Pages

Ads 468x60px

Sunday 31 January 2021

ನುಗ್ಗೆ ಸೊಪ್ಪಿನ ತಂಬುಳಿ


 


ಮನೆ ಹಿತ್ತಲಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ನುಗ್ಗೆ ಮರಗಳಿದ್ದರೂ ನುಗ್ಗೇಕಾಯಿ ಕೊಯ್ಯಲು ಸಿಗದ ಕಾರಣವೂ,   ಮಳೆಗಾಲದಲ್ಲಿ ಕೊಂಬೆ ಮುರಿದು ಬೀಳುವ ಕಾರಣವೂ ಸೇರಿ ನುಗ್ಗೆ ಮರ ಕಡಿದು ಹಾಕಲ್ಪಟ್ಟಿತು ಆದರೇನಂತೆ,  ಬುಡದಿಂದ ಪುನಃ ಚಿಗುರು ಮೇಲೆದ್ದು ಹೊಸ ಮರವಾಗಿ ನಿಂತ ನುಗ್ಗೆಯ ಮರದ ಎಲೆಗಳನ್ನು ಬೇಕೆನಿಸಿದಾಗ ಕೊಯ್ದು ಅಡುಗೆಯ ತಪಲೆಗೆ ಹಾಕಿ ಸಾಂಬಾರು ಆಯ್ತು ಅನ್ನದಿದ್ದರೆ ಹೇಗೆ?


ನುಗ್ಗೆಕಾಯಿಯ ಪರಿಮಳ ಬರದಿದ್ದರೇನಂತೆ ನುಗ್ಗೆಸೊಪ್ಪು ಜೀವಸತ್ವಗಳ ಆಗರ ತಾಜಾ ಸೊಪ್ಪಿನ ಅಡುಗೆ ಎಲ್ಲರಿಗೂ ಸಿಗದು ತರಕಾರಿ ಮಾರುಕಟ್ಟೆಯಿಂದ ತಂದು ತೊಳೆದುತಂಪು ಪೆಟ್ಟಿಗೆಯಲ್ಲಿ ತುಂಬಿಟ್ಟು ಅಡುಗೆಯ ಅಂಗಣಕ್ಕೆ ಪೆಟ್ಟಿಗೆಯಿಂದ ಹೊರಬರುವಾಗ ಅದರಲ್ಲಿರುವ ಜೀವಾಂಶಗಳೆಲ್ಲ ನಿಜ ಅರ್ಥದಲ್ಲಿ ಸತ್ತಿರುತ್ತವೆ.  


ಇರಲಿ ನಾವು ಇವತ್ತು ನುಗ್ಗೆಸೊಪ್ನಿನ ತಂಬುಳಿ ಮಾಡಲಿದ್ದೇವೆ ಹಿತ್ತಲ ಗಿಡದಿಂದ ಚಿಗುರೆಲೆಗಳು ತುಂಬಿದ ಟೊಂಗೆಯನ್ನು ಮುರಿದು ತರುವುದು.

ಚಿಗುರೆಲೆಗಳನ್ನು ಆಯ್ದು ತುಸು ನೀರೆರೆದು ಕುದಿಸಿದ ಶಾಸ್ತ್ರ ಮಾಡಿ ಕೆಳಗಿಳಿಸಿ.

ತೆಂಗಿನಕಾಯಿ ತುರಿಯಿರಿ,  

ಎಷ್ಟೂ?

ಅರ್ಧ ಕಾಯಿಯ ಅರ್ಧದಷ್ಟು ಕಾಯಿತುರಿ ಸಾಕು.

ತಾಜಾ ಸಿಹಿ ಮಜ್ಜಿಗೆ ಇರಬೇಕು.

ಇಲ್ವೇ..

ತಂಪು ಪೆಟ್ಟಿಗೆಯೊಳಗೆ ನಿನ್ನೆಯ ಮೊಸರು ಇಟ್ಕೊಂಡಿದ್ದರೆ ಅದೇ ಸಾಕು.

