Pages

Ads 468x60px

Thursday 21 November 2019

ಕುಚ್ಚುಲಕ್ಕಿ ಅನ್ನ




" ಅಮ್ಮ, ಏನ್ ಮಾಡ್ತಾ ಇದ್ದೀ? "
" ಕುಚ್ಚುಲಕ್ಕಿ ಅನ್ನ ಮಾಡೂದನ್ನ ಬರೆಯೋಣಾಂತ.. "
" ಅಯ್ಯೋ, ಯಾರು ಓದ್ತಾರೇ.. ಯೂಟ್ಯೂಬಿನಲ್ಲೂ ಸಿಗುತ್ತೆ.. "
" ಇರ್ಲಿ ಬಿಡು, ನಾನು ಅಳತೆ ಲೆಕ್ಕಾಚಾರ ಎಲ್ಲ ಬರೆದಿಟ್ಟಾಗಿದೆ.."
ಕುಚ್ಚುಲಕ್ಕಿ ಪ್ರಿಯನಾದ ಮಧು ವಿಷಯಾಂತರಿಸಿ " ತಿಂಡಿಗೇನು ಮಾಡಿದೀಯ? " ಪ್ರಶ್ನೆ ಎಸೆದ.
" ಖರ್ಜೂರದ ದೋಸೆ, ಉಳಿದ ಹಿಟ್ಟಿಂದ ಸಂಜೆ ಅಪ್ಪ ಮಾಡೂದು. "
" ಆಯ್ತು, ನಂದು ಮೆಟ್ರೋ ಸ್ಟೇಶನ್ ಬಂತು, ಸಂಜೆ ಮಾತಾಡೋಣ. "




ನಾವು ಕುಚ್ಚುಲಕ್ಕಿ ಅನ್ನ ಮಾಡೋಣ.

ಕಟ್ಟಿಗೆಯ ಒಲೆಯಲ್ಲಿ ಬೇಯುವ ಕುಚ್ಚುಲಕ್ಕಿ, ಇಂದು ಕಾಲಧರ್ಮಕ್ಕನುಸಾರ ಬೇಯಿಸುವ ಮಾಧ್ಯಮವೂ ಬದಲಾಗಿದೆ. ಇಲೆಕ್ಟ್ರಿಕ್ ಉಪಕರಣದಿಂದ ಬೇಯಿಸ ಹೋದರೆ ಕರೆಂಟ್ ಬಿಲ್ ಕೂಡಾ ಯದ್ವಾತದ್ವಾ ಏರಿಕೆಯಾದೀತು.

ಗ್ಯಾಸ್ ಒಲೆ ಹಾಗೂ ಪ್ರೆಶರ್ ಕುಕ್ಕರ್ ನಮ್ಮ ಆಯ್ಕೆ.
5 ಲೀಟರ್ ಸಾಮರ್ಥ್ಯದ ಕುಕ್ಕರ್ ಇರಲಿ, ಒಳಗಿನ್ನೊಂದು ತಪಲೆ ಇಟ್ಟು ಅನ್ನ ಮಾಡುವಂತಿಲ್ಲ.
ನೇರವಾಗಿ ಕುಕ್ಕರ್ ಒಳಗೆ 3 ಲೀಟರ್ ನೀರು ಎರೆಯಿರಿ, ನೀರು ತುಸು ಜಾಸ್ತಿ ಎರೆದರೆ ಒಳ್ಳೆಯದು. ಮೂರೂವರೆ ಲೀಟರ್ ಅಂತಿಟ್ಕೊಳ್ಳಿ. ದೊಡ್ಡ ಉರಿಯಲ್ಲಿ ನೀರು ಕುದಿಯಲಿ.
2 ಲೋಟ ಕುಚ್ಚುಲಕ್ಕಿ ಅಳೆದು ತೊಳೆಯಿರಿ, 3ರಿಂದ ನಾಲ್ಕು ಬಾರಿ ತೊಳೆದು, ನೀರು ಬಸಿದು, ಕುದಿಯುತ್ತಿರುವ ನೀರಿಗೆ ಹಾಕಿರಿ. ಕುಕ್ಕರ್ ಮುಚ್ಚಿ ವೆಯಿಟ್ ಹಾಕಿರಿ.

