Pages

Ads 468x60px

Wednesday 25 December 2019

ಗೇರುಬೀಜದ ಪಲ್ಯ










ಮದುವೆಯೂಟಕ್ಕೆ ಹೋಗಿದ್ದೆವು, ಮನೆಯಿಂದ ಹೊರಡುವಾಗಲೇ ಗಂಟೆ ಹನ್ನೊಂದಾಗಿತ್ತು. ಮದುವೆ ಮಂಟಪದ ಕಡೆ ತಿರುಗಿಯೂ ನೋಡದೆ ನಾನು ದೌಡಾಯಿಸಿದ್ದು ಊಟದ ಹಾಲ್ ಕಡೆಗೆ, ಅಲ್ಲಿ ಜನಜಂಗುಳಿ ಈಗಾಗಲೇ ನೆರೆದಿತ್ತು. ಸೀಟುಗಳು ಈಗಾಗಲೇ ಭರ್ತಿ ಆದಂತಿದೆ, ನನ್ನ ಪುಣ್ಯ, ಒಂದು ಕಡೆ ಟವೆಲ್ ಇಟ್ಟು ಕಾದಿರಿಸಲ್ಪಟ್ಟ ಕುರ್ಚಿ ದೊರೆಯಿತು. ಟವಲ್ ಅತ್ತ ಎತ್ತಿಟ್ಟು ಕುಳಿತಿದ್ದಾಯ್ತು.

ಬಾಳೆಲೆ ಒರೆಸಿ, ನೀರು ಸಿಡಿಸಿ ತೊಳೆಯುವಷ್ಟರಲ್ಲಿ ಬಡಿಸುವ ಸುಧರಿಕೆಯವರು ಒಬ್ಬೊಬ್ಬರಾಗಿ ಬರಲಾರಂಭಿಸಿದರು. ಬಾಳೆಯ ಒಂದು ತುದಿಗೆ ಉಪ್ಪು, ಉಪ್ಪಿನಕಾಯಿ.. ಅದೂ ಮಾವಿನ ಮಿಡಿ ಉಪ್ಪಿನಕಾಯಿ. ಕೆಳ ತುದಿಗೆ ಚಿತ್ರಾನ್ನ, ಮತ್ತೊಂದು ಬದಿಗೆ ಪಾಯಸ, ಪಲ್ಯ ಬಂದಿತು, ಬೊಗಸೆ ತುಂಬ ಬಡಿಸುತ್ತ ಹೋದ ಪಲ್ಯ ಗೇರುಬೀಜದ್ದು ಮಾರಾಯ್ರೇ! ಗೇರುಬೀಜ ಹಾಗೂ ತೊಂಡೆಕಾಯಿ ಮಿಶ್ರಣದ ಈ ಪಲ್ಯ ನಾನೂ ತಿನ್ನದೆ ತುಂಬ ಸಮಯವಾಗಿತ್ತೂ ಅನ್ನಿ,

ಯುಗಾದಿ ಬಂತೆಂದರೆ ಸಾಕು, ಗೇರುತೋಪುಗಳಲ್ಲಿ ಬೀಜ ಕೊಯ್ಯುವ ಕಾರುಭಾರು. ಒಣ ಬೀಜಗಳು ಮಾರಾಟಕ್ಕಾಗಿ, ಹಣ್ಣುಗಳು ಮಕ್ಕಳ ಪಾಲು, ಹಟ್ಟಿಯ ಹಸುಗಳಿಗೂ ಯಥೇಚ್ಛ ಭೋಜನ. ನಮ್ಮ ಊರ ಕಡೆ ಕ್ವಿಂಟಲ್ ಗಟ್ಟಲೆ ಗೇರು ಬೆಳೆಯುವವರಿದ್ದಾರೆ. ಮನೆ ಉಪಯೋಗಕ್ಕೂ ನಮ್ಮದೇ ಗೇರುಬೀಜಗಳು, ಗೇರುಬೀಜಗಳನ್ನು ಬಿಡಿಸಿ ಕೊಡಲು ಕೆಲಸಗಿತ್ತಿಯರಿದ್ದರು. ಹಿತ್ತಲಲ್ಲಿ ತೊಂಡೆ ಚಪ್ಪರವೂ ಇರುವಾಗ ಗೇರುಬೀಜದ ಪಲ್ಯ ಒಂದು ಮಾಮೂಲಿ ಅಡುಗೆ. ಅಮ್ಮ ಬಾಣಲೆ ತುಂಬಾ ಮಾಡಿ ಇರಿಸುತ್ತಿದ್ದ ಗೇರುಬೀಜದ ಪಲ್ಯ ತಿನ್ನಲು ನಾವು ಮಕ್ಕಳು ನಾ ಮುಂದು ತಾ ಮುಂದು ಎಂದು ತಟ್ಟೆಯ ಎದುರು ಕುಳಿತು ಬಡಿಸಿದ ಅನ್ನ ಪಲ್ಯ ಸಾರು ಉಂಡು ಏಳುತ್ತಿದ್ದ ಕಾಲವೊಂದಿತ್ತು. ಹೋದ ಕಾಲ ಮತ್ತೆ ಬರುವಂತಿಲ್ಲ. ಆದರೂ ಗೇರುಹಣ್ಣಿನ ಸೀಸನ್ ಅಲ್ಲದ ಸಮಯದಲ್ಲಿ ಗೇರುಬೀಜದ ಪಲ್ಯ ತಿನ್ನುವ ಯೋಗ ಬಂದಿದೆ.

ಮನೆಗೆ ಬಂದೊಡನೆ ನನಗೂ ಗೇರುಬೀಜದ ಪಲ್ಯ ಮಾಡುವ ಹಂಬಲ ಮೂಡಿತು. ಡಬ್ಬ ತುಂಬಾ ಪಾಯಸಕ್ಕಾಗಿ ತಂದಿರಿಸಿದ ಗೇರುಬೀಜಗಳಿವೆ, ತೊಂಡೆಕಾಯಿ ಇಲ್ಲ, ಕ್ಯಾಪ್ಸಿಕಂ ಇದೆ, ಆದೀತು.

ಒಂದು ಕ್ಯಾಪ್ಸಿಕಂ, ತೊಳೆದು ಹೆಚ್ಚಿಡುವುದು.
10 - 12 ಗೇರುಬೀಜಗಳು, ಹೋಳು ಮಾಡಿ ಕುದಿಯುವ ನೀರೆರೆದು ಮುಚ್ಚಿಡುವುದು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಸಾಸಿವೆ ಸಿಡಿದಾಗ,
ಕರಿಬೇವು ಉದುರಿಸಿ,
ಹೆಚ್ಚಿಟ್ಟ ಕ್ಯಾಪ್ಸಿಕಂ ಹಾಕಿ ಸೌಟಾಡಿಸಿ,
ಉಪ್ಪು ಉದುರಿಸಿ.
ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಮುಚ್ಚಿರಿಸಿ,
ನೀರು ಬಸಿದು ನೆನೆದ ಗೇರುಬೀಜಗಳನ್ನು ಹಾಕಿ,
ಕಾಯಿತುರಿ ಉದುರಿಸಿ,
ಸೌಟಿನಲ್ಲಿ ಎಲ್ಲವನ್ನೂ ಬೆರೆಸಿ,
ಊಟದ ಟೇಬಲ್ ಮೇಲೆ ಇರಿಸಿ,
ಅನ್ನದೊಂದಿಗೆ ಸವಿಯಿರಿ.

ಎಳೆಯ ತೊಂಡೆಕಾಯಿಗಳು ಬಂದಿವೆ.
10 - 15 ತೊಂಡೆಕಾಯಿಗಳನ್ನು ತೊಳೆದು ಪಲ್ಯಕ್ಕೆ ಸೂಕ್ತವಾಗುವಂತೆ ಕತ್ತರಿಸಿ,
ಉಪ್ಪು ಬೆರೆಸಿ ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ,
ನಿಧಾನಗತಿಯಲ್ಲಿ ಒತ್ತಡ ಇಳಿಸಿ ಮುಚ್ಚಳ ತೆಗೆಯಿಯಿರಿ.
ತೊಂಡೆಕಾಯಿ ಬೆಂದಿರುತ್ತದೆ.

ಬಾಣಲೆಯಲ್ಲಿ ಒಗ್ಗರಣೆಗಿರಿಸಿ, ಈ ಮೊದಲು ಕ್ಯಾಪ್ಸಿಕಂ ಪಲ್ಯ ಮಾಡಿದ ವಿದಾನವನ್ನೇ ಅನುಸರಿಸಿ ಗೇರುಬೀಜದ ಪಲ್ಯ ಸಿದ್ಧಪಡಿಸಿ.

ಈ ಪಲ್ಯಕ್ಕೆ ಬೇರೆ ಯಾವುದೇ ಮಸಾಲಾ ಸಾಮಗ್ರಿ ಹಾಕುವುದಕ್ಕಿಲ್ಲ, ಗೇರುಬೀಜವೇ ಇದರ ಪ್ರಧಾನ ಆಕರ್ಷಣೆ ಎಂದು ತಿಳಿಯಿರಿ.

ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕೊಬ್ಬು, ಖನಿಜಾಂಶಗಳಿಂದ ಸಮೃದ್ಧವಾಗಿರುವ ಗೇರುಬೀಜವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ.

ಸಸ್ಯವಿಜ್ಞಾನದಲ್ಲಿ Anacardium occidentale ಎಂದಾಗಿರುವ ನಿತ್ಯ ಹರಿದ್ವರ್ಣದ ಗೇರುಮರದ ಮೂಲ ನೆಲೆ ದಕ್ಷಿಣ ಅಮೇರಿಕಾದ ಬ್ರೆಜಿಲ್ ಆದರೂ ಭಾರತ ಹಾಗೂ ಆಫ್ರಿಕಾ ಅತಿ ಹೆಚ್ಚು ಗೇರುಬೀಜ ಉತ್ಪಾದಕ ದೇಶಗಳಾಗಿವೆ.


Sunday 8 December 2019

ಉಪ್ಪಿನಕಾಯಿಯ ರುಚಿ




" ಈ ನಿನ್ನ ನೆಲ್ಲಿಕಾಯಿ ಉಪ್ಪಿನಕಾಯ್ ತಿಂದು ಸಾಕಾಯ್ತು.. ಅಂಗಳದಲ್ಲಿ ಬೀಂಬುಳಿ ಮರ ಉಂಟಲ್ಲ.. "

ನನಗೂ ಒಂದೇ ತೆರನಾದ ಉಪ್ಪಿನಕಾಯಿ ತಿಂದು ಸಾಕಾಗಿತ್ತು. ಎಳೆಯ ನೆಲ್ಲಿಕಾಯಿಗಳು ಸಿಕ್ಕಿದಾಗ ಜಜ್ಜಿ ಉಪ್ಪು ಬೆರೆಸಿ ಇಟ್ಟಿದ್ದು, ಉಪ್ಪಿನಕಾಯಿ ಹಿಟ್ಟು ಬೆರೆಸಿ ಊಟದ ತಟ್ಟೆಗೆ ಬಡಿಸಲಿಕ್ಕೂ ಆಗುತ್ತೇಂತ ಅಂದ್ಕೊಂಡಿದ್ದೆ

" ಬೀಂಬುಳಿ ಉಂಟೋ ನೋಡಿ ಬನ್ನಿ.. " ಗೌರತ್ತೆ ಹೊರ ಹೋದವರು ಬೀಂಬುಳಿಗಳನ್ನು ಕೊಯ್ದು ತಂದಿಟ್ಟರು.

ಸಂಜೆಯ ಬಿಡುವಿನ ವೇಳೆ, ಅಡುಗೆಮನೆಯಲ್ಲಿ ಉಪ್ಪಿನಕಾಯಿ ವೈವಿಧ್ಯಕ್ಕೆ ಬೇಕಾದಂತಹ ಸಾಮಗ್ರಿಗಳು ಇವೆಯೆಂದು ಖಚಿತಪಡಿಸಿಕೊಂಡೇ ಬೀಂಬುಳಿಗಳನ್ನು ಎದುರಿಗಿಟ್ಟು ಮೆಟ್ಟುಕತ್ತಿಯಲ್ಲಿ ಚಕಚಕನೆ ಸಮಾನ ಗಾತ್ರದಲ್ಲಿ ಕತ್ತರಸಿ ಇಟ್ಟಾಯ್ತು.

"ನಾಲ್ಕು ಗಾಂಧಾರಿ ಮೆಣಸು ಹಾಕು.. "
" ಆಯ್ತು.. " ಅನ್ನುತ್ತ ಮೂಲೆಯಲ್ಲಿದ್ದ ಮಾವಿನ ಶುಂಠಿಯನ್ನೂ ಕೊಚ್ಚಿ ಹಾಕಲಾಯಿತು.
ಉಪ್ಪಿನ ನೆಲ್ಲಿಕಾಯಿಗಳನ್ನು ಬಿಡಬೇಕಾಗಿಲ್ಲ, ಒಂದು ಸೌಟು ನೆಲ್ಲಿಕಾಯಿ ಹೋಳುಗಳೂ ಸೇರಿದಾಗ ಇದೊಂದು ಹೊಸರುಚಿಯ ಪಾಕ ಆದೀತು.

ಬಾಣಲೆಗೆ 3 ಚಮಚ ಸಾಸಿವೆ,
1 ಚಮಚ ಕೊತ್ತಂಬರಿ
ಸ್ವಲ್ಪ ಜೀರಿಗೆ
ಕಡ್ಲೆ ಗಾತ್ರದ ಇಂಗು
ಎಣ್ಣೆ ಹಾಕದೆ ಬೆಚ್ಚಗಾಗುವಷ್ಟು ಹುರಿಯಿರಿ, ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಆಗಲು ಇದು ಸುಲಭ ವಿಧಾನ.

ಮಿಕ್ಸಿಯ ಜಾರು ಶುಭ್ರವಾಗಿರಬೇಕಾದ್ದು ಕಡ್ಡಾಯ. ಮಿಕ್ಸಿಯಲ್ಲಿ ತಿರುಗಿಸಲು ಈ ಸಾಮಗ್ರಿಗಳು ಏನೂ ಸಾಲದು. ಅದಕ್ಕೇನು ಮಾಡೋಣ?

3 ಚಮಚ ಮೆಣಸಿನ ಹುಡಿ
ಅರ್ಧ ಚಮಚ ಅರಸಿಣದ ಹುಡಿ
3 ಚಮಚ ಉಪ್ಪಿನ ಹುಡಿ
ಜೊತೆಗೂಡಿ ಅರೆಯಿರಿ.
ನುಣ್ಣಗೆ ಪುಡಿ ಆಯ್ತು.
ಉಪ್ಪನ್ನೂ ಹಾಕಿ ತಿರುಗಿಸೂದ್ರಿಂದ ಮಿಕ್ಸಿಯ ಬ್ಲೇಡ್ ಹರಿತವಾಗುತ್ತೆ ಅಂತ ಎಲ್ಲೋ ಓದಿದ ನೆನಪು ಬಂತು.

ಉಪ್ಪಿನಕಾಯಿಗಾಗಿ ಅರೆದ ಮಸಾಲೆ ಏನಿದೆಯೋ ಅದನ್ನು ' ಹೊರಡಿ ' ಅನ್ನುವ ವಾಡಿಕೆ ನಮ್ಮದು. ಮೆಣಸು ಸಾಸಿವೆ ಇತ್ಯಾದಿಗಳನ್ನು ಹುರಿದು ಅರೆದಾಗ ಉಪ್ಪಿನಕಾಯಿ ಹುರಿದ ಹೊರಡಿ ಆಯ್ತು. ಹುರಿಯದೇ ಹಾಗೇನೇ ಅರೆದಾಗ ಹಸಿ ಹೊರಡಿ ಬಂದಿತು ಅನ್ನಿ. ಅಚ್ಚ ಕನ್ನಡದಲ್ಲಿ ಉಪ್ಪಿನಕಾಯಿ ಹಸಿ ಹಿಟ್ಟು ಹಾಗೂ ಹುರಿದ ಹಿಟ್ಟು ಅಂದರಾದೀತು.

ನಾನು ಮಾಡಿದಂತಹ ಉಪ್ಪಿನಕಾಯಿ ಹೊರಡಿ ಹಸಿಯೂ ಅಲ್ಲದ ಹುರಿದೂ ಇಲ್ಲದ ಮಾದರಿಯದು. ಹೇಗೆ ಮಾಡಿದ್ರೂನೂ ರುಚಿಕರವಾದರೆ ಸಾಕು.

ಇದೀಗ ಮಿಕ್ಸಿಯಲ್ಲಿ ಸಿದ್ಧವಾದ ಉಪ್ಪಿನಕಾಯಿ ಹೊರಡಿಯನ್ನು ಬೀಂಬುಳಿ ಹೋಳುಗಳಿಗೆ ಬೆರೆಸಿ ಮುಚ್ಚಿ ಇಡುವುದು. ಇದೀಗ ಸಂಜೆಯ ಹೊತ್ತು, ನಾಳೆ ಮುಂಜಾನೆ ಉಪ್ಪಿನಕಾಯಿ ಹದವಾಗಿ ಬಂದಿದಯೋ ಎಂದು ನೋಡಿಕೊಳ್ಳೋಣ.

ಬೆಳಗಾಯಿತು, ಉಪ್ಪಿನಕಾಯಿ ಜಾಡಿ ಬಿಡಿಸಿ ನೋಡಿದಾಗ, ನೆಲ್ಲಿಕಾಯಿ, ಗಾಂಧಾರಿ, ಮಾಂಙನ್ನಾರಿ, ಬೀಂಬುಳಿಯೊಂದಿಗೆ ಸೇರಿ ಅರ್ಧಕ್ಕರ್ಧ ಕಳಗಿಳಿದಿವೆ! ನಾಲಿಗೆ ರುಚಿ ನೋಡಿತು...
ಗಾಂಧಾರಿ ಮೆಣಸು ಇತ್ತಲ್ವೇ, ಅಬಬ.. ಸ್ವಲ್ಪ ಉಪ್ಪು ಹಾಕೋಣ.
2 ಚಮಚ ಉಪ್ಪು ಬೆರೆಸಿ, ಸೌಟಿನಲ್ಲಿ ಗರಗರ ತಿರುಗಿಸಿ ಮೇಲೆ ಕೆಳಗೆ ಮಾಡ್ಬಿಟ್ಟು, ಮದ್ಯಾಹ್ನದೂಟಕ್ಕೆ ಟೇಬಲ್ ಮೇಲೆ ಇಟ್ಟೂ ಆಯ್ತು.



" ಊಟಕ್ಕೂ ಸೈ, ತಿಂಡಿಗೂ ಜೈ. " ಗೌರತ್ತೆ ಅಂದಿದ್ದು.


Sunday 1 December 2019

ಅನ್ನದ ಗಂಜಿ








ಕುಚ್ಚುಲಕ್ಕಿ ಅನ್ನ ತಯಾರಿಯ ವಿಧಾನ ಬರೆದಾಯ್ತು. ಬಾಲ್ಯದ ದಿನಗಳ ನೆನಪೂ ಬಂದಿತು.

ಅಂದಿನ ದಿನಗಳಲ್ಲಿ ಸಿರಿವಂತರೇ ಆಗಿದ್ದರೂ ಕಟ್ಟಿಗೆಯ ಒಲೆ ಅಡುಗೆಮನೆಗಳಲ್ಲಿ ಇತ್ತು. ಅತ್ಯಾಧುನಿಕತೆಯ ಸ್ಪರ್ಶ ಲವಲೇಶವೂ ಇದ್ದಿರಲಿಲ್ಲ. ಕುಚ್ಚುಲಕ್ಕಿ ಅನ್ನವೇ ಎಲ್ಲರ ಮನೆಯ ನಿತ್ಯದೂಟ. ದೇವರಿಗೆ ನೈವೇದ್ಯದ ಅನ್ನ ಇಟ್ಟು ಉಣ್ಣುವವರ ಮನೆಯಿಂದ ಮಾತ್ರ ಗಂಧಸಾಲೆ ಅನ್ನದ ಸುಗಂಧ ಬರುತ್ತಿತ್ತು.

ಇರಲಿ, ಅನ್ನದ ಗಂಜಿಯ ಸದ್ಬಳಕೆ ಹೇಗೆಂದು ನೋಡೋಣ. ಮನೆ ಅಂದ ಮೇಲೆ ಹಸು ಎಮ್ಮೆಗಳೂ ಇರಬೇಕು, ಮನೆಮಂದಿಗೆ ಹಾಲು ಮಜ್ಜಿಗೆ ಆಗಬೇಡವೇ, ಪ್ಯಾಕೇಟ್ ಹಾಲು ವಿತರಣಾ ವ್ಯವಸ್ಥೆ ನಮ್ಮ ಕನಸಿಗೂ ನಿಲುಕದ ಮಾತು. ಅನ್ನದ ಗಂಜಿಯನ್ನು ಕರೆಯುವ ಹಸುವಿಗೆ ಇಲ್ಲವೇ ಕರುವಿಗೆ ಕುಡಿಸಲಾಗುತ್ತಿತ್ತು.

ಭಾನುವಾರದ ರಜೆಯ ದಿನ, ತಲೆಗೆ ಎಣ್ಣೆ ಹಾಕಿ ಮೀಯುವ ದಿನ, ದಿನ ಮುಂಚಿತವಾಗಿ ನನ್ನಮ್ಮ ಒಂದು ತಪಲೆಯಲ್ಲಿ ಅನ್ನದ ಗಂಜಿಯನ್ನು ತೆಗೆದಿರಿಸುತ್ತಿದ್ದಳು. ತಂಪು ತಂಪಾದ ಅನ್ನದ ಗಂಜಿ ಹಲ್ವದಂತೆ ಯಾ ಮುದ್ದೆಯಂತೆ ಇಲ್ಲವೇ ಹಾಲುಬಾಯಿಯಂತೆ ಕತ್ತರಿಸಿ ತಿನ್ನುವ ಹಾಗಿರುತ್ತಿತ್ತು.
" ಬಾ ಇಲ್ಲಿ, ಕುಳಿತುಕೋ.. " ಅನ್ನುತ್ತ ಮುಕ್ಕಾಲುಮಣೆಯಲ್ಲಿ ಕುಳ್ಳಿರಿಸಿ, ಜಡೆ ಬಿಡಿಸಿ ನೆತ್ತಿಯಿಂದ ಕೂದಲ ತುದಿವರೆಗೆ ಅನ್ನದ ಗಂಜಿಯ ಸಿಂಚನ. ಗಂಟೆ ಬಿಟ್ಟು ಸೀಗೇಹುಡಿ, ಗೊಂಪುಗಳೊಂದಿಗೆ ಸರಸವಾಡುತ್ತ ತಲೆಗೆ ನೀರೆರೆಯುವಾಟದ ನೆನಪು ಈಗಲೂ ತಂಪು ತಂಪಾಗಿ ಮನದಾಳದಲ್ಲಿ...
ಇದು ಅನ್ನದ ಗಂಜಿಯ ಒಂದು ಉಪಯೋಗ.

ಕಾಸರಗೋಡು ಮಗ್ಗದ ಸೀರೆ, ನನ್ನಮ್ಮನ ನಿತ್ಯದುಡುಗೆ. ಕಾಟನ್ ಸೀರೆಗಳೂ ಇರುತ್ತಿದ್ದುವು. ಕೆಲಸಗಿತ್ತಿಯು ಬಟ್ಟೆ ತೊಳೆದ ನಂತರ ಅಮ್ಮನ ಸೀರೆಯನ್ನು ತೆಗೆದಿರಿಸಿ, " ತೆಳಿ ಇಲ್ಲವೇ? " ಎಂದು ಕೇಳುವುದೂ, ಅಮ್ಮ ಒಂದು ತಪಲೆ ಅನ್ನದ ಗಂಜಿಯನ್ನು ಹೊರಗಿರಿಸುವುದೂ, ಆಕೆ ತೆಳಿಯನ್ನು ಬಕೇಟಿಗೆ ಎರೆದು ಇನ್ನೂ ನೀರೆರೆದು ತೆಳ್ಳಗಾಗಿಸಿ, ಸೀರೆಯನ್ನು ಗಂಜಿಯಲ್ಲಿ ಅದ್ದಿ ಅದ್ದಿ, ಹಿಂಡಿ ತೆಗೆದು ಮದ್ಯಾಹ್ನದ ಸುಡುಬಿಸಿಲಿಗೆ ಒಣಹಾಕುವಲ್ಲಿಗೆ ಅನ್ನದ ಗಂಜಿಯ ಇನ್ನೊಂದು ಉಪಯೋಗ. ಹತ್ತಿಯ ಬಟ್ಟೆಗಳು ಹೊಚ್ಚ ಹೊಸತಾಗಿ ಹೆಚ್ಚು ಸಮಯ ಬಾಳಿಕೆ ಬರಲು ಈ ಉಪಾಯ.
ಈಗ ನೂಲಿನ ಸೀರೆಗಳನ್ನು ಕೇಳುವವರಿಲ್ಲ, ನೈಟೀಧಾರಿಣಿಯರಿಗೆ ಸೀರೆಯ ಹಂಗಿಲ್ಲ.

ಅನ್ನದ ಗಂಜಿ ಇಲ್ಲದಿದ್ದರೂ ಗಂಜಿ ಹಾಕಿದ ಸೀರೆ ಆಗಬೇಕಿದೆಯಲ್ಲ, ಏನು ಮಾಡೋಣ?

2 - 3 ಚಮಚ ಮೈದಾ ಹಿಟ್ಟು, ಒಂದ ಲೋಟ ನೀರಿನಲ್ಲಿ ಗಂಟುಗಳಿರದಂತೆ ಕಲಸಿ,
ಒಂದು ತಪಲೆ ನೀರು ( ಒಂದು ಲೀಟರ್ ) ಕುದಿಸಿ,
ಕುದಿಯುತ್ತಿರುವ ನೀರಿಗೆ ಮೈದಾ ಹಿಟ್ಟನ್ನು ಎರೆದು,
ಸಟ್ಟುಗದಲ್ಸಿ ಆಡಿಸುತ್ತ ಇದ್ದಂತೆ ಮೈದಾ ಬೆಂದು ಮೈದಾ ಗಂಜಿ ಬಂದಿತೇ, ಈ ಗಂಜಿಯಿಂದ ಸೀರೆಗಳಿಗೆ, ಹತ್ತಿಯ ಬಟ್ಟೆಗಳಿಗೆ ಗಂಜೀ ಸ್ಪರ್ಶ ಕೊಡಬಹುದು.
ನೆನಪಿರಲಿ, ಬಿಸಿಲು ಇಲ್ಲದಿರುವಾಗ, ಭೋರೆಂದು ಮಳೆ ಸುರಿಯುತ್ತಿರುವಾಗ ಗಂಜಿ ಬಟ್ಟೆ ಮಾಡಿಕೊಳ್ಳಲು ಸಾಧ್ಯವಾಗದು.

ಅಡುಗೆಯಲ್ಲಿ ಗಂಜಿಯ ಉಪಯೋಗ ಹೇಗೆ?

ತಿಳಿಸಾರು ಮಾಡುವಾಗ ರುಚಿಗೆ ಸೂಕ್ತವಾಗುವಂತೆ ತೆಳಿ ಎರೆಯಬಹುದು, ಸಾರು ಉಣ್ಣುವಾಗ, " ತೆಳಿ ಹಾಕಿ ಮಾಡಿದ್ದೋ ? " ಎಂದು ಕೇಳುವಂತಿರಬಾರದು.

ತೊಗರಿಬೇಳೆ ಯಾ ಇನ್ನಿತರ ಬೇಳೆಕಾಳುಗಳನ್ನು ಬೇಯಿಸಲು ಅನ್ನದ ಗಂಜಿ ತಯಾರಾಗಿ ಇದ್ದರೆ ಅದರಲ್ಲೇ ಬೇಯಿಸಿ.
ತರಕಾರಿಗಳನ್ನೂ ಬೇಯಿಸಬಹುದು.
ಸೂಪ್ ಮಾಡ್ತಿದ್ದೀರಾ? ಅನ್ನದ ಗಂಜಿ ಬೇಕಾದೀತು.
ಗಂಜಿಗೆ ಉಪ್ಪು ಹಾಕಿ, ಗಾಂಧಾರಿ ಮೆಣಸು ನುರಿದು, ಮಜ್ಜಿಗೆ ಎರೆದು ಕುಡಿಯಿರಿ, ಬಿಸಿಲ ಬೇಗೆಗೆ ಸೂಕ್ತ ಪಾನೀಯ.