ಹೆಚ್ಚೇನೂ ಬೇಡ ಅರ್ಧ ಸೌಟು ಮೊಸರು ಇದ್ದರಾಯಿತು.

ಅರೆಯಲಿಕ್ಕೆ ಇನ್ನೂ ಏನಿರಬೇಕು?

ಏಳೆಂಟು ಮೆಣಸಿನ ಕಾಳು ಅಂದರೆ ಕಾಳುಮೆಣಸು.   ಹಸಿಮೆಣಸು ಬೇಡ.

ಅರ್ಧ ಚಮಚ ಜೀರಿಗೆ.

ರುಚಿಗೆ ತಕ್ಕಷ್ಟು ಉಪ್ಪು.

ಅರೆಯಲಿಕ್ಕೆ ತುಸು ನೀರು ಒಂದು ಲೋಟ ಇಟ್ಕೊಳ್ಳಿ.


ಅರೆಯುವ ಕಲ್ಲು ಇದ್ದರೆ ಅದೇ ಉತ್ತಮ ತಂಬುಳಿಯು ಬೆಣ್ಣೆಯಂತೆ ನುಣ್ಣಗಾಗೋದು ಬೇಡ್ವೇ,

 ಮಿಕ್ಸಿ ಸಾಕು ಅಂತೀರಾ

ಮಿಕ್ಸಿಯಲ್ಲಿ ಎಲ್ಲವನ್ನೂ ಮೊಸರು ಕೂಡಾ ಹಾಕಿಕೊಳ್ಳಿ ಮೊದಲಾಗಿ ನೀರು ಎರೆಯದಿರಿ... ಏನೋ ಆಗಿ ಹೋದೀತು.

ಮಿಕ್ಸಿಗೆ ನಾವು ತುಂಬಿದಂತಹ ಸಾಮಗ್ರಿಗಳು ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರೆರೆದು ನುಣ್ಣಗೆ ಅರೆಯಿರಿ.

ನುಣ್ಣಗಾಯ್ತು ತಪಲೆಗೆ ಹಾಕಿಕೊಳ್ಳಿ ತಂಬುಳಿಯು ತೆಳ್ಳಗೆ ಕುಡಿಯಲು ಯೋಗ್ಯವಾಗುವಷ್ಟು ನೀರು ಎರೆದುತುಪ್ಪದಲ್ಲಿ ಒಗ್ಗರಣೆ ಕೊಡುವಲ್ಲಿಗೆ ತಂಪು ತಂಪಾದ ತಂಬುಳಿ ನಮ್ಮದಾಯಿತು ಇದನ್ನು ಕುದಿಸುವ ಕ್ರಮ ಇಲ್ಲ.

ಎಲ್ಲರ ಊಟದ ತರುವಾಯ ಇನ್ನೂ ಮಿಕ್ಕಿದ್ದರೆ  ತಂಬುಳಿಯನ್ನು ಅಡುಗೆಮನೆಯ  ಸೂತ್ರಧಾರರು ಗಟಗಟನೆ ಕುಡಿಯತಕ್ಕದ್ದು.





ಕ್ಯಾಲ್ಸಿಯಂ,ವಿಟಮಿನ್ ಸಿವಿಟಮಿನ್ ಮೆಗ್ನೀಶಿಯಂಪ್ರೊಟೀನ್ ಹೊಂದಿರುವ ನುಗ್ಗೆಯ ಎಲೆಗಳು ದೈಹಿಕ ಬಲವನ್ನು ಹೆಚ್ಚಿಸುವುದರಲ್ಲಿ ಅನುಮಾನ ಬೇಡ.