ಕುಕ್ಕರ್ ಮೂರು ಸೀಟಿ ಹಾಕಿದ ಕೂಡಲೇ ಉರಿ ತಗ್ಗಿಸಿ.
15 ನಿಮಿಷಗಳ ನಂತರ ಗ್ಯಾಸ್ ನಂದಿಸಿ.
ಒತ್ತಡ ಪೂರ್ಣವಾಗಿ ಇಳಿದ ನಂತರವೇ ಮುಚ್ಚಳ ತೆರೆಯತಕ್ಕದ್ದು.
ಅನ್ನ ಚೆನ್ನಾಗಿ ಬೆಂದಿರುತ್ತದೆ. ಅನ್ನದ ಗಂಜಿನೀರು ಯಾ ತೆಳಿ ಬಸಿಯಬೇಕಾಗಿದೆ.

ಜಾಗರೂಕತೆಯಿಂದ ಇನ್ನೋಂದು ತಪಲೆ ಎದುರಿಗಿಟ್ಟು, ತಟ್ಟೆಯ ಸಹಾಯದಿಂದ ಬಗ್ಗಿಸಿ ಗಂಜಿ ಬಸಿಯಿರಿ. ಈ ಕಾರ್ಯಕ್ಕೆ ಸ್ವಲ್ಪ ಅನುಭವವೂ ಬೇಕಾಗುತ್ತದೆ.

ಇದು ಸಾಧ್ಯವಾಗದ ಕಾರ್ಯ ಎಂದಾದರೆ ತೂತಿನ ತಪಲೆಗೆ ಬಸಿದು ಅನ್ನ ಮಾಡಿಕೊಳ್ಳಬಹುದು, ಜಾಲರಿ ಸಟ್ಟುಗದಲ್ಲಿ ಅನ್ನ ಹಾಗೂ ಗಂಜಿ ಬೇರ್ಪಡಿಸಿಕೊಳ್ಳಬಹುದು.

ಅನ್ನ ಎಂದೆನ್ನಿಸಿಕೊಳ್ಳಬೇಕಾದರೆ ತೆಳಿ ಯಾ ಗಂಜಿ ಏನೂ ಇರಕೂಡದು.

ಈಗ ನಾವು ಎರೆದ ನೀರಿನ ಪ್ರಮಾಣದಲ್ಲಿ ಗಂಜಿ ನೀರು 2 ಲೀಟರ್ ಇರಬೇಕು.
ಬೇಯಿಸಲು ಎರೆದ ನೀರಿನ ಪ್ರಮಾಣ ಕಡಿಮೆಯಾದರೆ ಮಡ್ಡಿಯಂತೆ ಇಲ್ಲವೇ ಮುದ್ದೆಯಂತೆ ಆದೀತು. ಗಂಜಿ ಬಸಿಯಲೂ ಸಾಧ್ಯವಾಗದು. ಹಾಗೇನೇ ಗಂಜಿಯೂಟ ಎಂದು ಉಣ್ಣಬೇಕಾದೀತು.

ಕುಕ್ಕರ್ ಉತ್ತಮ ಸ್ಥಿತಿಯಲ್ಲಿ ಇರಬೇಕು, ಲೀಕೇಜ್ ಯಾ ಸೋರುವಿಕೆ ಇರಬಾರದು.
ಪದೇ ಪದೇ ವಿಸಿಲ್ ಹಾಕುತ್ತ ಇರಬಾರದು, ಅನ್ನವೂ ಗಂಜಿಯೂ ಮೇಲೆ ಉಕ್ಕಿ ಹರಿದೀತು.
ಕುಕ್ಕರ್ ಒಳಗೆ ತಪಲೆಯಿಟ್ಟು ಬೇಯಿಸುವ ಕ್ರಮ ಕುಚ್ಚುಲಕ್ಕಿಗೆ ಸಾಧ್ಯವಾಗದು.

ಕಟ್ಟಿಗೆಯ ಒಲೆಯಲ್ಲಿ ನಿಧಾನವಾಗಿ ಬೇಯುವ ಕುಚ್ಚುಲಕ್ಕಿ ನಮ್ಮ ಒತ್ತಡದ ಹಾಗೂ ವೇಗದ ಜೀವನಶೈಲಿಯಿಂದಾಗಿ ನಮ್ಮಿಂದ ದೂರವಾಗುತ್ತಿದೆ.