ಇದ್ಯಾವುದೂ ಬೇಕಾಗಿಲ್ಲ, ಮನೆ ಮುಂದಿನ ತೆಂಗಿನ ಮರದ ಬುಡಕ್ಕೆ ಚೆಲ್ಲಿ, ಗೊಬ್ಬರವಾಯಿತು ಅನ್ನಿ.



Thursday 21 November 2019

ಕುಚ್ಚುಲಕ್ಕಿ ಅನ್ನ




" ಅಮ್ಮ, ಏನ್ ಮಾಡ್ತಾ ಇದ್ದೀ? "
" ಕುಚ್ಚುಲಕ್ಕಿ ಅನ್ನ ಮಾಡೂದನ್ನ ಬರೆಯೋಣಾಂತ.. "
" ಅಯ್ಯೋ, ಯಾರು ಓದ್ತಾರೇ.. ಯೂಟ್ಯೂಬಿನಲ್ಲೂ ಸಿಗುತ್ತೆ.. "
" ಇರ್ಲಿ ಬಿಡು, ನಾನು ಅಳತೆ ಲೆಕ್ಕಾಚಾರ ಎಲ್ಲ ಬರೆದಿಟ್ಟಾಗಿದೆ.."
ಕುಚ್ಚುಲಕ್ಕಿ ಪ್ರಿಯನಾದ ಮಧು ವಿಷಯಾಂತರಿಸಿ " ತಿಂಡಿಗೇನು ಮಾಡಿದೀಯ? " ಪ್ರಶ್ನೆ ಎಸೆದ.
" ಖರ್ಜೂರದ ದೋಸೆ, ಉಳಿದ ಹಿಟ್ಟಿಂದ ಸಂಜೆ ಅಪ್ಪ ಮಾಡೂದು. "
" ಆಯ್ತು, ನಂದು ಮೆಟ್ರೋ ಸ್ಟೇಶನ್ ಬಂತು, ಸಂಜೆ ಮಾತಾಡೋಣ. "




ನಾವು ಕುಚ್ಚುಲಕ್ಕಿ ಅನ್ನ ಮಾಡೋಣ.

ಕಟ್ಟಿಗೆಯ ಒಲೆಯಲ್ಲಿ ಬೇಯುವ ಕುಚ್ಚುಲಕ್ಕಿ, ಇಂದು ಕಾಲಧರ್ಮಕ್ಕನುಸಾರ ಬೇಯಿಸುವ ಮಾಧ್ಯಮವೂ ಬದಲಾಗಿದೆ. ಇಲೆಕ್ಟ್ರಿಕ್ ಉಪಕರಣದಿಂದ ಬೇಯಿಸ ಹೋದರೆ ಕರೆಂಟ್ ಬಿಲ್ ಕೂಡಾ ಯದ್ವಾತದ್ವಾ ಏರಿಕೆಯಾದೀತು.

ಗ್ಯಾಸ್ ಒಲೆ ಹಾಗೂ ಪ್ರೆಶರ್ ಕುಕ್ಕರ್ ನಮ್ಮ ಆಯ್ಕೆ.
5 ಲೀಟರ್ ಸಾಮರ್ಥ್ಯದ ಕುಕ್ಕರ್ ಇರಲಿ, ಒಳಗಿನ್ನೊಂದು ತಪಲೆ ಇಟ್ಟು ಅನ್ನ ಮಾಡುವಂತಿಲ್ಲ.
ನೇರವಾಗಿ ಕುಕ್ಕರ್ ಒಳಗೆ 3 ಲೀಟರ್ ನೀರು ಎರೆಯಿರಿ, ನೀರು ತುಸು ಜಾಸ್ತಿ ಎರೆದರೆ ಒಳ್ಳೆಯದು. ಮೂರೂವರೆ ಲೀಟರ್ ಅಂತಿಟ್ಕೊಳ್ಳಿ. ದೊಡ್ಡ ಉರಿಯಲ್ಲಿ ನೀರು ಕುದಿಯಲಿ.
2 ಲೋಟ ಕುಚ್ಚುಲಕ್ಕಿ ಅಳೆದು ತೊಳೆಯಿರಿ, 3ರಿಂದ ನಾಲ್ಕು ಬಾರಿ ತೊಳೆದು, ನೀರು ಬಸಿದು, ಕುದಿಯುತ್ತಿರುವ ನೀರಿಗೆ ಹಾಕಿರಿ. ಕುಕ್ಕರ್ ಮುಚ್ಚಿ ವೆಯಿಟ್ ಹಾಕಿರಿ.

ಕುಕ್ಕರ್ ಮೂರು ಸೀಟಿ ಹಾಕಿದ ಕೂಡಲೇ ಉರಿ ತಗ್ಗಿಸಿ.
15 ನಿಮಿಷಗಳ ನಂತರ ಗ್ಯಾಸ್ ನಂದಿಸಿ.
ಒತ್ತಡ ಪೂರ್ಣವಾಗಿ ಇಳಿದ ನಂತರವೇ ಮುಚ್ಚಳ ತೆರೆಯತಕ್ಕದ್ದು.
ಅನ್ನ ಚೆನ್ನಾಗಿ ಬೆಂದಿರುತ್ತದೆ. ಅನ್ನದ ಗಂಜಿನೀರು ಯಾ ತೆಳಿ ಬಸಿಯಬೇಕಾಗಿದೆ.

ಜಾಗರೂಕತೆಯಿಂದ ಇನ್ನೋಂದು ತಪಲೆ ಎದುರಿಗಿಟ್ಟು, ತಟ್ಟೆಯ ಸಹಾಯದಿಂದ ಬಗ್ಗಿಸಿ ಗಂಜಿ ಬಸಿಯಿರಿ. ಈ ಕಾರ್ಯಕ್ಕೆ ಸ್ವಲ್ಪ ಅನುಭವವೂ ಬೇಕಾಗುತ್ತದೆ.

ಇದು ಸಾಧ್ಯವಾಗದ ಕಾರ್ಯ ಎಂದಾದರೆ ತೂತಿನ ತಪಲೆಗೆ ಬಸಿದು ಅನ್ನ ಮಾಡಿಕೊಳ್ಳಬಹುದು, ಜಾಲರಿ ಸಟ್ಟುಗದಲ್ಲಿ ಅನ್ನ ಹಾಗೂ ಗಂಜಿ ಬೇರ್ಪಡಿಸಿಕೊಳ್ಳಬಹುದು.

ಅನ್ನ ಎಂದೆನ್ನಿಸಿಕೊಳ್ಳಬೇಕಾದರೆ ತೆಳಿ ಯಾ ಗಂಜಿ ಏನೂ ಇರಕೂಡದು.

ಈಗ ನಾವು ಎರೆದ ನೀರಿನ ಪ್ರಮಾಣದಲ್ಲಿ ಗಂಜಿ ನೀರು 2 ಲೀಟರ್ ಇರಬೇಕು.
ಬೇಯಿಸಲು ಎರೆದ ನೀರಿನ ಪ್ರಮಾಣ ಕಡಿಮೆಯಾದರೆ ಮಡ್ಡಿಯಂತೆ ಇಲ್ಲವೇ ಮುದ್ದೆಯಂತೆ ಆದೀತು. ಗಂಜಿ ಬಸಿಯಲೂ ಸಾಧ್ಯವಾಗದು. ಹಾಗೇನೇ ಗಂಜಿಯೂಟ ಎಂದು ಉಣ್ಣಬೇಕಾದೀತು.

ಕುಕ್ಕರ್ ಉತ್ತಮ ಸ್ಥಿತಿಯಲ್ಲಿ ಇರಬೇಕು, ಲೀಕೇಜ್ ಯಾ ಸೋರುವಿಕೆ ಇರಬಾರದು.
ಪದೇ ಪದೇ ವಿಸಿಲ್ ಹಾಕುತ್ತ ಇರಬಾರದು, ಅನ್ನವೂ ಗಂಜಿಯೂ ಮೇಲೆ ಉಕ್ಕಿ ಹರಿದೀತು.
ಕುಕ್ಕರ್ ಒಳಗೆ ತಪಲೆಯಿಟ್ಟು ಬೇಯಿಸುವ ಕ್ರಮ ಕುಚ್ಚುಲಕ್ಕಿಗೆ ಸಾಧ್ಯವಾಗದು.

ಕಟ್ಟಿಗೆಯ ಒಲೆಯಲ್ಲಿ ನಿಧಾನವಾಗಿ ಬೇಯುವ ಕುಚ್ಚುಲಕ್ಕಿ ನಮ್ಮ ಒತ್ತಡದ ಹಾಗೂ ವೇಗದ ಜೀವನಶೈಲಿಯಿಂದಾಗಿ ನಮ್ಮಿಂದ ದೂರವಾಗುತ್ತಿದೆ.

ನಾವು ದಕ್ಷಿಣ ಕನ್ನಡಿಗರು, ಜಗತ್ತಿನ ಯಾವ ಮೂಲೆಗೆ ಹೋದರೂ ಕುಚ್ಚುಲಕ್ಕಿ ಅನ್ನವನ್ನು ತಿಂದೇ ಸಿದ್ಧ ಎಂಬ ಜಾಯಮಾನದವರು. ನನ್ನ ಮಕ್ಕಳ ವಯೋಮಾನದವರಿಗೆ ಇಷ್ಟವಾದೀತು ಎಂದು ಈ ಬರಹ ಬಂದಿದೆ.

ಅನ್ನದ ತೆಳಿಯನ್ನು ಚೆಲ್ಲಬೇಕಿಲ್ಲ,
ಉಪ್ಪು ಬೆರೆಸಿ ಕುಡಿಯಿರಿ.
ಹಸಿಮೆಣಸು ನುರಿದು, ಮಜ್ಜಿಗೆ ಎರೆದು ಕುಡಿಯಿರಿ.
ದೇಹಕ್ಕೆ ಹಿತವಾಗಿ ಉಲ್ಲಾಸದಾಯಕ.
ಅಕ್ಕಿಯಲ್ಲಿರುವ ಜೀವ ಪೋಷಕ ದ್ರವ್ಯಗಳು ತೆಳಿ( ಗಂಜಿ )ಯಲ್ಲಿಯೂ ಇರುವುದರಿಂದ ರುಚಿಕರವಾಗಿಸಿ ಎಳೆಯ ಮಕ್ಕಳಿಗೂ ಕುಡಿಸಿರಿ.



ಟಿಪ್ಪಣಿ: ಈ ಬರಹಕ್ಕೆ ಪೂರಕ ಪ್ರತಿಕ್ರಿಯೆ ಬಂದಿದೆ. ಅನ್ನದ ಗಂಜಿ ಬಸಿಯುವ ಸುಲಭ ವಿಧಾನ ಹೀಗಿದೆ.
ಒತ್ತಡ ಇಳಿದ ನಂತರ ಮುಚ್ಚಳ ತೆಗೆದು ಗ್ಯಾಸ್ಕೆಟ್ ತೆಗೆದು ಪುನಃ ಮುಚ್ಚಿ , ಇನ್ನೊಂದು ತಪಲೆಗೆ ಬಗ್ಗಿಸಿ ಹಿಡಿಯಿರಿ. ಗಂಜಿನೀರು ಮಾತ್ರ ಇಳಿದು ಹೋಗುತ್ತದೆ. ಅನ್ನ ಬೀಳುವ ಭಯವೇ ಇಲ್ಲ, ಹಿಡಿದುಕೊಳ್ಳಲು ಕುಕ್ಕರಿನ ಹಿಡಿಕೆಯೇ ಇರುವುದರಿಂದ ಕೈ ಬಿಸಿ ಆಗಲಾರದು.




Saturday 9 November 2019

ದೋಸೆಯ ಅಪ್ಪ!




ಉದ್ದಿನ ದೋಸೆಯ ಹಿಟ್ಟು ಉಳಿಯಿತು, " ಸಂಜೆ ಪುನಃ ಎರೆದರೆ ಮಗಿದೀತು.."
ನನ್ನ ಸ್ವಗತ ಗೌರತ್ತೆ ಕಿವಿಗೆ ಬಿತ್ತು, " ಮಕ್ಕಳು ಬಂದಿರುವಾಗ ಸಂಜೆಗೂ ಚೊಂಯ್ ಅಂತ ದೋಸೆ ಮಾಡ್ತಾ ಇರು.." ಗೊಣಗಿದ್ದೂ ನನ್ನ ಕಿವಿ ತನಕ ಬಂತು.

ಅಪ್ಪದ ಗುಳಿಕಾವಲಿ ಕೆಳಗಿಳಿಯಿತು. ಚೆನ್ನಾಗಿ ಒರೆಸಿ, ವಿಮ್ ಲಿಕ್ವಿಡ್ ಹಾಕಿ ತೊಳೆದು, ನೀರ ಪಸೆ ಆರಲು ಕವುಚಿ ಇಟ್ಟಾಯ್ತು.

ಸಂಜೆಯ ಹೊತ್ತು, ಅಪ್ಪದ ಗುಳಿಕಾವಲಿ ಒಲೆಯ ಮೇಲೇರಿತು. ಎಣ್ಣೆ ಅಂದ್ರೆ ಹಪ್ಪಳ ಹುರಿದ ಎಣ್ಣೆ ಯಾ ಅಡುಗೆಯಲ್ಲಿ ಒಂದೆರಡು ಬಾರಿ ಬಳಸಲ್ಪಟ್ಟ ಎಣ್ಣೆಯನ್ನು ಪುಟ್ಟದೊಂದು ಚಮಚದಲ್ಲಿ ತುಂಬಿ ಗುಳಿಗಳ ಒಳಗೆ ಎರೆದು...

" ತುಪ್ಪವನ್ನೇ ಎರೆ.. " ಗೌರತ್ತೆಯ ಆರ್ಡರ್ ಬಂತು.
ಸರಿ, ನಾವು ತುಪ್ಪವನ್ನೇ ಎರೆದು,
ದೋಸೆಹಿಟ್ಟನ್ನು ಸೂಕ್ತ ಪ್ರಮಾಣದಲ್ಲಿ ಗುಳಿಗಳಿಗೆ ತುಂಬಿಸಿ, ಮುಚ್ಚಿ ಬೇಯಿಸುವುದು.
ಚೂರಿಯ ಮೊನೆಯಿಂದ ಎಬ್ಬಿಸಿ, ತುಪ್ಪ ಎರೆದು ಕವುಚಿ ಹಾಕುವುದು, ಜಾಸ್ತಿ ಎರೆಯದಿರಿ, ಗುಳಿ ಒಣಗಿದಂತಿರಬಾರದು.
ಎರಡೂ ಬದಿ ಸಮಾನವಾಗಿ ಬೆಂತಪ್ಪ
ತಟ್ಟೆಗೆ ಹಾಕ್ಕೊಂಡು ತಿನ್ನುದಪ್ಪ
ಟೊಮ್ಯಾಟೋ ಪುಳಿಂಜಿ ಇತ್ತಪ್ಪ
ಕೂಡಿಕೊಂಡು ತಿಂದೆವಪ್ಪ
ದೋಸೆಯ ಅಪ್ಪ
ಬಲು ಚೆನ್ನಾಗಿತ್ತಪ್ಪ

"ಹೌದೂ, ದೋಸೆ ಹಿಟ್ಟು ಯಾವ ನಮೂನಿದೂಂತ ಹೇಳಿರಲ್ಲ.. "

1 ಅಳತೆ ಉದ್ದಿನ ಬೇಳೆ
1 ಅಳತೆ ಹೆಸ್ರು ಬೇಳೆ
2 ಚಮಚ ಮೆಂತೆ
2 ಅಳತೆ ಬೆಳ್ತಿಗೆ ಅಕ್ಕಿ

ಬೇಳೆಗಳನ್ನೂ ಅಕ್ಕಿಯನ್ನೂ ಬೇರೆ ಬೇರೆಯಾಗಿ ತೊಳೆದು ನೆನೆಸಿಡುವುದು.
ಸಂಜೆಯ ಹೊತ್ತು ಅರೆಯಿರಿ.
ಬೇಳೆಗಳನ್ನು ಮೊದಲು ನುಣ್ಣಗೆ ಅರೆದು,
ಅಕ್ಕಿಯನ್ನೂ ಅದೇ ಪ್ರಕಾರವಾಗಿ ನುಣ್ಣಗೆ ಅರೆದು,
ರುಚಿಗೆ ಉಪ್ಪು ಕೂಡಿಸಿ, ಬೆರೆಸಿ ಹುದುಗು ಬರಲು ಬೆಚ್ಚನೆಯ ಜಾಗದಲ್ಲಿ ಮುಚ್ಚಿ ಇರಿಸುವುದು.
ಮುಂಜಾನೆ ದೋಸೆ ಎರೆದದ್ದು, ಸಂಜೆಗೆ ಅಪ್ಪವಾಯಿತು.
ಇಡ್ಲಿ ಹಿಟ್ಟು ಮಿಕ್ಕಿದ್ದರೆ ಅದೂ ಆಗುತ್ತೆ ಇಡ್ಲಿಯ ಅಪ್ಪ.

ನಮ್ಮ ವಿಶಾಲ ಕರ್ನಾಟಕ ವ್ಯಾಪ್ತಿಯಲ್ಲಿ ಈ ಸಂಜೆಯ ತಿನಿಸು ತರಹೇವಾರಿ ಹೆಸರುಗಳನ್ನು ಹೊಂದಿದೆ. ಪನಿಯಾರಮ್, ಪಡ್ಡು, ಗುಳಿಯಪ್ಪ, ಗುಂಡಪೊಂಗಲು, ಅಪ್ಪಂ.. ಈ ಥರ.

ಅಂದ ಹಾಗೆ ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು ಬೆರೆಸಿ ಅಪ್ಪ ಮಾಡುವುದು ರೂಢಿಯ ಕ್ರಮ. ಹೀಗೆ ಮಾಡಿದಿರಾದರೆ ಮೊಸರಿನೊಂದಿಗೆ ಸವಿಯಿರಿ, ಉದ್ದಿನ ವಡೆಯಂತೆ ಸ್ವಾದಿಷ್ಟವಾಗಿರುತ್ತದೆ.



Monday 4 November 2019

ಖರ್ಜೂರದ ಸವಿತಿನಿಸು




" ದೀಪಾವಳಿಗೆ ಏನೂ ಸಿಹಿ ಮಾಡಿಲ್ವ? "
" ಮಾಡದೇ ಉಂಟೇ, ತಿಂದೂ ಮುಗೀತು. ನಾಳೆ ಮಗಳು ಬರ್ತಿದಾಳೆ.. "
" ಗಮ್ಮತ್ತು ಮಾಡಲೇ ಬೇಕಲ್ಲ.. "
" ಹೊಸ ರುಚಿ ಮಾಡಿ ಇಡುವುದು"
" ಖರ್ಜೂರ ತಂದಿದೆ, ಹಲ್ವವಾಗಿ ಪರಿವರ್ತನೆ ಹೊಂದಲಿದೆ. "
" ಸರಿ ಬಿಡಿ, ಮಾಡೋ ವಿಧಾನ ನಮಗೂ ಸ್ವಲ್ಪ ತಿಳಿಸ್ಕೊಡಿ. "

ಖರ್ಜೂರದ ಪ್ಯಾಕೆಟ್ ಕೈಗೆತ್ತಿಕೊಂಡಾಗ ಮೂಲೆಯಲ್ಲಿದ್ದ ಹಣ್ಣು ಹಣ್ಣಾದ ಬಾಳೆಗೊನೆ ಮಿಕಿಮಿಕಿ ನೋಡಿತು.
ಬಾಳೆಹಣ್ಣನ್ನು ಬಿಡುವುದುಂಟೇ, ನಮ್ಮ ತೋಟದ ಕದಳೀಫಲ ಅದು. ಚೆನ್ನಾಗಿ ಕಳಿತಿದೆ.

15 ಬಾಳೆಹಣ್ಣುಗಳ ಸಿಪ್ಪೆ ಬಿಡಿಸಿ, ಕೈಯಲ್ಲೇ ಹಿಸುಕಿ ಇಟ್ಟಾಯ್ತು.
ಕುಕ್ಕರ್ ತಳ ದಪ್ಪ ಇರೂದ್ರಿಂದ ಹಾಗೂ ಬೇಯಿಸುವ ಕೆಲಸ ಬೇಗನೇ ಆಗೂದ್ರಿಂದ ನನ್ನ ಆದ್ಯತೆ ಕುಕ್ಕರ್.
ಕುಕ್ಕರಿಗೆ 2ಚಮಚ ತುಪ್ಪ ಎರೆದು ಬಾಳೆಹಣ್ಣನ್ನು ಬೇಯಿಸಲು ಇಡುವುದು.
ಖರ್ಜೂರಗಳೆಲ್ಲ ಬೀಜ ಬಿಡಿಸಿಕೊಂಡವು.
ಬಾಳೆಹಣ್ಣು ಬೆಂದ ಪರಿಮಳ ಬಂದಿತು. ಖರ್ಜೂರಗಳನ್ನು ಹಾಕುವುದು. ಸೌಟಾಡಿಸಿ, ಕುಕ್ಕರ್ ಮುಚ್ಚಿ ವೆಯಿಟ್ ಹಾಕಿರಿ.
ಚಿಕ್ಕದಾಗಿ ವಿಸಿಲ್ ಕೇಳಿದೊಡನೆ ಗ್ಯಾಸ್ ಉರಿ ನಂದಿಸುವುದು.
ಒತ್ತಡ ಇಳಿದ ನಂತರ ಮುಚ್ಚಳ ತೆರೆಯಿರಿ. ಬಾಳೆಹಣ್ಣು ಹಾಗೂ ಖರ್ಜೂರ ಬೆರೆತಿವೆ.
1 ಅಚ್ಚು ಬೆಲ್ಲ ಪುಡಿ ಮಾಡಿ ಹಾಕಿ ಪುನಃ ಒಲೆಯ ಮೇಲಿಟ್ಟು ಸೌಟು ತಿರುಗಿಸುತ್ತ ಇದ್ದಂತೆ ಬೆಲ್ಲ ಕರಗಿತು.
ಈಗ 2 - 3 ಚಮಚ ರಾಗೀಮಾಲ್ಟ್ ಸೇರಿಸಿ ಕೆದಕಿ, ಇನ್ನೂ 2 ಚಮಚ ತುಪ್ಪ ಎರೆದು ಸೌಟಿನಲ್ಲಿ ಪಾಕ ಬರುವ ತನಕ ಹದನಾದ ಉರಿಯಲ್ಲಿ ಬೇಯಿಸಿ.
ಹುಡಿ ಮಾಡಿದ ಏಲಕ್ಕಿ,
ತುಪ್ಪದಲ್ಲಿ ಹುರಿದ ಗೇರುಬೀಜ, ದ್ರಾಕ್ಷಿ ಸಹಿತ ಹಾಕುವ ಸಮಯ,
ತುಪ್ಪ ಸವರಿದ ತಟ್ಟೆಗೆ ಹಾಕಿ, ಮೇಲಿನಿಂದ 1 ಚಮಚ ತುಪ್ಪ ಎರೆದು ಸಟ್ಟುಗದಲ್ಲಿ ತಟ್ಟಿ ಸಮಪ್ರಕಾರವಾಗಿ ಹರಡುವುದು. ಆರಿದ ನಂತರ ಚೂರಿ ಯಾ ಚಮಚದಲ್ಲಿ ಗೆರೆ ಎಳೆದು ತುಂಡು ಮಾಡಿ ಇಡುವುದು, ಇಲ್ಲವೇ ಅಂಗೈಯಲ್ಲಿ ಉಂಡೆ ಮಾಡಿ ಮೆಲ್ಲನೆ ಒತ್ತಿ ಬಟ್ಟಲಲ್ಲಿ ಇಟ್ಟರೂ ಆಕರ್ಷಕವಾಗಿರುತ್ತದೆ.




ಇದು ನಮ್ಮ ದೀಪಾವಳಿಯ ಸಿಹಿ ತಿನಿಸು.
ದೀಪಾವಳಿ ಬರುತ್ತೇಂತ ಮಾಡಿಟ್ಟಿದ್ದು ಮಗಳು ಬರುವ ಮೊದಲೇ ತಿಂದು ಮುಗಿಯಿತು. ಹಾಗೇ ಕಟ್ಟಿ ಇಡಲು ಆಗುತ್ಯೇ.. ಚೆನ್ನಾಗಿದೆ ಅನ್ನುತ್ತ ಗೌರತ್ತೇನೂ ತಿಂದ್ರು, ಪಟ್ಟಾಂಗ ಸ್ನೇಹಿತರಿಗೂ ವಿತರಣೆ ಆಯ್ತೂ ಅನ್ನಿ.
ಅಂತೂ ಎರಡು ಬಾರಿ ಖರ್ಜೂರದ ಸಿಹಿತಿನಿಸು ಮಾಡುವ ಹಾಗಾಯ್ತು.

ಈ ಹೊಸ ರುಚಿಗಳಿಗೆ ಹೆಸರಿಡುವುದೇ ಒಂದು ಸಮಸ್ಯೆ ಆಗ್ಬಿಟ್ಟಿದೆ. ಸಿಂಪಲ್ಲಾಗಿ ಡೇಟ್ಸ್ ಹಲ್ವಾ ಅಂದರೂ ನಡೆದೀತು, ಏನಂತೀರ?


Saturday 26 October 2019

ಚಿಗುರೆಲೆಗಳ ದೋಸೆ




ಸ್ವಾತಿ ಮಳೆ ಹನಿಯುತ್ತಿದೆ, ಚಳಿಯೂ ಬೇರೆ, ಮನೆಯೊಳಗೇ ಇದ್ದು ಜಡ್ಡು ಹಿಡಿದಂತಾಗಿತ್ತು. ಮಳೆ ಬಿಟ್ಟ ಸಮಯ ನೋಡಿ ಪುಟ್ಟ ಕೈಗತ್ತಿಯೊಂದಿಗೆ ಹಿತ್ತಲ ಅಂಗಳಕ್ಕಿಳಿದಾಗ ಕಾಡಿನಂತೆ ಬೆಳೆದಿದ್ದ ಸಸ್ಯಗಳ ಸ್ವಾಗತ ದೊರೆಯಿತು. " ಅತ್ತಿತ್ತ ಹೋಗಲೂ ದಾರಿಯಿಲ್ಲವೇ ಶಿವನೇ... " ಎನ್ನುತ್ತ ಕೈಗತ್ತಿ ಅಡ್ಡಾಡಿತು. ಎತ್ತರವಾಗಿ ಬೆಳೆದಿದ್ದ ಒಂದು ಸಸ್ಯ ಧರೆಗುರುಳಿತು. " ಏನು ಹೂವುಗಳು! ಕಾಯಿಗಳೂ ಹಣ್ಣುಗಳೂ ಸೊಗದ ನೋಟ ಬೀರಿದುವು.  





ಮುಡಿಯಲಾರದ ಹೂವುಗಳ ತಿನ್ನಲಾಗದ ಹಣ್ಣುಗಳ ಗುಚ್ಛ ಗೃಹಾಲಂಕರಣದ ಶೋಭೆಯನ್ನು ಹೆಚ್ಚಿಸಿದ್ದು ಸುಳ್ಳಲ್ಲ.

ಕುಡಿ ಚಿಗುರುಗಳನ್ನು ಅಡುಗೆಗಾಗಿ ತೆಗೆದಿರಿಸಲಾಯಿತು. ಏನು ಮಾಡಲಿ? ಚಿಗುರೆಲೆಗಳ ತಂಬುಳಿ...
ಅದು ಹಳೆಯದಾಯ್ತು, ಏನೂ ಒಂದು ಹೊಸತನ ತರೋಣ.