ಇದರಲ್ಲಿರುವ ಕಬ್ಬಿಣದ ಧಾತು ರಕ್ತಹೀನತೆ ಯಾ ಅನೀಮಿಯಾ ನಿವಾರಕ ಮಹಿಳೆಯರಿಗೆ ಅದರಲ್ಲೂ ಬಸುರಿ ಬಾಣಂತಿಯರಿಗೆ ಅತ್ಯುತ್ತಮ ಪೋಷಕ ಆಹಾರ.  ಮಾಸಿಕ ಋತುಸ್ರಾವದಿಂದ ಬಳಲುವ ಸ್ತ್ರೀ ಜೀವಕ್ಕೆ ನುಗ್ಗೆ ಸೊಪ್ಪು ಪ್ರಕೃತಿಯ ವರದಾನ ಎಂದೇ ತಿಳಿಯಿರಿ.


ಗಂಟುನೋವುನರಗಳ ದುರ್ಬಲತೆ ವಯಸ್ಸಾದವರಲ್ಲಿ ಸಾಮಾನ್ಯ ಬಾಧೆ ನುಗ್ಗೆ ಸೊಪ್ಪು ಸೇವಿಸಿ ನುಗ್ಗೆಯಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ ನೋವು ನಿವಾರಕ ಶಕ್ತಿ ಹೊಂದಿದೆ.


ನುಗ್ಗೆ ಸೊಪ್ಪಿನ ದೋಸೆಪತ್ರೊಡೆರೊಟ್ಟಿಬೋಂಡಾಚಟ್ನಿಪುಡಿರಸಂ ಇತ್ಯಾದಿ ಅಡುಗೆಯಲ್ಲಿ ಮಾಡಿ ಸವಿಯಿರಿ


ಇದಲ್ಲದೆ ನುಗ್ಗೆಯ ಬೇರುತೊಗಟೆಹೂಬೀಜ ಇತ್ಯಾದಿ  ಔಷಧೀಯ ಗುಣಧರ್ಮ ಹೊಂದಿದ್ದು ಪರಿಣತ ವೈದ್ಯರ ಮಾರ್ಗದರ್ಶನ ಅವಶ್ಯವಿದೆ.


ಸಸ್ಯಶಾಸ್ತ್ರೀಯವಾಗಿ moringa oleifera ಎಂದಿದ್ದರೂ ಆಂಗ್ಲಭಾಷೆಯು ಇದನ್ನು drumstick tree ಎಂದಿದೆ.

ಅಪ್ಪಟ ಭಾರತದ ಸಸ್ಯವಾಗಿರುವ ನುಗ್ಗೆಯು ಆಯುರ್ವೇದ ಶಾಸ್ತ್ರದಲ್ಲೂ ಸ್ಥಾನ ಪಡೆದಿದೆ.






  

Monday 25 January 2021

ನಕ್ಷತ್ರ ಹಣ್ಣು



ವರ್ಷಗಳ ಹಿಂದೆ ಪಕ್ಕದಮನೆಯಿಂದ ನಕ್ಷತ್ರ ಹಣ್ಣುಗಳು ದೊರೆತಾಗ,  ಹಣ್ಣು ತಿನ್ನುವಾಗ ಒಳಗೆ ಸಿಕ್ಕ ಬೀಜಗಳನ್ನು ಜೋಪಾನವಾಗಿ ನೀರೆರೆದು ಸಲಹಿದಾಗ ಮೂರೇ ವರ್ಷದಲ್ಲಿ ನಕ್ಶತ್ರ ಹಣ್ಣುಗಳನ್ನು ನನ್ನದೇ ಗಿಡದಿಂದ ಕೊಯ್ಜು ತಿನ್ನುವ ಯೋಗ.


 ವರ್ಷ ಮಕ್ಕಳೆಲ್ಲರೂ ಮನೆಯಲ್ಲಿದ್ದಾಗ ಗಿಡ ತುಂಬ ಹಣ್ಣು ದೊರೆಯುವ ಅಂದಾಜಿನಲ್ಲಿದ್ದಾಗಲೇ ಮಗಳು ಅಳಿಯ ಬೆಂಗಳೂರಿಗೆ ತೆರಳಿಯಾಗಿತ್ತು.  


