Pages

Ads 468x60px

Saturday 27 September 2014

ಕಹಿ ಹಾಗಲದ ಸಿಹಿ!




" ನೋಡೂ,  ಹಾಗಲ ಬಳ್ಳಿ ಪೇರಳೆ ಮರಕ್ಕೆ ಹಬ್ಬಿ ಹೋಗಿದ್ದರಲ್ಲಿ ಈ ಹಾಗಲಕಾಯಿ ಸಿಕ್ಕಿತು "
" ಹೌದಾ, ಎಷ್ಟ್ ಸಿಕ್ತು ?"
" ಒಂದೇ ಕೊಯ್ದಿದ್ದು,  ಹೂ,  ಕಾಯಿ,  ನಿಣೆ  ಎಲ್ಲಾ ಇದೆ.   ವಾರಕ್ಕೊಂದು ಕೊಯ್ಬಹುದು "  ಅಂದರು ಗೌರತ್ತೆ.
" ಅಲ್ಲ,  ಈ ಒಂದರಲ್ಲಿ ಏನಡುಗೆ ಆಗ್ತದೆ ?'
" ಮಾಡು ಏನೋ ಒಂದು...  ನೀ ಎಕ್ಸ್ಪರ್ಟ್ ಅಲ್ವೇ..."
" ಹಹ...  ಈ ಕಹಿಯನ್ನು ನಾವಿಬ್ರೇ ತಿನ್ಬೇಕಷ್ಟೆ..."

ಗೌರತ್ತೆಗೆ ಉಚಿತವಾಗಿ ಲಭಿಸಿದ ಹಾಗಲದಿಂದ ಮದ್ಯಾಹ್ನದೂಟಕ್ಕೆ ಹೀಗೊಂದು ವ್ಯಂಜನ ಸಿದ್ಧವಾಯಿತು. ಇದನ್ನು ಹಾಗಲ ಕೋಸಂಬರಿ ಅಂದರಾಯಿತು.

ಹಾಗಲದ ಒಳಗಿನ ಬೀಜಗಳನ್ನೆಲ್ಲ ತೆಗೆದು ಚಿಕ್ಕದಾಗಿ ಕತ್ತರಿಸಿ,  ಒಂದು ಚಮಚ ಉಪ್ಪು ಬೆರೆಸಿ ಇಡಬೇಕು.
ಒಂದು ದೊಡ್ಡ ನೀರುಳ್ಳಿ ಚೂರು ಮಾಡಿ ಇಡಬೇಕು.
ಒಂದು ಕಪ್ ತೆಂಗಿನ ತುರಿ ಇರಲೇ ಬೇಕು.
ಅರ್ಧ ಘಂಟೆ ಬಿಟ್ಟು ಹಾಗಲಕಾಯಿ ಚೂರುಗಳನ್ನು ಅಂಗೈಯಲ್ಲಿ ಚೆನ್ನಾಗಿ ಹಿಂಡಬೇಕು.   ಉಪ್ಪು ಬೆರೆಸಿದ ಹಾಗಲದಿಂದ ನೀರು ಇಳಿಯಬೇಕು.  ಉಪ್ಪಿನೊಂದಿಗೆ ಕಹಿಯೂ ಹೋಯಿತೆಂದು ತಿಳಿಯಿರಿ.  ಈಗ ಅಡುಗೆಗೆ ಸಿದ್ಧವಾದ ಹಾಗಲ ದೊರೆಯಿತು.

ಬಾಣಲೆಗೆ ತುಪ್ಪದ ಪಸೆ ಮಾಡಿಟ್ಟು ಒಲೆಯ ಮೇಲಿಡಿ.   ಹಾಗಲ ಕಾಯಿಯನ್ನು ಗರಿ ಗರಿಯಾಗುವಷ್ಟು ಹೊತ್ತು ಒಲೆಯ ಮೇಲಿಟ್ಟಿರಿ.   ಇದು ನಿಧಾನಗತಿಯಲ್ಲಿ ಮಾಡಬೇಕಾಗುವಂತಹ ಕೆಲಸ.   ಕರಟಿ ಹೋಗಲೂ ಬಾರದು.   ಚಿಕ್ಕ ಉರಿಯಲ್ಲಿಟ್ಟು ಆಗಾಗ ಸೌಟಾಡಿಸುತ್ತಿರಿ.

ಊಟಕ್ಕೆ ಎಲ್ಲರೂ ಕುಳಿತರೇ,   ಒಂದು ಬಟ್ಟಲಿಗೆ ಗರಿ ಗರಿ ಹಾಗಲ,  ನೀರುಳ್ಳಿ,  ತೆಂಗಿನ ತುರಿಗಳನ್ನು ಬೆರೆಸಿ,   ಎಲ್ಲರ ಊಟದ ತಟ್ಟೆಗೆ ಬಡಿಸಿ...
" ಇನ್ನೂ ಸ್ವಲ್ಪ ಹಾಕು " ಒಕ್ಕೊರಲ ಕೋರಿಕೆ ಬಂದೇ ಬಂತು.   ಗೌರತ್ತೆಯ ಮುಸಿನಗು.  " ನಿಂಗೂ ಸ್ವಲ್ಪ ತೆಗೆದಿಟ್ಕೋ..."




ಹಾಗಲ ಪಲ್ಯ:
ಹಾಗಲವನ್ನು ಸಿದ್ಧಪಡಿಸಿದ್ದಾಯಿತೇ,   ನೀರುಳ್ಳಿ,  ಕಾಯಿತುರಿಗಳೂ ಬರಲಿ.
ಬಾಣಲೆಯಲ್ಲಿ ಒಗ್ಗರಣೆ ಸಿಡಿಯಿತೇ,  ಬೇವಿನೆಸಳು ಬೀಳಲಿ.
ಹಾಗಲಕಾಯಿ ಹಾಕಿ ಬಾಡಿಸಿಕೊಳ್ಳಿ,   ಚಿಕ್ಕ ಉರಿಯಲ್ಲಿ ಬೇಯಿಸಿ.  ಉಪ್ಪು ಪುನಃ ಹಾಕದಿರಿ.
ನೀರುಳ್ಳಿ,  ಕಾಯಿತುರಿಗಳಿಂದ ಅಲಂಕೃತವಾದ ಈ ಪಲ್ಯಕ್ಕೆ ಬೆಲ್ಲ ಹಾಕಲು ಮರೆಯದಿರಿ.

ಹಾಗಲ ಗೊಜ್ಜು:
ಮೇಲೆ ಹೇಳಿದ ಕ್ರಮದಲ್ಲೇ ಹಾಗಲ ಬೇಯಿಸಿ.  ನೀರುಳ್ಳಿ ಹಾಕದೆಯೂ,  ಹಾಕಿಯೂ ಮಾಡಬಹುದು.
ಹುಳಿ, ಬೆಲ್ಲಗಳ ದ್ರಾವಣ ಮಾಡಿಟ್ಕೊಂಡಿದೀರಾ,  ಎರೆಯಿರಿ.   ರುಚಿ ನೋಡಿ ಬೇಕಿದ್ದರೆ ಉಪ್ಪು ಹಾಕಿ. 
ಹುಳಿಗೆ ಬದಲು ಟೊಮ್ಯಾಟೋ ಹಾಕಿದರೂ ಆದೀತು.

ಹಾಗಲ ಕಾಯಿ ಸಾಸಮೆ ಅಥವಾ ಸಾಸಿವೆ:
ಉಪ್ಪು ಬೆರೆಸಿ ಕಹಿ ತೆಗೆದ ಹಾಗಲವನ್ನು ಮೊದಲು ಹೇಳಿದ ಕ್ರಮದಲ್ಲೇ ಹುರಿಯಿರಿ.  ಗರಿಗರಿಯಾಗಬೇಕೆಂದೇನೋ ಇಲ್ಲ.  ಬೆಂದರಾಯಿತು.  ಒಂದು ಕಪ್ ಕಾಯಿತುರಿಯನ್ನು ಸಾಸಿವೆ ಹಾಗೂ ಬೆಲ್ಲದೊಂದಿಗೆ ಅರೆಯಿರಿ.  ಸಿಹಿ ಮಜ್ಜಿಗೆ ಕೂಡಿಸಿ.  ಇದಕ್ಕೆ ಒಗ್ಗರಣೆ ಬೇಡ,  ಕುದಿಸುವುದೂ ಬೇಡ.   

