Pages

Ads 468x60px

Friday 31 October 2014

ಕನ್ನಡಕ್ಕೆ ಕೊಡುಗೆ - iPhone 6







" ಅಮ್ಮಾ,  ಐಫೋನ್6 ಬೇಗ ಬರುತ್ತೇ..."
" ಬರೂದೆಲ್ಲ ಬರಲೀ,   ಐಪಾಡ್ ಇದೆಯಲ್ಲ,  ಅದೇ ಸಾಕೂ ನಂಗೇ..."
" ಅಯ್ಯೋ,  ಅದು ಹಳೇದಾಯ್ತು,  ಈಗ ನೀನು ಏನ್ಮಾಡ್ಬೇಕೂ ಗೊತ್ತಾ.. "
" ಏನೂ "
" ಐಫೋನ್6 ಬಂದ ಕೊಡಲೇ ಅದನ್ನೇ ಉಪಯೋಗಿಸು "
" ಆಯ್ತಪ್ಪಾ ಆಯ್ತು,   ನನ್ನ ಕನ್ನಡ ಅದ್ರಲ್ಲಿ ಹೇಗೋ ಏನು ಕಥೆಯೋ..."
" ಎಲ್ಲ ಆಗುತ್ತೇ,  ಇದು ಮಾಮೂಲಿ ಫೋನ್ ಗಿಂತ ದೊಡ್ಡದು ತಿಳೀತಾ... ನಿನ್ನ ಬ್ಲಾಗಿಂಗ್ ಇನ್ನೂ ಚೆನ್ನಾಗಿ ಮಾಡ್ತೀಯ "
" ಹೌದ!  ನೋಡುವಾ ಮೊದಲು ಬರಲೀ "

ನಮ್ಮ ಮೆಸೆಂಜರ್ ಸಂಭಾಷಣೆ ನಡೆದು ವಾರವಾಗುವಷ್ಟರಲ್ಲಿ ಐಫೋನ್6 ಮನೆಗೆ ಬಂದೂ ಆಯಿತು.
ಏನೇ ಬರೆಯಬೇಕಿದ್ದರೂ ಸುಂದರವಾದ ಚಿತ್ರಗಳೇ ನನ್ನ ಸ್ಪೂರ್ತಿ.   ನಾಲ್ಕಾರು ಹೂಗಳ ಚಿತ್ರಗಳನ್ನು ಕ್ಲಿಕ್ಕಿಸಿ ಅದರ ಸೊಗಸನ್ನು ಸವಿಯುತ್ತಾ ನನಗೆ ಬೇಕಾಗಿದ್ದ ಫೊಟೋ ಎಡಿಟಿಂಗ್ apps ಗಳನ್ನೂ install ಮಾಡಿಟ್ಟು,  ಒಂದೆರಡು ಫೊಟೋಗಳನ್ನು ಫೇಸ್ ಬುಕ್ಕಲ್ಲಿ ತೋರಿಸಿ ಸಂಭ್ರಮಿಸಿದ್ದೂ ಆಯಿತು.

ಬೆಳಗಾಗುತ್ಲೂ ನಮ್ಮಜಮಾನ್ರು  " ನೋಡೇ ನಿನ್ ಕನ್ನಡ,  ಎಲ್ಲಿ ಬೇಕಾದ್ರೂ ಬರೆಯಬಹುದು "  ಅನ್ನೋದೇ.  ನನಗೋ ಮುಂಜಾನೆಯ ಮನೆಗೆಲಸದ ಒತ್ತಡ.  ಒಂದು ಹಂತದ ವಿರಾಮದ ವೇಳೆಯಲ್ಲಿ ಐಫೋನ್ ಹಿಡಿದು ಪರಿಶೀಲಿಸ ಹೊರಟರೆ ......

ಅರೆ ಇದೇನಚ್ಚರಿ
ಕೇಳೇ ನೀಳವೇಣೀ
ಕುಣಿದು ಕುಣಿದು ಬಾರೆ
ನಲಿದೂ ನಲಿದು ಬಾರೆ
ಬಂತೂ ಕನ್ನಡ ಅಕ್ಷರಮಾಲೆ
ಅನ್ನುವಂದದಿ  
ಕಮೆಂಟು ಬರೆದೆ
ಕಾಪೀ ಪೇಸ್ಟೂ ಕಿರಿಕಿರಿ ಇಲ್ಲದೆ.

ಫೇಸ್ ಬುಕ್ ಕಮೆಂಟು ಛಾಪಿಸಲು ಕನ್ನಡ ಕೀ ಬೋರ್ಡ್ ಎದುರು ಬಂದು ಕುಣಿಯಿತು.
ಟ್ವೀಟ್ ಹಕ್ಕಿ ಕನ್ನಡದ ಗರಿ ಬಿಡಿಸಿ ಬರೆಯಿತು.
ನೋಟ್ ಪ್ಯಾಡ್ ಬಿಡಿಸಿದೆನಾ,  ಇಲ್ಲೂ ಕನ್ನಡ ಡಿಂಢಿಮ.   
ಪೊಟೋ ಎಡಿಟಿಂಗ್ ಕಡೆ ತಿರುಗಿದೆನಾ,  " ಬಂದೇ ಅಕ್ಕಾ,  ಕನ್ನಡದ ಕುಂಚ ಹಿಡಿದು ನಿಂದೇ "  ಅಂದಿತು ಕನ್ನಡ ಕೀಲಿ ಮಣೆ.

 ಈ ಕೀ ಬೋರ್ಡ್ ನನಗೆ ಹೊಸತಲ್ಲ, ಹಿಂದೆಯೂ ಬಳಸುತ್ತಾ ಇದ್ದ ಐಪಾಡ್ ಕೀ ಬೋರ್ಡ್ ಇದೇ ಆಗಿತ್ತು.   ಅದನ್ನು install ಅಂದರೆ ಸ್ಥಾಪಿಸಿಕೊಳ್ಳಲು ಶುಲ್ಕ ಕಟ್ಟಬೇಕಾಗಿತ್ತು.   ಇಲ್ಲಿ ಆ ತೊಂದರೆಯಿಲ್ಲ.  ಇದು ಸಂಪೂರ್ಣ ಉಚಿತ ಕೊಡುಗೆ.   ಇದೊಂದೇ ಕೀ ಬೋರ್ಡ್ ಮಾತ್ರವಲ್ಲ,  ಬೇರೆ ಬೇರೆ ವಿನ್ಯಾಸದ ಕನ್ನಡ ಕೀಲಿಮಣೆಗಳು ಸಂಪೂರ್ಣ ಉಚಿತವಾಗಿ apps store ನಲ್ಲಿ ಲಭ್ಯವಿವೆ.   ಜಯ ಭಾರತ ಜನನಿಯ ತನುಜಾತೆ,  ಜಯಹೇ ಕರ್ನಾಟಕ ಮಾತೆ ... ಎಂದುಲಿಯಿತು ಮನ.   ಇದುವರೆಗೆ ಐಪಾಡ್ ಗೆ ಅಲಭ್ಯವಾಗಿದ್ದ ಕನ್ನಡಕ್ಕೆ ಸಂಬಂಧಿಸಿದ ಅದೆಷ್ಟೋ apps ಇಲ್ಲಿ ಉಚಿತವಾಗಿ ಲಭ್ಯವಿವೆ.   ಕನ್ನಡದ ಪುಸ್ತಕಗಳನ್ನೂ ಓದಬಹುದು. ಅವಶ್ಯವೆನಿಸಿದಲ್ಲಿ ಇಂಗ್ಲೀಷ್ ಕೂಡಾ ಛಾಪಿಸಿಕೊಳ್ಳಲೂ ಅಡ್ಡಿಯಿಲ್ಲ.   ಕನ್ನಡ ಮಾತ್ರವಲ್ಲ ಹತ್ತುಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಈ ಕೀ ಬೋರ್ಡ್.

