Pages

Ads 468x60px

Tuesday 15 March 2022

ಚಾಕುಬಾಳೆ ಪಲ್ಯ


 


ಇದೇನು ಕರ್ಮ  ಬಾಳೆಗೊನೆ ನೋಡಿದ್ರೆ... "  ನನ್ನ ಪಾಡಿಗೆ ಗೊಣಗಬೇಕಷ್ಟೇ.


ತೋಟ ನಿರ್ಮಲೀಕರಣ ಕ್ರಿಯೆ  ಆಗುತ್ತಿದ್ದಾಗ ಬಾಳೆಯೂ ಕ್ಲೀನ್ ಕ್ಲೀನ್.. ಆಗ್ಬುಟ್ಟಿದೆ ಮಾಡುವುದೇನಪ್ಪಾ ಅಂದರೆ ಮಳೆಗೆ ಬಿದ್ದ ಬಾಳೆಗಿಡ ಯಾ ಮರವನ್ನು ಚಕಚಕನೆ ಕತ್ತರಿಸಿ ಬಾಳೆಯ ಬುಡಕ್ಕೇ ಹಾಕುವುದು.   ಬಾಳೆಗೆ ಬಾಳೆಯೇ ಗೊಬ್ಬರ ಹೆಚ್ಚಿದ್ದರೆ ಅಡಿಕೆಮರದ ಬುಡಕ್ಕೂ ಹಾಕುವುದು ಬಾಳೆಯ ನಾರು ನೀರನ್ನು ಹೀರಿ ಅಡಿಕೆಯ ಬುಡ ಯಾವಾಗಲೂ ತೇವಾಂಶ ಹೊಂದಿರುವಂತೆ ಮಾಡುತ್ತೆ.

ಬುಡ ಸಹಿತವಾಗಿ ಮಗುಚಿ ಬಿದ್ದ ಗೊನೆ ಹಾಕಿದಂತಹ ಬಾಳೆಮರವನ್ನು ಬಿದ್ದ ನಂತರ ಮೇಲೆಬ್ಬಿಸಲಾಗುವುದಿಲ್ಲನಂತರ ಆ ಗೊನೆಯ ಬೆಳವಣಿಗೆಯೂ ಅಷ್ಟಕ್ಕಷ್ಟೇ ಬೀಳುವ ಮೊದಲೇ ಆಧಾರ ಕೊಟ್ಟರಾಗುತಿತ್ತು ಯಾವುದಕ್ಕೂ ತೋಟದೊಳಗೆ ಬೆಳಗಾದರೆ ಸಂಜೆಯಾಗುವ ತನಕ ಕತ್ತಿ ಪಿಕ್ಕಾಸಿ ಹಿಡಿದು ಶಿಸ್ತಿನ ಸಿಪಾಯಿಯಂತೆ ತಿರುಗಾಡಲಿಕ್ಕೆ ಜನ ಇದ್ದರಾದೀತು ಹೋಗಲಿ ಆ ವಿಷಯ ತೋಟದಲ್ಲಿರಲಿ.


ಗೊನೆ ಹಾಕಿದ ಬಾಳೆ ಬಿದ್ದು ಕಾಡು ಹಂದಿಯೋ ಇನ್ಯಾವುದೋ ಪ್ರಾಣಿಗೆ ಆಹಾರವಾಗಿ ಸಿಗದೇ ಉಳಿದರೆ ಇಂತಹ ಎಳೆಯ ಹಸಿರು ಬಾಳೆಕಾಯಿ ನಮಗೆ ದಕ್ಕೀತು ಅದೂ ತೋಟದಲ್ಲಿ ಕೆಲಸಗಾರರು ಇದ್ದುದರಿಂದ ಬಂದಿದೆ.   ಹಣ್ಣಾಗಲಾರದ ಬಾಳೆಕಾಯಿಗಳನ್ನು ನಮ್ಮಲ್ಲಿ ಚಾಕು ಬಾಳೆ ಎನ್ನುವ ವಾಡಿಕೆ.   ಇಂತಹ ಚಾಕುಬಾಳೆ ಗೊನೆ ಮನೆಯಂಗಳದ ಮೂಲೆಯಲ್ಲಿ ಯಾರೂ ಕೇಳುವವರಿಲ್ಲದೆ ಬಿದ್ದಿತ್ತು.   ನನಗೂ ಅಡುಗೆ ಮನೆಯಲ್ಲಿ ಟೊಮ್ಯಾಟೋ ಬಿಟ್ರೆ ಬೇರೇನೂ ಇಲ್ಲ.   ಈಗ ಸೆಕೆ ಬೇರೆ ಆರಂಭವಾಗಿದೆ ಟೊಮ್ಯಾಟೋ ಸಾರು ಹಾಗೂ ಚಾಕು ಬಾಳೆಯ ಪಲ್ಯ ಮಾಡಿಟ್ಟು ಬಿಡೋಣ.