ಷಡ್ರಸಗಳಲ್ಲಿ ಒಂದಾದ ಕಹಿಯೂ ನಮ್ಮ ಭೂರಿ ಭೋಜನದಲ್ಲಿ ಇರಲೇಬೇಕು.   ಬಾಳೆಲೆಯ ಮೇಲೆ ಅದೇನೇ ಭಕ್ಷ್ಯಗಳಿದ್ದರೂ ಹಾಗಲದ ಮೆಣಸ್ಕಾಯಿ ಒಂದು ತುದಿಯಲ್ಲಿ ಬಡಿಸಿರುತ್ತಾರೆ.   ಈ ಮೆಣಸ್ಕಾಯಿಯ ಸ್ವಾದವೇ ಬೇರೆ.   ಊಟದ ತರುವಾಯ ಅಡುಗೆಯ ಮೇಲೊಂದಿಷ್ಟು ಕಮೆಂಟ್ಸ್ ಇದ್ದೇ ಇರುತ್ತದೆ.   

" ಒಂದು ಮೆಣಸ್ಕಾಯಿ ಇತ್ತೂ... ನಾನು ಅದ್ರಲ್ಲೇ ಆಗಾಗ ಬಾಯಿ ಚಪ್ಪರಿಸಿದ್ದು ..." 
" ಯಬ್ಬ,  ಆ ಮೆಣಸ್ಕಾಯಿಯೋ,  ಏನು ಅಡುಗೆಭಟರೋ..."

ಹೀಗೆ ಹೊಗಳಿಕೆ ಹಾಗೂ ತೆಗಳಿಕೆಗಳಿಗೆ ಇಂಬಾಗುವ ಹಾಗಲದ ಮೆಣಸ್ಕಾಯಿಯನ್ನು ನಾವೂ ಮಾಡಿಯೇ ಬಿಡೋಣ.   ಒಂದು ಪುಟ್ಟ ಹಾಗಲಕಾಯಿ ಸಾಕು.   ಕಹಿರಸವನ್ನು ತೆಗೆಯುವ ಮೊದಲ ಸಿದ್ಧತೆ ಮಾಡಿದ್ರಾ,  ಒಂದು ಕಡಿ  ತೆಂಗಿನ ತುರಿ ಆಯ್ತೇ,   ಬೆಲ್ಲ ಡಬ್ಬದಲ್ಲಿ ಸಾಕಷ್ಟು ಇದೆಯಾ ನೋಡಿಕೊಳ್ಳಿ.
ಮಸಾಲೆಗೆ ಏನೇನಿರಬೇಕು?
3-4 ಒಣಮೆಣಸು
2 ಚಮಚ ಕೊತ್ತಂಬ್ರಿ
1 ಚಮಚ ಉದ್ದಿನಬೇಳೆ
3 ಚಮಚ ಎಳ್ಳು
ತುಸು ಎಣ್ಣೆಪಸೆಯಲ್ಲಿ ಹುರಿದಾಯಿತೇ,   ತೆಂಗಿನ ತುರಿಯೊಂದಿಗೆ ಅರೆಯಿರಿ.   ಮಸಾಲೆ ಅರೆಯುವಾಗ ಉಪ್ಪು,  ಹುಳಿ ಹಾಕಿಯೇ ಅರೆದರೆ ಉತ್ತಮ.
ಹಾಗಲ ಬೇಯಿಸಿದ್ರಾ,  ಬೆಲ್ಲ ಹಾಕಿದ್ರಾ,   ಬೆಲ್ಲ ಕರಗಿತೇ,  ಅರೆದ ಮಸಾಲೆ ಮಿಶ್ರಣ ಕೂಡಿಸಿ. ಅವಶ್ಯವಿದ್ದಷ್ಟೇ ನೀರು ಹಾಕಿ,  ಸಾರಿನ ಹಾಗೆ ತೆಳ್ಳಗಾಗಬಾರದು, ಕುದಿಸಿ.  ಬೇವಿನೆಸಳು ಹಾಕಿ ಒಗ್ಗರಣೆ ಕೊಡಿ.




ನೋಡುತ್ತಿದ್ದ ಹಾಗೇ ಹಾಗಲ ಬಳ್ಳಿ ತನ್ನ ಕೈಲಾದಷ್ಟು ಕಾಯಿಗಳನ್ನು ಕೊಟ್ಟು ಜೀವ ತೊರೆದು ಹೋಯಿತು.   ಆದರೇನಂತೆ,  ಎಲ್ಲರೂ ಹಾಗಲಪ್ರಿಯರಾಗಿದ್ದಾರಲ್ಲ,  ಪೇಟೆಯಿಂದಲೇ ಹಾಗಲ ಬಂದಿತು.   ಮನೆಯಂಗಳದಲ್ಲಿ ಸಿಗುತ್ತಿದ್ದ ಹಾಗಲ್ಲ,  ನಮ್ಮೆಜಮಾನ್ರು ಒಂದು ಕಿಲೋ ಹಾಗಲಕಾಯಿ ತಂದ್ರು.  ಚೀಲ ತುಂಬ ಬಂದ ಹಾಗಲಗಳನ್ನು ನೋಡಿ,  " ಇದನ್ನೇನು ಮಾಡಲೀ..."  ಅನ್ನುತ್ತಿದ್ದ ಹಾಗೆ ಗೌರತ್ತೆ ಐಡಿಯಾ ಹೇಳ್ಕೊಟ್ರು.   " ಈಗ ಮಳೆ ಹೋಯ್ತಲ್ಲ,  ಚೆನ್ನಾಗಿ ಬಿಸಿಲೂ ಇದೆ,  ಬಾಳ್ಕ ಮಾಡಿ ಇಟ್ಕೊಳ್ಳೋಣ "
 
  ಬಾಳ್ಕ ಅಂದ್ರೇನು ?

ಹಚ್ಚಿಟ್ಟ ತರಕಾರಿಗಳಿಗೆ ಉಪ್ಪು ಬೆರೆಸಿ,  ಬಿಸಿಲಿನಲ್ಲಿ ಒಣಗಿಸಿಟ್ಟು,  ಡಬ್ಬದಲ್ಲಿ ತುಂಬಿಸಿಟ್ಟು ಬೇಕಿದ್ದಾಗ ಅಡುಗೆಯಲ್ಲಿ ಉಪಯೋಗಿಸಲು ಸಿದ್ಧವಾಗಿ ದೊರೆಯುವ ಕಚ್ಛಾವಸ್ತು ಬಾಳ್ಕ.   ಎಣ್ಣೆಯಲ್ಲಿ ಕರಿದೂ ತಿನ್ನಬಹುದು,  ನೀರಿನಲ್ಲಿ ಹಾಕಿಟ್ಟು ತುಸು ಮೆತ್ತಗಾದ ಕೂಡಲೇ ಅಡುಗೆಗೆ ಸಿದ್ಧ ತರಕಾರಿಯೂ ದೊರೆಯಿತು.   ಯಾವುದೇ ತರಕಾರಿಯನ್ನು ಹೀಗೆ ಒಣಗಿಸಿಟ್ಟುಕೊಳ್ಳಲ ಸಾಧ್ಯವಿದೆ.   

ಹಾಗಲಕಾಯಿಗೆ ಕೇವಲ ಉಪ್ಪು ಬೆರೆಸಿದರೆ ಸಾಲದು,  ಹೋಳುಗಳು ಮುಳುಗವಷ್ಟು ಮಜ್ಜಿಗೆ ಎರೆದು ಎಂಟು ಗಂಟೆ ಇರಲಿ.
ಮಜ್ಜಿಗೆ,  ಉಪ್ಪು ಮಿಶ್ರಿತ ಹಾಗಲದ ಕಹಿಯನ್ನೆಲ್ಲ ಅಂಗೈಯಲ್ಲಿ ಚೆನ್ನಾಗಿ ಹಿಂಡಿ ತೆಗೆಯಿರಿ.
ಅಗಲವಾದ ತಟ್ಟೆಯಲ್ಲಿ ಹರಡಿ ಬಿಸಿಲಿನಲ್ಲಿ ಒಣಗಿಸಿ.
ಒಣಗಿದ ನಂತರ ಊಟದ ಹೊತ್ತಿಗೆ ಎಣ್ಣೆಯಲ್ಲಿ ಕರಿದು  ತಿನ್ನಿರಿ.