ಚಿಗುರೆಲೆಗಳನ್ನು ಎಳೆಯ ದಂಟು ಸಹಿತವಾಗಿ ಚಿಕ್ಕದಾಗಿ ಹೆಚ್ಚಿಡುವುದು.
ಅರ್ಧ ಲೋಟ ಅಕ್ಕಿ ಹಿಟ್ಟು
ಅರ್ಧ ಲೋಟ ಕಡ್ಲೆ ಹಿಟ್ಟು
ನೀರೆರೆದು ಬೆರೆಸಿ ದೋಸೆ ಹಿಟ್ಟಿನ ಸಾಂದ್ರತೆ ಬರಲಿ.

2 ಚಮಚ ತೆಂಗಿನತುರಿಯೊಂದಿಗೆ ರುಚಿ ಹಾಗೂ ಸುವಾಸನೆಗೆ ತಕ್ಕಷ್ಟು ಒಣಮೆಣಸು, ಕೊತ್ತಂಬರಿ, ಜೀರಿಗೆ ಅರೆಯಿರಿ, ನುಣ್ಣಗಾಗಬೇಕೆಂದೇನೂ ಇಲ್ಲ. ಹಿಟ್ಟಿಗೆ ಕೂಡಿಸಿ.

ನನ್ನ ಅಡುಗೆಯ ಸಮಯದಲ್ಲಿ ವಿದ್ಯುತ್ ಹೋಗಿತ್ತು. ಮೆಣಸಿನಹುಡಿ, ಸಾರಿನಹುಡಿ ಹಾಕಬೇಕಾಗಿ ಬಂದಿತು.
ತೊಂದರೆಯಿಲ್ಲ, ಹೇಗೂ ನಡೀತದೆ ಅನ್ನಿ.

ಹೆಚ್ಚಿಟ್ಟ ಚಿಗುರೆಲೆಗಳನ್ನು ಬೆರೆಸಿ, ರುಚಿಗೆ ಸೂಕ್ತವಾಗುವಂತೆ ಉಪ್ಪು ಬೀಳಲಿ.

ದೋಸೆಯಂತೆ ಎರೆಯಿರಿ, ತುಪ್ಪ ಸವರಿ ಎರಡೂ ಬದಿ ಬೇಯಿಸಿ. ಪುಟ್ಟ ಮಕ್ಕಳಿಗೆ ಪುಟ್ಟ ಪುಟ್ಟ ದೋಸೆ ಎರೆದು ಬೆಣ್ಣೆಯೊಂದಿಗೆ ತಿನ್ನಲು ನೀಡಿ. ಸಂಜೆಯ ಚಹಾದೊಂದಿಗೆ ಸವಿಯಿರಿ.

" ಹೌದೂ, ಯಾವ ಸೊಪ್ಪು ಅಂದ್ರೀ? "
" ಚಕ್ರಮುನಿ.. ವಿಟಮಿನ್ ಸೊಪ್ಪು, ಸರ್ವಸಾಂಬಾರ್ ಸೊಪ್ಪು ಇತ್ಯಾದಿ ಬಿರುದಾಂಕಿತ ಸಸ್ಯ ಇದು. ಆಂಗ್ಲ ಭಾಷೆಯಲ್ಲಿ star gooseberry ಎಂದೂ ಸಸ್ಯವಿಜ್ಞಾನಿಗಳು sauropus androgynus ಅಂದಿದ್ದಾರೆ.


ಇದರ ಕಾಂಡದಿಂದಲೇ ಸಸ್ಯಾಭಿವೃದ್ಧಿ, ಎಲ್ಲೇ ಕತ್ತರಿಸಿ ಬಿಸುಟರೂ ಬಲಿಷ್ಠವಾದ ಕಾಂಡದ ತುಂಡು ಇದ್ದರೆ ಸಾಕು ಚಿಗುರಿ ಬೆಳೆಯುವ ಈ ಗಿಡದ ಸಾಕುವಿಕೆ ಕಷ್ಟವೇನಲ್ಲ.



Sunday 20 October 2019

ಗೌರತ್ತೆಯ ಪುಳಿಂಜಿ







ಅಕ್ಟೋಬರ್, 17ರ ಸಂಕ್ರಾಂತಿ ಬಂದಿದೆ, ವಿಶೇಷತೆ ಏನೆಂದರೆ ಇದು ಕಾವೇರಿ ಸಂಕ್ರಮಣ. ಈ ಬಾರಿಯ ತೀರ್ಥಸ್ನಾನವು ಸರ್ವಪಾಪ ನಾಶಿನಿ ಎಂದೇ ಪ್ರಸಿದ್ಧವಾಗಿದೆ. ನಾವೂ ತೀರ್ಥಸ್ನಾನದಿಂದ ಪುನೀತರಾಗೋಣ.

ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಮಂಗಳಕಾರ್ಯಗಳು ಆರಂಭವಾಗಲಿದ್ದು ಶ್ರೀದೇವಿಯ ಕಲಶಾಭಿಷೇಕದ ನಂತರವೇ, ಅಂದಾಜು 9 ಗಂಟೆಯ ಹೊತ್ತಿಗೆ ಭಕ್ತಜನರ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ..

ಸಂಕ್ರಮಣದ ದಿನ ಎಂದಿನಂತೆ ಹಿರಣ್ಯ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಸಾಯಂಕಾಲ ಭಜನೆ, ದುರ್ಗಾಪೂಜೆ ಇರುತ್ತದೆ. ತದನಂತರ ಅನ್ನಪ್ರಸಾದವನ್ನೂ ಸ್ವಿಕರಿಸಬೇಕಾಗಿ ಭಕ್ತಬಾಂಧವರಲ್ಲಿ ವಿನಂತಿ.

ಇದು ನಮ್ಮ ವಾಟ್ಸಪ್, ಫೇಸ್ ಬುಕ್ ಮಾಧ್ಯಮಗಳಲ್ಲಿ ಹರಿಯಬಿಟ್ಟ ಪ್ರಕಟಣೆ.

ಇದುವರೆಗೆ ಎಲ್ಲಿಗೂ ತೀರ್ಥಸ್ನಾನಕ್ಕೆಂದು ಹೋಗದ ಗೌರತ್ತೆಯೂ ನಾನೂ ಸ್ನಾನ ಮಾಡಿ ಪುನೀತರಾದೆವು.

ಸಾಯಂಕಾಲ ಭಜನೆ ಹಾಗೂ ದುರ್ಗಾಪೂಜೆ, ಅನ್ನಸಂತರ್ಪಣೆಯ ಕಾರುಭಾರು. ಎಲ್ಲರೂ ಉಂಡ ನಂತರ ಸುಧರಿಕೆಯ ಅಣ್ಣಂದಿರೂ ನಾನೂ ಸೇರಿ ಉಳಿದ ಪಾಯಸ, ನೈವೇದ್ಯ ಪ್ರಸಾದಗಳನ್ನು ಪರಸ್ಪರ ಹಂಚಿ ಸಮಾಧಾನ ಪಟ್ಟೆವು.

ಬೆಳಗಾಯ್ತು, ಗೌರತ್ತೆ ಎದ್ದವರೇ ಭೋಜನಶಾಲೆಯ ತಪಾಸಣೆ ನಡೆಸಿ ಗಣಪಣ್ಣ ಅಡುಗೆಗೆ ಬಳಸದೇ ಬಿಟ್ಟಿದ್ದ ಹಸಿಮೆಣಸು, ಶುಂಠಿಗಳನ್ನು ಸಂಗ್ರಹಿಸಿ ತಂದರು.

" ಲಕ್ಷಣವಾಗಿ ಒಂದು ಪುಳಿಂಜಿ ಮಾಡಿ ಇಡು, ಜೀರ್ಣಕ್ಕೆ ಒಳ್ಳೇದು.. "

" ಹುಣಸೆಹುಳಿ ಹಾಕಬೇಡವೇ.. ಇಲ್ಲಿ ಟೊಮ್ಯಾಟೋ ಹಾಳಾಗುತ್ತ ಉಂಟು, ಅದನ್ನೇ ಹಾಕಿ ಮಾಡಿದ್ರಾದೀತಲ್ಲ..."

" ಹೇಗೆ ಬೇಕೋ ಹಾಗೇ ಮಾಡಿಕೋ, ತಿನ್ನುವ ಹಾಗಿದ್ದರಾಯಿತು.. "

3 ಟೊಮ್ಯಾಟೋ ತೊಳೆದು ಹೆಚ್ಚಿ ಇಡುವುದು
2 ಹಸಿಮೆಣಸು ಮುರಿದು ಇಡುವುದು
1 ಇಂಚು ಉದ್ದದ ಶುಂಠಿಯನ್ನು ಸಿಪ್ಪೆ ಹೆರೆದು ಕತ್ತರಿಸಿ ಇಡುವುದು.
ಎಲ್ಲವನ್ನೂ ಮಿಕ್ಸಿಯಲ್ಲಿ ತಿರುಗಿಸಿ ತೆಗೆದಿರಿಸುವುದು.

ಬಾಣಲೆ ಬಿಸಿಯಾಗಲು ಇಡುವುದು.
2 ಚಮಚ ತುಪ್ಪ ಎರೆಯುವುದು.
ಸಾಸಿವೆ ಸಿಡಿಸಿ ಕರಿಬೇವು ಹಾಕುವುದು.
ಟೊಮ್ಯಾಟೋ ಮಿಶ್ರಣವನ್ನು ಹಾಕಿ ಸೌಟಾಡಿಸುವುದು.
ಬೆಂದ ಪರಿಮಳ ಬಂದಾಗ ರುಚಿಗೆ ಸೂಕ್ತವಾಗುವಷ್ಟು ಕಲ್ಲುಪ್ಪು ಹಾಗೂ ಬೆಲ್ಲ ಹಾಕುವುದು.
ಬೆಲ್ಲ ಕರಗಿ ಪಾಕದ ಹದಕ್ಕೆ ಬಂದಾಗ ಕೆಳಗಿಳಿಸಿ.
ಗೌರತ್ತೆಯ ಬಾಯಿಚಪಲಕ್ಕೆ ಹಿತವಾದ ಪುಳಿಂಜಿ ಎದ್ದು ಬಂದಿತು.




ಅನ್ನದೊಂದಿಗೆ ಬಲು ರುಚಿ, ಉಪ್ಪಿನಕಾಯಿ ಬೇಕೆನಿಸದು.
ಟೊಮ್ಯಾಟೋ ಉಪ್ಪಿನಕಾಯಿ ಎಂದೂ ಹೆಸರಿಸಬಹುದಾದ ಈ ವ್ಯಂಜನ ಒಂದೆರಡು ದಿನ ಹಾಳಾಗದು. ಫ್ರಿಜ್ ಒಳಗೆ ಇಟ್ಟರೂ ಆದೀತು.

ಮುಂಜಾನೆಯ ತಿಂಡಿಗಳಾದ ದೊಸೆ ಇಡ್ಲಿ ಚಪಾತಿಗಳಿಗೂ ಚಟ್ಣಿಯಂತೆ ಕೂಡಿಕೊಳ್ಳಬಹುದು.

ತೊಗರಿಬೇಳೆ ಬೇಯಿಸಿ ಟೊಮ್ಯಾಟೋ ಪುಳಿಂಜಿ ಎರೆದು ಸಾರು ಆಯ್ತು ಅನ್ನಿ.

ನೆಲಕಡಲೆಯ ಒಗ್ಗರಣೆ ಹಾಕಿ ಅನ್ನಕ್ಕೆ ಬೆರೆಸಿ ಚಿತ್ರಾನ್ನವೆನ್ನಿ.

ನಮ್ಮ ಆಯ್ಕೆಗನುಸಾರ ವಿವಿಧ ಅಡುಗೆಗಳಲ್ಲಿ ಬಳಸಬಹುದಾದ ಟೊಮ್ಯಾಟೋ ಪುಳಿಂಜಿ ನನ್ನ ಅಚ್ಚುಮೆಚ್ಚಿನದು. ಏನಂತೀರ?



Friday 4 October 2019

ಹೂವಿನ ಬಜ್ಜಿ






ಮಳೆ ಬಿಟ್ಟು ಸೊಂಪಾದ ಬಿಸಿಲು ಬಂದಿದೆ, ಗೌರತ್ತೆ ಮುಂಜಾನೆ ಎದ್ದವರೇ ವಾಕಿಂಗ್ ಹೊರಡುವ ಸಿದ್ಧತೆಯಲ್ಲಿದ್ದರು, " ದೂರ ಹೋಗ್ಬೇಡಿ... ಹತ್ತೇ ನಿಮಿಷದಲ್ಲಿ ಮನೆಗೆ ಬನ್ನಿ. " ತಾಕೀತು ಮಾಡಿದ್ದಾಯ್ತು.

" ದೂರ ಯಾಕೆ ಹೋಗಲಿ, ಮಳೆ ಬಂದ್ರೆ ಕಷ್ಟ.. ಒಂದು ಮುರುಕು ಕೊಡೆಯೂ ಇಲ್ವಲ್ಲ... ಶ್ರೀದೇವಿಗೆ ಒಂದು ಪ್ರದಕ್ಷಿಣೆ, ನಾಗಬನಕ್ಕೆ ಒಂದು ಸುತ್ತು ಹಾಕಿ ದೇವಿಯ ತೀರ್ಥಕ್ಕೆ ತಲೆಯೊಡ್ಡಿ ಬರೂದು..."

"ಸರಿ ಹಾಗಿದ್ರೆ.. " ಚಟ್ನಿಗಾಗಿ ಕಾಯಿ ತುರಿಯಬೇಕಿದೆ.
ನನ್ನ ದೋಸೆ ಚಟ್ನಿಗಳು ಸಿದ್ಧವಾದವು.
ಗೌರತ್ತೆಯೂ ಬಂದ್ರು, " ನೋಡೇ ಹೂವುಗಳು! "
" ಅಹ.. ಹೂದಾನಿಯಲ್ಲಿ ಇಡಲಿಕ್ಕೆ ಲಾಯಕ್.."
" ಅಯ್ಯ.. ಚಂದ ನೋಡಿ ಮಾಡುದೆಂತದು, ಚಟ್ಣಿಗಾದೀತು."

ಗೌರತ್ತೆ ಚೀನಿಕಾಯಿ ಹೂಗಳನ್ನು ಕೊಯ್ದದ್ದು ಎಲ್ಲಿಂದಾ.. ಅಂತೀರಾ,

ಹಿರಣ್ಯ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಬ್ರಹ್ಮಕಲಶ ಆಗಿತ್ತಲ್ಲ, ಆವಾಗ ವಾರಪೂರ್ತಿ ಅನ್ನಸಂತರ್ಪಣೆ ಇದ್ದಿತು. ಮೇಲೋಗರಕ್ಕೆ ತರಕಾರಿಗಳ ರಾಶಿಯೇ ಬಂದಿತ್ತು. ದೊಡ ಮಟ್ಟದ ಅಡುಗೆಗೆ ಸಿಹಿಗುಂಬಳ ( ಚೀನಿಕಾಯಿ ) ಬಳಕೆ ಜಾಸ್ತಿ. ಅಂದಿನ ಅಡುಗೆಯ ಚೀನಿಕಾಯಿ ಬೀಜಗಳು ವರ್ಷಧಾರೆಗೆ ಸಿಕ್ಕಸಿಕ್ಕಲ್ಲಿ ಕುಡಿಯೊಡೆದು, ಬಳ್ಳಿ ಹಬ್ಬಿ ಈಗ ಹೂ ಬಿರಿದಿವೆ. ಫಲ ನೀಡದ ಹೂಗಳನ್ನು ಅಡುಗೆಯಲ್ಲಿ ಬಳಸಿ ಸವಿಯಬಹುದಾಗಿದೆ. ಚಟ್ಣಿ, ಪೋಡಿ, ಗೊಜ್ಜು, ಸಾರು, ಸಾಂಬಾರು, ಮೇಲಾರ... ಎಂದು ನಮ್ಮ ಕಲ್ಪನೆಗೆ ಹೊಳೆದಂತೆ ಸವಿರುಚಿಗಳನ್ನು ಮಾಡಬಹುದಾಗಿದೆ.

ಇದರಲ್ಲಿ ಪ್ರಸಿದ್ಧವಾದದ್ದು ಗೌರತ್ತೆ ಈಗಾಗಲೇ ಹಳಿದ ಚಟ್ಣಿ, ನಮ್ಮ ಕಾಸರಗೋಡು, ದ.ಕನ್ನಡದ ಆಡುಮಾತಿನಲ್ಲಿ ಚಟ್ಣಿ ಹಾಗೂ ಬಜ್ಜಿ ಒಂದೇ ಅರ್ಥದ ಪದಗಳು. ಈಗ ನಾವು ಚಟ್ಣಿ ಯಾ ಬಜ್ಜಿ ಮಾಡೋಣ.

ಹೂವುಗಳನ್ನು ಇದ್ದ ಹಾಗೇನೆ ಉಪಯೋಗಿಸುವಂತಿಲ್ಲ.
ಬಾಟನಿ ಶಾಸ್ತ್ರ ರೀತ್ಯಾ ಪುಷ್ಪಪಾತ್ರೆ, ದಂಟು, ಹೂಕೇಸರ ನಮ್ಮ ಅಡುಗೆಗೆ ಆಗದು. ಕೇವಲ ಹೂವಿನ ಎಸಳು ಮಾತ್ರ ಬರುವಂತೆ ತೊಟ್ಟು ಬಿಡಿಸಿ, ಅಗಲವಾಗಿ ಬಿಡಿಸಿದ ಎಸಳುಗಳಲ್ಲಿ ಕ್ರಿಮಿಕೀಟಗಳ ವಾಸ್ತವ್ಯ ಇದೆಯೋ ಎಂದೂ ತಪಾಸಿಸಲೇಬೇಕು. ಇದೀಗ ಸಿದ್ಧತೆ ಆಯ್ತು.

10 - 12 ಹೂ ಎಸಳುಗಳು
ತೆಂಗಿನತುರಿ

ನಾಲ್ಕಾರು ಕುಮ್ಟೆ ಮೆಣಸು, ಒಂದೆರಡು ಚಮಚ ಕೊತ್ತಂಬರಿ, ಸ್ವಲ್ಪ ಜೀರಿಗೆ ತುಸು ಎಣ್ಣೆಪಸೆಯಲ್ಲಿ ಹುರಿದು, ಹೂವುಗಳನ್ನೂ ಹಾಕಿ ಬಾಡಿಸಿ,
ರುಚಿಗಗೆ ತಕ್ಕಷ್ಟು ಹುಣಸೆಹುಳಿ, ಉಪ್ಪು ಕೂಡಿ ತೆಂಗಿನತುರಿಯೊಂದಿಗೆ ಅರೆದು,
ಸಿಹಿ ಬೇಕಿದ್ದರೆ ಬೆಲ್ಲವನ್ನೂ ಹಾಕಿ ಅರೆಯಿರಿ, ನೀರು ನೀರಾಗಬಾರದು,
ಗಟ್ಟಿ ಮುದ್ದೆಯಂತಿರಲಿ,
ಒಗ್ಗರಣೆಯಿಂದ ಅಲಂಕರಿಸಿ.
ಚಟ್ಣಿ ಸಿದ್ದ.
ಇದು ಊಟದ ಬಟ್ಟಲಲ್ಲಿ ಒಂದು ಸಹವ್ಯಂಜನ.

ಟೊಮ್ಯಾಟೋ ಸಾರು ಕುದಿಸುವಾಗ ಹೂವುಗಳನ್ನು ಹೆಚ್ಚಿ ಹಾಕಿ, ಸಾಂಬಾರು, ಪಲ್ಯಗಳಿಗೂ ಹಾಕಬಹುದು.
ಹೂವುಗಳನ್ನು ತುಪ್ಪದಲ್ಲಿ ಹುರಿದು ಯಾ ತುಸು ನೀರಿನಲ್ಲಿ ಬೇಯಿಸಿ ಮೊಸರು ಎರೆಯಿರಿ, ಶುಂಠಿ, ಹಸಿಮೆಣಸು ಹೆಚ್ಚಿ ಹಾಕಿ ಮೊಸರುಗೊಜ್ಜು ಅನ್ನಿ.

ನೀರು ದೋಸೆಯ ಅಕ್ಕಿ ಹಿಟ್ಟು ಉಳಿದಿದೆ. ದಪ್ಪ ಆಗುವಷ್ಟು ಕಡ್ಲೆ ಹಿಟ್ಟು ಬೆರೆಸಿ.
ಉಪ್ಪು, ಸಾರಿನಹುಡಿ, ಮೆಣಸಿನಹುಡಿ, ಇಂಗು ಇತ್ಯಾದಿಗಳನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಿ.
ಹೂವಿನ ಎಸಳುಗಳನ್ನು ಈ ಹಿಟ್ಟಿನಲ್ಲಿ ಅದ್ದಿ,
ಬಿಸಿಯೇರಿದ ದೋಸೆಕಾವಲಿಗೆ ಎಣ್ಣೆ ಸವರಿ ಬೇಯಿಸಿ.
ದೋಸೆಯಂತೆ ಕವುಚಿ ಹಾಕಿ ತೆಗೆಯಿರಿ.
ಸಂಜೆಯ ಚಹಾದೊಂದಿಗೆ ಯೋಗ್ಯ ತಿನಿಸು.

ಕೋಮಲವಾದ ಈ ಹೂವುಗಳನ್ನು ಇನ್ನಿತರ ಬಜ್ಜಿ ಪಕೋಡಗಳಂತೆ ನೇರವಾಗಿ ಎಣ್ಣೆಯಲ್ಲಿ ಕರಿಯುವುದಕ್ಕಿಲ್ಲ, ದೋಸೆ ಕಾವಲಿಯೇ ಸಾಕು.




Friday 27 September 2019

ಖಾರಾ ಪೊಂಗಲ್








ಹಿರಣ್ಯದ ನಾಗಬನ ಹಾಗೂ ಶ್ರೀದೇವಿ ದೇವಸ್ಥಾನಗಳಿಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಒಂದು ಕೆರೆ, ಇದುವರೆಗೆ ಪೊಟ್ಟು ಕೆರೆ ಆಗಿ ಇದ್ದಿತು.

" ಹೇಗೂ ನಾಗಬನದ ಎದುರುಗಡೆ ಇದೆ, ಸ್ತ್ರೀಯರ ಶೋಕನಾಶಕವಾದ ಅಶೋಕೆಯೂ ಇಲ್ಲಿ ಇರುವುದರಿಂದ ಈ ಕೆರೆಯನ್ನು ಚಂದ ಮಾಡಿದರಾದೀತು, ಈ ಜಾಗಕ್ಕೇ ಒಳ್ಳೆಯ ನೋಟ ಬಂದೀತು... " ಎಂದು ನಮ್ಮ ಮನೆ ಯಜಮಾನರ ಚಿಂತನೆ.

ಹ್ಞೂಗುಟ್ಟಲು ನಮ್ಮ ಬಳಗ ಸಾಕಷ್ಟು ದೊಡ್ಡದಾಗಿಯೇ ಇದೆ. ದೇಗುಲದ ಅನತಿ ದೂರದಲ್ಲಿ ಪರಿವಾರ ದೈವಗಳಿಗೆ ಚಾವಡಿಮನೆಯೂ, ಅಣ್ಣಪ್ಪಪಂಜುರ್ಲಿ ದೈವಗಳ ಕಟ್ಟೆಯೂ ಎದ್ದು ನಿಂತಿವೆ. ದೈವಗಳಿಗೆ ಸಂಧ್ಯಾಕಾಲದಲ್ಲಿ ದೀಪ ಬೆಳಗಿಸಿ ಇಡಬೇಕು. ಅದಕ್ಕಾಗಿ ನಿಯೋಜಿತರಾದವರಿಗೆ ವಾಸ್ತವ್ಯದ ವ್ಯವಸ್ಥೆ, ಆಧುನಿಕ ಪರಿಭಾಷೆಯಲ್ಲಿ ಔಟ್ ಹೌಸ್ ಅನ್ನೋಣ, ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದೆ.

ಇಲ್ಲಿರುವ ವೆಂಕಪ್ಪ ಶೆಟ್ಟಿ, ನುರಿತ ಕೆಲಸಗಾರನೂ ಆಗಿರುವುದರಿಂದ ಕೂಡಲೇ ಕಾರ್ಯತತ್ಪರನಾದ.
" ನೋಡೂ, ನಾಳೆ ಪೊಟ್ಟುಕೆರೆಯ ರಿಪೇರಿಗೆ ಇನ್ನೂ ಇಬ್ಬರು ಬರುತ್ತಾರೆ. ಹತ್ತೂ ಗಂಟೆಗೆ ಚಹಾ ತಿಂಡಿ ಕೊಟ್ಬಿಡು, ಮದ್ಯಾಹ್ನಕ್ಕೆ ಸಾಂಬಾರ್, ಮಜ್ಜಿಗೆ, ಉಪ್ಪಿನಕಾಯಿ ಸಾಕು.. ಕುಚ್ಚುಲಕ್ಕಿ ಅನ್ನ ಅವರೇ ಮಾಡಿಕೊಳ್ತಾರೆ..."

" ಆಯಿತು.. " ನಾನು ಹಿರಣ್ಯ ಮನೆಗೆ ಬಂದಾಗ, ಇವತ್ತಿಗೆ ಅಂದಾಜು ಮೂವತ್ತೈದು ವರ್ಷ ಅಂತಿಟ್ಕೊಳ್ಳಿ, ಆ ಕೆರೆ ಕೆಸರಿನಿಂದ ತುಂಬಿದ್ದರೂ ತಾವರೆಯ ಹೂಗಳು ಅರಳಿ ನಳನಳಿಸುತ್ತ ಇದ್ದದ್ದು ಈಗಲು ಹಸಿರು ನೆನಪು. ಇಂತಹ ಕೆರೆಗೆ ಕಾಯಕಲ್ಪವಾಗಲಿದೆ ಎಂದಾಗ ಮನ ತುಂಬಿ ಬಂದಿತು, ಹೊಸ ಹುರುಪಿನಿಂದ ನನ್ನ ಅಡುಗೆಯ ಸಿದ್ಧತೆ ಆರಂಭ ಆಯ್ತು.

ಏನಾಯ್ತಪಾ ಅಂದ್ರೆ ಅಡುಗೆಯ ಪ್ರಮಾಣ ಹೆಚ್ಚಾಗಿ ಅನ್ನ ಉಳಿಯಿತು.
ನಾಳೆ ಈ ಉಳಿದ ಅನ್ನದ ಚಿತ್ರಾನ್ನ ಮಾಡೂದು, ಬೇಕಿದ್ದರೆ ಮಸಾಲೆ ಅವಲಕ್ಕೀ, ಬಾಳೆಹಣ್ಣು.. ಹತ್ತು ಗಂಟೆಯ ಚಹಾದೊಂದಿಗೂ ಸಾಕಾಗುವಂತೆ ಮಾಡಬೇಕಿದೆ, ಇರಲಿ ಎಂದು ಮಲಗುವ ಮೊದಲು ಒಂದು ಲೋಟ ಪಚ್ಚೆಸ್ರುಕಾಳು ನೀರೆರೆದು ಇಟ್ಟೆ.

" ಏನಾಯ್ತೂ ಹೆಸ್ರುಕಾಳು? "
ರುಚಿಗೆ ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ತುಂಬಿಸಿ, ನೀರೆರೆದು ಎರಡು ಸೀಟಿ ಕೂಗಿಸಿದ್ದಾಯ್ತು.
ನನ್ನ ಇಲೆಕ್ಟ್ರಿಕ್ ರೈಸ್ ಕುಕ್ಕರಿನಲ್ಲಿ ಉಳಿದ ಅನ್ನ ಸಾಕಷ್ಟು ಇತ್ತು, ಚೆನ್ನಾಗಿಯೇ ಇತ್ತು ಅನ್ನಿ.