ಅಮ್ಮಬೆಂಗಳೂರಲ್ಲಿ ಅಡುಗೆ ಮಾಡಲಿಕ್ಕೆ ಹಸಿರು ಬಾಳೆಕಾಯಿ ಸಿಗುತ್ತೆ... " ಎಂದ ಮಗರಾಯ.

ನಾನು ಈಗ ಬರೆಯು ಹೊರಟಿದ್ದು ನಮ್ಮ ತೋಟದ ಬಾಳೆಕಾಯಿ ವಿಷ್ಯ ತಿಳೀತಾ.. "


ಎಳೆಯ ಬಾಳೆಕಾಯಿ ಆಗಿರೋದ್ರಿಂದ ಕನರು ಯಾ ಚೊಗರು ಜಾಸ್ತಿ ಕತ್ತಿಯಿಂದ ಗೀರು ಹಾಕುವಾಗ ಒಸರುವ ರಸದಿಂದ ಕಲೆ ಗ್ಯಾರಂಟಿ. ಯಾವುದೇ ಸರ್ಫ್ ಈ ಕಲೆಯನ್ನು ತೆಗೆಯಲಾರದು.   ಬಾಳೆಕಾಯಿಯೊಂದಿಗೆ ವ್ಯವಹರಿಸುವಾಗ ಬೆಳ್ಳಗಿನ ಬಟ್ಟೆ ಹಾಕದಿರಿ.  

ಕಾಯಿಗಳನ್ನು ಹೆಚ್ಚುವಾಗಲೂ ಅಷ್ಟೇ,   ಬಾಳೆಕಾಯಿ ಸಿಪ್ಪೆಯ ನಾರು ಬಿಡಿಸುವಾಗ  ಕೈ ಬೆರಳುಗಳೂ ಕಪ್ಪಾದೀತು ಅದಕ್ಕಾಗಿ ಕೈಗಳಿಗೆ ತುಸು ತೆಂಗಿನೆಣ್ಣೆಯ ಪಸೆ  ಇರಬೇಕಾದ್ದು ಅವಶ್ಯ.   ಬಾಳೆಕಾಯಿ ಹೋಳುಗಳನ್ನು ನೀರು ತುಂಬಿದ ತಪಲೆಗೆ ಹಾಕಬೇಕು ಹಾಗೂ ಒಂದೆರಡು ಚಮಚ ಎಣ್ಣೆ ಎರೆಯಿರಿ ಈಗ ಪಾತ್ರೆಗೆ ಕಲೆ ಆಗುವ ಭಯ ಇಲ್ಲ.

ಪಲ್ಯಕ್ಕೆ ಸೂಕ್ತವಾಗುವಂತೆ ಚಿಕ್ಕದಾಗಿ ಕತ್ತರಿಸಿದ್ದಾಯಿತು.

ಬೇಯಿಸಲು ಕುಕ್ಕರ್ ಸೂಕ್ತ.

