Pages

Ads 468x60px

Saturday, 22 January 2022

ಮನ ಗೆದ್ದ ಮನೆಗೆಲಸ



ಮನೆಕೆಲಸವೆಂದರೆ ಮೊದಲನೆಯದು ಅಡುಗೆ,

ನಂತರ ಒಪ್ಪಓರಣ,

ನಂತರದ್ದು ಪಾತ್ರೆ ತೊಳೆ, 

ಬಟ್ಟೆ ಒಗೆ,  ಒಣ ಹಾಕು, 

ಒಂದೇ ಎರಡೇ..  ಮುಗಿಯದ ಕೆಲಸ,

ಅದರೊಂದಿಗೆ ನಮ್ಮ ವಿವಿಧ ಹವ್ಯಾಸ,

ಟೀವಿ ನೋಡು, 

ಮೊಬೈಲ್ ಹಿಡಿ,

ಸುಡೊಕು ಆಡು.


ಸುಖವಾಗಿಯೇ ಇದ್ದರೂ ಕೊರೋನಾ ಪಿಡುಗಿನಿಂದಾಗಿ ಒಂದು ಥರವಾದ ಅಸ್ಪೃಶ್ಯತೆ ನಮ್ಮನ್ನು ಆವರಿಸಿದೆ.

ಯಾರನ್ನೂ ಮನೆಗೆ ಬನ್ನಿ ಅನ್ನುವುದಕ್ಕಿಲ್ಲ,

ನಾವು ಹೋಗುವುದಕ್ಕೂ ಇಲ್ಲ.

ಮನೆಕೆಲಸಕ್ಕೆ ಯಾರನ್ನೂ ಕರೆಯುವಂತಿಲ್ಲ.


ಹೀಗೇ ದಿನ ಕಳೆಯುತ್ತಿದ್ದಂತೆ ಒಂದು ದಿನ ನಮ್ಮ ಮನೆ ಯಜಮಾನರು,  " ದಿನಾ ಪಾತ್ರೆ ತೊಳಿತೀಯಲ್ಲ,  ಎಷ್ಟು ಹೊತ್ತು ಬೇಕಾಗುತ್ತದೆ ಹೇಳು? "

ನಾನು ಯೋಚಿಸ ತೊಡಗಿದೆ.   "ಬೆಳಗ್ಗೆ ಒಂದಿಪ್ಪತ್ತು ನಿಮಿಷ,  ಮಧ್ಯಾಹ್ನ ಹತ್ತು ನಿಮಿಷ,  ರಾತ್ರಿ ಐದು ನಿಮಿಷ...   ಉಳಿದದ್ದು ಅಲ್ಲಲ್ಲಿ ಇರ್ತದೆ.   ಅದ್ಯಾಕೆ ಹೀಗೆ ಕೇಳ್ತೀರಾ? " 


" ಏನಿಲ್ಲ,  ಒಂದು ಡಿಶ್ ವಾಶರ್ ತೆಗೆಯೋಣಾಂತ... "  ಅನ್ನುವುದೇ ನನ್ನ ಪತಿ!


" ಅಡ್ಡಿಯಿಲ್ಲ,  ಆದ್ರೆ ಇಲ್ಲಿ ಯಾರ ಮನೇಲೂ ಇಲ್ವಲ್ಲ...   ಹೇಗೋ ಏನೋ.."

"ಆ ಚಿಂತೆ ನೀ ಮಾಡಬೇಡ,  ಹೇಳಿ ಕೊಡಲಿಕ್ಕೆ ನಾನಿದೀನಲ್ಲ,  ಬೇಕಿದ್ದರೆ ಯೂಟ್ಯೂಬು ನೋಡಿಕೋ.." ಎಂದರು ಇಂಜಿನಿಯರ್ ಮಹಾಶಯರು.


ಅಂದ ಹಾಗೆ ನಮ್ಮ ಹಿರಣ್ಯದ ಹಳ್ಳಿ ಮನೆಗೆ ಮೊದಲಾಗಿ ಟೀವಿ ಬಂದಿದ್ದೇ ಬಂದಿದ್ದು... ಅದನ್ನು ಒಂದು ಬ್ಲಾಗ್ ಬರಹದಲ್ಲಿ ವರ್ಣಿಸಿ ಬರೆದೂ ಇದ್ದೇನೆ.

ರೆಫ್ರಿಜರೇಟರ್ ಕೂಡಾ ಹಾಗೇನೇ,  ಇಲ್ಲೇ ಮೊದಲು.