ತೆಂಗಿನಕಾಯಿ ತುರಿಯಿರಿ.
ನಾಲ್ಕಾರು ಹಸಿಮೆಣಸು ಸಿಗಿಯಿರಿ.
ಶುಂಠಿ, ಸಿಪ್ಪೆ ಹೆರೆದು, ಚಿಕ್ಕದಾಗಿ ಹೆಚ್ಚಿರಿ.
ಕೊತ್ತಂಬರಿ ಸೊಪ್ಪು ಕತ್ತರಿಸಿ.
ಕರಿಬೇವು ಸಿದ್ಧಪಡಿಸಿ,

ಬಾಣಲೆಯಲ್ಲಿ ನಾಲ್ಕು ಚಮಚ ತೆಂಗಿನೆಣ್ಣೆ ಎರೆದು ಒಲೆಯ ಮೇಲಿರಿಸಿ,
ಸಾಸಿವೆ ಸಿಡಿದಾಗ,
ಮೇಲೆ ಸಿದ್ಧಪಡಿಸಿದಂತಹ ಸಾಹಿತ್ಯಗಳನ್ನು ಹಾಕುತ್ತ ಬನ್ನಿ.

ಕುಕ್ಕರಿನಲ್ಲಿರುವ ಪಚ್ಚೆಸ್ರು ಬೆಂದಿದೆ, ನೀರು ಬಸಿಯಿರಿ. ಚೆಲ್ಲದಿರಿ, ಮಧ್ಯಾಹ್ನದ ಅಡುಗೆಗೆ ಬಳಸಿರಿ.
ಹೆಸ್ರುಕಾಳನ್ನು ಕೊತ್ತಂಬರಿ ಸೊಪ್ಪು ಕೂಡಿ ಅನ್ನವನ್ನೂ ಸುರಿಯಿರಿ.
ರುಚಿಗಾಗಿ ಉಪ್ಪಿನ ಹುಡಿ, ಬೇಕಿದ್ದರೆ ಸಕ್ಕರೆ ಯಾ ಬೆಲ್ಲ ಹಾಕಬಹುದು.
ತುಸು ತೆಂಗಿನತುರಿ ಹಾಕಲೇಬೇಕು, ಸೌಟಾಡಿಸಿ, ಕೆದಕಿ ಬಿಸಿಯೇರುವಷ್ಟು ಹೊತ್ತು ಉರಿಯಲ್ಲಿ ಮುಚ್ಚಿ ಇಡಬೇಕು, ನಂತರ ಕೆಳಗಿಳಿಸಿ ಬಿಸಿ ಕಾಫಿಯೊಂದಿಗೆ ಹಾಯಾಗಿ ತಿನ್ನುತ್ತಿರಬೇಕು.
ಆ ವೇಳೆಗೆ ಬೆಂಗಳೂರಿಂದ ಫೋನ್ ಬರಬೇಕು.
" ತಿಂಡಿ ಆಯ್ತಾ.."
" ಆಯ್ತು ನೋಡು, ಮಾಡಿದ್ದು ಹೇಗೆ ಗೊತ್ತುಂಟೋ.. " ವರದಿ ಒಪ್ಪಿಸಲೇ ಬೇಕು.
" ಓ, ಖಾರಾ ಪೊಂಗಲ್ ! ನಂಗೆ ತುಂಬ ಇಷ್ಟ.. "



ಬ್ಲಾಗ್ ಓದುಗರಿಗೆ ನವರಾತ್ರಿಯ ಶುಭಾಶಯಗಳು, ಶ್ರೀದೇವಿಯ ಕರುಣೆ ಸದಾ ನಮ್ಮೊಂದಿಗಿರಲಿ.

Saturday 21 September 2019

ಕೆಸುವಿನ ದಂಟಿನ ಗಸಿ








ಅಡುಗೆಯ ಹೊತ್ತು, ವಿದ್ಯುತ್ ಕೈ ಕೊಟ್ಟಿದೆ. ಅಡುಗೆಮನೆಯ ಉಳಿದೆಲ್ಲ ಕೈಚಳಕ ಮಾಡಿದ್ದಾಯ್ತು, ತೆಂಗಿನಕಾಯಿ ಅರೆಯದೆ ಸಾಂಬಾರ್ ಆಗಬೇಕಿದೆ.

ಆಗಬೇಕು, ಹೇಗೆ?
ಅರ್ಧ ಲೋಟ ತೊಗರಿಬೇಳೆ ತೊಳೆದು, ಮುಳುಗುವಷ್ಟು ನೀರೆರೆದು ಕುಕ್ಕರಿನಲ್ಲಿ ಬೇಯಿಸುವುದು, ಭರ್ತಿ ಮೂರು ಸೀಟಿ ಹಾಕಲಿ, ಬೇಳೆ ಮೆತ್ತಗಾದಷ್ಟೂ ಉತ್ತಮ.

ತರಕಾರಿ ಯಾವುದು?
ನಾಲ್ಕು ದಿನ ಹಿಂದೆ ಕೆಸುವಿನೆಲೆಯ ಪತ್ರೊಡೆ ಮಾಡಿದಾಗ ಕೆಸುವಿನ ದಂಟು ಸಹಿತವಾಗಿ ಕೊಯ್ದು ಇಟ್ಟಿದ್ದರಲ್ಲಿ ದಂಟುಗಳು ಹಾಗೇನೆ ತರಕಾರಿ ಬುಟ್ಟಿಯಲ್ಲಿ ಬಿದ್ದಿವೆ. ದಂಟುಗಳಿಗೆ ಒಂದು ಗತಿ ಕಾಣಿಸೋಣ.

ಕೆಸುವಿನ ದಂಟು ತುಸು ಬಾಡಿರಬೇಕು, ಹೊರಸಿಪ್ಪೆಯ ನಾರು ತೆಗೆಯುವುದು ಬಹಳ ಸುಲಭದ ಕಾರ್ಯ. ಅಲ್ಪಸ್ವಲ್ಪ ನಾರು ಉಳಿದರೂ ತೊಂದರೆಯಿಲ್ಲ, ಕರಿಕೆಸು ತುರಿಸುವ ಭಯವಿಲ್ಲ.
ಸಮಾನ ಗಾತ್ರದ ಹೋಳು ಮಾಡುವುದು.
ಬೇಯಿಸಿಟ್ಟ ತೊಗರಿಬೇಳೆಗೆ ಕೆಸುವಿನ ದಂಟಿನ ಹೋಳುಗಳನ್ನು ಸೇರಿಸಿ, ರುಚಿಗೆ ಸೂಕ್ತವಾಗುವಂತೆ ಉಪ್ಪು ಹಾಗೂ ಹುಳಿ ಹಾಕಿ ಬೇಯಿಸಿ. ಸಿಹಿ ಇಷ್ಟಪಡುವವರು ಬೆಲ್ಲವನ್ನೂ ಹಾಕಬಹುದು.
ಕುಕ್ಕರ್ ಒಂದು ಸೀಟಿ ಹಾಕಿದೊಡನೆ ಕೆಳಗಿಳಿಸಿ, ನಿಧಾನವಾಗಿ ಒತ್ತಡ ತೆಗೆಯಿರಿ, ಬೆಂದಿರುತ್ತದೆ.

ಒಗ್ಗರಣೆಗೆ,
ಏಳೆಂಟು ಸುಲಿದ ಬೆಳ್ಳುಳ್ಳಿ,
ಒಂದೆಸಳು ಕರಿಬೇವು,
ಮೂರು ಚಮಚ ತೆಂಗಿನೆಣ್ಣೆ,
ಸಾಸಿವೆ, ಒಣಮೆಣಸಿನ ಚೂರುಗಳು,
ಒಗ್ಗರಣೆ ಸಿದ್ಧ, ಇದೀಗ ಗ್ಯಾಸ್ ಆರಿಸಿ.
ಉದ್ದಿನಕಾಳಿನಷ್ಟು ಇಂಗು ನೀರಿನಲ್ಲಿ ಕರಗಿಸಿ ಮೊದಲೇ ಇಟ್ಟುಕೊಂಡಿರಬೇಕು, ಇಂಗಿನ ನೀರನ್ನು ಒಗ್ಗರಣೆಗೆ ಎರೆಯಿರಿ.
ತಲಾ ಅರ್ಧ ಚಮಚ ಸಾರಿನ ಹುಡಿ, ಮೆಣಸಿನ ಹುಡಿ, ಗರಂ ಮಸಾಲಾ ಹುಡಿ, ಚಿಟಿಕೆ ಅರಸಿಣಗಳು ಒಗ್ಗರಣೆಗೆ ಬೀಳಲಿ.
ಕುಕ್ಕರ್ ಒಳಗಿರುವ ಬೆಂದ ಅಡುಗೆಗೆ ಈ ಮಸಾಲಾ ಒಗ್ಗರಣೆ ಸುರಿಯಿರಿ.

ಸೌಟಾಡಿಸಿ, ರುಚಿಕರವಾಗಿದೆಯಲ್ಲ!
ಕೆಸುವಿನ ದಂಟಿನ ಗಸಿ ಸಿದ್ಧವಾಗಿದೆ. ಅನ್ನ ಮಾತ್ರವಲ್ಲದೆ ಚಪಾತಿ, ದೋಸೆ, ಇಡ್ಲಿಗಳಿಗೂ ಹೊಂದಿಕೊಳ್ಳುವ ಅಡುಗೆ ನಮ್ಮದಾಗಿದೆ.

ಈ ಗಸಿಯನ್ನು ಸಾರು ಮಾಡುವುದು ಹೇಗೆ?
ತೊಗರಿಬೇಳೆಯ ಪ್ರಮಾಣ ಕಡಿಮೆ ಮಾಡಿದರಾಯಿತು, ಕೆಸುವಿನ ದಂಟಿನ ಸಾರು ಅನ್ನಿ, ಹಪ್ಪಳವನ್ನೂ ಹುರಿದು ಸಾರಿನೂಟ ಬೇಕಾದಷ್ಟಾಯಿತು ಅನ್ನಿ.

ಕೆಸುವಿನ ದಂಟಿನ ಬೋಳು ಹುಳಿ ಸಾಮಾನ್ಯವಾಗಿ ಮಾಡುವ ಅಡುಗೆ. ಇದಕ್ಕೆ ಬೇಳೆಕಾಳು ಬೇಡ, ಉಪ್ಪು ಹುಳಿಯೊಂದಿಗೆ ಬೆಂದ ಹೋಳುಗಳಿಗೆ ಬೆಳ್ಳುಳ್ಳಿ ಒಗ್ಗರಣೆ ಬಿದ್ದರೆ ಸಾಕು.

ನವರಾತ್ರಿ ಸಮಯದಲ್ಲಿ ಹೊಸ ಅಕ್ಕಿ ಊಟ (ಹೊಸ್ತು ) ಮಾಡುವ ಸಂಪ್ರದಾಯವಿದೆ. ಪ್ರಕೃತಿಯಲ್ಲಿ ದೊರೆಯುವ ವಿಧವಿಧವಾದ ತಾಜಾ ಮಾಲುಗಳಿಂದಲೇ ಭೋಜನ ಸಿದ್ಧ ಪಡಿಸುವ ಪದ್ಧತಿ ಇಲ್ಲಿದೆ. ಕೆಸುವಿನ ದಂಟಿನ ಬೆಂದಿ ಆಗಲೇಬೇಕು.

ಬೆಂದಿ ಹೇಗೆ?
ತೊಗರಿಬೇಳೆ ಬೇಡ, ಕೆಸುವಿನ ದಂಟುಗಳನ್ನು ಈಗಾಗಲೇ ಹೇಳಿದ ಕ್ರಮದಲ್ಲಿ ಬೇಯಿಸುವುದು.
ಅರ್ಧ ಕಡಿ ತೆಂಗಿನತುರಿಯನ್ನು ನಾಲ್ಕು ಒಣಮೆಣಸು ಕೂಡಿ ನುಣ್ಣಗೆ ಅರೆದು ಸೇರಿಸಿ, ಕುದಿಸಿ ಒಗ್ಗರಣೆ ಕೊಡುವುದು. ಬೆಳ್ಳುಳ್ಳಿ ಗಿಳ್ಳುಳ್ಳಿ ಬೇಡ. ಇದು ಒಂದು ಸಾಂಪ್ರದಾಯಿಕ ಅಡುಗೆ.

ಸೂಚನೆ: ನಾನು ಅಡುಗೆಗೆ ಬಳಸಿದ್ದು ಕರಿಕೆಸು, ಇದಕ್ಕೆ ಏನೂ ತರಿಕೆಯಿಲ್ಲ, ಮಾಮೂಲಿ ಅಡುಗೆಗೆ ಹಾಕುವ ಹುಳಿ ಸಾಕು. ಕಾಡುಕೆಸುವಿನ ದಂಟು ಅಡುಗೆಗೆ ಬಳಸಬಹುದಾದರೂ ಹುಣಸೆಹುಳಿ ಜಾಸ್ತಿ ಹಾಕಬೇಕು.

ಕರಿಕೆಸು, Colocasia esculenta ಒಂದು ಹಿತ್ತಲ ಬೆಳೆ ಹಾಗೂ ಅಲಂಕಾರಿಕ ಸಸ್ಯ. ಚೆನ್ನಾಗಿ ನೀರು ದೊರೆಯುವ ಸ್ಥಳದಲ್ಲಿ ನೆಟ್ಟರೆ ಸದಾ ಕಾಲವೂ ನಳನಳಿಸುತ್ತಿರುತ್ತದೆ. ಬೇಕಿದ್ದಾಗ ಕೊಯ್ದು ದಂಟುಗಳ ಸಾಂಬಾರ್, ಸೊಪ್ಪಿನ ಪತ್ರೊಡೆ ತಿಂದು ಆನಂದಿಸಬಹುದು. ಚೇಂಬು ಎಂದು ಕರೆಯಲ್ಪಡುವ ಇದರ ಗೆಡ್ಡೆ ಪುಷ್ಠಿದಾಯಕ ಆಹಾರ.


Thursday 12 September 2019

ಗಡಿ ಮದ್ದಿನ ಸೊಪ್ಪು








" ಅಕ್ಕ, ತೋಟದ ಹುಲ್ಲು ತೆಗೆಯುವ ಕೆಲಸ ಉಂಟಲ್ಲ, ಕೈಯೆಲ್ಲ ಗಾಯ..."
" ಕತ್ತಿ ತಾಗಿತೋ ಹೇಗೆ? "
" ಕತ್ತಿ ಗೀರಿದ್ದಲ್ಲ, ನಾಚಿಕೆಮುಳ್ಳು ಕೀಳುವಾಗ.. " ಅಂಗೈ ಪ್ರದರ್ಶಿಸಿದ ಚೆನ್ನಪ್ಪ.
ಸ್ನಾನದ ಮನೆಯಿಂದ ಹೊರ ಬರುತ್ತಿದ್ದ ಗೌರತ್ತೆ, " ಆ ಗಡಿ ಮದ್ದಿನ ಸೊಪ್ಪಿನ ಎಣ್ಣೆ ಮಾಡಿ ಹಚ್ಚಿಕೊಳ್ಳಲಿ... " ಎಂದರು.
" ಅದು ಯಾವ ಸೊಪ್ಪೂ? "
" ಅವನೇ ತಂದು ಕೊಡ್ತಾನೆ ಬಿಡು..."
" ಎಣ್ಣೆ ಏನೂ ಬೇಡ, ಹಾಗೇ ಸುಮ್ಮನೆ ಕಮ್ಯುನಿಸ್ಟ್ ಸೊಪ್ಪಿನಲ್ಲಿ ಉಜ್ಜಿಕೊಂಡ್ರೂ ನಡೆಯುತ್ತೆ,. ನಾಯಿತುಳಸಿಯೂ ಆಗ್ತದೆ.. "
ನನಗೆ ತಡೆಯದ ಕುತೂಹಲ. " ನೀನು ಸೊಪ್ಪು ತಾ, ಸೊಪ್ಪಿನೆಣ್ಣೆ ಮಾಡಿ ಕೊಟ್ಟರಾಯಿತಲ್ಲ.." ಸಮಜಾಯಿಸಿ ನನ್ನದು.
" ತರುವುದೆಂತದು, ಇಲ್ಲೇ ಉಂಟು.. " ಗೋಡೆ ಬದಿಯಲ್ಲಿ ಬೆಳೆದಿದ್ದ ಗಿಡದ ಎಲೆಗಳನ್ನು ಕಿತ್ತು ಕೊಟ್ಟ.
" ಓ.. ಇದು ಜರಿ ಗಿಡ. "

" ಬಂತಾ ಸೊಪ್ಪು? " ಗೌರತ್ತೆಯ ನಿರ್ದೇಶನಾಸಾರ ಎಣ್ಣೆ ತಯಾರಿಸಲಾಯಿತು.
" ನಾಲ್ಕು ಚಮಚ ಎಣ್ಣೆ ಈ ತಪಲೆಗೆ ಹಾಕು. "
" ಒಲೆ ಮೇಲೆ ಇಡು.."
 " ಒಗ್ಗರಣೆಗೆ ಕರಿಬೇವಿನೆಲೆ ಹಾಕುವ ಹಾಗೆ ಇದರ ಎಲೆಯನ್ನೂ ಹಾಕೂದು, ಒಂದು ಮುಷ್ಟಿ ಸಾಕು.."
" ಚಟಚಟ ಸದ್ದು ನಿಲ್ಲಬೇಕು, ಸೊಪ್ಪಿನ ಸಾರ ಎಣ್ಣೆಗೆ ಬಂತು ನೋಡು... ಈಗ ಗ್ಯಾಸ್ ಆರಿಸು, ಎಣ್ಣೆ ಕರಟಿಹೋಗಬಾರದು. "
ಎಣ್ಣೆಯನ್ನು ಪುಟ್ಟ ಶೀಸೆಯಲ್ಲಿ ತುಂಬಿಸಿಟ್ಟೆ.

ತಂಪು ವಾತಾವರಣದಲ್ಲಿ ತನ್ನ ವಲಯವನ್ನು ವಿಸ್ತರಿಸುತ್ತ ಬೆಳೆಯುವ ಈ ಜರಿ ಗಿಡ ಸದಾ ಹಚ್ಚಹಸಿರು.. ಕಾಂಡದಲ್ಲಿ ಕಪ್ಪು ಕೂದಲಿನಂತಹ ಬಳ್ಳಿಗಳು ಇಳಿದಿರುತ್ತವೆ, ಹಾಗಾಗಿ ಆಂಗ್ಲ ಭಾಷಾ ಪಂಡಿತರು ಇದನ್ನು Maidenhair fern, walking fern ಎಂದಿದ್ದಾರೆ. ಸಸ್ಯವಿಜ್ಞಾನಿಗಳು adiantum ಅಂದಿದ್ದಾರೆ.

ತಲೆಬೇನೆ, ಕೂದಲು ಉದುರುವ ರೋಗ, ತಲೆಹೊಟ್ಟುಗಳಿಗೆ ಈ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿವಾರಣೆ ಸಾಧ್ಯವಿದೆ.

ಅಸ್ತಮಾ, ಶ್ವಾಸಸಂಬಂಧಿ ಕಾಯೀಲೆ, ಮಧುಮೇಹ, ಬೊಜ್ಜು, ಇತ್ಯಾದಿ ಅಗಣಿತ ಕಾಯಿಲೆಗಳಿಗೆ ಔಷಧಿಯೆಂದು ಪ್ರಾಚೀನ ಪರ್ಶಿಯನ್ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಪರ್ಶಿಯಾದಿಂದ ವಿದ್ವಾಂಸರು ಭಾರತಕ್ಕೆ ಬರುತ್ಕಿದ್ದರಂದು ಇತಿಹಾಸದ ಅಭ್ಯಾಸಿಗಳಿಗೆ ತಿಳಿದಿದೆ, ಮೂಲ ಅಕರ ಗ್ರಂಥವು ಸಂಸ್ಕೃತದಲ್ಲಿ ಇದ್ದಿರಬೇಕು. ಏನೇ ಆಗಿರಲಿ, ಸಂಶೋಧನಾಸಕ್ತರನ್ನು, ಅಧ್ಯಯನಶೀಲರನ್ನು ತನ್ನತ್ತ ಸೆಳೆಯುವ ಶಕ್ತಿ ಈ ಪುಟ್ಟ ಸಸ್ಯದ್ದು.

ಆ್ಯಂಟಿ ಓಕ್ಸಿಡೆಂಟ್, ಆ್ಯಂಟಿಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಎಂದು ಬಿರುದಾಂಕಿತವಾಗಿರುವ ಈ ಸಸ್ಯಸಮೂಹ ಇರುವಲ್ಲಿ ಪರಿಸರ ಪರಿಶುದ್ಧವಾಗಿರುತ್ತದೆ ಎಂದೇ ತಿಳಿಯಿರಿ. ಮನೆಯ ಒಳಾಂಗಣದಲ್ಲಿ ಸಸ್ಯಗಳನ್ನು ಸಾಕುವ ಹವ್ಯಾಸಿಗಳು ಈ ಜರಿ ಸಸ್ಯವನ್ನೂ ಸಾಕಿ ಸಲಹುವುದು ಉತ್ತಮ.




.
ಟಿಪ್ಪಣಿ: ಈ ಬರಹಕ್ಕೆ ಕಾರಣವಾದ ಕಿರುಮಾಹಿತಿ ಒದಗಿಸಿದವರು ಶ್ರೀಯುತ ಕೃಷ್ಣಕುಮಾರ್ ಬೋನಂತಾಯ, ಬೆಂಗಳೂರು.


Friday 30 August 2019

ಆಷಾಢದ ಹಲಸು






ಒಮ್ಮೆ ಮಳೆಯ ಅವತರಣವಾದರೆ ಸಾಕು, ತೋಟದ ಹಲಸುಗಳೆಲ್ಲ ಹಣ್ಣಾಗಲು ಪ್ರಾರಂಭ, ಜೋರುಮಳೆ ಎನ್ನುವ ಚೆನ್ನಪ್ಪನೂ ಪತ್ತೆಯಿಲ್ಲ. ಇಂತಹ ಸಮಯದಲ್ಲಿ ನಾವು ಮನೆಯಂಗಳಕ್ಕೆ ಇಳಿಯಲಿಕ್ಕೂ ಇಲ್ಲ. ಆದರೂ ನಾಗಬನ ಹಾಗೂ ಶ್ರೀದೇವಿಯ ದೇವಾಲಯಕ್ಕೆ ಬರುವ ಮಂದಿ ತೋಟದ ಹಲಸುಗಳ ಪರಿಮಳದ ಜಾಡು ಹಿಡಿದು ಕೊಯ್ದು ತಂದಿರಿಸುವವರು. ಹಾಗಾಗಿಯೇ ಜೇನು ತುಳುವ, ಆಟಿ ಬಕ್ಕೆಗಳ ಪರಿಚಯ ನಮಗಾಯಿತು. ಆಷಾಢ ಮಾಸದಲ್ಲಿ ಅಂದರೆ ಆಟಿ ತಿಂಗಳಲ್ಲಿ ಫಲ ನೀಡುವ ಹಲಸಿನ ಮರಕ್ಕೆ ವಿಶೇಷ ಸ್ಥಾನ. ಸಾಮಾನ್ಯವಾಗಿ ತಿನ್ನಲಿಕ್ಕೆ ಏನೂ ಸಿಗದ ಕಾಲ ಇದಾಗಿದ್ದು ಈ ಸಮಯದಲ್ಲಿ ಫಲ ಕೊಡುವ ಹಲಸಿನ ಮರ ಇದ್ದರೆ ನಾವೇ ಭಾಗ್ಯಶಾಲಿಗಳು ಎಂದು ತಿಳಿಯುವ ಕಾಲವೊಂದಿತ್ತು ಎಂಬುದನ್ನು ನಾವು ಮರೆಯದಿರೋಣ.

ಈಗ ಆಷಾಢದ ಹಲಸು ನಮ್ಮ ಮುಂದಿದೆ, " ಬರೇ ಸಣ್ಣದು ಅಕ್ಕ.." ಅಂದ ಚೆನ್ನಪ್ಪ.

" ತೊಂದರೆಯಿಲ್ಲ, ಹತ್ತೂ ಹದಿನೈದು ಸೊಳೆ ಸಿಕ್ಕಿದ್ರೂ ಸಾಕು, ಒಂದು ಸಾಂಬಾರ್ ಮಾಡಬಹುದಲ್ಲ.."

ಅಂದಷ್ಟು ಹಲಸಿನಸೊಳೆ ಸಿಕ್ಕಿತು, ದಪ್ಪ ದಪ್ಪ ದೊಡ್ಡದಾದ ಸೊಳೆಗಳು. ನಮ್ಮ ಈ ದಿನದ ಪದಾರ್ಥಕ್ಕೆ ಯತೇಚ್ಛ ಆಯ್ತು.

ಹಲಸಿನ ಸೊಳೆಯನ್ನು ಸಾಂಬಾರಿಗೆ ಬಳಸುವ ವಾಡಿಕೆ ದೊಡ್ಡ ಭೋಜನಕೂಟಗಳಲ್ಲಿ ಈಚೀಚೆಗೆ ಆರಂಭವಾಗಿದೆ. ಹೆಚ್ಚಿನ ತರಕಾರಿಗಳು ರಾಸಾಯನಿಕಗಳಿಂದ ರಕ್ಷಿಸಲ್ಪಟ್ಟು ತಿನ್ನುವ ಯೋಗ್ಯತೆಯನ್ನು ಕಳೆದುಕೊಂಡಿವೆ. ಇಂತಹ ಸಮಯದಲ್ಲಿ ವಿಷಮುಕ್ತ ತರಕಾರಿ ಹಲಸನ್ನು ನಾವು ಮಗಳ ಮದುವೆಯಲ್ಲಿ ಹಲಸಿನ ಗುಜ್ಜೆ ಸಾಂಬಾರ್ ಬಡಿಸಿ ಯಶಸ್ವಿಯಾಗಿದ್ದನ್ನು ಮರೆಯಲುಂಟೆ?

" ಗುಜ್ಜೆ ಸಾಂಬಾರ್ ಾಡಿದ್ದು ಹೇಗೆ ಗಣಪಣ್ಣ? ಎಲ್ಲರಿಂದಲೂ ಹೊಗಳಿಕೆ ಸಿಕ್ಕಿತು ನೋಡು.. " ನಾನು ಕೇಳಿದಾಗ,
" ಅದರಲ್ಲಿ ವಿಶೇಷ ಏನೂ ಇಲ್ಲ, ನಾವು ಮಾಮೂಲಿಯಾಗಿ ಸಾಂಬಾರ್ ಮಾಡುವ ಹಾಗೇ.. ತೊಗರಿಬೇಳೆ ಹಾಕಿ, ಮೆಣಸು ಕೊತ್ತಂಬ್ರಿ ಹುರಿದು.. "
" ಸರಿ ಬಿಡು, ಗೊತ್ತಾಯ್ತು.. "


ಈಗ ಸಾಂಬಾರ್ ಮಾಡೋಣ.

ಹಲಸಿನ ಸೊಳೆಗಳು, ದೊಡ್ಡ ಗಾತ್ರದಲ್ಲಿ ಕತ್ತರಿಸಿ,. ಒಂದು ಸೊಳೆ ಎರಡು ತುಂಡಾದರೆ ಸಾಕು.
ಎರಡು ಹಿಡಿ ತೊಗರಿಬೇಳೆ, ತೊಳೆದು, ಹತ್ತು ನಿಮಿಷ ನೆನೆಸಿಟ್ಟು ಮೆತ್ತಗೆ ಬೇಯಿಸಿ.
ತೊಗರಿಬೇಳೆ ಬೆಂದ ನಂತರ ಹಲಸಿನ ಸೊಳೆಯನ್ನು ಉಪ್ಪು, ಹುಳಿ, ಚಿಟಿಕೆ ಅರಸಿಣ ಸಹಿತವಾಗಿ ಬೇಳೆಯೊಂದಿಗೆ ಬೇಯಿಸಿ. ಕುಕ್ಕರ್ ಬೇಕಿಲ್ಲ, ಒಂದು ಕುದಿ ಬಂದಾಗ ಹಲಸಿನ ಸೊಳೆ ಬೆಂದಿದೆ ಎಂದೇ ತಿಳಿಯಿರಿ. ಹಲಸಿನ ಗುಜ್ಜೆ ಈ ವೇಗದಲ್ಲಿ ಬೇಯಲಾರದು, ಕುಕ್ಕರ್ ಒಂದೆರಡು ಸೀಟಿ ಹಾಕಲೇಬೇಕು.