ಆಸಕ್ತರಿಗೆ ಕನ್ನಡ ಬರಹದ apps ಹೀಗೆ ಪಡೆಯಬಹುದು
http://appshopper.com/utilities/kannada-keyboard








Posted via DraftCraft app

Saturday 25 October 2014

ನಮ್ಮೂರ ಕೋಡುಬಳೆ




ಮಗಳು ಪ್ರೈಮರಿ ಶಾಲೆಯಿಂದ ಹೈಸ್ಕೂಲಿಗೆ ಹೋಗಲು ಅಣಿಯಾಗಿದ್ದಳು.   ಅವಳಣ್ಣನ ಹುಕುಂ ಪ್ರಕಾರ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿಗೇ ಸೇರಿಯಾಗಿತ್ತು,  ಅದೂ ವಿಟ್ಲದಲ್ಲಿತ್ತು.   ಅವಳಣ್ಣ ಕನ್ನಡ ಶಾಲೆಯಲ್ಲಿ ಓದಿ,  ಕಾಲೇಜಿಗೆ ಸೇರಿದ ತಕ್ಷಣ ಹೇಳಿದ್ದು,   " ಇಂಗ್ಲೀಷಿನಲ್ಲಿ ಹೇಳುವ ಪಾಠಗಳು ಅರ್ಥವಾಗುವುದಿಲ್ಲ ".   ನಾವೂ ಕನ್ನಡವನ್ನೇ ಕಲಿತು ಕಾಲೇಜಿಗೆ ಹೋದವರಲ್ವೇ,   ಸಮಸ್ಯೆ ಅರ್ಥ ಮಾಡಿಕೊಂಡು ಪಾಠಪ್ರವಚನಗಳನ್ನು ಹೇಳಿಕೊಡಲು ನಾನೇ ಸಿದ್ಧಳಾಗಬೇಕಾಯಿತು.   ಯಾವಾಗ ಅಮ್ಮನೇ ಪಾಠ ಹೇಳಿಕೊಡಲು ಬಂದಳೋ,  ಅವನ ಹಿಂಜರಿಕೆ ತೊಲಗಿತು.

ತನಗಾದ ಕಷ್ಟ ತಂಗಿಗಾಗಬಾರದು ಎಂದೇ ಅವಳಣ್ಣ ಈ ಥರ ಅಪ್ಪಣೆ ಕೊಡಿಸಿದ್ದು.   ಅವಳೇನೋ ಹೈಸ್ಕೂಲ್ ಸೇರಿದಳು.   ದಿನ ಬೆಳಗಾದರೆ ಏಳು ಗಂಟೆಯ ಬಸ್ ಹಿಡಿದು ವಿಟ್ಲದ ಶಾಲೆ ತಲಪಬೇಕಿತ್ತು.   ಇದುವರೆಗೆ ಹೋಗುತ್ತಿದ್ದ ಮುಳಿಗದ್ದೆಯ ಹೆದ್ದಾರಿ ಶಾಲೆ ಮನೆಯಿಂದ ಕೂಗಳತೆ ದೂರದಲ್ಲಿದ್ದಿತು,   ಸಾವಕಾಶದಿಂದ ಒಂಭತ್ತು ಗಂಟೆಯ ನಂತರ ಮನೆ ಬಿಟ್ಟರೂ ಸಾಕಾಗುತ್ತಿತ್ತು.   

ಏಳು ಗಂಟೆಗೆ ಹೊರಡಬೇಕಾಗಿದ್ದರೆ ನಾನು ಐದು ಗಂಟೆಗೂ ಮುಂಚಿತವಾಗಿ ಎದ್ದು ತಿಂಡಿ ತಯಾರಿ, ಟಿಫಿನ್ ಬಾಕ್ಸ್,  ಸ್ನಾನದ ವ್ಯವಸ್ಥೆ,  ಯೂನಿಫಾರ್ಮ್,  ಓರಣವಾಗಿ ತಲೆ ಕೂದಲಿನ ಶೃಂಗಾರ.... ಒಂದೇ ಎರಡೇ ?   ಈ ಮಾದರಿಯ ಪಡಿಪಾಟಲು ಎಲ್ಲರ ಮನೇಲೂ ಇದ್ದಿದ್ದೇ ಅನ್ನಿ,  ಆಯ್ತು ಅಂತಾ ಉಸ್ಸೆಂದು ಕುಳಿತು ಗಂಟೆ ನೋಡಿದ್ರೆ ಇನ್ನೂ ಆರೂ ಮುಕ್ಕಾಲು.   ಏನಾಯ್ತೀಗ,  ಒಂದು ಹಂತದ ಮನೆಕೆಲಸವೆಲ್ಲ ಇವಳನ್ನು ಸ್ಕೂಲಿಗೆ ಕಳಿಸೋ ಹೊತ್ತಿಗೆ ಮುಕ್ತಾಯ.   ಟೀವಿ ನೋಡಲಡ್ಡಿಯಿಲ್ಲ,   ಮಗಳು ತಮಿಳುಪ್ರಿಯೆ.   ಕಲೈನಾರ್ ಚಾನಲ್ ಏನನ್ನೋ ಬೊಬ್ಬಿರಿಯುತ್ತಿತ್ತು.   ನಾನೂ ವಾಹಿನಿ ಬದಲಾಯಿಸದೆ ಹಾಗೇ ಕೂತಿದ್ದೆನಾ...

" ವಣಕ್ಕಂ "  ಅನ್ನುತ್ತಾ ಒಬ್ಬ ಮಧ್ಯವಯಸ್ಕ ಮಹಿಳೆ ಬಂದಳು.  " ಮಂಗಳ ಉಲಗಂ.... ಇದು ಮಂಗಳ ಉಲಗಂ.... " ಎಂದು ರಾಗ ಪ್ರಾರಂಭವಾಯಿತೇ, ಏನೋ ಕುತೂಹಲ,   ಅಡುಗೆ ಮನೆಯೂ ಎದುರಾಯಿತು.  ಅಡುಗೆ ಕಾರ್ಯಕ್ರಮ ನೋಡದಿದ್ದರೆ ಹೇಗೆ ?  ಅಡುಗೆ ಮಾಡಲು ತಲೆ ಹಣ್ಣಾದ ಇನ್ನೊಬ್ಬ ಮಹಿಳೆ ಬಂದು ನಿಂತರು.   ಆಕೆ ತಮಿಳಿನಲ್ಲೇ ವಾಗ್ದಾಳಿ ಮುಂದುವರಿಸಿದರೂ ನಮ್ಮ ದಕ್ಷಿಣ ಕನ್ನಡಿತಿ ಈಕೆ ಎಂದೇ ಮನ ತೀರ್ಪು ಕೊಟ್ಟಿತು.





