಾಗಿ ಬೆಳೆಯುವ ಹಾಗೆ ಇದೂ ಕೂಡ.   ಎಲ್ಲಿಂದಲೋ ಹಕ್ಕಿಗಳು ತಂದು ಹಾಕಿದ ಬೀಜಗಳಿಂದ ವಿಧ ವಿಧ ಜಾತಿಯ ಪಪ್ಪಾಯಿ ಗಿಡಗಳು ನಮ್ಮ ಅಡಿಕೆ ತೋಟಗಳಲ್ಲಿ ಸಹಜವಾಗಿ ಇವೆ.

ತೋಟದಲ್ಲಿ ಕೃಷಿ ಕೆಲಸಗಳು ಭರಾಟೆಯಿಂದ ಸಾಗುತ್ತಿರುವಾಗ ಕೆಲಸಗಾರರಿಗೆ ಊಟದೊಂದಿಗೆ ಪುಷ್ಕಳ ಭೋಜನ ಈ ಪಪ್ಪಾಯಿ ಕಾಯಿಯಿಂದಲೇ ತಯಾರಿಸುವ ವಾಡಿಕೆ ಹಿಂದಿನಿಂದಲೇ ನಡೆದುಕೊಂಡು ಬಂದಿದೆ.   ತೋಟದೊಳಗೆ ಇರುವ ಪಪ್ಪಾಯಿ ಗಿಡಗಳು ಅಡಿಕೆ ಮರದೊಂದಿಗೆ ಸ್ಪರ್ಧೆಗಿಳಿದು,  ಎತ್ತರಕ್ಕೆ ಬೆಳೆದು,  ಕೊನೆಗೊಮ್ಮೆ ಫಲಭಾರದಿಂದ ಮುರಿದು ಬೀಳುವುದು ಮಾಮೂಲು.   ಅಂಥ ಪ್ರಸಂಗ ಬಂದಲ್ಲಿ,  ಬುಟ್ಟಿ ತುಂಬಾ ಕಾಯಿಗಳನ್ನು ಹೊತ್ತು ತರುವ ಕಲ್ಯಾಣಿ,  ಮಹದಾನಂದದಿಂದ ತಾನೂ ಮನೆಗೆ ಒಯ್ಯುವವಳೇ.   ಅದ್ಯಾಕೋ ನನ್ನ ಮಕ್ಕಳು ಈ ಹಣ್ಣನ್ನು ತಿನ್ನಲು ಒಪ್ತಾನೇ ಇರಲಿಲ್ಲ.

" ನಂಗೆ ಬೇಡಾ ಈ ಪಿಚಿ ಪಿಚಿ ಹಣ್ಣು " 

" ತಿನ್ನೂ ಕಣ್ಣಿಗೆ ಒಳ್ಳೇದು "

ಮಕ್ಕಳು ದೂರದಿಂದಲೇ ಬೇಡವೆನ್ನುವ ಹಣ್ಣನ್ನು ತಿನ್ನಿಸುವ ಉಪಾಯ ತಿಳಿಯದೇ ಹೋಯಿತು.   ಸಮಜಾಯಿಸಿ ತಿಳಿ ಹೇಳುವುದು ಕಠಿಣದ ಕೆಲಸ.   ಅರ್ಥವಾಗುವ ವಯಸ್ಸೂ ಅವರದಲ್ಲ.    ಬಲು ಮೆತ್ತನೆಯ ಹಣ್ಣು.   ಸಿಪ್ಪೆ ತೆಗೆಯ ಹೊರಟರೆ ಕೈ ಬೆರಳಿಗೇ ಗಾಯವಾಗುವ ಅಪಾಯ.   ನಾಜೂಕಿನಲ್ಲಿ ಸಿಪ್ಪೆ ತೆಗೆದು,  ಚೂರಿಯಿಂದ ಕತ್ತರಿಸಿ ಮಕ್ಕಳಿಗೆ ತಿನ್ನಿಸುವ ಸಾಹಸಕ್ಕಿಂತ ತೆಪ್ಪಗಿರುವುದೇ ಲೇಸು.


                                               <><><>           <><><>


ಈಗ ಟೀವಿ ವೀಕ್ಷಣೆಗೆ ನೂರಾರು ಮಾಧ್ಯಮಗಳಿವೆ.  ಕೇಬಲ್ ಜಾಲವಿದೆ,  DTH ಸೌಲಭ್ಯವಿದೆ.   ಆಗ ಡಿಶ್ ಆಂಟೆನಾಗಳ ಕಾಲ.   ಗ್ರಾಮೀಣ ಪ್ರದೇಶಗಳಲ್ಲಿ ಟೀವಿಯಲ್ಲಿ ನೂರಾರು ಚಾನಲ್ ಗಳನ್ನು ನೋಡಬೇಕೆಂದಿದ್ದರೆ ಡಿಜಿಟಲ್ ರಿಸೀವರ್ ಅಳವಡಿಸಿಕೊಳ್ಳಬೇಕಾಗಿತ್ತು.   ಟೀವಿ ತಾಂತ್ರಿಕತೆಯಲ್ಲಿ ಪರಿಣತರಾದ ನಮ್ಮವರ ಮಾರ್ಗದರ್ಶನ ಪಡೆಯಲು ಊರಿನ ಹತ್ತೂ ಮಂದಿ ಮನೆಗೆ ಬರುತ್ತಿದ್ದರು.

ಒಮ್ಮೆ ಹೀಗಾಯಿತು,    ಆಗಿನ್ನೂ ಪ್ರೈಮರಿ ಶಾಲಾ ವಿದ್ಯಾರ್ಥಿಯಾಗಿದ್ದ ನನ್ನ ಮಗ ರಸೀವರ್ ಗಳಲ್ಲಿ ಟೀವಿ ಚಾನಲ್ ಲಿಸ್ಟ್ ಫೀಡ್ ಮಾಡುವುದರಲ್ಲಿ ನಿಷ್ಣಾತನಾಗಿದ್ದ.   ಮನೆಗೆ ಬರುತ್ತಿದ್ದ ಹಲವರು ಇವನ ಮೂಲಕವೇ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು.   ಚಿಕ್ಕ ಹುಡುಗನಿಗೆ ವಿವಿಧ ಗಿಫ್ಟುಗಳೂ ಸಿಗ್ತಾ ಇತ್ತು.   ಹಾಗೆ ಅವನ ಆತ್ಮೀಯ ವರ್ಗಕ್ಕೆ ಸೇರಿದ ಪಿದಮಲೆ ಜಯರಾಮಣ್ಣ ಒಂದು ಬಾರಿ ಬರುವಾಗ ಮನೆಯಲ್ಲೇ ಬೆಳೆದ ಪಪ್ಪಾಯಿ ತಂದರು.   

" ತುಂಬಾ ಸಿಹೀದು,  ಕೆಂಪು ತಿರುಳಿಂದು,  ಹಣ್ಣು ಮಾಡಿ ತಿನ್ನು ಆಯ್ತಾ "  ಎಂದು ತಿಳಿಸಿ ಹೋದರು.

ಭಾರೀ ಗಾತ್ರದ ಆ ಕಾಯಿ ಹಣ್ಣಾದೊಡನೆ ಕತ್ತರಿಸಿ ಹೋಳುಗಳನ್ನು ತಟ್ಟೆಯಲ್ಲಿ ಹಾಕಿ ಮಗನ ಕೈಗಿತ್ತೆ.

" ಇಷ್ಟು ಕೆಂಪಗಿರೋ ಪಪ್ಪಾಯಿ ಕಂಡೇ ಇಲ್ಲ "  ಎನ್ನುತ್ತ ಅಪ್ಪ ಮತ್ತು ಮಕ್ಕಳು ತಟ್ಟೆ ಖಾಲಿ ಮಾಡಿದರು.

" ಬೀಜ ಹಾಕಿ ಸಸಿ ಮಾಡೋಣ "  ಮಗನೇ ಹೊರಟ.

ಬೀಜ ಹಾಕಿಯೂ ಆಯ್ತು.   ಗಿಡವಾಗಿ ಮರವಾಗುವಷ್ಟರಲ್ಲಿ ಘನಗಾತ್ರದ ಪಪ್ಪಾಯಿಗಳು ಮರ ತುಂಬಿ ನಿಂದವು.   ಪ್ರತಿದಿನ ಹಣ್ಣುಗಳನ್ನು ಕತ್ತರಿಸಿ,  ಸಿಪ್ಪೆ ತೆಗೆದು,  ಹೋಳುಗಳನ್ನು ಎಲ್ಲರಿಗೂ ಹಂಚುವ ಕಾರ್ಯಕ್ರಮವನ್ನು ನೆನೆದೇ ದಿಗಿಲಾಯಿತು.   ಕೊನೆಗೂ ಹಣ್ಣುಗಳ ಕಾಲ ಬಂದೇ ಬಿಟ್ಟಿತು.   ನಾನೂ ಬಿಡ್ತೇನಾ......ಅಂತೂ ಗೆದ್ದೆ.

.


ಅಂದ ಹಾಗೆ ನಮ್ಮ ವಾಡಿಕೆಯಲ್ಲಿ ಬಪ್ಪಂಗಾಯಿ ಎಂದು ಹೇಳಲ್ಪಡುವ ಈ ಹಣ್ಣು ದೂರದ ಮೆಕ್ಸಿಕೋ ದೇಶದಿಂದ ಇಲ್ಲಿಯವರೆಗೆ ಸಾಗಿ ಬಂದಿದೆ. ಸಸ್ಯಶಾಸ್ತ್ರಜ್ಞರು Carica papaya ಎಂದು ಹೆಸರಿಟ್ಟುಕೊಂಡಿದ್ದಾರೆ.   ಭಾರೀ ಗಾತ್ರದ ಹಣ್ಣುಗಳಿಂದ ಹಿಡಿದು  ವರ್ಣವ್ಯತ್ಯಾಸದ ತಳಿಗಳೂ  ಬೀಜರಹಿತ ಹಣ್ಣುಗಳೂ  ಪಪ್ಪಾಯದ ಪರಿಮಳವೇ ಇಲ್ಲದ ಜಾತಿಗಳೂ ಇವೆ.   ಸಮತೂಕದ ಆಹಾರದೊಂದಿಗೆ ಹಿತಮಿತವಾಗಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

" ಮನೆ ಹಿತ್ತಿಲಲ್ಲಿ ಬೇಕಾದಷ್ಟು ಬೆಳೆದಿದೆ,  ತಿನ್ನುತ್ತೇನೆ "  ಅಂತೀರಾ,

" ತಿನ್ನಿ,  ಎಲ್ಲರೊಂದಿಗೆ ಹಂಚಿಕೊಂಡು ತಿನ್ನಿ "

ಮರದಲ್ಲಿರುವ ಕಾಯಿ ಹಸಿರಿನಿಂದ ಹಳದಿ ವರ್ಣಕ್ಕೆ ತಿರುಗುತ್ತಿದ್ದಂತೆ ಕೊಯ್ದು ಇಟ್ಟುಕೊಳ್ಳಬೇಕು.  ಮರದಲ್ಲೇ ಹಣ್ಣಾಗಲು ಬಿಟ್ಟಿರೋ,  ಹಕ್ಕಿಗಳು ಸೊಗಸಾಗಿ ತಿಂದು ಮುಗಿಸುತ್ತವೆ.  ಮಟ ಮಟ ಬಿಸಿಲಿಗೂ ಕೊಯ್ಯುವ ಗೋಜಿಗೇ ಹೋಗಬಾರದು.  ಬಿಸಿಲ ಶಾಖಕ್ಕೆ ಕಾಯಿಗಳೂ ಬಿಸಿಯೇರಿ,  ' ಏನೋ ಅಡ್ಡ ವಾಸನೆ '  ಅನಿಸೀತು.   ಬೆಳ್ಳಂಬೆಳಗ್ಗೆ ಕೊಯ್ದ ಹಣ್ಣುಗಳು ಶೀತಲೀಕೃತ ವ್ಯವಸ್ಥೆಯಲ್ಲಿರಿಸಿದಷ್ಟು ತಂಪು ತಂಪಾಗಿರುತ್ತವೆ.

ನಮ್ಮ ಪರಿಸರದಲ್ಲಿ ಸುಲಭವಾಗಿ ಲಭ್ಯವಾಗುವ ಹಣ್ಣು ಹಂಪಲುಗಳನ್ನು ತಿನ್ನುವುದು ಉತ್ತಮ.  ದುಬಾರಿ ಬೆಲೆಯ ಆಪ್ಯಲ್ ದ್ರಾಕ್ಷೀಗಳಿಗೆ ಮರುಳಾಗದಿರಿ.   ಅತಿಯಾಗಿ ತಿನ್ನುವುದರಿಂದ ಚರ್ಮದ ಬಣ್ಣ ಬದಲಾಗುವ ಅಪಾಯ ಇದೆ.  ಅದು ರೋಗವಲ್ಲದಿದ್ದರೂ ಡಾಕ್ಟ್ರ ಬಳಿ ಹೋಗಬೇಕಾದೀತು.  ಬಹುಶಃ ಅದೇ ಕಾರಣದಿಂದ ಪರಂಗಿ ಹಣ್ಣು ಎಂಬ ಅನ್ವರ್ಥ ನಾಮಧೇಯವೂ ಇದಕ್ಕಿದೆ !


ಅಡಿಬರಹ:  ಪಪ್ಪಾಯ ಹಣ್ಣುಗಳೊಂದಿಗೆ  ಪಕ್ಕದ ಮನೆಯ ಬಾಲಕ,  ಜುನೈದ್.

Posted via DraftCraft app

Wednesday 21 November 2012

ತೆಂಗಿನಕಾಯಿ ಮುಂಙೆ






Sprouted coconut
Nature's gift
Children's favorite
ready to eat ..!

ಮೊಳಕೆ ಕಟ್ಟಿದ ಕಾಳುಗಳು ಹೇಗೆ ಪೌಷ್ಟಿಕಾಂಶಗಳ ಆಗರವಾಗಿವೆಯೋ ಹಾಗೇನೇ ತೆಂಗಿನಕಾಯಿ ಮೊಳಕೆಯೂ ಕೂಡಾ. ಆಧುನಿಕ ಜೀವನ ವಿಧಾನದಲ್ಲಿ ತೆಂಗಿನ ಮೊಳಕೆ ಸಿಗುವುದು ದುರ್ಲಭ. ಏನಿದ್ದರೂ ಸಿದ್ಧ ವಸ್ತುಗಳಿಗಾಗಿ ಸೂಪರ್ ಮಾರ್ಕೆಟ್ ಗೇ ಓಡಾಟ.

ಮೊಳಕೆ ಬರುವ ಸಸ್ಯೋತ್ಪನ್ನಗಳಲ್ಲಿ ತೆಂಗಿನ ಮೊಳಕೆಯೇ ಭಾರೀ ಗಾತ್ರದ್ದು. ಉನ್ನತ ವೃಕ್ಷವಾಗಿರುವ ತೆಂಗಿನಮರದಿಂದ ಹಣ್ಣಾಗಿ, ಮಾಗಿ, ಬಿದ್ದು, ಹೆಕ್ಕುವವರ ಕಣ್ಣಿಗೆ ಕಾಣಿಸದೇ ಹೋದ ತೆಂಗಿನಕಾಯಿ, ಬಹಳ ನಿಧಾನವಾಗಿ ಮೊಳಕೆ ಬರಲು ಪ್ರಾರಂಭಿಸುತ್ತದೆ. ಅದೂ ಗಿಡವಾಗಿ, ತೆಂಗಿನಗರಿಗಳು ಮೂಡಿದ ನಂತರವೇ ನಮ್ಮ ಕಲ್ಯಾಣಿಯ ಕಣ್ಣಿಗೆ ಗೋಚರವಾಗಿ, ಅವಳು ತೀರಾ ಆಪ್ಯಾಯತೆಯಿಂದ ಹೊಸ ಕಲ್ಪವೃಕ್ಷದ ಜನನವಾಯಿತೆಂದು ತನ್ನ ಗ್ರಾಮ್ಯ ಭಾಷೆಯಲ್ಲಿ ಹಾಡಿಕೊಳ್ಳುತ್ತ, ಇದಕ್ಕೆ ಸೂಕ್ತವಾದ ಜಾಗ ತನ್ನ ಮನೆಹಿತ್ತಿಲೇ ಸರಿ ಎಂದು ಒಯ್ಯುವವಳೇ.

ನನ್ನ ಬಾಲ್ಯದಲ್ಲಿ ತೆಂಗಿನ ಮೊಳಕೆಯನ್ನು ಕಂಡಿದ್ದೇ ಇಲ್ಲ. ಆಗೆಲ್ಲ ಕಾಯಿ ಪಕ್ವವಾದೊಡನೆ ಕೊಯ್ಯಲಾಗುತ್ತಿತ್ತು. ಅಟ್ಟದ ಶೇಖರಣಾ ಕೊಠಡಿಯಲ್ಲಿ ಬೆಚ್ಚಗೆ ಕುಳಿತ ತೆಂಗಿನಕಾಯಿಗಳು ಮೊಳಕೆ ಬರುವುದಾದರೂ ಹೇಗೆ ?

ಈಗ ಮರ ಹತ್ತುವ ನುರಿತ ಕೆಲಸಗಾರರು ವಿರಳವಾಗಿದ್ದಾರೆ. ನಮ್ಮ ಮರವೇರುವ ತಜ್ಞ ಕೆಲಸಗಾರ ಬಾಬು ಆ ವೃತ್ತಿಯನ್ನು ಬಿಟ್ಟು ಎಷ್ಟೋ ವರ್ಷಗಳಾಯಿತು. ವಯಸ್ಸೂ ಆಗಿರುವವರನ್ನು " ಇಂಥಾ ದಿನ ಬಂದು ತೆಂಗಿನಕಾಯಿ ಕೀಳು " ಅನ್ನುವ ಹಾಗೂ ಇಲ್ಲ. ಬಿದ್ದ ಕಾಯಿಗಳನ್ನು ಹೆಕ್ಕಿ ತರಲೂ ಹರಸಾಹಸ ಪಡುವ ಕಾಲ.

ಮೊಳಕೆ ಬಂದ ತೆಂಗಿನಕಾಯಿ
" ಇದು ನನಗೆ " ಮಾಡುವರು ಲಡಾಯಿ
ಮಕ್ಕಳ ಪಾಲಿಗೆ ಸಿಹಿ ಮಿಠಾಯಿ




Photo courtesy : Mahesh Puchchappady

Posted via DraftCraft app





ತೆಂಗಿನಕಾಯಿ ತೆಗೆಯುವಾಗ ತೋಟದೊಳಗೆ ಇರುವ ಕಾರ್ಮಿಕ ವರ್ಗಕ್ಕೆ ಗಮ್ಮತ್ತು. ಎಲ್ಲರೂ ಎಳನೀರು ಗ್ರಾಹಕರು, ಅದೂ ಉಚಿತ ಕೊಡುಗೆ. ಮನೆಯ ಕರೆಯುವ ಹಸುವಿಗೆ ಬನ್ನಂಗಾಯಿ ಪ್ರತ್ಯೇಕವಾಗಿ ತೆಗೆದಿರಿಸುವುದು ಹಿಂದಿನಿಂದಲೇ ನಡೆದು ಬಂದ ಪದ್ಧತಿ. ಬಾಣಂತಿ ಹಸುವಿಗೆ ಕಲಗಚ್ಚಿನೊಂದಿಗೆ ಈ ಕಾಯಿಯ ತಿರುಳನ್ನು ತುರಿದು ಕೊಡುವ ವಾಡಿಕೆ. ಕಾಯಿ ಆಗುವ ಹಿಂದಿನ ಹಂತದ ಎಳನೀರಿಗೆ ಬನ್ನಂಗಾಯಿ ಎಂಬ ರೂಢನಾಮ ಇದೆ. ಇಂತಹ ಆರೋಗ್ಯಕ್ಕೆ ಪುಷ್ಟಿದಾಯಕವಾದ ಬನ್ನಂಗಾಯಿಯಿಂದ ದೋಸೆ ತಯಾರಿಸೋಣ:

ಒಂದು ಬನ್ನಂಗಾಯಿ ತಿರುಳು, ತುರಿದಿಡಿ.
2 ಕಪ್ ಅಕ್ಕಿ.
ರುಚಿಗೆ ಉಪ್ಪು.

ಮೊದಲು ಅಕ್ಕಿಯನ್ನು ನುಣ್ಣಗೆ ಅರೆಯಿರಿ. ತುರಿದ ತಿರುಳನ್ನು ಹಾಕಿ ಪುನಃ ಅರೆದು ಉಪ್ಪನ್ನೂ ಹಾಕಿ. ಹಿಟ್ಟನ್ನು ಹುಳಿ ಬರಿಸುವ ಅವಶ್ಯಕತೆಯೇನೂ ಇಲ್ಲ. ಈ ದಪ್ಪ ಹಿಟ್ಟನ್ನು ಕಾವಲಿಯಲ್ಲಿ ತೆಳ್ಳಗೆ ಪೇಪರ್ ದೋಸೆ ಥರ ಸೌಟಿನಲ್ಲಿ ಹರಡಲೂ ಸಾಧ್ಯವಿದೆ. ಹಾಗೆ ಬೇಡಾಂದ್ರೆ ಅವಶ್ಯವಿದ್ದಷ್ಟು ನೀರು ಸೇರಿಸಿ ನೀರುದೊಸೆಯಂತೆ ಎರೆಯಿರಿ.

Wednesday 14 November 2012

ಕೇಶ ತೈಲ ತಯಾರಿಯ ಕುಶಲ ಕಲೆ



ನೆಲನೆಲ್ಲಿ ,  ಭೃಂಗರಾಜ ,   ಒಂದೆಲಗ ,  ತುಳಸೀ  ಇವಿಷ್ಟು  ಸಸ್ಯಗಳು  ನಿಮ್ಮ  ಕೈದೋಟದಲ್ಲಿವೆಯೇ ,   ಒಮ್ಮೆ  ಗಮನವಿಟ್ಟು  ನೋಡಿ ಬನ್ನಿ .   ತಲೆಗೆ  ಹಾಕುವ  ಎಣ್ಣೆ  ತಯಾರಿಸೋಣ .

ಏನೇನೋ  ಬ್ರಾಂಡ್ ನ   ಕೇಶತೈಲಗಳು  ಮಾರುಕಟ್ಟೆಯಲ್ಲಿ  ಸಿಗುತ್ತವೆ .   ಇಂಥಿಂಥಾ  ಆಯುರ್ವೇದಿಕ್  ಸಸ್ಯಗಳ  ಸಾರದಿಂದ  ಮಾಡಲ್ಪಟ್ಟಿದ್ದು  ಎಂದು  ಬರೆದೂ  ಇರುತ್ತದೆ .   ನಾವು  ಮನೆಯಲ್ಲೇ  ತಯಾರಿಸಿದ್ದು  ಕೊಂಡು ತಂದ  ಬ್ರಾಂಡೆಡ್  ಎಣ್ಣೆಗಿಂತ  ಹೆಚ್ಚು  ಚೆನ್ನಾಗಿರುತ್ತದೆ .