ಅರ್ಧ ಕಡಿ ತೆಂಗಿನತುರಿ
ನಾಲ್ಕಾರು ಒಣಮೆಣಸು, ಖಾರ ಇಷ್ಟಪಡುವವರು ತರಕಾರಿ ಬೇಯುವಾಗ ಮೆಣಸಿನ ಹುಡಿ ಹಾಕಿಕೊಳ್ಳಬಹುದಾಗಿದೆ.
ಒಂದು ಚಮಚ ಉದ್ದಿನಬೇಳೆ,
ಎರಡು ಚಮಚ ಕೊತ್ತಂಬರಿ,
ಸ್ವಲ್ಪ ಜೀರಿಗೆ, ಮೆಂತೆ,
ಉದ್ದಿನಕಾಳಿನಷ್ಟು ಇಂಗು,
ಒಂದೆಸಳು ಕರಿಬೇವು.
ಇಷ್ಟೂ ಸಾಮಗ್ರಿಗಳನ್ನು ತುಸು ತೆಂಗಿನ ಎಣ್ಣೆಪಸೆಯಲ್ಲಿ ಫರಿಮಳ ಬರುವಂತೆ ಹುರಿಯತಕ್ಕದ್ದು,
ತೆಂಗಿನತುರಿಯೊಂದಿಗೆ ಅರೆಯತಕ್ಕದ್ದು.
ಅರೆಯುವಾಗ ನೀರು ಕಡಿಮೆ ಬಳಸಿದಷ್ಟೂ ಮಸಾಲೆಗೆ ಪರಿಮಳ ಜಾಸ್ತಿ.

ತೆಂಗಿನ ಅರಪ್ಪನ್ನು ಬೇಯಿಸಿಟ್ಟ ಹಲಸು ತೊಗರಿಬೇಳೆಯ ಮಿಶ್ರಣಕ್ಕೆ ಕೂಡಿಸಿ.
ಬೇಕಿದ್ದರೆ ಈ ಹಂತದಲ್ಲಿ ಉಪ್ಪು ಹಾಕಬಹುದಾಗಿದೆ.
ಬೆಲ್ಲ ಬೇಕಿಲ್ಲ,
ಕುದಿಸಿ, ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಹಾಕುವಲ್ಲಿಗೆ ಸಾಂಬಾರ್ ಸಿದ್ಧವಾಗಿದೆ, ಅನ್ನದೊಂದಿಗೆ ಸವಿಯಿರಿ.



Sunday 25 August 2019

ಖರ್ಜೂರದ ಗೊಜ್ಜು





ರಾತ್ರಿ ಮಲಗುವ ಮೊದಲು ಮುಂಜಾನೆಯ ಚಪಾತಿಗಾಗಿ ಹಿಟ್ಟು ಕಲಸುತ್ತಿದ್ದಾಗಲೇ “ ನಾಳೆ ಇದರೊಂದಿಗೆ ಕೂಡಿ ತಿನ್ನಲು ಏನನ್ನು ಮಾಡಲಿ? " ಎಂಬ ಚಿಂತೆ.

 ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದ ಸಂಕ್ರಾಂತಿಯ ಅನ್ನಸಂತರ್ಪಣೆಯ ನಂತರ ಉಳಿಕೆಯಾದ ಮಾಲುಗಳಲ್ಲಿ ಶುಂಠಿ ಹಸಿಮೆಣಸುಗಳು ಬುಟ್ಟಿಯಲ್ಲಿ ಬಿದ್ದಿವೆ. ಏನೋ ಒಂದು ಪುಳಿಂಜಿ ಮಾಡೋಣ.

ಮುಂಜಾನೆ ಶುಂಠಿ ಹಸಿಮೆಣಸುಗಳನ್ನು ಚಿಕ್ಕದಾಗಿ ಹೆಚ್ಚುತ್ತಿದ್ದಾಗ ಜಾಡಿಯಲ್ಲಿ ಖರ್ಜೂರ ಇದೆಯೆಂಬ ನೆನಪಾಯ್ತು. ಪಾಯಸ ಮಾಡೋಣಾಂತ ತೆಗೆದಿರಿಸಿದ್ದು, ಮರೆತೇ ಹೋಗಿತ್ತು ಕಣ್ರೀ..
ಒಂದು ಹಿಡಿ ಖರ್ಜೂರಗಳ ಬೀಜ ಬಿಡಿಸಿ ಇಟ್ಟಾಯ್ತು. ಮಿಕ್ಸಿಯೊಳಗೆ ರೊಂಯ್ ಎಂದು ತಿರುತಿರುಗಿ ಖರ್ಜೂರ ಮುದ್ದೆಯಾಯಿತು.

ಇದೇ ಥರ ಹೆಚ್ಚಿಟ್ಟ 2 ಹಸಿಮೆಣಸು, ಇಂಚು ಉದ್ದದ ಶುಂಠಿಯೂ ಪುಡಿ ಆಗಿ ಬಿಟ್ಟಿತು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ತುಪ್ಪ ಉತ್ತಮ, ಸಾಸಿವೆ ಸಿಡಿಸಿ, ಹಸಿಮೆಣಸು ಶುಂಠಿ ಪೇಸ್ಟ್ ಯಾ ಪುಡಿಯನ್ನು ಹಾಕಿ ಬಾಡಿಸಿ.
ಮೆಣಸಿನ ಖಾರ ಹೂರ ಹೊಮ್ಮಿದಾಗ ಖರ್ಜೂರದ ಮುದ್ದೆ ಬಿದ್ದಿತು.ಮೇಲಿನಿಂದ ಒಂದು ಲೋಟ ನೀರು ಎರೆಯಿರಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ನೆಲ್ಲಿಗಾತ್ರದ ಹುಣಸೆಯ ಹುಳಿಸೇರಿಸಿ, ಕುದಿಯಲಿ. ಬೆಲ್ಲದ ಸಿಹಿ ನಿಮ್ಮ ಬಾಯಿರುಚಿಗನುಸಾರ ಹಾಕಿಕೊಳ್ಳತಕ್ಕದ್ದು.

" ತಿಂಡಿ ತೀರ್ಥ ಮಾಡಿದ್ದಾಯಿತೇ? " ಕೇಳುತ್ತ ವಾಕಿಂಗ್ ಮುಗಿಸಿ ಬಂದ ಗೌರತ್ತೆ. ಈಗ ವಾಕಿಂಗ್ ದೂರ ಹೋಗುವುದಕ್ಕಿಲ್ಲ, ಮನೆಯ ಆವರಣದಲ್ಲೇ ಇರುವ ನಾಗಬನವೂ ಶ್ರೀದೇವಿ ಕ್ಷೇತ್ರವೂ ಗೌರತ್ತೆಯ ನೆಚ್ಚಿನ ತಾಣ.

"ಬಟ್ಟಲಲ್ಲಿ ಚಪಾತಿ ಇಟ್ಕೊಳ್ಳಿ, ಮೇಲಿನಿಂದ ಗೊಜ್ಜು.. "
" ಆಯ್ತು, ಆಯ್ತೂ.. ಗರಂ ಗರಂ ಆದ ಹಾಗಿದೆ.. "
" ಹೌದ, ತಪಲೆ ತುಂಬ ಮೊಸರು ಉಂಟಲ್ಲ.. "
" ಸರಿ, ಬಿಸಿ ಕಾಫಿ ಬರಲಿ..
"ಉಳಿದರೆ ಮಧ್ಯಾಹ್ನಕ್ಕೂ ಆದೀತು, ಬೆಳ್ಳುಳ್ಳಿ ಇರಲಿಲ್ಲವೇ, ಹಾಕಬಹುದಿತ್ತು.. "
" ಇತ್ತು, ನೆನಪಾಗಲಿಲ್ಲ.. "
" ಇನ್ನೊಮ್ಮೆ ಮಾಡುವಾಗ ನೀರು ಗೊಜ್ಜು ಬೇಡ, ಮೊಸರು ಹಾಕಿ ಇಡು, ಅದ್ಭುತ ಹೊಸರುಚಿ ಆಗ್ತದೆ, ಖರ್ಜೂರ ಜಾಸ್ತಿ ಹಾಕು.." ಪುಕ್ಕಟೆ ಸಲಹೆ ದೊರೆಯಿತು.





Monday 19 August 2019

ಮಾಂಬಳ ಸಾರು





ಅಡುಗೆಯ ಕಥಾನಕದಲ್ಲಿ ಇವತ್ತು ಮಾಂಬಳ ಸಾರು ಬಂದಿದೆ. ಸಾರು ಎಲ್ಲರಿಗೂ ಗೊತ್ತು, ಮಾಂಬಳ ಅಂದ್ರೇನಪಾ ಅಂತ ತಲೆ ಕೆಡಿಸ್ಕೋಬೇಡಿ. ನಮ್ಮ ಗ್ರಾಮೀಣ ಫ್ರದೇಶಗಳಲ್ವಿ, ಮಾವಿನ ಮರಗಳ ಸಾಲು ಇರುವಲ್ಲಿ ಈ ಪ್ರಶ್ನೆ ಏಳದು. ಮಳೆಗಾಲದ ಉಪಯೋಗಕ್ಕಾಗಿ ಮಾವಿನ ಹಣ್ಣುಗಳ ರಸವನ್ನು ಬಿಸಿಲಿನಲ್ಲಿ ಒಣಗಿಸಿ ಚಾಕಲೇಟ್ ತರಹ ಮಾಡಿ ಇಟ್ಟರೆ ಮಾಂಬಳ ಆಯ್ತು. ಬಿಸಿಲು ಸಿಗದೇ ಇದ್ದರೆ ಬಾಣಲೆಗೆ ಎರೆದು ಒಲೆಯಲ್ಲಿ ಕಾಯಿಸಿ ದಪ್ಪ ಮಾಡಿಟ್ಟು ಕೂಡಾ ಉಪಯೋಗಿಸಬಹುದಾಗಿದೆ. ತಂಪು ಪೆಟ್ಟಿಗೆಯಲ್ಲಿ ಕೆಡದೇ ಉಳಿಯುವ ಮಾಂಬಳ ಮಹಾನಗರಗಳಲ್ಲಿ ಕೂಡಾ ಸಿಗುತ್ತದೆ ಎಂಬ ವಾರ್ತೆ ನಗರವಾಸಿಗಳಾಗಿರುವ ನಮ್ಮ ಮಕ್ಕಳಿಂದ ತಿಳಿಯಿತು. ಯಾವುದಕ್ಕೂ ಒಮ್ಮೆ ಸಮೀಪದಲ್ಲಿರುವ ಮಂಗಳೂರು ಸ್ಟೋರುಗಳಲ್ಲಿ ವಿಚಾರಿಸಿದರಾಯಿತು.

ಇರಲಿ, ಈಗ ಮಾಂಬಳ ಸಾರು ಮಾಡೋಣ.

ನಿನ್ನೆ ಸಂಕ್ರಾಂತಿಯ ಪ್ರಯುಕ್ತ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಂಜೆಯ ಹೊತ್ತು ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ಭಕ್ತಾದಿಗಳಿಂದ ಸಾಮೂಹಿಕ ಭಜನೆ ಸಹಿತವಾಗಿ ಅನ್ನಸಂತರ್ಪಣೆ ಇದ್ದಿತು.

ರಾತ್ರಿಯಲ್ಲವೇ, ಅನ್ನಪ್ರಸಾದದ ಪಾಯಸದೂಟ ಸ್ವೀಕರಿಸಿದ್ದಾಯ್ತು. ಬೆಳಗೂ ಆಯ್ತು ಅನ್ನಿ, ಬೆಂಗಳೂರು ತಲಪಬೇಕಾಗಿದ್ದ ಮಕ್ಕಳ ಸೈನ್ಯ ಮುಂಜಾನೆಯೇ ತೆಳ್ಳವು, ಬೆಲ್ಲಸುಳಿ ತಿಂದು ಕಾಫಿ ಪೇಯ ಉದರಕ್ಕಿಳಿಸಿ ಹೊರಟಿತು.

ಎಂದಿನಂತೆ ನಮ್ಮ ದಿನಚರಿ ಪ್ರಾರಂಭ.
" ಏನಾದ್ರೂ ಸಿಂಪಲ್ಲಾಗಿ ಅಡುಗೆ ಮಾಡು.. " ನಮ್ಮವರ ಹುಕುಂ ಬಂದಿತು.
" ಇಷ್ಟೂ ನಿನ್ನೆಯ ಔತಣದೂಟ ಉಳಿದಿದೆಯಲ್ಲ, ಬಿಸಿ ಮಾಡಿ ಉಣಬಹುದಿತ್ತು.. "
" ಅದನ್ನೆಲ್ಲ ಹೊರಗೆ ಇಡು... ತೆಗೆದುಕೊಂಡು ಹೋಗುವವರು ಇದಾರಲ್ಲ. " ಉಳಿಕೆಯಾದ ಭೋಜನ ಕಾರ್ಮಿಕ ವರ್ಗದವರೊಳಗೆ ಹಂಚಲ್ಪಟ್ಟಿತು.

" ಎಂತದು ಸಿಂಪಲ್ ಅಡುಗೆ ? "
" ಮಾಂಬಳ ಮಾಡಿಟ್ಕೊಂಡಿದೀಯಲ್ಲ, ಅದನ್ನೇ ಸಾರು ಮಾಡಿದ್ರಾಯ್ತು. ಮಳೆ ಬರುವಾಗ ಇಂತಹ ಸಾರು ಚೆನ್ನಾಗಿರುತ್ತೆ. " ಗೌರತ್ತೆ ಸಿಂಪಲ್ ಉತ್ತರ ಕೊಟ್ಟರು.

ಮಾಂಬಳ ತಂಪು ಪೆಟ್ಟಿಗೆಯಿಂದ ಹೊರ ಬಂದಿತು, ನಮ್ಮ ಅಗತ್ಯಕ್ಕನುಸಾರ ಒಂದು ಚಾಕಲೇಟ್ ಗಾತ್ರದಷ್ಟು ಚೂರಿಯಲ್ಲಿ ಕತ್ತರಿಸಿ ಒಂದಷ್ಟು ನೀರೆರೆದು ಇಡುವುದು. ಮಾಂಬಳವು ನೀರಿನಲ್ಲಿ ನೆನೆ ನೆನೆದು ಮಾವಿನ ಗೊಜ್ಜು ಆಯ್ತು.
ತಪಲೆಯಲ್ಲಿ ನೀರು ಎರೆದು, ಮಾವಿನ ಗೊಜ್ಜು ಸೇರಿಸಿ ಸಾರು ಎಂದಾಗಲಿ, ರುಚಿಗೆ ತಕ್ಕಷ್ಟು ಉಪ್ಪು, ಸಿಹಿಗೆ ಬೇಕಿದ್ದಷ್ಟು ಬೆಲ್ಲದೊಂದಿಗೆ ಕುದಿಯಲಿ.
" ಒಂದು ಹಸಿಮೆಣಸು ಸಿಗಿದು ಹಾಕೂ... " ಎಂದರು ಗೌರತ್ತೆ.
" ಒಗ್ಗರಣೆ ಬೇಡವೇ.. "
" ಅದೆಲ್ಲ ಬೇಡ.. ಆಯ್ತಲ್ಲ ಅಡುಗೆಯ ಅಟ್ಟಣೆ.. "





Saturday 10 August 2019

ಪಲ್ಯ









ದೊಡ್ಡದಾದ ಕ್ಯಾಬೇಜ್, ಪಲ್ಯ ಮಾಡ ಹೊರಟರೆ ನಾಲ್ಕು ದಿನಕ್ಕೆ ಬಂದೀತು. ಕತ್ತರಿಸಿ ಇಟ್ಟರೆ ಹೆಚ್ಚು ದಿನ ಉಳಿಯದು. ಅರ್ಧ ಕ್ಯಾಬೇಜನ್ನು ಒಂದೇ ದಿನ ಮುಗಿಸುವ ಉಪಾಯ ಹೇಗೆ?

ಎಂದೋ ಒಮ್ಮೆ ಮನೆಯಿಂದ ಹೊರ ಹೋಗಿದ್ದಾಗ ಪುತ್ತೂರಿನ ಹೋಟಲ್ ಊಟದ ನೆನಪಾಯ್ತು. ಒಂದು ಹಿಡಿ ಅನ್ನ ಉಣಲಿಕ್ಕೆ ವೈವಿಧ್ಯಮಯ ಕೂಟುಗಳು, ಎಲ್ಲವೂ ಖಾರದ ಕೊಳ್ಳಿ. ಇದನ್ನೆಲ್ಲ ಉಣ್ಣುತ್ತ ಹೋದರೆ ದೇಹದ ನವರಂಧ್ರಗಳಲ್ಲೂ ಉರಿ ಎದ್ದೀತು ಅಂತಿದ್ದಾಗ ಒಂದು ಪುಟ್ಟ ಬಟ್ಟಲಲ್ಲಿ ಕ್ಯಾಬೇಜ್ ಪಲ್ಯ ಕಂಡಿತ್ತು. ಚಿಕ್ಕದಾಗಿ ಒಂದೇ ಮಾದರಿಯ ಕ್ಯಾಬೇಜ್ ಚೂರುಗಳು, ಪಲ್ಯಕ್ಕೆ ಆಕರ್ಷಕ ನೋಟವೂ ಕತ್ತರಿಸುವ ವಿಧಾನದಲ್ಲಿ ಸಿಗುತ್ತೇಂತ ಇಲ್ಲಿ ತಿಳಿಯಿತು. ಏನೂ ಹಾಕಿಲ್ಲ, ಕೇವಲ ಉಪ್ಪು ಹಾಗೂ ಎಲ್ಲೋ ದೂರದಲ್ಲಿ ಒಗ್ಗರಣೆ ಸಿಡಿಸಿದಂತಿತ್ತು. ನಾನು ಈ ಕ್ಯಾಬೇಜ್ ಪಲ್ಯವನ್ನು ಮೊಸರು ಬೆರೆಸಿ ಉಂಡು ಎದ್ದಿದ್ದು ಕಣ್ರೀ..

ಕ್ಯಾಬೇಜ್ ಅರ್ಧ ಹೋಳಾಯ್ತು. ಅಂದ ಹಾಗೆ ಸಂತೆ ತರಕಾರಿಗಳನ್ನು ಚೆನ್ನಾಗಿ ತೊಳೆಯುವ ಅಗತ್ಯವಿದೆ. ಹೆಚ್ಚಿಟ್ಟ ನಂತರ ತೊಳೆಯುವುದಲ್ಲ. ಅಡುಗೆಮನೆಯ ಉಪ್ಪು ಇದೆಯಲ್ಲ, ತರಕಾರಿಗಳಲ್ಲಿ ಬೆಳೆಗಾರರು ಯಾ ಮಾರಾಟಗಾರರು ಸಿಂಪಡಿಸಿರಬಹುದಾದ ರಾಸಾಯನಿಕಗಳನ್ನು ನಿವಾರಿಸಲು ಸಹಾಯಕ. ನೀರಿಗೆ ಉಪ್ಪು ಬೆರೆಸಿ ತರಕಾರಿಗಳನ್ನು ತೊಳೆಯಿರಿ. ಅರ್ಧಗಂಟೆ ಉಪ್ಪು ನೀರಿನಲ್ಲಿ ಇರಿಸಿದರೂ ಆದೀತು. ಒಣಬಟ್ಟೆಯಲ್ಲಿ ಒರೆಸಿ ಓರಣವಾಗಿರಿಸಿಕೊಳ್ಳಿ.

ಈಗ ಅದೇ ಮಾದರಿಯ ಪಲ್ಯ ಮಾಡೋಣ. ನಮ್ಮ ಬಳಿ ಹೋಟಲ್ ಮಾದರಿಯ ಕಟ್ಟಿಂಗ್ ಮೆಶೀನ್ ಇಲ್ಲ. ಇರುವ ಚೂರಿಯಿಂದ ಕಟ್ ಕಟ್ ಆಯ್ತು. ಜಾಲರಿ ಬಟ್ಟಲಲ್ಲಿ ತುಂಬಿಸಿ ನೀರಿನ ಕೆಳಗೆ ಹಿಡಿದು ಇನ್ನೊಮ್ಮೆ ತೊಳೆದಿರಿಸುವುದು ಉತ್ತಮ.

ಕುಕರ್ ಒಳಗೆ ರುಚಿಗೆ ಉಪ್ಪು ಸಹಿತವಾಗಿ ತುಂಬಿಸಿ,
ಚಿಟಿಕೆ ಅರಸಿಣವನ್ನೂ ಬೆರೆಸಿ,
ಒಂದು ಸೀಟಿ ಕೂಗಿಸಿ,
ನಿಧಾನವಾಗಿ ವೆಯಿಟ್ ತೆಗೆಯಿರಿ.
ಬೇಯಲು ನೀರು ಹಾಕೋದು ಬೇಡ,
ಪುಟ್ಟ ಒಗ್ಗರಣೆ, ಕೇವಲ ಸಾಸಿವೆಕಾಳು ಸಿಡಿಸಿ.
ಪಲ್ಯ ಆಗೇ ಹೋಯ್ತು.

ವಿದ್ಯುತ್ ಸಂಪರ್ಕ ಇಲ್ಲ, ಮಳೆಯೋ ಮಳೆ. ಕಟ್ಸಾರು ಹಾಗೂ ಕ್ಯಾಬೇಜ್ ಪಲ್ಯದೂಟ.

ವಿದ್ಯುತ್ ಇಲ್ಲದೆ ಟೀವಿ ವೀಕ್ಷಣೆ ತಪ್ಪಿ ಹೋಗಿ ಗೌರತ್ತೆ ಹಳೇ ಪತ್ರಿಕೆಗಳ ಓದುವಿಕೆಗೆ ಮುಂದಾದರು. ಓದುತ್ತ " ಈ ಲೇಖನ ನೀನೂ ಓದು..."

ಓದುತ್ತ ನನ್ನ ತಲೆ ಗಿರ್್ರ ಎಂದಿತು.. ಮಾರುಕಟ್ಟೆಯಲ್ಲಿ ದೊರೆಯುವ ಅಡುಗೆಯ ಎಣ್ಣೆಗಳ ಪರಿಶುದ್ಧತೆಯನ್ನು ಪ್ರಶ್ನಿಸುವೋಪಾದಿಯಲ್ಲಿ ಆ ಲೇಖನ ಬಂದಿತ್ತು.

ಮಾರನೇ ದಿನ ಇದೇ ಪ್ರಯೋಗದಲ್ಲಿ ತೊಂಡೆಕಾಯಿ ಪಲ್ಯ ಗೆದ್ದು ಬಂದಿತು. ಬದಲಾವಣೆ ಏನಪ್ಪಾ ಅಂದ್ರೆ ಎಣ್ಣೆಯ ಒಗ್ಗರಣೆ ಹಾಕದಿರುವುದು, ತೆಂಗಿನತುರಿಯೊಂದಿಗೆ ಹಸಿ ಅರಸಿಣದ ತುಂಡನ್ನು ಅರೆದು ಸೇರಿಸಿದ್ದು ಅಷ್ಟೇ. ಅರಸಿಣ ಆರೋಗ್ಯಕ್ಕೆ ಒಳ್ಳೆಯದು ಅಂತಾರಲ್ಲ, ಪ್ಯಾಕೆಟ್ ಅರಸಿಣಹುಡಿಯನ್ನು ನಂಬುವಂತಿಲ್ಲ, ಮನೆಯಲ್ಲೇ ಬೆಳೆದ ಅರಸಿಣ ಗೆಡ್ಡೆಯ ಚಿಕ್ಕ ಚೂರನ್ನು ಪಲ್ಯದೊಂದಿಗೆ ಸೇವಿಸಿದರೇನೇ ರುಚಿ ವ್ಯತ್ಯಾಸ ತಿಳಿದೀತು.


Friday 2 August 2019

ಜೇನು ತುಳುವ








ಇವತ್ತು ಹೊಸತೊಂದು ಹಲಸಿನಫಲ ತಿಂದೆವು. ತುಳುವ ಹಲಸು, ಹಣ್ಣು ಮೆತ್ತಗಾಗಿ ಕೈಯಿಂದಲೇ ಬಿಡಿಸಿ, ಒಳಗಿನ ಸೊಳೆಯನ್ನು ತೆಗೆದು ಗುಳುಕ್ ಎಂದು ಬಾಯಿಗೆ ಹಾಕಿಕೊಂಡಾಗ ಜೇನಿನ ಸವಿ.

ಅಂದ ಹಾಗೆ ಇದೇನೂ ಹೊಸಫಲವಲ್ಲ, ನಾವು ಕೊಯ್ದಿಲ್ಲ, ತಿಂದಿಲ್ಲ ಅಷ್ಟೇ. ಕಳೆದ ನಾಲ್ಕಾರು ವರ್ಷಗಳಿಂದ ಯಾರೂ ಕೇಳುವವರಿಲ್ಲದೆ ಉದುರಿ ಬಿದ್ದು ಕೊಳೆತು ಮಣ್ಣಿನೊಂದಿಗೆ, ಇಲ್ಲವೇ ಹರಿಯುವ ನೀರಿನೊಂದಿಗೆ ಸೇರುತ್ತಿದ್ದ ಹಲಸಿನ ಹಣ್ಣು. ಹಲಸಿನ ಮರವು ಈಗ ದೇವಾಲಯ ನಿರ್ಮಾಣದೊಂದಿಗೆ ಮನುಷ್ಯ ಸಂಚಾರಯೋಗ್ಯವಾಗಿ ಪರಿವರ್ತಿತವಾದ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ನಾಗಬನದ ಆವರಣದೊಳಗೆ ಸುರಕ್ಷಿತವಾಗಿದೆ.  

ಈಗ ಆಷಾಢ ಮಾಸ, ನಮ್ಮ ಕಡೆ ಆಟಿ ತಿಂಗಳು, ಹಿಂದಿನ ಕಾಲದಲ್ಲಿ ತಿನ್ನಲು ಆಹಾರ ಸಿಗದ ಸಮಯ ಇದಾಗಿದ್ದು ಆಟಿ ತಿಂಗಳಲ್ಲಿ ಸಿಗುವ ಹಲಸಿನ ಫಲಕ್ಕೆ ವಿಶೇಷ ಮರ್ಯಾದೆ ಇದ್ದ ಕಾಲವೊಂದಿತ್ತು ಎಂಬುದನ್ನೂ ಮರೆಯಲಾಗದು.

ಫುಟ್ ಬಾಲ್ ಚೆಂಡಿನಂತೆ ಗಾತ್ರವೂ ಚಿಕ್ಕದು, ಹೊತ್ತು ತರಲು ಶ್ರಮವೂ ಇಲ್ಲ, ಬಿಡಿಸಿ ತಿನ್ನಲು ತಿಳಿದಿದ್ದರಾಯಿತು. ಚಿಕ್ಕ ಸಂಸಾರಕ್ಕೆ ಚೊಕ್ಕ ಫಲ.



Sunday 28 July 2019

ಕಟ್ ಸಾರು




ಏನಾಯ್ತು, ಜೋರಾಗಿ ಮಳೆ ಬರುತ್ತಾ ಇದೆ, ಅಡುಗೆಮನೆಯಲ್ಲಿ ಒಂದೇ ಒಂದು ತರಕಾರಿ ಇಲ್ಲ.. ಇಷ್ಟು ಸಾಲದೇ, ನನ್ನ ಕಿಟಿಕಿಟಿ ಶುರುವಾಯ್ತು.

" ಕಿರಿಕಿರಿ ಮಾಡ್ಬೇಡ, ಮಳೆ ಬರೂದು ಕಾಣಿಸ್ತಾ ಇಲ್ಲವೇ.. "

" ಅಲ್ಲೊಂದು ನಿಂಬೆಹಣ್ಣು ಇದ್ಹಾಂಗಿತ್ತು.. " ಗೌರತ್ತೆ ಒರಲಿದರು.

" ಅದನ್ನೆಂತದು ಮಾಡೂದು, ಮಳೆಗೆ ಶರಬತ್ತು ಕುಡಿಯೋಣ ಅಂತೀರಾ.. ಮತ್ತೆ ಕೆಮ್ಮು ಶುರುವಾಯ್ತು ಅನ್ನಿ.."

