Pages

Ads 468x60px

Saturday 31 December 2011

ಒಂದೊಂದೇ ಎಲೆಯ ಒಂದೆಲಗ





ತೆಳ್ಳಗಿನ ಒಂದು ಕಾಂಡ. ತುದಿಯಲ್ಲಿ ಹೃದಯಾಕಾರದ ಒಂದೇ ಎಲೆ. ನೆಲದಲ್ಲಿ ತಾನೇ ತಾನಾಗಿ ಹರಡುವ ಈ ಸಸ್ಯರಾಶಿ ಕಂಗೊಳಿಸುವ ಹಸಿರು ಚಿಟ್ಟೆಗಳು. ಹೂಕುಂಡದಲ್ಲಿ ನೆಟ್ಟು ನೇತಾಡಿಸಿದರೂ ಮೋಹಕ. ಅಂಗಳದ ತುಳಸೀಕಟ್ಟೆಯಲ್ಲಿ ನೆಟ್ಟಿರೋ ಅದೇ ಒಂದು ಮೆರಗು!

ಸಂಸ್ಕೃತದಲ್ಲಿ ಮಂಡೂಕಪರ್ಣೀ, ಕನ್ನಡದಲ್ಲಿ ಒಂದೆಲಗ, ತುಳುವಿನಲ್ಲಿ ತಿಮಾರೆ, ಹಿಂದಿಯಲ್ಲಿ ಬ್ರಾಹ್ಮೀ , ತೆಲುಗಿನಲ್ಲಿ ಸರಸ್ವತೀ, ಇತ್ಯಾದಿ ಹೆಸರುಗಳು ಈ ಪುಟ್ಟ ಸಸ್ಯಕ್ಕೆ. ಸಸ್ಯಶಾಸ್ತ್ರದಲ್ಲಿ centella asiatica ಎಂಬ ಹೆಸರನ್ನೂ ಇದಕ್ಕೆ ದಯಪಾಲಿಸಿದ್ದಾರೆ. ಭಾರತ, ಶ್ರೀಲಂಕ, ಏಷ್ಯಾ ಇದರ ಮೂಲಸ್ಥಾನವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಚೀನಾ ಹಾಗೂ ಆಫ್ರಿಕಾಗಳಲ್ಲಿ ಇದು ಪಾರಂಪರಿಕ ಔಷಧಿಯಾಗಿ ಬಳಕೆಯಲ್ಲಿದೆ. ಸುಶ್ರುತ ಸಂಹಿತೆಯಲ್ಲಿಯೂ ಬ್ರಾಹ್ಮೀಯ ಉಲ್ಲೇಖವಿದೆ.
ಒಂದೆಲಗದ ವಿಶಿಷ್ಟ ರಾಸಾಯನಿಕ ಅಂಶಗಳು ಬೆಕೊಸೈಡ್ ಎ ಮತ್ತು ಬಿ. ಈ ರಾಸಾಯನಿಕಗಳು
ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿವೆ. ನರರೋಗಗಳಿಗೆ ಇದು ದಿವ್ಯೌಷಧಿಯೆಂದು ಆಯುರ್ವೇದದಲ್ಲಿ ಪರಿಗಣಿಸಿದ್ದಾರೆ.

ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.

ತಲೆಕೂದಲಿನ ರೋಮರಂಧ್ರಗಳನ್ನು ಬಲಪಡಿಸುವ ಗುಣವೂ ಇದಕ್ಕಿದೆ. ಎಲೆಗಳನ್ನು ಅರೆದು ತಲೆಕೂದಲ ಬುಡಕ್ಕೆ ಲೇಪಿಸಿ ಅರ್ಧ ಗಂಟೆ ಬಿಟ್ಟು ತೊಳೆದರೆ ತಲೆಹೊಟ್ಟು ನಿವಾರಣೆಯಾಗುವುದು. ಆಯುರ್ವೇದ ಕೇಶ ತೈಲದಲ್ಲೂ ಇದನ್ನು ಬಳಸುತ್ತಾರೆ.

