Pages

Ads 468x60px

Monday 18 October 2021

ಚೌತಿಯ ಚಕ್ಕುಲಿ


 ಚೌತಿಯ ಹಬ್ಬದ ಆಚರಣೆ ಎಂದು ಹಾರಾಡುವುದಕ್ಕಿಲ್ಲ,  ಮನೆಯೊಳಗೆ ನಾವಿಬ್ಬರೇ,  ಕ್ಲಬ್ ಹೌಸುವಾಟ್ಸಪ್ಪುಫೇಸ್ಬುಕ್ಕುಸಾಲದಕ್ಕೆ ಟ್ವಿಟ್ಟರು ನಮ್ಮ ಅಂಗೈಯೊಳಗೆ ಇರುವಾಗ...


"ಅಮ್ಮ ಚೌತಿಗೆ ನಾನು ಬರುತ್ತಾ ಇದ್ದೇನೆ.. " ಮಗಳ ಕಾಲ್.

ಹೌದ ಚೌತಿ ಯಾವಾಗ? "

ಮುಂದಿನ ಬುಧವಾರ.. "

"ಸರಿ ನಿನ್ನ ಇಷ್ಟದ ತಿಂಡಿ ಎಲ್ಲ ಪಟ್ಟಿ ಮಾಡಿ ಹೇಳು... "


ಪಾಯಸವೆಂದರೆ ಅವಳಿಗಾಗದು ಎಣ್ಣೆಯಲ್ಲಿ ಕರಿದ ತಿಂಡಿಗಳೇ ಅವಳ ಆಯ್ಕೆ.

ಚಕ್ಕುಲಿಯನ್ನೇ ಮಾಡೋಣ ಉಳಿದಂತೆ ಅಪ್ಪಪಂಚಕಜ್ಜಾಯ ಸಿಹಿ ಅವಲಕ್ಕಿ.

ಪಾಯಸ ಮಾಡದಿದ್ದರಾದೀತೇ ಓಣಂ ರೇಷನ್ ಕಿಟ್ ಅಂತ ಬಂದಿದ್ರಲ್ಲಿ ಪಾಯಸದ ಸಾಮಗ್ರಿ ಇನ್ನೂ ಮುಗಿದಿಲ್ಲ ಭರ್ಜರಿಯಾಗಿಗೇರುಬೀಜ ದ್ರಾಕ್ಷಿಏಲಕ್ಕಿ ಸುರುವಿ ಇನ್ನೊಂದಾವರ್ತಿ ಪಾಯಸ ಮಾಡುವ ಲೆಕ್ಕಾಚಾರ ಹಾಕಿದ್ದಾಯ್ತು.


ಅಡುಗೆಮನೆಯಲ್ಲಿ ಅಕ್ಕಿ ತೆಂಗಿನಕಾಯಿ ಬೆಲ್ಲಗಳನ್ನು ಹೇಗೆಲ್ಲ  ಹೊಂದಾಣಿಕೆ ಮಾಡಿದ್ರೆ ಯಾವೆಲ್ಲ ತಿಂಡಿಗಳು ಎದ್ದು ಓಡಿ ಬರುತ್ತವೆಎಂಬ ಲೆಕ್ಕಾಚಾರದಲ್ಲಿದ್ದಾಗ ಅಮ್ಮಚಕ್ಕುಲಿ ಮಾಡುವುದಕ್ಕಿಲ್ಲವೇ.. " ಪ್ರಶ್ನೆ ಬಂದಿತು.


ಮಾಡುವಅದಕ್ಕೇನಂತೆ...  ನಿನ್ನೆ ಫೇಸ್ ಬುಕ್ಕಿನಲ್ಲಿ ಒಂದು ಚಕ್ಕುಲಿ ಕ್ರಮ ಬಂದಿತ್ತು ಸುಲಭದಲ್ಲಿ ಮಾಡಬಹುದು.. "


ಒಂದು ಕುಡ್ತೆಅಂದ್ರೆ ಒಂದು ಅಳತೆಯ ಲೋಟದಲ್ಲಿ ಉದ್ದಿನಬೇಳೆ ಹುರಿಯಬೇಕು. " ಹೇಳುತ್ತಲೇ ಇಂಡಕ್ಷನ್ ಸ್ಟವ್ ಉದ್ದಿನಬೇಳೆಯನ್ನು ಕೆಂಪಗೆ ಹುರಿದಿಟ್ಟಿತು ಆರಲಿ.