ತೈಲ  ಎಂಬ  ಶಬ್ದ  ಮೂಲತಃ  ಸಂಸ್ಕೃತದಿಂದ  ಬಂದಿದೆ .   ತಿಲ  ಎಂದರೆ  ಎಳ್ಳು  ಎಂದರ್ಥ .   ಎಳ್ಳಿನಿಂದ  ಬಂದದ್ದು  ಎಳ್ಳೆಣ್ಣೆ .   ನಾವು  ತಲೆಕೂದಲಿಗೆ  ತೆಂಗಿನೆಣ್ಣೆಯನ್ನೇ  ಹಾಕುವ  ರೂಢಿ ,   ಹಾಗಾಗಿ  ಎಳ್ಳೆಣ್ಣೆ  ಬೇಡ ,   ತೆಂಗಿನೆಣ್ಣೆಯನ್ನೇ  ಉಪಯೋಗಿಸೋಣ .    ಅದೇ  ಉತ್ತಮ .

ಒಂದು  ಹಿಡಿ  ತುಳಸೀ  ಕುಡಿಗಳನ್ನು  ಚಿವುಟಿ  ಇಡಿ .   ಕೃಷ್ಣ ತುಳಸೀ  ಆದರೆ  ಇನ್ನೂ ಉತ್ತಮ .
ಒಂದು  ಹಿಡಿ  ನೆಲನೆಲ್ಲೀ ,  ಬೇರು  ಸಹಿತ ಕಿತ್ತು  ಇಡಿ .  ಮಣ್ಣು  ಹೋಗಲು  ತೊಳೆಯಿರಿ .
ಇದೇ  ವಿಧವಾಗಿ  ಭೃಂಗರಾಜ  ಹಾಗೂ  ಒಂದೆಲಗಗಳನ್ನು  ಸಂಗ್ರಹಿಸಿ .   ನೆನಪಿಡಿ ,   ಇವಿಷ್ಟೂ  ಕಾರ್ಯಗಳನ್ನು  ಮುಂಜಾನೆಯೇ  ಮಾಡಿಕೊಳ್ಳಿ .    ಮುಂಜಾನೆಯ  ಹೊತ್ತು  ಸಸ್ಯರಾಶಿಗಳು  ರಸಭರಿತವಾಗಿ  ಲಕಲಕಿಸುತ್ತಿರುತ್ತವೆ .




ಸಂಗ್ರಹವಾದ  ಈ  ಪುಟ್ಟ ಸಸ್ಯಗಳನ್ನು  ಚಿಕ್ಕದಾಗಿ  ಕತ್ತರಿಸಿ  ರುಬ್ಬುವ ಕಲ್ಲಿಗೆ  ಹಾಕಿ  ತಿರುಗಿಸಿ .   ಹ್ಞಾಂ ,   ಈಗ ಯಂತ್ರಗಳ  ಯುಗ .   ಮಿಕ್ಸಿಗೇ  ಹಾಕಿ .   ಯಂತ್ರ  ತಿರುಗಲು  ಅವಶ್ಯವಿದ್ದಷ್ಟೇ  ನೀರು  ಹಾಕಿ .  ಹೆಚ್ಚು  ನೀರು  ಹಾಕಬಾರದು .  ಮೆತ್ತಗಾದ  ಈ  ಸಸ್ಯಸಾರವನ್ನು  ಒಂದು  ಬಟ್ಟೆಯಲ್ಲಿ  ಅಥವಾ  ಜಾಲರಿಯಲ್ಲಿ  ಶೋಧಿಸಿ  ಇಟ್ಟುಕೊಳ್ಳಿ .

ಒಂದು ಕಪ್  ರಸಕ್ಕೆ  ಒಂದು ಕಪ್  ತೆಂಗಿನೆಣ್ಣೆಯ  ಅಳತೆಯಲ್ಲಿ  ದಪ್ಪ ತಳದ  ಪಾತ್ರೆಗೆ  ಹಾಕಿಕೊಂಡು  ಉರಿಯಲ್ಲಿಡಿ .    ಸೌಟಿನಲ್ಲಿ  ಕೈಯಾಡಿಸುತ್ತಾ  ಎಣ್ಣೆ  ಹಾಗೂ  ಸಸ್ಯಗಳ  ರಸ  ಕೂಡಿಕೊಳ್ಳುವಂತೆ  ನೋಡಿಕೊಳ್ಳಿ .   ಕುದಿಯಲು  ಪ್ರಾರಂಭವಾದೊಡನೆ  ಉರಿಯನ್ನು  ತಗ್ಗಿಸಿ .   ಹೀಗೆ  ಚಿಕ್ಕ ಉರಿಯಲ್ಲಿ  ಕುದಿಯುತ್ತಿರಲಿ .   ನೀರಿನಂಶ  ಆರಿದೊಡನೆ ಕುದಿಯುವ  ಶಬ್ದ  ನಿಲ್ಲುತ್ತದೆ .   ಕೆಳಗಿಳಿಸಿ  ತಣಿಯಲು  ಬಿಡಿ .  

ಪುನಃ  ಜಾಲರಿಯಲ್ಲಿ  ಶೋಧಿಸಿ  ಶುದ್ಧವಾದ  ಜಾಡಿಗೆ  ತುಂಬಿಸಿ ಭದ್ರವಾಗಿ  ಮುಚ್ಚಿ  ಇಟ್ಟುಕೊಳ್ಳಿ .
ನಿಯಮಿತವಾಗಿ  ಈ  ಎಣ್ಣೆಯನ್ನು  ಉಪಯೋಗಿಸುತ್ತಾ  ಇದ್ದಲ್ಲಿ  ತಲೆ ಹೊಟ್ಟು ,  ಕೂದಲುದುರುವಿಕೆ ,   ನಿದ್ರಾಹೀನತೆಗಳು  ಕ್ರಮೇಣ  ನಿವಾರಣೆಯಾಗುತ್ತವೆ .    ಕೂದಲು  ಕಪ್ಪಾಗಿ  ಹೊಳೆಯುವ ಕೇಶರಾಶಿ  ನಿಮ್ಮದಾಗಿಸಿ .    ಅಕಾಲಿಕ  ಕೂದಲು ನೆರೆಯುವಿಕೆಯನ್ನೂ   ಈ  ಎಣ್ಣೆಯ  ಬಳಕೆಯಿಂದ ತಡೆಗಟ್ಟಬಹುದು .    ಕೂದಲು  ಬೆಳ್ಳಗಾದ ಮೇಲೆ ಎಣ್ಣೆ  ಹಾಕಿ ತಿಕ್ಕುವುದಲ್ಲ ,   ಮೊದಲೇ  ನಿಯಮಿತ  ರೂಢಿ ಮಾಡಿಕೊಳ್ಳಿ .    ಸಣ್ಣ ಪುಟ್ಟ  ಗಾಯಗಳಿಗೆ  ಈ ಎಣ್ಣೆ  ಸವರಿದರೆ ಸಾಕು,  ಬೇರೆ  ಲೋಷನ್,  ಮುಲಾಮು  ಹಚ್ಚಬೇಕಾಗಿಯೇ  ಇಲ್ಲ .





ನೆಲನೆಲ್ಲಿ  ಸಿಗಲಿಲ್ಲವೇ,  ನೆಲ್ಲಿಕಾಯಿ ಬಳಸಬಹುದು.  ಹೇಗೇಂತ ಕೇಳ್ತೀರಾ,   ಧಾರಾಳವಾಗಿ  ನೆಲ್ಲಿಕಾಯಿ ಸಿಗುವ  ಸೀಸನ್ ನಲ್ಲಿ   ಬಿಸಿಲಿಗೆ ಒಣಗಿಸಿ ಇಟ್ಟುಕೊಳ್ಳಿ .   ಈ ಒಣಗಿದ ನೆಲ್ಲಿಕಾಯಿಗಳನ್ನು  ನೀರಿನಲ್ಲಿ  ನೆನೆಸಿ  ಒಂದು ಕಪ್  ನೆಲ್ಲಿಗೆ  ಮೂರು ಕಪ್  ನೀರಿನಂತೆ  ಸೇರಿಸಿ  ಕುದಿಸಿ .   ಮೂರು ಕಪ್ ಇದ್ದದ್ದು  ಒಂದು ಕಪ್ ಗೆ  ಬತ್ತಬೇಕು .   ಈ ರಸವನ್ನು  ಶೋಧಿಸಿ  ಉಪಯೋಗಿಸಿ .

ಈ  ವನಸ್ಪತಿ  ಸಸ್ಯಗಳ  ಅಳತೆಯ  ಪ್ರಮಾಣದಲ್ಲಿ  ಹೆಚ್ಚುಕಮ್ಮಿಯಾದರೂ  ಬಾಧಕವೇನೂ  ಇಲ್ಲ .

ಈ  ಎಣ್ಣೆಗೆ  ತಳಸಿಯನ್ನು  ಸೇರಿಸುವ  ಕ್ರಮ  ವಾಡಿಕೆಯಲ್ಲಿ  ಇಲ್ಲ .   ತುಳಸಿ  ಔಷಧಾಂಶಗಳ  ಆಗರ  ಹಾಗೂ  ಸುವಾಸನಾಯುಕ್ತ  ಸಸ್ಯ .   ಹಾಗಾಗಿ  ನಾನು  ಹೀಗೇ  ಎಣ್ಣೆ  ತಯಾರಿಸುವ  ಪದ್ಧತಿ  ಮಾಡಿಕೊಂಡಿದ್ದೇನೆ .  ಪರಿಮಳಕ್ಕಾಗಿ  ಬೇರೆ  ಸುಗಂಧದ್ರವ್ಯಗಳನ್ನು  ಹಾಕಬೇಕಾಗಿಲ್ಲ .   

ಧಾರಾಳವಾಗಿ  ಲಭ್ಯವಿದ್ದಲ್ಲಿ  ಭೃಂಗರಾಜವೊಂದನ್ನೇ ಹಾಕಿ  ಎಣ್ಣೆ  ತಯಾರಿಸುವ ಕ್ರಮವೂ ಇದೆ .

ಒಂದೆಲಗದಿಂದಲೂ  ಪ್ರತ್ಯೇಕವಾಗಿ  ಎಣ್ಣೆ  ಮಾಡಬಹುದು .   ಆ ಕುರಿತಾಗಿ  ಈ  ಮೊದಲೇ ಬರೆದ   ' ಒಂದೊಂದೇ ಎಲೆಯ  ಒಂದೆಲಗ '  ...ನೋಡಿ .

ನೆನಪಿಡಿ ,   ಸಸ್ಯಗಳ  ರಸಸಾರ ಹೆಚ್ಚಾದಷ್ಟೂ  ಎಣ್ಣೆಯ  ಗುಣಮಟ್ಟವೂ  ಶ್ರೇಷ್ಠವಾಗಿರುತ್ತದೆ .
ಈ  ಎಲ್ಲಾ  ಸಸ್ಯಗಳ  ಸಂಯುಕ್ತ  ಮಿಶ್ರಣವೇ  ಭೃಂಗಾಮಲಕಬ್ರಾಹ್ಮೀ ತೈಲವೆನಿಸಿಕೊಂಡಿದೆ .   

Centella  asiatica  :  ಒಂದೆಲಗ

Eclipta alba  :  ಭೃಂಗರಾಜ

Phyllanthus Niruri  :  ನೆಲನೆಲ್ಲಿ

Ocimum sanctum  :   ಕೃಷ್ಣ ತುಳಸೀ

Posted via DraftCraft app

Monday 5 November 2012

ಕೊಕ್ಕೋ ಚಾಕಲೇಟ್




ಚಿಕ್ಕ  ಮಕ್ಕಳಿಗೆ  ಹೊಸ ತಿಂಡಿಗಳನ್ನು  ಮನೆಯಲ್ಲೇ  ಸ್ವಾದಿಷ್ಟವಾಗಿ  ತಯಾರಿಸಿ  ಕೊಡುವುದು  ಒಂದು  ದೊಡ್ಡ  ಸವಾಲ್ .    ದಿನಕ್ಕೊಂದು  ಹೊಸ ರುಚಿಗಳನ್ನು  ಮಾಡುವ  ಒತ್ತಡದಿಂದ  ನನಗೆ  ಸುಲಭವಾಗಿ  ಲಭ್ಯವಾಗಿದ್ದು  ಟೀವಿ  ಚಾನಲ್  ಕಾರ್ಯಕ್ರಮಗಳು .   ಆ ಕಾಲದಲ್ಲಿ  ಇದ್ದಿದ್ದು  ಕನ್ನಡದ  ಏಕಮೇವ  ' ಚಂದನ ' .    ಕ್ರಮೇಣ  ಇನ್ನಷ್ಟು  ವಾಹಿನಿಗಳು  ಬಂದವು .   ಅನಿವಾರ್ಯವಾಗಿ  ನೋಡ್ತಾ  ಇದ್ದೆ ,     ಬರೆದಿಟ್ಟುಕೊಳ್ಳುವುದೂ  ,  ಪ್ರಯೋಗ  ಮಾಡುವುದೂ ,   ಮಕ್ಕಳಿಂದ  ಶಹಬ್ಬಾಸ್ ಗಿರಿ  ಪಡೆಯುವುದೂ  ,    ಚೆನ್ನಾಗಿಲ್ಲಾಂದ್ರೆ  " ನೀನೇ ತಿನ್ನು "  ಅನ್ನಿಸ್ಕೊಳ್ಳುವುದೂ  ಮಾಮೂಲಿಯಾಗಿತ್ತು .   ಈಗಂತೂ  ಅಡುಗೆ  ಕಾರ್ಯಕ್ರಮಗಳು  ಟೀವಿ  ವಾಹಿನಿಗಳ  ಅವಿಭಾಜ್ಯ  ಅಂಗವಾಗಿವೆ .    


ಅಂತಹ  ಒಂದು  ಸಂದರ್ಭದಲ್ಲಿ  ಕಲಿತದ್ದು....





 ಒಂದು ಪ್ಯಾಕ್ ಖರ್ಜೂರವನ್ನು ಬೀಜ ತೆಗೆದು ಕುಕ್ಕರಿನಲ್ಲಿ ಒಂದು ವಿಸಿಲ್ ಬರುವವರೆಗೆ ನೀರು ಹಾಕದೆ ಬೇಯಿಸಿ .
ಒಂದು ಕಪ್ ಸಕ್ಕರೆ ಪುಡಿ ಮಾಡಿ .
ಒಂದು ಕಪ್ ಕೊಕ್ಕೋ ಹುಡಿ   (ಹೆಚ್ಚಾದರೂ ತೊಂದರೆಯಿಲ್ಲ).

ಬೇಯಿಸಿದ ಖರ್ಜೂರವನ್ನು ಮಿಕ್ಸಿಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಪೇಸ್ಟ್ ಮಾಡಿ.
ಒಲೆಯ ಮೇಲೆ ದಪ್ಪ ಬಾಣಲೆ ಇಡಿ . ನಾಲ್ಕು ಚಮಚ ತುಪ್ಪದೊಂದಿಗೆ ಖರ್ಜೂರದ ಮಿಶ್ರಣ , ಸಕ್ಕರೆ ಸೇರಿಸಿ ಕಾಯಲು ಬಿಡಿ . ಕೊಕ್ಕೋ ಪುಡಿ ಹಾಕಿ ಗಟ್ಟಿ ಪಾಕ ಆಗುವವರೆಗೆ ಕಾಯಿಸಿ .
ಕತ್ತರಿಸಿದ ಗೇರುಬೀಜ, ಬಾದಾಮ್ ಸೇರಿಸಿ   (ಇದ್ದರೆ).

ಮಣೆಯ ಮೇಲೆ ಬಾಳೆಎಲೆ ಇಟ್ಟು, ಬೆಂದ ಪಾಕವನ್ನು ಹಾಕಿ ಹೊರಳಿಸಿ ಬಾಳೆಹಣ್ಣಿನ ಆಕಾರಕ್ಕೆ ತನ್ನಿ.
ತಣಿಯಲು ಬಿಡಿ. ಉರುಟುರುಟಾಗಿ ಕತ್ತರಿಸಿ ತಿನ್ನಿ .

ಫ್ರಿಜ್ ನಲ್ಲಿ ಇಟ್ಟರೆ ಇನ್ನೂ ಚೆನ್ನಾಗಿರುತ್ತದೆ .

' ಕ್ಯಾಂಪ್ಕೋ 'ದವರ  ಲಘು ಪೇಯ  ' ವಿನ್ನರ್ '  ಕೊಕ್ಕೋ  ಹುಡಿ  ಈ  ಸಿಹಿ ತಿಂಡಿ  ತಯಾರಿಕೆಗೆ  ಸೂಕ್ತವಾಗಿದೆ ,  ಇದು  ನನ್ನ  ಅನುಭವ .

ಕೊಕ್ಕೋ  ಇಲ್ಲಾಂದ್ರೆ  ಬಾದಾಮ್ ಹುಡಿ  ಹಾಕಿಯೂ  ಮಾಡಬಹುದು ,   ಅಳತೆಯಲ್ಲಿ  ಹೆಚ್ಚುಕಮ್ಮಿ ಆದರೂ  ರುಚಿಗೆ  ಏನೂ  ತೊಂದರೆಯಿಲ್ಲ .   ' ಬಾದಾಮ್ ಡಿಲೈಟ್ '  ಎಂದು  ಹೆಸರಿಟ್ಟರಾಯ್ತು .



Posted via DraftCraft app

Thursday 1 November 2012

ತಗ್ಗಿ ಗಿಡದ ಮುಂದೆ ತಗ್ಗಿ ಬಗ್ಗಿ ನಡೆಯಿರಿ !


ನೈಸರ್ಗಿಕವಾಗಿ ಲಭಿಸುವ ಕಾಡುಕುಸುಮಗಳೇ ದೇವತಾರ್ಚನೆಯಲ್ಲಿ ಪ್ರಥಮ ಸ್ಥಾನ ಪಡೆದಿವೆ. ಶ್ರಾವಣ ಮಾಸ ಆರಂಭದೊಂದಿಗೆ ಇಂತಹ ವೈವಿಧ್ಯಮಯ ಹೂಗಳು ಅರಳಿ ನಲಿಯುತ್ತಿರುತ್ತವೆ. ಅದು ಕೇರಳೀಯರ ಓಣಂ ಆಗಿರಬಹುದು, ಸಾರಸ್ವತರ ಚೂಡೀ ಹಬ್ಬವೇ ಆಗಿರಬಹುದು, ಈ ಹೂಗಳ ಸಂಗ್ರಹಕ್ಕೇ ಆದ್ಯತೆ. ಈಗ ಅಲ್ಲಿ ಇಲ್ಲಿ ಅಲೆದು ಹೂ ಸಂಗ್ರಹಿಸುವ ಸಂಪ್ರದಾಯ ಹೋಗ್ಬಿಟ್ಟಿದೆ, ಏನಿದ್ದರೂ ಮಾರ್ಕೆಟ್ ಗೆ ಹೋದರಾಯಿತು.




ತೇರಿನಂತೆ ಅರಳಿ ನಿಂತಿರುತ್ತವೆ ರಥ ಹೂಗಳು, Verbenaceae ಕುಟುಂಬಕ್ಕೆ ಸೇರಿದೆ. ಇದೇ ಕುಟುಂಬದ ಇನ್ನೊಂದು ಸಸ್ಯ ತಗ್ಗಿ ಹೂ. ಸಸ್ಯಶಾಸ್ತ್ರೀಯವಾಗಿ Clerodendrum phlomidis ಎಂಬ ಹೆಸರನ್ನು ಸಸ್ಯವಿಜ್ಞಾನಿಗಳು ಇಟ್ಟಿದ್ದಾರೆ.

ಸಾಮಾನ್ಯವಾಗಿ ಆಗಸ್ಟ್ ನಿಂದ ಫೆಬ್ರವರಿವರೆಗೆ ಹೂಗಳು ಅರಳುವ ಸಮಯ. ಬಿಳಿ ಬಣ್ಣದ ಈ ಕುಸುಮಗಳಿಗೆ ಉದ್ದನೆಯ ಕೇಸರ. ಬೆಳಗಾದೊಡನೆ ದುಂಬಿಗಳು ಈ ಹೂವ ಸುತ್ತ ಹಾರಾಡುತ್ತಿರುತ್ತವೆ. ಆಘ್ರಾಣಿಸಿದರೆ ಕಡು ಸುವಾಸನೆ ! ಉತ್ತರ ಭಾರತದ ಶಿವಾಲಯಗಳಲ್ಲಿ ಈ ಹೂವೇ ಶಿವಾರ್ಚನೆಯಲ್ಲಿ ಪ್ರಧಾನ ಪುಷ್ಪ. ಅಲ್ಲಿ ' ಅಲ್ಕಾ ' ಎಂಬ ಹೆಸರೂ ಈ ಹೂಗಳಿಗಿವೆ.



ಭಾರತ ಹಾಗೂ ಶ್ರೀಲಂಕಾಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಸಸ್ಯ. ರಸ್ತೆ ಪಕ್ಕಗಳಲ್ಲಿ, ನಿರುಪಯುಕ್ತ ಜಾಗಗಳಲ್ಲಿ ಬೆಳೆಯುವ ಈ ಸಸ್ಯ 4 ರಿಂದ 5 ಅಡಿ ಎತ್ತರವಿರುತ್ತದೆ. ಬೇರು ಹೋದಲ್ಲೆಲ್ಲ ಗಿಡಗಳು ಮೊಳೆಯುತ್ತವೆ. ನಮ್ಮ ಅಡಿಕೆ ತೋಟಗಳಲ್ಲಿ ಒಂದು ಕಳೆ ಸಸ್ಯದಂತೆ ಕಂಡರೂ ಇದನ್ನು ಕಡಿದು ಹಾಕವ ಗೋಜಿಗೇ ಯಾರೂ ಹೋಗುವುದಿಲ್ಲ, ಅಷ್ಟೂ ಭಯ ಭಕ್ತಿಯಿಂದ ಈ ಗಿಡದೆದುರು ತೋಟದ ಕೆಲಸಗಾರರು ನಡೆದು ಕೊಳ್ಳುವುದನ್ನು ನಾನು ಕಂಡಿದ್ದೇನೆ.

" ಅಡಿಕೆ ಮರದ ಬುಡದಲ್ಲೇ ಸೊಕ್ಕಿ ಬೆಳೆದಿದೆಯಲ್ಲ , ಕಡಿದು ಹಾಕಬಾರದೇ "
"ಹಾಗನ್ಬೇಡಿ ಅಕ್ಕ, ಅದನ್ನು ಕಡೀಬಾರ್ದಂತೆ, ದೇವ್ರಿಗೆ ತುಂಬಾ ಇಷ್ಟವಂತೆ ಈ ಹೂ " ಅನ್ನುತ್ತ ಹುಲ್ಲು ಕತ್ತರಿಸುತ್ತಿದ್ದ ಕಲ್ಯಾಣಿ ಎರಡೂ ಕೈಗಳಿಂದ ಗಿಡದೆದುರು ನಮಸ್ಕರಿಸಿದಳು.
ದೇವರಿಗೆ ಪ್ರಿಯವಲ್ಲದ ಹೂ ಯಾವುದಿದೆ, ಮರು ಮಾತಿಲ್ಲದೇ ಸುಮ್ಮನಾಗಬೇಕಾಯಿತು.

