Pages

Ads 468x60px

Wednesday 22 July 2015

ಹಲಸಿನ ಸೋಂಟೆ






ಮಳೆಗಾಲದ ಅಗತ್ಯಗಳಿಗೆ ಬೇಕಾದಂತೆ ಹುಳಿ, ಪಲ್ಯ, ರೊಟ್ಟಿ, ಉಂಡ್ಳಕಾಳು ಇತ್ಯಾದಿ ಮಾಡಬೇಕಿದ್ದರೆ ಉಪ್ಪಿನಲ್ಲಿ ಹಲಸಿನ ಸೊಳೆ ಹಾಕಿಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.   ಅದೂ ಹಿಂದೆ ದಿನದ ಕೆಲಸಕ್ಕೆ  ಹತ್ತೂ ಹದಿನೈದು ಕಾರ್ಮಿಕರು ಇರುವಾಗ ಅವರ ಊಟೋಪಚಾರಗಳಿಗೆಂದೇ ದೊಡ್ಡದಾದ ಮಣ್ಣಿನ ಪೀಪಾಯಿ ( ಮಂಡಗೆ ) ಗಳಲ್ಲಿ ಹಲಸಿನ ಸೊಳೆ ಮಾತ್ರವಲ್ಲದೆ ಮಾವಿನಕಾಯಿಗಳನ್ನೂ ಕಾಪಿಡಲಾಗುತ್ತಿತ್ತು.   ಈಗ ಕಾಲ ಬದಲಾಗಿದೆ,  ನಮ್ಮ ನಿತ್ಯೋಪಯೋಗಕ್ಕೆ ಬೇಕಾದಷ್ಟಾದರೂ ಉಪ್ಪು ಸೊಳೆ ಹಾಕಿಟ್ಟುಕೊಳ್ಳೋಣ,  ಮೂರು ಹಲಸಿನಕಾಯಿಗಳು ಸಾಕು ಎಂದು ತೀರ್ಮಾನಿಸಲಾಯಿತು.   ಹಲಸಿನಕಾಯಿಗಳು ಚೆನ್ನಪ್ಪನಿಂದ ಕೊಯ್ಯಲ್ಪಟ್ಟು,  ಅವನಿಂದಲೇ ಆಯ್ದು ಸಿದ್ಧಗೊಳಿಸಲ್ಪಟ್ಟೂ ಆಯಿತು.

ಉಪ್ಪು ಸೊಳೆ ಹಾಕಲು ಪುಡಿಯಾದ,  ಮೆತ್ತಗಾದ, ಹಣ್ಣಾಗಲು ತಯಾರಾದ,  ತುಸು ಎಳೆಯ ಹಲಸೂ ಆಗುವಂತದಲ್ಲ.  ಬೇಳೆ ಬೇರ್ಪಡಿಸಿದ ಬಿಡಿ ಸೊಳೆಗಳು ಚೆನ್ನಾಗಿಯೂ ಇರಬೇಕು.  ಗುಣಮಟ್ಟ ಚೆನ್ನಾಗಿಲ್ಲದ ಸೊಳೆಗಳನ್ನು ಪಲ್ಯ, ಕೂಟು, ದೋಸೆ ಇತ್ಯಾದಿಗಳಿಗೆ ಬಳಸಬಹುದಾಗಿದೆ.

ಚೆನ್ನಪ್ಪ ಅಂದ,  " ಇದರಲ್ಲಿ ಒಂದು ಹಲಸಿನಕಾಯಿ ಎಳತ್ತು ( ಎಳೆಯದು ) ಬಂದಿದೇ..  ಏನು ಮಾಡುವುದೂ ?"

" ಅದನ್ನು ಸೋಂಟೆ ಮಾಡಿಟ್ಕೊಳ್ಳೋಣ ",  ಹೇಗೂ ಮಗಳು ತಿನ್ನಲು ತಯಾರಿದ್ದಾಳೆ,  ಚಿಂತೆಯಿಲ್ಲ.




" ಸೋಂಟೆ ಅಂದ್ರೇನೂ.... ?"
ತರಕಾರಿಗಳಾದ ಬಟಾಟೆ,  ಬಾಳೆಕಾೖ,  ಸಿಹಿಗೆಣಸು ಇತ್ಯಾದಿಗಳ ಚಿಪ್ಸ್ ( ಉಪ್ಪೇರಿ ) ಮಾಡೋದಿದೆಯಲ್ಲ,  ಹಾಗೇನೇ ಸೋಂಟೆಯನ್ನು ಹಲಸಿನಕಾಯಿ ಚಿಪ್ಸ್,  ಅಚ್ಚಗನ್ನಡದಲ್ಲಿ ಉಪ್ಪೇರಿ ಅನ್ನಿ.