" ಕೋಡುಬಳೆಯನ್ನು ಮಾಡುವ ವಿಧಾನ ತೋರಿಸಲಿದ್ದೇನೆ " ಅನ್ನುತ್ತಾ,  " ಕೋಡುಬಳೆ ಶಬ್ದ ಮೂಲತಃ ಕನ್ನಡದ್ದು ಹಾಗೂ ಇದು ಕರ್ನಾಟಕದ ತಿಂಡಿ "  ಅಂದು ಉದ್ದವಾಗಿ ಬತ್ತಿಯಂತೆ ಹೊಸೆದ ಹಿಟ್ಟಿನ ಎರಡು ತುದಿಗಳನ್ನು ಜೋಡಿಸಿ ಬಳೆಯ ಆಕಾರ ನೀಡುವಲ್ಲಿಗೆ   " ಇದು ಕೋಡುಬಳೆ " ಅಂದರು.

 ಓ, ಕೋಡುಬಳೆಯ ವ್ಯುತ್ಪತ್ತಿ ತಿಳಿದಂಗಾಯ್ತು.   ಆಕಾಶದಲ್ಲಿ ಕಾಮನಬಿಲ್ಲು ಮೂಡಿದಾಗ ನಾವೂ ಅನ್ನುವುದಿದೆ,  " ಆ ಕೋಡಿಯಿಂದ ಈ ಕೋಡಿವರೆಗೆ ಕಾಮನಬಿಲ್ಲು ಹೊಳೆಯುತ್ತಿತ್ತು ". ನರೇಂದ್ರ ಮೋದಿ ನಮ್ಮೂರಿಗೆ ಬಂದ್ರು ಅಂತಿಟ್ಕೊಳ್ಳಿ,  ಇತರರೊಂದಿಗೆ ಈ ಸುದ್ದಿ ಹಂಚಿಕೊಳ್ಳುವಾಗ  " ರಸ್ತೆಯಲ್ಲಿ ಏನು ಜನಾ,  ಆ ಕೋಡಿಂದ ಈ ಕೋಡಿವರೆಗೆ ವಾಹನಗಳ ಸಾಲು ಸಾಲು ".    ಈಗೀಗ ಹಳೇ ಧಾಟಿಯಲ್ಲಿ ಕನ್ನಡ ಮಾತು ಕೇಳುವುದೇ ದುರ್ಲಭ,  ಈಗಿನ ಮಕ್ಕಳಂತೂ ಭಾಷೆಯ ಹಂಗಿಲ್ಲದೆ ವ್ಯವಹರಿಸುವವರು.

ಆಕೆ ಕೇವಲ ಐದು ನಿಮಿಷದಲ್ಲಿ ಕೋಡುಬಳೆ ಮಾಡಿಟ್ಟು ಹೋದರು.   ನನಗೂ ಪ್ರತಿದಿನದ ವೀಕ್ಷಣೆಗೆ ಪುಟ್ಟ ಕಾರ್ಯಕ್ರಮವೂ ಸಿಕ್ಕಿತು.  ಆಗ ನಾನೇನೂ ಇಂಟರ್ನೆಟ್ ಹವ್ಯಾಸಿಯಾಗಿರಲಿಲ್ಲ.    ಕಂಪ್ಯೂಟರ್ ಇದ್ದ ಕಡೆ ತಲೆ ಹಾಕ್ತಾನೇ ಇರಲಿಲ್ಲ.  ಮಕ್ಕಳು ದಿನವಿಡೀ ವೀಡಿಯೋ ಗೇಮ್ಸ್ ಗಳಲ್ಲೇ ಮಗ್ನರಾಗಿರುತ್ತಿದುದರಿಂದ ಇದೂ ಒಂದು ಮಕ್ಕಳಾಟಿಕೆಯ ಸಾಧನ ಎಂದೇ ನನ್ನ ತೀರ್ಮಾನವಾಗಿತ್ತು.  

ಈಗ ನಾವೂ ಸಂಪ್ರದಾಯಬದ್ಧವಾದ ಕೋಡುಬಳೆ ತಯಾರಿಸೋಣ.
ಅಕ್ಕಿ ಹುಡಿ 3 ಕಪ್.
ಹಸಿ ತೆಂಗಿನ ತುರಿ ಒಂದು ಕಪ್,  ಒಣಕಲು ಕೊಬ್ಬರಿ ಆಗದು.
ತುಸು ಜೀರಿಗೆ,  ಸುವಾಸನೆಗೆ ತಕ್ಕಷ್ಟು.
2-3 ಹಸಿಮೆಣಸು,  ಗಾಂಧಾರಿ ಮೆಣಸು ಕೂಡಾ ಆದೀತು.
ರುಚಿಗೆ ಉಪ್ಪು.
ಕರಿಯಲು ತೆಂಗಿನೆಣ್ಣೆ ಯಾ ಅಡುಗೆ ಎಣ್ಣೆ,  ತೆಂಗಿನೆಣ್ಣೆ ಅತ್ಯುತ್ತಮ.

ಇನ್ನೇನು ಮಾಡಬೇಕು ?
ತೆಂಗಿನತುರಿ,  ಜೀರಿಗೆ,  ಮೆಣಸು, ಉಪ್ಪು ಇಷ್ಟನ್ನೂ ನೀರು ಹಾಕದೆ ಅರೆಯಿರಿ,   ಅರೆದ ಅರಪ್ಪನ್ನು ಅಕ್ಕಿಹುಡಿಯೊಂದಿಗೆ ಕಲಸಿರಿ.   ಅವಶ್ಯವಿದ್ದಷ್ಟೇ ನೀರು ಕೂಡಿಸಿ ಚಪಾತಿ ಹಿಟ್ಟಿನ ಥರ ಮಾಡಿಟ್ಟು ಅರ್ಧ ಘಂಟೆ ಮುಚ್ಚಿಡಿ.

ನೆಲ್ಲಿ ಗಾತ್ರದ ಹಿಟ್ಟನ್ನು ಅಂಗೈಯಲ್ಲಿ ತೆಗೆದು ಬತ್ತಿಯಂತೆ ಹೊಸೆಯಿರಿ.  ಅಂಗೈಯಿಂದ ತುಂಡಾಗಿ ಬೀಳದಿದ್ದಲ್ಲಿ ಕಲಸಿದ ಪ್ರಮಾಣ ಸರಿಯಾಗಿದೆ ಎಂದೇ ತಿಳಿಯಿರಿ.   ತುಂಡಾಗುತ್ತಿದೆಯಾದಲ್ಲಿ ಸ್ವಲ್ಪ ಅಕ್ಕಿಹುಡಿ ಸೇರಿಸಿ ಪುನಃ ಕಲಸಿ,   ಗೋಧಿಹುಡಿ ಒಂದೆರಡು ಚಮಚ ಸೇರಿಸಿದರೂ ಆದೀತು.