ನಾವು ದಕ್ಷಿಣ ಕನ್ನಡಿಗರು, ಜಗತ್ತಿನ ಯಾವ ಮೂಲೆಗೆ ಹೋದರೂ ಕುಚ್ಚುಲಕ್ಕಿ ಅನ್ನವನ್ನು ತಿಂದೇ ಸಿದ್ಧ ಎಂಬ ಜಾಯಮಾನದವರು. ನನ್ನ ಮಕ್ಕಳ ವಯೋಮಾನದವರಿಗೆ ಇಷ್ಟವಾದೀತು ಎಂದು ಈ ಬರಹ ಬಂದಿದೆ.

ಅನ್ನದ ತೆಳಿಯನ್ನು ಚೆಲ್ಲಬೇಕಿಲ್ಲ,
ಉಪ್ಪು ಬೆರೆಸಿ ಕುಡಿಯಿರಿ.
ಹಸಿಮೆಣಸು ನುರಿದು, ಮಜ್ಜಿಗೆ ಎರೆದು ಕುಡಿಯಿರಿ.
ದೇಹಕ್ಕೆ ಹಿತವಾಗಿ ಉಲ್ಲಾಸದಾಯಕ.
ಅಕ್ಕಿಯಲ್ಲಿರುವ ಜೀವ ಪೋಷಕ ದ್ರವ್ಯಗಳು ತೆಳಿ( ಗಂಜಿ )ಯಲ್ಲಿಯೂ ಇರುವುದರಿಂದ ರುಚಿಕರವಾಗಿಸಿ ಎಳೆಯ ಮಕ್ಕಳಿಗೂ ಕುಡಿಸಿರಿ.



ಟಿಪ್ಪಣಿ: ಈ ಬರಹಕ್ಕೆ ಪೂರಕ ಪ್ರತಿಕ್ರಿಯೆ ಬಂದಿದೆ. ಅನ್ನದ ಗಂಜಿ ಬಸಿಯುವ ಸುಲಭ ವಿಧಾನ ಹೀಗಿದೆ.
ಒತ್ತಡ ಇಳಿದ ನಂತರ ಮುಚ್ಚಳ ತೆಗೆದು ಗ್ಯಾಸ್ಕೆಟ್ ತೆಗೆದು ಪುನಃ ಮುಚ್ಚಿ , ಇನ್ನೊಂದು ತಪಲೆಗೆ ಬಗ್ಗಿಸಿ ಹಿಡಿಯಿರಿ. ಗಂಜಿನೀರು ಮಾತ್ರ ಇಳಿದು ಹೋಗುತ್ತದೆ. ಅನ್ನ ಬೀಳುವ ಭಯವೇ ಇಲ್ಲ, ಹಿಡಿದುಕೊಳ್ಳಲು ಕುಕ್ಕರಿನ ಹಿಡಿಕೆಯೇ ಇರುವುದರಿಂದ ಕೈ ಬಿಸಿ ಆಗಲಾರದು.




Saturday 9 November 2019

ದೋಸೆಯ ಅಪ್ಪ!




ಉದ್ದಿನ ದೋಸೆಯ ಹಿಟ್ಟು ಉಳಿಯಿತು, " ಸಂಜೆ ಪುನಃ ಎರೆದರೆ ಮಗಿದೀತು.."
ನನ್ನ ಸ್ವಗತ ಗೌರತ್ತೆ ಕಿವಿಗೆ ಬಿತ್ತು, " ಮಕ್ಕಳು ಬಂದಿರುವಾಗ ಸಂಜೆಗೂ ಚೊಂಯ್ ಅಂತ ದೋಸೆ ಮಾಡ್ತಾ ಇರು.." ಗೊಣಗಿದ್ದೂ ನನ್ನ ಕಿವಿ ತನಕ ಬಂತು.

ಅಪ್ಪದ ಗುಳಿಕಾವಲಿ ಕೆಳಗಿಳಿಯಿತು. ಚೆನ್ನಾಗಿ ಒರೆಸಿ, ವಿಮ್ ಲಿಕ್ವಿಡ್ ಹಾಕಿ ತೊಳೆದು, ನೀರ ಪಸೆ ಆರಲು ಕವುಚಿ ಇಟ್ಟಾಯ್ತು.