ಹಲಸಿನ ಸೊಳೆಗಳನ್ನು ಆಯ್ದು ಉದ್ದುದ್ದವಾಗಿ ಸೀಳುವುದು, ಚೂರಿ ಚಾಕುಗಳ ಹಂಗಿಲ್ಲದೆ ಕೈಯಲ್ಲೇ ಸೀಳಬಹುದು.

ಒಂದು ತಟ್ಟೆಯಲ್ಲಿ ಕಡು ಉಪ್ಪಿನ ದ್ರಾವಣ ಮಾಡಿಟ್ಕೊಳ್ಳಿ,  ಪುಟ್ಟ ಚಮಚ ಇರಲಿ.

ಬಾಣಲೆಯಲ್ಲಿ ಎಣ್ಣೆ ಎರೆದು ಬಿಸಿಯಾಗಲು ಇರಿಸಿ.
ಎಣ್ಣೆ ಕಾಯಲಿ,  ಎಣ್ಣೆಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ಹಾಕಿರಿ.
ಒಂದೇ ಹದನಾದ ಉರಿಯಲ್ಲಿ ಗರಿಗರಿಯಾದಾಗ ಒಂದು ಚಮಚ ಉಪ್ಪುನೀರು ಎರೆದು ಬಿಡಿ.
ಎಣ್ಣೆಯಲ್ಲಿ ನೀರಿನ ಸದ್ದು ನಿಂತಾಗ ಸೋಂಟೆಗಳನ್ನು ಕಣ್ಣುಸಟ್ಟುಗದಲ್ಲಿ ತೆಗೆದು,  ಎಣ್ಣೆ ಬಸಿದು ಹೋಗಲು ತೂತಿನ ತಟ್ಟೆಗೆ ಹಾಕಿಟ್ಟುಕೊಳ್ಳಿ.  ಖಾರ ಬೇಕಿದ್ದರೆ ಮೆಣಸಿನಹುಡಿ,  ಗರಂ ಮಸಾಲಾ ಹುಡಿ ಉದುರಿಸಿ.
ಎಲ್ಲವನ್ನೂ ಇದೇ ಥರ ಪುನರಾವರ್ತಿಸಿ,  ಆರಿದ ನಂತರ ಡಬ್ಬದಲ್ಲಿ ತುಂಬಿಟ್ಟು, ಬೇಕೆನ್ನಿಸಿದಾಗ ಕಟುಕುಟು ತಿನ್ನಿ.

ಗಮನಿಸಿ,  ಸೋಂಟೆ ಮಾಡಬಹುದಾದ ಹಲಸು,  ನಾಳೆ ಹಣ್ಣಾಗುವ ಮಾದರಿಯದಾಗಿರಬಾರದು,  ದಪ್ಪ ದಪ್ಪ ಸೊಳೆಗಳೂ ಆಗದು,  ತೀರಾ ಎಳಸಾದ ಹಲಸಿನ ಸೊಳೆಗಳೂ ಆಗುವಂತಿಲ್ಲ.


Saturday 11 July 2015

ಕ್ಯಾಬೇಜ್ ಬೋಂಡಾ






" ಕ್ಯಾಬೇಜ್ ದಿನ ಎರಡಾದ್ರೂ ಮುಗೀಲಿಲ್ಲ,  ಪಲ್ಯ ಆಯ್ತು, ಗಸಿ ಆಯ್ತು,  ಇವತ್ತು ಮುಗಿಸ್ಲೇ ಬೇಕು "

" ಬೋಂಡಾ ಮಾಡು, ಸಂಜೆಯ ಟೀ ಜೊತೆ ಚೆನ್ನಾಗಿರುತ್ತೆ "

" ಹೌದೂ,  ಮಳೆ ಬೇರೆ ಬರ್ತಿದೇ... ಎಣ್ಣೆಯಲ್ಲಿ ಕರಿದದ್ದೇ ಸೊಗಸು...  ನೀನು ಹೇಗೇ ಮಾಡಿದ್ದೂ ...?"

"ಕ್ಯಾಬೇಜು ತುಂಬ ಚಿಕ್ಕದಾಗಿ ಕತ್ತರಿಸು.. ನಿಂಗೆ ಪುರುಸೂತ್ತಿಲ್ಲಾಂದ್ರೆ ಮಗಳ ಹತ್ತಿರ ಹೇಳು " ಎಂದಳು ನನ್ತಂಗಿ ಕುಂಬ್ಳೆಯಿಂದ.

" ಹೂಂ ಆಯ್ತು,  ಅವಳು ಮಾಡಿದ್ಳು.."

" ಕಡ್ಲೇಹುಡಿ,  ಅಕ್ಕೀಹುಡಿ, ಮೆಣಸಿನಹುಡಿ,  ಉಪ್ಪು   ಎಲ್ಲಾ ಹಾಕಿ ಕಲಸಿ ಎಣ್ಣೆಗೆ ಬಿಡು "

" ಆಯ್ತು,  ಮಾಡೋದೇ,  ಅ ಮೇಲೆ ಫೋಟೋ ಕಳಿಸ್ತೇನೆ..."  ಅಂದು ಫೋನ್ ಕೆಳಗಿಟ್ಟಾಯ್ತು.