ಕೇಶ ತೈಲ ಹೀಗೆ ತಯಾರಿಸಿ :

ಒಂದೆಲಗದ ಎಲೆಗಳನ್ನು ಕಾಂಡ ಸಮೇತವಾಗಿ ಕಿತ್ತು ಅರೆದು ರಸ ತೆಗೆಯಿರಿ. 1 : 1 ಪ್ರಮಾಣದಲ್ಲಿ ತೆಂಗಿನೆಣ್ಣೆ ಸೇರಿಸಿ ದಪ್ಪ ಬಾಣಲೆಯಲ್ಲಿ ಒಲೆಯ ಮೇಲಿಟ್ಟು ಮಂದಾಗ್ನಿಯಲ್ಲಿ ಕಾಯಲು ಬಿಡಿ. ಕುದಿಯಲು ಪ್ರಾರಂಭಿಸಿದ ನಂತರ ಸಣ್ಣ ಉರಿಯಲ್ಲಿರಲಿ. ಕುದಿಯುವ ಸದ್ದು ನಿಂತ ಮೇಲೆ ಅಂದರೆ ನೀರಿನಂಶ ಎಲ್ಲವೂ ಆರಿದ ನಂತರ ಇಳಿಸಿ ತಣಿಯಲು ಬಿಡಿ. ಶುದ್ಧವಾದ ಶೀಶೆಯಲ್ಲಿ ಹಾಕಿಡಿ. ಪ್ರತಿದಿನವೂ ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶವನ್ನು ಕಾಣುವಿರಿ.

ಒಂದೆಲಗದ ಜ್ಯೂಸ್ :
ಎಲೆಗಳಿಂದ ರಸ ತೆಗೆಯಿರಿ. ಉಪ್ಪು, ಕಾಳುಮೆಣಸಿನ ಹುಡಿ, ಸ್ವಲ್ಪ ನಿಂಬೆ ರಸ, ಅಗತ್ಯವಿದ್ದಷ್ಟು ನೀರು ಸೇರಿಸಿ. ಬೇಕಿದ್ದಲ್ಲಿ ಸ್ವಲ್ಪ ಹೊತ್ತು ಫ್ರಿಜ್ ಒಳಗೆ ಇಟ್ಟು ಕುಡಿಯಿರಿ. ಸಕ್ಕರೆ ಹಾಕಲಿಕ್ಕಿಲ್ಲ.

ಒಂದೆಲಗದ ಸೂಪ್ :
ಒಂದೆಲಗದ ರಸ, ಅನ್ನದ ಗಂಜಿ ನೀರು, ನಿಂಬೆರಸ, ರುಚಿಗೆ ಉಪ್ಪು, ಕಾಳುಮೆಣಸಿನ ಹುಡಿ ಹಾಕಿ ಕದಡಿಸಿ ಊಟಕ್ಕೆ ಮುನ್ನ ಸೇವಿಸಿ.

ಇನ್ನು ಒಂದೆಲಗದ ಚಟ್ನಿ , ತಂಬುಳಿ ಎಲ್ಲರಿಗೂ ಗೊತ್ತಿರುವಂತದ್ದೇ. ಇದರ ಸೇವನೆ ಜೀರ್ಣಶಕ್ತಿಗೆ ಸಹಕಾರಿ, ಎಸಿಡಿಟಿಯನ್ನೂ ಹೋಗಲಾಡಿಸುತ್ತದೆ. 2 ಚಮಚ ರಸವನ್ನು ಜೇನಿನೊಂದಿಗೆ ದಿನಕ್ಕೆ 3 ಬಾರಿಯಂತೆ ಸೇವಿಸುತ್ತಾ ಬಂದಲ್ಲಿ ಉರಿಮೂತ್ರದ ಸಮಸ್ಯೆ ಹೋದೀತು. ಮನೆಯ ಕೈದೋಟದಲ್ಲಿ ಇದಕ್ಕೆ ಒಂದು ಜಾಗ ಕೊಡುವಂತವರಾಗಿ.