" ಒಂದು ಕಟ್ ಸಾರು ಮಾಡಿ, ಹಲಸಿನಹಪ್ಪಳ ಹುರಿದು ಇಡು, ಊಟಕ್ಕೆ ಸಾಕು. "

" ಹೌದಲ್ವೇ, ಈ ನಿಂಬೆಹುಳಿ ಚೆನ್ನಾಗಿಯೇ ಇದೆ.. " ಕಟ್ ಸಾರು ಮಾಡೋಣ.

ಕರಿಬೇವು ನಿನ್ನೆ ಹಿತ್ತಲ ಗಿಡದಿಂದ ತಂದದ್ದು ಇದೆ, ಇಂಗು ಸಾಕಷ್ಟು ಇದೆ, ತೊಗರಿಬೇಳೆಯೂ ಡಬ್ಬ ತುಂಬ ಇದೆ. ಹಸಿಮೆಣಸು ಶುಂಠಿ ಇದ್ದರೆ ಹಾಕಬಹುದಾಗಿತ್ತು,


ಕೊತ್ತಂಬರಿ ಸೊಪ್ಪೂ ಇಲ್ಲ, ಹಿತ್ತಲ ತೋಟದಲ್ಲಿ ಬಿತ್ತಿದ ಕೊತ್ತಂಬರಿ ಬೀಜ ಕುಡಿಯೊಡೆದಿದೆ ಅಷ್ಟೇ..

ಇಲ್ಲದಿರುವುದರ ಬಗ್ಗೆ ಚಿಂತೆ ಮಾಡಬೇಕಿಲ್ಲ, ಈಗ ಇರುವ ಪರಿಕರಗಳನ್ನು ಹೊಂದಿಸಿ ಕಟ್ ಸಾರು ಮಾಡಿಕೊಳ್ಳೋಣ.

ಎರಡು ಹಿಡಿ ತೊಗರಿಬೇಳೆ, ಚೆನ್ನಾಗಿ ತೊಳೆದು, ಮೂರು ಲೋಟ ನೀರು ಎರೆದು ಕುಕ್ಕರಿನಲ್ಲಿ 5 - 6 ಸೀಟಿ ಕೂಗಿಸಿ.
ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಸೌಟಿನಲ್ಲಿ ತಿರುಗಿಸಿ, ಬೇಳೆ ಹಾಗೂ ನೀರು ಹೊಂದಿಕೊಳ್ಳಲಿ.

ಕಟ್ ಸಾರು ಎಂಬ ಹೆಸರು ಇಡಬೇಕಾಗಿರುವುದರಿಂದ ಎರಡು ಲೋಟ ನೀರು ಎರೆಯಿರಿ, ತೆಳ್ಳಗಾಯ್ತು. ರುಚಿಗೆ ಉಪ್ಪು ಬೆರೆಸಿ ಕುದಿಯಲು ಇಡುವುದು.

ಸಾರು ಕುದಿದಿದೆ, ಸ್ಟವ್ ಆರಿಸಿ,
2 ಚಮಚ ತುಪ್ಪದಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಕೂಡಿದ ಒಗ್ಗರಣೆ,
ನೀರಿನಲ್ಲಿ ಕರಗಿಸಿ ಇಟ್ಟ ಉದ್ದಿನಬೇಳೆ ಗಾತ್ರದಇಂಗು,
ನಿಂಬೆಹಣ್ಣಿನ ರಸ ಹಾಗೂ ನಿಂಬೆಯ ಸಿಪ್ಪೆಯನ್ನೂ ಹಾಕಿ ಮುಚ್ಚಿ ಇಡುವುದು.

ಉಣ್ಣುವ ಹೊತ್ತಿಗೆ ಮೆತ್ತಗಾದ ನಿಂಬೆ ಸಿಪ್ಪೆಯನ್ನೂ ಬೇಕಿದ್ದವರು ತಿನ್ನಿ, ಒಳ್ಳೆಯದು.

ಇದಕ್ಕೆ ಬೆಲ್ಲ ಹಾಕುವುದಕ್ಕಿಲ್ಲ, ಅತಿಯಾಗಿ ಮಸಾಲೆಗಳನ್ನೂ ಹಾಕಬೇಕಿಲ್ಲ. ಪುಟ್ಟ ಮಕ್ಕಳಿಗೂ ಅನ್ನದೊಂದಿಗೆ ತಿನ್ನಿಸಬಹುದು. ಮಳೆಗಾಲದ ಶೀತಹವೆಗೆ ಕಟ್ ಸಾರು ಎಲ್ಲ ವಯೋಮಾನದವರಿಗೂ ಹಿತಕರ.

ತೆಂಗಿನ ತುರಿ ಬೇಕಾಗಿಲ್ಲ, ತೆಂಗಿನಕಾಯಿಯೊಂದಿಗೆ ಗುದ್ದಾಟ ಇಲ್ಲಿಲ್ಲ.
ಡಯಟಿಂಗ್ ಸೂತ್ರ ಅನುಸರಿಸುವವರಿಗೂ,
ಡಯಾಬಿಟೀಸ್ ಎನ್ನುತ್ತ ಸಕ್ಕರೆ ಬೆಲ್ಲ ತಿನ್ನದವರಿಗೂ,
ಅನಾರೋಗ್ಯವೆಂದು ಪಥ್ಯದೂಟ ತಿನ್ನುವವರಿಗೂ,
ಅಂತೂ ಇಂತೂ ಏನೇ ಕಾಯಿಲೆಗಳಿದ್ದರೂ ಕಟ್ ಸಾರು ಉಣ್ಣಲು ಚಿಂತೆ ಮಾಡಬೇಕಿಲ್ಲ.



Monday 22 July 2019

ಬಣ್ಣದ ತೆಳ್ಳವು





" ಈ ಸಕ್ಕರೆ ಚೀಲಕ್ಕೆ ಈಗಲೇ ಇರುವೆ ಹತ್ತಲು ಶುರು..." ಚೆನ್ನಪ್ಪ ಚೀಲದ ಬಾಯ್ಕಟ್ಟಿ ಒಳಗಿಟ್ಟ. ಅಂದಾಜು ಹತ್ತು ಕಿಲೋ ಇದ್ದೀತು, ದೊಡ್ಡ ಸ್ಟೀಲ್ ಡ್ರಮ್ ಒಳಗೆ ಹೋಯ್ತು ಸಕ್ಕರೆ, ಹೇಗೂ ಮುಂದಿನ ಸಂಕ್ರಾಂತಿಯ ದುರ್ಗಾಪೂಜೆಗೆ ಬೇಕಾಗುತ್ತೆ, ನಾಗರಪಂಚಮಿಯೂ ಬರಲಿದೆ, ತಂಬಿಲಸೇವೆಗೂ ಬೇಕಾದೀತು.

" ಇಲ್ನೋಡು, ಹಸಿಮೆಣಸು ಶುಂಠಿ... ಛೇ, ಕೊತ್ತಂಬರಿ ಸೊಪ್ಪು ಈಗಲೇ ಹಾಳಾಗಲಿಕ್ಕೆ ಹತ್ತಿದೆ, " ಅನ್ನುತ್ತ ಗೌರತ್ತೆ, ಅಡುಗೆಶಾಲೆಯ ತಪಾಸಣೆ ಮಾಡ ಹೊರಟರು.

" ಹಾಳಾದ್ದು ಎಲ್ಲಿ ಹೇಗೆ ಇಟ್ರೂ ಕೊಳೆಯುತ್ತೆ, ಕೇವಲ ಕುಡಿಯುವ ಮಜ್ಜಿಗೆ ನೀರಿಗೆ ಮಾತ್ರ ಕೊತ್ತಂಬರಿ ಸೊಪ್ಪು ಹಾಕಿದ್ದು ಅಡುಗೆಯ ಗಣಪಣ್ಣ.. "

" ಟೊಮೆಟೋ ಸಾರಿಗೂ ಹಾಕಿದ್ಹಾಂಗಿತ್ತು.. ಮಜ್ಜಿಗೆ ನೀರು ಘಮಘಮಾ ಅಂತಿತ್ತು. ಈಗ ಇರೂದನ್ನು ಚಟ್ಣಿ ತಂಬುಳಿ ಮಾಡಬಹುದಲ್ಲ.. " ಗೌರತ್ತೆಯ ಪ್ಲಾನು.

" ಆಯ್ತು, ತಂಬುಳಿ ಮಾಡುವಾ, ನಾಳೆ ತನಕ ಇದು ಫ್ರೆಶ್ ಆಗಿ ಇರಬೇಕಲ್ಲ, ಏನು ಮಾಡೂದು? "

" ನೀರಿನಲ್ಲಿ ಬೇರು ಮಾತ್ರ ತಾಕುವಂತೆ ಇಡು, ನಾಳೆ ಎಲೆಯೆಲ್ಲ ಅರಳಿ ನಿಲ್ತಾವೆ.."
ಕೊತ್ತಂಬರಿ ಸೊಪ್ಪನ್ನು ನೀರ ಪಸೆಯಲ್ಲಿ ಒಂದು ಲೋಟದೊಳಗೆ ಇರಿಸಲಾಯಿತು.

ತಂಬ್ಳಿ, ಚಟ್ಣಿ ಬೇಡ, ನಾಳೆಯ ದೋಸೆಗೆ ಬಣ್ಣವನ್ನೂ ಪರಿಮಳವನ್ನೂ ತರುವಂತಹ ಐಡಿಯಾ ಹೊಳೆಯಿತು. ಈ ಸೂಪರ್ ಐಡಿಯಾ ತಲೆಯೊಳಗೆ ಮೊಳಗಿದ್ದೇ ತಡ, ಒಂದು ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ಹಾಕಿರಿಸಲಾಯಿತು.

" ಕೇವಲ ಒಂದು ಲೋಟ ಅಕ್ಕಿ ಸಾಕೇ.. "

ಸಾಲದು, ಒಂದು ಲೋಟ ಅಕ್ಕಿ ಹುಡಿ ಸೇರಿಸೋಣ. ಪ್ಯಾಕೆಟುಗಳಲ್ಲಿ ಬರುವ ಅಕ್ಕಿ ಹುಡಿ ( ಅಕ್ಕಿಹಿಟ್ಟು ) ನುಣುಪಾಗಿರುತ್ತೆ, ಮಿಕ್ಸೀಯಲ್ಲಿ ಅರೆದದ್ದು ನುಣುಪು ಎಂದು ಆಗುವುದೇ ಇಲ್ಲ, ದೋಸೆ ಹಿಟ್ಟು ನುಣುಪಾದಷ್ಟೂ ಒಳ್ಳೆಯದು, ಅವಶ್ಯವೆಂದು ತೋರಿದಾಗ, ಅಕ್ಕಿಹಿಟ್ಟು ತಂದದ್ದು ಇದ್ದಾಗ ಹೀಗೂ ದೋಸೆ ಮಾಡುವ ರೂಢಿ ಆಗಿ ಬಿಟ್ಟಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಅಡುಗೆ ವ್ಯವಸ್ಥೆಯೂ ಇರುವುದರಿಂದ ಪಾಯಸದೂಟಕ್ಕಾಗಿ ಅಕ್ಕಿ ಹುಡಿ ಬೇಕಾಗುವುದೂ, ಅದರಲ್ಲಿ ಅಲ್ಪಾಂಶ ಮಾತ್ರ ಭೂರಿ ಭೋಜನದಲ್ಲಿ ಬಳಸಲ್ಪಟ್ಟು ಉಳಿದದ್ದು ನನ್ನ ಅಡುಗೆ ಉಗ್ರಾಣದೊಳಗೆ ಶೇಖರಣೆಯಾಗುತ್ತ ಇರುತ್ತವೆ. ಇಂತಹ ವಿವಿಧ ಹುಡಿಗಳನ್ನು ಏನೋ ಒಂದು ಅಡುಗೆ ಮಾಡಿ ಮುಗಿಸುವುದೂ ನಮ್ಮ ಕರ್ತವ್ಯ ಅಲ್ವೇ..

ಅಕ್ಕಿಯನ್ನು ತೊಳೆದು ಇರಿಸುವುದು.
ಒಂದು ಕಟ್ಟು ಕೊತ್ತಂಬರಿ ಸೊಪ್ಪನ್ನು ಸ್ವಚ್ಛಗೊಳಿಸಿ, ಹೆಚ್ಚಿಟ್ಟುಕೊಳ್ಳುವುದು.
ಒಂದು ಚಿಕ್ಕ ಶಂಠಿ, ಸಿಪ್ಪೆ ಹೆರೆದು ಇಡುವುದು
2 ಹಸಿಮೆಣಸು, ತೊಟ್ಟು ಮುರಿದು ಇಡುವುದು.

ಅಕ್ಕಿಯನ್ನು ಅರೆಯುವಾಗ ರುಚಿಗೆ ಉಪ್ಪು ಸಹಿತವಾಗಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿಗಳನ್ನು ಕೂಡಿಕೊಂಡು ಅರೆಯಿರಿ.

ಒಂದು ಲೋಟ ಅಕ್ಕಿ ಹುಡಿಗೆ ನೀರೆರೆದು ಗಂಟುಗಳಾಗದಂತೆ ಕಲಸಿ ಅರೆದಿಟ್ಟ ಹಿಟ್ಟಿಗೆ ಕೂಡಿಸಿ, ತೆಳ್ಳವು ಎರೆಯಲು ಬರುವಂತೆ ನೀರು ಕೂಡಿಸಿ.



ದೋಸೆ ಎರೆಯುವ ತವಾ ಅಥವಾ ಕಾವಲಿಗೆ ಅಡುಗೆಯ ಎಣ್ಣೆ ಯಾ ತುಪ್ಪ ಸವರಿ ಒಲೆಯ ಮೇಲಿರಿಸುವುದು.
ಹಿಟ್ಟನ್ನು ಸೌಟಿನಲ್ಲಿ ಕದಡುತ್ತ ಬಿಸಿಯೇರಿದ ನಂತರ ವೃತ್ತಾಕಾರದಲ್ಲಿ ಹಾರಿಸಿ ಎರೆಯುವುದು.
ಹಿಡಿಕೆ ಇರುವ ಕಾವಲಿ ಅತ್ಯುತ್ತಮ, ಎರೆದು ಅತ್ತಿತ್ತ ಆಡಿಸಿದರೂ ಸಾಕು, ಹಿಟ್ಟು ತಾನಾಗಿ ಹರಡಿಕೊಳ್ಳುತ್ತೆ.
ಮುಚ್ಚಿ ಬೇಯಿಸಿ, ಒಂದು ಬದಿ ಬೆಂದರೆ ಸಾಕು, ಸಟ್ಟುಗದಲ್ಲಿ ಎಬ್ಬಿಸಿ ತಟ್ಟೆಗೆ ಹಾಕಿ, ಮಡಚಿ ಇಡುವುದು, ಇಲ್ಲಾಂದ್ರೆ ದೋಸೆಗಳು ಒಂದಕ್ಕೊಂದು ಅಂಟಿಕೊಳ್ಳುತ್ತೆ.
ಹಿಡಿಕೆ ಇರುವ ತವಾ ಆಗಿದ್ರೆ ಸಟ್ಟುಗದ ಅಗತ್ಯವೂ ಇಲ್ಲ, ಕಾವಲಿಯಿಂದಲೇ ತಟ್ಟೆಗೆ ಕವುಚಿ ಹಾಕಿದ್ರಾಯ್ತು.

ತಾಜಾ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ವಿಶಿಷ್ಠವಾದ ಪರಿಮಳದಿಂದ ಬಾಯಿರುಚಿಯನ್ನೂ ಹೆಚ್ಚಿಸುತ್ತದೆ. ಉಸಿರಿನ ದುರ್ವಾಸನೆಯೂ ದೂರ, ಬಾಯಿಹುಣ್ಣು ಆಗಿದ್ದಲ್ಲಿ ನೋವು ನಿವಾರಕವೂ ಹೌದು.

ನಿನ್ನೆ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಚಂಡಿಕಾಹೋಮ ನಡೆದಿತ್ತು, ರಾತ್ರಿ ಎಂದಿನಂತೆ ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನಪೂಜೆ ಇತ್ಯಾದಿ ಕಾರ್ಯಕಲಾಪಗಳ ನಂತರ ಅನ್ನಸಂತರ್ಪಣೆಯೂ ಇದ್ದಿತು.
ನಂತರ ಉಳಿಕೆಯಾದ ಸಾಮಗ್ರಿಗಳಲ್ಲಿ ದೊರೆತ ಕೊತ್ತಂಬರಿ
ಸೊಪ್ಪಿನಿಂದ ಬಣ್ಣದ ತೆಳ್ಳವು ಬಂದಿದೆ, ಇದೇನೂ ಮೊದಲ ಪ್ರಯೋಗವಲ್ಲ, ಅತಿಯಾಗಿ ಕೊತ್ತಂಬರಿ ಸೊಪ್ಪು ತಂದರೆ ನನ್ನದು ದೋಸೆಯ ಅಡುಗೆ.

ಅಂದ ಹಾಗೆ ಕೊತ್ತಂಬರಿ ಸೊಪ್ಪು ಮನೆಯಲ್ಲೇ ಸಾಕಿ ಸಲಹಬಹುದು. ನಾನಂತೂ ಕುಂಡದಲ್ಲಿ ಬೆಳೆಸಿದ್ದೇನೆ. ಅಂಗಡಿಯಿಂದ ತಂದ ಕೊತ್ತಂಬರಿ ಬೀಜಗಳನ್ನು ತುಸು ಜಜ್ಜಿ ಎರಡಾಗಿಸಿ,
ಕಾಂಪೋಸ್ಟ್ ಮಣ್ಣಿನಲ್ಲಿ ಬೆರೆಸಿ,
ಮಣ್ಣಿನಲ್ಲಿ ತೇವಾಂಶ ಇರಬೇಕು
ಹತ್ತು ಹನ್ನೆರಡು ದಿನಗಳಲ್ಲಿ ಮೊಳಕೆ,
ಇರುವೆಗಳ ಕಾಟ ಇರದಂತೆ ಎಚ್ಚರವಹಿಸಿ.
ಮೂವತ್ತು ದಿನಗಳಲ್ಲಿ ತಾಜಾ ಸೊಪ್ಪು ಲಭ್ಯ.
ಅರುವತ್ತು ದಿನಗಳಾದಾಗ ಹುಲುಸು ಬೆಳೆ.
ಬೇರೆ ಬೇರೆ ಪಾತಿ ಯಾ ಕುಂಡಗಳನ್ನು ಹೊಂದಿಸಿ ಇಟ್ಟುಕೊಂಡಲ್ಲಿ ಬೆಳವಣಿಗೆಯ ಲೆಕ್ಕಾಚಾರ ನೋಡಿಕೊಂಡು ವರ್ಷವಿಡೀ ಕೊತ್ತಂಬರಿ ಸೊಪ್ಪು ಕೊಯ್ಯುತ್ತಿರಬಹುದು. 

Thursday 11 July 2019

ಬಸಳೆಯ ಪತ್ರೊಡೆ





ಬಸಳೆಸೊಪ್ಪು ತೆಗೆದಿಟ್ಟಿದ್ದೆನಲ್ಲ, ನಾಲ್ಕಾರು ಬಾಳೆಲೆ ತಂದಿಟ್ಟಿರಲು ಹೇಳಿದ್ದರೂ ಚೆನ್ನಪ್ಪ ತಂದಿರಲಿಲ್ಲ, ಪುಟ್ಟ ಕತ್ತಿ ಹಿಡಿದು ತೋಟಕ್ಕಿಳಿದು 2 ಬಾಳೆಲೆ ತರಬೇಕಾಯ್ತು.

" ಪತ್ರೊಡೆ ಈ ತುಂಡು ಬಾಳೆಲೆಯಲ್ಲಿ ಹ್ಯಾಗೆ ಮಾಡ್ತೀಯ? " ಅಚ್ಚರಿ ಪಟ್ಟರು ಗೌರತ್ತೆ.

" ನೋಡ್ತಾ ಇರಿ, ಇರೂದು ನಾವಿಷ್ಟೇ ಜನ, ಐವತ್ತು ಬಾಳೆಲೆ ಕೊಯ್ದು ಯಾಕೆ ಹಾಳ್ಮಾಡೋದು... "







ಮಗಳ ಮದುವೆಯ ಜೆಂಬ್ರದ ಅಡುಗೆ ಸಾಮಾನುಗಳ ಲಿಸ್ಟ್ ನಮ್ಮ ಅಡುಗೆ ಗಣಪಣ್ಣ ಬರೆಯುತ್ತ ಇದ್ದಾಗ ನಾನೂ ಅಲ್ಲೇ ಇದ್ದುಕೊಂಢು ಗಮನಿಸುತ್ತ ಇದ್ದೆ. ಮಂಜಾನೆಯ ಇಡ್ಲಿ ಸಾಂಬಾರ್ ಪಟ್ಟಿಯಲ್ಲಿ ಉದ್ದಿನಬೇಳೆಯೊಂದಿಗೆ ಅಕ್ಕಿರವೆಯೂ ಇದ್ದಿತು. ಅಡುಗೆ ಭಟ್ಟರ ಇಡ್ಲಿಯ ಸುಲಭ ವಿಧಾನ ಈವಾಗ ತಿಳಿಯುವಂತಾಯಿತು. ಊಟೋಪಚಾರಗಳ ನಂತರ ಉಳಿಕೆಯಾದ ಜೀನಸು, ತರಕಾರಿಗಳು ಮನೆಗೆ ಬಂದದ್ದರಲ್ಲಿ ಅಕ್ಕಿ ರವೆಯೂ ಇತ್ತು. ಅಕ್ಕಿರವೆಯ ಇಡ್ಲಿಯೇನೋ ಮಲ್ಲಿಗೆಯಂತೆ ಆಗಿತ್ತು. ಈಗ ಅದೇ ಅಕ್ಕಿರವೆಯಿಂದ ಪತ್ರೊಡೆ ಮಾಡೋಣ.

ಬಸಳೆ ಸೊಪ್ಪನ್ನು ಆಯ್ದು, ತೊಳೆದು ಚಕಚಕನೆ ಕತ್ತರಿಸಿದಾಗ ತಪಲೆ ತುಂಬಿತು.

ಮಳೆಗಾಲ ಅಲ್ವೇ, ಯಾವಾಗ ಕರೆಂಟ್ ಹೋಗುತ್ತೆ, ಯಾವಾಗ ಬರುತ್ತೆ ಅನ್ನೋ ಹಾಗಿಲ್ಲ, ಬೇಗನೆ ಕೆಲಸ ಮುಗಿಸೋಣ.
ಕೊತ್ತಂಬ್ರಿ ಜೀರಿಗೆ ಎಂದು ಮಸಾಲಾ ಸಾಮಗ್ರಿ ಹಾಕುವುದಕ್ಕಿಲ್ಲ, ಜೆಂಬ್ರದ ಅಡುಗೆಯಲ್ಲಿ ಉಳಿದ ಗರಂಮಸಾಲಾ ಪ್ಯಾಕೆಟ್ ಇದೆ, ಅರ್ಧ ಚಮಚ ನಮ್ಮ ಪತ್ರೊಡೆಗೆ ಸಾಕು.

ಕೆಸುವಿನ ಪತ್ರೊಡೆಗೆ ಹಾಕುವ ಹುಣಸೆಯ ಹುಳಿ ಇದಕ್ಕೆ ಬೇಡ, ತುರಿಸುವ ಭಯವೇ ಇಲ್ಲ, ಆದರೂ ರುಚಿಕರವಾಗಲು ಒಂದು ಲೋಟ ಸಿಹಿ ಮೊಸರು ಇರಬೇಕು, ದಪ್ಪ ಮಜ್ಜಿಗೆಯೂ ಆದೀತು.
ರುಚಿಗೆ ಉಪ್ಪು.
ಹಸಿ ಅರಸಿಣ ಇದೆ, ಚಿಕ್ಕ ತುಂಡು ಹಾಕೋಣ, ಅರಸಿಣ ಹುಡಿಯೂ ಆದೀತು. ಪುಟ್ಟ ಚಮಚದಲ್ಲಿ ಅಳೆದು ಹಾಕಿರಿ.
ಅರ್ಧ ಕಡಿ ತೆಂಗಿನ ತುರಿ.
ಇಲ್ಲಿ ನಾವು ಅರೆಯಬೇಕಾಗಿರುವುದು ತೆಂಗಿನತುರಿ ಹಾಗೂ ಅರಸಿಣ ಗೆಡ್ಡೆ ಮಾತ್ರ, ಮಿಕ್ಸಿಯಲ್ಲಿ ಹೊರಳಿಸಿ ಪುಡಿ ಮಾಡಿದ್ದಾಯ್ತು.

2 ಲೋಟ ಅಕ್ಕಿರವೆಯನ್ನು ತಪಲೆಗೆ ಹಾಕಿಕೊಳ್ಳಿ.
ಒದ್ದೆಯಾಗುವಷ್ಟು ನೀರೆರೆದು ಕಲಸಿ ಇಡುವುದು.
ಮೊಸರು, ಉಪ್ಪು, ಗರಂಮಸಾಲಾ, ಅರೆದ ತೆಂಗಿನ ತುರಿ ಹಾಕಿ ಬೆರೆಸಿ.

ಇದೀಗ ಇಡ್ಲಿ ಹಿಟ್ಟಿನ ಸಾಂದ್ರತೆ ಬಂತೇ, ಬಾರದಿದ್ದರೆ ನೀರು ಎರೆದು ಪುನಃ ಕಲಸಿ,
ಹೆಚ್ಚಿಟ್ಟ ಬಸಳೆ ಸೊಪ್ಪು ಬೆರೆಸುವಲ್ಲಿಗೆ ನಮ್ಮ ಪತ್ರೊಡೆ ಹಿಟ್ಟು ತಯಾರಾದಂತೆ.

ಇಡ್ಲಿ ಬೇಯಿಸುವ ಪಾತ್ರೆ ಒಲೆಗೇರಲಿ. ನೀರು ಕುದಿಯಿತೇ, ತಂದಿಟ್ಟ ಬಾಳೆ ಎಲೆಯನ್ನು ತಟಕ್ಕನೆ ನೀರಿಗೆ ಅದ್ದಿ ತೆಗೆಯಿರಿ, ಇದೀಗ ಬಾಡಿಸಿದ ಬಾಳೆ ಸಿದ್ಧ.

ಇಡ್ಲಿ ಪಾತ್ರೆಯೊಳಗೆ ಇಡಲು ಸಾಧ್ಯವಾಗುವ ತೂತುಗಳ ಜಾಲರಿ ಬಟ್ಟಲು ಇರಬೇಕು. ಅದನ್ನು ಇಡ್ಲಿ ಪಾತ್ರೆಯೊಳಗಿಟ್ಟು, ಅದರ ಮೇಲೆ ಬಾಡಿಸಿದ ಬಾಳೆಯನ್ನಿಟ್ಟು ಹಿಟ್ಟನ್ನು ಸುರಿಯಿರಿ. ಮುಚ್ಚಿ ಅರ್ಧ ಗಂಟೆ ಬೇಯಿಸಿ.

ಬಿಸಿಬಿಸಿಯಾದ ಪತ್ರೊಡೆಯನ್ನು ಟೇಬಲ್ ಮೇಲಿಟ್ಟು ಬಾಳೆ ಎಲೆಯಿಂದ ಬಿಡಿಸಿ ಕವುಚಿ ಹಾಕಿದಾಗ, "ವಾ... ಬಸಳೆಯ ಕೇಕ್... " ಅನ್ನುವುದೇ ನಮ್ಮ ಗೌರತ್ತೆ!

" ಹೌದಲ್ವೇ, ಇವತ್ತು ಯಾರದ್ದು ಬರ್ತ್ ಡೇ.. "
" ಇದ್ದೀತು ನಿನ್ನ ಫೇಸ್ ಬುಕ್ ಫ್ರೆಂಡುಗಳದ್ದು.." ನಗೆಚಟಾಕಿ ಗೌರತ್ತೆಯದು.