ಉರುಟಾಗಿ ಬಳೆಗಳಂತೆ ಜೋಡಿಸಿ ಇಟ್ಕೊಂಡಿರಾ,  ಈಗ ಬಾಣಲೆ ಒಲೆಗೇರಿಸಿ.
ಎಣ್ಣೆ ಬಿಸಿಯಾಯಿತೇ,  ಮಾಡಿಟ್ಟ ಕೋಡುಬಳೆಗಳು ಎಣ್ಣೆಗಿಳಿಯಲಿ.
ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ,  ಹೊಂಬಣ್ಣ ಬಂದಾಗ ತೆಗೆಯಿರಿ.
ಬಿಸಿಯಾರಿತೇ, ತಟ್ಟೆಯಲ್ಲಿ ಹಾಕಿಟ್ಟು ಬಿಸಿ ಚಹಾದೊಂದಿಗೆ ತಿನ್ನಿ.
ಉಳಿದುದನ್ನು ಜಾಡಿಯಲ್ಲಿ ತುಂಬಿಸಿ,  ನಾಳೆ ತಿನ್ನಬಹುದು.
ಸಾಧ್ಯವಿದ್ದರೆ ವಾರಕ್ಕಾಗುವಷ್ಟು ಮಾಡಿಟ್ಕೊಳ್ಳಿ,  ಕೆಡುವುದಿಲ್ಲ.



Posted via DraftCraft app

Saturday 18 October 2014

ಕೊಂಡಾಟದ ಅಡುಗೆ




ಸೌತೆ, ಕುಂಬಳ, ಸಿಹಿಗುಂಬಳದಂತಹ ತರಕಾರಿಗಳನ್ನು ಹೋಳು ಮಾಡುವಾಗ ತಿರುಳಿನಂಶ ತಗೆದು ಅಡುಗೆ ಮಾಡಿ   ಆಯ್ತೇ,   ತಿರುಳಿನಿಂದಲೂ ತೆಂಗಿನ ತುರಿ, ಸಾಸಿವೆ,  ಹಸಿಮೆಣಸಿನೊಂದಿಗೆ ಅರೆದು ಕಡೆದ ಮಜ್ಜಿಗೆ ಎರೆದು ಇಂತಹ ಸಹವ್ಯಂಜನ ತಯಾರಿಸಿ.   ಮುಳ್ಳುಸೌತೆ ತಿರುಳಿನಿಂದ ತಯಾರಿಸಿದ್ದು ಕೊಂಡಾಟ ಎಂಬ ಹೆಸರನ್ನು ಪಡೆದಿದೆ.   ಇನ್ನಿತರ ತರಕಾರೀ ತಿರುಳುಗಳಿಗೆ ಈ ಭಾಗ್ಯವಿಲ್ಲ,   ಸಾಸಿವೆ ಅಂದ್ಬಿಟ್ರಾಯ್ತು.

ಗೆಡ್ಡೆ ತರಕಾರಿ ಸ್ವಲ್ಪ ಇದೆ, ಪಲ್ಯ ಯಾ ರಸಂಗೆ ಸಾಲದು,  ಏನು ಮಾಡೋಣ?
ಹಳ್ಳಿಗಳಲ್ಲಿ ಮುಂಡಿಗೆಡ್ಡೆ ಏನೇನೋ ಅಡುಗೆ ಮಾಡಿದರೂ ತುಸು ಉಳಿಯುವಂತಹುದು.   ಈ ಚಿಕ್ಕ ತುಂಡನ್ನು ಇನ್ನಷ್ಟು ಚಿಕ್ಕದಾಗಿ ಕತ್ತರಿಸಿ,  ಮೇಲೆ ಹೇಳಿದ ಸಾಮಗ್ರಿಗಳೊಂದಿಗೆ ಅರೆದು ಮಜ್ಜಿಗೆ ಎರೆದು ಅನ್ನದೊಂದಿಗೆ ಸವಿಯಿರಿ.  ಕ್ಯಾರೆಟ್,  ಬೀಟ್ರೂಟುಗಳೂ ಆದೀತು. 

ಕೇವಲ ಒಂದೇ ಒಂದು ಬೆಂಡೆಕಾಯಿ ಇದೆ.   ಏನು ಮಾಡೋಣ?
ತೆಳ್ಳಗೆ ಕತ್ತರಿಸಿ,   ಜಿಡ್ಡು ಸವರಿದ ಬಾಣಲೆಯಲ್ಲಿ ಹುರಿದುಕೊಳ್ಳಿ,  ಹಸಿವಾಸನೆ ಹೋಗಿ ಗರಿಗರಿ ಆಯ್ತೇ,  ಕೆಳಗಿಡಿ.  ತೆಂಗಿನ ತುರಿ,  ಸಾಸಿವೆ ಮಜ್ಜಿಗೆಯಲ್ಲಿ ಅರೆದು ಸೇರಿಸಿ.   ರುಚಿಗೆ ಉಪ್ಪು,  ಬೆಲ್ಲವನ್ನೂ ಬೇಕಿದ್ದರೆ ಹಾಕಬಹುದು.  ಇದು ಬೆಂಡೆ ಸಾಸಿವೆ.  ಇದ್ಯಾವುದನ್ನೂ ಕುದಿಸಲಿಕ್ಕಿಲ್ಲ.  





ಕಿತ್ತಳೆ ಹಣ್ಣು ತಿಂದಾಯ್ತು.   ಸಿಪ್ಪೆಯಿಂದ ಅಚ್ಚುಕಟ್ಟಾದ ಗೊಜ್ಜು ಮಾಡೋಣ.
ಹಣ್ಣಾದ ಸಿಪ್ಪೆ ತುಂಡನ್ನು ಚಿಕ್ಕದಾಗಿ ಕತ್ತರಿಸಿ,  ಮಿಕ್ಸೀಗೆ ಹಾಕಿದ್ರೂ ಆದೀತು.
ಒಂದು ಲೋಟ ನೀರು
ರುಚಿಗೆ ತಕ್ಕಂತೆ ಉಪ್ಪು,  ಹುಳಿ,  ಬೆಲ್ಲ.
ಹುಳಿಗೆ ಬೀಂಬುಳಿಯೂ ಆದೀತು.
ಒಂದು ತಪಲೆಗೆ ಎಲ್ಲವನ್ನೂ ಹಾಕಿಕೊಳ್ಳಿ,  ಕುದಿಸಿ,  ಒಗ್ಗರಣೆ ಕೊಡಿ.