ಏನೇ ಮಾಡುವುದಿದ್ರೂ ಒಂದು ಅಳತೆ ಬೇಡ್ವೇ...

3 ಕಪ್ ಕ್ಯಾಬೇಜ್ ತುರಿ,  ಮಿಕ್ಸಿಯಲ್ಲಿ ತಿರುಗಿಸಿದ್ರೂ ಆದೀತು.
ಒಂದು ಕಪ್ ಕಡ್ಲೇ ಹಿಟ್ಟು.
ಅರ್ಧ ಕಪ್ ಅಕ್ಕೀ ಹಿಟ್ಟು.
ಮೆಣಸಿನಹುಡಿ - ಒಂದು ಚಮಚಾ.
ಮಸಾಲಾಹುಡಿ - 2 ಚಮಚಾ.
ರುಚಿಗೆ ಉಪ್ಪು.
ಬೇಕಿದ್ದರೆ ಒಂದು ನೀರುಳ್ಳಿ, ಹಸಿಮೆಣಸು ಹಾಕಬಹುದು.

ಎಲ್ಲವನ್ನೂ ಒಂದು ತಪಲೆಗೆ ಸುರುವಿ ಕಲಸಿಕೊಳ್ಳಿ,  ನೀರು ಹಾಕೋದೇನೂ ಬೇಡ,  ಉಂಡೆ ಕಟ್ಟುವ ಹದಕ್ಕೆ ಬಂದರಾಯಿತು.

ಬಾಣಲೆಯಲ್ಲಿ ಎಣ್ಣೆ ಕಾಯಲಿ,  ಲಿಂಬೇ ಗಾತ್ರದ ಹಿಟ್ಟನ್ನು ಅಂಗೈಯಲ್ಲಿ ಚಪ್ಪಟೆಯಾಗಿಸಿ ಎಣ್ಣೆಗಿಳಿಸಿ.  ಎಣ್ಣೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಬಹುದು.   ಗರಿಗರಿಯಾಗಿ ಹೊಂಬಣ್ಣ ಬಂದಾಗ ತೂತಿನ ಸಟ್ಟುಗದಲ್ಲಿ ತೆಗೆದು ಜಿಡ್ಡು ಬಸಿಯಲು ಜಾಲರಿ ತಟ್ಟೆಯಲ್ಲಿ ಇರಿಸಿ,  ಆರಿದ ನಂತರ ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.

ಇದೇ ಥರ ನೀರುಳ್ಳಿ ಬೋಂಡಾ ಅಥವಾ ಪಕೋಡಾ ಮಾಡಬಹುದು.




Sunday 5 July 2015

ಹಲಸಿನಹಣ್ಣಿನ ಕೊಟ್ಟಿಗೆ







" ಅಮ್ಮಾ,  ಮಾವಿನಹಣ್ಣು ಆಗಿದೆಯಾ  "
" ಆಗಿದೇ..."
" ಗೇರುಹಣ್ಣು ? "
" ಅದೂ ಉಂಟಲ್ಲ..."
" ಹಲಸಿನಹಣ್ಣು.. "
" ಅದೂ ಇಲ್ಲಾಂತ ಆಗುವುದುಂಟೇ,  ಯಾವಾಗ ಮನೆಗೆ ಬರ್ತೀಯಾ ? "
" ಅಮ್ಮಾ,  ಇಲ್ಲಿ ಇಪ್ಪತ್ರೂಪಾಯಿ ಕೊಟ್ಟು ಹಲಸಿನಹಣ್ಣು ತಿಂದೆ ಗೊತ್ತಾ,  ಸಿಹೀ ಇತ್ತೂ "
" ಹೌದಾ,  ಹಂಗಿದ್ರೆ ಬೆಂಗ್ಳೂರಲ್ಲೂ ಹಲಸಿನಹಣ್ಣು ಬೇಕಾದ ಹಾಗೆ ಸಿಗುತ್ತೇ..."
"ಅಯ್ಯೋ, ಅದು ಮನೆಯ ಹಣ್ಣು ಅಲ್ವಲ್ಲ...  ನಾನು ಮುಂದಿನವಾರ ಬರ್ತೇನೇ..." ಅಂದ ಮಧು.