ಮೂರು ಅಳತೆ ನೀರು ತೆಗೆದಿರಿಸುವುದು.

ಆರಿದ ನಂತರ ಅಳೆದಿರಿಸಿದ ನೀರಿನಲ್ಲಿ ನುಣ್ಣಗೆ ಅರೆಯುವುದು.

ನುಣ್ಣಗಾದ ಹಿಟ್ಟಿಗೆ ಮೂರು ಅಳತೆ ನುಣುಪಾದ ಅಕ್ಕಿಹುಡಿ ಸೇರಿಸುವುದು ಅಕ್ಕಿ ತರಿ ಆಗದು ಅಕ್ಕಿ ಹುಡಿಯನ್ನು ಸ್ವಲ್ಪ ಹುರಿದರೂ ಆದೀತು ಹುರಿಯದಿದ್ದರೂ ನಡೀತದೆ.

ರುಚಿಗೆ ಉಪ್ಪು ಇಂಗಿನ ನೀರು ಮೆಣಸಿನ ಹುಡಿ ಹಾಕಿ ಹಿಟ್ಟನ್ನು ತೆಗೆದಿರಿಸಿದ ನೀರಿನಲ್ಲೇ ಕಲಸಿ ನಾನು ಎಣ್ಣೆ ಬೆಣ್ಣೆ ಏನೂ ಹಾಕಿಲ್ಲ ಕಾರ ಬೇಡವಾದರೆ ಮೆಣಸಿನ ಹುಡಿ ಬೇಡ ಬದಲಾಗಿ ಎಳ್ಳು ಜೀರಿಗೆ ಹಾಕಬಹುದಾಗಿದೆಅದೆಲ್ಲ ನಮ್ಮ ಆಯ್ಕೆ.

ಬಾರೇ ಹಿಟ್ಟು ಕಲಸಿದ್ದಾಯ್ತು ಚಕ್ಕುಲಿ ಮಟ್ಟು ದೇವರ ಕೋಣೆಯ ಗೂಡಲ್ಲಿದೆ..."

ಚಕ್ಕುಲಿ ಮಟ್ಟು ಬಂತು ಥೂಏನು ಧೂಳು..." ಒರೆಸೀ ಒರೆಸೀ ತೊಳೆದಳು.


ಮಗಳು ಚಕ್ಕುಲಿ ಒತ್ತಿ ಕೊಟ್ಟಂತೆ ಎಣ್ಣೆಯಲ್ಲಿ ತೇಲಿ ತೇಲಿ ಎದ್ದು ಬಂದ ಚಕ್ಕುಲಿಗಳು...  


ನಮ್ಮ ಚೌತಿ,  ಚಕ್ಕುಲಿಯ ಕಟುಂ ಕುಟುಂ ಸದ್ದಿನಲ್ಲಿ ಸಂಪನ್ನವಾಯ್ತು.


ಈಗ ನವರಾತ್ರಿ ಬಂದಿದೆ ದೀಪಾವಳಿ ಬರಲಿದೆ. 

ಸುಲಭವಾಗಿ ಮಾಡಬಹುದಾದ  ಉದ್ದಿನ ಚಕ್ಕುಲಿಯನ್ನು ತಿನ್ನಲು ಹಬ್ಬ ಬರಬೇಕಿಲ್ಲ ಒಂದು ರಜಾದಿನದ ಸಂಜೆಯ ಹೊತ್ತುಗರಿಗರಿ ಚಕ್ಕುಲಿ ಕರಿದು ತಿನ್ನಿರಿ,  ಚಹಾ ಕುಡಿಯಿರಿ.