ಹಾಗಲದ ಬಳ್ಳಿಯ ಎಳೆಯ ಕುಡಿಗಳಿಂದ ತಂಬುಳಿ ಮಾಡಲೂ ಸಾಧ್ಯವಿದೆ.   ಕುಡಿಗಳನ್ನು ತುಪ್ಪದಲ್ಲಿ ಬಾಡಿಸಿ,  ತುಸು ಜೀರಿಗೆ,  ತೆಂಗಿನತುರಿಯೊಂದಿಗೆ ಅರೆದು ಮಜ್ಜಿಗೆ ಕೂಡಿಸಿ.   ರುಚಿಗೆ ಉಪ್ಪು,  ಸಿಹಿಗೆ ಬೆಲ್ಲವೂ ಇರಲಿ.   ಹಾಗಲ ಬಳ್ಳಿಯಲ್ಲಿ ಮೊದಲು ಗಂಡು ಹೂಗಳು ಅರಳುತ್ತವೆ,  ಈ ನಿರರ್ಥಕ ಹೂಗಳನ್ನೂ ತಂಬ್ಳಿ,  ಸಲಾಡ್ ಗಳಿಗೆ ಬಳಸಬಹುದಾಗಿದೆ.   ಅಂದ ಹಾಗೆ ಈ ಬಳ್ಳಿ ಸಸ್ಯ ಮೆಕ್ಸಿಕೋ ಇಲ್ಲವೇ ಆಫ್ರಿಕಾದಿಂದ ಭಾರತಕ್ಕೆ ಬಂದದ್ದಲ್ಲ,   ನಮ್ಮ ದೇಶವೇ ಇದರ ತವರು ನೆಲೆ.   Momordica charantia ಎಂದು ಸಸ್ಯಶಾಸ್ತ್ರಜ್ಞರು ಇದನ್ನು ಕರೆದಿದ್ದಾರೆ.

ಅತಿ ಕಡಿಮೆ ಕೆಲೊರಿ ಪ್ರಮಾಣ ಹಾಗಲಕಾಯಿಯಲ್ಲಿರುವುದಾದರೂ ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ತರಕಾರಿ.   ಬಿ ಜೀವಸತ್ವ,  ಖನಿಜಾಂಶಗಳು ಹೇರಳವಾಗಿವೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ.   ನಿಯಮಿತವಾಗಿ ಹಾಗಲದ ರಸವನ್ನು ಜೇನು ಬೆರೆಸಿ ಕುಡಿಯಿರಿ.
ಹಾಗಲ ಸೊಪ್ಪಿನ ರಸ ಹಾಗೂ ನಿಂಬೆರಸ ಕೂಡಿಸಿ ಕುಡಿಯಿರಿ,   ಚರ್ಮದ ತುರಿಕೆ, ಕಜ್ಜಿಗಳನ್ನು ತೊಲಗಿಸಿ.

ಮಧುಮೇಹಿಗಳಿಗೆ ಹಾಗಲದ ಕಹಿ ತಿಂದರೆ ಒಳ್ಳೆಯದು ಎಂದು ಸಾಮಾನ್ಯ ತಿಳುವಳಿಕೆಯಾಗಿದೆ.   ರಕ್ತ ಮತ್ತು ಮೂತ್ರದಲ್ಲಿನ ಸಕ್ಕರೆಯ ಪ್ರಮಾಣ ಇಳಿಕೆಯಾಗುವುದೇನೋ ಹೌದೆಂದು ಪ್ರಯೋಗಗಳು ಧೃಢ ಪಡಿಸಿವೆ.   ನೆನಪಿರಲಿ,  ಇದು ಇನ್ಸುಲಿನ್ ಔಷಧಿಗೆ ಬದಲಿ ಪರಿಹಾರವಲ್ಲ.   ಖಾಲಿ ಹೊಟ್ಟೆಯಲ್ಲಿ ತಿನ್ನದಿರಿ,  ಒಳ್ಳೆಯದೆಂದು ಅತಿ ಸೇವನೆ ತರವಲ್ಲ.   ಬಸುರಿ,  ಬಾಣಂತಿಯರು ಹಾಗಲ ಖಾದ್ಯಗಳನ್ನು ಸೇವಿಸದಿರುವುದು ಉತ್ತಮ.


ಟಿಪ್ಪಣಿ:  21 /12 /2016,  ಬರಹ ಮುಂದುವರಿದಿದೆ.


                                                                 ಹಾಗಲಕಾಯಿ ಮಜ್ಜಿಗೆ ಹುಳಿ 



ಈ ದಿನ ಯಾಕೋ ಏನೋ ಚೆನ್ನಪ್ಪ ಕೆಲಸಕ್ಕೆ ಬಂದಿಲ್ಲ,   ಮಧ್ಯಾಹ್ನದೂಟಕ್ಕೆ ನಾವಿಬ್ಬರೇ,   ಅತಿ ಸರಳವಾದ ಒಂದು ಮೇಲಾರ ಹಾಗೂ ಟೊಮ್ಯಾಟೋ ಸಾರು ಸಾಕು.


" ಮೇಲಾರ ಅಂದ್ರೇನೂ..."

" ಮಜ್ಜಿಗೆಹುಳಿ ಅಂತೀವಲ್ಲ,  ಅದೇ ನಮ್ಮೂರಿನ ಆಡುಭಾಷೆಯಲ್ಲಿ ಮೇಲಾರ.   ಬಹುಶಃ  ಮೇಲೋಗರ ಎಂಬ ಪದವೇ ಮೇಲಾರದ ಹುಟ್ಟು.


ಅಡುಗೆಮನೆಯ ತರಕಾರಿ ಸಂಪತ್ತು ಏನಿದೆ?  ಹಾಗಲಕಾಯಿ ಇದ್ದಿತ್ತು.   ಆದೀತು,  ಹೇಗೂ ಚೆನ್ನಪ್ಪನಿಲ್ಲ,  ಖಾರದ ಕೂಟು ಆಗ್ಬೇಕಿಲ್ಲ.


ಒಂದು ಹಾಗಲಕಾಯಿ ಸಾಕು.   ವೃತ್ತಾಕಾರದಲ್ಲಿ ಹಾಗಲದ ಹೋಳುಗಳನ್ನು ಮಾಡಿಟ್ಟಿರಿ.   ಬೀಜಗಳನ್ನು ತೆಗೆಯುತ್ತಾ ಕತ್ತರಿಸಿಕೊಳ್ಳಿ.


ಒಂದು ಲೋಟ ನೀರು ಹಾಗೂ ಉಪ್ಪು ಹಾಕಿಟ್ಟು ಹಾಗಲ ಹೋಳುಗಳನ್ನು ಬೇಯಿಸಿ,  ಹಾಗಲ ಬೇನೆ ಬೇಯುವ ವಸ್ತು,  ಕುಕರ್ ಬೇಡ.   ಬೆಂದಿತೇ,  ನೀರು ಬಸಿಯಿರಿ,  ಹಾಗಲದ ಕಹಿ ನೀರು ಹೋಯಿತೆಂದು ತಿಳಿಯಿರಿ.


ಒಂದು ಕಡಿ ತೆಂಗಿನ ತುರಿ,  ಹಸಿ ತೆಂಗಿನಕಾಯಿ ಉತ್ತಮ.

2 ಹಸಿಮೆಣಸು.

ಒಂದು ಲೋಟ ದಪ್ಪ ಮಜ್ಜಿಗೆ.


ಮಜ್ಜಿಗೆಯೊಂದಿಗೆ ತೆಂಗಿನಕಾಯಿ, ಹಸಿಮೆಣಸು ಅರೆಯಿರಿ.  ಮಜ್ಜಿಗೆಹುಳಿಯೆಂಬ ವ್ಯಂಜನ ಸಾರಿನಂತೆ ತೆಳ್ಳಗಾಗಕೂಡದು.   ಆದುದರಿಂದಲೇ ತೆಂಗಿನಕಾಯಿ ಅರೆಯುವಾಗ ನೀರಿನ ಬದಲು ಮಜ್ಜಿಗೆ ಎರೆದರೆ ಉತ್ತಮ.   ಈಗ ಯಂತ್ರಗಳ ಯುಗ ಅಲ್ವೇ,  ಹಾಗೇ ಸುಮ್ಮನೆ ತೆಂಗಿನಕಾಯಿ ಅರೆದರೆ ನಮ್ಮ ಮಿಕ್ಸಿ ಬೆಣ್ಣೆಯಂತೆ ಅರೆದು ಕೊಡುವುದೂ ಇಲ್ಲ.