ಇದನ್ನು ಬೇಯಿಸಿ ಅಡುಗೆಯಲ್ಲಿ ಉಪಯೋಗಿಸುವಂತಿಲ್ಲ, ಏನೇ ಮಾಡುವುದಿದ್ದರೂ ಹಸಿಯಾಗಿಯೇ ಹಗಲು ಹೊತ್ತಿನಲ್ಲಿ ಸೇವಿಸಬೇಕೆಂದು ನಮ್ಮ ಹಿರಿಯರ ನಿರ್ಣಯ. ಹಸಿ ತಂಬುಳಿಯನ್ನು ಕುದಿಸಿ ಇಡುವುದಾಗಲೀ, ರಾತ್ರಿ ಭೋಜನದೊಂದಿಗೆ ಸೇವಿಸುವುದಾಗಲೀ ನಿಷಿದ್ಧ.

ತಿಳಿಯಿತು ಒಂದೆಲಗ ,
ನಿನ್ನ ಉಪಯೋಗ,
ವಂದನೆ ಸಾಷ್ಟಾಂಗ.




ಒಂದೆಲಗದ ಚಟ್ಣಿ

ಟಿಪ್ಪಣಿ:  26/12/2015ರಂದು ಮುಂದುವರಿದಿದೆ.



ಹಸಿಯಾಗಿ ಅಂದ್ರೆ ಬೇಯಿಸದ ಅಡುಗೆಯಲ್ಲಿ ಮಾತ್ರ ಬಳಸಬೇಕಾದ ಒಂದೆಲಗವನ್ನು ಮುಂಜಾನೆಯ ತಿಂಡಿಗೊಂದು ಚಟ್ಣಿ ಆಗಲೇಬೇಕಲ್ಲ,  ಅಂತಹ ತೆಂಗಿನಕಾೖ ಚಟ್ಣಿ ಅರೆಯುವಾಗ ಹತ್ತಾರು ಒಂದೆಲಗದ ಎಲೆಗಳನ್ನೂ ಕೂಡಿಕೊಂಡು ಅರೆಯಿರಿ.  ಬೆಳಗಿನ ಜಾವ ಸೇವಿಸುವ ಲಾಭವೂ,  ಚಟ್ಣಿಗೊಂದು ವಿಶೇಷ ರುಚಿಯೂ ಬಂದಂತಾಯಿತು!   ಗಾಂಧಾರಿ ಮೆಣಸು ಇದ್ದರೆ ಇನ್ನೂ ಉತ್ತಮ,   ಹಿತ್ತಲ ಬೆಳೆಯಾಗಿ ಬೀಂಬುಳಿ, ಅಂಬಟೆಯಂತಹ ಹುಳಿ ಹಣ್ಣುಗಳು ಇದ್ದರಂತೂ ಕೇಳೋದೇ ಬೇಡ,  ನಮ್ಮ ಚಟ್ಣಿ ಆರೋಗ್ಯಕರ ಆಹಾರವೆಂದೇ ತಿಳಿಯಿರಿ.  ಚಟ್ಣಿಗಾಗಿ ಅರೆಯುವ ತೆಂಗಿನ ತುರಿ ಕೂಡಾ ನಿಸರ್ಗದ ಪರಿಶುದ್ಧ ಕೊಡುಗೆ ಎಂಬುದನ್ನೂ ಮರೆಯದಿರಿ.