ಏನ್ಮಾಡಿದ್ರೀ..  "

ಮಾಡೂದೇನು ಹೇಳದೇ ಕೇಳದೇ ಭಾರೀ ಮಳೆ ಸುರಿಯಿತು ಬೆಳಗೆದ್ದು ನೋಡಿದ್ರೆ ಹೆಚ್ಚಿನ ಹಣ್ಣುಗಳು ನೆಲದಲ್ಲಿ ಹೊರಳುತ್ತಿವೆ ಮರದಲ್ಲಿ ಫಳಫಳನೆ ಮಿಂಚುತ್ತಿದ್ದ ಹಣ್ಣುಗಳ ಗತಿ ಕಂಡು ಬೇಜಾರಾಯ್ತು.   ಬಿದ್ದ ಹಣ್ಣುಗಳಲ್ಲಿ ಚೆನ್ನಾಗಿದ್ದುದನ್ನು ಆಯ್ದು ತಂದಾಗ ತಿನ್ನಲು ನಮ್ಮೆಜಮಾನ್ರು ಹಾಜರಾದರು.

ಹಣ್ಣು ಭಲೇ ಸಿಹಿ ಉಂಟಲ್ಲ... "

ತಿನ್ನಿ..  ಬಿದ್ದು ಹಾಳಾಗ್ತಾ ಉಂಟು. "


ಮಾರನೇ ಮುಂಜಾನೆ ನೋಡಿದಾಗ ಮರದಲ್ಲಿ ಅಳಿದುಳಿದ ಹಣ್ಣುಗಳು ಗಾತ್ರದಲ್ಲಿ ದೊಡ್ಡಾಗಿವೆ ಒಂದು ಮಳೆಯ ಪ್ರಭಾವವೇ ಅಂತಹುದು.   ನಾವು ಕೊಡಗಟ್ಟಲೆ ನೀರು ಹುಯ್ದರೂ ಮರ ಸ್ವೀಕರಿಸದು ವರ್ಷಧಾರೆಯ ಹನಿ ಸಿಕ್ಕರೂ ಸಾಕುಸಸ್ಯಗಳು ಧನ್ಯತೆಯಿಂದ ತಲೆದೂಗದಿರದೇ..





ಹಣ್ಣುಗಳೆಲ್ಲ ನನ್ನ ಬುಟ್ಟಿಯೊಳಗೆ ಸೇರಿದುವು.

ಇದನ್ನೆಲ್ಲ ಏನ್ಮಾಡ್ಲಿ?

ಉತ್ತರ ಸಿಕ್ಕಿಯೇ ಬಿಟ್ಟಿತು ಉಪ್ಪಿನಕಾಯಿ ಹಾಕುವುದು ಒಂದೆರಡು ವಾರದ ಖರ್ಚಿಗೆ ಸಾಕು ಮಧು ಬೆಂಗಳೂರಿಗೆ ಹೋಗುವಾಗ ಇದ್ದರೆ ಜಾಡಿಯಲ್ಲಿ ತುಂಬಿಸಿ ಕೊಡಬಹುದು.


ಉಪ್ಪಿನಕಾಯಿ ಹಾಕಲು ಬೇಕಾದ ಸಾಮಗ್ರಿಗಳೆಲ್ಲ ಇವೆ.

ಉಪ್ಪು ಮೆಣಸು ಸಾಸಿವೆ ಮೆಂತೆ ಇತ್ಯಾದಿ ರೇಷನ್ ಸಾಮಗ್ರಿಗಳ ವ್ಯಾಪ್ತಿಯಲ್ಲಿ ಸಿಗುತ್ತಲಿರುವಾಗ,

ಹಿತ್ತಲಲ್ಲಿ ಬೆಳೆದ ಮಾವಿನಶುಂಠಿಯೂ ಹಸಿ ಅರಸಿಣವೂ ಗೋಣಿಚೀಲದಲ್ಲಿರುವಾಗ..