Monday 8 July 2019

ಬಸಳೆಯ ಮಜ್ಜಿಗೆಹುಳಿ








ಬೇಸಿಗೆಯಲ್ಲಿ ತಂದು ನೆಟ್ಟ ಬಸಳೆ, ಚಪ್ಪರಕ್ಕೆ ಹಬ್ಬಿಸಲು ವ್ಯವಧಾನವಿಲ್ಲದೆ ಈಗ ಮಳೆ ಪ್ರಾರಂಭವಾದ ಮೇಲೆ ನೆಲದಲ್ಲೇ ಎತ್ತೆತ್ತಲೋ ಸಾಗುತ್ತಿರುವುದನ್ನು ಕಂಡು ಮರುಗಿದ ಚೆನ್ನಪ್ಪ, ಬಿಸಿಲು ಬಂದಾಗ ನಾಲ್ಕು ಗೂಟ ನೆಟ್ಟು ಚಪ್ಪರ ಹಾಕಲು ಉದ್ಯುಕ್ತನಾದ.

ಅವನು ಚಪ್ಪರದ ಸಿದ್ಧತೆ ಮಾಡುತ್ತಿದ್ದಾಗ ನಾನು ಅಡುಗೆಮನೆಯಲ್ಲಿ ಟೊಮ್ಯಾಟೋ ರಸಂ ಮಾಡಲೋ, ಬೀನ್ಸ್ ಪಲ್ಯಕ್ಕೆ ಕೊಚ್ಚಲೋ ಎಂಬ ಚಿಂತನೆಯಲ್ಲಿದ್ದಾಗ ಬಸಳೆ ಕುಡಿಗಳು ಅಡುಗೆಮನೆಗೆ ಬಂದವು.
" ಅದೇನಿಲ್ಲಕ್ಕ, ಎಲ್ಲವನ್ನೂ ಚಪ್ಪರಕ್ಕೆ ಎತ್ತಿ ಕಟ್ಟುವುದಕ್ಕಾಗುವುದಿಲ್ಲ ಅಂತ ಇಷ್ಟು ಕುಯ್ದು ತಂದೆ. " ಎಂದ ಚೆನ್ನಪ್ಪ.
" ಚೆನ್ನಾಯ್ತು ಬಿಡು, ಈಗ ಪದಾರ್ಥಕ್ಕಾಯ್ತು. " ಟೊಮ್ಯಾಟೋ ಮೂಲೆಗೆ ಒತ್ತರಿಸಲ್ಪಟ್ಟಿತು.

ಬಸಳೆ, ಏನಿದ್ರೂ ಮಳೆಗಾಲದ್ದು, ಅಲ್ಲದೇ ನೆಲದಲ್ಲಿ ತೆವಳಿಕೊಂಡು ಹೋದಂತಾದ್ದು, ಸೊಪ್ಪು ದಂಟುಗಳನ್ನು ಪರೀಕ್ಷಿಸಿಯೇ ಅಡುಗೆ ಮಾಡಬೇಕಾಗಿದೆ.

ದಪ್ಪ ಹಾಗೂ ದೊಡ್ಡ ಎಲೆಗಳನ್ನು ನಾಳೆಯ ಪತ್ರೊಡೆಗಾಗಿ ತೆಗೆದಿರಿಸಲಾಯಿತು. ಎಳೆಯ ದಂಟು ಹಾಗೂ ಕುಡಿಎಲೆಗಳು ಇವತ್ತಿನ ಪದಾರ್ಥ ತಯಾರಿಯಲ್ಲಿ ಭಾಗಿಯಾದುವು.

" ಹೌದು, ಏನು ಪದಾರ್ಥ ಹಾಗಿದ್ರೆ? " ಗೌರತ್ತೆಯ ಪ್ರಶ್ನೆ.
" ಸಾಂಬಾರು ಮಾಡಲಿಕ್ಕೆ ಪಚ್ಚೆಸ್ರು ಕಾಳು ಅಥವಾ ಹುರುಳಿಕಾಳು ಹಾಕಿದ್ರೆ ಚೆನ್ನಾಗಿರೋದು, ಯಾವ್ದೂ ಇಲ್ವಲ್ಲ..."
" ಬಸಳೆ ಮೇಲಾರ ಮಾಡು.." ಗೌರತ್ತೆಯ ಸೂಚನೆ, ಅನುಮೋದಿತವೂ ಆಯ್ತು.
" ಹ್ಞೂ, ದೊಡ್ಡದಾದ ತೆಂಗಿನಕಾಯಿ ಇದೆ, ಈಗ ಕಡೆದ ಸಿಹಿ ಮಜ್ಜಿಗೆಯೂ ಇದೆ.. "
ಮೂಲೆಯಿಂದ ಹಸಿ ಅರಸಿಣ, " ನಾನೂ ಇದ್ದೇನೆ.. " ಅಂದಿತು. " ತೆಂಗಿನಕಾಯಿ ಅರೆಯುವಾಗ ಒಂಚೂರು ಅರಸಿಣ ತುಂಡು ಮಾಡಿ ಹಾಕು, ಹಾಗೇ ಆ ತರಕಾರಿ ಬುಟ್ಟಿಯಲ್ಲಿ ದೊಡ್ಡ ಮೆಣಸು ಕಾಣ್ತಾ ಇದೆ, ಅದನ್ನೂ ಹಾಕು.. ಪರೀಮಳ. " ಎಂದರು ಗೌರತ್ತೆ.
" ಹೌದಲ್ವೇ, ಕ್ಯಾಪ್ಸಿಕಂ ಇದ್ರೆ ಮೇಲಾರದ ರುಚಿ ಜಾಸ್ತಿ. "

ಈಗ ಬಸಳೆಯ ಮೇಲಾರ ಮಾಡೋಣ. 

ಪಚ್ಚೆಸ್ರು ಇಲ್ಲದ ಬಾಬ್ತು ಈಗ ಎರಡು ಹಿಡಿ ತೊಗರಿಬೇಳೆ ಬೇಯಿಸೋಣ. ಕುಕ್ಕರ್ ಮೂರು ಸೀಟಿ ಹಾಕಲಿ.

ತದನಂತರ ಹೆಚ್ಚಿಟ್ಟ ಬಸಳೆಯನ್ನು ಹಾಕಿ, ರುಚಿಗೆ ಉಪ್ಪು ಸಹಿತವಾಗಿ ಅದೇ ಕುಕ್ಕರಿನಲ್ಲಿ ಬೆಂದ ತೊಗರಿಯೊಂದಿಗೆ ಬೇಯಿಸುವುದು. ಬಸಳೆ ದಂಟು ನಿಧಾನಗತಿಯಲ್ಲಿ ಬೇಯುವ ವಸ್ತು. ಒಂದು ಸೀಟಿ ಹಾಕಿದ ನಂತರ ಗಂಟೆ ನೋಡುವುದಾದರೆ 15 ನಿಮಿಷ, ಸೀಟಿಯನ್ನೇ ಕೇಳಬೇಕೆಂದಿದ್ದರೆ 7ಸೀಟಿ. ಈ ಥರ ಲೆಕ್ಕಾಚಾರ ಇಟ್ಕೊಳ್ಳಿ.

ಬಸಳೆ ಬೇಯುವುದರ ಒಳಗಾಗಿ ತೆಂಗಿನ ಅರಪ್ಪು ಸಿದ್ಧವಾಗಬೇಕಿದೆ. ದೊಡ್ಡ ತಂಗಿನಕಾಯಿ ಇತ್ತಲ್ಲ, ಅರ್ಧ ಹೋಳು ತೆಂಗಿನ ತುರಿ ಸಾಕು, ತುರಿದಾಯ್ತು.

ಮಗಳು ತಂದಿಟ್ಟ ಮಿಕ್ಸೀ ಇದೆ, " ತುಂಬ ನುಣ್ಣಗೆ ಅರೆದು ಕೊಡುತ್ತೆ.. " ಅಂದಿದ್ಳು. ನೋಡೇ ಬಿಡೋಣ, ಮಜ್ಜಿಗೆಹುಳಿಯ ತೆಂಗಿನಕಾಯಿ ನುಣ್ಣಗಾದಷ್ಟೂ ಚೆನ್ನ.

ತೆಂಗಿನತುರಿ, ಚಿಕ್ಕತುಂಡು ಹಸಿ ಅರಸಿಣ, ಒಂದು ಲೋಟ ಸಿಹಿಮಜ್ಜಿಗೆ ಅರೆಯಲು ಬೇಕಿದ್ದಷ್ಟೇ ಎರೆದು ಅರೆಯುವುದು.

ಬಸಳೆ ಬೆಂದಿದೆ,  
ಗೌರತ್ತೃ ಕ್ಯಾಪ್ಸಿಕಂ ಹೋಳು ಮಾಡಿಟ್ಟಿದ್ರು, 
ಅದನ್ನು ಬೇಯಸಿಟ್ಟ ಬಸಳೆಗ ಬೆರೆಸಿ, 
ಪುನಃ ಗ್ಯಾಸ್ ಉರಿಯ ಮೇಲಿರಿಸುವುದು,
ತೆಂಗಿನ ಅರಪ್ಪು ಕೂಡಿಸಿ,
ಸಾಂದ್ರತೆಯ ಅನುಸಾರ ಮಜ್ಜಿಗೆ ಯಾ ನೀರು ಎರೆಯುವುದು.
ಉಪ್ಪು ಬೇಕಿದ್ದರೆ ಹಾಕುವುದು.
ಬೆಲ್ಲ ಹಾಕುವುದಕ್ಕಿಲ್ಲ.
ಕ್ಯಾಪ್ಸಿಕಂ ಇಲ್ಲದಿದ್ದರೆ ಹಸಿಮೆಣಸು ಸಿಗಿದು ಹಾಕಿ. ಖಾರ ಆಗಬಾರದು, ಮೆಣಸಿನ ಪರಿಮಳ ಬಂದರೆ ಸಾಕು.
ಕುದಿಸಿ, ಒಂದು ಕುದಿ ಬಂದಾಗ ಕೆಳಗಿಳಿಸಿ.
ಕರಿಬೇವಿನ ಒಗ್ಗರಣೆ ಬೀಳಲಿ, ಒಗ್ಗರಣೆಗೆ ಒಂದು ಒಣಮೆಣಸು ಮುರಿದು ಹಾಕಿ.
ಮಜ್ಜಿಗೆ ಹುಳಿ ಖಾರವೂ ಆಗಬಾರದು, ಹುಳಿಯೂ ಇರಬಾರದು, ಸಾರಿನಂತೆ ನೀರು ಎರೆದಂತಿರಬಾರದು. ಪಲ್ಯದಂತೆ ಗಟ್ಟಿಮುದ್ದೆಯೂ ಆಗುವಂತಿಲ್ಲ. ಇವಿಷ್ಟು ಸೂಕ್ಷ್ಮಗಳನ್ನು ಅರಿತರೆ ಮಜ್ಜಿಗೆಹುಳಿಯ ಮರ್ಮ ತಿಳಿದಂತೆ ಎಂದು ತಿಳಿಯಿರಿ.







Sunday 30 June 2019

ಕುಟಜಾ ಸಾರು











" ಮಳೆಗಾಲದ ಮಾವಿನಹಣ್ಣು ತಿನ್ನಲು ಇನ್ನೊಂದು ಉಪಾಯ ಉಂಟು.. " ಎಂದರು ಗೌರತ್ತೆ.

 ಮಳೆಗಾಲದ ಮಾವಿನಹಣ್ಣು ಅಂದರೆ ಅದೂ ಮರದಿಂದ ನೆಲಕ್ಕೆ ಉದುರಿ ಬಿದ್ದುದನ್ನು ಹೆಚ್ಚಿನವರು ತಿನ್ನಲು ಹಿಂಜರಿಯುತ್ತಾರೆ. ಹುಳಹುಪ್ಪಟಿಗಳ ಕಾಟ, ಕ್ರಿಮಿಕೀಟಗಳ ಬಾಧೆ, ಕಾಡುಪ್ರಾಣಿಗಳ ಧಾಳಿ... ಇವೆಲ್ಲ ಹಳ್ಳಿಯಲ್ಲಿ ವಾಸವಾಗಿರುವವರಿಗೆ ಮಾತ್ರ ಗೊತ್ತು. ಅನಾರೋಗ್ಯಕರ ಎಂದು ತಿನ್ನದಿರಲು ಆದೀತೇ.. ಅದಕ್ಕಾಗಿ ಗೌರತ್ತೆಯ ಮಾರ್ಗದರ್ಶನ ಇಲ್ಲಿ ಬಂದಿದೆ.

ಹಿರಣ್ಯದ ನಾಗಬನದ ಸಮೀಪ ಶ್ರೀದೇವಿ ಆಲಯದ ನಿರ್ಮಾಣ ಇತ್ತೀಚೆಗೆ ಆಯಿತು. ಕಾಡು ಗಿಡಗಂಟಿಗಳೂ, ಪೊದರುಗಳಿಂದಲೂ ಆವೃತವಾಗಿದ್ದ ಪ್ರದೇಶ ಸಮತಟ್ಟಾಗಿ ಮನುಷ್ಯ ಸಂಚಾರ ಯೋಗ್ಯವಾಗಿ ಪರಿವರ್ತಿತವಾಗಿದೆ. ಇಲ್ಲಿಯೇ ನಮ್ಮ ಸೊನೆ ಮಿಡಿಯ ಮಾವಿನ ಮರ ಇದೆ.        

" ದೇವರ ದರ್ಶನವೂ ಆಯ್ತು, ಮಾವಿನಹಣ್ಣು ಹೆಕ್ಕಿದ ಹಾಗೂ ಆಯ್ತು " ಎಂದು ಭಕ್ತ ಮಹನೀಯರೆಲ್ಲ ಮಾವಿನಹಣ್ಣು ಹೆಕ್ಕುವವರು. ಈ ವರ್ಷ ಮಾವಿನ ಮರದ ಬುಡದಲ್ಲಿ ಹುಳಕೀಟಗಳ ಬಾಧೆಯಿಲ್ಲ,. ಒಂದೇ ಒಂದು ಮಾವಿನ ವಾಟೆಯೂ ಮರದ ಬುಡದಲ್ಲಿ ಸಿಗಬೇಕಲ್ಲ!

" ಯಾರ ಕಣ್ಣಿಗೂ ಗೋಚರವಾಗದ ಈ ಮರ ದೈವಸಾನ್ನಿಧ್ಯದಿಂದ ಕೃತಾರ್ಥವಾಯಿತು.. " ಇದು ದೇವಾಲಯದ ರೂವಾರಿಯಾದ ನಮ್ಮೆಜಮಾನ್ರ ಅಂಬೋಣ.

 "...ಉಪಾಯ ಉಂಟು. " ಎನ್ನುತ್ತ ಬಂದ ಗೌರತ್ತೆ ಸೀರೆಯ ಸೆರಗಿನ ಕಟ್ಟು ಬಿಡಿಸಿ ಬೆಳ್ಳಗಿನ ಹೂವುಗಳನ್ನು ಟೇಬಲ್ ಮೇಲೆ ಹರವಿದರು.

"ಕೊಡಗಸನ ಹೂ ತಂದ್ರಾ.. ತಂಬುಳಿ ಮಾಡೂದ ಹೇಗೆ? "

" ಹೇಗೂ ಮಾವಿನಹಣ್ಣಿನ ಗೊಜ್ಜು ಮಾಡ್ತೀಯಲ್ಲ, ಈ ಅರಳಿದ ಹೂ, ಒಗ್ಗರಣೆ ಸಟ್ಟುಗದಲ್ಲಿ ಬಾಡಿಸಿ, ಬರೇ ಬಾಡಿಸಿದ್ರೆ ಸಾಲದು, ಹುರಿಯಬೇಕು... ಆ ಮೇಲೆ ನಿನ್ನ ಗೊಜ್ಜಿಗೆ ಹಾಕಿ ಅಲಂಕರಿಸುವುದು. "
" ಓ, ಸಾರು ಮಾಡೂದಾ, ತಂಬ್ಳಿ ಬೇಡ ಹಂಗಿದ್ರೆ.. "
" ಹೀಗೂ ಆಗುತ್ತೆ, ಕೊಡಗಸನ ಸಾರು ಅಂತ ಹೆಸರಿಟ್ಟರಾಯ್ತು. "

ಅಂತೂ ನನ್ನ ಬರವಣಿಗೆಯ ಥೀಮ್, ಡಯಲಾಗ್ ಎಲ್ಲವನ್ನೂ ಗೌರತ್ತೆಯೇ ಹೊಸೆದು ಕೊಟ್ಟರು.

ಮದ್ಯಾಹ್ನ ಉಣ್ಣುವ ಮೊದಲು ಗೊಜ್ಜು ಫೋಟೋ ತೆಗೆದೂ ಆಯಿತು.

ಗೊಜ್ಜು ಮಾಡಿದ್ದು ಹೇಗೆ?

ಎರಡು ಮಾವಿನಹಣ್ಣುಗಳನ್ನು ತೊಳೆದು,
ತೊಟ್ಟು ಸಿಪ್ಪೆ ತೆಗೆದು,
ಸಿಪ್ಪೆ ಹಾಗೂ ಗೊರಟು ಸಹಿತವಾಗಿ,
ಎರಡು ಲೋಟ ನೀರೆರೆದು,
ಗಿವುಚುವುದೇನೂ ಬೇಡ,
ರುಚಿಗೆ ಉಪ್ಪು ಮತ್ತು ಒಂದು ಅಚ್ಚು ಬೆಲ್ಲ ಇರಲಿ,
ಕುದಿಸಿ ಕೆಳಗಿಳಿಸುವುದು.

ಸಿಪ್ಪೆಯೂ ಆರೋಗ್ಯಕರ ಹಾಗೂ ಬೇಯಿಸಿದ ಕಾಟ್ ಮಾವಿನ ಸಿಪ್ಪೆಯೂ ರುಚಿಕರ.

ಒಗ್ಗರಣೆಗೆ ತುಪ್ಪ, ಸಾಸಿವೆ, ಒಣಮೆಣಸು.
ಸಾಸಿವೆ ಸಿಡಿಯಲುಆರಂಭವಾದಾಗ ಕೊಡಗಸನ ಹೂಗಳನ್ನು ಹಾಕಿ, ಚೆನ್ನಾಗಿ ಕಂದು ಬಣ್ಣ ಬರುವ ತನಕ ಹುರಿದು ಹಾಕುವುದು.

ಈ ಸಾರು/ಗೊಜ್ಜು ರಾತ್ರಿಯೂಟಕ್ಕೆ ಉಳಿಯಲಿಲ್ಲವೆಂದು ಬೇರೆ ಹೇಳಬೇಕಾಗಿಲ್ಲ.

ಕೊಡಸಿಗೆ, ಕೊಡಗಸನ, ಎಂದು ರೂಢಿಯಾಗಿ ಕರೆಯಲ್ಪಡುವ ಈ ಸಸ್ಯ ವರ್ಗ ನಂದಿಬಟ್ಟಲು ಹೂವಿನ ಕುಟುಂಬಕ್ಕೆ ಸೇರಿದುದಾಗಿದೆ. ಬೆಟ್ಟಗುಡ್ಡಗಳಲ್ಲಿ ಕಾಣಸಿಗುವ ಕುಟಜ ವೃಕ್ಷವನ್ನು ಸಂಸ್ಕೃತದ ಕಾವ್ಯಭಾಷೆ ಗಿರಿಮಲ್ಲಿಕಾ ಎಂದಿದೆ. ನಮ್ಮೂರಿನ ಆಡುಮಾತು ತುಳುವಿನಲ್ಲಿ ಕೊಡಂಚಿ. ಕುಟಜವನ್ನು ಆಯುರ್ವೇದವು ಔಷಧೀಯ ಸಸ್ಯವೆಂದು ಪರಿಗಣಿಸಿದೆ, ಕುಟಜಾ ತಂಬುಳಿ ಎಂಬ ಬ್ಲಾಗ್ ಬರಹದಲ್ಲಿ ಸಾಕಷ್ಟು ವಿವರಣೆಗಳನ್ನು ಬರೆದಿದ್ದೇನೆ.
 ಹೊಟ್ಟೆಯುಬ್ಬರಿಸುವಿಕೆ, ಹುಳಿತೇಗು, ಜೀರ್ಣಕ್ರಿಯೆ ಸರಿಯಿಲ್ಲದಿರುವಿಕೆ ಇತ್ಯಾದಿ ಜಠರ ಸಂಬಂಧಿ ತೊಂದರೆಗಳಿಗೆ ಕುಟಜಾರಿಷ್ಠವನ್ನು ಮನೆಯಲ್ಲಿ ತಂದಿಟ್ಟುಕೊಳ್ಳದವರಿಲ್ಲ.

ಸಸ್ಯವಿಜ್ಞಾನವೂ ಕುಟಜ ವೃಕ್ಷವನ್ನು ಆ್ಯಂಟಿಡೀಸೆಂಟ್ರಿಕಾ ಎಂದು ಕೊಂಡಾಡುತ್ತ Holarrhena antidysenterica ಎಂಬ ಹೆಸರನ್ನೂ ಕೊಟ್ಟಿರುತ್ತದೆ.



Sunday 23 June 2019

ಮಾವಿನ ಹಣ್ಣಿನ ದಪ್ಪ ದೋಸೆ  









ಮಾವಿನ ಹಣ್ಣಿನ ತೆಳ್ಳವು ತಿನ್ನುತ್ತ, " ನಾಳೆಯೂ ಇದೇ ದೋಸೆ ಆದೀತು.. " ಅಂದರು ಗೌರತ್ತೆ.

" ದಿನಾ ನೀರ್ ತೆಳ್ಳವು ಬೇಡ.. "

" ಬೇಡಾಂದ್ರೆ ಬೇಡ, ಮಾವಿನ ಹಣ್ಣು ಹಾಕಿಯೇ ಮೆಂತೆ ದೋಸೆ ಮಾಡಿ ನೋಡಿದ್ರಾಯ್ತು.. " ನನ್ನ ಸಮಜಾಯಿಷಿ ಬಂದಿತು.

ಅಡುಗೆಯ ಈ ಹೊಸ ಪ್ರಯೋಗದಲ್ಲಿ 2 ಚಮಚ ಮೆಂತೆ ಮುಂಜಾನೆಯೇ ನೆನೆ ಹಾಕಲ್ಪಟ್ಟಿತು.
2 ಲೋಟ ಬೆಳ್ತಿಗೆ ಅಕ್ಕಿಯೂ ನೀರಿನಲ್ಲಿ ನೆನೆದು ಮೈ ತೊಳೆದುಕೊಂಡಿತು.
ಅರ್ಧ ಕಡಿ ತೆಂಗಿನತುರಿ ಎದುರಾಯಿತು.
ಸಂಜೆಯ ಹೊತ್ತು ಇನ್ನಷ್ಟು ಮಾವಿನಹಣ್ಣುಗಳು ತೋಟದಿಂದ ಆಗಮಿಸಿದುವು.
ಏಳೆಂಟು ಪುಟ್ಟ ಪುಟ್ಟ ಹಣ್ಣುಗಳನ್ನು ತೊಳೆದು ತೊಟ್ಟು ತೆಗೆದು, ಸಿಪ್ಪೆ ಬಿಡಿಸಿ, ರಸ ತೆಗೆದಿಟ್ಟಾಯ್ತು.

ಮೆಂತೆ ನುಣ್ಣಗಾದಷ್ಟೂ ಒಳ್ಳೆಯದು, ಮೊದಲು ಮೆಂತೆಯನ್ನು ತೆಂಗಿನತುರಿಯೊಂದಿಗೆ ತುಸು ನೀರೆರೆದು ಅರೆಯುವುದು.
ಸಾಕಷ್ಟು ನುಣ್ಣಗಾದ ನಂತರ ಅಕ್ಕಿ ಹಾಗೂ ಮಾವಿನಹಣ್ಣಿನ ರಸ ಹಾಕಿಕೊಂಡು ಅರೆಯುವುದು.
ಬೇಕೆನಿಸಿದರೆ ನೀರು ಎರೆಯಬಹುದಾಗಿದೆ.
ಹುದುಗು ಬರಲಿಕ್ಕಾಗಿ 7 - 8 ಗಂಟೆಗಳ ಕಾಲ ಮುಚ್ಚಿ ಇರಿಸುವುದು.
ರುಚಿಗೆ ತಕ್ಕಷ್ಟು ಉಪ್ಪು ಹಾಕುವುದು.
ಸಿಹಿಪ್ರಿಯರು ಒಂದು ತುಂಡು ಬೆಲ್ಲವ್ನೂ ಹಾಕಬಹುದು, ಬೆಲ್ಲ ಹಾಕಿದ ದೋಸೆ ಕಪ್ಪು ಕಪ್ಪಾಗಿ ಬರುವುದರಿಂದ ನಾನು ಹಾಕಿಲ್ಲ.
ಮಾರನೇ ಮುಂಜಾನೆ ಮಾವಿನ ಹಣ್ಣಿನ ದೋಸೆ ಬ್ರೆಡ್ ನಂತೆ ಉಬ್ಬಿ ಬಂದಿತು.
ಎಣ್ಣೆ ಸವರಿದ ತವಾ ಬಿಸಿಯೇರಿದ ನಂತರ ಒರೆಸಿ ತೆಗೆಯಿರಿ, ಒಂದು ಸೌಟು ಹಿಟ್ಟು ಎರೆದು, ಸೌಟಿನಲ್ಲಿ ತುಸು ಹರಡಿ, ಮುಚ್ಚಿ ಬೇಯಿಸಿ, ತುಪ್ಪ ಎರೆದು ಕವುಚಿ ಹಾಕಿ.
ಪುನಃ ದೋಸೆ ಎರೆಯುವಾಗ ತವಾ ಒರೆಸಿಕೊಳ್ಳತಕ್ಕದ್ದು.

ತೆಂಗಿನಕಾಯಿ ಚಟ್ಣಿ ಹಾಗೂ ಫಿಲ್ಟರ್ ಕಾಫಿಯೊಂದಿಗೆ ಈ ವಿಶೇಷವಾದ ಮ್ಯಾಂಗೋ ದೋಸೆ ಸವಿಯುವ ಭಾಗ್ಯ ನಮ್ಮದಾಗಿದೆ.



Thursday 20 June 2019

ಮಾವಿನಹಣ್ಣಿನ ತೆಳ್ಳವು







ಈ ಬಾರಿ ತೋಟದಲ್ಲಿ ಮಾವಿನಕಾಯಿಗಳು ಇದ್ದರೂ ಸಕಾಲಕ್ಕೆ ಕೊಯ್ಯಲು ಸಾಧ್ಯವಾಗದೆ ಮಿಡಿ ಉಪ್ಪಿನಕಾಯಿ ಹಾಕಲಾಗಲಿಲ್ಲ, ಮಗಳ ಮದುವೆಯ ಭರಾಟೆಯಲ್ಲಿ ನಾವೆಲ್ಲ ಬ್ಯುಸಿ ಆಗಿದ್ದುದೂ ಒಂದು ಕಾರಣ ಅನ್ನಿ. ಒಳ್ಳೆಯ ಸೊನೆ ಮಿಡಿ ಮಾವಿನಕಾಯಿ ಈಗ ಮಳೆಗಾಲ ಬಂದ ಮೇಲೆ ಹಣ್ಣಾಗಿ ಬೀಳಲು ಪ್ರಾರಂಭವಾಗಿದೆ. ಹುಳಿಸಿಹಿ ರುಚಿ, ಪುಟ್ಟ ಪುಟ್ಟ ಹಣ್ಣುಗಳು, ತೊಟ್ಟಿನಲ್ಲಿ ಒಸರುವ ಸೊನೆಯೂ ಸೇರಿ ಮನೆ ತುಂಬ ಹಣ್ಣಿನ ಘಮಲು. " ಸೊನೆ ಹೋಗುವಷ್ಟೂ ತೊಳೆದು ತಿನ್ನಬಹುದು.. " ಗೌರತ್ತೆಯ ಡಿಕ್ಲೇರೇಶನ್ ಬಂದಿತು.

ಈ ಪ್ರಕಾರವಾಗಿ ಮಾವಿನ ಹಣ್ಣುಗಳ ರಸರುಚಿಯ ಯೋಗ.
ದಿನವೂ ಗೊಜ್ಜು ಸಾಸಮೆ ತಿಂದು ತಿಂದೂ, ದೋಸೆ ಮಾಡುವ ಸ್ಪೂರ್ತಿ ಬಂದಿತು.

