Pages

Ads 468x60px

Thursday, 5 March 2026

ಕಬ್ಬಿನ ಹಾಲಿನ ದೋಸೆ

 


ಕಬ್ಬಿನ ಹಾಲು ತಂದಿದೆ,  ಕುಡಿದಾಯ್ತು.  ಇನ್ನೂ ಇದೆ, ನಾಳೆಗೊಂದು ತಿಂಡಿ ಮಾಡಲು ಸಾಧ್ಯವೇ ಎಂಬ ಗಹನ ಚಿಂತನೆಯಿಂದ ಈ ದೋಸೆ ಮೇಲೆದ್ದಿದೆ.


ಒಂದು ದೊಡ್ಡ ಲೋಟ ಕಬ್ಬಿನ ಹಾಲು ಉಳಿದಿದೆ.

ಒಂದು ಲೋಟ ಬೆಳ್ತಿಗೆ ಅಕ್ಕಿ ನೆನೆಯಿತು,  ನೀರಿನಲ್ಲಿ ಕಣ್ರೀ..

ಅರ್ಧ ಲೋಟ ಕಾಯಿತುರಿ,

ಡಬ್ಬದಿಂದ ದಪ್ಪ ಅವಲಕ್ಕಿ ಹೊರ ಬಂದಿತು. ಎಷ್ಟೂ?

ಕೇವಲ 2 ಚಮಚದಷ್ಟು ಸಾಕು.  ಇದನ್ನೂ ತೊಳೆದು ನೀರೆರೆದು ಇಡತಕ್ಕದ್ದು.


ಎಲ್ಲವನ್ನೂ ನುಣ್ಣಗೆ ಅರೆಯಿರಿ. ನೀರಿನ ಬದಲು ಕಬ್ಬಿನಹಾಲನ್ನೇ ಎರೆದು ಅರೆಯತಕ್ಕದ್ದು,  ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ಬಂದಿತೇ,  ಹಿಟ್ಟು ಗಟ್ಟಿಯಿದ್ದರೆ ಉಳಿದ ಕಬ್ಬಿನ ಹಾಲು ಸೇರಿಸಿ ಹದ ಮಾಡಿಕೊಳ್ಳಿ. 

ರುಚಿಗೆ ತಕ್ಕಷ್ಟು ಉಪ್ಪು ಕೂಡಿಸಿ,  ಮುಚ್ಚಿಟ್ಟು,  ನಾಳೆ ಮುಂಜಾನೆಯ ತನಕ ಹಿಟ್ಟು ವಿಶ್ರಾಂತಿ ಪಡೆಯಲಿ.


ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ದೋಸೆಯಂತೆ ಹುಯ್ಯಿರಿ. ಇದನ್ನು ಪೇಪರ್ ದೋಸೆಯಂತೆ ಅತಿ ತೆಳುವಾಗಿ ಹರಡುವುದು ಬೇಡ, ಸೆಟ್ ದೋಸೆಯಂತೆ ಸ್ವಲ್ಪ ದಪ್ಪಗಿರಲಿ.  ಸುತ್ತಲೂ ಸ್ವಲ್ಪ ತುಪ್ಪ ಬಿಟ್ಟು, ಮುಚ್ಚಳ ಮುಚ್ಚಿ ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಬೇಯಿಸಿ.  ಇದರಲ್ಲಿ ನೈಸರ್ಗಿಕ ಸಿಹಿ ಇರುವುದರಿಂದ ತಳ ಬೇಗ ಸೀದುಹೋಗುವ ಸಾಧ್ಯತೆ ಇರುತ್ತದೆ, ಹಾಗಾಗಿ ಉರಿ ಸಣ್ಣದಿರಲಿ.

ಒಂದು ಬದಿ ಚೆನ್ನಾಗಿ ಬೆಂದ ಮೇಲೆ, ತಿರುವಿ ಹಾಕಿ ಇನ್ನೊಂದು ಬದಿಯನ್ನೂ ಬೇಯಿಸಿ.  ಬಿಸಿ ಬಿಸಿಯಾದ, ಘಮಘಮಿಸುವ ಕಬ್ಬಿನ ಹಾಲಿನ ಸಿಹಿ ದೋಸೆಯನ್ನು ಸ್ವಲ್ಪ ಬೆಣ್ಣೆ ಅಥವಾ ತುಪ್ಪದೊಡನೆ ತಿನ್ನುವ ಆನಂದ ನಮ್ಮದು.


ಒಂದು ಲೋಟ ಕಬ್ಬಿನ ಹಾಲು ದೋಸೆಗೆ ಹಿತವಾದ ಸಿಹಿಯನ್ನು ಮಾತ್ರ ಕೊಟ್ಟಿದೆ,  ದೋಸೆ ಹಿಟ್ಟಿಗೆ ತೆಂಗಿನ ತುರಿ ಮತ್ತು ಅವಲಕ್ಕಿ ಸೇರಿಸುವುದೇ ಒಂದು ಮ್ಯಾಜಿಕ್!  ಇದರಿಂದಲೇ ದೋಸೆ ಮೃದುವಾಗಿ ಮತ್ತು ಅದ್ಭುತ ರುಚಿಯೊಂದಿಗೆ ಬರುವುದು. ಇದಕ್ಕೆ ಕಬ್ಬಿನ ಹಾಲು ಇಲ್ಲದಿದ್ದರೂ, ಬರೀ ನೀರು ಹಾಕಿ ಅರೆದರೆ,  ಅದೇ ನಮ್ಮ ಪ್ರಸಿದ್ಧ 'ಸೆಟ್ ದೋಸೆ' ಆಯಿತು ಅನ್ನಿ.


ಕೊತ್ತಂಬರಿ ಸೊಪ್ಪು,  ಕಾಯಿತುರಿ, ಒಂದು ಹಸಿಮೆಣಸು,  ಉಪ್ಪು,  ಹುಳಿ ಕೂಡಿ ಅರೆಯುವಲ್ಲಿಗೆ   ಚಟ್ಣಿ ಆಯಿತು,  ಒಗ್ಗರಣೆಯ ಅಲಂಕರಣ ಇರಲಿ.


ಈ ಹಿಟ್ಟನ್ನು ಗುಳಿಯಪ್ಪದಲ್ಲಿ ಎರೆದರೆ ಸಿಹಿ ಅಪ್ಪಂ ಆಯ್ತು,  ಉಳಿದ ಹಿಟ್ಟಿನಿಂದ ಸಂಜೆಯ ತಿನಿಸೂ ಆಯ್ತು ಅನ್ನಿ.








0 comments:

Post a Comment