ಅರೆದ ಅರಪ್ಪನ್ನು ಹಾಗಲದ ಹೋಳುಗಳಿಗೆ ಕೂಡಿರಿ.

ರುಚಿಗೆ ಉಪ್ಪು,  ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿರಿ.

ಸೌಟಿನಲ್ಲಿ ಕಲಕಿ,  ನೀರು ಸಾಲದಿದ್ದರೆ ಅರ್ಧ ಲೋಟ ನೀರು ಎರೆಯಿರಿ.

ಮಂದ ಉರಿಯಲ್ಲಿ ಕುದಿಸಿ,  ಹಾಲು ಕುದಿಸುವಾಗ ಹೇಗೆ ಕೆನೆ ಮೇಲೆದ್ದು ಬರುವುದೋ,   ಅದೇ ಥರ ತೆಂಗು, ಮಜ್ಜಿಗೆಗಳ ಮಿಶ್ರಣ ಮೇಲೆದ್ದು ಬರುವಾಗ ಉರಿ ನಂದಿಸಿ.

ಕರಿಬೇವು,  ಒಣಮೆಣಸು,  ಸಾಸಿವೆ ಕೂಡಿದ ಒಗ್ಗರಣೆ ಬೀಳುವಲ್ಲಿಗೆ ಹಾಗಲಕಾಯಿ ಮಜ್ಜಿಗೆ ಹುಳಿ ಸಿದ್ಧವಾಗಿದೆ.


ಸೂಚನೆ:  ಸೌತೆ,  ತೊಂಡೆ,  ಕುಂಬಳದಂತಹ ತರಕಾರಿಗಳು ಮಜ್ಜಿಗೆಹುಳಿಯೆಂಬ ಪದಾರ್ಥ ತಯಾರಿಯಲ್ಲಿ ಹೆಸರು ಪಡೆದವುಗಳು.



                   

Saturday 20 September 2014

ಮೊದಲ ಹನಿ ಮಳೆ, ದೊರೆತ ಹೊಸ ಬೆಳೆ






" ಎಲ್ಲಿಂದಲೋ ಗಾಳಿಗೆ ಹಾರಿ ಬಂದ ಬಿತ್ತು ಬಿದ್ದು ಇಲ್ಲೊಂದು ಹರಿವೆ ಸಸಿ ಆಗಿದೆ ನೋಡಿದ್ದೀಯಾ "
" ಇಲ್ಲವಲ್ಲ.." ಅನ್ನುತ್ತಾ ಗೌರತ್ತೆಯ ಕರೆಗೆ ಓಗೊಟ್ಟು ನಾನೂ ಕಣ್ಣು ಹಾಯಿಸದಿದ್ದರಾದೀತೇ,   ಹಸಿರು ಬಣ್ಣದ ಹರಿವೇ ಗಿಡ ಒಂಟಿಯಾಗಿ ನಿಂತಿತ್ತು.
" ಇದು ಒಂದು ಗಿಡ ಸಾಕು,  ಎಷ್ಟು ಬೇಕಾದ್ರೂ ಹರಿವೆ ಕೊಯ್ಯಬಹುದು "
" ಮುಂದಿನ ವರ್ಷಕ್ಕಲ್ಲವೇ,  ಆಗಿನ ಕಥೆ ಹೇಗೋ "
" ಈ ವರ್ಷದ ಕಥೆ ನಾನು ಹೇಳಿದ್ದು,  ಇದು ಸ್ವಲ್ಪ ದೊಡ್ಡದಾಗಲಿ,  ದಂಟು ಕತ್ತರಿಸಿ ಸಾಸಮೆ ಮಾಡು,  ಕತ್ತರಿಸಿದ ಗಂಟು ಚಿಗುರ್ತದೆ ಗೊತ್ತಾ..  ಚಿಗುರಿದ ಹಾಗೇ ತೆಗೆದು ಅಡಿಗೆ ಮಾಡಿದ್ರಾಯ್ತು "
ವರ್ಷಗಳ ಹಿಂದೆ ನನ್ನ ಹಾಗೂ ಗೌರತ್ತೆ ನಡುವಿನ ಸಂಭಾಷಣೆ ಇದು.  

ಆ ಒಂದು ಗಿಡದಲ್ಲಿ ನಾನೇನೂ ಬೀಜಗಳನ್ನು ಆರಿಸಿ ಒಣಗಿಸಿ ತೆಗೆದಿಟ್ಟುಕೊಳ್ಳುವ ಗೋಜಿಗೇ ಹೋಗಿರಲಿಲ್ಲ.   ಎಲ್ಲಿಯೋ ತೆಗೆದಿಡೂದು,  ಮುಂದಿನ ಮಳೆಗಾಲದ ವಿರಾಮದ ವೇಳೆಯಲ್ಲಿ ತೆಗೆದಿರಿಸಿದ್ದೆಲ್ಲಿ ಎಂದು ನೆನಪಾಗದಿರುವುದು,  ಒಂದು ವೇಳೆ ಸಿಕ್ಕರೂ ಇರುವೆಗಳು ದ್ವಂಸ ಮಾಡಿಟ್ಟ ಖಾಲಿ ಕಟ್ಟು, ಹೀಗೆಲ್ಲ ಕಿರಿಕಿರಿಯೇ ಬೇಡವೆಂದು ಹರಿವೇ ಗಿಡವನ್ನು ಅದರ ಪಾಡಿಗಿರಲಿ ಅಂತಿದ್ರೆ....   ಮಳೆಗಾಲ ಆರಂಭ ಆಗ್ಬೇಕಾದ್ರೇ  " ಮೊದಲ ಹನಿ ಮಳೆ, ದೊರೆತ ಹೊಸ ಬೆಳೆ "  ಅನ್ನೋ ಹಾಗಾಯ್ತು.




" ಆಯ್ತೂ,  ಹರಿವೆ ಕೊಯ್ದಿದ್ದೀರಾ... ಏನಡಿಗೆ ಇವತ್ತು ?"
ಹರಿವೆ ದಂಟಿನ ಕೂಟು ಮಾಡೋಣ,  ಸೊಪ್ಪು ಪಲ್ಯಕ್ಕಿರಲಿ.
" ಕೂಟು ಹೇಗೇ ಮಾಡೂದು ?"

ದಂಟುಗಳನ್ನು ಕತ್ತರಿಸಿ ಇಟ್ಕೊಳ್ಳಿ.
ಹಲಸಿನ ಬೇಳೆಗಳೂ ಇರಲಿ.   ಜಜ್ಜಿಕೊಂಡರೆ ಉತ್ತಮ.
ಉಪ್ಪು ಕೂಡಿಸಿ ಬೇಯಿಸಿ.
ತೆಂಗಿನ ತುರಿ
2-3 ಒಣಮಣಸು, ಹುರಿದುಕೊಳ್ಳಿ,   ಕಾಯಿತುರಿಯೊಂದಿಗೆ ಅರೆಯಿರಿ.  ಅರೆಯುವಾಗ ಚಿಕ್ಕ ನೆಲ್ಲಿ ಗಾತ್ರದ ಹುಳಿ ಕೂಡಿಸಿಕೊಳ್ಳಿ.   ಕೊನೆಯಲ್ಲಿ ಹುರಿದ 2 ಚಮಚ ಕೊತ್ತಂಬ್ರಿ,  ಚಿಕ್ಕ ಚಮಚ ಮೆಂತೆ ಕೂಡಿಸಿ ಇನ್ನೆರಡು ಸುತ್ತು ತಿರುಗಿಸಿ ತೆಗೆಯಿರಿ.
ಬೆಂದ ತರಕಾರಿಗೆ ಅರೆದ ಮಸಾಲೆ ಹಾಗೂ ಅವಶ್ಯವಿದ್ದ ಹಾಗೆ ನೀರು ಎರೆದು,  ಉಪ್ಪು ಕೂಡಿಸಿ,  ಕುದಿಸಿ ಒಗ್ಗರಣೆ ಕೊಟ್ಟು ಬಿಡಿ.   

ಈ ಪಾಕ ವಿಧಾನ ಜಯಾ ಶೆಣೈ ಬರೆದಿರುವ  ' ಸುಲಭ ಅಡುಗೆ '  ಎಂಬ ಪಾಕ ಪುಸ್ತಕದಲ್ಲಿಯೂ ಇದೆ.   ಅವರು ಹರಿವೆ ದಂಟಿನ ಸಗ್ಳೆ ಎಂದು ಹೆಸರಿಸಿದ್ದಾರೆ.