" ಅಣ್ಣ ಬರ್ತಾನಂತೆ ಮುಂದಿನವಾರ,  ನೀನೂ ಬರುತ್ತೀಯಾ ಹೇಗೇ ?"  ಮಗಳ ಬಳಿ ಕೇಳದಿದ್ದರಾದೀತೇ.   ಅವಳೂ ವಾರಕ್ಕೊಮ್ಮೆ ಹೇಗೂ ಬರುವುದಿದೆ,  ಈ ಬಾರಿ ಖಂಡಿತವಾಗಿಯೂ ಬರುತ್ತಾಳೆ.   ಮಕ್ಕಳ ಆಗಮನಕ್ಕೆ ಸಿದ್ಧತೆಯೂ ಆಗ್ಬೇಡವೇ,   " ಅವ್ನು ಬಂದು ಹಣ್ಣಿನ ಎರಡು ಸೊಳೆ ತಿಂದು,  ಸಾಕು ಅನ್ನಲಿಕ್ಕುಂಟು.  ನೀನು ಯಾಕೆ ಕುಣೀತೀಯಾ..."   ನಮ್ಮೆಜಮಾನ್ರು ಹಂಗಿಸದೆ ಬಿಡಲಿಲ್ಲ.

" ಏನೇ ಆಗ್ಲೀ,  ಹಲಸಿನಕಾೖ ಕೊಯ್ದು ಇಡಬೇಕಲ್ಲ "   ಚೆನ್ನಪ್ಪ ಕೊಯ್ದು ಇಟ್ಟ,   ತರುವಾಗಲೇ ಹಣ್ಣಾಗಿತ್ತು.   ಒಂದಲ್ಲ,  ಎರಡಲ್ಲ,  ನಾಲ್ಕು ಹಣ್ಣುಗಳು ಬಂದವು.

ಮಕ್ಳು ಬರೋದು ಮುಂದಿನವಾರಕ್ಕೆ,  ಈ ಹಣ್ಣುಗಳನ್ನು ಏನು ಮಾಡುವುದೆಂದು ತೋಚದೇ ಕುಳಿತಿದ್ದಂತೆ ಒಂದು ಹಣ್ಣನ್ನು ನಾವಿಬ್ಬರು ತಿಂದು ಮುಗಿಸಿದೆವು,  ನಾವೂ ತಿನ್ಬೇಕಲ್ಲ,  ಅದೂ ವರ್ಷದ ಮೊದಲ ಫಲ.   ಚೆನ್ನಪ್ಪ ಮುಂದೆ ನಾಲ್ಕೈದು ದಿನ ಬರಲೂ ಇಲ್ಲ.  ನಮ್ಮ ಕಣ್ಣು ತಪ್ಪಿಸಿ ಒಳ ಬಂದ ದನ ಒಂದು ಹಣ್ಣನ್ನು ಎಳೆದು ಎಳೆದು ಹೇಗೋ ತಿಂದಿತು.  ಇಂತಹ ಘನ ಹಣ್ಣುಗಳನ್ನು ಮನೆಯ ಒಳಗೆ ಇಟ್ಟುಕೊಳ್ಳಲಿಕ್ಕಿಲ್ಲ,  ಹೊರಾಂಗಣದಲ್ಲೇ ಇದ್ದುದರಿಂದ ಈ ಅನಾಹುತವಾಯಿತು.   ಮಾರನೇ ದಿನ ಶ್ಯಾಮ ಅದ್ಯಾಕೋ ಬಂದ,  ಮನೆಯಲ್ಲೇನೋ ಪೂಜೆ, ಬನ್ನೀಂತ ಆಮಂತ್ರಣ ಕೊಡಲಿಕ್ಕೆ.  ಹಲಸಿನಹಣ್ಣಿನ ಕಮ್ಮನೆ ಅವನ ಮೂಗಿಗೂ ಬಡಿಯಿತು.

" ಚಿಕ್ಕಮ್ಮಾ,  ಹಲಸಿನಹಣ್ಣು ಉಂಟಾ..."
" ಹೂಂ,  ಬೇಕಿದ್ರೆ ತಗೊಂಡು ಹೋಗು,  ಕೆಂಪು ಕೆಂಪು ಸೊಳೆ,  ಭಾರೀ ಸಿಹೀ....  ಕೊಟ್ಟಿಗೆ ಮಾಡಿ ತಿನ್ನೂ "   ಅಂತೂ ಹಲಸಿನಹಣ್ಣುಗಳು ಮುಗಿದವು.

ಶುಕ್ರವಾರ ಬೆಳಗಾಗ್ಬೇಕಾದ್ರೇ ಮಗನ ಕರೆ ಬಂದಿತು.   " ಹಲಸಿನಹಣ್ಣು ಉಂಟಲ್ಲ..."
 ಇಲ್ಲಾ.. ಅನ್ನುವುದಕ್ಕಾಗುತ್ತದೆಯೇ,  " ಇದೇ.."
ಚೆನ್ನಪ್ಪನ ಪತ್ತೆಯಿಲ್ಲ.   ನಮ್ಮವರೇ ಮರದ ಬುಡಕ್ಕೆ ಹೋಗಿ ಎರಡು ಹಣ್ಣುಗಳನ್ನು ತಂದಿಟ್ಟರು.   "ಒಳಗೇ ಇಡೋಣ, ದನಗಿನ ಬಂದೀತು.."   ಒಂದು ಗೋಣೀತಾಟಿನ ಮೇಲೆ ಹಲಸಿನಹಣ್ಣುಗಳು ಜೋಪಾನವಾಗಿ ಬಿದ್ದುಕೊಂಡವು.