ಕೃಷಿಕರ ಬದುಕಿಗೂ ಬಹಳ ಹತ್ತಿರದ ಸಸ್ಯ. ಗದ್ದೆ ನಾಟಿ ಮಾಡುವಾಗ ಭತ್ತದ ಕಾಳುಗಳ ಮೊಳಕೆ ಬರಿಸುವಲ್ಲಿ ಕೃಷಿಕರು ಹಲವು ತಂತ್ರಗಾರಿಕೆಯನ್ನು ಅನುಸರಿಸುತ್ತಾರೆ. ಬೆಚ್ಚಗೆ ಅಟ್ಟದಲ್ಲಿ ಕುಳಿತಿದ್ದ ಬಿತ್ತನೆ ಭತ್ತದ ಮೂಟೆಯನ್ನು ಮೊದಲು ನೀರಿನಲ್ಲಿ ನೆನೆ ಹಾಕಲಾಗುತ್ತದೆ. ಸಮರ್ಥ ಕೆಲಸಗಾರರು ಭತ್ತ ತುಂಬಿದ ಗೋಣಿಯನ್ನೇ ನೀರಿನಲ್ಲಿ ಇಳಿ ಬಿಡುತ್ತಾರೆ, ಕೆರೆಯೂ ಆದೀತು. ಕರಾರುವಾಕ್ 12 ಘಂಟೆಯ ಅವಧಿಯಲ್ಲಿ ನೆನೆದ ಗೋಣಿಯನ್ನು ಮೇಲೆತ್ತಿ ತರುವ ಶ್ರಮದ ಹಿಂದೆ ಸಂಭ್ರಮವೂ ಇದೆ. ಅಷ್ಟೂ ಭತ್ತದ ಕಾಳುಗಳು ಮುಂದಿನ ವರ್ಷದ ಊಟದ ಸಿದ್ಧತೆಯ ಮೊದಲ ಹಂತ. ಗೋಣಿಯಿಂದ ನೀರು ತಾನಾಗಿಯೇ ಬಸಿದು ಹೋದ ನಂತರ 24 ಘಂಟೆ ಕಳೆದ ಮೇಲೆ, ಈ ಭತ್ತದ ರಾಶಿಗೆ ದಪ್ಪನೆಯ ಸೆಗಣಿ ಲೇಪ ಹಚ್ಚುವ ಕಾಯಕ. ನಂತರ ಬಿದಿರಿನ ಬುಟ್ಟಿಗಳಲ್ಲಿ ತಗ್ಗೀ ಎಲೆಗಳನ್ನು ಹರವಿ, ಕಾಳುಗಳನ್ನು ತುಂಬಿಸಿ, ಮೇಲಿನಿಂದ ಪುನಃ ತಗ್ಗೀ ಎಲೆಗಳನ್ನು ಧಾರಾಳವಾಗಿ ಹರಡಿ ಮುಚ್ಚುತ್ತಾರೆ. ಅತೀ ಉಷ್ಣ ಗುಣವುಳ್ಳ ಈ ಎಲೆಗಳು ಭತ್ತದ ಕಾಳುಗಳು ಮೊಳಕೆಯೊಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸೌತೇಕಾಯಿ ಬೀಜಗಳನ್ನು ನಾಟಿ ಮಾಡಬೇಕಾದರೂ ಈ ವಿಧಾನ ಅನುಸರಿಸುತ್ತಾರೆ.

ಶುಭ ಸಮಾರಂಭದ ಅವಶ್ಯಕತೆಗೆಂದು ಕದಳೀ ಬಾಳೆಗೊನೆಗಳನ್ನು ತೋಟದಿಂದ ಕಡಿದು ತಂದು ಇಟ್ಟಾಗಿದೆ. ಇನ್ನೂ ಹಣ್ಣಾಗುವ ಲಕ್ಷಣವೇ ಕಾಣಿಸುತ್ತಿಲ್ಲ. ಅದಕ್ಕೂ ಇಲ್ಲಿದೆ ಉಪಾಯ. ಬಾಳೆಗೊನೆಗಳ ಮೇಲೆ ಲಕ್ಷಣವಾಗಿ ತಗ್ಗೀ ಎಲೆಗಳನ್ನು ಹರಡಿ ಬಿಡಿ, ಮೇಲಿನಿಂದ ಗೋಣೀ ಚೀಲ ಮುಚ್ಚಿ ಬಿಡಿ, ಆಗುವ ಮ್ಯಾಜಿಕ್ ನೋಡಿ.



ದಶಮೂಲಾರಿಷ್ಟವನ್ನು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ತಂದಿಟ್ಟುಕೂಳ್ಳುತ್ತೇವೆ. ಮಲಬದ್ಧತೆ, ಗ್ಯಾಸ್ ಟ್ರಬಲ್ ಇತ್ಯಾದಿ ಸಮಸ್ಯೆಗಳಿಗೆ ಆಯುರ್ವೇದಿಕ್ ಟಾನಿಕ್. ಇದರ ತಯಾರಿಗೆ ಬೇಕಾಗುವ ಬೇಕಾಗುವ ಗಿಡಮೂಲಿಕೆಗಳಲ್ಲಿ ತಗ್ಗೀ ಬೇರು ಕೂಡಾ ಸೇರಿದೆ.

ಆಯುರ್ವೇದ, ಯುನಾನಿ ಮತ್ತು ಸಿದ್ಧ ವೈದ್ಯ ಚಿಕಿತ್ಸಾ ಪದ್ಧತಿಯಲ್ಲಿ ತಗ್ಗೀ ಗಿಡ ಪ್ರಾಮುಖ್ಯತೆ ಗಳಿಸಿದೆ. ತಗ್ಗೀ ಎಲೆಗಳನ್ನು ಅರೆದ ಲೇಪನದಿಂದ ಚರ್ಮದ ಮೇಲಿನ ಗಾಯ, ಬಾವುಗಳು ಶೀಘ್ರ ಚೇತರಿಕೆ.
ಚರ್ಮರೋಗಗಳಾದ ತೊನ್ನು, ಕುಷ್ಠ ರೋಗಗಳಿಗೂ ಎಲೆಗಳು ಸಿದ್ಧೌಷಧ. ಗಂಭೀರ ಸ್ವರೂಪದ ಕೆಮ್ಮು, ಶ್ವಾಸನಾಳದ ಸೋಂಕು, ಮಲೇರಿಯಾ ಜ್ವರಗಳಿಗೆ ಈ ಎಲೆಗಳಿಂದ ಚಿಕಿತ್ಸೆ.

ಪಾರಂಪರಿಕ ಔಷಧೀಯ ಸಸ್ಯವಾಗಿರುವ ಇದರ ಬಳಕೆಯಲ್ಲಿ ಗ್ರಾಮೀಣ ಮಹಿಳೆಯರು ಬಹಳ ಮುಂದೆ ಇದ್ದಾರೆ. ಅರಿಷ್ಟ ಲೇಹ್ಯಗಳು ಕೈಗೆಟುಕದಿದ್ದಲ್ಲಿ ತಗ್ಗೀ ಬೇರಿನ ತಂಬುಳಿ ಮಾಡಿ ಉಣ್ಣುವ ಚಾಣಾಕ್ಷತನ ಅವರಲ್ಲಿದೆ.

" ತಂಬುಳಿ ಹೀಗೆ ಮಾಡ್ತಿದ್ರು " ಗೌರತ್ತೆ ನೆನಪಿನ ಪುಟ ಬಿಡಿಸಿ ಹೇಳಿದ್ದು ಹೀಗೆ.
ತಗ್ಗೀ ಬೇರಿನ ಹೊರಸಿಪ್ಪೆಯನ್ನು ಚೂರಿಯಿಂದ ಕೆತ್ತಿ ತೆಗೆದಿಟ್ಟು , ಈ ಸಿಪ್ಪೆ ಚೂರುಗಳನ್ನು ತುಪ್ಪದಲ್ಲಿ ಹುರಿಯಬೇಕು. ಕಾಯಿತುರಿ, ಮಜ್ಜಿಗೆಯೊಂದಿಗೆ ನುಣ್ಣಗೆ ಕಡೆದು, ಕುದಿಸಿ, ಒಗ್ಗರಣೆ ಕೊಟ್ಟರಾಯಿತು.
" ಏನು ಪರೀಮಳ ಇರ್ತದೆ ಗೊತ್ತಾ "
" ಹೌದೇ , ನಾನೂ ಮಾಡಿ ನೋಡ್ತೇನೆ "
" ಹಾಗೇ ಸುಮ್ಮನೆ ಮಾಡುವುದು ಬೇಡಾ "
ಔಷಧೀಯ ವನಸ್ಪತಿ ಸಸ್ಯಗಳ ಬಳಕೆ ಅನಿವಾರ್ಯವಾಗಿದ್ದಲ್ಲಿ ಮಾತ್ರ ಎಂಬ ಕಿವಿಮಾತೂ ಹೇಳಿದ್ರು ಗೌರತ್ತೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣ ಸಿಗುವ ತಗ್ಗೀ ಹೂ ಬಿಳಿ ವರ್ಣದ್ದು, ವೃತ್ತಾಕೃತಿಯ ಅಗಲ ಎಲೆಗಳಿಂದ ಕೂಡಿದೆ. ಸಸ್ಯಶಾಸ್ತ್ರೀಯವಾಗಿ ಇದು cleodendrum viscosum/c infortunatum. ಇದೇ ವಿಭಾಗಕ್ಕೆ ಸೇರಿದ ಇನ್ನೂ ನೂರಾರು ವರ್ಣಮಯ ಗಿಡಗಳು ನಿಸರ್ಗದಲ್ಲಿವೆ.


Posted via DraftCraft app


ಟಿಪ್ಪಣಿ: ಈ ಕಳಗೆ ಬರೆದಿದ್ದು ದಿನಾಂಕ 19, ಸಪ್ಟಂಬರ್, 2013.







ಬಂದಿದೆ ಶ್ರಾವಣ
ಹೂಗಳ ತೋರಣ
ಹಸಿರಿನ ಸಿರಿಯ ಉಲ್ಲಾಸ
ನವ ಶೃಂಗಾರ ವಿಳಾಸ|

ಕಾಡು ಕುಸುಮವಿದೇನು
ತೇರಿನಂತರಳಿಹುದೇನು
ದುಂಬಿಗಳ ಗುಂಯ್ ಗುಟ್ಟುವಿಕೆಯೇನು
ಆಘ್ರಾಣಿಸೆ ಸುವಾಸನೆಯಿದೇನು|

ದಿನವೊಂದಾಗೆ ಉದುರಿ ಬೀಳುವಂತಹುದಲ್ಲ
ನೀರೆರೆದಿಲ್ಲ
ಗೊಬ್ಬರವೇನೂ ಬೇಕಿಲ್ಲ
ರೋಗಬಾಧೆ ಇಲ್ಲಿಲ್ಲ
ಕೀಟನಾಶಕಗಳ ಹಂಗಿಲ್ಲ|

ಅರಳಿ ನಿಂತಿಹ ವೈಚಿತ್ರ್ಯವಿದೇನು
ಜೈವಿಕ ಗಡಿಯಾರವಿದೇನು
ಋತುಗಾನವಿದೇನು
ಶ್ರಾವಣ ಮುಗಿಯುವ ತನಕ|

Sunday 21 October 2012

ಕಿಸ್ಕಾರವೆಂಬ Ixora ......ಹೂವಿನ ಹಾರ




                     





ತಟ್ಟೆಯಲ್ಲಿ ದೋಸೆ ಯಾರನ್ನೋ ಕಾಯುತ್ತಿದೆ , ನಮ್ಮತ್ತೆ ವಾಕಿಂಗ್ ಹೋದೋರು ಇನ್ನೂ ಬಂದಿರಲಿಲ್ಲ . ಒಟ್ಟಿಗೇ ಮಾತನಾಡಿಕೊಂಡು ತಿಂಡಿ ತಿನ್ನೋಣ ಅಂದ್ರೆ ಬರೋದು ಕಾಣಿಸ್ತಾನೇ ಇಲ್ಲ .

" ಮುಂಜಾನೆಯ ಚಳಿಗೇ ಎದ್ದು ಯಾಕೆ ಹೋಗ್ತೀರಾ ? "
" ಹೊರಗಿನ ಶುದ್ಧ ಗಾಳಿ ಒಳ್ಳೇದು "
" ಇಲ್ಲೇ ಮನೆಯಂಗಳದಲ್ಲಿ ಅಡ್ಡಾಡಿದರೆ ಸಾಲದೇ ? "

ವಯಸ್ಸಾದವರು ನನ್ನ ಮಾತೆಲ್ಲಿ ಕೇಳ್ತಾರೆ , ಅವರ ಹಟವೇ ಅವರಿಗೆ . ಇವತ್ತೂ ಹಾಗೇ ಬೆಳಗೆದ್ದು ಹೋದೋರು ಇನ್ನೂ ನಾಪತ್ತೆ . ಹಾಲು ಬಿಸಿ ಮಾಡಲಿಟ್ಟು , ಕುದಿದ ನೊರೆ ಹಾಲಿಗೆ ಸಕ್ಕರೆ ಹಾಕಿ , ಕಾಫಿ ಡಿಕಾಕ್ಷನ್ ಸೇರಿಸುತ್ತ ಇದ್ದ ಹಾಗೆ ಅತ್ತೆ ಬಂದ್ರು .

" ಕಾಫಿ ರೆಡಿ ಆಯ್ತಾ , ನಾನು ಬಂದೆ ನೋಡು "
" ಆಯ್ತು , ಎಲ್ಲೆಲ್ಲ ಹೋಗಿದ್ರಿ ? "
ಇವತ್ತು ಹೋಗಿದ್ದು ಬಾಯಾರು ದೇವಸ್ಥಾನದವರೇಗೆ .....ಅಲ್ಲೊಂದು ಮನೆ ಸಿಕ್ತು , ಮನೆ ಮುಂದೆ ನಾಯಿ ...."
" ಏನು ಬೌ ಬೌ ಹೇಳ್ತ ..."
" ಅದಲ್ಲ , ಯಾರೇ ಮುಂದುಗಡೆ ಬಂದ್ರೂ ನಮಸ್ಕಾರ ಮಾಡುತ್ತೆ , ನೀನೂ ಬಾ , ಸಂಜೆ ತಿರ್ಗಾ ಹೋಗೋಣ "
" ಹ್ಞೂಂ , ಈಗ ಕಾಫೀ ಕುಡೀರಿ "
ತಿಂಡಿ ತಿಂದು ಎಂದಿನಂತೆ ಟೀವಿ ಮುಂದೆ ಆಸೀನರಾದರು ನಮ್ಮತ್ತೆ , ಭಗವದ್ಗೀತೆ ಪ್ರವಚನ ಇವತ್ತು ಎಲ್ಲೀತನಕ ಬಂತು ಎಂದು ಅವಲೋಕಿಸುತ್ತಾ .
" ಹ್ಞಾ , ಊಟಕ್ಕೆ ಏನಡುಗೆ ಮಾಡೋದು ಅಂತಿದೀಯ ನೋಡು , ವಾಕಿಂಗ್ ಮಾಡ್ತಾ ಕೇಪುಳ ಹೂ ತಂದಿದ್ದೇನೆ "
ಅದನ್ನ ಏನು ಮಾಡೋಣಾ ಅಂತೀರಾ ? " ಪ್ಲಾಸ್ಟಿಕ್ ಚೀಲ ತುಂಬಾ ಹೂ ಕಿತ್ತು ತಂದಿದ್ದರು .
" ಎಲ್ಲಾ ಹೂ ಹಾಕಿ ಬಿಡಬೇಡ , ನಾಳೆಗೂ ಇಟ್ಟಿರು , ತೊಟ್ಟು ತಗೆದು ನಾನೇ ಆಯ್ದು ಕೊಡ್ತೇನೆ " ಅಂದವರೇ ಅಂದಿನ ಅಗತ್ಯಕ್ಕೆ ಬೇಕಾದ ಕೇಪುಳ ಹೂಗಳನ್ನು ಆಯ್ದು ಇಟ್ಟರು .
" ಇದಕ್ಕೆ ನಾಲ್ಕು ಜೀರಿಗೆ , ಒಂದಿಷ್ಟು ಕಾಯಿತುರಿ ಹಾಕಿ ....."
" ಅಷ್ಟೇನಾ , ಮಾಡುವಾ "
" ಹುಳಿ ಮಜ್ಜಿಗೆ ಬೇಡ , ಇವತ್ತಿಂದು ಇಲ್ವೇ , ಮೊಸರು ಹಾಕು ಆಯ್ತಾ "
" ಒಂದು ಗಾಂಧಾರಿ ಮೆಣಸು ಹಾಕ್ಲಾ "
" ಅದು ಬೇಡ , ಕೇಪುಳ ಹೂ ಶರೀರಕ್ಕೆ ತಂಪು...ತಂಪು.... ಚಿಗುರೆಲೆಯೂ ತಂಬ್ಳಿ ಮಾಡ್ಬೌದು , ಎಲ್ಲ ಗಿಡಗಂಟಿಗಳ ಎಳೆಯ ಚಿಗುರು ಹಾಕಿ ತಂಬುಳಿ.... ಆಗ್ತದೆ " ಅತ್ತೆ ಹೇಳ್ತಾನೇ ಹೋದರು , ಗೀತಾ ಪ್ರವಚನದಂತೆ .

  


ಕಿಸ್ಕಾರದ ತಂಬುಳಿ ಮತ್ತು ಕಷಾಯ ತಯಾರಿಯ ಕುಸರಿ ಕಲೆ ಹಳೆಯ ತಲೆಮಾರಿನವರಿಗೆ ಚೆನ್ನಾಗಿಯೇ ತಿಳಿದಿದೆ . ಕೇಪುಳ ಎಂದು ಆಡುಮಾತಿನಲ್ಲಿ ಹೇಳುವ ಈ ಸಸ್ಯಕ್ಕೆ ಕಿಸ್ಕಾರ , ಆಂಗ್ಲ ನುಡಿಯಲ್ಲಿ jungle flame , Ixora , ಮಲಯಾಳಂನಲ್ಲಿ ചെത്തി ( chethi ) ಎಂದೂ ಹೆಸರಿದೆ , ಸಸ್ಯಶಾಸ್ತ್ರೀಯವಾಗಿ Ixora coccinea , ಹಾಗೂ Rubiaceae ಕುಟುಂಬಕ್ಕೆ ಸೇರಿದೆ . ನಿಸರ್ಗದಲ್ಲಿ ಸಹಜವಾಗಿ ದೊರೆಯುವ ಇಂತಹ ಸಸ್ಯಗಳನ್ನು ಕಾಟ್ ಕಿಸ್ಕಾರ , ಕಾಟ್ ಮಾವು , ಕಾಟ್ ಗುಲಾಬಿ ಇತ್ಯಾದಿಯಾಗಿ ಹೆಸರಿಸುವ ರೂಢಿ ನಮ್ಮಲ್ಲಿದೆ , ಅರ್ಥಾತ್ ಇವೆಲ್ಲ ಕಾಟ್ ( ಕಾಡು ) ಸಸ್ಯಗಳು . ಕಿಸ್ಕಾರದಲ್ಲಿ ಕೆಂಪು ಕೆಂಪಾದ ಹಣ್ಣುಗಳು ಹೂವರಳಿದ ತರುವಾಯ ಕಾಣಿಸಿಕೊಳ್ಳುತ್ತವೆ . ಕಾಫೀ ಹಣ್ಣುಗಳಂತಹ ಈ ಹಣ್ಣುಗಳನ್ನು ಗ್ರಾಮೀಣ ಪರಿಸರದ ಮಕ್ಕಳು ಗುಡ್ಡ , ಗದ್ದೆ ಬದುಗಳಲ್ಲಿ ಸಂಗ್ರಹಿಸಿ ತಿಂದವರೇ . ಈ ಹಣ್ಣುಗಳ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದಾಗಿದೆ . ಈ ಸಸ್ಯ ಪ್ರವರ್ಗದಲ್ಲಿ ಸುಮಾರು 500 ಕ್ಕೂ ಹೆಚ್ಚು ಜಾತಿಗಳಿವೆ . ಈಗ ಎಲ್ಲಿ ನೋಡಿದರೂ ಗುಡ್ಡ ಕಾಡುಗಳನ್ನು ಕಡಿದು ವಾಣಿಜ್ಯ ಬೆಳೆಗಳನ್ನು ಬೆಳೆಯುವ ನೆಪದಲ್ಲಿ ವನ್ಯಸಸ್ಯಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ .




ಹೂ , ಎಲೆ , ಬೇರುಗಳು ವೈದ್ಯಕೀಯ ಗುಣಧರ್ಮವನ್ನು ಹೊಂದಿವೆ .
ಹೂಗಳು ಅತಿಸಾರ , ರಕ್ತಭೇದಿ ಖಾಯಿಲೆಗಳಿಗೆ ಔಷಧಿ . (diarrhea and dysentery )
ಹೂಗಳನ್ನು ಸಂಗ್ರಹಿಸಿ , ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಅಗತ್ಯ ಬಿದ್ದಾಗ ನೀರು ಅಥವಾ ಹಾಲಿನಲ್ಲಿ ಬೆರೆಸಿ ಸೇವನೆ .

ಚರ್ಮದ ಮೇಲ್ಭಾಗದ ಗಾಯ , ಕಜ್ಜಿ , ಹುಣ್ಣುಗಳು ಇದರ ಬೇರಿನ ಕಷಾಯ ಸೇವನೆಯಿಂದ ಬೇಗನೆ ವಾಸಿಯಾಗುತ್ತವೆ . ಬೇರನ್ನು ಕುಚ್ಚಲಕ್ಕಿ ತೊಳೆದ ನೀರಿನಲ್ಲಿ ಅರೆದು ಲೇಪ ಹಾಕುವುದು ಇನ್ನೊಂದು ವಿಧಾನ . ಇದೊಂದು ಆಂಟಿ ಸೆಪ್ಟಿಕ್ ಎಂದು ವೈಜ್ಞಾನಿಕ ಸಂಶೋಧನೆಗಳು ಧೃಢಪಡಿಸಿವೆ .

ಇದರ ಹಸಿ ಬೇರನ್ನು ಸ್ವಲ್ಪ ಜಜ್ಜಿ ತೆಂಗಿನೆಣ್ಣೆಯಲ್ಲಿ ಹಾಕಿಟ್ಟು , ಬಿಸಿಲಿನಲ್ಲಿ ಒಂದೆರಡು ದಿನ ಇಟ್ಟು ಕೆಂಪೆಣ್ಣೆ ತಯಾರಿಸುವ ಕ್ರಮವಿದೆ . ಕುದಿಸುವುದೇನೂ ಬೇಡ , ತೆಂಗಿನೆಣ್ಣೆ ತಾನಾಗಿಯೇ ಕೆಂವರ್ಣಕ್ಕೆ ತಿರುಗುತ್ತದೆ . ಜಾಡಿಯಲ್ಲಿ ತುಂಬಿಸಿಟ್ಟು , ಎಳೆಯ ಕಂದಮ್ಮಗಳಿಗೆ ಈ ಎಣ್ಣೆ ಹಚ್ಚಿ ಬಿಟ್ಟು , ಬಿಸಿ ನೀರ ಸ್ನಾನ ಮಾಡಿಸುವ ಪರಿಪಾಠ ಹಿಂದಿನಿಂದಲೂ ಇದೆ . ನನ್ನ ಇಬ್ಬರು ಮಕ್ಕಳೂ ಈ ಕೆಂಪೆಣ್ಣೆ ಸ್ನಾನ ಮಾಡಿದವರೇ . ಮನೆಕಲಸಗಿತ್ತಿ ಕಲ್ಯಾಣಿಯೇ ಬಹಳ ಮುತುವರ್ಜಿಯಿಂದ ಎಣ್ಣೆ ಮಾಡಿಟ್ಟುಕೊಂಡು ಸ್ನಾನ ಮಾಡಿಸುತ್ತಿದುದನ್ನು ಮರೆಯಲುಂಟೇ ?