ಇದನ್ನು ಏನೇ ಮಾಡುವದಿದ್ದರೂ ಹಸಿಯಾಗಿ ಹಾಗೂ ಹಗಲು ಮಾತ್ರ ತಿನ್ನಬೇಕೆಂಬ ಕಟ್ಟುಪಾಡು ಇದೆ,  ರಾತ್ರಿ ತಿನ್ನುವ ಹಾಗಿಲ್ಲ..
ಬ್ರಾಹ್ಮೀ ಅಂತ ಸುಮ್ಸಮ್ನೇ ಹೇಳ್ತಾರ... ಏನೋ ಕಾರಣ ಇರಲಿಕ್ಕೇ ಬೇಕು.  ಬ್ರಾಹ್ಮೀ ಹೆಸರು ಇನ್ನೊಂದು ಸಸ್ಯಕ್ಕೂ ಇದೆ.  ಅದನ್ನು ರಾತ್ರಿ ತಿನ್ನಬಹುದಾಗಿರಬಹುದು.  ಇದನ್ನು Bacopa monnieri ಅಂತಾರೆ...

ಬ್ರಾಹ್ಮೀ  ಹೆಸರಿನಲ್ಲಿ ಇನ್ಯಾವುದೋ ಸಸ್ಯ ಇದ್ದರೂ ನಮ್ಮ ಹಿರಿಯರು ಬಳಕೆಯಲ್ಲಿ ಒಂದೆಲಗವನ್ನೇ ಔಷಧೀಯ ಸಸ್ಯವನ್ನಾಗಿ ಪರಿಗಣಿಸಿರುವಾಗ,  ಇದುವರೆಗೂ ಕಂಡಿರದ ಬ್ರಾಹ್ಮಿಯ ಬಗ್ಗೆ ನಾನು ತಲೆ ಕೆಡಿಸಿಕೊಂಡಿದ್ದಿಲ್ಲ.   ಚೆನ್ನಾಗಿ ಗುರುತು ಪರಿಚಯ ಇರದ ಗಿಡಮೂಲಿಕೆಗಳ ಉಸಾಬರಿಗೇ ಹೋಗಬಾರದು.

    


ಬ್ರಾಹ್ಮೀ ಎಣ್ಣೆ

ಟಿಪ್ಪಣಿ:  8/1/2016ರಂದು ಮುಂದುವರಿದಿದೆ.



" ಬಸಳೇ ಚಪ್ಪರದ ಹತ್ತಿರ ಗರ್ಗ ಇರೂದು ಕಂಡಿದ್ದೀಯಾ,  ಎಣ್ಣೆ ಕಾಯಿಸಿ ಇಟ್ಕೋ.. "  ಗೌರತ್ತೆ ಹೇಳಿದ್ದು.

" ಹೌದಾ "  ನಾನೂ ಗಮನಿಸಿರಲಿಲ್ಲ.   ನೋಡಿದಾಗ ಒಣಕಲು ಕಡ್ಡಿಯಂತಿದ್ದ ಭೃಂಗರಾಜ ಗೋಚರಿಸಿತು.  " ಇದರಲ್ಲೇನು ಎಣ್ಣೆ ಆದೀತು...  ಉರಗೆಯಾದರೂ ಇದ್ದಿದ್ರೆ.... "  ಹಾಳಾದ್ದು ಒಂದೆಲಗವೂ ಕಾಣಿಸಲಿಲ್ಲ.  " ಅದಿದ್ರೆ ಇದಿಲ್ಲ,  ಇದಿದ್ರೆ ಅದಿಲ್ಲ..."