ಸಂಜೆಯ ಹೊತ್ತು, ಅಪ್ಪದ ಗುಳಿಕಾವಲಿ ಒಲೆಯ ಮೇಲೇರಿತು. ಎಣ್ಣೆ ಅಂದ್ರೆ ಹಪ್ಪಳ ಹುರಿದ ಎಣ್ಣೆ ಯಾ ಅಡುಗೆಯಲ್ಲಿ ಒಂದೆರಡು ಬಾರಿ ಬಳಸಲ್ಪಟ್ಟ ಎಣ್ಣೆಯನ್ನು ಪುಟ್ಟದೊಂದು ಚಮಚದಲ್ಲಿ ತುಂಬಿ ಗುಳಿಗಳ ಒಳಗೆ ಎರೆದು...

" ತುಪ್ಪವನ್ನೇ ಎರೆ.. " ಗೌರತ್ತೆಯ ಆರ್ಡರ್ ಬಂತು.
ಸರಿ, ನಾವು ತುಪ್ಪವನ್ನೇ ಎರೆದು,
ದೋಸೆಹಿಟ್ಟನ್ನು ಸೂಕ್ತ ಪ್ರಮಾಣದಲ್ಲಿ ಗುಳಿಗಳಿಗೆ ತುಂಬಿಸಿ, ಮುಚ್ಚಿ ಬೇಯಿಸುವುದು.
ಚೂರಿಯ ಮೊನೆಯಿಂದ ಎಬ್ಬಿಸಿ, ತುಪ್ಪ ಎರೆದು ಕವುಚಿ ಹಾಕುವುದು, ಜಾಸ್ತಿ ಎರೆಯದಿರಿ, ಗುಳಿ ಒಣಗಿದಂತಿರಬಾರದು.
ಎರಡೂ ಬದಿ ಸಮಾನವಾಗಿ ಬೆಂತಪ್ಪ
ತಟ್ಟೆಗೆ ಹಾಕ್ಕೊಂಡು ತಿನ್ನುದಪ್ಪ
ಟೊಮ್ಯಾಟೋ ಪುಳಿಂಜಿ ಇತ್ತಪ್ಪ
ಕೂಡಿಕೊಂಡು ತಿಂದೆವಪ್ಪ
ದೋಸೆಯ ಅಪ್ಪ
ಬಲು ಚೆನ್ನಾಗಿತ್ತಪ್ಪ

"ಹೌದೂ, ದೋಸೆ ಹಿಟ್ಟು ಯಾವ ನಮೂನಿದೂಂತ ಹೇಳಿರಲ್ಲ.. "

1 ಅಳತೆ ಉದ್ದಿನ ಬೇಳೆ
1 ಅಳತೆ ಹೆಸ್ರು ಬೇಳೆ
2 ಚಮಚ ಮೆಂತೆ
2 ಅಳತೆ ಬೆಳ್ತಿಗೆ ಅಕ್ಕಿ

ಬೇಳೆಗಳನ್ನೂ ಅಕ್ಕಿಯನ್ನೂ ಬೇರೆ ಬೇರೆಯಾಗಿ ತೊಳೆದು ನೆನೆಸಿಡುವುದು.
ಸಂಜೆಯ ಹೊತ್ತು ಅರೆಯಿರಿ.
ಬೇಳೆಗಳನ್ನು ಮೊದಲು ನುಣ್ಣಗೆ ಅರೆದು,
ಅಕ್ಕಿಯನ್ನೂ ಅದೇ ಪ್ರಕಾರವಾಗಿ ನುಣ್ಣಗೆ ಅರೆದು,
ರುಚಿಗೆ ಉಪ್ಪು ಕೂಡಿಸಿ, ಬೆರೆಸಿ ಹುದುಗು ಬರಲು ಬೆಚ್ಚನೆಯ ಜಾಗದಲ್ಲಿ ಮುಚ್ಚಿ ಇರಿಸುವುದು.
ಮುಂಜಾನೆ ದೋಸೆ ಎರೆದದ್ದು, ಸಂಜೆಗೆ ಅಪ್ಪವಾಯಿತು.
ಇಡ್ಲಿ ಹಿಟ್ಟು ಮಿಕ್ಕಿದ್ದರೆ ಅದೂ ಆಗುತ್ತೆ ಇಡ್ಲಿಯ ಅಪ್ಪ.