ಸ್ತ್ರೀಯರಲ್ಲಿ ಮಾಸಿಕ ಋತುಸ್ರಾವದಲ್ಲಿ ಏರುಪೇರುಗಳುಂಟಾಗಿ ಕೆಲವೊಮ್ಮೆ ಆಸ್ಪತ್ರೆ ಮೆಟ್ಟಲೇರುವುದಿದೆ . ಇಂತಹ ಪರಿಸ್ಥಿತಿ ಎದುರಾದಲ್ಲಿ ಕಿಸ್ಕಾರದ ಬೇರಿನ ಕಷಾಯ ಸೇವನೆಯಿಂದ ಗುಣಮುಖರಾಗಬಹುದಾಗಿದೆ .

ಸಾಕಿದ ಹಸುವಿಗೆ ಗರ್ಭ ನಿಲ್ಲದೇ ತೊಂದರೆಯಾಗುತ್ತಿದೆಯಾದಲ್ಲಿ ಅದಕ್ಕೂ ಕಿಸ್ಕಾರದ ಬೇರು ಔಷಧಿ . ನಿಯಮಿತವಾಗಿ ಕಲಗಚ್ಚಿನೊಂದಿಗೆ ಬೇರಿನ ಕಷಾಯ ಕುಡಿಸಿ .

ಎಲೆಗಳ ಕಷಾಯ ಡಯಾಬಿಟೀಸ್ ರೋಗಿಗಳಿಗೆ ಉತ್ತಮ . ಬ್ಲಡ್ ಶುಗರ್ ನಿಯಂತ್ರಣ .

ಕ್ಯಾನ್ಸರ್ ಎಂಬ ಖಾಯಿಲೆಗೆ ಬಲಿಯಾಗುತ್ತಿರುವವರು ದಿನ ಹೋದಂತೆ ಅಧಿಕವಾಗುತ್ತಿದ್ದಾರೆ . ಇದಕ್ಕೇನು ಕಾರಣವೋ ಗೊತ್ತಿಲ್ಲ . ಆದರೆ ಕಿಸ್ಕಾರದಲ್ಲಿ ಕ್ಯಾನ್ಸರ್ ಪ್ರತಿಬಂಧಕ ಗುಣಗಳಿರುವುದನ್ನು ವೈದ್ಯಕೀಯ ಸಂಶೋಧನೆಗಳು ದೃಢಪಡಿಸಿವೆ .



ಸಾಮಾನ್ಯವಾಗಿ ದೇವತಾರ್ಚನೆಯಲ್ಲಿ ಕಿಸ್ಕಾರ ಹೂ ಇರಲೇಬೇಕು . ನವರಾತ್ರಿಯ ಸಂಭ್ರಮಾಚರಣೆಯಲ್ಲಿ , ದುರ್ಗಾಮಾತೆಯ ಪೂಜಾವಿಧಿಗಳಲ್ಲಿ ಈ ಹೂವಿಗೇ ಅಗ್ರಸ್ಥಾನ . ಎಪ್ಪತ್ತರ ದಶಕದ ಒಂದು ಮಲಯಾಳಂ ಸಿನಿಮಾ ಹಾಡು ಆರ೦ಭವಾಗುವುದೇ ಈ ಹೂವಿನ ಹೆಸರಿನೊಂದಿಗೆ ....‘"Chethi, mandaram, tulasi...." ( "ചെത്തി മന്ദാരം തുളസി ......" ) ಎವರ್ ಗ್ರೀನ್ ಹಾಡು , ಈಗಲೂ ಚಲಾವಣೆಯಲ್ಲಿದೆ .

ಹೂತೋಟಗಳಲ್ಲಿ , ಉದ್ಯಾನವನಗಳಲ್ಲಿ ಕಾಣಸಿಗುವ ಕಿಸ್ಕಾರ ಹೈಬ್ರಿಡ್ ತಳಿ . ವಿಧ ವಿಧವಾದ ವರ್ಣಗಳಲ್ಲಿ ಲಭ್ಯ . ಕತ್ತರಿಸಿದ ಗೆಲ್ಲುಗಳ ತುಂಡುಗಳಿಂದ ಹೊಸ ಸಸ್ಯವನ್ನು ಸುಲಭವಾಗಿ ಬೆಳಸಬಹುದು . ಫಲವತ್ತಾದ ಆಮ್ಲೀಯ ಮಣ್ಣಿನಲ್ಲಿ ಸೊಗಸಾಗಿ ಬೆಳೆಯುತ್ತದೆ . ಬಿಸಿಲೂ ಅವಶ್ಯಕ , ಸದಾಕಾಲ ಹೂಗಳಿಂದ ತುಂಬಿರುತ್ತದೆ . ತೋಟಗಳಲ್ಲಿ ತಡೆಬೇಲಿಯಾಗಿ ಈ ಗಿಡಗಳನ್ನು ನೆಟ್ಟು ಬೆಳೆಸಿದರೆ ತೋಟವೇ ಶೃಂಗಾರದಿಂದ ಲಕಲಕಿಸುವುದು . ಎತ್ತರವಾಗಿ 8 - 10 ಅಡಿ ಬೆಳೆಯುವ ಈ ಅಲಂಕಾರಿಕ ಕಸಿ ಗಿಡಗಳಿಗೆ ವೈದ್ಯಕೀಯ ಮಹತ್ವ ಕೊಡಲು ಬರುವುದಿಲ್ಲ .

Posted via DraftCraft app




ಟಿಪ್ಪಣಿ:   7/ 4/ 2016 ರಂದು ಹೊಸ ಚಿತ್ರಗಳೊಂದಿಗೆ ನವೀಕರಿಸಲಾಗಿದೆ ಹಾಗೂ ವಿಸ್ತರಿಸಿ ಬರೆದಿದ್ದೇನೆ.

ದಾಹಶಾಮಕ ಕಿಸ್ಕಾರ

ಮುಂಜಾನೆಯ ಒಂದು ಹಂತದ ಕೆಲಸ ಮುಗಿದಾಗ,  ಏನೋ ಒಂದು ಫೊಟೋ ಕ್ಲಿಕ್ಕಿಸುವ ಮಹದಾಲೋಚನೆಯಿಂದ ಮನೆಯಿಂದ ಹೊರಗಿಳಿದಾಯ್ತು.  ಮಟ ಬೇಸಿಗೆಯಲ್ವೇ,  ಕಳೆಹುಲ್ಲುಗಳು ಕೂಡಾ ಒಣಗಿದ್ದುವು,   " ಆಹ!  ಅಲ್ಲೊಂದು ಕಿಸ್ಕಾರದ ಹೂಗಳ ಪರಿವಾರ ಅರಳಿದೆ! "   ಸರಿ,  ಇದೇ ಲಾಯಕ್ಕು ಅಂದ್ಬಿಟ್ಟು ಫೊಟೋ ತೆಗೆದಿದ್ದಾಯ್ತು.

ಬೇಸಿಗೆಯ ದಿನಗಳಲ್ಲಿ ಕಿಸ್ಕಾರದಷ್ಟು ತಂಪು ನೀಡುವ ಸಸ್ಯ ಇನ್ನೊಂದಿಲ್ಲ.   ರಣಬಿಸಿಲಲ್ಲಿ ಗುಡ್ಡಗಾಡು ತಿರುಗಾಟವೇ,  ಬಾಯಾರಿದಾಗ ಈ ಕೇಪುಳ ಹೂಗಳನ್ನು ಆರಿಸಿ ತಿಂದು ದಾಹ ನಿವಾರಿಸಿಕೊಳ್ಳಬಹುದಾಗಿದೆ.   ಇದನ್ನೂ ಗೌರತ್ತೆಯೇ ಹೇಳಿದ್ದು,  ಯಾಕೋ ನೆನಪಾಯ್ತು.   ಈಗೀಗ ತೋಟದ ಕೆಲಸಗಾರರೂ  " ಅಕ್ಕ,  ಬಾಟಲ್ ಕೊಡಿ, ನೀರು ತುಂಬಿಸಲಿಕ್ಕೇ..." ಅನ್ನುವವರಾಗಿದ್ದಾರೆ.   ತೋಟದಲ್ಲಿ ಕೆರೆಯಿದೆ,   ಸುರಂಗದಿಂದ ಹರಿದು ಬರುವ ನೀರಿದೆ,   ಬೊಗಸೆಯೊಡ್ಡಿ ನೀರು ಕುಡಿವ ಆನಂದವನ್ನೇ ಎಲ್ಲರೂ ಮರೆತಂತಿದೆ.    ಎಲ್ಲರೂ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ನೀರು ಒಯ್ಯುವವರೇ,   ಖಾಲಿ ಬಾಟಲ್ ಗಳನ್ನು ಅತ್ತ ಇತ್ತ ಎಸೆದು ಪರಿಸರವನ್ನು ಹಾಳುಗೆಡವಲು ಮಾತ್ರ ತಿಳಿದಿರುವ  ನಮಗೆ ಹಿಂದಿನವರ ಜೀವನಶೈಲಿಯ ಒಳಗುಟ್ಟುಗಳು ಹೇಗೆ ತಾನೇ ಗೊತ್ತಿರುತ್ತೆ ಅಲ್ವ ?


  
   

ರಣ ಬೇಸಿಗೆಯಲ್ಲೂ ಹಚ್ಚ ಹಸಿರು,
ನೀರೆರೆದು ಸಲಹಿದವರ್ಯಾರೋ,
ಕಣ್ಸೆಳೆವ ವರ್ಣವೈಖರಿ....
ಇನ್ನೂ ಓದಿಲ್ಲವೇ, 
ಇದು ದಾಹಶಾಮಕ ಕಿಸ್ಕಾರ.

Sunday 14 October 2012

" ಅಮ್ಮಂಗೊಂದು ಫೇಸ್ ಬುಕ್ ಮಾಡ್ಕೊಡೇ ......."





 ಗ್ರಾಮೀಣ  ಪ್ರದೇಶದಲ್ಲಿರುವ  ನಮ್ಮ  ಮಕ್ಕಳು  ಆಧುನಿಕ  ವಿಜ್ಞಾನವೆನಿಸಿದ  ಕಂಪ್ಯೂಟರ್  ಶಿಕ್ಷಣದಿಂದ  ವಂಚಿತರಾಗಬಾರದು  ಎಂಬ  ಸದುದ್ಧೇಶದಿಂದ  ಮಗನಿಗೆ  ಗಾಯತ್ರೀ  ಮಂತ್ರೋಪದೇಶವಾದ  ಮುಹೂರ್ತದಲ್ಲಿ   ಮನೆಗೆ  ಕಂಪ್ಯೂಟರ್  ಬಂದಿತು .    ಹನ್ನೊಂದರಿಂದ  ಹದಿಮೂರು  ವಯಸ್ಸಿನ  ಬಾಲಕರಿಗೆ  ಉಪನಯನ  ಸಂಸ್ಕಾರದ  ವಾಡಿಕೆಯ  ಕ್ರಮದಂತೆ  ನಾವೂ  ಬಂಧು ಬಳಗವನ್ನೆಲ್ಲ  ಆಹ್ವಾನಿಸಿ  ಗೌಜಿಯ  ಸಮಾರಂಭ  ನಡೆಸಿದೆವು .    ಆಗ  ಬಂದಿದ್ದು  ಡೆಸ್ಕ್ ಟಾಪ್ .     ನಮ್ಮೆಜಮಾನ್ರೂ  ಅದಕ್ಕೆ  ತಕ್ಕಂತೆ  ತಯಾರಿ  ನಡೆಸಲು  ಪ್ರಾರಂಭಿಸಿದ್ದರು .   ಇನ್ನಿತರ  ಟೀವಿ ,  ವೀಡಿಯೋ  ರಿಪೇರಿ  ಉದ್ಯೋಗಗಳನ್ನು  ಮೂಲೆಗಿರಿಸಿ  ಸದಾಕಾಲ  ಕಂಪ್ಯೂಟರ್ ಜ್ಞಾನಕ್ಕೆ  ಸಂಬಂಧಿಸಿದ  ಪುಸ್ತಕಗಳನ್ನು  ಓದುತ್ತಾ .....

ಆಗ  ಇಲ್ಲಿ  ಅಂರ್ಜಾಲ  ಸಂಪರ್ಕವೂ  ಇರಲಿಲ್ಲ .   ಮಕ್ಕಳು  ಬಹು ಬೇಗನೆ  ಈ  ಯಂತ್ರದ  ಮುಂದೆ  ಕುಳಿತು  ಗೇಮ್ಸ್ ಗಳನ್ನು  ಆಡಲು  ಕಲಿತರು .   " ನೀನೂ  ಕಲೀ "  ಎಂದು  ನನ್ನನ್ನೂ  ಹುರಿದುಂಬಿಸಿದರು .   " ಈ  ಆಟಗಳು ಯಾರಿಗ್ಬೇಕು "  ಸುಮ್ಮನಿದ್ದೆ .  ಅವನೋ  ಮಹಾ  ಪ್ರಚಂಡ ,  ಮಗುವಾಗಿದ್ದಾಗಲೇ  ವೀಡಿಯೋ  ಗೇಮ್ಸ್  ಆಡ್ತಿದ್ದ .   ಈಗ  ಕಂಪ್ಯೂಟರ್ ಗೇಮ್ಸ್  ಹೆಚ್ಚುವರಿ  ಸೇರ್ಪಡೆಯಾಯ್ತು .

 ನನ್ನ  ಪ್ರಥಮ  ಹವ್ಯಾಸವಾಗಿದ್ದ  ಚಿತ್ರಕಲೆಯನ್ನು  ಅರಿತಿದ್ದ  ಅವನು   " ಅಮ್ಮಾ ,  ಚಿತ್ರ  ಮಾಡಲೂ  ಬರುತ್ತೆ  ಇದರಲ್ಲಿ "   ಆಸೆ  ಹುಟ್ಟು ಹಾಕಿದ .

" ಹೌದೇ "  ಅನ್ನುತ್ತಾ  ಪ್ರಯತ್ನಿಸಿದೆ .   ಚಿತ್ರಗಳೇನೋ  ಚೆನ್ನಾಗಿ  ಮೂಡಿ ಬಂದವು .   ಆದರೆ  ಮಾಡಿದ  ಚಿತ್ರಗಳು  ಕೆಲವೇ  ದಿನಗಳಲ್ಲಿ  ಎಲ್ಲಿಗೋ  ಅಂತರ್ಧಾನವಾಗುತ್ತಿದ್ದವು .   

" ಅಷ್ಟು  ಚೆನ್ನಾಗಿ  ' ಸಿಂಡ್ರೆಲಾ '  ಚಿತ್ರ  ಬಿಡಿಸಿದ್ದೆನಲ್ಲ ,  ಇವತ್ತು  ನೋಡಿದ್ರೆ  ಆ  ಹುಡುಗಿ  ಎಲ್ಲೋ  ಓಡಿ  ಹೋಗಿದ್ದಾಳೆ ,  ಛೆ ..ಛೆ "  ನನ್ನ  ತೊಳಲಾಟ  ಈ  ಮಕ್ಕಳಿಗೆಲ್ಲಿ  ಅರ್ಥವಾಗಬೇಕು ?

ಆಸಕ್ತಿಯೇ  ಹೋಯಿತು .   ನನಗಾಗಿ  ಹಾಡುಗಳನ್ನು  ತುಂಬಿಸಿ  ಕೊಟ್ಟ ,  ಆಯ್ತು ,  " ಕೇಳಿದ  ಹಾಡುಗಳನ್ನೇ  ಪುನಃ  ಪುನಃ  ಎಷ್ಟೂಂತ  ಕೇಳಲೀ ,  ಬೇರೆ  ಕೆಲ್ಸ  ಇಲ್ವೇ " 

ಅಲ್ಲಾಂದ್ರೂ  ನಾನೂ  ಕಂಪ್ಯೂಟರ್  ಹವ್ಯಾಸಿಯಾಗಿ  ಅಲ್ಲೇ  ಕುಳಿತಿದ್ದರೆ  ಮಕ್ಕಳೂ  " ಅಮ್ಮನಿಗೆ  ಹೇಳಿ ಕೊಡುವ ಆಟ "  ಶುರು  ಮಾಡ್ಬಿಟ್ಟು ಶಾಲಾ ಪಠ್ಯಗಳ  ಓದುವಿಕೆ  ಕುಂಠಿತವಾಗಿ  ಕಲಿಯುವುದರಲ್ಲಿ  ಹಿಂದೆ  ಬೀಳುತ್ತಾರೇನೋ ಎಂಬ  ಭಯವೂ  ಉಂಟಾಗಿ   ' ಕಂಪ್ಯೂಟರ್ ಸಹವಾಸವೇ ಬೇಡ ' ಅಂದ್ಕೊಂಡು  ದೂರ  ಸರಿದೆ .

                                         <><><>                   <><><>

ಒಂದೆರಡು  ವರ್ಷಗಳಲ್ಲಿ  ಅಂತರ್ಜಾಲ  ಸೌಲಭ್ಯವೂ  ಬಂದಿತು .   ಎಷ್ಟಾದರೂ  ಇದು  ಕೇರಳ  ರಾಜ್ಯವಲ್ಲವೇ ,   ' ಮನೆ ಮನೆಗೂ  ಕಂಪ್ಯೂಟರ್ ಸಾಕ್ಷರತೆ ' ಯ  ಅಭಿಯಾನ  ಆರಂಭವಾಗಿತ್ತು .    ಶಾಲೆ ,   ಸರ್ಕಾರೀ  ಕಛೇರಿಗಳಿಗೆ  ಕಂಪ್ಯೂಟರ್  ಯಂತ್ರ  ಬಂದಿತ್ತು .   ನಾನು  ಆಗಾಗ  ಭೇಟಿ  ನೀಡುತ್ತಿದ್ದ  ' ಹೆದ್ದಾರಿ  ಶಾಲಾ ಮಿತ್ರ ಮಂಡಲ' ದ   ಲೈಬ್ರರಿ  ಕೊಠಡಿಯಲ್ಲಿ  ಶಾಲೆಗೆಂದು  ಬಂದಿದ್ದ  ಕಂಪ್ಯೂಟರ್  ಯಂತ್ರವನ್ನು ಇಟ್ಟುಕೊಂಡಿದ್ದರು .  

ಆಗ್ಗಿಂದಾಗ್ಗೆ  ಭೇಟಿ  ನೀಡುತ್ತ  ಇದ್ದ  ಈ  ಲೈಬ್ರರಿಗೆ  ಒಂದು  ದಿನ  ಹೊಸ  ಪುಸ್ತಕಗಳೇನಾದರೂ  ಇದ್ದರೆ  ತರೋಣವೆಂದು  ಹೋಗಿದ್ದೆ .   ಲೈಬ್ರೇರಿಯನ್  ಆಚಾರ್  ಮೇಸ್ಟ್ರು  ದಿನ ಪತ್ರಿಕೆ  ಓದ್ತಾ  ಇದ್ದರು .      ಅವರನ್ನ  ಮಾತಿಗೆಳೆದೆ .

" ಕಂಪ್ಯೂಟರು  ಬಂತಲ್ಲ "

" ಬಂದಿದೆ ,  ನಾವು  ಟೀಚರ್ಸ್  ಮೂದಲು ಕಲಿತು  ಆಗ್ಲಿ ,   ಆ ಮೇಲೆ  ಈ  ಮಕ್ಕಳಿಗೆ  ಹೇಳಿ ಕೊಡೋಣಾ "

ಕಂಪ್ಯೂಟರನ್ನು  ಇಟ್ಟುಕೊಂಡಿದ್ದಂತಹ  ಕೊಠಡಿಗೆ  ಇಣುಕಿದೆ .    ಇಬ್ಬರು  ಅಧ್ಯಾಪಕರು  ಅದರ  ಮುಂದೆ  ನಿಂತು  ಗಹನವಾಗಿ  ಅವಲೋಕಿಸುತ್ತಿದ್ದಂತೆ ,   ಲೈಬ್ರರಿ ಬುಕ್ಸ್ ಗಳೊಂದಿಗೆ  ಮನೆಯ ಕಡೆ ನಡೆದೆ .

ನಮ್ಮ  ನೆರೆಯಲ್ಲಿ  ಒಂದು  ಚೆಕ್ ಪೋಸ್ಟ್  ಆಫೀಸ್  ಇದೆ .   ಅಲ್ಲಿಗೆ  ಬಾರದಿರುತ್ತದೆಯೆ ,   ನಮ್ಮವರು  ಅಲ್ಲಿದ್ದ  ಮಲಯಾಳೀ  ಉದ್ಯೋಗಸ್ಥರೊಂದಿಗೆ  ಪಟ್ಟಾಂಗ  ಮಾಡಿ  ಬಂದ್ರು .   "  ಸರ್ಕಾರ  ಕೊಟ್ಟಿದೆ ,   ಯಾಕೆ  ಬಂದಿದೇ  ಅಂತಾನೂ  ಗೊತ್ತಿಲ್ಲ ,   ಇಟ್ಕೊಂಡು  ಏನು ಮಾಡೋದು  ಅಂತಾನೂ ಗೊತ್ತಿಲ್ವಂತೆ "

ಅಂತರ್ಜಾಲ  ಸೌಲಭ್ಯ  ಬಂದೊಡನೆ   ಸ್ವಲ್ಪ  ಚುರುಕಾದೆ .   ದೂರದ  ದುಬೈಯಲ್ಲಿರುವ  ಬಾಲ್ಯ ಗೆಳತಿಯ  ನೆನಪಾಯ್ತು .   ಅವಳ  ಅಮ್ಮಂಗೆ  ಫೋನಾಯಿಸಿ  ಇ ಮೇಲ್ ಅಡ್ರೆಸ್  ಪಡೆದೆ .   ಮಕ್ಕಳ  ಸಹಾಯದಿಂದ  ಮೇಲ್ ಕಳ್ಸಿ ,  ಅವಳಿಂದ   ಉತ್ತರವೂ  ಬಂತು .   ಮನೆ ಸುದ್ದಿ ,  ಮಕ್ಕಳ  ಚಟುವಟಿಕೆಗಳ ವಿವರಣೆ  ಇತ್ಯಾದಿಯಿಂದ  ತೊಡಗಿ  ಅಡುಗೆಮನೆ  ವಹಿವಾಟಿನವರೆಗೆ  ಮೇಲ್  ಓಡಾಡುತ್ತ  ಇತ್ತು .   ಕಿವಿಗೆ  ಹೆಡ್ ಫೋನ್  ತಗಲಿಸಿ  ನೇರ  ಮಾತುಕತೆಯೂ  ಆಯಿತು .     ' ಮೆಕ್ಸಿಕನ್ ರೈಸ್ '  ಮಾಡುವ  ವಿಧಾನವನ್ನು  ಬರೆದು  ಕಳಿಸಿದ್ದೇ  ಕೊನೆಯದು .   ಅಂರ್ಜಾಲ  ಸಂಪರ್ಕ  ತಾತ್ಕಾಲಿಕವಾಗಿದ್ದುದರಿಂದ  ಮಾತುಕತೆ  ನಿಂತು ಹೋಯಿತು .    ಅವಳು  ಆ ತಿಂಡಿಯನ್ನು  ಮಾಡಿದಳೋ  ಬಿಟ್ಟಳೋ  ಒಂದೂ  ತಿಳಿಯಲಿಲ್ಲ .   ಅಲ್ಲಿಗೆ  ಪುನಃ  ಕಂಪ್ಯೂಟರ್  ಸಹವಾಸ  ಕಡಿಯಿತು .