ಇರುವ ಭೃಂಗರಾಜದಿಂದ ಎಣ್ಣೆ ಮಾಡಿಕೊಳ್ಳಲು ತಕ್ಕಷ್ಟು ಒಂದೆಲಗವನ್ನಾದರೂ ಸಂಪಾದಿಸೋಣ ಎಂಬ ಬಯಕೆಯಿಂದ ಅಲ್ಲಿ ಇಲ್ಲಿ ಸುತ್ತಾಡುತ್ತ ನನ್ನ ಸವಾರಿ ಹೇಮಕ್ಕನ ಮನೆಯಂಗಳ ತಲಪಿತು.  ಅದೂ ಇದೂ ಮಾತನಾಡುತ್ತ ನನಗೆ ಬೇಕಾಗಿದ್ದ ಒಂದೆಲಗ ತುಸು ಸಿಕ್ಕೀತೇ ಎಂದು ವಿಚಾರಿಸಲಾಗಿ  " ಅಯ್ಯೋ ಬಿಡಿ,  ತಿಮರೆಸೊಪ್ಪು ಬೇಕಾದಷ್ಟು ಚಿವುಟಿ ಕೊಟ್ಟೇನು "  ಅಂದ್ಬಿಟ್ಟು ಬಟ್ಟೆ ಒಗೆಯೋ ಕಲ್ಲಿನ ಬಳಿ ಹರಡಿಕೊಂಡಿದ್ದ ಒಂದೆಲಗದ ಪರಿವಾರವನ್ನೇ ಕಿತ್ತೂ ಕಿತ್ತೂ ಕೊಟ್ರು ಹೇಮಕ್ಕ,  ಸಾಕು ಸಾಕೆನ್ನುತ್ತ ಮನೆಗೆ ಮರಳಿದ್ದೂ ಆಯ್ತು.  ಹಹ...

ಮನೆ ಹಿತ್ತಿಲಲ್ಲಿರುವ ಏಕೈಕ ಭೃಂಗರಾಜದ ಉಸಾಬರಿಯೇ ಬೇಡ,  ಈ ಒಂದೆಲಗದ್ದೇ ಎಣ್ಣೆ ಮಾಡಿಟ್ಕಳ್ಳೋಣ.   ಬೇರುಗೆಡ್ಡೆ ಸಹಿತವಾಗಿ ಕಿತ್ತಿದ್ದ ಒಂದೆಲಗವು ಚೆನ್ನಾಗಿ ತೊಳೆಯಲ್ಪಟ್ಟಿತು ಹಾಗೂ ಚಿಕ್ಕದಾಗಿ ಕತ್ತರಿಸಲ್ಪಟ್ಟಿತು.   ಮಿಕ್ಸಿಯಲ್ಲಿ ತಿರುವಿದ್ದೂ,  ರಸ ಹಿಂಡಿ ತೆಗೆದಿದ್ದೂ,  ಬಾಣಲೆಯಲ್ಲಿ ತೆಂಗಿನೆಣ್ಣೆ ಕೂಡಿ ನೀರಿನಂಶವೆಲ್ಲ ಆರುವ ತನಕ ಕುದಿಸಿದ್ದೂ,  ತಾಪ ಆರುವ ತನಕ ಕಾದಿದ್ದೂ,  ಜಾಲರಿ ತಟ್ಟೆಯಲ್ಲಿ ಶೋಧಿಸಿದ್ದೂ ,  ಶುಭ್ರವಾದ ಜಾಡಿಯಲ್ಲಿ ತುಂಬಿಸಿದ್ದೂ,  ಇದೀಗ ಬ್ರಾಹ್ಮೀ ಎಣ್ಣೆ ಎಂದು ಹೆಸರು ನೀಡಿದ್ದೂ ಆಯ್ತು.





ಹಸಿರು ಹಸಿರಾದ ಎಣ್ಣೆಯೇನೋ ಆಯ್ತು,  ಆದ್ರೂ ಭೃಂಗರಾಜನಿಲ್ಲದೇ ಆದೀತೇ,  ಮಳೆಗಾಲದ ಸಮಯದಲ್ಲೂ ಬೇಕಾದ ಸೊಪ್ಪುಗಳು ಸಿಗದೇ ಇರಲು ನಮ್ಮೆಜಮಾನ್ರ ಸ್ವಚ್ಛತಾ ಆಂದೋಲನವೇ ಕಾರಣವಾಗಿತ್ತು.  ಬೆಳಗಾದ್ರೆ ಸಾಕು,  ಬೀಸುಗತ್ತಿಯಿಂದ ಬೀಳುವ ಏಟಿಗೆ ಪರಿಸರದ ಸುತ್ತಮುತ್ತ ಇರುವ ಕಾಟಂಗೋಟಿ ಗಿಡಗಳೆಲ್ಲ ಧರಾಶಾಯಿಯಾಗ್ತವೆ.   ನಾನಂತೂ  " ಆ ಗಿಡ ಇರಲಿ,  ಈ ಹೂ ಚಂದ " ಅನ್ನುವುದನ್ನೇ ಬಿಟ್ಟಾಗಿದೆ.