ನಮ್ಮ ವಿಶಾಲ ಕರ್ನಾಟಕ ವ್ಯಾಪ್ತಿಯಲ್ಲಿ ಈ ಸಂಜೆಯ ತಿನಿಸು ತರಹೇವಾರಿ ಹೆಸರುಗಳನ್ನು ಹೊಂದಿದೆ. ಪನಿಯಾರಮ್, ಪಡ್ಡು, ಗುಳಿಯಪ್ಪ, ಗುಂಡಪೊಂಗಲು, ಅಪ್ಪಂ.. ಈ ಥರ.

ಅಂದ ಹಾಗೆ ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು ಬೆರೆಸಿ ಅಪ್ಪ ಮಾಡುವುದು ರೂಢಿಯ ಕ್ರಮ. ಹೀಗೆ ಮಾಡಿದಿರಾದರೆ ಮೊಸರಿನೊಂದಿಗೆ ಸವಿಯಿರಿ, ಉದ್ದಿನ ವಡೆಯಂತೆ ಸ್ವಾದಿಷ್ಟವಾಗಿರುತ್ತದೆ.



Monday 4 November 2019

ಖರ್ಜೂರದ ಸವಿತಿನಿಸು




" ದೀಪಾವಳಿಗೆ ಏನೂ ಸಿಹಿ ಮಾಡಿಲ್ವ? "
" ಮಾಡದೇ ಉಂಟೇ, ತಿಂದೂ ಮುಗೀತು. ನಾಳೆ ಮಗಳು ಬರ್ತಿದಾಳೆ.. "
" ಗಮ್ಮತ್ತು ಮಾಡಲೇ ಬೇಕಲ್ಲ.. "
" ಹೊಸ ರುಚಿ ಮಾಡಿ ಇಡುವುದು"
" ಖರ್ಜೂರ ತಂದಿದೆ, ಹಲ್ವವಾಗಿ ಪರಿವರ್ತನೆ ಹೊಂದಲಿದೆ. "
" ಸರಿ ಬಿಡಿ, ಮಾಡೋ ವಿಧಾನ ನಮಗೂ ಸ್ವಲ್ಪ ತಿಳಿಸ್ಕೊಡಿ. "

ಖರ್ಜೂರದ ಪ್ಯಾಕೆಟ್ ಕೈಗೆತ್ತಿಕೊಂಡಾಗ ಮೂಲೆಯಲ್ಲಿದ್ದ ಹಣ್ಣು ಹಣ್ಣಾದ ಬಾಳೆಗೊನೆ ಮಿಕಿಮಿಕಿ ನೋಡಿತು.
ಬಾಳೆಹಣ್ಣನ್ನು ಬಿಡುವುದುಂಟೇ, ನಮ್ಮ ತೋಟದ ಕದಳೀಫಲ ಅದು. ಚೆನ್ನಾಗಿ ಕಳಿತಿದೆ.