ನೀರು ಬಸಿದು ಕುಕ್ಕರ್ ಒಳಗೆ ತುಂಬಿಸಿದ್ರಾ ಈಗ ಹೊಸ ಹುಣಸೆಹುಳಿಯ ಕಾಲ ಸ್ವಲ್ಪ ಹುಣಸೆರಸ ಎರೆದುರುಚಿಗೆ ತಕ್ಕಷ್ಟುಉಪ್ಪು ಹೊಂದಿಸಿ ಬೇಯಲು ಬೇಕಾಗುವ ನೀರು ಮಿತ ಪ್ರಮಾಣದಲ್ಲಿ ಎರೆದು ಒಂದು ಸೀಟಿ ಕೂಗಿಸಿ.

ಹುಣಸೆಯ ರಸ ಹೋಳುಗಳನ್ನು ಕಪ್ಪು ಕಪ್ಪಾಗಲು ಬಿಡುವುದಿಲ್ಲ ಹಾಗಂತ ಹುಳಿ ಅತಿಯಾಗಿ ಹಾಕಲೂ ಬಾರದು ನಮ್ಮ ಪಲ್ಯ ಹುಳಿಹುಳಿ ಆಗಬಾರದು.

 ಸಮಯದಲ್ಲಿ ಅರ್ಧ ಕಡಿ ಕಾಯಿ ತುರಿಯಿರಿ.

ತುಸು ಜೀರಿಗೆ ಮತ್ತು ಅರಸಿಣ ಹುಡಿ ಕೂಡಿ ತರಿತರಿಯಾಗಿ ನೀರು ಹಾಕದೆ ಅರೆಯಿರಿ.

ಬಾಳೆಕಾಯಿ ಬೆಂದಿದೆ

ಪಲ್ಯಕ್ಕೆ ಒಗ್ಗರಣೆ ಹೇಗೆ?

ಸಾಸಿವೆಉದ್ದಿನಬೇಳೆ ಒಣಮೆಣಸಿನ ಚೂರುಗಳು ಹಾಗೂ ಕರಿಬೇವು ಮತ್ತು ಎಣ್ಣೆ.

ಒಗ್ಗರಣೆ ಆಯ್ತು ಅರೆದ ತೆಂಗಿನ ಮಸಾಲೆಯನ್ನೂ ಕೂಡಿಸಿ ಇನ್ನೊಂದಾವರ್ತಿ ಒಲೆಯ ಮೇಲಿಟ್ಟು ಸೌಟಾಡಿಸಿ ಪಲ್ಯದಲ್ಲಿ ನೀರಿನಂಶ ಏನೂ ಇರಬಾರದು ಕಾಯಿತುರಿಯೂ ಸಾಕಷ್ಟು ಬೆಚ್ಚಗಾದ್ರೇನೇ ರಾತ್ರಿಗೂ ಉಳಿದೀತು.

ರುಚಿಯಾದ  ಪಲ್ಯ ಸಂಜೆಯ ಚಹಾ ಜೊತೆಗೂ ಸೂಕ್ತ.

ಬಾಳೆಕಾಯಿಯೊಂದಿಗೆ ವ್ಯವಹರಿಸಲು ತಿಳಿದಿರಾದರೆ ವೈವಿಧ್ಯದ ಅಡುಗೆಗಳನ್ನು ಮಾಡಬಹುದಾಗಿದೆ.




ಬೆಂಗಳೂರಿಗೆ ಹೋಗಿದ್ದೆಮಗಳ ಮನೆಗೆ.

ಮಗಳ ಮಾವಕೃಷ್ಣಕುಮಾರ್ ನಮ್ಮ ಕುಂಬಳೆಯವರು ಊರಿನ ಭಾಷಾಜ್ಞಾನ ಉಳ್ಳವರಾದುದರಿಂದ,  "ಚಾಕು "  ಅರ್ಥವಿವರಣೆಯನ್ನು ಅವರಿಂದ ಗ್ರಹಿಸಬಹುದೆಂಬ ಅಪೇಕ್ಷೆ ನನ್ನದಾಗಿತ್ತು,  ಹಾಗೆಂದೇ ಬ್ಲಾಗ್ ಬರಹ ಇನ್ನೂ ಪ್ರಕಟಿತವಾಗದೇ ಉಳಿದಿತ್ತು.  ಕೃಷ್ಣಕುಮಾರ್ ನನ್ನ ಪ್ರಶ್ನೆಗೆ,  " ಅಕ್ಕ,  ಚಾಕು ಅನ್ನುವುದಲ್ಲ,  ಅದು ಚೀಕು.. "