ಮಕ್ಕಳ  ಶಿಕ್ಷಣದ  ಪ್ರಗತಿಗೆ  ಪೂರಕವಾಗಿರಲಿ  ಎಂದು  ತಂದ  ಕಂಪ್ಯೂಟರ್  ಡೆಸ್ಕ್ ಟಾಪ್ ನಿಂದ  ಲ್ಯಾಪ್ ಟಾಪ್ ಗೆ  ಜಿಗಿಯಿತು .    ಲ್ಯಾಪ್ ಟಾಪ್ ನ  ಹೊಸ ಹೊಸ  ಅವತರಣಿಕೆಗಳು  ಮಾರ್ಕೇಟ್ ಗೆ  ಲಗ್ಗೆಯಿಡುತ್ತಿದ್ದಂತೆ  ನಮ್ಮ ಮನೆಗೂ  ಅದೆಲ್ಲಿಂದಲೋ  ಓಡಿ  ಬರ್ತಿದ್ವು .    ಗಳಿಗೆಗೊಂದು  ಥರ  ಬಣ್ಣ  ಬದಲಾಯಿಸುವ  ಗೋಸುಂಬೆಯಂತಹ  ಈ  ಯಂತ್ರಗಳನ್ನು  ನೋಡಿಯೇ  ನಾನು  ಸುಸ್ತು .   ವಾರಕ್ಕೊಮ್ಮೆ  ಮಗಳು  ತರುತ್ತಿದ್ದ  ಲೈಬ್ರರಿ  ಪುಸ್ತಕಗಳು ,  ' ಸುಧಾ '   ಖಾಯಂ ಸಂಗಾತಿಗಳಾಗಿಉಳಿದುವು .

" ಲ್ಯಾಪ್ ಟಾಪ್ ಗಿಂತ  ಹೆಚ್ಚಿನದು  ಬರ್ತಾ  ಇದೆ ,  ನೋಡ್ತಿರು .."  ನಮ್ಮವರು  ಆಗಾಗ  ಅನ್ತಿದ್ರು .   ಅದೂ  ಒಂದು  ದಿನ  ಬಂದಿತು .   ಅಮೇರಿಕೆಯಲ್ಲಿದ್ದ  ಶ್ಯಾಮ್  ಊರಿಗೆ  ಬರುವವನಿದ್ದ .  ಬರೋವಾಗ  ಐ - ಪ್ಯಾಡ್  ಕೊಂಡು  ತರಲು  ನಮ್ಮವರು  ಹೇಳಿದ್ದರು .   ಅವನೂ ತಂದೇ  ಬಿಟ್ಟ .   ಚಿನ್ನದ  ಅಲ್ಲಲ್ಲ ,   ವಜ್ರಾಭರಣದಂತೆ  ಅದನ್ನು  ಜೋಪಾನ  ಮಾಡುತ್ತಿದ್ದನ್ನು  ನೋಡಿದ್ರೆ ,  ಸಮಾನಮನಸ್ಕ  ಸ್ನೇಹಿತರಿಗೆ  ತೋರಿಸಿ ,  ವೈಶಿಷ್ಟ್ಯಗಳ  ವರ್ಣನೆ ಮಾಡುತ್ತಾ ಇರಬೇಕಾದರೆ ,  ನಾವ್ಯಾರೂ  ಮುಟ್ಟೋ  ಹಾಗೇ  ಇರ್ಲಿಲ್ಲ .   ಪುಟ್ಟ  ಮಕ್ಕಳ  ಸ್ಲೇಟಿನಂತಹ  ಈ  ಸಾಧನವನ್ನು  ಕರಗತ  ಮಾಡಿಕೊಳ್ಳಲು  ನಮ್ಮೆಜಮಾನ್ರು  ಹಾಗೂ  ಗಿರೀಶ್ ಆ  ಸಮಯದಲ್ಲಿ  ತುಂಬಾ  ಶ್ರಮ ಪಟ್ಟಿದ್ದಾರೆ .   ಸ್ವಯಂ ಸಾಧನೆಯಿಂದಲೇ  ತುದಿಬೆರಳಿನಿಂದ  ಅಂತರ್ಜಾಲದಲ್ಲಿ  ವಿಹರಿಸುತ್ತಿದುದನ್ನು  ನೋಡುತ್ತಲೇ ಬಂದೆ .   ಮಕ್ಕಳೂ  ಪಾದರಸ ವೇಗದಲ್ಲಿ  ಅಪ್ಪನನ್ನೂ  ಮೀರಿಸಿದರು .

                                      <><><>                       <><><>

" ರಜಾ.....ರಜಾ .. "  ಮಗಳು  ಕುಣಿಯುತ್ತ  ಮನೆಗೆ  ಬಂದಳು .

" ಪರೀಕ್ಷೆಗೆ  ಓದು "

" ಪರೀಕ್ಷೆಗೆ  ಇನ್ನೂ  ಎರಡು  ತಿಂಗಳಿದೆ ,   ಒಂದೊಂದು  ಪರೀಕ್ಷೆಗೂ  ವಾರಗಟ್ಳೆ  ಗ್ಯಾಪ್ ಇದೆಯಮ್ಮ ,  ಈಗಲೇ  ಓದಿದ್ರೆ  ಮರ್ತು ಹೋಗುತ್ತೆ "

ಮೂರು  ಬಸ್ಸು  ಬದಲಾಯಿಸಿ  ದಿನಾ  ಮಂಗಳೂರಿಗೆ  ಹೋಗಿ ಬಂದು ಮಾಡ್ತಿದ್ದಳು ,  ಹೀಗೆ  ಹೇಳೂದು  ಸಹಜವೇ .   ನಾಲ್ಕು ದಿನ  ವಿಶ್ರಾಂತಿ  ಪಡೆಯಲಿ  ಅಂತ  ಕೆಲವು  ದಿನ  ಸುಮ್ಮನಿದ್ದೆ .  ಇವಳ  ಎಕ್ಸಾಮ್  ಮುಗಿದು ,  ರಿಸಲ್ಟ್  ಬಂದು ,  ಅವಳ  ಆಯ್ಕೆಯ ವೃತ್ತಿಪರ ಕೋರ್ಸ್ ಆರಂಭ  ಆಗುವಷ್ಟರಲ್ಲಿ  ಇನ್ನೊಂದಾರು  ತಿಂಗಳಾದರೂ  ಆದೀತು ,  ಅಷ್ಟು ದಿನಗಳೂ  ನನ್ನ  ಪತ್ರಿಕೆಗಳು ಖೋತಾ .

ಕೆಲವು  ದಿನ  ಸುಮ್ಮನಿದ್ದೆ .   " ರಜಾ ಮಜಾ  ಅಂತ  ಮನೇಲೇ  ಇದ್ದೀಯಲ್ಲ ,  ಲೈಬ್ರರಿ  ಬುಕ್ಸ್  ಆದ್ರೂ  ತಂದ್ಕೊಡು "    ಅವಳು  ಕ್ಯಾರೇ  ಅನ್ನಲಿಲ್ಲ .   ನಮ್ಮವರೂ  " ಏನು  ಬೇಕಾದ್ರೂ  ಕಂಪ್ಯೂಟರ್ ನಲ್ಲಿ  ಓದಬಹುದು "  ಎಂದು  ಛೇಡಿಸಿದರು .

ಸಿಟ್ಟು  ಬಂದು  ಬಿಟ್ಟಿತು .   " ಹೌದೇ ,  ನಾನೂ  ಓದ್ತೀನಿ "  ಮಗಳ  ಮುಖ  ನೋಡಿದೆ .   ಅವಳೂ  ವಿಧಿಯಿಲ್ಲದೆ " ಹೀಗ್ಹೀಗೆ  ಮಾಡು "  ಎಂದು  ಬೆರಳನ್ನು  ಅತ್ತ ಇತ್ತ   ಐ - ಪ್ಯಾಡ್  ಮೇಲೆ  ಆಡಿಸಿ  ತೋರಿಸಿದಳು .    ಅಂತೂ  ಓದಲು  ಸಾಧನ  ದೊರೆಯಿತು .   ನೆಮ್ಮದಿ  ಸಿಕ್ಕಿತು .

ಮಗನೂ  ಬಂದ .   ಅವನದ್ದೂ  ಇಂಜಿನಿಯರಿಂಗ್  ಪರೀಕ್ಷೆ  ಮುಗಿದಿತ್ತು .  " ಅತ್ರಿ  ಬುಕ್ ಸೆಂಟರಿಂದ  ನಾನು ಹೇಳಿದ  ಪುಸ್ತಕ   ತಂದಿದ್ದೀಯಾ "  ನನ್ನ  ತನಿಖೆ .   " ಹೋಗಮ್ಮ ,  ಮನೆಗೆ  ಬಂದ ಕೂಡ್ಲೇ  ಶುರುವಾಯ್ತು  ನಿಂದು "  ರೇಗಾಡಿದ .

ನನ್ನ  ಪಾಡಿಗೆ  ಐ - ಪ್ಯಾಡ್  ಹಿಡಿದು ಕನ್ನಡಕ  ಮೂಗಿಗೇರಿಸಿ  ಓದುತ್ತಾ ಮಗ್ನಳಾಗಿದ್ದುದು  ಒಂದು  ದಿನ  ಮಗನ  ದೃಷ್ಟಿಗೆ ಬಿತ್ತು .   ಏನ್ ಮಾಡ್ತಿದಾಳೆ  ಅಂದ್ಕೊಂಡು  ಬಗ್ಗಿ ನೋಡಿದ .

" ಅಮ್ಮಂಗೊಂದು  ಫೇಸ್ ಬುಕ್  ಮಾಡ್ಕೊಡೇ "  ತಂಗಿಗೆ  ಆಜ್ಞಾಪಿಸಿದ . 

  ಅವಳು  ಆ  ಕೂಡಲೇ  ನನ್ನ ಕೈಲಿದ್ದ  ಐ - ಪ್ಯಾಡ್ ಅನ್ನು  ಕಿತ್ತುಕೊಂಡು  ತಟಪಟನೆ  ಬೆರಳಾಡಿಸುತ್ತಾ ,  ನನ್ನ  ಜಾತಕವನ್ನೂ  ಬರೆದು ಸಿದ್ಧ ಪಡಿಸಿ  ಕೊಟ್ಟೂ  ಆಯ್ತು .

ಮುಂದೇನಾಯ್ತಂತೆ ,
ನೀರಿಗಿಳಿದ ಮೀನಿನಂತೆ ,
ರೆಕ್ಕೆ ಬಲಿತ  ಹಕ್ಕಿಯಂತೆ,
ಕಾಲಿಗೆರಡು  ಚಕ್ರ  ಬಂದಂತೆ.....


Photo by : Vishnu Vijay

Posted via DraftCraft app

Saturday 6 October 2012

ಮುಳ್ಳುಸೌತೆಯ ರಸದೌತಣ



ಅಷ್ಟಮೀ  ಚೌತೀ  ಹಬ್ಬಗಳು  ಮುಗಿದಿವೆ.   ನವರಾತ್ರೀ ದಿನಗಳು  ಬರಲಿವೆ.    ದೀಪಾವಳಿಯೂ  ಬರಲಿದೆ.   ಈ  ಹೊತ್ತಿಗೆ  ಮನೆಯಂಗಳದ  ಮಳೆಗಾಲದ  ಇನ್ನಿತರ  ತರಕಾರಿಗಳು ಖಾಲಿಯಾಗಿಬಿಡುತ್ತವೆ.  ಆದರೆ  ಅಂಗಳದ  ಬದಿಯಲ್ಲಿ  ನಾಟಿ  ಮಾಡಿದ್ದಂತಹ  ಮುಳ್ಳುಸೌತೆ ಬಳ್ಳಿಗಳು  ಸೊಗಸಾಗಿ  ಬೆಳೆದು,   ಹುಲುಸಾಗಿ  ಚಪ್ಪರದಲ್ಲಿ  ಏರಿ  ಫಲ  ನೀಡಲು ಆರಂಭಿಸುತ್ತ  ಇವೆಯಲ್ಲ !   ಗೃಹಿಣಿಯಾದವಳು  ಈ  ತರಕಾರಿಯನ್ನು  ತನ್ನ  ದಾಸ್ತಾನು ಕೋಣೆಯಲ್ಲಿ  ಭದ್ರವಾಗಿ  ಇರಿಸಿಕೊಳ್ಳುತ್ತಾಳೆ.   ಒಂದು  ಮುಳ್ಳುಸೌತೆ  ಏನಿಲ್ಲವೆಂದರೂ  ನಾಲ್ಕರಿಂದ  ಐದು  ಕಿಲೋ  ಆದರೂ ಇರುತ್ತದೆ.    ತಿಂಡಿಯ  ಹೊತ್ತಿಗೆ  ದೋಸೆಯಿಂದ  ಪ್ರಾರಂಭವಾದರೆ,  ಊಟದ  ಟೇಬಲ್  ಮೇಲೆ  ಸಲಾಡ್,  ಸಳ್ಳಿ,  ಗೊಜ್ಜು  ಇನ್ನು  ಏನೇನೋ  ಐಟಂಗಳು  ಸಿದ್ಧವಾಗಲಿವೆ.   ಹಾಗಾಗಿ ಮುಳ್ಳುಸೌತೆ  ಚಪ್ಪರದ  ಕಾಳಜಿ  ವಹಿಸುವುದು  ಅನಿವಾರ್ಯ. 

  ಮನೆಮಂದಿಯನ್ನು  ನಂಬುವಂತಿಲ್ಲ.   ಆಚೆ ಈಚೆ  ಹೋಗುವ  ಕೆಲಸದಾಕೆ  ಕಲ್ಯಾಣಿಯನ್ನೂ  ನಂಬುವಂತಿಲ್ಲ.

   " ನಿನ್ನೆ  ಇದ್ದ  ಮುಳ್ಳುಸೌತೆ ಮಿಡಿ  ಕಾಣಿಸ್ತಾ  ಇಲ್ಲ,  ಏನಾಯ್ತು "  ಕೇಳುವಂತಿಲ್ಲ.

" ರಾತ್ರಿ  ಹೊತ್ತಿಗೆ  ನರಿ  ಕೊಂಡ್ಹೋಗಿರಬೇಕು "  ಅನ್ನೋ  ಸಿದ್ಧ  ಉತ್ತರ  ಅವಳಿಂದ  ಬಂದೇ ಬರುತ್ತದೆ.   ಅದೆಲ್ಲ  ಇರಲೀ,





2  ಕಪ್  ಬೆಳ್ತಿಗೆ  ಅಕ್ಕಿ  ನೆನೆ  ಹಾಕಿ.   ಎಳೆ  ಮುಳ್ಳುಸೌತೆಯಾದರೆ  ಸಿಪ್ಪೆ  ತೆಗೆಯದೇ  ತುರಿದು  ಇಟ್ಟುಕೊಳ್ಳಿ.   ಬಲಿತದ್ದಾದರೆ  ಸಿಪ್ಪೆ  ಹಾಗೂ  ಬೀಜಗಳನ್ನು  ತೆಗೆದು  ತುರಿಯಿರಿ.    ಮುಳ್ಳುಸೌತೆ ತುರಿ  ಹಾಗೂ  ಅಕ್ಕಿಯನ್ನು  ನುಣ್ಣಗೆ  ಅರೆಯಿರಿ.   ಬೇರೆ  ನೀರು  ಹಾಕಬೇಕಾದ  ಅವಶ್ಯಕತೆಯಿಲ್ಲ.   ಹುಳಿ  ಬರಬೇಕಾಗಿಲ್ಲ.   ಕಾವಲಿಯಲ್ಲಿ  ನೀರುದೋಸೆಯಂತೆ  ಎರೆದರಾಯಿತು.   ಘಮಘಮಿಸುವ ದೋಸೆ  ಸಿದ್ಧ. 

  ದೋಸೆ  ತಯಾರಿಸಿ  ಮಿಕ್ಕುಳಿದ  ಹಿಟ್ಟಿಗೆ  ಬೆಲ್ಲ  ಪುಡಿ  ಮಾಡಿ  ಹಾಕಿಡಿ.   ಸಂಜೆಯ ವೇಳೆ  ಸಿಹಿ ದೋಸೆ  ತಯಾರಿಸಿ.

2  ಕಪ್  ಅಕ್ಕಿ,   1  ಚಮಚ  ಮಂತ್ಯ,   ಅರ್ಧ ಕಪ್  ಉದ್ದಿನಬೇಳೆ  ನೆನೆಸಿಟ್ಟು  2  ಕಪ್  ಮುಳ್ಳುಸೌತೆ ತುರಿ  ಸೇರಿಸಿ  ಸಂಜೆ ವೇಳೆ  ದೋಸೆ ಹಿಟ್ಟು  ಮಾಡಿಟ್ಟುಕೊಳ್ಳಿ.   ರುಚಿಗೆ  ಉಪ್ಪು  ಹಾಕಿ  ಮುಚ್ಚಿ  ಇಡಿ.   ಮಾರನೇ ದಿನ  ಉದ್ದಿನ ದೋಸೆಯಂತೆ  ಎರೆಯಿರಿ. 

ಗುಳಿಯಪ್ಪ  ( ಪಡ್ಡು )   ಹೀಗೆ  ಮಾಡಿಕೊಳ್ಳಿ,   ಮೇಲೆ  ಹೇಳಿದಂತೆ  ಹಿಟ್ಟು  ತಯಾರಿಸಿ.   ಸಿಹಿ ಸಿಹಿಯಾಗುವಷ್ಟು  ಬೆಲ್ಲ  ಪುಡಿ  ಹಾಕಿ  ಒಲೆಯ  ಮೇಲಿಡಿ.   ಇಡ್ಲಿ  ಹಿಟ್ಟಿನ  ಹದಕ್ಕೆ  ಬಂದೊಡನೆ  ಕೆಳಗಿಳಿಸಿ.   ಅಪ್ಪದ   ಕಾವಲಿಯನ್ನು  ಉರಿಯಲ್ಲಿಟ್ಟು  ಎಲ್ಲಾ  ಗುಳಿಗಳಿಗೂ  ತುಪ್ಪ  ಎರೆಯಿರಿ.  ಬಿಸಿಯಾಗುತ್ತಿದ್ದಂತೆ  ಚಿಕ್ಕ ಸೌಟಿನಲ್ಲಿ  ಗುಳಿ  ಮುಳುಗುವಷ್ಟು  ಹಿಟ್ಟನ್ನು  ಎರೆದು  ಸಣ್ಣ  ಉರಿಯಲ್ಲಿ  ಮುಚ್ಚಿ  ಬೇಯಿಸಿ.  ತುಪ್ಪದ  ಶಾಖದಲ್ಲಿ  ಬೆಂದಂತೆ  ಚಮಚದಿಂದ  ಎಬ್ಬಿಸಿ  ಕವುಚಿ ಹಾಕಿ.  ಹಿಗೆ  ಎರಡೂ  ಬದಿ  ಕೆಂಪಗಾದ  ಅಪ್ಪಗಳನ್ನು  ತಗೆದಿರಿಸಿ.

ಕಡುಬು  ಮಾಡೋಣ,   ಮುಂಜಾನೆಯ  ತಿಂಡಿಯ  ಹೊತ್ತಿಗೆ  ಹತ್ತರಿಂದ  ಹದಿನೈದು  ಮಂದಿಯಾದರೂ  ಇದ್ದರೆ  ಹೀಗೆ   ' ಮುಳ್ಳುಸೌತೆ  ಕೊಟ್ಟಗೆ '   ಮಾಡುವ  ರೂಢಿ  ಇದೆ.   ಇದಕ್ಕೆ  ಬೆಳ್ತಿಗೆ  ಅಕ್ಕಿ ತರಿಯನ್ನು  ಮುಳ್ಳುಸೌತೆ ತುರಿಯೊಂದಿಗೆ  ಬೆರೆಸಿ,  ಬಾಡಿಸಿದ  ಬಾಳೆಲೆಯಲ್ಲಿ  ಎರೆದು  ಹಬೆಪಾತ್ರೆಯಲ್ಲಿ  ನೀರು  ಕುದಿಯುತ್ತಿದ್ದಂತೆ  ಇಟ್ಟು  ಬೇಯಿಸಬೇಕು.    ಇದಕ್ಕೂ  ಬೆಲ್ಲ,  ತೆಂಗಿನತುರಿ, ಏಲಕ್ಕಿ  ಕೂಡಾ  ಹಾಕಿದರೆ  ಹೆಚ್ಚು  ಚೆನ್ನಾಗಿರುತ್ತದೆ.    ಬಾಳೆಲೆ  ಸಿಗದಿದ್ದರೆ  ಬೇಡ,  ಇಡ್ಲಿ  ಮಾಡಿ.   2  ಕಪ್  ಅಕ್ಕಿತರಿಗೆ   2  ಬಟ್ಟಲು ತುರಿ ಹಾಕಿದ್ರೆ  ಸಾಕು.    ದೀಪಾವಳಿಗೆ  ಗೋಪೂಜೆ  ಮಾಡ್ತೀವಲ್ಲ,  ಆಗ  ಮನೆಯ  ಮುದ್ದಿನ  ಹಸುಗಳಿಗೆ  ಕುಂಕುಮದ  ತಿಲಕವಿಟ್ಟು,  ಹೂಮಾಲೆ  ತೊಡಿಸಿ,  ಆರತಿ  ಬೆಳಗಿ,   ಮುಳ್ಳುಸೌತೆ  ಕೊಟ್ಟಿಗೆ  ತಿನ್ನಿಸುವ  ಸಂಪ್ರದಾಯವಿದೆ.