ನಕ್ಷತ್ರಹಣ್ಣುಗಳ ಬೀಜ ಬೇರ್ಪಡಿಸಿ ಹೋಳು ಮಾಡಲಾಯಿತು ಹದಿನೈದರಿಂದ ಇಪ್ಪತ್ತು ಹಣ್ಣು ಸಾಕು.

ಸೂಕ್ತವಾಗುವಷ್ಟು ಮಾಂಙನಾರಿ ಚೂರು ಚೂರಾಯಿತು.

ತುಸು ಪುಡಿಯುಪ್ಪು  ಬೆರೆಸಿ ಒಲೆಯ ಮೇಲಿಟ್ಟು ಬೆಚ್ಚಗೆ ಮಾಡುವುದು ಬೇಯುವುದೇನೂ ಬೇಡ ನೀರು ತಾಕಿಸಲೇ ಬಾರದು ಬೀಂಬುಳಿ ದಾರೆಹುಳಿಗಳಂತೆ ಶೇಕಡಾ 80ಕ್ಕೂ ಮೇಲ್ಪಟ್ಟು ನೀರು  ಹುಳಿ ಹಾಗೂ ಸಿಹಿ ಮಿಶ್ರಿತ ಹಣ್ಣಿನಲ್ಲಿರುವಾಗ ನೀರಿನ ಹಂಗು ಇದಕ್ಕಿಲ್ಲ.


ಮಸಾಲೆ ಏನೇನು ಹಾಕೋಣ?

ಕಡಲೆ ಗಾತ್ರದ ಇಂಗು ಪುಟ್ಟ ಚಮಚ ಮೆಂತೆ ಬಾಣಲೆಗೆ ಬಿತ್ತು.   ನಾನ್ ಸ್ಟಿಕ್ ಕಡಾಯಿ ಎಣ್ಣೆ ಬಯಸದು.

ಒಂದೂವರೆ ಚಮಚ ಸಾಸಿವೆ ಸೌಟಾಡಿಸುತ್ತ ಸಾಸಿವೆ ಸಿಡಿಯುವುದನ್ನು ಗಮನಿಸುತ್ತಿದ್ದಂತೆ,

ಒಂದೂವರೆ ಚಮಚ ಮೆಣಸಿನ ಹುಡಿ ಬೀಳಿಸಿ,

ಒಂದೆಸಳು ಕರಿಬೇವು ಉದುರುವಲ್ಲಿಗೆ ಸ್ಟವ್ ಆರಿಸಿ.


ಆರಿದ ನಂತರ  ಶುದ್ಧೀಕರಿಸಲ್ಪಟ್ಟ ಮಿಕ್ಸಿಯಲ್ಲಿ ಹುಡಿ ಮಾಡುವುದು.

ಹುಡಿ ಮಾಡುವಾಗಲೇ ಪುಡಿಯುಪ್ಪು ಸೇರಿಸುವುದು ಸೂಕ್ತ.   ಕೈಯಲ್ಲಿ ಬೆರೆಸಬೇಕಿಲ್ಲ.

ಹಸಿ ಅರಸಿಣ ಇತ್ತಲ್ಲ ಆದನ್ನೇ ನಾಲ್ಕು ಚೂರು ಮಿಕ್ಸಿಗೆ ಹಾಕಲಾಯಿತು.

ನಂತರ  ತಾಜಾ ಮಸಾಲೆಯನ್ನು ನಕ್ಷತ್ರ ಹಾಗೂ ಮಾವಿನಶುಂಠಿ ಮಿಶ್ರಣಕ್ಕೆ ಬೆರೆಸಿ ಮುಚ್ಚಿ ಇಡುವುದು.

 ಹೇಗಾಯ್ತೂ ಎಂದು ರುಚಿ ನೋಡದಿದ್ದರೆ ಹೇಗೆ?

 ಉಪ್ಪು ಕಡಿಮೆ ಎಂದೆನಿಸಿದರೆ ತುಸು ಉಪ್ಪು ಬೆರೆಸುವುದು ಅಷ್ಟೇ ಮೊದಲೇ ತುಂಬಾ ಉಪ್ಪು ಹಾಕಲೇ ಬಾರದು.