ಮೈಕ್ರೊ ವೇವ್,  ಇಂಡಕ್ಷನ್ ಕುಕಿಂಗ್,  ವಾಶಿಂಗ್ ಮೆಶೀನ್, ಯಾವುದುಂಟು ಯಾವುದಿಲ್ಲ ಕೇಳಿ.

ಇಂಟರ್ನೆಟ್ ಯುಗ ಆರಂಭ ಆಯ್ತೇ,  ಮಕ್ಕಳಿಗಾಗಿ ಡೆಸ್ಕ್ ಟಾಪ್ ಬಂದಿತ್ತು.  ನಂತರ ಕೇಳೋದೇ ಬೇಡ, ಲ್ಯಾಪ್ ಟಾಪ್,  ಐಪ್ಯಾಡ್, ಐಫೋನ್...  ಎಲ್ಲರೂ ಕಂಪ್ಯೂಟರ್ ಪರಿಣತರು,  ನಾನೂ ಸೇರಿ, ಹಹ...


ಬಚ್ಚಲುಮನೆಗೆ ಸೋಲಾರ್  ಬಂದು ವರ್ಷಗಳೇ ಆಯಿತು.

ಈಗ ಮನೆಗೆ ಸೋಲಾರ್ ವಿದ್ಯುತ್ ಬಂದಿದೆ.  ಮನೆ ತುಂಬ ಝಗಝಗ ಬೆಳಕು.


 ಒಂದು ಶುಭಮುಹೂರ್ತದಲ್ಲಿ ಡಿಶ್ ವಾಶಿಂಗ್ ಮೆಶೀನ್ ಆಗಮಿಸಿತು.  ಕ್ರಿಸ್ಮಸ್ ರಜಾ ಸಂಭ್ರಮದಲ್ಲಿ ಬೆಂಗಳೂರಿನಿಂದ ಮಕ್ಕಳೂ ಬಂದಿದ್ದ ಸಮಯ.

ಅತ್ತೆಯ ಕಷ್ಟ ತೊಲಗಿತು ಎಂದು ಸೊಸೆ ಸಂಭ್ರಮ ಪಟ್ಟಳು.

ಮೆಶಿನ್ ಒಳಗೆ ಪಾತ್ರೆ ಪರಡಿಗಳನ್ನು ಜೋಡಿಸಲು ಅಳಿಯನ ನೆರವು.


ಅಂತೂ ಪಾತ್ರೆ ತೊಳೆಯುವ ಉಪಕರಣ ನನ್ನ ಮನ ಗೆದ್ದಿತು.









Monday, 10 January 2022

ಸಿಹಿಯರಳು

 ಕ್ರಿಸ್ಮಸ್ ರಜಾ ದಿನಗಳೂ,  ಹೊಸ ವರ್ಷಾಚರಣೆಯೂ ಕಳೆದು  ನಮ್ಮ ಮಕ್ಕಳ ಪಟಾಲಂ ಬೆಂಗಳೂರಿಗೆ ಹಿಂತಿರುಗಿಯೂ ಆಯ್ತು.   ಎಲ್ಲರೂ ಸೇರಿದ ಸಂಭ್ರಮದಲ್ಲಿ ನಾವಿರಬೇಕಾದರೆ ನನ್ನ ಮೊಬೈಲ್ ಆ್ಯಪ್ ಗಳು ಮೂಲೆ ಸೇರದಿದ್ದೀತೇ..





ಇದರೆಡೆಯಲ್ಲಿ ಹಿರಿಯರ ಶ್ರಾದ್ಧವೂ ಒಂದು ದಿನ ಬಂದಿತ್ತು.  ಶ್ರಾದ್ಧದ ಊಟಕ್ಕೆ ತರಹೇವಾರಿ ಭಕ್ಷ್ಯಗಳು,  ಪಾಯಸಗಳು, ಚಿತ್ರಾನ್ನ, ಮೆಣಸ್ಕಾಯಿ ಮೊದಲ್ಗೊಂಡು ಪಲ್ಯಗಳು, ಹಪ್ಪಳಗಳು, ಮೇಲೋಗರಗಳೂ ಸೇರಿದ ಔತಣ ಕೂಟ.  ಅಡುಗೆ ಎಷ್ಟೇ ತಿಳಿದಿದ್ದರೂ,  ಐವತ್ತು ಜನ ಸೇರಿದ ಸಮಾರಂಭದಲ್ಲಿ ನಮ್ಮ ಮಹಿಳೆಯರು ಸೆರಗು ಕಟ್ಟಿ ಅಡುಗೆ ಮಾಡುವುದಕ್ಕಿಲ್ಲ,  ಏನಿದ್ದರೂ ಎಲ್ಲವನ್ನೂ ಸುಧರಿಸುವ ಮೇಲ್ತನಿಖೆ ಮಾತ್ರ.  