ಅಳತೆಯ ಪ್ರಮಾಣದಲ್ಲಿ ತಿಳಿಸಿದಷ್ಟೇ ನೀರು ಬಳಸಿರಿ ಹೆಚ್ಚು ಕಮ್ಮಿ ಮಾಡದಿರಿ.





Monday 11 October 2021

ಟೊಮ್ಯಾಟೋ ಪಲ್ಯ



 

ಜೋಳದ ಪಲ್ಯ ಓದಿದ್ದೀರಲ್ಲ ಪಲ್ಯವನ್ನು ಓದಿದ ಫೇಸ್ ಬುಕ್ ಮಿತ್ರರಾದ ಮುರಳೀಕೃಷ್ಣ ಇನ್ನೊಂದು ಸರಳ ವಿಧಾನದ ಪಲ್ಯವನ್ನು ಪರಿಚಯಿಸಿಕೊಟ್ಟರು.


ಮಾಡಿದ್ದು ಹೇಗೇ ತಿಳಿಸಿ,

ಮುಸುಕಿನ ಜೋಳವನ್ನು ಬಿಡಿಸಿ,

ಟೊಮ್ಯಾಟೋ ಹಸಿಮೆಣಸು ಬೆಳ್ಳುಳ್ಳಿ ನೀರುಳ್ಳಿ ಶುಂಠಿಗಳನ್ನು ಆಯಾ ಕ್ರಮದಲ್ಲಿ ಕತ್ತರಿಸಿ,

ಬಿಡಿಸಿದ ಜೋಳವನ್ನು ಒಂದು ಹಿಡಿ ಹಸಿ ತೆಂಗಿನತುರಿಯೊಂದಿಗೆ ತರಿ ತರಿಯಾಗಿ ಬೀಸಿ,

ಬಾಣಲೆಗೆ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ,

ಸಾಸಿವೆ ಸಿಡಿದ ನಂತರ ಕರಿಬೇವು ಬೀಳಿಸಿ,

ಹೆಚ್ಟಿಟ್ಟ ಟೊಮ್ಯಾಟೋ ಇತ್ಯಾದಿಗಳನ್ನು ಬಾಡಿಸಿ,

ಜೋಳದ ತರಿಯನ್ನು ಕೂಡಿಸಿ,

ರುಚಿಗೆ ತಕ್ಕ ಪ್ರಮಾಣದಲ್ಲಿ ಉಪ್ಪು ಚಿಟಿಕೆ ಅರಸಿಣ ಇಂಗಿನ ನೀರುಬೇಕಿದ್ದರೆ ತುಸು ಮಸಾಲೆ ಹುಡಿ ಬೆರೆಸಿ,

ಮಂದಾಗ್ನಿಯಲ್ಲಿ ಮುಚ್ಚಿ ಬೇಯಿಸಿ,

ಜೋಳ ಬೆಂದ ನಂತರ ಇಳಿಸಿ.

ಬೇಕಿದ್ದರೆ ಕೊತ್ತಂಬರಿ ಸೊಪ್ಪು ಉದುರಿಸಿ.


ದೋಸೆಚಪಾತಿಗೆ ಹಿತವಾದ ವ್ಯಂಜನ ಇದಾಗಿದೆ.

ಮಧ್ಯಾಹ್ನದ ಊಟಕ್ಕೂ ಆಯ್ತು ಸಂಜೆಯ ಬ್ರೆಡ್ ಜೊತೆ ಕೂಡಾ ಹಿತವಾಗಿದ್ದಿತು.





Tuesday 5 October 2021

ರಾಗಿ ರೊಟ್ಟಿ

 


ರಾತ್ರಿಯ ಅನ್ನ ಮಿಕ್ಕಿತ್ತು,  2 ಸೌಟು ಬೆಳ್ತಿಗೆ ಅನ್ನ,  ಸ್ವಲ್ಪ ನೀರು ಸೇರಿಸಿ ಅರೆಯಿರಿ.