ರಾತ್ರಿ ಗಂಟೆ ಹತ್ತೂವರೆ ಆಗ್ಬೇಕಾದ್ರೇ  " ಅಮ್ಮಾ, ಬಸ್ಸು ಹತ್ತಿ ಆಯ್ತು "  ಅಂದ ಮಧು.
" ಸರಿ, ಹಲಸಿನಹಣ್ಣು ಕೊಯ್ದು ಇಟ್ಟಾಗಿದೆ "  ಅಂದೆ.  
ಬೆಳಗ್ಗೆ ಕಾಫಿ ಹೊತ್ತಿಗೆ ಮನೆ ತಲಪಿದ ಮಗನನ್ನು  " ಮೊದಲು ಸ್ನಾನ ಮಾಡ್ಕೋ ಹೋಗು, ಮತ್ತೆ ನಿನ್ನ ಫೇವರಿಟ್ ಸಜ್ಜಿಗೆ - ಅವಲಕ್ಕಿ ತಿನ್ನುವಿಯಂತೆ " ಅನ್ನುತ್ತಾ ತಿಂಡಿಯ ಸಿದ್ಧತೆ.




ತಿಂಡಿ ಮುಗಿಸಿ,  ರಾತ್ರಿಪ್ರಯಾಣದ ಆಯಾಸ ಪರಿಹಾರಕ್ಕಾಗಿ ಮಲಗಿ ಎದ್ದ ಮಧು,  ಚಹಾ ಕುಡಿಯುವ ವೇಳೆಗೆ ಅಪ್ಪ ಮಗ ಸೇರಿ ಹಲಸಿನಹಣ್ಣು ಬಿಡಿಸುವ ಸಾಹಸದಲ್ಲಿ,  ಅರ್ಥಾತ್  ' ಹಲಸಿನ ಹಣ್ಣಿನ ಕಾಳಗ ' ದಲ್ಲಿ ಮಗ್ನರಾದರು.   " ಈ ಹಣ್ಣು ಎಲ್ಲಿಗೂ ಸಾಲದು,  ನಾನು ಕೊಟ್ಟಿಗೆ ತಿನ್ಬೇಕು,  ಬೆಂಗಳೂರಿಗೂ ಆಗ್ಬೇಕು,  ಫ್ರೆಂಡ್ಸ್ ಕಾಯ್ತಿರ್ತಾರೆ ತಿನ್ನಲಿಕ್ಕೆ..."  ತಗಾದೆ ಶುರುವಾಗ್ಬಿಟ್ಟಿತು.   ಹಾಗಿದ್ದರೆ ಕಳಂದೂರು ಮನೆಗೆ ( ನಮ್ಮ ನೆರೆಮನೆ ) ಹೋಗಿ ಹಲಸಿನಹಣ್ಣು ತರುವುದೆಂದು ತೀರ್ಮಾನಕ್ಕೆ ಬಂದ ಅಪ್ಪ ಮಗ ಬೈಕ್ ಹತ್ತಿ ಹೊರಟರು.  ಕರಾವಳಿಯ ಹಳ್ಳಿಮನೆಗಳು ನೆರೆಕರೆಯಾದರೂ ಮೈಲು ದೂರದಲ್ಲಿರುತ್ತವೆ.

ಹಲಸಿನಹಣ್ಣೂ ಬಂದಿತು,   ಸಂಜೆವೇಳೆಗೆ ಮಗಳೂ ಆಗಮಿಸಿದಳು  " ಅಮ್ಮಾ,  ಕೊಟ್ಟಿಗೆ ನಂಗೂ ಬೇಕು ರೂಮಿನಲ್ಲಿ ತಿನ್ನಲಿಕ್ಕೆ "  ಅಂದಳು.
"ನೀನು ಯಾವಾಗ ಹೋಗ್ತೀಯಾ..."
" ಸೋಮವಾರ ಬೆಳಿಗ್ಗೆ ಫಸ್ಟ್ ಬಸ್ಸೂ.."
" ಸರಿ "   ಅವ್ನು ಭಾನುವಾರ ಹೋಗೋದು ಅಂತಿದ್ರೆ ಇವ್ಳು ಸೋಮವಾರ ಅಂತಿದ್ದಾಳೆ.   ಇಬ್ಬರಿಗೂ ಸೂಕ್ತವಾಗುವ ಸಮಯದ ಹೊಂದಾಣಿಕೆಯೊಂದಿಗೆ ಹಲಸಿನಹಣ್ಣು ಬೇಯಬೇಕಾಗಿದೆ.   ಭಾನುವಾರ ಸಂಜೆಗೆ ಬಿಸಿ ಬಿಸಿ ಕೊಟ್ಟಿಗೆ ಮಾಡಿಟ್ಬಿಡೋಣ.