 ಉಪ್ಪಿನಕಾಯಿಯನ್ನು ಮಾಡಿದ ಕೂಡಲೇ ಉಪಯೋಗಿಸಬಹುದಾಗಿದೆ.


ನಂತರ ನಾಲ್ಕಾರು ದಿನಗಳಲ್ಲಿ ಮಕರಸಂಕ್ರಾಂತಿ ಬಂದಿದೆ.   ಹಿರಣ್ಯ ಶ್ರೀದೇವಿ ಕ್ಷೇತ್ರದಲ್ಲಿ ಭೋಜನದ ಉಸ್ತುವಾರಿ ನನ್ನದೇ ಆಗಿರುವಾಗ ನಕ್ಷತ್ರಹಣ್ಣಿನ ಉಪ್ಪಿನಕಾಯಿ ಎಲ್ಲರ ಬಾಯಿಚಪಲಕ್ಕೆ ತುತ್ತಾಗಿದ್ದು ಸುಳ್ಳಲ್ಲ ಕಣ್ರೀ...






ನಕ್ಷತ್ರ ಹಣ್ಣು ಎಂಬ ಮಧ್ಯಮ ಗಾತ್ರದ ಹಣ್ಣಿನ ಮರವು ಆಂಗ್ಲ ಭಾಷಾ ಶಾಸ್ತ್ರದ ರೀತ್ಯಾ ವಾಟರ್ ರೋಸ್ ಅ್ಯಪಲ್ ಆಗಿರುತ್ತದೆ ಜಾವಾ ಆ್ಯಪಲ್ ವ್ಯಾಕ್ಸ್ ಜಂಬೊ ಇನ್ನೂ ಹಲವು ನಾಮಕರಣಗಳು.   ಅಂಡಮಾನ್ ದ್ವೀಪ ಸಮೂಹದಲ್ಲಿ ನಕ್ಷತ್ರ ಹಣ್ಣಿನ ಬೆಳೆ ವಿಶೇಷವಾಗಿರುವುದರಿಂದಲೇ ಕೇರಳೀಯರು ನಕ್ಷತ್ರ ಹಣ್ಣು ಬೆಳೆಯುವಲ್ಲಿ ಮೊದಲಿಗರಾಗಿದ್ದಾರೆಕೇರಳದಲ್ಲಿ ನಕ್ಷತ್ರ ಹಣ್ಣನ್ನು ಚಂಬಕ್ಕ ಎನ್ನಲಾಗುತ್ತದೆ.  


ಸಸ್ಯವಿಜ್ಞಾನದಲ್ಲಿ ನಕ್ಷತ್ರ ಹಣ್ಣು syzygium samarangense.



ಮಧು ಹಾಗೂ ಮೈತ್ರಿ ಸಂಕ್ರಾಂತಿಯ ತರುವಾಯ ಬೆಂಗಳೂರಿಗೆ ಹೊರಡುವಾಗ ಉಪ್ಪಿನಕಾಯಿ ಮುಗಿದಿತ್ತು ಮರದಲ್ಲಿ ಉಳಿದ ಹಣ್ಣುಗಳು ಕಾರು ಸೇರಿದವು.   ನನಗೂ ಸಮಧಾನ ಆಯ್ತು ಅನ್ನಿ.


ಅಮ್ಮ ನಕ್ಷತ್ರ ಹಣ್ಣು ಬೆಂಗಳೂರು ಬರಬೇಕಾದ್ರೇ ತಿಂದು ಮುಗಿಯಿತು ಏನ್ ರುಚಿ ಗೊತ್ತಾ..   ಹಣ್ಣಿದ್ರೆ ಕುಡಿಯಲಿಕ್ಕೆ ನೀರೂ ಬೇಡ,   ಆಸರು ಆಗಲೇ ಇಲ್ಲ. " ಎಂದ ಮಧು.