ಸೊಪ್ಪಿನ ಪಲ್ಯ :  
 ಸೊಪ್ಪುಗಳು  ಶೀಘ್ರವಾಗಿ ಬೇಯುವಂತಹವು.   ಮೈಕ್ರೊವೇವ್ ಅವೆನ್ ಇದ್ದಲ್ಲಿ ಹಚ್ಚಿಟ್ಟುಕೊಂಡ ಸೊಪ್ಪುಗಳಿಗೆ ಒಗ್ಗರಣೆ, ಕಾಯಿತುರಿ,  ತುಸು ಉಪ್ಪು,  ಚಿಟಿಕೆ ಅರಸಿಣ ಬೆರೆಸಿ ಒಳಗಿಟ್ಟು ತೆಗೆದರಾಯಿತು.   ಸೊಪ್ಪು ತಾಜಾತನವನ್ನು ಕಳೆದುಕೊಳ್ಳುವುದಿಲ್ಲ,  ನೀರು ಹಾಕೂದೂ ಬೇಡ.   ಮೈಕ್ರೊವೇವ್ ಅವೆನ್ ಇಲ್ಲದಿದ್ದವರು ಮಾಮೂಲಿಯಾಗಿ ಮಾಡಿ ಬಿಡಿ. ತೋರನ್ ( തോരാൻ ) ಎಂಬ ಹೆಸರಿನಲ್ಲಿ ಈ ಪಲ್ಯ  ಕೇರಳದ ಸಾಂಪ್ರದಾಯಿಕ ಖಾದ್ಯಗಳಲ್ಲೊಂದಾಗಿದೆ.  ' ಓಣಂ ಸದ್ಯ '  (ಓಣಂ ಹಬ್ಬದೂಟ ) ದಲ್ಲಿ ಇಂತಹ ಪಲ್ಯ ಬಾಳೆಯ ಮೇಲೆ ಇರಲೇಬೇಕು.  



ಮಜ್ಜಿಗೆ ಹುಳಿ:
ಕೋಮಲವಾದ ದಂಟುಗಳನ್ನು, ಎಲೆಗಳನ್ನು ಉಪ್ಪು ಹಾಕಿ ಬೇಯಿಸಿ.  
ಒಂದು ಹಿಡಿ ತೊಗರಿಬೇಳೆಯನ್ನೂ ಬೇಯಿಸಿಡಿ.
ಒಂದು ಕಡಿ ತೆಂಗಿನ ತುರಿಯನ್ನು ಹಸಿಮೆಣಸಿನೊಂದಿಗೆ ನುಣ್ಣಗೆ ಅರೆಯಿರಿ. 
ಬೆಂದ ಬೇಳೆ ಹಾಗೂ ಹರಿವೆಯನ್ನು ಒಲೆಯ ಮೇಲೆ ಇರಿಸಿ ಒಂದು ದೊಡ್ಡ ಸೌಟು ಸಿಹಿ ಮಜ್ಜಿಗೆ ಎರೆದು ಬಿಡಿ.
ಅರೆದಿಟ್ಟ ತೆಂಗಿನ ಕಾಯಿ ಕೂಡಿಸಿ.   ಸಿಹಿ ಬೇಕಿದ್ದರೆ ಚಿಕ್ಕ ತುಂಡು ಬೆಲ್ಲ ಹಾಕಬಹುದು.  ಕುದಿಸಿ,  ಒಗ್ಗರಣೆ ಕೊಡಿ.



ಪಚ್ಚೆ ಹರಿವೆ,  green amaranth,  ಸಸ್ಯಶಾಸ್ತ್ರೀಯವಾಗಿ Amaranthus viridis ಎಂದು ಕರೆಯಲ್ಪಡುವ ಈ ಸೊಪ್ಪು ತರಕಾರಿ  Amaranthaceae ಕುಟುಂಬವಾಸಿ.  ಪ್ರಾಚೀನ ಕಾಲದಿಂದಲೇ ಇದು ದಕ್ಷಿಣ ಭಾರತೀಯರ ಖಾದ್ಯ ತರಕಾರಿಗಳಲ್ಲಿ ಒಂದಾಗಿದೆ.  ಆಯುರ್ವೇದವೂ ಈ ಪಚ್ಚೆ ಹರಿವೆಯನ್ನು ಔಷಧೀಯ ಸಸ್ಯವಾಗಿ ಸ್ವೀಕರಿಸಿದೆ,  ಸಂಸ್ಕೃತದಲ್ಲಿ ತಣ್ಡುಲೀಯ ಎಂಬ ನಾಮಕರಣವೂ ಇದಕ್ಕೆ ಇದೆ.  ಕೇರಳೀಯರು ಕುಪ್ಪಚ್ಚೀರ (കുപ്പച്ചീര) ಅಂದಿದ್ದಾರೆ.   ಪಚ್ಚೆ ಹರಿವೆಯು ಉತ್ತಮ ಪೋಷಕಾಂಶಗಳಿಂದ ಕೂಡಿದ ಸೊಪ್ಪು ತರಕಾರಿ ಎಂಬುದಕ್ಕೆ ಅನುಮಾನಕ್ಕೆಡೆಯಿಲ್ಲ. ವಿಟಮಿನ್ ಮಾತ್ರೆಗಳನ್ನು ದೂರ ತಳ್ಳಿ,  ಅಡುಗೆಯಲ್ಲಿ ಸೊಪ್ಪು ತರಕಾರಿಗಳನ್ನು ಧಾರಾಳವಾಗಿ ಬಳಸಿರಿ,  ವಿಟಮಿನ್ ಸಮೃದ್ಧವಾಗಿರುವ,  ಖನಿಜಾಂಶಗಳು ತುಂಬಿರುವ ತಾಜಾ ಸೊಪ್ಪುಗಳ ಬಳಕೆಯಿಂದ ಆರೋಗ್ಯವನ್ನೂ ಉಳಿಸಿಕೊಳ್ಳಿ,  

 ಬಣ್ಣಬಣ್ಣಗಳಲ್ಲಿ ಕಂಗೊಳಿಸುವ ಹರಿವೆಯಲ್ಲಿ ಜಾತಿಗಳು ಹೇರಳವಾಗಿವೆ.   ಗದ್ದೆಯಲ್ಲಿ ತರಕಾರಿ ವ್ಯವಸಾಯ ಮಾಡುವಾಗ ಬಣ್ಣದ ಹರಿವೆಗಳನ್ನೂ ನೆಟ್ಟುಕೊಳ್ಳುವ ವಾಡಿಕೆಯಿದೆ.  ಇದಕ್ಕೆ ವಿಶೇಷ ಪೋಷಣೆಯೇನೂ ಬೇಡ.   ತರಕಾರಿ ಗಿಡ ಬಳ್ಳಿಗಳಲ್ಲಿ ಫಲ ದೊರೆಯುವ ಮೊದಲೇ ಹರಿವೆ ಸೊಪ್ಪು ಅಡುಗೆಮನೆಗೆ ಬಂದಿರುತ್ತದೆ.   ಮನೆಯಂಗಳದ ಕೈದೋಟದೊಳಗೆ ಹರಿವೆ ಗಿಡಗಳು ಸೊಗಸಿನ ನೋಟವನ್ನೂ ಕೊಡುತ್ತವೆ.  ಬಿಳಿ ದಂಟು,  ಕೆಂಪು ದಂಟು ಇತ್ಯಾದಿಯಲ್ಲದೆ ಎಲೆಗಳೂ ತರಹೇವಾರಿ ವರ್ಣಗಳಲ್ಲಿ ಚೇತೋಹಾರಿಯಾಗಿರುತ್ತವೆ.   

ಒಂದು ಹರಿವೆ ಗಿಡದಲ್ಲಿ ಹೂವರಳಿದ ನಂತರ ಅಸಂಖ್ಯ ಬೀಜಗಳು ಲಭ್ಯ.   ಒಣಗಿದ ಕಾಂಡಗಳನ್ನು ಕತ್ತರಿಸಿ ಪೇಪರುಗಳ ಮೇಲೆ ಹರಡಿ ಒಣಗಿಸಿ ಬೀಜಗಳನ್ನು ಬೇರ್ಪಡಿಸಿ  ಸಂಗ್ರಹ ಮಾಡಿಟ್ಟು  ತೇವಾಂಶ ಇರುವಲ್ಲಿ ಹಾಕಿ ಬಿಡಬೇಕು.  ಪುನಃ ಸಸಿಗಳು ಮೊಳಕೆಯೊಡುತ್ತವೆ.  ಮುಂದಿನ ಮಳೆಗಾಲಕ್ಕೆ ಕಾಪಿಟ್ಟುಕೊಳ್ಳಲೂ ಬಹುದು.