ಶ್ರಾದ್ಧದ ಅಡುಗೆ ಸಾಮಾನು ಪಟ್ಟಿ ಮಾಡುವಾಗ ಎಲ್ಲವನ್ನೂ ತುಸು ಜಾಸ್ತಿಯೇ ಬರೆದಿದ್ದೆ.   ಅದರಲ್ಲಿ ಅರಳಿನ ಹುಡಿ ತುಂಬ ಉಳಿದಿದೆ.  ಅರಳು ಸುಕ್ಕಿನುಂಡೆ ಶ್ರಾದ್ಧದ ಕಜ್ಜಾಯಗಳಲ್ಲಿ ಒಂದು.   ಹತ್ತಿಯಂತೆ ಹಗುರಾದ ಅರಳು ನನ್ನ ಕಿಲೋ ಲೆಕ್ಕಾಚಾರದಲ್ಲಿ ವಿಪರೀತ ಆಗಿ ಬಿಟ್ಟಿದೆ.   ನೂರು ಗ್ರಾಂ ತಂದರೂ ಸಾಕಾಗುತಿತ್ತು.


ಈ ಸಂಜೆ ನಾವಿಬ್ಬರೇ ಇರುವಾಗ ಚಹಾ ಕುಡಿಯುವ ಹೊತ್ತಿಗೆ ತಿಂಡಿಗಳು ಮುಗಿದಿವೆ,  ಹೋಳಿಗೆಯೂ ಖಾಲಿ...

ಅರಳಿನಿಂದ ಏನಾದರೂ ಮಾಡೋಣ.


ತೆಂಗಿನಕಾಯಿ ತುರಿಯಿರಿ,

ಬೆಲ್ಲ ಪುಡಿ ಮಾಡ್ಕೊಳ್ಳಿ,

ಒಂದು ಚಮಚ ಎಳ್ಳು ಹುರಿದು, ಗುದ್ದಿರಿ.


ಬಾಣಲೆಗೆ ತೆಂಗಿನತುರಿ ಹಾಗೂ ಬೆಲ್ಲ ಹಾಕಿ ಬಿಸಿ ಮಾಡ್ಕೊಳ್ಳಿ.  ತೆಂಗಿನ ತುರಿಯ ತೇವಾಂಶದಲ್ಲಿ ಬೆಲ್ಲ ಸೇರಿದರೆ ಸಾಕು.

ಹುಡಿ ಮಾಡಿದ ಎಳ್ಳು ಸೇರಲಿ.

ಚಿಟಿಕೆ ಉಪ್ಪು ಬೀಳಲಿ.

ಮೂರು ತೊಟ್ಟು ತುಪ್ಪ ಇರಲಿ.

ತೆಂಗಿನ ತುರಿ ಒಂದು ಹಿಡಿ ಆಗುವಷ್ಟು ಹಾಕಿದ್ದು ಕಣ್ರೀ.,  ಬೆಲ್ಲವೂ ಅಷ್ಟೇ.

ನಾಲ್ಕು ಹಿಡಿ ಅರಳಿನ ಹುಡಿ ಬೆರೆಸಿದಾಗ ನನ್ನ ದಿಢೀರ್ ಅರಳು ಕಲಸು ಸಿದ್ಧವಾಗಿದೆ. 

ಚಹಾದ ಜೊತೆ ತಿಂದೆವು,  ಪಾಸ್ ಮಾರ್ಕು ಸಿಕ್ಕಿತು.


ಚಿತ್ರದಲ್ಲಿರುವ ಅರಳುಂಡೆ ನಮ್ಮ ಅಡುಗೆ ಗಣಪಣ್ಣನ ನಳಪಾಕದಲ್ಲಿ ತಯಾರಾದದ್ದು.  

ಮೇಲೆ ತಿಳಿಸಿದ ಸಾಮಗ್ರಿಗಳನ್ನು ಬೆಲ್ಲದ ಪಾಕ ಎರೆದು ಉಂಡೆ ಕಟ್ಟಿದರಾಯ್ತು ಅಷ್ಟೇ..  ಬಿಸಿ ಇರುವಾಗಲೇ ಉಂಡೆ ಕಟ್ಟುವ ಚಾಕಚಕ್ಯತೆ ಇದ್ದರಾಯಿತು.