ಇದಾಗಿ ಎರಡೇ ದಿನದಲ್ಲಿ ನೆರೆಯ ಪುತ್ತು ಬ್ಯಾರಿ ಮನೆಗೆ ಹೊಚ್ಚ ಹೊಸದಾದ ಟೀವಿ ಸೆಟ್,  ಅದೂ ದುಬೈಯಿಂದ ಮಗ ಕಳಿಸಿದ್ದು, ಬಂದಿತ್ತು.   ಊರಿಗೆಲ್ಲ ಟೀವಿ ಮೆಕ್ಯಾನಿಕ್ ಆಗಿರೋ ನಮ್ಮೆಜಮಾನ್ರು ಆ ಟೀವಿಯ ಠೀವಿಯನ್ನು ಖುದ್ದಾಗಿ ನೋಡಿ ಪರಿಶೀಲಿಸಿ ಸರ್ಟಿಫಿಕೇಟ್ ಕೊಡೋದು ಬ್ಯಾಡ್ವೇ?   ಹಾಗೇನೇ ನಮ್ಮವರು ಹೊರಟ್ರು.         

ಸಂಜೆಯ ಹೊತ್ತು,  " ನೀನೂ ಬಾ ..."  ಆಹ್ವಾನವೂ ಸಿಕ್ಕಿತು.   ಇಲ್ಲೇ ಹತ್ತಿರ,  ಕಾರಿನಲ್ಲಿ ಹೋದೆವು.   ಪುತ್ತು ಮನೆ ಮುಂದೆ ಕಾರು ನಿಂತಿತು.   ಮಳೆಗಾಲದ ವೈಭವವನ್ನು ಸಾರಿ ಹೇಳುವಂತೆ ಹಸಿರು ಬೆಳೆದಿತ್ತು.  ಈ ಹಸಿರಿನೆಡೆಯಲ್ಲಿ ಹೂವರಳಿ ನಿಂತಿರುವ ಭೃಂಗರಾಜ!

" ಆಹ...ಇದಪ್ಪ ಲಕ್ಕೀ ಚಾನ್ಸ್!   ಬಂದಿದ್ದು ಸಾರ್ಥಕ ಆಯ್ತು...."
ಮೊದಲಾಗಿ ನನಗೆ ಬೇಕಾದಷ್ಟು ಭೃಂಗರಾಜ ಅಂದ್ರೇ ನಮ್ಮೂರ ಭಾಷೆಯ ಗರ್ಗವನ್ನು ಚಿವುಟಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕಾರೊಳಗಿಟ್ಟು ಆನಂತರವೇ ಟೀವಿ ವೀಕ್ಷಣೆಗಾಗಿ ಮನೆಯೊಳಗೆ ಹೊಕ್ಕಿದ್ದು.

ಮಾರನೇ ದಿನ ಭೃಂಗರಾಜದ ರಸವೂ ತೆಂಗಿನೆಣ್ಣೆಯಲ್ಲಿ ಮಿಳಿತವಾಗಿ ಭೃಂಗರಾಜ ಎಣ್ಣೆ ತಯಾರಾಗಿ ಬಿಟ್ಟಿತು.   ಅದರೊಳಗೆ ಈ ಮೊದಲು ಮಾಡಿಟ್ಟ ಬ್ರಾಹ್ಮೀ ಎಣ್ಣೆಯೂ ಸೇರಿಕೊಳ್ಳಲಾಗಿ ಭೃಂಗರಾಜ ಬ್ರಾಹ್ಮೀ ಎಣ್ಣೆ ಸಿದ್ಧವಾಯ್ತು.