Posted via DraftCraft app

Saturday 13 September 2014

ನಮ್ಮ ಬಸಳೆ - ನಮ್ಮ ಬೇಳೆ








" ಚಪ್ಪರದ ಬಸಳೆ ಬಂತು ನೋಡು "  ಅಂದರು ಗೌರತ್ತೆ.

" ಯಥಾಪ್ರಕಾರ ಬಸಳೆ ಬೆಂದಿ..."

"ಯವಾಗಲೂ ಒಂದೇ ಕ್ರಮದ ಅಡಿಗೆ ಏನೂ ಚೆನ್ನಾಗಿರಲ್ಲ,  ಹಲಸಿನ ಬೇಳೆ ಉಂಟಲ್ಲ..."

" ಬೇಳೆ ಹಾಕಿ ಬಸಳೆ ಬೆಂದಿಯಾ... ಚೆನ್ನಾಗಿರ್ತದ ?  ಹೀಗೂ ಮಾಡ್ತಾರೇಂತ ನನಗ್ಗೊತ್ತಿಲ್ಲ "  ಅಂದೆ.

" ಪುಸ್ತಕದ ಬದ್ನೇಕಾಯಿ ನೋಡಿ ಅಡಿಗೆ ಮಾಡೂದಲ್ಲ...  ಈಗ ಒಂದ್ಹತ್ತು ಬೇಳೆ ಸುಲಿದು ..."

ಗೌರತ್ತೆ ಹಲಸಿನ ಬೇಳೆ ಸುಲಿದು ಕಟ್ ಕಟ್ ಮಾಡಿ ತರುವಷ್ಟರಲ್ಲಿ ನನ್ನದು ಕೊತ್ತಂಬ್ರಿ,  ಒಣಮೆಣಸು ಇತ್ಯಾದಿಗಳನ್ನು ಹುರಿದ ಮಸಾಲೆ ತೆಂಗಿನತುರಿಯೊಂದಿಗೆ ಅರೆದ ಅರಪ್ಪು ಸಿದ್ಧವಾಗಿತ್ತು.

" ಬೇಳೆ ಬಸಳೆ ಒಟ್ಟಿಗೆ ಬೇಯಿಸಿ ಬಿಡೂದಾ ಹೇಗೆ ?"

" ಒಟ್ಟಿಗೇ ಬೇಯಿಸು "

" ಬಸಳೆ ಬೇಯುವಷ್ಟರಲ್ಲಿ ಈ ಬೇಳೆ ಮುದ್ದೆಯಾದೀತಾ..."

" ಹಾಗೇನೂ ಇಲ್ಲ "  ಗೌರತ್ತೆ ಧೈರ್ಯ ನೀಡುತ್ತ  " ಹಲಸಿನ ಬೇಳೆ ಬೇಯುವುದು ನಿಧಾನ "  ಅಂದರು.

ಗೌರತ್ತೆಯ ಸಲಹೆಯಂತೆ ಬೆಳ್ಳುಳ್ಳಿ ಒಗ್ಗರಣೆಯೂ, ರುಚಿಕರವಾಗಲು ಬೇಕಾದ ಉಪ್ಪು ಹುಳಿಗಳೊಂದಿಗೆ ಹೀಗೊಂದು ಬಸಳೆ ಬೆಂದಿ ಕ್ರಮ ಪ್ರಕಾರವಾಗಿ ಒಲೆಯಲ್ಲಿ ಬೆಂದು ತಯಾರಾಯಿತು.   ಸಿಹಿ ಇಷ್ಟಪಡುವವರಿಗೆ ಬೆಲ್ಲ ಹಾಕಿದರಾಯಿತು.

ಈಗ ಬಸಳೆ ಪಲ್ಯ ಮಾಡೋಣ.   ಸೊಪ್ಪಿನ ಪಲ್ಯಗಳನ್ನು ಖಾರ ಮಾಡಲಿಕ್ಕಿಲ್ಲ.   ವಿಟಮಿನ್ ಎ ಅನ್ನಾಂಗ ಧಾರಾಳವಾಗಿರುವ ಸೊಪ್ಪು ಅನ್ನದೊಂದಿಗೆ ಕಲಸಿ ತಿನ್ನಲು ಚೆನ್ನಾಗಿರುವುದು.
ಒಂದು ಬಟ್ಟಲು ತುಂಬ ಸೊಪ್ಪು ಕತ್ತರಿಸಿಡುವುದು,
ಒಂದು ದೊಡ್ಡ ನೀರುಳ್ಳಿ,  ಇದನ್ನೂ ಚಿಕ್ಕದಾಗಿ ತುಂಡು ಮಾಡುವುದು,
ಬಾಣಲೆಯಲ್ಲಿ ಒಗ್ಗರಣೆಗಿಡುವುದು,  
ಚಟಪಟ ಸದ್ದು ನಿಂತಾಗ ಚಿಟಿಕೆ ಅರಸಿಣ ಹಾಕುವುದು,
ನೀರುಳ್ಳಿ ಬಾಣಲೆಗೆ ಬೀಳುವುದು,
ತಟಪಟ ಸೌಟಾಡಿಸಿದಾಗ ನೀರುಳ್ಳಿ ಬಾಡುವುದು,
ಬಸಳೆ ಸೊಪ್ಪು ಬಾಣಲೆಗೆ ಇಳಿಯುವುದು,
ಉಂಟೇ, ಉಪ್ಪು ಹಾಕಲು ಮರೆಯುವುದು,
ಇನ್ನೊಮ್ಮೆ ತಟಪಟ ಸೌಟಾಡಿಸಿ ಮುಚ್ಚಿ ಮಂದಾಗ್ನಿಯಲ್ಲಿ ಬೇಯಿಸುವುದು,
ಕೊನೆಯಲ್ಲಿ ಕಾಯಿತುರಿ ಹಾಕಲು ಸೊಗಸಿನ ನೋಟ ಬರುವುದು.





Basella alba ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿದೆ ನಮ್ಮ ಬಸಳೆ,  malabar spinach,  Ceylon spinach ಅಂತಾನೂ ಹೇಳ್ತಾರೆ.  ಆಂಗ್ಲ ಭಾಷೆಯಲ್ಲಿ vine spinach ಎಂದು ಹೇಳಲ್ಪಡುವ ಬಸಳೆ, Basellaceae ಕುಟಂಬವಾಸಿ.   ಇದರಲ್ಲಿ ಹಸಿರು ಹಾಗೂ ನಸುಕೆಂಪು ಬಣ್ಣದ ದಂಟು ಹೊಂದಿರುವ ಜಾತಿಗಳಿವೆ.   ಕೆಂಪು ದಂಟಿನ ಬಸಳೆ ಅಷ್ಟೇನೂ ಸ್ವಾದಿಷ್ಟವಲ್ಲ.   ಇದು ಕೂಡಾ ಭಾರತ ಮೂಲದ ಬಳ್ಳಿ ತರಕಾರಿ,   ಸಾಮಾನ್ಯವಾಗಿ ಮನೆ ಹಿತ್ತಿಲಲ್ಲಿ ನೀರು ಸರಾಗವಾಗಿ ಹರಿದು ಬೀಳುವಂತಹ ಸ್ಥಳದಲ್ಲಿ ಚಪ್ಪರ ಹೊಂದಿಸಿ ನೆಟ್ಟುಕೊಳ್ಳುತ್ತಾರೆ.   

 ಮಡಿವಂತರು ತಿನ್ನಲಾಗದ ಬಸಳೆ,  ಹಿಂದಿನ ತಲೆಮಾರಿನ ಸಂಪ್ರದಾಯಸ್ಥರಲ್ಲಿ ಬಸಳೆ ನಿಷಿದ್ಧ ಸೊಪ್ಪು ಆಗಿರಲು ಕಾರಣವೇನೋ ತಿಳಿಯದು.  ಬಹುಶಃ ನೀರುಳ್ಳಿ,  ಬೆಳ್ಳುಳ್ಳಿಗಳು ಬಸಳೆಯ ಅಡುಗೆಯಲ್ಲಿ ಬೆರೆತು ಹೋಗಿರುವುದೂ ಕಾರಣವಾಗಿರಬಹುದು.   ಅದೇನೇ ಇರಲಿ ಪೌಷ್ಟಿಕಾಂಶಗಳ ಆಗರವಾಗಿದೆ ಬಸಳೆ.