"ಹೌದೇ ಚೀಕು ಅನ್ನೋ ಪದ ನಾನು ಕೇಳಿಯೇ ಇಲ್ಲ.. "

ಈಗೇನ್ಮಾಡೂದೂ.. ಚಿಂತೆಗಿಟ್ಟುಕೊಂಡಿತು.

ಈಗ ಯಾರಿಗೂ ಭಾಷೆ ಬೇಡನಮ್ಮ ಹವ್ಯಕರ ಆಡು ನುಡಿಯ ಎಷ್ಟೋ ಶಬ್ದಗಳು ಕಾಣೆಯಾಗಿವೆ ಅದರಲ್ಲಿ  ಚೀಕು ಕೂಡಾ ಒಂದು.."

 ಚೀಕು ಹವ್ಯಕ ಪದ ಹಾಗಾದ್ರೆ.. "



ಚಾಕು ಮಲಯಾಳದಲ್ಲೂ ಇದೆ ಗೋಣಿ ಎಂದರ್ಥ " ಎಂದಳು ಉಷಕ್ಕ.

ಕೇವಲ ಗೋಣಿ ರಾಶಿಗೆ ಚಾಕು ಅನ್ನುವುದಕ್ಕಿಲ್ಲ ಅದರಲ್ಲಿ ಅಡಿಕೆಯೋ ತೆಂಗಿನಕಾಯಿಯೋ ತುಂಬಿಸಿಟ್ಟಿರಬೇಕುಅಂದಾಗ ಮಾತ್ರ ಅದು  ಒರು ತೇಂಙಾ ಚಾಕ್ ' ಆಗುತ್ತದೆ. "  ರಾಮಕೃಷ್ಣ ತಿದ್ದಿದ.

ಅಂಗಡಿಯಲ್ಲಿ ಬಾಳೆಕಾಯಿ ವ್ಯಾಪಾರ ಮಾಡುವಾಗ " ಒಂದು ಚೀಪು ಬಾಳೆಕಾಯಿ ಕೊಡು.. " ಅನ್ನುವುದು ಎಂದ ರಾಮಕೃಷ್ಣ.

ಬಾಳೆಕಾಯಿ ಚಿಪ್ಪು ಅಂತ ಶುದ್ಧ ಕನ್ನಡದಲ್ಲಿ.. " ತಿದ್ದಿದರು ಉಷಕ್ಕ.

ಹೀಗೆಲ್ಲ ನಮ್ಮ ಪಟ್ಟಾಂಗ ಹಿರಣ್ಯ ದುರ್ಗಾಪರಮೇಶ್ವರಿ ದೇಗುಲದ ಭೋಜನಶಾಲೆಯಲ್ಲಿ ನಡೆಯಿತು  ದಿನ ಸಂಕ್ರಾಂತಿ ಇದ್ದಿತು.   ಅಡುಗೆ ಗಣಪಣ್ಣನೂ ಸೇರಿದಂತೆ ನೆರೆಕರೆಯ ಶಶಿಜಯಕ್ಕ ಎಲ್ಲರೂ ಮಾತುಕತೆಯನ್ನು ಆಲಿಸಿದವರು.  

ಗಣಪಣ್ಣ ಬಾಳೆಕಾಯಿ ಪಲ್ಯಕ್ಕೆ ನೀವು ಹುಳಿ ಹಾಕುವುದಕ್ಕಿಲ್ಲವೇ... "

ಹಾಕದೆ ಹೇಗೆ ಸ್ವಲ್ಪ ಮಜ್ಜಿಗೆ ಎರೆದ್ರೂ ಸಾಕು.. "