ಹೀರೇಕಾಯಿ ಸಿಪ್ಪೆ, ನಾರು ತೆಗೆದು ಪಲ್ಯವೋ ಸಾಂಬಾರೋ ಮಾಡಿ ತಿನ್ನುವುದು ಇದ್ದೇ ಇದೆ.  ಉಳಿಕೆಯಾದ ನಾರು ಸಿಪ್ಪೆಗಳನ್ನು ತಿಪ್ಪೆಗೆಸೆಯಬೇಕಾಗಿಲ್ಲ.  ಇವನ್ನು ಪುನಃ ಕತ್ತರಿಸಿ ಒಂದಿಷ್ಟು ನೀರೆರೆದು ಬೇಯಿಸಿ.  ಬೇಯುವಾಗ ಒಂದು ಹಸಿಮೆಣಸು ಅಥವಾ ಒಣಮೆಣಸೂ ಬೇಯಲಿ,  ಎರಡೆಸಳು ಬೆಳ್ಳುಳ್ಳಿ ಹಾಕಿಕೊಳ್ಳಿ.   ಬೆಂದ ಸಾಮಗ್ರಿಗಳನ್ನು ನೀರಿನಿಂದ ತೆಗೆಯಿರಿ.   ಒಂದು ಹಿಡಿ ಕಾಯಿತುರಿ,  ಉಪ್ಪು,  ಹುಳಿ, ( ಇದ್ದರೆ ಒಂದು ಬೀಂಬುಳಿ ) ಗಳೊಂದಿಗೆ ಅರೆದು ತೆಗೆಯಿರಿ.  ಪಚ್ಚಡಿ ಎಂದು ಕರೆಯಿರಿ.





ಒಂದೇ ಬಟಾಟೆ ಇದೆ.  ಏನು ಮಾಡೋಣ?
ಬಟಾಟೆಯನ್ನು ಮೆತ್ತಗೆ ಬೇಯಿಸಿ ತಣಿದ ಮೇಲೆ ಸಿಪ್ಪೆ ತೆಗೆದು ಚೆನ್ನಾಗಿ ನುರಿದು ಇಡಿ.
2 ಪುನರ್ಪುಳಿ ಹಣ್ಣಿನ ಒಣ ಸಿಪ್ಪೆ
ಚಿಕ್ಕ ತುಂಡು ಶುಂಠಿ
ಒಂದು ಹಸಿಮೆಣಸು
ನೀರು ಹಾಗೂ ಉಪ್ಪು, ಬೆಲ್ಲ ಹಾಕಿ ಕುದಿಸಿ ಮುಚ್ಚಿ ಇಡಿ.
ತಣಿದ ನಂತರ ಮಿಕ್ಸಿಗೆ ಹಾಕಿ ತಿರುಗಿಸಿ ಬಟಾಟೆ ಪುಡಿಯೊಂದಿಗೆ ಸೇರಿಸಿ ಕೋಕಂ ಬಟಾಟೆ ಬಜ್ಜಿ ಅಂದು ಬಿಡಿ.  ಒಗ್ಗರಣೆ ಕೊಟ್ಟು ಬಿಡಿ.



ಮೊಳಕೆ ಕಾಳು ಬೇಯಿಸಿಟ್ಟಿದ್ದು ಸ್ವಲ್ಪ ಮಿಕ್ಕಿದೆ,  ಏನು ಮಾಡೋಣ?

ಒಂದು ಚಿಕ್ಕ ಬೀಟ್ ರೂಟ್.   ತುಂಡು ಮಾಡಿ,  
2 ಪುನರ್ಪುಳಿ ಹಣ್ಣಿನ ಒಣ ಸಿಪ್ಪೆ
ಚಿಕ್ಕ ತುಂಡು ಶುಂಠಿ
ಒಂದು ಹಸಿಮೆಣಸು
ನೀರು ಹಾಗೂ ಉಪ್ಪು ಹಾಕಿ ಬೇಯಿಸಿ.
ಬೇಯಿಸಿಟ್ಟ ಮೊಳಕೆ ಕಾಳು ಸ್ವಲ್ಪ ( ಬೇಳೆಕಾಳು ಯಾವುದೂ ಆದೀತು,  ಹಲಸಿನ ಬೇಳೆಯೂ ಅಡ್ಡಿಯಿಲ್ಲ )
ತಣಿದ ನಂತರ ಮಿಕ್ಸಿಗೆ ಹಾಕಿ ತಿರುಗಿಸಿ,  ಒಗ್ಗರಣೆ ಕೊಡಿ.
ಸಿಹಿ ಬೇಕಿದ್ರೆ ಸಕ್ಕರೆ ಅಥವಾ ಬೆಲ್ಲ ಹಾಕಿಕೊಳ್ಳಿ.
 ಬೀಟ್ ರೂಟ್ ಗೊಜ್ಜು ಅಂತ ಹೆಸರಿಟ್ಟು ಅನ್ನ,  ಚಪಾತಿಗಳೊಂದಿಗೆ ಸವಿಯಿರಿ.   ಕೆಂಪು ಕೆಂಪಾದ ಈ ಗೊಜ್ಜು ಮಕ್ಕಳಿಗೂ ಇಷ್ಟವಾದೀತು.




ಒಂದು ಬದನೆ ಇದೆ,   ಏನು ಮಾಡೋಣಾ?
ಹಿಂದೆ ಅಡುಗೆಮನೆಯಲ್ಲಿ ಕಟ್ಟಿಗೆಯ ಒಲೆ ಇದ್ದ ಕಾಲದಲ್ಲಿ ಬದನೆಯನ್ನು ಒಲೆಯ ಬಿಸಿ ಕೆಂಡದಲ್ಲಿ ಸುಟ್ಟು ಬದನೆ ಗೊಜ್ಜು ಮಾಡ್ತಿದ್ದರು.   ಈಗ ಕುಕ್ಕರ್ ಒಳಗಿಟ್ಟು ಬೇಯಿಸಿ ತೆಗೆಯಿರಿ.   ಮೈಕ್ರೋವೇವ್ ಕೂಡಾ ಆದೀತು.   ಆರಿದ ನಂತರ ಸಿಪ್ಪೆ ತೆಗೆದು ಗಿವುಚಿ ಇಡಿ.  ಉಪ್ಪು,  ಹುಳಿ, ಬೆಲ್ಲಗಳ ದ್ರಾವಣ ಮಾಡಿಟ್ಟು ಬದನೆಗೆ ಬೆರೆಸಿ,  ಬೆಳ್ಳುಳ್ಳಿಯ ಒಗ್ಗರಣೆ ಕೊಡಿ.