ಬಾಳೆಲೆ ಮಗಳು ತೋಟದಿಂದ ತಂದಳು.   ಹಲಸಿನಹಣ್ಣು ನಮ್ಮೆಜಮಾನ್ರಿಂದ ಬಿಡಿಸಲ್ಪಟ್ಟಿತು.   ಮಧು ಬಿಡಿಸೊಳೆಗಳನ್ನು ಆಯ್ದು,  ಅಂದ್ರೆ ಬೇಳೆ, ಸಾರೆ, ಪೊದುಂಕುಳುಗಳಿಂದ ಹಣ್ಣುಗಳನ್ನು ಬೇರ್ಪಡಿಸಿ ನನ್ನೆದುರು ತಂದಿಟ್ಟ.




ಬಾಳೆ ಎಲೆಗಳನ್ನು ಒಂದೇ ಗಾತ್ರದಲ್ಲಿ ಹೊಂದಿಸಿ,  ಬಾಡಿಸಿ ಇಡಬೇಕು.  ಬಾಡಿಸಿದ ನಂತರ ಬಟ್ಟೆಯಲ್ಲಿ ಒರೆಸಿದರೆ ಉತ್ತಮ.

ಬಾಳೆ ಎಲೆಗಳನ್ನು ಬಾಡಿಸುವುದು ಹೇಗೆ ?
ಹಿಂದೆಲ್ಲಾ ಅಟ್ಟುಂಬೊಳದ ಕಟ್ಟಿಗೆ ಒಲೆಯಲ್ಲಿ,  ಬಚ್ಚಲುಮನೆಯ ಒಲೆಯಲ್ಲಿ ನಿಗಿ ನಿಗಿ ಕೆಂಡ ಸಿದ್ಧವಾಗಿರುವ ಹೊತ್ತಿಗೆ ಬಾಳೆ ಬಾಡಿಸಿ ಇಟ್ಟುಕೊಳ್ಳುತ್ತಿದ್ದರು.   ಈಗೇನಿದ್ದರೂ ಯಂತ್ರತಂತ್ರಗಳು ನಮ್ಮ ಕೆಲಸಗಳನ್ನು  " ಊಫ್... ಇಷ್ಟೇನಾ " ಅನ್ನುತ್ತಲಿವೆ.   ಮೈಕ್ರೋವೇವ್ ಅವೆನ್ ಇದ್ದಲ್ಲಿ ಅದರೊಳಗೆ ತುರುಕಿದರಾಯಿತು,  ಬಾಡಿಸಿ ಕೊಡುತ್ತದೆ.   ಬಾಳೆ ಎಲೆಗಳನ್ನು ಸುರುಳಿ ಸುತ್ತಿ ಕುದಿಯುವ ನೀರಿಗೆ ಹಾಕಿದರೂ ಬಾಡಿದ ಬಾಳೆಲೆ ಸಿಗುವುದು.   ಗ್ಯಾಸ್ ಜ್ವಾಲೆಯ ಮೇಲೆ ಒಂದೊಂದೇ ಎಲೆಯನ್ನು ಉರಿಗೆ ಹಿಡಿದು ಬಾಡಿಸಿಕೊಳ್ಳಬೇಕಾಗುತ್ತದೆ.

ಅತಿ ವೇಗವಾಗಿ ಅರೆಯುವ ಕೆಲಸ ಆಗಬೇಕಾಗಿದೆ,  ವಿದ್ಯುತ್ ಕಣ್ಣುಮುಚ್ಚಾಲೆಯಾಟ ಎಲ್ಲರಿಗೂ ತಿಳಿದಿರುವ ವಿಷಯ.  ಮೂರು ಪಾವು ಅಂದ್ರೇ ಮೂರು ಕಪ್ ಅಂತಿಟ್ಕೊಳ್ಳಿ,  ಅಕ್ಕೀತರಿ ನೀರೆರದು ಇಟ್ಟಿದ್ದಾಯ್ತು,  ಅರೆಯುವ ಕೆಲಸ ಉಳಿತಾಯ.