Sunday 17 January 2021

ಸಾದಾ ದೋಸೆ

 


ಮಧು ಊರಿಗೆ ಬಂದಾಗ ನನಗಾಗಿ ತಂದಂತಹ ಅಡುಗೆಯ ವಿವಿಧ ವಸ್ತುಗಳಲ್ಲಿ ದೋಸೆ ಹಿಟ್ಟು ಕೂಡಾ ಇತ್ತು ಯಾವುದೋ ಒಂದುಪ್ರತಿಷ್ಠಿತ ಬ್ರಾಂಡ್ ನೇಮ್ ಕೂಡಾ ಅದರದ್ದು.   ಅಮ್ಮ  ದ್ವಾಸೆ ಹಿಟ್ಟು ನಾವು ಹೋದ ನಂತರ ಉಪಯೋಗಿಸು..  ನನಗೆ ತಿನ್ನಲಿಕ್ಕೆ ನೀನೇ ಅರೆದು ಮಾಡ್ತೀಯಲ್ಲ ಅದನ್ನೇ ಮಾಡು.. "

"ಸರಿ ಬಿಡು.. "


ಅವನು ಹೋದ ನಂತರವೇ ನಾವು ಬೆಂಗಳೂರಿನ ದೋಸೆ ಹಿಟ್ಟಿನಿಂದ  ದೋಸೆ ಎರೆದು ತಿಂದೆವೂ ಅನ್ನಿ.   ಒಳ್ಳೆಯ ಬಣ್ಣವೂ ತೆಳ್ಳಗೆ ಪೇಪರ್ ದೋಸೆಯೂ ಆಯ್ತು ಆದರೆ ದೋಸೆ ಮಾತ್ರ ಹೊಟ್ಟೆ ತುಂಬಿದ ತೃಪ್ತಿ ಕೊಡದೇ ಮುಗಿಯಿತು.


 ಇದೇನು ಹೀಗೆ ಎಂದು ಅವನನ್ನೇ ಕೇಳಬೇಕಾಯ್ತು.

ಅದೂ ವಿಷಯ ಅನ್ನು..  ಅದಕ್ಕೆ ಆಲೂ ಮಸಾಲಾ ಸಾಗೂಕೋಕನಟ್ ಚಟ್ನಿ ದಪ್ಪ ಮೊಸರು  ಇದ್ರೇನೇ ಹೊಟ್ಟೆ ತುಂಬಿಸಿಕೊಡುತ್ತೆ.. " ಅಂದ ಮಗ.

ದಿನಾ ಆಲೂ ಬಾಜಿ ಮಾಡಬೇಕೂ ಅನ್ನು,   ನಮ್ಮ ಉದ್ದಿನ ದೋಸೆಗೆ  ರಗಳೆಯಿಲ್ಲ ಕಾಯಿ ಚಟ್ಣಿ ಬೆಲ್ಲದ ಪಾಕ ಇದ್ರೆ ಧಾರಾಳ ಸಾಕು. "

“ ನಮ್ಮ ಸಿಂಪಲ್ ದೋಸೆ ಮಾಡೂದು ಹೇಗೆ? “


ಇಬ್ಬರಿಗೆ ಒಂದು ಲೋಟ ಅಕ್ಕಿ ಸಾಕು ಬೆಳ್ತಿಗೆ ಅಕ್ಕಿ ಆದರಾಯಿತು."

ಉದ್ದು ಎಷ್ಟೂ? "

"ಅರ್ಧ ಲೋಟ ಇರಲಿ ಹತ್ತು ಕಾಳು ಮೆಂತೆಯೂ ಇರಲಿ ದೋಸೆಗೆ ಒಳ್ಳೆಯ ಕಲರ್ ಬರುತ್ತೆ. "


"ಅಮ್ಮ ಈಗ ವಿಷಯ ಏನೂ ಅಂದರೆ ಇಲ್ಲಿ ವಿಪರೀತ ಚಳಿ,   ದೋಸೆ ಹಿಟ್ಟು ಹುಳಿ ಬರುವ ಟೆಕ್ನಿಕ್ ಹೇಳಿ ಕೊಡು. "