ಲಿಂಬೆಹಣ್ಣಿನ ಶರಬತ್ತು ಮಾಡಿ ಉಳಿದ ಲಿಂಬೆ ಸಿಪ್ಪೆ ಇದೆಯಲ್ಲ,  ಇದನ್ನೂ ಅಡುಗೆಯಲ್ಲಿ ಉಪಯೋಗಿಸೋಣ.
ನಾಲ್ಕು ಪುನರ್ಪುಳಿ ಹಣ್ಣಿನ ಒಣಸಿಪ್ಪೆ ಹಾಗೂ ಲಿಂಬೆ ಕಡಿಯನ್ನು ಬೇಯಿಸಿ.
2 ಒಣಮೆಣಸು,  
1 ಚಮಚ ಕಡ್ಲೇ ಬೇಳೆ
2 ಚಮಚ ಕೊತ್ತಂಬರಿ
2 ಚಮಚ ಎಳ್ಳು
ತುಸು ಎಣ್ಣೆಪಸೆಯಲ್ಲಿ ಹುರಿಯಿರಿ.
ಬೇಯಿಸಿಟ್ಟ ಸಿಪ್ಪೆಗಳೊಂದಿಗೆ ನುಣ್ಣಗೆ ಅರೆಯಿರಿ.
ರುಚಿಗೆ ಉಪ್ಪು, ಬೆಲ್ಲ ಕೂಡಿಸಿ ಅವಶ್ಯವಿದ್ದ ಹಾಗೆ ನೀರೆರೆದು ಕುದಿಸಿ.   ಒಗ್ಗರಣೆ ಬೇಡ,  ಒಂದೆರಡು ಚಮಚ ತುಪ್ಪ ಎರೆದು ಬಿಡಿ.  ಈ ಗೊಜ್ಜು ಅಥವಾ ಸೂಪ್ ಊಟದೊಂದಿಗೆ ಕುಡಿಯಿರಿ,   ಅನ್ನದೊಂದಿಗೆ ಸುರಿಯಿರಿ.




ನೆಲಬಸಳೆ ಸಾಸಿವೆ
ನೆಲಬಸಳೆ ಕುಡಿಗಳನ್ನು ಕೈಯಲ್ಲಿ ಹಿಡಿಸುವಷ್ಟು ಚಿವುಟಿ ತನ್ನಿ.   ಹೂವರಳಿದ ಗಿಡದಿಂದ ಬೇಡ,  ಅದು ಬೆಳೆದಿರುತ್ತದೆ.   ಚಿಕ್ಕದಾಗಿ ಕತ್ತರಿಸಿ ತುಸು ಉಪ್ಪು ಹಾಕಿ ಬೇಯಿಸಿ.  ಮೈಕ್ರೋವೇವ್ ಉಪಯೋಗಿಸುವುದಾದರೆ ನೀರೆರೆಯುವುದೂ ಬೇಡ.  ಒಂದು ಹಿಡಿ ಕಾಯಿತುರಿಗೆ ತುಸು ಸಾಸಿವೆ,  ಒಂದೆರಡು ಗಾಂಧಾರಿ ಮೆಣಸು ಸೇರಿಸಿ ಅರೆಯಿರಿ.  ಅರೆಯುವಾಗ ನೀರು ಬೇಡ,  ಮಜ್ಜಿಗೆ ಹಾಕಿಕೊಳ್ಳಿ.   ಅರೆದ ಮಿಶ್ರಣವನ್ನು ಬೆಂದ ಸೊಪ್ಪು ತರಕಾರಿಗೆ ಕೂಡಿಸಿ,  ಕುದಿಸುವುದೂ ಬೇಡ,   ಸಿಹಿಗೆ ಬೆಲ್ಲ ಇರಲಿ,  ಒಗ್ಗರಣೆಯೇನೂ ಬೇಡ.


Posted via DraftCraft app

Saturday 4 October 2014

ಮಜ್ಜಿಗೆಯಿರಬೇಕು ಮನೆಯೊಳಗೇ....








ಬೆಳಗಾಗುತ್ತಿದ್ದಂತೆ ಮೊಸರನ್ನು ಮಜ್ಜಿಗೆಯಾಗಿಸುವ ಕಾಯಕ ಆಯಿತೇ,   ಒಂದು ಕಪ್ ಮಜ್ಜಿಗೆಯಲ್ಲಿ 3 ಚಮಚಾ ಮೆಂತ್ಯ ನೆನೆ ಹಾಕಿ ಇಟ್ಟುಕೊಳ್ಳಿ.  ಮೆಂತ್ಯ ನೆನೆದಷ್ಟೂ ಉತ್ತಮ. 
ಮದ್ಯಾಹ್ನ ಊಟವಾಯಿತೇ,  2 ಕಪ್ ಬೆಳ್ತಿಗೆ ಅಕ್ಕಿಯನ್ನು ನೀರು ಎರೆದಿಟ್ಟು ಬಿಡಿ.
ಮುಸ್ಸಂಜೆಯಾಯಿತೇ,  ನೆನೆದ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.
ನೆನೆದ ಮೆಂತ್ಯವನ್ನು ಮಜ್ಜಿಗೆ ಸಹಿತವಾಗಿ ನುಣ್ಣಗೆ ಅರೆಯಿರಿ,  ಬೇಕಿದ್ದರೆ ಸ್ವಲ್ಪ ಅಕ್ಕಿಯನ್ನೂ ಸೇರಿಸಿ ಅರೆಯಿರಿ.
ಮಿಕ್ಸೀಯಲ್ಲಿ ಅರೆಯಲು ಒಂದೇ ಬಾರಿ ಸಾಧ್ಯವಾಗುವುದಿಲ್ಲ,  ಉಳಿದ ಅಕ್ಕಿಯನ್ನು ಇನ್ನೊಮ್ಮೆ ಅರೆದುಕೊಳ್ಳಿ,  ಈವಾಗ ಒಂದು ಕಪ್ ನೆನೆದ ಅವಲಕ್ಕಿಯನ್ನೂ ಸೇರಿಸಿ ನುಣ್ಣಗಾಗಿಸಿ.
ಹಿಟ್ಟಿಗೆ ಉಪ್ಪು ಸೇರಿಸಿ ದೊಡ್ಡ ತಪಲೆಯಲ್ಲಿ ಮುಚ್ಚಿ 8 ಘಂಟೆಗಳ ಕಾಲ ಇರಿಸಿ.
ಮಾರನೇ ದಿನ ಹಿಟ್ಟು ಹುಳಿ ಬಂದಿರುತ್ತದೆ,  ಒಂದು ಕಪ್ ಹಾಲು ಸೇರಿಸಿ,  ಸೌಟಿನಲ್ಲಿ ಕಲಸಿ ದೋಸೆ ಎರೆಯಿರಿ
ಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಉದ್ದು ಬೇಕಿದ್ದವರು ಸೇರಿಸಿಕೊಳ್ಳಬಹುದು,  ಹೆಚ್ಚೇನೂ ಬೇಡ, ಒಂದು ಹಿಡಿ ಸಾಕು,   ಮೆಂತ್ಯದೊಂದಿಗೆ ಅರೆಯಿರಿ.   ಧಾನ್ಯಗಳು ನುಣ್ಣಗಾದ ನಂತರವೇ ಅಕ್ಕಿ ಅರೆಯುವುದು ಸರಿಯಾದ ವಿಧಾನ.   ಎಲ್ಲವನ್ನೂ ಒಂದೇ ತಪಲೆಯಲ್ಲಿ ನೆನೆ ಹಾಕಿಟ್ಟು ಒಂದೇ ಬಾರಿ ಅರೆಯುವ ಯಂತ್ರದೊಳಗೆ ತುಂಬಿಸಬಾರದು.