 ದಂಟಿನಲ್ಲಿ ನಾರು ಅಧಿಕವಿದೆ,  ಮಲಬದ್ಧತೆ ನಿವಾರಕ ಆಹಾರವಾಗಿದೆ.
 ಖನಿಜಾಂಶಗಳು ಅಧಿಕವಾಗಿವೆ,   ನಿಯಮಿತ ಸೇವನೆಯಿಂದ ಧೃಡಕಾಯರಾಗಲು ಸಾಧ್ಯ.
ವಿಟಮಿನ್ ಬಿ ಕಾಂಪ್ಲಕ್ಸ್ ನಿಂದ ಸಮೃದ್ಧವಾಗಿದೆ,  ಬಸುರಿ ಸ್ತ್ರೀಯರ ಆಹಾರದಲ್ಲಿ ಇರಲೇಬೇಕಾದ ತರಕಾರಿ.
ಕೆಂಪು ರಕ್ತಕಣಗಳ ಪೂರೈಕೆ,  ಕಬ್ಬಿಣದ ಧಾತು ಬಸಳೆಯಲ್ಲಿದೆ.
ಅತ್ಯುತ್ತಮ ಆಂಟಿ ಓಕ್ಸಿಡೆಂಟ್,  ರೋಗ ಪ್ರತಿಬಂಧಕವಾಗಿ ವಿಟಮಿನ್ ಸಿ ಇಲ್ಲಿದೆ.
ಇಲ್ಲಿರುವ ವಿಟಮಿನ್ ಎ,  ಕಣ್ಣುಗಳ ಆರೋಗ್ಯ ಹಾಗೂ ಚರ್ಮದ ಕಾಂತಿರಕ್ಷಕ.
ಎಳೆಯ ಶಿಶುವಿನಿಂದ ವೃದ್ಧರವರೆಗೆ ಬಸಳೆ ಆಹಾರದಲ್ಲಿರಲಿ.

Posted via DraftCraft app

Saturday 6 September 2014

ಹಕ್ಕೀ ಪಾಡು




ಬೆಳಗಾಗಿತ್ತು,  ಪಾತ್ರೆಗಳನ್ನು ಬೆಳಗಿ ಒಳಗೆ ತರ್ತಾ ಇದ್ದೆ,   ಪುರ್ರೆಂದು ಪುಟಾಣಿ ಹಕ್ಕಿಯೊಂದು ಹಾರಿ ನನಗಿಂತ ಮುಂಚಿತವಾಗಿ ಒಳಗೆ ನುಗ್ಗಿತು.   ಕೂಡಲೇ ನನ್ನ ಪ್ರಜ್ಞೆ ಎಚ್ಚರವಾಗಿ ಮಗಳಿಗೆ ಕೂಗಿ ಹೇಳಿದ್ದು  " ಬೇಗ ಬಾರೇ,  ಹಕ್ಕೀದು ಫೊಟೋ ತೆಗೀ ...."

ಹಕ್ಕಿ ಒಳಗೆ ಹಾರಿ ಬಂದಿದ್ದೇನೋ ಆಯಿತು,   ಚಾವಡಿಯ ಬಾಗಿಲು ತೆರೆದಿರಲಿಲ್ಲ,   ಕಿಟಿಕಿ ಬಾಗಿಲು ಕೂಡಾ ಮುಚ್ಚಿಯೇ ಇದ್ದಿತು.  ಹಕ್ಕಿ ಹೊರ ಹೋಗಲಾರದೆ ಕಿಟಿಕಿಯ ಸಂದುಗಳಲ್ಲಿ ರೆಕ್ಕೆ ತೂರಿಸಿ ಒದ್ದಾಡಿ ಹೊರ ಹೋಗಲು ಪ್ರಯತ್ನ ಪಡುವ ಸಾಹಸ ನೋಡಿದಾಗ ಅಪ್ರಯತ್ನವಾಗಿ ಕವನವೊಂದು ಹುಟ್ಟಿತು. 

ಮಗಳೇನೋ ಹಲವಾರು ಚಿತ್ರಗಳನ್ನು ತೆಗೆದಿಟ್ಟಿದ್ದಳು.   ಮನೆಯ ಒಳಗಲ್ವೇ,  ಮಸುಕು ಮಸುಕಾದ ಚಿತ್ರಗಳು.   " ಇದೇನೇ ಹೀಗೆ ಬಂತೂ ...?"
" ಹಕ್ಕಿ ಹಿಂದೆ ಓಡಿ ಫೊಟೋ ತೆಗೆಯುವುದು ಎಂಥದು,  ಬಾಳೆಹಣ್ಣಿನ ಫೊಟೋ ತೆಗೆದ ಹಾಗಾ ..."  ದಬಾಯಿಸಿದಳು ಮಗಳು. 
ಇರಲಿ ಅಂದ್ಬಿಟ್ಟು ಆ ಕ್ಷಣದಲ್ಲಿ ಮೂಡಿದ ಭಾವಗಳನ್ನು ಅಕ್ಷರದಲ್ಲಿ ಸೆರೆ ಹಿಡಿದು ಸುಮ್ಮನಾಗಿರಬೇಕಾಯಿತು.





ಎಂದಿನಂತೆ ಮಳೆಗಾಲ ಬಂದಿತು.   ಅಂಗಳದ ತುಂಬಾ ಏನೇನೂ ಹುಲ್ಲು ಕಳೆ.   ಅಲ್ಲೊಂದು ಕಮಾನು ಬಳ್ಳಿ ಮೇಲೇಳುತ್ತಾ ಇದೆ,   " ಇದನ್ನು ಕಿಟಿಕಿ ಬಾಗಿಲಿಗೆ ಹಬ್ಬಿಸೋಣ "  ಅಂದ್ಕೊಂಡು ಬಳ್ಳಿಗೊಂದು ಆಸರೆ ನೀಡಿ....  ಕೆಲವೇ ದಿನಗಳಲ್ಲಿ ಕಮಾನು ಬಳ್ಳಿ ಹರಡಿ ಹಬ್ಬಿ ಚೆಲುವಿನ ಚಿತ್ತಾರ ಮೂಡಿಸಿತು.


 



ಈಗ ನೆನಪಾಯಿತು,  ಎಂದೋ ಬರೆದಿದ್ದ ಹಕ್ಕಿ ಹಾಡು.   " ಒಂದೆರಡು ಹೂವರಳಲಿ "  ಇನ್ನೊಂದು ಫೊಟೋ ತೆಗೆದು ಹಕ್ಕಿಯನ್ನು ಎಲ್ಲಿಂದಾದರೂ ತಂದು ಕೂರಿಸುವ ಪ್ರಯತ್ನ ಮಾಡೋಣ ಅಂತ ನಾನಿದ್ದೆ.   ಅದೇನಾಯ್ತೋ,  ಅಂಗಳದ ಕಳೆಸಸ್ಯಗಳಿಗೆ ಕತ್ತೀ ಪ್ರಹಾರ ಆಗಾಗ್ಗೆ ನಡೆಸುತ್ತಿರುತ್ತಾರೆ ನಮ್ಮೆಜಮಾನ್ರು,  ಕತ್ತಿ ಅಲಗು ತಟ್ಟಿತೋ,  ಹಬ್ಬಿದ ಲತೆ ಬಾಡಲು ತೊಡಗಿತು.
" ಛೇ,  ಇದೇನಾಯಿತು..."   ಚಿಂತಿಲ್ಲ,  ಹೂ ಬೇರೆಡೆಯಿಂದ ತಂದು ಜೋಡಿಸೋಣ.   ಅಂತೂ ಅರಳಿದ ಕಮಾನು ಬಳ್ಳಿಯ ಹೂಗಳು ದೊರೆತು ಹೊಸತೊಂದು ಫೊಟೋ ಇಮೇಜ್ ಸೃಷ್ಟಿಯಾಯಿತು.   ಜೊತೆಗೊಂದು ಹಕ್ಕಿಯೂ ಬಂದು ಕುಳಿತಿತು.   ಇನ್ನು ಓದಿರಲ್ಲ ನನ್ನ ಕವನ....