ಹಾಗಂತೀಯ ಅಕ್ಕಿಗೆ ಕುದಿಯುವ ನೀರು ಎರೆದು ಮುಚ್ಚಿ ಇಡು ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ಮೂರೂ ನಾಲಕ್ಕು ಬಾರಿ ತೊಳೆದು ಅರೆಯಲಿಕ್ಕೆ ಉಪಯೋಗಿಸು. "


ಅಮ್ಮನೀರು ಕುದೀತಾ ಇದೆಅದಕ್ಕೇ ಅಕ್ಕಿ ಹಾಕಿ ಬಿಡ್ತೇನೆ.."

ಹಾಗೆ ಮಾಡಬೇಡ ಕುದಿಯುವ ನೀರನ್ನು ಅಕ್ಕಿಗೆ ಎರೆ..  "


 " ಹಾಗಾದ್ರೆ ಉದ್ದು ಕೂಡಾ ಬಿಸಿ ನೀರಿಗೆ ಹಾಕ್ಲಾ? "

"ಬೇಡ ಉದ್ದನ್ನು ತಣ್ಣೀರಿನಲ್ಲಿ ಒಂದೇ ಬಾರಿ ತೊಳೆದು ಪುನಃ ನೀರೆರೆದು ಇಡ್ತೀಯಲ್ಲ ನೀರನ್ನು ಚೆಲ್ಲಬಾರದು ಅರೆಯಲಿಕ್ಕೆ ಉದ್ದಿನ ನೀರು ಸಾಕು ಉದ್ದು ಅರ್ಧ ಗಂಟೆ ನೆನೆದರೆ ಸಾಕು. "


ಈಗಲೇ ಗಂಟೆ ಏಳು ಆಯ್ತು ಇನ್ನು ಅಕ್ಕಿ ಉದ್ದು ... "

ಚಿಂತೆಯಿಲ್ಲ ನಾನು ಹೇಳಿದಷ್ಟು ಮಾಡಿ ಎಂಟು ಗಂಟೆಯೊಳಗೆ ಅರೆದಿಡು ನುಣ್ಣಗೆ ಆಗಬೇಕು ಉಪ್ಪು ಹಾಕಿ ಬೆಚ್ಚಗಿನ ಜಾಗದಲ್ಲಿ ಇಡು.   ಫ್ರಿಜ್ ಒಳಗೆ ಇಡೂದಲ್ಲ ತಿಳೀತಾ. "


"ಸಂಜೆ ನಾಲ್ಕು ಗಂಟೆಗೇ ಅರೆದಿಟ್ಟರೆ ಉತ್ತಮ ಹೇಗೂ ವರ್ಕ್ ಫ್ರಂ ಹೋಮ್ ಅಲ್ವೇ? "

ಸರಿಮುಂದಿನ ಸಾರಿ ಹಾಗೇ ಮಾಡ್ತೇನೆ. "


ಮಾರನೇ ದಿನ ಮಂಜಾನೆ ನಾನು ತಿಂಡಿ ತಿನ್ನುತ್ತಿರಬೇಕಾದರೆ ವಾಟ್ಸಪ್ ನಲ್ಲಿ  ಮಧು ಮಾಡಿದಂತಹ ದೋಸೆಯ ಚಿತ್ರಗಳು ಬಂದುವು.

ವಾ... ಆಲೂ ಬಾಜಿಯೂ ಮಾಡಿದ್ದೀ.."

ಬಾಜಿ ಮೈತ್ರಿ ಮಾಡಿದ್ಳು..  ನಮ್ದು ಮಸಾಲೆ ದೋಸೆಯೇ ಆಗ್ಹೋಯ್ತು..  ಹಹ...  ಸಂಜೆಗೂ ನಾಲ್ಕೈದು ದೋಸೆ ಆಗುವಷ್ಟು ಹಿಟ್ಟುಉಳಿದಿದೆ. "