ಮುಳ್ಳುಸೌತೆ  ಪಾಯಸ :


ಯಾವುದೇ  ಪಾಯಸವಾಗಲೀ,   ತೆಂಗಿನಕಾಯಿ  ಹಾಲು  ಅವಶ್ಯ.   ಮೊದಲು  ಕಾಯಿಹಾಲು ಮಾಡಿಕೊಳ್ಳಿ.   " ಹೇಗೇ ..."  ಅಂತೀರಾ,   ಮಿಕ್ಸೀಯ ಜಾರಿನೊಳಗೆ ಕಾಯಿತುರಿ  ತುಂಬಿಸಿ  ಅವಶ್ಯವಿದ್ದಷ್ಟು  ನೀರು  ಎರೆದು  ಕಡೆದು  ತೆಗೆಯಿರಿ,  ನುಣ್ಣಗಾಗಬೇಕೆಂದೇನೂ  ಇಲ್ಲ.   ಶುಭ್ರವಾದ  ಬಟ್ಟೆಯಲ್ಲಿ  ಜಾಲಿಸಿ,  ಹಿಂಡಿ  ಹಾಲು  ತೆಗೆದಿರಿಸಿ.   ಇದು  ದಪ್ಪ  ಹಾಲು.   ಅದೇ  ಕಾಯಿ ಚರಟಕ್ಕೆ  ಇನ್ನೊಮ್ಮೆ  ನೀರು  ಎರೆದು  ಪುನಃ  ಕಾಯಿಹಾಲು  ತೆಗೆಯಿರಿ.  ಇದು  ತೆಳ್ಳಗಿನ  ಹಾಲು. 

  ಒಂದು ಹದ ಗಾತ್ರದ  ಮುಳ್ಳುಸೌತೆ  ತುರಿಯನ್ನು  ಈ  ತೆಳ್ಳಗಿನ  ಕಾಯಿಹಾಲಿನಲ್ಲಿ  ಬೇಯಿಸಿ.   
ಒಂದು  ಚಿಕ್ಕ  ಬಟ್ಟಲು ಅಕ್ಕಿ ಹಿಟ್ಟು  ಹಾಕಿ ಪುನಃ  ಬೇಯಿಸಿ,  ಗಂಟು ಕಟ್ಟದಂತೆ ನೋಡಿಕೊಳ್ಳಿ.  ಕುದಿಯುತ್ತಿದ್ದಂತೆ   ದಪ್ಪವಾದೊಡನೆ  ಸಿಹಿಯಾಗುವಷ್ಟು  ಬೆಲ್ಲ  ಹಾಕಿ.

ಬೆಲ್ಲ  ಕರಗಿ  ಕುದಿಯಲು ಸುರುವಾಯಿತೇ,  ಈಗ  ದಪ್ಪ ಕಾಯಿಹಾಲು  ಎರೆದು  ಏಲಕ್ಕಿ ಪುಡಿ  ಉದುರಿಸಿ.
ಒಂದು  ಕುದಿ ಬಂದ ಕೂಡಲೇ  ಕೆಳಗಿಳಿಸಿ.   ಸವಿ ಸವಿ  ಪಾಯಸ  ಸಿದ್ಧ.
ನವರಾತ್ರಿಯ  ದಿನಗಳಲ್ಲಿ   ಈ ಪಾಯಸಕ್ಕೆ  ಆದ್ಯತೆ.  ನೆಂಟರಿಷ್ಟರು  ಬಂದರು  ಅಂತಿಟ್ಕೊಳ್ಳಿ,  ದುಬಾರಿ ಕ್ರಯದ  ಬೇಳೆಕಾಳುಗಳ  ಪಾಯಸ  ಮಾಡಬೇಕಾಗಿಲ್ಲ,  ಇದು  ಬೇಗನೇ  ಆಗುವಂಥಾದ್ದು.  ಶರೀರಕ್ಕೂ  ಹಿತ.

ಟೀವಿ  ಅಡುಗೆ  ಕಾ೧್ಯಕ್ರಮಗಳಲ್ಲಿ  ಪಾಯಸ  ಮಾಡೋರು  ಪ್ಯಾಕೆಟ್  ಹಾಲು  ಹಾಕುವುದನ್ನು  ನೋಡಿದ್ದೇನೆ.   ತೆಂಗಿನಕಾಯಿ ಹಾಲಿನಿಂದ  ಮಾಡಿದ  ಪಾಯಸದ  ರುಚಿಗೆ  ಯಾವುದೂ  ಸಾಟಿಯಿಲ್ಲ.




ಇನ್ನು  ಊಟದ  ಜತೆಗಿನ  ವ್ಯಂಜನಗಳು,   ಇವುಗಳನ್ನು  ಕುದಿಸುವ  ಅವಶ್ಯಕತೆಯಿಲ್ಲ.   ಧಿಡೀರನೆ  ಮಾಡುವಂತಹವು.   ಎಳೆ  ಮುಳ್ಳುಸೌತೆಯನ್ನು  ಸಣ್ಣಗೆ ಹಚ್ಚಿ  ಅಥವಾ  ತುರಿದು  ಹಸಿಮೆಣಸು,  ಶುಂಠಿ,  ಉಪ್ಪು  ಬೆರೆಸಿದರಾಯಿತು.  ಇದು  ' ಸಳ್ಳಿ '.    ಇದಕ್ಕೆ  ಮೊಸರು  ಬೆರೆಸಿ  ಒಗ್ಗರಣೆ  ಕೊಟ್ಟಲ್ಲಿ  ' ಗೊಜ್ಜು '.    ಬೇಕಿದ್ರೆ  ತೆಂಗಿನತುರಿ  ರುಬ್ಬಿ  ಹಾಕಬಹುದು.  ತೆಂಗಿನತುರಿಯೊಂದಿಗೆ  ಸಾಸಿವೆ  ರುಬ್ಬಿ ಹಾಕುವುದು ಮತ್ತೊಂದು  ವೈವಿಧ್ಯ.  ತೆಂಗಿನತುರಿಯೊಂದಿಗೆ ಸಾಸಿವೆ,  ಅರಸಿನಹುಡಿ,  ಮೆಣಸಿನಹುಡಿ  ರುಬ್ಬಿದ  ಮಸಾಲೆ   ಹಾಕಿದ್ರೆ  'ಉಪ್ಪಿನಕಾಯಿ  ಗೊಜ್ಜು '  ಆಗಿ ಹೋಯಿತು.   ಎಳೆ ಮುಳ್ಳುಸೌತೆ,  ಟೊಮೇಟೋ,  ಶುಂಠಿ,  ಹಸಿಮೆಣಸು,  ಕ್ಯಾರೆಟ್ ಇತ್ಯಾದಿಗಳ ಮಿಶ್ರಣ  ' ಸಲಾಡ್ ',   ಸಣ್ಣಗೆ ಹಚ್ಚಿಕೊಂಡು  ಉಪ್ಪು  ಬೆರೆಸಿ  ತುಪ್ಪದಲ್ಲಿ  ಒಗ್ಗರಣೆ  ಕೊಟ್ಟು ಬಿಡಿ.   ಮುಳ್ಳುಸೌತೆ  ತಿರುಳನ್ನು  ಬಿಸುಡಬೇಕಾಗಿಲ್ಲ.   ತೆಂಗಿನತುರಿ,  ಸಾಸಿವೆ, ಹಸಿಮೆಣಸು,  ಉಪ್ಪಿನೊಂದಿಗೆ  ರುಬ್ಬಿ  ದೊಡ್ಡ ಸೌಟು  ಸಿಹಿ ಮಜ್ಜಿಗೆ  ಎರೆದು ಒಗ್ಗರಣೆ  ಕೊಟ್ಟು ಬಿಡಿ.   ಇದು ನಮ್ಮೂರಿನ  ಆಡು ಭಾಷೆಯ  ' ಕೊಂಡಾಟ '.    ಇವನ್ನೆಲ್ಲ  ಊಟದ  ಹೊತ್ತಿಗೆ  ಅಗತ್ಯವಿದ್ದಷ್ಟೇ  ಮಾಡಿದರೆ  ಸಾಕು.    ಸಾಂಬಾರು,  ಮಜ್ಜಿಗೆ ಹುಳಿ,   ಬೋಳು ಹುಳಿ,  ಪಲ್ಯ  ವಗೈರೆಗಳನ್ನು  ಮಾಡಬಹುದು.   ಆದರೂ  ಊಟದ  ಜತೆ  ವ್ಯಂಜನವಾಗಿ  ಹಸಿಯಾಗಿಯೇ ಬಳಕೆ  ರೂಢಿಯಲ್ಲಿದೆ.



ಈ  ಬಳ್ಳಿ  ತರಕಾರಿ,  ಅಪ್ಪಟ  ಭಾರತೀಯ  ಸಸ್ಯ.   ವೈಜ್ಞಾನಿಕವಾಗಿ  Cucumis sativus   ಎಂದು  ಹೆಸರಿಸಿಕೊಂಡಿದೆ.   ನೂರಕ್ಕೆ  ಶೇಕಡಾ  ತೊಂಬತ್ತರಷ್ಟು  ನೀರಿನಂಶವಿರುವ  ತರಕಾರಿ,   ಬಿರು ಬೇಸಿಗೆಯಲ್ಲಿ  ಶರೀರಕ್ಕೆ  ತಂಪು ತಂಪು ...   ಚರ್ಮದ  ಕಾಂತಿ  ವರ್ಧಕ,  ಕಣ್ಣುಗಳ  ಹೂಳಪು  ರಕ್ಷಕ.

ಒಂದು  ನೈಸರ್ಗಿಕ  ಆಂಟಿ ಓಕ್ಸಿಡೆಂಟ್,  ವಿಜ್ಞಾನಿಗಳ  ಅಭಿಮತದಂತೆ  ಹೃದಯರೋಗಗಳು,  ಕ್ಯಾನ್ಸರ್ ಹಾಗೂ  ವಯಸ್ಸಾದಂತೆ  ಚರ್ಮ  ಸುಕ್ಕುಗಟ್ಟುವುದನ್ನು   ತಡೆಗಟ್ಟುವಲ್ಲಿ  ಈ  ಆಂಟಿ ಓಕ್ಸಿಡೆಂಟ್ ಗಳು  ಮಹತ್ವದ  ಪಾತ್ರ  ವಹಿಸಿವೆ.    ವಿಟಾಮಿನ್ C ,  ಬಿಟಾ - ಕೆರೋಟಿನ್ ಹಾಗೂ  ಮ್ಯಾಂಗನೀಸ್  ಇದರಲ್ಲಿ  ಹೇರಳವಾಗಿರುವುದೇ  ಮುಖ್ಯ  ಕಾರಣ.



  ಚೆನ್ನಾಗಿ  ಬಲಿತ  ಕಾಯಿಗಳನ್ನು  ಸಂಗ್ರಹಿಸಿ  ದಾಸ್ತಾನು  ಮಾಡಿಕೊಳ್ಳಬಹುದು.  ಗ್ರಾಮೀಣ  ಪ್ರದೇಶಗಳಲ್ಲಿ  ಈ  ಪದ್ಧತಿ  ಹಿಂದಿನಿಂದಲೂ  ನಡೆದುಕೊಂಡು  ಬಂದಿದೆ.  ದೊಡ್ಡ  ಜಾತಿ, ಚಿಕ್ಕದು,  ಕೆಂಪು ತಿರುಳಿನದು, ನಮ್ಮೂರಿನ  ಆಡುನುಡಿಯಲ್ಲಿ  ' ಚಕ್ಕರ್ಪೆ ' ಯಾಗಿರುವ  ಮುಳ್ಳುಸೌತೆಯಲ್ಲಿ  ಬೇರೆ ಬೇರೆ  ವೆರೈಟಿಗಳಿವೆ.   ಈಗ  ಮಾರುಕಟ್ಟೆಯಲ್ಲಿ  ವರ್ಷವಿಡೀ  ಸಿಗುವುದಾದರೂ  ನಾವು  ಮನೆಯಲ್ಲಿ  ನೆಟ್ಟು  ಮಾಡಿದ  ಫಲದ  ರುಚಿ  ಅದಕ್ಕಿಲ್ಲ,  ಸಂಗ್ರಹಿಸಿ  ಇಡಲೂ  ಆಗುವುದಿಲ್ಲ,  ಕೊಂಡು  ತಂದ  ದಿನವೇ  ಕೆಟ್ಟೂ ಹೋಗಿರುತ್ತದೆ.   ಹಿಂದಿನಂತೆ  ಗ್ರಾಮೀಣ  ಪ್ರದೇಶಗಳಲ್ಲಿ  ತರಕಾರೀ ಕೃಷಿ  ಈಗ  ನಡೆಯುತ್ತಿಲ್ಲ.   ಕೃಷಿ  ಕಾರ್ಮಿಕರ  ಅಲಭ್ಯತೆ,  ಕೃಷ್ಯುತ್ಪನ್ನಗಳಿಗೆ  ಸೂಕ್ತ ದರ  ಸಿಗದಿರುವುದು,  ಯುವ ಜನಾಂಗ  ಕೃಷಿಯಲ್ಲಿ  ನಿರಾಸಕ್ತಿ  ತಾಳಿರುವುದು,    ಫಲವತ್ತಾದ  ಕೃಷಿಭೂಮಿ  ಇನ್ನಿತರ  ವಾಣಿಜ್ಯ  ಉದ್ದೇಶಗಳಿಗೆ  ಬಳಕೆ,  ಹೀಗೇ  ಏನೇನೋ  ಕಾರಣಗಳು ...


ಫೋಟೋ  ಕೃಪೆ :  ಶಂಕರನಾರಾಯಣ ಭಟ್.

Posted via DraftCraft app

Saturday 29 September 2012

ಸಾಂಬ್ರಾಣಿಯ ವರ್ಣಮಯ ರಸಾಯನ ಶಾಸ್ತ್ರವು !

ಅಡುಗೆ  ಕೆಲಸವೆಲ್ಲ  ಮುಗಿದಿತ್ತು .   ಊಟಕ್ಕೆ  ಇನ್ನೂ  ಬೇಕಾದಷ್ಟು  ಸಮಯವಿತ್ತು .   
" ಒಂದು  ದಿಢೀರ್  ಸಾರು ಮಾಡೋಣ  "   ಅನ್ನಿಸಿದ್ದೇ  ತಡ ,   ನಾಲ್ಕಾರು  ಪುನರ್ಪುಳಿ  ಹಣ್ಣಿನ  ಒಣ  ಸಿಪ್ಪೆಗಳು  ಡಬ್ಬದಿಂದ  ನೀರಿಗೆ  ಬಿದ್ದುವು .
ಹತ್ತಾರು  ಬೆಳ್ಳುಳ್ಳಿ  ಎಸಳುಗಳು  ಸಿಪ್ಪೆ  ಬಿಚ್ಚಿ  ತಯಾರಾಗಿ  ಒಗ್ಗರಣೆ  ಸಟ್ಟುಗ  ಏರಿದುವು .
ನೀರಿನಲ್ಲಿ  ಪುನರ್ಪುಳಿ  ಬಣ್ಣ  ಬಿಡುತ್ತ  ಕೆಂಪಾಯಿತು .   ಕುದಿ ಕುದಿದು  ಇನ್ನಷ್ಟು  ಕೆಂಪಾಯಿತು .
ಒಗ್ಗರಣೆ  ಸೌಟನ್ನು  ಉರಿಯಲ್ಲಿಟ್ಟು  ಬೆಳ್ಳುಳ್ಳಿ ' ಘಂ ' ಅನ್ನಿಸಿ ಸಾಸಿವೆ  ಚಟ ಚಟ  ಸದ್ದು  ಮಾಡುತ್ತಾ  ಸಾರಿನೊಳಗೆ  ಬಿದ್ದಾಯಿತು .
 " ಒಹ್ , ಬೆಲ್ಲ  ಹಾಕಿಲ್ಲ "  ಬೆಲ್ಲ  ಪುಡಿ ಪುಡಿಯಾಗಿ  ಸಾರಿನೊಳಗೆ  ಬಿದ್ದಿತು .
ಅಷ್ಟಾಗುವಾಗ  ತಲೆಯಲ್ಲೊಂದು  ಹೊಸ  ಯೋಚನೆ  ಬಂದಿತು .
" ಇದಕ್ಕೆ  ಸಾಂಬ್ರಾಣಿ  ಸೊಪ್ಪು  ಹಾಕಿದರೆ  ಹೇಗೆ  "
ಸರಿ ,   ಅಂಗಳಕ್ಕಿಳಿದು  ಒಂದ್ಹತ್ತು  ಎಲೆಗಳನ್ನು  ಚಿವುಟಿ  ತಂದು ,   ಸಣ್ಣಗೆ  ತುಂಡರಿಸಿ ,   ತುಪ್ಪದಲ್ಲಿ  ಬಾಡಿಸಿ ,   ಮಿಕ್ಸಿಯಲ್ಲಿ  ತಿರುಗಿಸಿ  ಪುನಃ  ಸಾರಿಗೆ  ಸೇರಿಸಿ  ಕುದಿಸಬೇಕಾಯಿತು .    
ಕುದಿಯುತ್ತಿದ್ದಂತೆ    " ಏನಾಗ್ಹೋಯ್ತು " ,  ಪುನರ್ಪುಳಿಯ   ಗಾಢ  ಬಣ್ಣವೆಲ್ಲ  ಮಾಯ  !  ಸಾರಿನ  ಮಾಸಲು  ವರ್ಣ  ನೋಡಿ    " ಛೆ ,  ಏನ್ಮಾಡ್ಬಿಟ್ಟೆ "   ಪರಿತಪಿಸುವ  ಸರದಿ .
" ನೋಡೋಣ "  ಒಂದು  ಸೌಟು  ಸಾರನ್ನು  ತೆಗೆದು  ಚಿಕ್ಕ  ತಟ್ಟೆಗೆ  ಎರೆದು  ಕುಡಿಯಬೇಕಾಯಿತು ,    " ಆಹ್,  ಏನು  ಸುವಾಸನೆ  !  ಅದೇನೇನೋ  ಅಡುಗೆ  ಮಾಡಿ  ತೋರಿಸ್ತಾರಲ್ಲ  ಟೀವಿ  ಅಡುಗೆ  ಕಾರ್ಯಕ್ರಮಗಳಲ್ಲಿ ,   ಇದೇ  ಚೆನ್ನಾಗಿದೆ ",  ಊಟದ  ಸಿದ್ಧತೆ   ನಡೆಯಿತು .


ದೊಡ್ಡಪತ್ರೆ  ಎಂದೂ  ಹೆಸರಿರುವ  ಈ  ಎಲೆಯನ್ನು  ಅಡುಗೆಯಲ್ಲಿ  ವೈವಿಧ್ಯಮಯವಾಗಿ  ಬಳಸಲು  ಮಹಿಳೆಯರು  ತಿಳಿದಿದ್ದಾರೆ .  ಬೋಂಡಾ ,  ಬಜ್ಜಿ , ಪಕೋಡಾ ,  ಇತ್ಯಾದಿ .  ದೋಸೆಯನ್ನೂ  ಮಾಡಬಹುದು .   ಎಲ್ಲವೂ  ಅವರವರ  ಪಾಕ ಪ್ರಾವೀಣ್ಯತೆಗೆ  ಬಿಟ್ಟಿದ್ದು .    ಗಾಢ  ಸುವಾಸನೆಯಿಂದಾಗಿ  ನಾನ್ ವೆಜ್  ಅಡುಗೆಯಲ್ಲೂ ಬಳಸುತ್ತಾರೆ .

ಶೀತ ,  ಕೆಮ್ಮು ,  ಜ್ವರಗಳಿಗೆ  ಉಪಶಮನಕಾರಿಯಾಗಿ  ಇದು  ಮನೆಮದ್ದಾಗಿ  ಉಪಯೋಗದಲ್ಲಿದೆ .   ಎಳೆಯ  ಹಾಲುಹಸುಳೆ  ಏನೇ  ತೊಂದರೆಯಾದರೂ  ಅಳುವಿನಲ್ಲಿ  ತೋರ್ಪಡಿಸುತ್ತದೆ .   ಅನುಭವಸ್ಥ  ಅಜ್ಜಿಯಂದಿರು  ಕೂಡಲೇ  ಮಗುವಿನ  ಸಮಸ್ಯೆಯನ್ನು  ಗುರ್ತಿಸಿ ,   ಹಿತ್ತಿಲಿನಿಂದ  ಸಾಂಬ್ರಾಣಿ  ಸೊಪ್ಪು  ತಂದು ,  ಒಲೆಯ  ಕೆಂಡದ  ಮೇಲಿಟ್ಟು  ಬಾಡಿಸಿ ,   ರಸ  ಹಿಂಡಿ  ಜೇನಿನೊಂದಿಗೆ  ಕುಡಿಸಿ ಬಿಡುತ್ತಾರೆ .  ಮಗುವಿಗೆ  ಹೊಟ್ಟೆ  ಕಟ್ಟಿದ್ದರೆ ,   ವಾಯು ತೊಂದರೆಯಾಗಿದ್ದರೆ ,  ಕಫ ತುಂಬಿ  ಬಾಧೆ  
 ಪಡುತ್ತಿದ್ದರೆ ,   ಸಾಂಬ್ರಾಣಿ ಜೇನಿನ  ರಸವನ್ನು  ಕುಡಿಸಿದಂತೆ  ಮಲವಿಸರ್ಜನೆಯಾಗಿ  ಮಗು  ನಿರಾತಂಕವಾಗಿ  ಆಟ  ಪ್ರಾರಂಭಿಸುವುದು .   ಹೀಗೆ  ಎರಡು  ದಿನಕ್ಕೊಮ್ಮೆ  ಈ ರಸ  ಕುಡಿಸುತ್ತಾ  ಬಂದಲ್ಲಿ  ಆರೋಗ್ಯದಲ್ಲಿ  ಯಾವ  ವ್ಯತ್ಯಯವೂ  ಆಗುವುದಿಲ್ಲ .    " ಮಗು  ಮೈ  ಹುಷಾರಿಲ್ಲ "  ಎಂದು  ವೈದ್ಯರಲ್ಲಿಗೆ  ಹೋಗಬೇಕಾಗುವುದೂ  ಇಲ್ಲ .     " ಒಲೆಯೆಲ್ಲಿದೆ ,   ಕೆಂಡವೆಲ್ಲಿದೆ ? "  ಅನ್ನದಿರಿ .   ಮೈಕ್ರೋವೇವ್  ಅವೆನ್  ಒಳಗಿಟ್ಟು  ತೆಗೆಯಿರಿ .



ಚಿಕ್ಕ ಮಕ್ಕಳಲ್ಲಿ  ಕಾಣಿಸಿಕೊಳ್ಳುವ  ನರಗಳ  ಸೆಡವು  ಅಥವಾ  ' ಬಾಲಗ್ರಹ '  ಇನ್ನೊಂದು  ಪೀಡೆ .   ಈ  ಸಮಸ್ಯೆಗೂ  ಪರಿಣಾಮಕಾರೀ  ಔಷಧಿಯಾಗಿ  ಸಾಂಬ್ರಾಣಿ  ನಮ್ಮ  ನಾಟೀ  ವೈದ್ಯ  ಪದ್ಧತಿಯಲ್ಲಿದೆ .