" ನಾಳೆ ತಿಂಡಿಗೇನು ಮಾಡ್ತೀಯ "

" ಉದ್ದಿನ ದೋಸೆ ಆದೀತಲ್ಲ "

" ಇವತ್ತು ಉದ್ದು,  ಮೆಂತೆ ಹಾಕಿದ್ದು ತಿಂದಾಯ್ತಲ್ಲ,  ನಾಳೆಯೂ ಉದ್ದು ಹಾಕಿದ್ದು ಬೇಡ "  ಗೌರತ್ತೆ ಅಂದಿದ್ದು. 

" ಮತ್ತೇನು ಮಾಡ್ಲೀ "

" ನೋಡೂ ಇದು ಸುಲಭದ್ದು.   ಉದ್ದು,  ಮೆಂತೆ ಏನೂ ಬೇಡ,  ಬರೇ ಅಕ್ಕಿ ಸಾಕು,  ಮಜ್ಜಿಗೆ ಉಂಟಲ್ವ.."

" ಹ್ಞೂಂ ಇದೆ "

" ಈಗ ಮಾಡಿದ ಬೆಳ್ತಿಗೆ ಅನ್ನ ಇಲ್ವಾ, ಕುಚ್ಚುಲಕ್ಕಿ ಅನ್ನವೂ ಆದೀತು,   ಅದನ್ನು ಎರಡು ಮುಷ್ಠಿ ತೆಗೆದಿಡು,   ಅಕ್ಕಿ ನೆನೆ ಹಾಕಿಡು,  2 ಗ್ಲಾಸ್ ಅಕ್ಕಿ ಸಾಕು "

ಗೌರತ್ತೆ ಮುಂದುವರಿಸಿದರು,  " ಅಕ್ಕಿ, ಮಜ್ಜಿಗೆ ಎರೆದು ಅರೆದಿಡೂದು,   ಹಿಟ್ಟು ತೆಗೆಯುವ ಮೊದಲು ಅನ್ನ ಹಾಕಿ ಎರಡು ಸುತ್ತು ತಿರುಗಿಸಿ ತೆಗೆದಿಡೂದು, ಉಪ್ಪು ಹಾಕಿಟ್ಟಿರು. ಅಗಲ ಬಾಯಿಯ ತಪಲೆ ಆಗ್ಬೇಕು, ಇಲ್ಲಾಂದ್ರೆ ಹುಳಿ ಬಂದ ಹಿಟ್ಟು ಹೊರ ಚೆಲ್ಲೀತು "

" ನಾಳೆ ಬೆಳಗ್ಗೆ ದೋಸೆ ಎರೆಯುವ ಮೊದಲು ಒಂದ್ಲೋಟ ಹಾಲು ಎರೆದು ಸೌಟು ಹಾಕಿ ತಿರುಗಿಸಿ ದೋಸೆ ಎರೆದ್ರಾಯ್ತು,   ಕವುಚಿ ಹಾಕೂದೇನೂ ಬೇಡ "

" ಸೌಟಿನಲ್ಲಿ ಹರಡೂದೂ ಬೇಡಾ,  ಏನೂ ಬೇಡ... ಹಾಗೇ ಸುಮ್ಮನೆ ಎರೆದದ್ದು ದಪ್ಪ ಬ್ರೆಡ್ ಥರ ಆಗುತ್ತೆ ನೋಡು "


<><><><><><>


ಗೌರತ್ತೆ ಹೇಳಿದಂತಹ ಮಜ್ಜಿಗೆದೋಸೆ ತಿಂದಾಯ್ತಲ್ಲ,   ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ಈ ಮಜ್ಜಿಗೆದೋಸೆ ಇನ್ನೂಂದು ರೂಪಾಂತರ ಪಡೆಯಿತು.   ಅದೇನಾಯ್ತೂಂದ್ರೆ ನಾವಿಬ್ಬರೇ ಮನೆಯಲ್ಲಿದ್ದುದರಿಂದ ಇಬ್ಬರಿಗೆ ಬೇಕಾದಷ್ಟೇ ಅಕ್ಕಿ ನೆನೆ ಹಾಕಿಟ್ಟು ಮಲಗುವ ಮುನ್ನ ಮಜ್ಜಿಗೆಯೊಂದಿಗೆ ಅರೆದಿಡೋಣ ಅಂತ ಇದ್ದ ಹಾಗೇ ಮಗಳು ಬಂದಳು.

ಇನ್ನೀಗ ದೋಸೆ ಹಿಟ್ಟು ಎರಡು ಸೌಟು ಜಾಸ್ತಿಯಾಗಬೇಕಿದೆ,  ಏನು ಮಾಡೋಣ ?  ನೆರವಿಗೆ ಬಂದಿದ್ದು ರಾಗಿ ಹುಡಿ.

ಸಾಮಗ್ರಿಗಳ ಅಳತೆ:
2 ಕಪ್ ಬೆಳ್ತಿಗೆ ಅಕ್ಕಿ
2 ಸೌಟು ಬೆಳ್ತಿಗೆ ಅನ್ನ
1 ಕಪ್ ರಾಗಿ ಹುಡಿ
1 ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ
1 ಕಪ್ ಹಾಲು
ರುಚಿಗೆ ಉಪ್ಪು.
ಅಂದ್ಕೊಂಡೇ ಇರಲಿಲ್ಲ ಕಣ್ರೀ,  ಇಷ್ಟು ಚೆನ್ನಾಗಿ ದೋಸೆ ಬರುತ್ತೇಂತ....  ಮಗಳ ಶಿಫಾರಸ್ಸೂ ಸಿಕ್ತು.









ಟೀವಿಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನೋಡ್ತಾ ಇದ್ದಾಗ ಕಲಿತ ತಿಂಡಿ ಇದು.   ಚಪಾತಿ, ಪೂರಿ ಮಾತ್ರ ಲಟ್ಟಿಸಿ ಗೊತ್ತಿದ್ದ ನನಗೆ ನಾನ್ ಎಂಬ ಹೊಸರುಚಿ ಮಾಡಬೇಕೆಂಬ ಉಮೇದು ಹುಟ್ಟಿತು.   ಮಗಳಿಗೆ ಮೈದಾ ಆಗದು,  ದೋಸೆಗೆ ತುಸು ಸೇರಿಸಿದ್ರೂ ಗೊತ್ತಾಗಿ ಬಿಡ್ತದೆ.   " ಮೈದಾ ಯಾಕೆ ಹಾಕಿದ್ದು ?"  ಎಂದು  ಸಿಡಿಸಿಡಿ ಮಾಡುವವಳು,   ಇದನ್ನು ತಿಂದಾಳೇ....

" ಹೇಳದಿದ್ದರಾಯಿತು,  ಗೊತ್ತಾದ ಮೇಲಲ್ವ...."
ಸರಿ,   ಯೀಸ್ಟ್ ಬೇಕಾಗಿತ್ತು.  ಅದನ್ನೂ ತರಿಸಿ 7-8 ಯೀಸ್ಟ್ ಹರಳುಗಳನ್ನು ಹಾಲಿನಲ್ಲಿ ಸಕ್ಕರೆಯೊಂದಿಗೆ ನೆನೆ ಹಾಕಿಟ್ಟು,  2 ಕಪ್ ಮೈದಾ ಹಾಕಿ ಪೂರಿ ಹಿಟ್ಟಿನಂತೆ ಕಲಸಿ,  ಮಾರನೇ ದಿನ ಲಟ್ಟಿಸಿ ಚಪಾತಿ ಥರ ಬೇಯಿಸಿ ತಿಂದಾಯಿತು.   ಇದನ್ನೇ ಎಣ್ಣೆಯಲ್ಲಿ ಕರಿದರೆ ಬಟೂರಾ ಎಂಬ ಇನ್ನೊಂದು ತಿಂಡಿಯೂ ಲಭ್ಯ.  ನಾನು ಎಣ್ಣೆಯಲ್ಲಿ ಕರಿದಿಲ್ಲ.   