Cypress Vine ಎಂಬ ಹೆಸರಿನ ಈ ಅಲಂಕಾರಿಕ ಲತೆ ಅಮೇರಿಕಾದಿಂದ ಬಂದಿರುವಂತಾದ್ದು.   Morning glory,   Star Glory, hummingbird vine ಇತ್ಯಾದಿಯಾಗಿ ಕರೆಯಲ್ಪಡುವ ಈ ಕಮಾನುಬಳ್ಳಿ ಸಸ್ಯಶಾಸ್ತ್ರೀಯವಾಗಿ Ipomoea quamoclit ಹೆಸರನ್ನು ಹೊಂದಿದೆ.  ಕೇರಳೀಯರು ಇದನ್ನು ಆಕಾಶ ಮುಲ್ಲ (ആകാശ മുല്ല, ಆಕಾಶಮಲ್ಲಿಗೆ )  ಅಂದಿದ್ದಾರೆ. ನಕ್ಷತ್ರ ಮಲ್ಲಿಗೆ ಅಂತಾನೂ ಹೇಳ್ತಾರೆ.  ಆದ್ರೂನೂ ನಮ್ಮ ನೆರೆಯ ರವೀಂದ್ರನ್  " ಇದು ಕಾಕ್ಕ ಪೂ ಅಕ್ಕ "  ಅಂದ್ಬಿಟ್ಟ.   ಒಟ್ಟಿನಲ್ಲಿ ಕಾಗೆಯೂ ಹಕ್ಕಿಯಲ್ವೇ,  ಇರಲಿ ನೂರಾರು ಹೆಸರುಗಳು.

ಹೇರಳವಾಗಿ ಹೂವರಳುವ ಈ ಲತೆಯ ಪುನರುತ್ಪಾದನೆ ಬೀಜಗಳಿಂದ.   ಹೊಯಿಗೆ ಮಿಶ್ರಿತ ಹಾಗೂ ತೇವಾಂಶ ಉಳಿಯುವಂತಹ ಮಣ್ಣು ಅವಶ್ಯಕ.   ಚೆನ್ನಾಗಿ ಬಿಸಿಲೂ ಇರುವಲ್ಲಿ ಮಾತ್ರ ಬೆಳವಣಿಗೆ ಕಾಣಲು ಸಾಧ್ಯ.   ಹಕ್ಕಿಯ ಗರಿಗಳಂತಹ ಎಲೆಗಳೂ ಆಕರ್ಷಕ.  ಬಿಳಿ,  ಕೆಂಪು ಹಾಗೂ ನಸುಗೆಂಪು ಬಣ್ಣದಲ್ಲಿ ಹೂವುಗಳ ವೈವಿಧ್ಯತೆಯೂ ಇದೆ.   ಬಳ್ಳಿಗಳು ಹಬ್ಬಲು ಆಸರೆಯೂ ಇದ್ದರೆ ಮಾತ್ರ ಸೊಗಸು.   ಹಕ್ಕಿಗಳೂ, ಚಿಟ್ಟೆಗಳೂ ಸ್ವಾಭಾವಿಕವಾಗಿ ಇದರ ಬಳಿ ಸುಳಿದಾಡುತ್ತಿರುತ್ತವೆ,  ಹಾಗೆಂದೇ ಇದಕ್ಕೆ ಹಮ್ಮಿಂಗ್ ಬರ್ಡ್ ವೈನ್ ಎಂದು ಹೆಸರು ಬಂದಿದೆ.   ಮೋಹಕವಾದ ಈ ಲತೆಯ ಹೂ, ಎಲೆ, ಬೀಜಗಳು ನಂಜಿನಿದ ಕೂಡಿದೆ,  ವಿಷಯುಕ್ತ.


Posted via DraftCraft app

ಟಿಪ್ಪಣಿ:  23/11/2015 ರಂದು ವಿಸ್ತರಿಸಿ ಬರೆದಿದ್ದು.

ಈ ಬಾರಿ ನಾನು ಕಮಾನು ಬಳ್ಳಿಯ ಸುದ್ದಿಗೇ ಹೋಗಿರಲಿಲ್ಲ.   ಮೊನ್ನೆ ಅಂಗಳದಲ್ಲಿ ಅಡ್ಡಾಡುತ್ತಿದ್ದಾಗ ಕಮಾನು ಬಳ್ಳಿ ತುಳಸಿಯ ಗಿಡಗಳ ಸಾಲಿನೆಡೆಯಲ್ಲಿ ತೆವಳುತ್ತಾ ಮುಂದುವರಿಯುತ್ತಿದೆ!  ಇರಲಿ,  ಹೂವರಳಿದಾಗ ನೋಟಕ್ಕೆ ಚೆನ್ನ ಅಲ್ವೇ ?   

ಇವತ್ತು ತುಳಸೀಪೂಜೆಯೂ ಬಂದಿದೇ,   ತುಳಸೀಗಿಡವಂತೂ  " ನನಗಿಂತ ಚೆಲುವೆ ಯಾರಿಹಳು " ಎಂಬಂತೆ ಬಿಂಕದ ಸಿಂಗಾರಿಯಾಗಿಹಳು.   ನಿಸರ್ಗದತ್ತ ಶೃಂಗಾರ ನೋಟ ಬ್ಲಾಗ್ ಓದುಗರಿಗಾಗಿ....



     



ಟಿಪ್ಪಣಿ:  29/1/2016  ...ಮುಂದುವರಿದಿದೆ.

ಯಾವ ಹಕ್ಕಿಗಾಗಿ ನಾನು ಇಷ್ಟೆಲ್ಲ ಪಾಡು ಪಟ್ಟಿದ್ದೆನೋ,  ಅದೇ ಹಕ್ಕಿ ಈವತ್ತು ನಮ್ಮೆಜಮಾನ್ರ ಕೆಮರಾದಲ್ಲಿ ಬಂಧಿಯಾಯಿತು.

ಮನೆಯಿಂದ ಕೆಳಗಿಳಿದು ಬರುವಲ್ಲಿ ಗೋಡೆಗೆ ತಾಕಿದಂತೆ ಒಂದು ಅಲಂಕಾರಿಕ ಗಿಡ ಇದೆ.   ಮೊದಲೆಲ್ಲ ಮಳೆಗಾಲದಲ್ಲಿ ಗೆಲ್ಲು ಕತ್ತರಿಸಿ ಬಿಡ್ತಾ ಇದ್ದೆವು.   " ಗಿಡದೊಳಗೆ ಹಕ್ಕೀ ಗೂಡು ಇದೆ " ಎಂದು ಚೆನ್ನಪ್ಪ ಯಾವಾಗ ತೋರಿಸಿದನೋ,  ಆ ನಂತರ ನಮ್ಮವರು ಆ ಗಿಡದ ತಂಟೆಗೆ ಹೋಗುವುದನ್ನೇ ಬಿಟ್ಟಿದ್ದಾರೆ.

ಈ ದಿನ ಮುಂಜಾನೆಯ ತಿಂಡಿ ತಿಂದು ಹೊರಗೆ ಬಂದಾಗ ಹಕ್ಕಿ ಆರಾಮವಾಗಿ ಗಿಡದ ಮೇಲೆ ಕೂತಿದೆ!  ಬಹುಶಃ  ಗೂಡಿನಲ್ಲಿ ಮೊಟ್ಟೆಯಿದ್ದಿರಬೇಕು,  ಹಾರಿ ಹೋಗದೇ ಸುಮ್ಮನಿದ್ದ ಹಕ್ಕಿಯನ್ನು ಕೆಮರಾದಲ್ಲಿ ಹಿಡಿದಿರಿಸಲು ಇದೇ ಸುವರ್ಣಾವಕಾಶ ಅಂದುಕೊಳ್ಳುತ್ತ ಐಫೋನ್ ಹಾಗೂ ಐಪಾಡ್ ಗಳೆರಡರಲ್ಲೂ ಫೊಟೋ ಸೆರೆ ಹಿಡಿದರು.

" ಓ,  ಹಿಂಬಾಗಿಲಿನಿಂದಲೂ ತೂರಿ ಬಂದ ಹಕ್ಕಿ ಇದೇನಾ? " ನಾನೂ ಅಚ್ಚರಿ ಪಟ್ಟೆ.