ಫ್ರಿಜ್ ಒಳಗೆ ಇಟ್ಟಂತಹ ತೆಳ್ಳವಿನ ಹಿಟ್ಟು ಇತ್ತು,  ಒಂದು ದೊಡ್ಡ ಲೋಟ ಹಿಟ್ಟು ಉಳಿದದ್ದು ಹೊರ ಬಂದಿತು.

ಒಂದೂವರೆ ಲೋಟ ರಾಗಿ ಹುಡಿ ಅಂಗಡಿಯಿಂದ ತಂದದ್ದು.

ಎಲ್ಲವನ್ನೂ ಕೂಡಿಸಿ ಕಲಸಿದಾಗ ದಪ್ಪವಾದ ಹಿಟ್ಟು ಮೇಲೆದ್ದಿತು.

ದೋಸೆಯಂತೆ ಎರೆಯಲಾಗದು.

ರೊಟ್ಟಿಯಂತೆ ತಟ್ಟಲಾಗದು ತಟ್ಟಲಿಕ್ಕೆ ಬಾಳೆ ಎಲೆ ಮನೆಯೊಳಗೆ ಇಲ್ಲ.

ಅಡುಗೆಯ ಸಂಗ್ರಹದಿಂದ ಅಕ್ಕಿ ಹುಡಿ ತಲೆಯೆತ್ತಿತು.

ಪ್ಯಾಕೇಟ್ ಬಿಡಿಸಿ ಒಂದು ಲೋಟ ಅಕ್ಕಿ ಹುಡಿಗೆ ಒಂದೂವರೆ ಲೋಟ ನೀರೆರೆದು ಕೂಡಿಸಿದಾಗ ದೋಸೆಯಂತೆ ಎರೆಯಲಾಗುವ ದ್ರಾವಣ ದೊರೆಯಿತು.

ರುಚಿಗೆ ಸಾಕಷ್ಟು ಉಪ್ಪು ಬಿದ್ದಿತು.


ಕಾಯಿತುರಿ ನೀರುಳ್ಳಿ ಗಾಂಧಾರಿ ಮೆಣಸುಗಳ ಸಂಯೋಜನೆಯಲ್ಲಿ ಚಟ್ಣಿ ಟೇಬಲ್ ಮೇಲೆ ಕುಳಿತಿತು.

ಬೆಲ್ಲ ಗುದ್ದಿ ಪುಡಿ ಮಾಡಿ ನೀರೆರೆದು ಕುದಿಸಿದಾಗ ರವೆ ಎಂಬ  ಬೆಲ್ಲದ ಪಾಕ ನಕ್ಕು ನಲಿಯಿತು.

ತವಾ ಬಿಸಿಯೇರಿತು ಎಳ್ಳೆಣ್ಣೆಯ ಚುಟ್ಟಿ ಅಡಿಕೆ ಹಾಳೆಯ ತುಂಡಿನಿಂದ ಸವರಲಾಯಿತು.


ದೋಸೆಯು ರೊಟ್ಟಿಯಂತೆ ಎದ್ದು ಬಂದಿತು.

ಅರೆ ಚೆನ್ನಾಗಿದೆಯಲ್ಲ...


ರುಚಿಕರವಾದ  ರೊಟ್ಟಿಯನ್ನು ಮಿಕ್ಕ ಕುಚ್ಚುಲಕ್ಕಿ ಅನ್ನದಿಂದಲೂ ಮಾಡಬಹುದಾಗಿದೆ.

ಅನ್ನವನ್ನು ಅರೆಯಲು ಇಷ್ಟವಿಲ್ಲದವರು ಎರಡು ಯಾ ಮೂರು ಬಾಳೆಹಣ್ಣು ಬಳಸಿರಿ.

ಚಟ್ಣಿಯ ಸಾಮಗ್ರಿಗಳನ್ನು ತರಿತರಿಯಾಗಿ ಅರೆದು ದೋಸೆ ಹಿಟ್ಟಿಗೆ ಕೂಡಿಸಿ ರೊಟ್ಟಿಯನ್ನು ಹಾಗೇನೇ ತಿಂದು ಏಳಬಹುದು