ಹಲಸಿನಹಣ್ಣು ಮಿಕ್ಸೀ ಯಂತ್ರದಲ್ಲಿ ತಿರುಗಿ ಮುದ್ದೆಯಾಯಿತು.  ಅಕ್ಕಿಯ ತರಿ ಅಥವಾ ನುಚ್ಚಕ್ಕಿ,  ನಮ್ಮೂರಿನ ಪರಿಭಾಷೆಯಲ್ಲಿ ಕಡಿಯಕ್ಕಿ ಅನ್ನಿ,  ಹಣ್ಣಿನೊಂದಿಗೆ ಕಡೆಯಲ್ಪಟ್ಟಿತು.  ಹಣ್ಣು ತುಂಬಾ ಹಾಕಿದ್ರೂ ಕೊಟ್ಟಿಗೆ ಮೆತ್ತಗಾಗಿ  ಬಿಡುತ್ತದೆ.  ಅಕ್ಕಿ ಹೆಚ್ಚಾಯಿತೋ, ಕೊಟ್ಟಿಗೆ ಕಲ್ಲಿನಂತಾದೀತು. ಸಮ ಪ್ರಮಾಣದಲ್ಲಿದ್ದರೆ ಕ್ಷೇಮ.  ರುಚಿಗೆ ಉಪ್ಪು ಸೇರಿತು.   ಸಿಹಿ ಜಾಸ್ತಿ ಬೇಕಿದ್ದರೆ ಬೆಲ್ಲದ ಪುಡಿ ಸೇರಿಸಿಕೊಳ್ಳತಕ್ಕದ್ದು.  ಇಂತಹ ರಸಭರಿತ ಹಣ್ಣುಗಳನ್ನು ಅರೆಯುವಾಗ ನೀರು ಕೂಡಿಸಲಿಕ್ಕಿಲ್ಲ.   ಈ ಮಾದರಿಯ ಹಲಸಿನಹಣ್ಣಿನ ಕೊಟ್ಟಿಗೆ ಯಾ ಕಡುಬು ನಮ್ಮೂರಿನ ಜನಸಾಮಾನ್ಯರ ಆಡುಭಾಷೆ ತುಳುವಿನಲ್ಲಿ  ' ಪೆಲಕ್ಕಾಯ್ತ ಗಟ್ಟಿ ' ಎಂದು ಹೆಸರುವಾಸಿಯಾಗಿರುತ್ತದೆ.

ಅಟ್ಟಿನಳಗೆಯಲ್ಲಿ ನೀರು ಕುದಿಯುತ್ತಿರಲಿ.  ಒಂದೊಂದೇ ಸೌಟು ಹಿಟ್ಟನ್ನು ಬಾಳೆಲೆಯೊಳಗಿಟ್ಟು, ಮಡಚಿಟ್ಟು ಅಟ್ಟಿನಳಗೆಯೊಳಗೆ ಇಡುತ್ತಾ ಬನ್ನಿ.  ಭದ್ರವಾಗಿ ಮುಚ್ಚಿ ಇಪ್ಪತ್ತು ನಿಮಿಷಗಳ ಕಾಲ ಉಗಿಯಲ್ಲಿ ಬೆಂದಾಗ ಹಲಸಿನಹಣ್ಣಿನ ಕೊಟ್ಟಿಗೆ ಸಿದ್ಧ.  ಬಿಸಿ ಬಿಸಿಯಾದ ಕೊಟ್ಟಿಗೆಗೆ ತೆಂಗಿನೆಣ್ಣೆ ಕೂಡಿಕೊಂಡು ತಿನ್ನಲು ಬಯಸುವವರೇ ಅಧಿಕ.  ತೆಂಗಿನೆಣ್ಣೆ ಮಯಣ ನಿವಾರಕವೂ ಹೌದು.  ಇನ್ನಷ್ಟು ರುಚಿಕರವಾದ ಚಟ್ಣಿಯೂ ಇದ್ದಲ್ಲಿ ಸ್ವರ್ಗಕ್ಕೆ ಮೂರೇ ಗೇಣು!

ಅಂತಹ ಚಟ್ಣಿ ಮಾಡೋದು ಹೇಗೆ?

ಮಾಮೂಲಿ ನೀರುಳ್ಳಿ ಯಾ ಬೆಳ್ಳುಳ್ಳಿ ಚಟ್ಣಿ ಈ ಕೊಟ್ಟಿಗೆಯೊಂದಿಗೆ ಹೊಂದಿ ಬರುವುದಿಲ್ಲ.  ಶುಂಠಿ ಚಟ್ಣಿ ವಾಡಿಕೆಯದು,  ಆದರೆ ನನ್ನ ಬಳಿ ಶುಂಠಿ ಇದ್ದಿರಲಿಲ್ಲ.  ಮಾವಿನ ಶುಂಠಿ ಇದ್ದಿತು.   ತೋಟದಿಂದ ಗಾಂಧಾರಿ ಮೆಣಸು ತಂದಳು ಮಗಳು.
ಹಸಿ ಕಾಯಿತುರಿ,  ಮಾಂಙನಾರಿ, ನಾಲ್ಕಾರು ಗಾಂಧಾರಿ ಮೆಣಸು,  ಚೂರು ಹುಳಿ,  ಉಪ್ಪು ಎಲ್ಲ ಸೇರಿ ಚಟ್ಣಿ ಆಯಿತು,  ಕರಿಬೇವಿನ ಒಗ್ಗರಣೆಯೂ ಬಿದ್ದಿತು.  ಈ ಚಟ್ಣಿ ಈಗ ನಾಳೆ ತನಕ ಕೆಡದಿರಬೇಕು,  ಬೆಂಗಳೂರು ತಲಪಬೇಕಾಗಿದೆಯಲ್ಲ!  ಸರಿ,  ಅದಕ್ಕಾಗಿ ಚಟ್ಣಿಗೆ ನೀರು ತಾಕಿಸದೇ ಅರೆಯಲಾಯಿತು.   ಇಂಡಕ್ಷನ್ ಒಲೆಯ ಮೇಲೆ ಒಂದಷ್ಟು ಹೊತ್ತು ಕೂತಿದ್ದು ಚಟ್ಣಿ ಕೆಳಗಿಳಿಯಿತು.   


ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ ಉತ್ಥಾನ,  ಜುಲೈ 2015ರ ಸಂಚಿಕೆಯಲ್ಲಿ ಪ್ರಕಟಿತ ಬರಹ.



Saturday 4 July 2015

ಸಂಜೆಯ ಸೊಗಸು






ಮಳೆಗಾಲ ಅಲ್ವೇ,  ಬಾಳೆಗೊನೆ ಹಣ್ಣಾಗಿದೆ.   ಹಾಗೇನೇ ತಿಂದು ಮುಗಿಸಲು ಆಗುವುದಿಲ್ಲ,  ಇದಂತೂ ಚಿಕ್ಕ ಚಿಕ್ಕ ಹಣ್ಣು,  ಸುಲಿದು ತಿನ್ನಲಿಕ್ಕೂ ಉದಾಸೀನ ಬಿಡದು.  ಅದಕ್ಕೇನು ಮಾಡೋಣಾಂತೀರಾ ?

ಸಂಜೆಯ ಚಹಾದೊಂದಿಗೆ ಏನೋ ಒಂದು ತಿನ್ನಲು ಬೇಕಲ್ಲ,  ಈಗ ಮ್ಯಾಗಿ ನೂಡಲ್ಸ್ ಇತ್ಯಾದಿ ತಿನ್ನೋ ಹಾಗಿಲ್ಲ,  ನಾವಂತೂ ಒಮ್ಮೆಯೂ ತಂದವರಲ್ಲ ಬಿಡಿ !

ಅವಲಕ್ಕಿ ಇದೆ,  ತೆಂಗಿನತುರಿ ಇದೆ,  ಬೆಲ್ಲ ಇದೆ.  
7 - 8  ಬಾಳೆಹಣ್ಣು ತೆಳ್ಳಗೆ ಕತ್ತರಿಸಿ.
ಒಂದು ಚಮಚಾ ಎಳ್ಳು ಹುರಿಯುವುದು.
ಅವಲಕ್ಕಿ ಕಲಸಲಿಕ್ಕೂ ಒಂದು ಲೆಕ್ಕಾಚಾರ ಬೇಡ್ವೇ, ಬೇಕಲ್ಲ !
ಒಂದು ಹಿಡಿ ಕಾಯಿತುರಿಗೆ ನಾಲ್ಕು ಹಿಡಿ ಅವಲಕ್ಕಿ,  ಈ ಥರ ಅಳತೆ ಇರಲಿ.
ಬೆಲ್ಲವೂ ಅಷ್ಟೇ,  ಕಾಯಿತುರಿ ಎಷ್ಟಿದೆಯೋ ಅಷ್ಟು ಇರಲಿ.
ರುಚಿಗೆ ಚಿಟಿಕೆ ಉಪ್ಪು. 

ಎಲ್ಲವನ್ನೂ ತಪಲೆಗೆ ಸುರುವಿಕೊಂಡು ಕಲಸುವುದು.
ಹ್ಞಾ,  ಒಂದು ಚಮಚ ತಾಜಾ ತುಪ್ಪ ಕೂಡಿಸಿ ಕಲಸಿದಾಗ ಅವಲಕ್ಕಿ ಕಲಸು ಸಿದ್ಧ.
ಸುವಾಸನಾಭರಿತ ಈ ಸಿಹಿ ಅವಲಕ್ಕಿ ನಮ್ಮ ಇಂದಿನ ಸಂಜೆಯ ಸೊಗಸು.

ಒಣ ಹಣ್ಣುಗಳಾದ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಿ,  ಏಲಕ್ಕಿ ಪುಡಿ ಹಾಕಬಹುದು.
ಈಗ ರಮ್ಜಾನ್ ಮಾಸ ಅಲ್ವೇ,  ತಾಜಾ ಖರ್ಜೂರ ಎಲ್ಲೆಡೆ ಲಭ್ಯ,  ಬಾಳೆ ಹಣ್ಣಿನ  ಬದಲು ಖರ್ಜೂರವೂ ಆದೀತು.