ಯೀಸ್ಟ್ ಅನ್ನು ನಿಯಮಿತವಾಗಿ ತಿಂಡಿತಿನಿಸುಗಳಲ್ಲಿ ಬಳಸುತ್ತಿದ್ದರೆ ಆದೀತು,   ಉಪಯೋಗಿಸದೇ ಇಟ್ಟಲ್ಲಿ ಬೂಸ್ಟು ಹಿಡಿದು ಹಾಳಾಗುವಂಥದು.   ಸುಮ್ಮಸುಮ್ಮನೇ ತಿಂಡಿಗಳಿಗೆ ಯಾಕಾದರೂ ಯೀಸ್ಟ್ ಹಾಕೋಣ ? 
ಯೀಸ್ಟ್ ಹಾಕದೇ ನಾನ್ ಮಾಡೋಣ.

1 ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ,  ಹುಳಿ ಇದ್ದರೆ ಅರ್ಧ ಕಪ್ ಹಾಲು ಸೇರಿಸಿ.
ರುಚಿಗೆ ಸಕ್ಕರೆ ಹಾಗೂ ಉಪ್ಪು.
ಲಿಂಬೆ ಗಾತ್ರದ ಬೆಣ್ಣೆ,   ತುಪ್ಪವೂ ಆದೀತು, ಯಾವುದೂ ಇಲ್ಲವೇ,  ಅಡುಗೆಗೆ ಬಳಸುವ ಎಣ್ಣೆಯನ್ನೇ ಅರ್ಧ ಸೌಟು ಎರೆದುಕೊಳ್ಳಿ.
3 ಕಪ್ ಮೈದಾದೊಂದಿಗೆ ಮೇಲಿನ ಸಾಮಗ್ರಿಗಳನ್ನು ಕೂಡಿಸಿ ಮುದ್ದೆಕಟ್ಟಿ ಮುಚ್ಚಿ ಇಟ್ಕೊಳ್ಳಿ.
ರಾತ್ರಿ ಕಲಸಿದ್ದೀರಾ,  ಮುಂಜಾನೆಗೊಂದು ತಿಂಡಿ ಮಾಡಿಕೊಳ್ಳಬಹುದು.
ಬೆಳಗ್ಗೆ ಹಿಟ್ಟು ಕಲಸಿದ್ದೀರಾ,  ಸಂಜೆಗೊಂದು ತಿನಿಸು ಬಂದಿತು.
ಬೇಳೆಕಾಳುಗಳ ಕೂಟು ಅಥವಾ ರಸಂ ಜೊತೆ ಸವಿಯಿರಿ.
ಗಟ್ಟಿ ಮೊಸರು,  ಸಕ್ಕರೆ ಇದ್ದರೆ ಇನ್ನೂ ಚೆನ್ನ.




ಮಜ್ಜಿಗೆಯಿಂದ ಇಡ್ಲಿ ಮಾಡೋಣ.
2 ಕಪ್ ಸಜ್ಜಿಗೆ
1 ಕಪ್ ದಪ್ಪ ಮಜ್ಜಿಗೆ
ರುಚಿಗೆ ಉಪ್ಪು
ಒಗ್ಗರಣೆ ಸಾಹಿತ್ಯ:  ಎಣ್ಣೆ,  ಸಾಸಿವೆ,  ಉದ್ದಿನೇಳೆ,  ಕಡ್ಲೇಬೇಳೆ,  ನೆಲಕಡಲೆ,  ಗೋಡಂಬಿ,  ದ್ರಾಕ್ಷಿ,   ಒಣಮೆಣಸು,  ಕರಿಬೇವು.   ಇದೆಲ್ಲವನ್ನೂ ಹಾಕಬೇಕಾಗಿಲ್ಲ,   ಅವಶ್ಯವಿರುವ 2-3 ಐಟಂ ಸಾಕು.

ಚಿರೋಟಿ ರವೆಯನ್ನು ಹುರಿದುಕೊಳ್ಳಬೇಕಾದ ಅಗತ್ಯವಿದೆ.   ಮೈಕ್ರೋವೇವ್ ಇದ್ದವರು ಅದ್ರಲ್ಲೇ ಹುರಿದುಕೊಳ್ಳಿ.
ದಪ್ಪ ಸಜ್ಜಿಗೆಯನ್ನು ಹುರಿಯುವ ಅವಶ್ಯಕತೆಯಿಲ್ಲ.
ಮಜ್ಜಿಗೆಯನ್ನು ಒಂದು ತಪಲೆಗೆರೆದು ಉಪ್ಪು ಕೂಡಿಸಿ.
ಒಗ್ಗರಣೆ ಮಾಡಿ ಎರೆಯಿರಿ.
ಸಜ್ಜಿಗೆಯನ್ನೂ ಕೂಡಿಸಿ ಕಲಸಿಕೊಳ್ಳಿ.
ನೀರು ಕೂಡಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ.
ಚಿಟಿಕೆ ಅಡುಗೆ ಸೋಡಾ ಹಾಕಬಹುದು,  ಹಾಕದಿದ್ದರೂ ನಡೆಯುತ್ತದೆ.  
 ಇದು ದಿಢೀರ್ ಇಡ್ಲಿ,  ನಾಳೆಯ ತನಕ ಕಾಯಬೇಕಾಗಿಲ್ಲ.

ಇಡ್ಲಿ ಬೇಯಿಸುವ ಪಾತ್ರೆಗೆ ನೀರೆರೆದು ಕುದಿಯಲಾರಂಭಿಸಿದ ನಂತರವೇ ತಟ್ಟೆಗಳಲ್ಲಿ ಹಿಟ್ಟು ತುಂಬಿಸಿ ಒಳಗಿಡಬೇಕು.   ಸರಿಯಾಗಿ ಮುಚ್ಚಿ ಒಂದೇ ಹದನಾದ ಉರಿಯಲ್ಲಿ 7-8 ನಿಮಿಷ ಬೆಂದರೆ ಸಾಕು,  ಇಡ್ಲಿ ಆಯಿತು.  ನೀರಾವಿ ಹೊರ ಹೋಗುತ್ತಾ ಇರಬೇಕು,  ಉರಿಯನ್ನು ಕಮ್ಮಿ ಮಾಡಲೂ ಬಾರದು.

Posted via DraftCraft app

ಟಿಪ್ಪಣಿ: ದಿನಾಂಕ 25 ಫೆಬ್ರವರಿಯಂದು ಸೇರಿಸಿದ್ದು.   ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ  ಲೇಖನ