ಜೀರ್ಣ ಶಕ್ತಿ  ಚುರುಕಾಗುವುದು .   ಯಾವಾಗ  ತಿಂದ  ಆಹಾರ  ಸರಿಯಾಗಿ  ಪಚನವಾಗುವುದಿಲ್ಲವೋ  ಆಗಲೇ  ಶರೀರದ  ಅಂಗಾಂಗಗಳು ಮುಷ್ಕರ  ಹೂಡಲು  ಪ್ರಾರಂಭ  ಎಂದೇ  ತಿಳಿಯಿರಿ .   ಹೀಗಾಗದಂತಿರಲು  ನಿಯಮಿತವಾಗಿ  ಸಾಂಬ್ರಾಣಿಯ  ಬಳಕೆ  ಮಾಡುವುದು  ಸೂಕ್ತ .    ಗ್ರಾಮೀಣ  ಪ್ರದೇಶದ  ರೈತಾಪಿ  ಹೆಂಗಸರು  ಆಸ್ಪತ್ರೆಗೆ  ಹೋಗುವುದು  ತೀರಾ  ಕಡಿಮೆ .   ಇಂತಹ    ಔಷಧಯುಕ್ತ  ವನ್ಯಸಸ್ಯಗಳ  ಬಳಕೆಯಲ್ಲಿ  ಅವರು  ನಿಷ್ಣಾತರಾಗಿದ್ದಾರೆ ,  ತಮಗೆ  ತಿಳಿದಿರುವ  ಗುಟ್ಟುಗಳನ್ನು  ಅಷ್ಟು  ಸುಲಭವಾಗಿ  ಬಿಟ್ಟು  ಕೊಡುವವರೂ  ಅಲ್ಲ .   ಪಂಡಿತರಂತೆ  ವಿವರಿಸಿ  ಹೇಳಲೂ  ಅವರಿಗೆ  ತಿಳಿದಿರುವುದೂ  ಇಲ್ಲ .   ವಿವರಿಸಿ  ಹೇಳುತ್ತೇನೆ  ಕೇಳಿ ,   ನಮ್ಮ  ತೋಟದಲ್ಲಿ  ಅಶೋಕ  ವೃಕ್ಷಗಳು  ಬೇಕಾದಷ್ಟು  ಇವೆ .   ಊರಿನ  ನಾಟೀ ವೈದ್ಯರೊಬ್ಬರು  ವಾರಕ್ಕೊಮ್ಮೆ   ಬಂದು  ಆ  ಮರಗಳ  ತೊಗಟೆಯನ್ನು  ಕೆತ್ತಿ  ತೆಗೆದು  ಕೊಂಡೊಯ್ಯುತ್ತಿದ್ದರು .   " ಯಾಕೆ ,  ಯಾರಿಗೆ ?"  ಎಂದು ಪ್ರಶ್ನಿಸುವವರಿಲ್ಲ .   ಕೇಳಿದರೆ  ಅವರು  ಹೇಳುವವರೂ  ಅಲ್ಲ .   ಆ  ವೈದ್ಯರಿಗೆ  ಗೊತ್ತಿದ್ದ  ಆ  ನಾಟೀ ಮದ್ದು  ಅವರ  ತಲೆಮಾರಿಗೇ  ಮುಕ್ತಾಯವಾಗಿಬಿಟ್ಟಿದೆ .

ಕೇವಲ  ನೆಗಡಿ ,  ಕೆಮ್ಮುಗಳಿಗೆ  ಮಾತ್ರವಲ್ಲ ,   ಶರೀರದ  ಒಳಾಂಗಗಳಾದ  ಲಿವರ್ ,  ಕಿಡ್ನಿಗಳ  ತೊಂದರೆಗೂ  ಇದು  ಔಷಧಿಯಂತೆ .  ಪಿತ್ತಜನಕಾಂಗದಲ್ಲಿ  ಕಲ್ಲುಗಳು  ಸಾಮಾನ್ಯವಾಗಿ  ಮಹಿಳೆಯರಲ್ಲಿ  ಕಂಡು ಬರುವ ಖಾಯಿಲೆ .  ಅದಕ್ಕೂ  ಇದು ಔಷಧವಂತೆ .   ಆಸ್ಪತ್ರೆಗೆ  ಹೋಗಿ  ಆಪರೇಶನ್  ಮಾಡಿಸುವ   ಆಂಗಾಂಗಗಳನ್ನು  ಕತ್ತರಿಸುವ  ತಂತ್ರವೊಂದೇ  ನಮಗೆ  ತಿಳಿದಿದೆ .    ಆಸ್ಪತ್ರೆಗಳೂ  ಅಷ್ಟೇ ,  ಆಪರೇಷನ್  ಮಾಡಿ  ಬಡಪಾಯಿ  ರೋಗಿ  ಜೀವನ್ಮರಣದಲ್ಲಿ  ಹೋರಾಟ  ನಡೆಸುತ್ತಿದ್ದಾನೊ  ಎಂಬಂತೆ  ಕೃತಕ  ಯಂತ್ರೋಪಕರಣಗಳನ್ನು  ಜೋಡಿಸಿ ,  ಕೊನೆಗೊಮ್ಮೆ  " ಈ  ಕೇಸು  ಪ್ರಯೋಜನವಿಲ್ಲ "  ಎಂದು  ಕೈ  ಚೆಲ್ಲಿ  ಬಿಡುತ್ತಾರೆ .   ಆ  ಹೊತ್ತಿಗೆ  ಲಕ್ಷಗಟ್ಟಲೆ  ಸುಲಿಗೆಯಂತೂ  ಆಗಿರುತ್ತದೆ .



  ಹಿಂದಿನಿಂದಲೂ ಇದು ಜನಸಾಮಾನ್ಯರ ಔಷಧೀಯ ಸಸ್ಯವಾಗಿತ್ತು .   ಇದರ ಮರ್ಮಗಳನ್ನು ತಿಳಿದು ಉಪಯೋಗಿಸುವ ಪಂಡಿತೋತ್ತಮರು ನಮ್ಮ ನಡುವೆ ಬಹಳಷ್ಟಿಲ್ಲ .    ಪರಂಪರಾಗತ  ಔಷಧವಿಜ್ಞಾನದಲ್ಲಿ  ನಾವು  ನಂಬಿಕೆ ಕಳಕೊಳ್ಳಲು  ಇದೂ  ಒಂದು  ಕಾರಣವಿರಬಹುದೇನೋ..    ಸರಿಯಾದ   ಮಾನದಂಡವಿಲ್ಲದೆ   ಅದ್ಭುತ ವೈದ್ಯಕೀಯ  ಸಸ್ಯಗಳನ್ನು  ಬೇಕಾಬಿಟ್ಟಿ  ಉಪಯೋಗಿಸಿ,   ಕೊನೆಗೆ  ಈ  ' ಅಣಲೆಕಾಯಿ ಮದ್ದು ' ಗಳು  ನಿರರ್ಥಕ  ಎಂಬ  ತೀರ್ಮಾನಕ್ಕೆ  ಬರುವುದರಿಂದ  ನಮ್ಮ  ಪ್ರಾಚೀನ  ಔಷಧ ಶಾಸ್ತ್ರ  ಯಾರಿಗೂ  ಬೇಡವಾದ  ಜ್ಞಾನವಾಗಿ ಹೋದೀತು .

ಚೇಳು  ಕಡಿತ ,   ಚರ್ಮದ  ಅಲರ್ಜಿ ,   ಹುಣ್ಣುಗಳು ,  ಗಾಯಗಳು ,  ಜ್ವರ ,  ಅತಿಸಾರಗಳಲ್ಲಿ  ಪರಿಣಾಮಕಾರಿಯಾಗಿ  ಉಪಯೋಗ .   ಆಂಟಿ ಸೆಪ್ಟಿಕ್ ,  ಸೋಂಕು ನಿವಾರಕ .
ಏನೇ  ತಲೆನೋವು  ಬರಲಿ ,   " ಒಂದು  ಮಾತ್ರೆ  ತಿಂದರಾಯ್ತು "   ಅಂದ್ಕೊಂಡು  ವರ್ಷಪೂರ್ತಿ   ಪಾರಾಸಿಟಾಮಾಲ್  ಮಾತ್ರೆಗಳನ್ನು  ನುಂಗುತ್ತ  ದಿನ  ನೂಕುವವರಿದ್ದಾರೆ .   ಇದು  ಮಿತಿ  ಮೀರಿದಲ್ಲಿ  ಅಪಾಯ ಕಟ್ಟಿಟ್ಟ  ಬುತ್ತಿ .   ಈ  ಮದ್ದುಗಳ  ಸೇವನಾನಂತರ  ಶರೀರದ  ಪಚನಾಂಗಗಳು ಉಳಿದ ಶೇಷವನ್ನು  ಹೊರ ಹಾಕುತ್ತವೆಯೇ ,  ಖಂಡಿತ ಇಲ್ಲ .   ಲಿವರ್ ,  ಕಿಡ್ನಿ ,  ಗಾಲ್ ಬ್ಲಾಡರ್,  ಪ್ಯಾಂಕ್ರಿಯಾಸ್ ....ಎಲ್ಲವೂ  ಹಾನಿಗೊಳಗಾಗುತ್ತವೆ .   ನಿಯಮಿತವಾಗಿ  ಸಾಂಬ್ರಾಣಿಯ  ಬಳಕೆ  ಮಾಡುತ್ತಿದ್ದಲ್ಲಿ  ಇಂತಹ  ತೊಂದರೆಗಳನ್ನು  ತಡೆಯಬಹುದೆಂದು ಈಗಿನ  ವೈದ್ಯಕೀಯ  ಸಂಶೋಧನೆಗಳು  ಹೇಳುತ್ತವೆ .

ಆಡುನುಡಿಯಲ್ಲಿ  ' ಸಾಂಬ್ರಾಣಿ ' ಯಾಗಿರುವ  ಈ  ಸಸ್ಯ  ಶಿಷ್ಟ ಕನ್ನಡದಲ್ಲಿ ' ದೊಡ್ಡಪತ್ರೆ '  ಯಾಗಿದೆ.  
ಮಲಯಾಳಂ ನಲ್ಲಿ  പനിക്കൂർക്ക  ಎಂದೂ ,  ತಮಿಳು ಭಾಷೆಯಲ್ಲಿ  கற்பூரவள்ளி  ಎಂದೂ ಹೆಸರಿರಿಸಿದ್ದಾರೆ .    ಸಸ್ಯಶಾಸ್ತ್ರೀಯವಾಗಿ  ಇದು  Plectranthus amboinicus ,  ಹಾಗೂ  Lamiaceae  ಕುಟುಂಬಕ್ಕೆ  ಸೇರಿದೆ .    ಇದು ಒಂದು ಅಪ್ಪಟ  ಭಾರತೀಯ ಸಸ್ಯ .  

ಕೈದೋಟದಲ್ಲಿ  ಅಲಂಕಾರಿಕ  ಸಸ್ಯ .  ಕ್ರೋಟನ್ ಗಿಡಗಳಂತೆ  ಬೇರೆ ಬೇರೆ  ವರ್ಣಗಳಲ್ಲಿ  ಲಭ್ಯ .   ವಿಪರೀತ  ಬಿಸಿಲು  ಇದರ  ಸೌಂದರ್ಯವನ್ನು  ಮಂಕಾಗಿಸುತ್ತದೆ .  ಒಳಾಂಗಣದ  ಕುಂಡಗಳಲ್ಲಿಯೂ    ಬೆಳೆಸಬಹುದು .


Posted via DraftCraft app

ಐ - ಪ್ಯಾಡ್ ಕನ್ನಡ



ಐ - ಪ್ಯಾಡ್ ಕಂಪ್ಯೂಟರ್ ಮಾಧ್ಯಮದ ಅತಿ ಸರಳ ಸಾಧನ. ಒಮ್ಮೆ ಬಳಕೆಯ ವಿಧಾನ ತಿಳಿದರೆ ಸಾಕು, ಮುಂದಿನದನ್ನು ಅದೇ ಕಲಿಸುತ್ತದೆ. ನಮ್ಮ ಅಭಿರುಚಿಯ ಯವುದೇ ಕ್ಷೇತ್ರದಲ್ಲಿ ಕೈಯಾಡಿಸಲು ವಿಪುಲ ಅವಕಾಶಗಳಿವೆ, ಆಯ್ಕೆಗಳೂ ಬೇಕಾದಷ್ಟಿವೆ.
ಫೇಸ್ ಬುಕ್ ಮಾಧ್ಯಮವನ್ನು ಪ್ರವೇಶಿಸಿ ಸುಮಾರಾಗಿ ಒಂದು ವರ್ಷವಾಗುತ್ತಾ ಬಂದಿದೆ. ಕಂಪ್ಯೂಟರಿನ ಬಗ್ಗೆ ಪ್ರಾಥಮಿಕ ಶಿಕ್ಷಣವೂ ಇಲ್ಲದೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ಐ - ಪ್ಯಾಡ್ ನಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳಲ್ಲಿ ಕನ್ನಡ ಕೀ ಬೋರ್ಡ್ ( Kannada Key Board ) ಬಹು ಮುಖ್ಯವಾದದ್ದು. ಇದನ್ನು ಬಳಸುವ ಸಮಯದಲ್ಲಿ ಬರಹಗಾರರಿಗೆ ಅಂತರ್ಜಾಲ ಸಂಪರ್ಕ ಬೇಕಾಗಿ ಬರುವುದಿಲ್ಲ, ವಿದ್ಯುತ್ ಸಂಪರ್ಕವೂ ಬೇಡ. ಸಾಮಾನ್ಯ ಕೀಲಿಮಣೆಯಂತೆ ಉಪಯೋಗಿಸಿ ಬರೆದದ್ದನ್ನು ಕೋಪಿ, ಪೇಸ್ಟ್ ನೋಟ್ ಪ್ಯಾಡ್ ನಲ್ಲಿ ಮಾಡಿಟ್ಟುಕೊಳ್ಳಬಹುದಾಗಿದೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ತಂತ್ರಾಶ ಲಭ್ಯವಿದೆ.

ಇದು ಇಂಗ್ಲಿಷ್ ಅಕ್ಷರಗಳಿಂದ ಬರೆಯಬಹುದಾದ ಕನ್ನಡವಲ್ಲ. ಇನ್ನಿತರ ಬರಹ ಸೌಲಭ್ಯಗಳಲ್ಲಿ ನಮ್ಮ ದ್ರಾವಿಡ ಭಾಷಾ ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ಬರೆಯಲು ಸಾಧ್ಯವಿಲ್ಲ. ಇಂಗ್ಲಿಷ್ ನಲ್ಲಿ ಬರೆದು, ಬೇಕಾದ ಭಾಷೆಗೆ ಪರಿವರ್ತಿಸಬಲ್ಲ ಟ್ರಾನ್ಸ್ ಲಿಟರೇಶನ್ ಕ್ರಮ ಸಾಮಾನ್ಯವಾಗಿ ಬಳಕೆಯಲ್ಲಿದೆ. ನಮ್ಮ ಭಾಷಾ ಸಂಪತ್ತಿಗೆ ಪೂರಕವಾಗಿರುವ ವ್ಯಂಜನಾಕ್ಷರಗಳಾದ ಛ , ಝ , ಠ , ಞ , ಙ, ಱ, ಳ ಹಾಗೂ ಋ , ಌ , ಐ , ಔ ಸ್ವರಾಕ್ಷರಗಳು ಬರೆಯಲಾಗುವುದೇ ಇಲ್ಲ. ಅನಿವಾರ್ಯವಾಗಿ ಆ ಅಕ್ಷರಗಳನ್ನು ಕೈ ಬಿಟ್ಟು ಬರೆಯುವಂತಹ ಪರಿಸ್ಥಿತಿಯಿದೆ.

ಇಲ್ಲಿ ಬೇಕೆನಿಸಿದ ಪದಪುಂಜಗಳ ಬಳಕೆ ನಿರಾಯಾಸವಾಗಿ ಮಾಡುತ್ತಾ ಬರೆಯಬಹುದು. ತುಳು, ಕೊಂಕಣಿ, ಬ್ಯಾರೀ, ಕೊಡವ ಭಾಷೆಗಳನ್ನು ಕನ್ನಡದಲ್ಲಿ ನಿರಾತಂಕವಾಗಿ ಬರೆಯಬಹುದಾಗಿದೆ.





Posted via DraftCraft app



ಟಿಪ್ಪಣಿ: ದಿನಾಂಕ 20, ನವಂಬರ್, 2013ರಂದು ಮುಂದುವರಿಸಿ ಬರೆದದ್ದು.


ಅಂತರ್ಜಾಲ ಮಾಧ್ಯಮದಲ್ಲಿ ಕನ್ನಡವನ್ನೂ ಬರೆಯಲು ಸಾಧ್ಯವಿದೆ ಎಂದು ತಿಳಿದಾಗ ಗರಿಗೆದರಿದ ಉತ್ಸಾಹ ಬಂದಿತು. ಆದರೆ ಏನೇ ಬರೆಯಬೇಕಿದ್ದರೂ abcd...ಅಕ್ಷರಮಾಲೆಯೊಂದೇ ಗತಿ. ಆದರೂ ಚಿಂತಿಲ್ಲ ಅಂದ್ಕೊಂಡು ಫೇಸ್ ಬುಕ್ ನಲ್ಲಿ ಕಮೆಂಟುಗಳನ್ನು ಛಾಪಿಸುವುದರಲ್ಲಿ ಏನೋ ತೃಪ್ತಿ. ಒಮ್ಮೆ ಏನಾಯ್ತೂಂದ್ರೆ ಕೇವಲ ಮೂರೇ ವಾಕ್ಯಗಳಿದ್ದ ಅಡುಗೆ ವಿಧಾನ ಬರೆದೆ. ಶುಂಠಿ ಅಂತ ಬರೆಯಬೇಕಾಗಿದ್ದಲ್ಲಿ ಟ್ರಾನ್ಸ್ ಲಿಟರೇಶನ್ ಕನ್ನಡ ಶುಂಟಿ ಎಂದೇ ಬರೆಯಿತು. ಹೇಗೆ ಪ್ರಯತ್ನಿಸಿದರೂ ಶುಂಠಿ ಬರಲಿಲ್ಲ. ನಮ್ಮ ಕಾಸರಗೋಡಿನ ಪ್ರಸಿದ್ಧ ಕವಿಗಳೂ ಹಿರಿಯರೂ ಆದ ಕಯ್ಯಾರ ಕಿಞ್ಞಣ್ಣ ರೈಗಳ ಹೆಸರು ಬರೆಯಲು abcd...ಅಕ್ಷರಮಾಲೆ ಬಿಡಲಿಲ್ಲ. ಮುದುಡಿಯೇ ಹೋದ ಮನಸ್ಸು ಈಗ ಜಾಗೃತವಾಯಿತು. ಇನ್ನೂ ಹಲವು ಅಕ್ಷರಗಳನ್ನು, ಙ, ಝ, ಋ, ಖ ಇತ್ಯಾದಿಗಳೂ ಬರೆಯಲಾಗುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ನಮ್ಮೆಜಮಾನ್ರಿಗೆ ದೂರು ಸಲ್ಲಿಸಿ ಸುಮ್ಮನಾಗಬೇಕಾಯಿತು. ಅವರೂ ಅಂತರ್ಜಾಲದ Apps Store ತಡಕಾಡಿ ಇನ್ನೊಂದು ಹೊಸ ಕೀಲಿಮಣೆಯ apps ಅನ್ನು iPad ನಲ್ಲಿ ಸ್ಥಾಪಿಸಿ ಕೊಟ್ಟರು.

" ಇದನ್ನು ಪ್ರಯತ್ನಿಸಿ ನೋಡು " ಅಂದ್ಬಿಟ್ಟು ಸುಮ್ಮನಾದರು.

" ಪುನಃ ಅಆಇಈ ಕಲಿಯೂದೇ ಆಯ್ತಲ್ಲ ..." ಗೊಣಗಿದೆ.

" ನಿಂಗೆ ಬೇಕಿದ್ರೆ ಕಲೀ ಬೇಕು "

" ಆಯ್ತು, ಮತ್ತೆ ಕಲಿಯುವಾ, ಈಗ ಅಡುಗೆ ಮಾಡೂದಿದೆ "

ಆ ಕೂಡಲೇ ಅಕ್ಷರ ಬರೆಯುತ್ತಾ ಕುಳಿತಿರಲು ಬೇರೇನೂ ಉದ್ಯೋಗವಿಲ್ಲದಿದ್ದರಾಗುತಿತ್ತು. ಹೀಗೇ ಒಂದು ದಿನ ಕರೆಂಟು ಹೋಗಿತ್ತು. ಅಡುಗೆಮನೆಯ ಉಪಕರಣಗಳೆಲ್ಲ ನಿಶ್ಚಲವಾಗಿದ್ದಂತಹ ಹೊತ್ತಿನಲ್ಲಿ ಬಿಡುವು ದೊರೆಯಿತು. ವಿದ್ಯುತ್ ಹಾಗೂ ಅಂತರ್ಜಾಲದ ಸಂಪರ್ಕವಿಲ್ಲದೇ ಬರೆಯಬಹುದಾದ ಕನ್ನಡ ಕೀ ಬೋರ್ಡ್ ನೆನಪಾಗಿ, ಐ ಪ್ಯಾಡ್ ಮೇಲೆ ಬೆರಳು ಹರಿದಾಡಿಸಿ ಅಆಇಈ ಬರೆಯಲು ತೊಡಗಿದೆ. ಎಲ್ಲವೂ ಸುಲಲಿತ, ಸರಳ. ಈಗ ಬಳಕೆಯಲ್ಲಿ ಇಲ್ಲದ ಅಕ್ಷರಗಳೂ ಇದರಲ್ಲಿವೆ. ಌ - ಈ ಅಕ್ಷರದ ಪ್ರಯೋಗ ಹೇಗೆಂದು ಗೊತ್ತಿಲ್ಲ. ಕಾಲೇಜು ದಿನಗಳಲ್ಲಿ ರಾಘವಾಂಕನ ಹರಿಶ್ಚಂದ್ರ ಕಾವ್ಯ ನಮ್ಮ ಕನ್ನಡ ಪಠ್ಯಗಳಲ್ಲೊಂದಾಗಿತ್ತು. ಅದರಲ್ಲಿ ಹೀಗೊಂದು ಅಕ್ಷರವನ್ನು ಓದಿದ ನೆನಪು ಬರಲೇ ಇಲ್ಲ. ಇನ್ನು ಱ - ಇದು ಕೂಡಾ ಈಗ ನಮ್ಮ ಶಬ್ಧ ಭಂಡಾರಕ್ಕೆ ಬೇಡವಾಗಿದೆ. ಒತ್ತಕ್ಷರಗಳಲ್ಲಿ ಹೀಗೊಂದು ಪ್ರಯೋಗ ಇದೆ - ೄ ಇದನ್ನು ಎಲ್ಲಿ ಬಳಕೆ ಮಾಡುವುದೋ ತಿಳಿಯದು.

ಅಕ್ಷರಗಳನ್ನು ಜೋಡಿಸಿ ಬರೆಯುವುದು ಹೇಗೆ?
ಕ್ + ಕ = ಕ್ಕ. ಸ್+ಥ = ಸ್ಥ ಹೀಗೆ ಬರೆಯುವಾಗ ಎರಡು ಅಕ್ಷರಗಳ ನಡುವೆ ಖಾಲಿ ಸ್ಥಳ (space) ಬಿಡುವಂತಿಲ್ಲ.