15 ಬಾಳೆಹಣ್ಣುಗಳ ಸಿಪ್ಪೆ ಬಿಡಿಸಿ, ಕೈಯಲ್ಲೇ ಹಿಸುಕಿ ಇಟ್ಟಾಯ್ತು.
ಕುಕ್ಕರ್ ತಳ ದಪ್ಪ ಇರೂದ್ರಿಂದ ಹಾಗೂ ಬೇಯಿಸುವ ಕೆಲಸ ಬೇಗನೇ ಆಗೂದ್ರಿಂದ ನನ್ನ ಆದ್ಯತೆ ಕುಕ್ಕರ್.
ಕುಕ್ಕರಿಗೆ 2ಚಮಚ ತುಪ್ಪ ಎರೆದು ಬಾಳೆಹಣ್ಣನ್ನು ಬೇಯಿಸಲು ಇಡುವುದು.
ಖರ್ಜೂರಗಳೆಲ್ಲ ಬೀಜ ಬಿಡಿಸಿಕೊಂಡವು.
ಬಾಳೆಹಣ್ಣು ಬೆಂದ ಪರಿಮಳ ಬಂದಿತು. ಖರ್ಜೂರಗಳನ್ನು ಹಾಕುವುದು. ಸೌಟಾಡಿಸಿ, ಕುಕ್ಕರ್ ಮುಚ್ಚಿ ವೆಯಿಟ್ ಹಾಕಿರಿ.
ಚಿಕ್ಕದಾಗಿ ವಿಸಿಲ್ ಕೇಳಿದೊಡನೆ ಗ್ಯಾಸ್ ಉರಿ ನಂದಿಸುವುದು.
ಒತ್ತಡ ಇಳಿದ ನಂತರ ಮುಚ್ಚಳ ತೆರೆಯಿರಿ. ಬಾಳೆಹಣ್ಣು ಹಾಗೂ ಖರ್ಜೂರ ಬೆರೆತಿವೆ.
1 ಅಚ್ಚು ಬೆಲ್ಲ ಪುಡಿ ಮಾಡಿ ಹಾಕಿ ಪುನಃ ಒಲೆಯ ಮೇಲಿಟ್ಟು ಸೌಟು ತಿರುಗಿಸುತ್ತ ಇದ್ದಂತೆ ಬೆಲ್ಲ ಕರಗಿತು.
ಈಗ 2 - 3 ಚಮಚ ರಾಗೀಮಾಲ್ಟ್ ಸೇರಿಸಿ ಕೆದಕಿ, ಇನ್ನೂ 2 ಚಮಚ ತುಪ್ಪ ಎರೆದು ಸೌಟಿನಲ್ಲಿ ಪಾಕ ಬರುವ ತನಕ ಹದನಾದ ಉರಿಯಲ್ಲಿ ಬೇಯಿಸಿ.
ಹುಡಿ ಮಾಡಿದ ಏಲಕ್ಕಿ,
ತುಪ್ಪದಲ್ಲಿ ಹುರಿದ ಗೇರುಬೀಜ, ದ್ರಾಕ್ಷಿ ಸಹಿತ ಹಾಕುವ ಸಮಯ,
ತುಪ್ಪ ಸವರಿದ ತಟ್ಟೆಗೆ ಹಾಕಿ, ಮೇಲಿನಿಂದ 1 ಚಮಚ ತುಪ್ಪ ಎರೆದು ಸಟ್ಟುಗದಲ್ಲಿ ತಟ್ಟಿ ಸಮಪ್ರಕಾರವಾಗಿ ಹರಡುವುದು. ಆರಿದ ನಂತರ ಚೂರಿ ಯಾ ಚಮಚದಲ್ಲಿ ಗೆರೆ ಎಳೆದು ತುಂಡು ಮಾಡಿ ಇಡುವುದು, ಇಲ್ಲವೇ ಅಂಗೈಯಲ್ಲಿ ಉಂಡೆ ಮಾಡಿ ಮೆಲ್ಲನೆ ಒತ್ತಿ ಬಟ್ಟಲಲ್ಲಿ ಇಟ್ಟರೂ ಆಕರ್ಷಕವಾಗಿರುತ್ತದೆ.




ಇದು ನಮ್ಮ ದೀಪಾವಳಿಯ ಸಿಹಿ ತಿನಿಸು.
ದೀಪಾವಳಿ ಬರುತ್ತೇಂತ ಮಾಡಿಟ್ಟಿದ್ದು ಮಗಳು ಬರುವ ಮೊದಲೇ ತಿಂದು ಮುಗಿಯಿತು. ಹಾಗೇ ಕಟ್ಟಿ ಇಡಲು ಆಗುತ್ಯೇ.. ಚೆನ್ನಾಗಿದೆ ಅನ್ನುತ್ತ ಗೌರತ್ತೇನೂ ತಿಂದ್ರು, ಪಟ್ಟಾಂಗ ಸ್ನೇಹಿತರಿಗೂ ವಿತರಣೆ ಆಯ್ತೂ ಅನ್ನಿ.
ಅಂತೂ ಎರಡು ಬಾರಿ ಖರ್ಜೂರದ ಸಿಹಿತಿನಿಸು ಮಾಡುವ ಹಾಗಾಯ್ತು.

ಈ ಹೊಸ ರುಚಿಗಳಿಗೆ ಹೆಸರಿಡುವುದೇ ಒಂದು ಸಮಸ್ಯೆ ಆಗ್ಬಿಟ್ಟಿದೆ. ಸಿಂಪಲ್ಲಾಗಿ ಡೇಟ್ಸ್ ಹಲ್ವಾ ಅಂದರೂ ನಡೆದೀತು, ಏನಂತೀರ?