ನಾನು ಉಪಯೋಗಿಸುವ ಕನ್ನಡ ಕೀಲಿಮಣೆ ಇದು. http://appshopper.com/utilities/kannada-keyboard ಇದು iPhone ಹಾಗೂ iPad ಉಪಯೋಗಿಗಳಿಗೆ ಮಾತ್ರ ಲಭ್ಯವಿದೆ. ಬಹುಶಃ ಕನ್ನಡಿಗರು ಕನ್ನಡದಲ್ಲಿ ಬರೆಯಲು ನಿರುತ್ಸಾಹಿಗಳಾಗಿರುವುದರಿಂದಲೋ ಏನೂ ಇದು ಈಗ ಉಚಿತವಾಗಿಲ್ಲ, install ಮಾಡಿಕೊಳ್ಳಲು ಒಂದು ಡಾಲರ್ ಶುಲ್ಕ ಕೊಡಬೇಕಾಗುತ್ತದೆ.

ಕನ್ನಡದ ಜನಪ್ರಿಯ ದಿನಪತ್ರಿಕೆಗಳು ಮಾತ್ರವಲ್ಲದೆ ಸುಧಾ, ಕರ್ಮವೀರ, ಸಖೀ ಮ್ಯಾಗಜೀನ್ ಗಳು apps ರೂಪದಲ್ಲಿ ಓದುಗರಿಗೆ ಉಚಿತವಾಗಿ ಲಭ್ಯವಿವೆ. ಕನ್ನಡದ ಶ್ರೇಷ್ಠ ಬರಹಗಾರರಾಗಿರುವ ಕೆ. ಟಿ. ಗಟ್ಟಿ ಆರಂಭದಿಂದಲೇ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಗಳ ಮೂಲಕ ಚಿರಪರಿಚಿತರು. ಕೆ. ಟಿ. ಗಟ್ಟಿಯವರ ಇತ್ತೀಚೆಗಿನ " ಏಳು ಜನ್ಮದ ಕೋಟೆ " ಕಾದಂಬರಿಯನ್ನು ಸುಧಾ apps ಮೂಲಕ ಆರಂಭದಿಂದ ಕೊನೆತನಕ ಓದುವ ಭಾಗ್ಯ ದೊರೆಯಿತು.








Tuesday 18 September 2012

ರಾಗೀ ಹಲ್ವಾ




ಬಾಳೆಗೊನೆ ಹಣ್ಣಾಗಿ ಮಾಗಿದೆ. ಸಿಪ್ಪೆ ಕಪ್ಪಾಗುವ ಮೊದಲೇ ಮುಗಿಸಬೇಕಾಗಿದೆ. ಅದನ್ನೆಲ್ಲಾ ತಿಂದು ಮುಗಿಸುವಷ್ಟು ಮಂದಿ ಮನೆಯಲ್ಲಿ ಬೇಕಲ್ಲ,

" ಏನು ಮಾಡೋಣ "

" ಮಾಡೋದೇನು ಸಕ್ಕರೆ ತುಪ್ಪ ಹಾಕಿ ಹಲ್ವಾ ಮಾಡಿಟ್ಟುಕೊಳ್ಳಿ "

" ನನ್ನ ಮಗಳಿಗೆ ಬಾಳೆಹಣ್ಣಿನ ಹಲ್ವಾ ಎಂದರೆ ಆಗದು "

ಹೀಗೆ ಮಾಡಿ,
ಬಾಳೆಹಣ್ಣನ್ನು ಸಣ್ಣಗೆ ಹಚ್ಚಿಟ್ಟುಕೊಂಡು ದಪ್ಪ ತಳದ ಪಾತ್ರದಲ್ಲಿ ಹಾಕಿ , ಉರಿಯ ಮೇಲೆ ಇಡಿ. ಒಂದೆರಡು ಚಮಚ ತುಪ್ಪ ಹಾಕಿ ಮಗುಚುತ್ತಾ ಇರಿ. ಬಾಳೆಹಣ್ಣು ಬೆಂದಂತೆ ಘಮ್ ಘಮನೆ ಸುವಾಸನೆ ಬರಲಾರಂಭಿಸುತ್ತದೆ. ಈಗ ಸಿಹಿಗೆ ಬೇಕಾದ ಸಕ್ಕರೆ ಹಾಕಿ, ಸ್ವಲ್ಪ ಬೆಲ್ಲವನ್ನೂ ಸೇರಿಸಿ ( ಬೆಲ್ಲ ಒಳ್ಳೆಯದು ). ಸಕ್ಕರೆ ಬೆಲ್ಲಗಳು ಕರಗಿ ಒಂದೇ ಮಿಶ್ರಣವಾಗುತ್ತಿದ್ದಂತೆ ....

"ಏನು ಮಾಡ್ತೀರಾ "

ಬೇಯುತ್ತಿರುವ ಪಾಕದ ಅಂದಾಜು ನೋಡಿಕೊಂಡು, ಒಂದು ಅಥವಾ ಎರಡು ಕಪ್ ರಾಗೀ ಹುಡಿ ಹಾಕಿ. ಮಗುಚುತ್ತಾ ಇರಿ. ರಾಗಿ ಬಹು ಬೇಗನೆ ಬೇಯುತ್ತದೆ. ಈ ಮಿಶ್ರಣ ಒಂದೇ ಮುದ್ದೆ ಆಯಿತೇ ... ಬೇಕಿದ್ದಲ್ಲಿ ಸ್ವಲ್ಪ ಗಸಗಸೆ, ಗೋಡಂಬಿ, ದ್ರಾಕ್ಷಿ ಹಾಕಿಕೊಳ್ಳಬಹುದು. ಇಲ್ಲದಿದ್ದರೂ ತೊಂದರೆಯಿಲ್ಲ. ಒಂದು ಕಪ್ ತುಪ್ಪ ಬಿಸಿ ಮಾಡಿ ಹಾಕಿಕೊಳ್ಳಿ. ತುಪ್ಪ ಪಾಕದೊಂದಿಗೆ ಸೇರುವಂತೆ ಸೌಟಿನಿಂದ ಕೆದಕುತ್ತಾ ಬನ್ನಿ. ಇನ್ನೊಂದು ತಟ್ಟೆ ತಯಾರು ಮಾಡಿ. ಒಂದೇ ಮುದ್ದೆಯಾದ ಪಾಕವನ್ನು ಅದಕ್ಕೆ ಸುರುವಿಕೊಂಡು ತಟ್ಟೆಯಲ್ಲಿ ಹರಡಿ ತಣಿಯಲು ಬಿಡಿ. ಚೆನ್ನಾಗಿ ತಣಿದ ನಂತರ ಚಾಕುವಿನಲ್ಲಿ ಗೆರೆ ಹಾಕಿಟ್ಟು, ಬೇಕಾದಾಗ ತುಂಡುಗಳನ್ನು ತಿನ್ನುವಿರಂತೆ.

ಬಾಳೆಹಣ್ಣಿನ ಹಲ್ವಾವನ್ನು ರಾಗೀ ಹಲ್ವವಾಗಿ ಬದಲಾಯಿಸಿದ ಕಲೆಗಾರಿಕೆಯನ್ನು ಯಾರಿಗೂ ಹೇಳ್ಬೇಡಿ, ತಿನ್ನುವವರಿಗೆ ತಿಳಿದರೆ ತಾನೇ ! ಮಗಳಿಗೆ " ರಾಗೀ ಹಲ್ವಾ, ತಿನ್ನು ನೋಡೋಣ " ಅನ್ನಿ . ಮರುಮಾತಿಲ್ಲದೆ ತಿನ್ನುವ ವೈಖರಿಗೆ ಕಣ್ ಕಣ್ ಬಿಡುವ ಸರದಿ ನಿಮ್ಮದು. ತಯಾರಿಗೆ ಹೆಚ್ಚು ಶ್ರಮವಿಲ್ಲ, ಅಡುಗೆಮನೆಯ ಇನ್ನಿತರ ಕೆಲಸ ಕಾರ್ಯಗಳೊಂದಿಗೆ ಮಾಡಿಕೊಳ್ಳಬಹುದು.


Posted via DraftCraft app



ಸೋಮವಾರ, ದಿನಾಂಕ 4, ನವಂಬರ್ 2013ರಂದು ಸೇರಿಸಿದ ಹೊಸ ಬರಹ....



ಪಕ್ಕದ ಮನೆಯ ಹುಡುಗ, ನನ್ನ ಮಗನ ಓರಗೆಯವನು ಬಂದ, ಕೈಲೊಂದು ಲ್ಯಾಪ್ ಟಾಪ್.

" ದೀಪಾವಳಿ ಸ್ಪೆಶಲ್ ಸ್ವೀಟು ಮಾಡಿದ್ದೇನೆ, ತಿಂದು ನೋಡು "

" ಹ್ಞುಂ ಚೆನ್ನಾಗಿದೆ, ಇಂತದ್ದೇ ಒಂದು ಮಾಡ್ತಾರಲ್ಲ...." ಆಲೋಚಿಸತೊಡಗಿದ.

" ಸತ್ಯನಾರಾಯಣಪೂಜೆಗೆ ಮಾಡ್ತಾರಲ್ಲ ಸಪಾದಭಕ್ಷ್ಯ , ಅದೂ ಅಂತೀಯಾ?"

" ಹ್ಞಾ, ಕರೆಕ್ಟ್ " ಅಂದ.

" ಅದೂ ಹೀಗೇನೇ, ಆದ್ರೆ ಸಪಾದಭಕ್ಷ್ಯ ಸುಮ್ ಸುಮ್ನೆ ಮಾಡೋ ಹಾಗಿಲ್ಲ...." ಅನ್ನುತ್ತಾ ಕಡಂಬಿಲ ಸರಸ್ವತಿ ಬರೆದ ಪಾಕಶಾಸ್ತ್ರ ಪುಸ್ತಕ ' ಅಡಿಗೆ ' ಎಲ್ಲಿದೇಂತ ಪುಸ್ತಕದ ಶೆಲ್ಫ್ ನಲ್ಲಿ ತಡಕಾಡಿ ತರುವಷ್ಟರಲ್ಲಿ ಅವನು ಹೋಗಿಯಾಗಿತ್ತು.

15 -20 ಕದಳೀ ಬಾಳೆಹಣ್ಣುಗಳು. ಚೆನ್ನಾಗಿ ಹಣ್ಣಾಗಿರಬೇಕು, ಚಿಕ್ಕದಾಗಿ ಕತ್ತರಿಸಿ.
ಒಂದು ಕಪ್ ತುಪ್ಪ.
ಒಂದು ಕಪ್ ಗೋಧಿ ಹುಡಿ.
ಒಂದೊವರೆ ಕಪ್ ಸಕ್ಕರೆ. ಸಿಹಿಯ ಅವಶ್ಯಕತೆಗೆ ತಕ್ಕಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು.
ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಎರೆದು ಬಿಸಿ ಮಾಡಿಕೊಳ್ಳಿ.
ಗೋಧಿ ಹುಡಿ ಹಾಕಿ ಹುರಿಯಿರಿ.
ಕತ್ತರಿಸಿದ ಬಾಳೆಹಣ್ಣುಗಳನ್ನು ಸುರಿಯಿರಿ.
ಆಗಾಗ ಕೈಯಾಡಿಸುತ್ತಾ ಚೆನ್ನಾಗಿ ಬೇಯಿಸಿ.
ಸಕ್ಕರೆ ಸುರಿಯಿರಿ.
ಸಕ್ಕರೆ ಕರಗುತ್ತಾ ಪಾಕದೊಂದಿಗೆ ಸೇರಲು ಸೌಟು ಹಾಕಿ ಕೆದಕುತ್ತಿರಿ.
ಮಿಶ್ರಣ ಮುದ್ದೆಗಟ್ಟಿತೇ, ಕೆಳಗಿಳಿಸಿ ತಟ್ಟೆಗೆ ವರ್ಗಾಯಿಸಿ.
ಆರಿದ ನಂತರ ಬೇಕಾದ ಆಕೃತಿಯಲ್ಲಿ ಕತ್ತರಿಸಿ ತಿನ್ನಿ.
ಬೇಯಿಸಿದ ಬಾಳೆಹಣ್ಣು ಸುವಾಸನಾಯುಕ್ತವಾಗಿರುವುದರಿಂದ ಬೇರೆ ಪರಿಮಳ ದ್ರವ್ಯಗಳನ್ನು ಹಾಕಬೇಕೆಂದೇನೂ ಇಲ್ಲ.




Wednesday 12 September 2012

ಕಥನ ....ಕಾಲಹರಣ

 
ಲೇಖಕರು  ಸಾಮಾನ್ಯವಾಗಿ  ಒಂದು  ಬರಹವನ್ನು  ಸಿದ್ಧಪಡಿಸಿ ,  ನಂತರ  ಅದಕ್ಕೆ  ಸೂಕ್ತವಾದ ಚಿತ್ರಕ್ಕಾಗಿ  ತಡಕಾಡುತ್ತಾರೆ .   ಯಾರಿಂದಲಾದರೂ  ಚಿತ್ರ  ಬರೆಸುತ್ತಾರೆ .   ಇಲ್ಲಿ  ವಿಭಿನ್ನ  ಸ್ಥಿತಿ .   ಚಿತ್ರಗಳಿವೆ ,  ಒಂದೊಂದು  ಚಿತ್ರವೂ  ಒಂದೊಂದು  ವಿಷಯವನ್ನು  ಬಿಡಿಸುತ್ತಾ  ಹೋಗುತ್ತದೆ .   ಅದನ್ನು  ಅಕ್ಷರ  ರೂಪದಲ್ಲಿ ತರುವ  ಪ್ರಯತ್ನ .....

ನಮ್ಮ  ಬಾಲ್ಯವೆಲ್ಲವೂ  ಪುಸ್ತಕಗಳ  ಒಡನಾಟದಲ್ಲೇ ಕಳೆಯಿತು .   ಅಕ್ಷರ  ಕಲಿತ  ಕೂಡಲೇ ,  ಓದಲು  ಪ್ರಾರಂಭಿಸಿದ್ದು  ಮಕ್ಕಳ  ಕಥೆಗಳನ್ನು .   ನಮ್ಮಪ್ಪ  ಪ್ರತೀ  15  ದಿನಕ್ಕೊಮ್ಮೆ ಮಂಗಳೂರಿಗೆ ಹೋಗಿಯೇ ಹೋಗುತ್ತಿದ್ದರು .   ಅಡಿಕೆ ಮಾರುಕಟ್ಟೆ ಧಾರಣೆ  ತಿಳಿಯಲು ,  ಭಂಡಸಾಲೆಯಲ್ಲಿ ಹಾಕಿದ್ದ ಅಡಿಕೆ ಮಾರಾಟವಾಯಿತೇ , ಇತ್ಯಾದಿ ವ್ಯವಹಾರಗಳು .    ಅಡಿಕೆಯೆಂದರೆ  ಆ  ಕಾಲದಲ್ಲೇ ' ಝಣ ಝಣ ಕಾಂಚಾಣ ' ,  ಬರುವಾಗ ಮಕ್ಕಳಿಗೆ ಓದಲು ಕಥೆ  ಪುಸ್ತಕಗಳು .   ಈಗಲೂ  ನೆನೆದರೆ  ' ಹಾಯ್'.....


ಮಂಗಳೂರಿನ   ' ಬಾಲ ಸಾಹಿತ್ಯ ಮಂಡಲ ' ದಿಂದ ಪ್ರಕಟವಾಗುತ್ತಿದ್ದ  ಪಂಜೆ ಮಂಗೇಶ ರಾಯರ  ಶಿಶು ಸಾಹಿತ್ಯ ,  ' ತಟಪಟ ಹನಿಯಪ್ಪ ' ,  ' ಇಲಿಗಳ  ತಕ ಥೈ ' ,  ' ಕಾಗಕ್ಕ  ಗುಬ್ಬಕ್ಕನ  ಕಥೆ '  ಇವುಗಳನ್ನೆಲ್ಲ  ನಾವು  ಓದಿಯೇ  ಆನಂದಿಸಿದ್ದೇವೆ .   ತಿಂಗಳಿಗೊಮ್ಮೆ  ಬರುತ್ತಿದ್ದ  ' ಚಂದಮಾಮ '  ಹಿರಿಕಿರಿಯರೆಲ್ಲರಿಗೂ  ಪ್ರಿಯ  ಸಂಗಾತಿ .   ಅದರಲ್ಲಿ  ಮಕ್ಕಳ  ಕಥೆಗಳಲ್ಲದೆ  ಬಂಗಾಲೀ  ಕಾದಂಬರಿಗಳೂ ಅನುವಾದಿತವಾಗಿ  ಬರುತ್ತಿದ್ದವು .  ' ದುರ್ಗೆಶ ನಂದಿನಿ ' ,   ' ನವಾಬ ನಂದಿನಿ '  ಧಾರಾವಾಹಿ ರೂಪದಲ್ಲಿ  ,   ಮಹಾಭಾರತ  ವರ್ಣ ರಂಜಿತ  ಮುಖಪುಟದಲ್ಲಿ ,  ಬೇತಾಳ ಕಥೆಗಳು ,  ಪರೋಪಕಾರೀ ಪಾಪಣ್ಣ  ,... ಹೇಳಿದಷ್ಟೂ  ಮುಗಿಯದ  ಲಿಸ್ಟು  .

ಹೊಸ ಹೊಸ  ಮಕ್ಕಳ ಸಾಹಿತ್ಯ  ಪ್ರಕಟವಾಗುತ್ತಿದ್ದಂತೆ ,  ತಪ್ಪದೆ ಮನೆಗೆ ಬರುತ್ತಿತ್ತು .   ಅದರಲ್ಲಿ  ಒಂದು  ಭಾರತ ಭಾರತೀ  ಪುಸ್ತಕ ಮಾಲೆ .   ಹತ್ತು  ಪುಸ್ತಕಗಳ ಒಂದು  ಸಂಪುಟ ,  ಒಂದೇ ಬಾರಿಗೆ ಸಿಗುತ್ತಿತ್ತು .   ಮನೆಯ  ಮಕ್ಕಳೆಲ್ಲ  ಎಳೆದಾಡಿ  ಓದುವವರೇ .   ಅದರಲ್ಲಿ  ಒಂದು  ಪುಸ್ತಕ  ಕರ್ನಾಟಕದ  ಚಿತ್ರ ಕಲಾವಿದ  ಬಿ. ವೆಂಕಟಪ್ಪ ಅವರ  ಬಗ್ಗೆ  ಇತ್ತು .   ಬರೆದ  ಲೇಖಕರ  ಹೆಸರು  ನೆನಪಿಲ್ಲ ,  ಆದರೆ ಅದರ  ಮುಖಪುಟದ ಚಿತ್ರ  ಬಿಡಿಸಿದವರು  ಚಂದ್ರನಾಥ್ ಆಚಾರ್ಯ .   ಒಳಪುಟದ  ಬರಹಕ್ಕಿಂತ  ನನ್ನನ್ನು  ಆಕರ್ಷಿಸಿದ್ದು  ಮುಖಪುಟದ  ಚಿತ್ರ  .   ಅದನ್ನು. ಹಾಗೇ  ಪಡಿಮೂಡಿಸಲು  ಆಗ  ಪ್ರಯತ್ನಿಸಿದ್ದು ......



ಓದುವಿಕೆಯ  ವ್ಯಾಪ್ತಿ  ಹಿಗ್ಗಿದಂತೆ  ಮುಂದೆ  ಎನ್.  ನರಸಿಂಹಯ್ಯ ,  ತ್ರಿವೇಣಿ ,  ಅ ನ ಕೃ .  ಕೃಷ್ಣಮೂರ್ತಿ ಪುರಾಣಿಕರೆಲ್ಲ  ಆಪ್ತರಾದರು .   ಅಲ್ಲಿಂದ ಮುಂದೆ  ಶಿವರಾಮ ಕಾರಂತ  ದರ್ಶನ ,   ಹೀಗೇ  ಮುಂದುವರೆದು  ಎಸ್.  ಎಲ್.  ಭೈರಪ್ಪ  ಬಂದರು ,  ಇತ್ತೀಚೆಗಿನ  'ಕವಲು' ವರೆಗೆ .    ಭೈರಪ್ಪ  ಬರೆದ  ಕೃತಿಗಳ  ಹಿಂಭಾಗದ  ರಕ್ಷಕವಚದಲ್ಲಿ  ಒಂದು ಚಿಕ್ಕ ಸೈಜಿನ  ಕಪ್ಪು ಬಿಳುಪಿನ  ಚಿತ್ರ  ಇರುತ್ತಿತ್ತು .    ಆಗ  ಇಂದಿನಂತೆ   ದೃಶ್ಯ ಮಾಧ್ಯಮಗಳಿರಲಿಲ್ಲವಾಗಿ ,  ಆ  ಚಿತ್ರವೇ  ಲೇಖಕರ  ಪ್ರತಿಬಿಂಬವಾಗಿ ......



'ಉದಯವಾಣಿ '  ....ಹೊಸ  ದಿನಪತ್ರಿಕೆ  ಬಂದಿತು .   ಅದರೊಂದಿಗೆ  'ತುಷಾರ '  ಮಾಸ ಪತ್ರಿಕೆಯೂ .   ಅದರಲ್ಲಿ  ಜನಪ್ರಿಯವಾಗಿದ್ದ  ಒಂದು  ಲೇಖನಮಾಲೆ  ' ಸರಸ ' .    ಅದನ್ನು  ಓದಲು  ಅಕ್ಕಪಕ್ಕದ  ಮನೆಯ  ಯುವತಿಯರೆಲ್ಲ  ಓಡಿ  ಬರ್ತಿದ್ರು ,  ನಮ್ಮ  ಮನೆಗೆ . ಅದನ್ನು ಅಚ್ಚುಕಟ್ಟಾಗಿ  ಈಶ್ವರಯ್ಯ  ಬರೆಯುತ್ತಿದ್ದರು .    ಆ  ಅಂಕಣದಲ್ಲಿ  ಒಂದು  ಪುಟ್ಟ  ರೇಖಾ ಚಿತ್ರ ..... ನಾನೂ  ಬಿಡ್ತೇನಾ ,   ನೋಡಿಯೇ  ಬಿಟ್ಟೆ  ಒಂದು  ಕೈ ...



ಸಾಹಿತ್ಯವನ್ನು  ಓದುವಾಗ  ಕೇವಲ  ಕಥೆ ಕಾದಂಬರಿಗಳು  ಮಾತ್ರವಲ್ಲ ,   ಕಾವ್ಯ  ಕವಿತೆಗಳೂ  ಓದುವ  ವ್ಯಾಪ್ತಿಗೆ  ಬಂದೇ  ಬರುತ್ತವೆ .   ಕವಿ  ಮುದ್ದಣನ  ' ಅದ್ಭುತ ರಾಮಾಯಣಂ ',    ನಿಸ್ಸಾರ್  ಅಹಮದ್ ರ   ' ಸಂಜೆ  ಐದರ  ಮಳೆ ' ಯೂ  ಭೋರ್ಗರೆದು  ಸುರಿದೇ  ಬಿಟ್ಟಿತು ....



Posted via DraftCraft app