2 ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ನೆನೆಸಿ, ತೊಳೆದು ಇಡುವುದು.
7 - 8 ಮಾವಿನಹಣ್ಣುಗಳ ರಸ ತೆಗೆದಿರಿಸುವುದು.
ಅರ್ಧ ತೆಂಗಿನಕಾಯಿ ತುರಿದು,
ಎಲ್ಲವನ್ನೂ ನುಣ್ಣಗೆ ಅರೆಯುವುದು.
ರುಚಿಗೆ ತಕ್ಕಷ್ಟು ಉಪ್ಪು ಹಾಕುವುದು.

 ತೆಳ್ಳವು ಹಿಟ್ಟು ಹುಳಿ ಬರುವಂತಿಲ್ಲ, ಕೂಡಲೇ ಎರೆಯಬೇಕು, ಇಲ್ಲವೇ ತಂಪು ಜಾಗದಲ್ಲಿರಿಸುವುದು ಸೂಕ್ತ.
ದೋಸೆಯ ಹಿಟ್ಟು ಹೇಗಿರಬೇಕು?
ನೀರು ನೀರಾಗಿರಬೇಕು.
ನಾವು 2 ಲೋಟ ಅಕ್ಕಿ ಹಾಕಿರೋದ್ರಿಂದ 4 ಲೋಟ ನೀರು ಅವಶ್ಯ, ( ಮಾವಿನ ಹಣ್ಣಿನ ರಸವೂ ಸೇರಿ )

ಯಾವುದೇ ತವಾ ಉಪಯೋಗಿಸಿದರೂ ನೀರುದೋಸೆ ಎರೆಯುವಾಗ ತವಾ ಎಣ್ಣೆಣ್ಣೆಯಾಗಿದ್ದರೆ ದೋಸೆ ಚೆನ್ನಾಗಿ ಎದ್ದು ಬರುವುದು, ಇಲ್ಲದಿದ್ದರೆ ದೋಸೆ ಒಣಕಲಾಗಿ ಸತ್ವಹೀನವಾಗಿರುತ್ತದೆ ಎಂದು ತಿಳಿದಿರಲಿ.

ಬಿಸಿಯೇರಿದ ಕಾವಲಿಯ ಮೇಲೆ ಹಾರಿಸಿ ದೋಸೆ ಎರೆಯಿರಿ. ಅದು ಸಾಧ್ಯವಾಗದಿದ್ದರೆ ಲೋಟದಲ್ಲಿ ವೃತ್ತಾಕಾರವಾಗಿ ಎರೆದು ಕಾವಲಿ ಹಂಚನ್ನು ಅತ್ತಿತ್ತ ಆಡಿಸಿ ಹಿಟ್ಟು ಎಲ್ಲ ಕಡೆಯೂ ಹರಡಿಕೊಳ್ಳುವಂತೆ ಮಾಡಿದರಾಯಿತು. ಮುಚ್ಚಿ ಬೇಯಿಸಿ. ತುಪ್ಪ ಎರೆದು ಸಟ್ಟುಗದಲ್ಲಿ ಏಳಿಸಿ ತಟ್ಟೆಗೆ ಹಾಕಿ ಮಡಚಿ ಇಡುವುದು. ಹಾಗೇನೇ ಒಂದರ ಮೇಲೊಂದು ಮಡಚಿಟ್ಟಲ್ಲಿ ದೋಸೆಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ತಪಲೆಯ ಹಿಟ್ಟು ಒಂದೇ ಪ್ರಕಾರವಾಗಿರಲು ಆಗಾಗ ಸೌಟಿನಲ್ಲಿ ಕೆದಕುತ್ತ ಇರಬೇಕು. ಇಲ್ಲವಾದರೆ ಹಿಟ್ಟೆಲ್ಲವೂ ತಳ ಸೇರಿ ನೀವು ಕೇವಲ ನೀರನ್ನು ಎರೆಯುವಂತಾದೀತು. ಇದು ತೆಳ್ಳವು ಎಂಬ ನೀರುದೋಸೆಯ ಗುಟ್ಟು, ತಿಳಿಯಿತಲ್ಲ.

ಬೆಲ್ಲದ ಪಾಕ, ತೆಂಗಿನತುರಿಗೆ ಬೆಲ್ಲ ಬೆರೆಸಿದಂತಹ ಬೆಲ್ಲಸುಳಿ, ಖಾರದ ಕಾಯಿಚಟ್ನಿ ಹಾಗೂ ಮೊಸರು, ತೆಳ್ಳವು ತಿನ್ನಲು ಇರಬೇಕು.

ಮಾವಿನಹಣ್ಣು ಇಲ್ಲವೆಂದು ಬೇಸರಿಸದಿರಿ. ಕೇವಲ ಅಕ್ಕಿಯೊಂದು ಇದ್ದರೆ ಸಾಕು, ಕಾಯಿತುರಿ ಹಾಕದಿದ್ದರೂ ನಡೆಯುತ್ತದೆ, ತೆಳ್ಳವು ಎರೆಯಲು ತಿಳಿದಿದ್ದರಾಯಿತು.

Monday 10 June 2019

ರೈಸ್ ಕುಕ್ಕರ್ ಅನ್ನ









ವಿದ್ಯುತ್ ಚಾಲಿತ ರೈಸ್ ಕುಕ್ಕರ್ ಹೊಸ ಉಪಕರಣವೇನೂ ಅಲ್ಲ, ಮೈಕ್ರೋವೇವ್ ಅಡುಗೆಯ ಯಂತ್ರದಂತೆ ರೈಸ್ ಕುಕ್ಕರ್ ಕೂಡಾ ನನ್ನ ಬಳಿ ಇದ್ದಿತು. ಗದ್ದೆ ಬೇಸಾಯವೂ ಇದ್ದುದರಿಂದ ಮನೆಯಲ್ಲಿ ಎಲ್ಲರೂ ಕುಚ್ಚುಲಕ್ಕಿ ಪ್ರಿಯರು. ಹಬ್ಬ ಹರಿದಿನಗಳಂದು ಮಾತ್ರ ಮಸೂರಿ ಅಕ್ಕಿಯ ಅನ್ನ ಮಾಡುವ ರೂಢಿ ಇಟ್ಕೊಂಡಿದ್ದೆವು. ಒಂದು ಸೇರಕ್ಕಿ ಬೇಯುವಷ್ಟು ದೊಡ್ಡದಾದ ರೈಸ್ ಕುಕ್ಕರ್ ವಿಶೇಷ ಸಂದರ್ಭಗಳಲ್ಲಿ ಉಪಯೋಗಕ್ಕೆ ಸೀಮಿತವಾಗಿತ್ತು. ಇಂತಹ ರೈಸ್ ಕುಕ್ಕರ್ ನನ್ನ ಅಡುಗೆಯ ಪ್ರಯೋಗಗಳಿಗೆ ಒಳಪಟ್ಟು ಇಡ್ಲಿ, ಅಕ್ಕಿ ಪುಂಡಿ, ಕೊಟ್ಟಿಗೆ, ಸಾಂಬಾರು ಪದಾರ್ಥಗಳ ತಯಾರಿಯಲ್ಲೂ "ಭಲೇ.. ಭಲೇ.. " ಅನ್ನುವಷ್ಟರ ಮಟ್ಟಿಗೆ ಗೆದ್ದು, ಕೊನೆಗೊಂದು ದಿನ ಸೋತು ಸುಣ್ಣವಾಗಿ ಮೂಲೆ ಸೇರಿದ್ದು ಇತಿಹಾಸ. ಇಲೆಕ್ಟ್ರಿಕ್ ಅಸ್ತ್ರಗಳ ಸಂಗತಿ ಇಷ್ಟೇ, ಹೋಗ್ಲಿ ಬಿಡಿ... ಅಟ್ಟಕ್ಕೆ ಹೋಯ್ತು.

ಇತ್ತೀಚೆಗೆ ಏನಾಯ್ತೂ ಅಂದರೆ, ಮಗಳು ಮದುವಣಗಿತ್ತಿಯಾಗಿ ಹೊಸಮನೆಗೆ ಪ್ರವೇಶಿಸುವ ಮೊದಲು, ಸ್ವಯಂಪಾಕ ಮಾಡುತ್ತ ಬೆಂಗಳೂರಿನಲ್ಲಿ ಉದ್ಯೋಗಸ್ಥೆಯಾಗಿದ್ದವಳು, ತನ್ನ ಬಳಿಯಿದ್ದ ಅಡುಗೆ ಉಪಕರಣಗಳನ್ನೆಲ್ಲ ತಂದಿದ್ದಾಳೆ. " ಇದನ್ನೆಲ್ಲ ನೀನೇ ಇಟ್ಕೋ... "

ಬಟ್ಟಲು ಲೋಟಗಳು, ಬಕೇಟು ಪಾಟೆಗಳು ಬಣ್ಣದ ಡಬ್ಬಿಗಳು, ಮಿಕ್ಸೀ ಯಂತ್ರ, ಕುಕ್ಕರು, ಇಲೆಕ್ಟ್ರಿಕ್ ರೈಸ್ ಕುಕ್ಕರ್, ಐರನ್ ಬಾಕ್ಸ್, ಲಟ್ಟಣಿಗೆ ಸೌಟು ಚಮಚಗಳು, ತಪಲೆ ಬಾಣಲೆ ಇತ್ಯಾದಿಯಾಗಿ ಪಾತ್ರೆಪರಡಿಗಳು ಅಡುಗೆ ಮನೆ ತುಂಬ ಹರಡಿಕೊಂಡವು.

" ಇದನ್ನೆಲ್ಲ ಏನೇ ಮಾಡ್ಲೀ.. "
" ಅಟ್ಟದಲ್ಲಿ ಇಡಬೇಡ, ಏನೇನೋ ದೇವರ ಕಾರ್ಯಕ್ರಮ ಇರುತ್ತಾವಲ್ಲ, ಆಗ ಅಡುಗೆ ಭಟ್ಟರಿಗೆ ಕೊಡಲಿಕ್ಕೆ ಬೇಕಾದೀತು. "

ಅವಳು ಅಂದಂತೆ ಮೊನ್ನೆ ಗ್ಯಾಸ್ ಮುಗಿದಿತ್ತು.
" ಯಾಕೇ ಗ್ಯಾಸ್ ಗ್ಯಾಸ್.. ಅಂತ ಹೋರಾಟ ಮಾಡ್ತೀಯ, ರೈಸ್ ಕುಕ್ಕರ್ ಬಂತಲ್ಲ, ಅದರಲ್ಲೇ ಅಡುಗೆ ಮಾಡು.. " ಅನ್ನುವುದೇ ನಮ್ಮೆಜಮಾನ್ರು!

ಮಗಳು ತಂದ ರೈಸ್ ಕುಕ್ಕರ್ ಪುಟ್ಟದು, " ಒಂದು ಪಾವು ಅಕ್ಕಿಯ ಅನ್ನ ಆದೀತು.. "
" ಸಾಕು, ರಾತ್ರಿಗೆ ಪುನಃ ಮಾಡಿದ್ರಾಯ್ತು... " ಟೀವಿ ಮುಂದೆ ಆಸೀನರಾಗಿದ್ದ ಗೌರತ್ತೆಯ ಸಮಾಧಾನದ ಮಾತು ತೇಲಿ ಬಂದಿತು.
" ಹಾಗಂತೀರಾ, ಸರಿ ಬಿಡಿ.. " ರೈಸ್ ಕುಕ್ಕರಲ್ಲೇ ಅನ್ನ ಮಾಡೋಣ.
ಈಗ ಸೋಲಾರ್ ವಾಟರ್ ಹೀಟರ್ ಮನೆಗೆ ಬಂದಿದೆ, ಅದರಿಂದ ಧುಮ್ಮಿಕ್ಕುವ ಕುದಿಯುವ ನೀರನ್ನೇ ರೈಸ್ ಕುಕ್ಕರೊಳಗೆ ಎರೆದು ಪ್ಲಗ್ ಸಿಕ್ಕಿಸಿ ಇಟ್ಟಾಯ್ತು. ತಣ್ಣಗಿನ ನೀರು ಕುದಿಯಲು ರೈಸ್ ಕುಕ್ಕರಿಗೆ ತುಂಬ ಸಮಯ ಬೇಕಾಗುವುದರಿಂದ ಈ ಉಪಾಯ ಅನುಸರಿಸಬೇಕಾಯಿತು, ಇರಲಿ.

" ಎಷ್ಟು ನೀರು ಎರೆದದ್ಜು? ಅಕ್ಕಿಯ ಅಳತೆಯೆಷ್ಟು? "
ಒಂದು ಪಾವು ಅಕ್ಕಿ ಅಂದರೆ 250 ಗ್ರಾಂ ಎಂದು ತಿಳಿಯಿರಿ. ಒಂದು ಲೋಟ ಅಕ್ಕಿ ಬೇಯಲು ಮೂರು ಲೋಟ ನೀರು ಇರಬೇಕು.

ಈಗ ನಾವು ಒಂದು ಲೋಟ ಸೋನಾ ಮಸೂರಿ ಯಾ ಗಂಧಸಾಲೆ ಅಕ್ಕಿ ಅಳೆದು, ತೊಳೆದು, ನೀರು ಬಸಿದು ಕುದಿಯುತ್ತಿರುವ ನೀರಿಗೆ ಹಾಕುವುದು. ಒಮ್ಮೆ ಸೌಟಾಡಿಸಿ, ಮುಚ್ಚಿ. " ಇದರ ಕ್ರಮ ನಾವು ಒಲೆಯಲ್ಲಿ ಅಡುಗೆ ಮಾಡುವ ಹಾಗೇ ಇದೆಯಲ್ಲ.. " ಗೌರತ್ತೆಯ ಅಚ್ಚರಿ.
" ಹೌದು. ನೀರು ಆರಿದ ಕೂಡಲೇ ಅಟೋಮ್ಯಾಟಿಕ್ ಆಫ್ ಆಗ್ತದೆ.. "

ಇಲ್ಲಿ ನಾವು ಗಮನಿಸಬೇಕಾದ್ದು ಏನಪ್ಪಾ ಅಂದರೆ ತನ್ನ ಪಾಡಿಗೆ ಅನ್ನ ಮಾಡಿಕೊಡುತ್ತೆ ಎಂದು ಸುಮ್ಮನಿರಬಾರದು. ನೀರೆಲ್ಲವೂ ಆರಿ, ಅಕ್ಕಿಯಲ್ಲಿರುವ ಸ್ಟಾರ್ಚ್ ಕೂಡಾ ತಳ ಸೇರಿ ಪಾತ್ರೆಯು ತಳ ಹಿಡಿದಂತಾಗಬಾರದು, ನಾವು ಒಣಕಲು ಅನ್ನ ತಿಂದ ಹಾಗೆ ಆಗಕೂಡದು. ಅನ್ನ ಬೆಂದಂತೆ ಸುವಾಸನೆ ಬರಲು ಪ್ರಾರಂಭ, ಈ ಹಂತದಲ್ಲಿ ಒಮ್ಮೆ ಮುಚ್ಚಳ ತೆರೆದು ನೋಡುವ ಅವಶ್ಯಕತೆ ಇದೆ, ನೀರು ಬಹುಪಾಲು ಆರಿ ಅನ್ನ ಬೆಂದಿದೆಯಾಗಿದ್ದರೆ ನಾವೇ ಪ್ಲಗ್ ತೆಗೆದಿರಿಸುವುದು ಸೂಕ್ತ.

" ಹೌದು ಮತ್ತೇ, ಒಲೆಯ ಅಡುಗೆಯಲ್ಲೂ ಅನ್ನ ಚೆನ್ನಾಗಿ ಬೇಯಲು ಬಿಡಲಿಕ್ಕಿಲ್ಲ, ಗಂಜಿ ನೀರು ಬಗ್ಗಿಸಿ, ಪುನಃ ಅನ್ನದ ತಪಲೆಯನ್ನು ಕೆಂಡದ ಬಿಸಿ ಇರುವ ಒಲೆ ಮೇಲೆ ಬೆಚ್ಚಗೆ ಇರಿಸುವುದು, ಅಲ್ಲಿಗೇ ಬೇಯುತ್ತೆ... ಉಣ್ಣುವ ಹೊತ್ತಿಗೆ ಆನ್ನ ಆರಿ ತಂಗಳಾಗಬಾರದು. " ಗೌರತ್ತೆಯ ಅಡಿಟಿಪ್ಪಣಿ ಬಂದಿತು.




Friday 31 May 2019

 ಚಿಕ್ಕು ರಸಾಯನ




ಗಣಪತಿಹವನ, ಶಿವಪೂಜೆ ಇಟ್ಕೊಂಡಿದ್ದ ಪಕ್ಕದ ಮನೆಯ ಊಟಕ್ಕೆ ಹಾಜರಾಗಲೇಬೇಕು. ಪೂಜಾಕೈಂಕರ್ಯದಲ್ಲಿ ಪಾಲ್ಗೊಳ್ಳಲೇ ಬೇಕು, ತೀರ್ಥಪ್ರಸಾದಗಳನ್ನು ಸ್ವೀಕರಿಸಿ, ಸಿಂಗಾರದ ಕುಡಿಯನ್ನು ಮುಡಿಗೇರಿಸಿ, ಭೋಜನದ ಅಟ್ಟಣೆಯಾಗುತ್ತ ಇದ್ದಂತೆ, ಬಡಿಸುವ ಸುಧರಿಕೆಗೆ ಮನೆಯ ತರುಣರು ಬೈರಾಸು ಸೊಂಟಕ್ಕೆ ಕಟ್ಟಿ ಸಿದ್ಧರಾಗುತ್ತಿರಬೇಕಾದರೆ, " ಬಾಳೆ ಎಲೆಯೊಂದು ಖಾಲಿ ಇದೆ, ನೀನು ಕೂತ್ಕೋ ಬಾರೇ... " ಗೌರತ್ತೆಯ ನಿರ್ದೇಶನ.

ಊಟಕ್ಕೆ ಕೂತಿದ್ದಾಯ್ತು. ಬಾಳೆ ಎಲೆಯ ಬಲ ತುದಿಗೆ ಹಲಸಿನ ಹಣ್ಣಿನ ಪಾಯಸ ಬಿದ್ದಿತು, ಈಗ ಹಲಸಿನ ಹಣ್ಣಿನ ಕಾಲ ಅಲ್ವೇ..

ಎರಡು ವಿಧ ಪಲ್ಯಗಳು, ಒಂದು ಪಲ್ಯ ಹಲಸಿನ ಗುಜ್ಜೆಯದು. ಉಳಿದಂತೆ ಸಾರು, ಹಪ್ಪಳ, ಕೊದಿಲ್, ಅವಿಲ್... ಎಲ್ಲ ಮಾಮೂಲಿಯಾಗಿ ಬಡಿಸಲ್ಪಟ್ಟುವು.

ನಂತರ ರಸಾಯನ ಬಂದಿತು, " ಬಾಳೆಹಣ್ಣೇ.. "
" ಅಲ್ಲಪ, ಚಿಕ್ಕೂ ರಸಾಯನ... " ಗೌರತ್ತೆ ಉಸುರಿದರು. ಪ್ರಿಜ್ಜಲ್ಲಿ ಇಟ್ಟಿದ್ದಕ್ಕೆ ತಂಪು ತಂಪಾಗಿ ಸವಿಯಲು ಹಿತವಾಗಿ ಚಿಕ್ಕು ರಸಾಯನ ಬೇಸಿಗೆಯ ಧಗೆಯನ್ನೂ ಹೋಗಲಾಡಿಸಿ ಬಿಟ್ಟಿತು.

ಚಿಕ್ಕು ರಸಾಯನ ಮಾಡಿದ್ದು ಹೇಗೆ?
ಬೀಜ ಸಿಪ್ಪೆ ತೆಗೆದ್ಬಿಟ್ಟು, ಹಿತವಾಗುವಷ್ಟು ಸಕ್ಕರೆ ಹಾಕಿರಿಸಿ, ತೆಂಗಿನಕಾಯಯಿ ಹಾಲು ಎರೆಯುವಲ್ಲಿಗೆ ಚಿಕ್ಕೂ ರಸಾಯನ ಸಿದ್ಧ.

ಮನೆ ಹಿತ್ತಲಲ್ಲೇ ಚಿಕ್ಕು ಹಣ್ಣಿನ ಮರಗಳಿರುವಾಗ ಹಣ್ಣುಗಳಲ್ಲಿ ಲೆಕ್ಕಾಚಾರವೇನೂ ಇಲ್ಲ. ಜಾಸ್ತಿ ಹಾಕಿದಷ್ಟೂ ಸಕ್ಕರೆಯ ಪ್ರಮಾಣ ಕಮ್ಮಿ ಮಾಡಬಹುದಾಗಿದೆ.
ಹಣ್ಣು ಮೃದುವಾಗಿರುವುದರಿಂದ ಮಿಕ್ಸಿಯಲ್ಲಿ ರುಬ್ಬುವ ಅಗತ್ಯವೂ ಇಲ್ಲ. ಕೈಯಲ್ಲೇ ತುಸು ಗಿವುಚಿದರೂ ಸಾಕು.

ತೆಂಗಿನ ಹಾಲು ಮಾಡಿಕೊಳ್ಳಲು ಉದಾಸೀನವೇ, ಪ್ಯಾಕೆಟ್ ನಂದಿನಿ ಹಾಲು ಎರೆದು, ಮಿಲ್ಕ್ ಶೇಕ್ ಎಂಬ ಹೆಸರಿಟ್ಟು ಕುಡಿಯಿರಿ.

ಚಿಕ್ಕು ಐಸ್ ಕ್ರೀಂ, ಚಿಕ್ಕು ಹಲ್ವಾ ಇನ್ನೊಮ್ಮೆ ಮಾಡೋಣ.

ಸಪೋಟಾ. ಸಪೋಡಿಲ್ಲಾ ಪ್ಲಮ್, ಚಿಕ್ಕು, ಎನ್ನಲಾಗುವ ಈ ವೃಕ್ಷ ಸಪೋಟೇಸೀ ಸಸ್ಯವರ್ಗಕ್ಕೆ ಸೇರಿದ್ದು. ಬಾರತದೆಲ್ಲೆಡೆ ಹಬ್ಬಿ ಬೆಳೆಯಲಾಗುವ ಚಿಕ್ಕು ವಿದೇಶೀಯರ ಕೊಡುಗೆ. ದಕ್ಷಿಣ ಅಮೇರಿಕಾ ಇದರ ಮೂಲ ನೆಲೆ.

ಬೇಸಿಗೆಯ ಉರಿಯನ್ನು ತಡೆಯುವ ಶಕ್ತಿ ಈ ಹಣ್ಣಿನದು, ಖನಿಜಗಳು ಹೇರಳ, ವೃದ್ಧರಿಗೂ, ಬಸುರಿ ಬಾಣಂತಿಯರಿಗೂ ಆದರ್ಶಪ್ರಾಯ, ಎದೆಹಾಲುಣ್ಣಿಸುವ ತಾಯಂದಿರಲ್ಲಿ ಹಾಲು ಹೆಚ್ಚಳ.
ಸಿಹಿ ರುಚಿ ಹಾಗೂ ಆಹ್ಲಾದಕರ ಪರಿಮಳದ ಚಿಕ್ಕು ಹಣ್ಣನ್ನು ಬಾಯಿಗೆಸೆದೊಡನೆ ಉಲ್ಲಾಸದ ಆಗಮನ, ಖಿನ್ನತೆಯ ನಿರ್ಗಮನ.
ಮೂತ್ರ ವಿಸರ್ಜಿಲು ಕಷ್ಟವೇ, ಚಿಕ್ಕು ತಿನ್ನಿ.
ಚರ್ಮದ ಕಾಂತಿಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗದಿರಿ, ಚಿಕ್ಕು ಹಣ್ಣು ತಿನ್ನಿ.
ಚಿಕ್ಕು ಎಲೆಗಳ ಕಷಾಯ, ಬಾಯಿಹುಣ್ಣು ಮಾಯ.
ಚಿಕ್ಕು ಗುಣವಿಶೇಷಗಳನ್ನು ಬರೆದಷ್ಟೂ ಮುಗಿಯದು, ತಿಳುವಳಿಕೆಗೆ ಬಂದಷ್ಟನ್ನು ಬರೆದಿದ್ದೇನೆ.

ವರ್ಷಕ್ಕೆರಡು ಬಾರಿ ಚಿಕ್ಕು ಹಣ್ಣು ಕೊಯ್ಯಬಹುದಾಗಿದೆ, ಕೃಷಿಭೂಮಿಯಲ್ಲಿ ಒಳ್ಳೆಯ ಆದಾಯ ತರುವ ಬೆಳೆ ಚಿಕ್ಕು.


Sunday 14 April 2019

ಮೈತ್ರಿಯ ಮಿಠಾಯಿ




ಬೆಂಗಳೂರಿನಿಂದ ಮಕ್ಕಳ ಸೈನ್ಯ ಬಂದಿತು. ಮನೆಯಲ್ಲಿ ಜರಗಲಿರುವ ಶುಭಕಾರ್ಯಗಳ ಪೂರ್ವಭಾವಿ ಸಿದ್ಧತೆಗಾಗಿ ಮಗ, ಸೊಸೆ, ಮಗಳ ಆಗಮನ. ಬಂದ ನಿಮಿತ್ತವಾಗಿ ಮಂಗಳೂರಿನಲ್ಲಿ ಶಾಪಿಂಗ್, ಸಿನೆಮಾ, ಐಸ್ ಕ್ರೀಂ ತಿಂದಿದ್ದೂ ಆಯ್ತು.

" ನಾಳೆ ಸಂಜೆಯ ಬಸ್ಸಿನಲ್ಲಿ ಪುನಃ ಬೆಂಗಳೂರಿಗೆ... " ಅಂದಳು ಮಗಳು.
" ಎಷ್ಟು ಬೇಗ ದಿನ ಹೋಯ್ತಲ್ಲ! " ನನ್ನದು ಅಚ್ಚರಿ.
" ಏನಾದ್ರೂ ಸ್ವೀಟ್ ಮಾಡೋಣಾ.. " ಮೈತ್ರಿ ರಾಗ ಎಳೆದಳು.
" ಬೇಗನೆ ಆಗುವಂತಹದು ಯಾವುದೂ, ಪಾಯಸ ಆದೀತೇ.. "
" ಪಾಯಸ ಬೇಡ, ಕ್ಷೀರ ಆದೀತು.."
" ಅದಕ್ಕೆ ತುಪ್ಪ ಸುರಿಯಬೇಕು, ನಿನ್ನ ಮದುವೆಗೆ ತುಪ್ಪದ ಸ್ಟಾಕ್ ಮಾಡಿ ಇಡೋಣಾ ಅಂತಿದ್ರೆ... "
"ಬರ್ಫಿ, ಮೈಸೂರುಪಾಕು? "
" ಮೈಸೂರ್ ಪಾಕ್ ತುಪ್ಪದ ತಿಂಡಿ.. ಅದೂ ಬೇಡ, ಬರ್ಫಿ ತೆಂಗಿನಕಾಯೀದು ಚೆನ್ನಾಗಿರುತ್ತೆ, ಹಸಿ ತೆಂಗಿನಕಾಯಿ ಇದೆ, ಇದಕ್ಕೆ ತುಪ್ಪ ಬೇಡ್ವೇ ಬೇಡ.. "
"ಹ್ಞ.. ಅದಾದೀತು, ನಂಗೆ ತುಂಬಾ ಇಷ್ಟ ಕೊಬ್ಬರಿ ಮಿಠಾಯಿ... " ಅಂದಳು ಬೆಂಗಳೂರ ಬೆಡಗಿ.

ಮೈತ್ರಿಯ ಅಪೇಕ್ಷೆಯಂತೆ ಕೊಬ್ಬರಿ ಮಿಠಾಯಿ ಮಾಡೋಣ. ನಮ್ಮೂರ ಭಾಷೆಯಲ್ಲಿ ಇದು ತೆಂಗಿನಕಾಯಿ ಬರ್ಫಿ, ತಿಳಿಯಿತಲ್ಲ.
 ಒಂದು ಹಸಿ ತೆಂಗಿನಕಾಯಿ ತುರಿದಾಗ ಒಂದೂವರೆ ಲೋಟ ಕಾಯಿತುರಿ ದೊರೆಯಿತು.
ಕಾಯಿತುರಿಯಲ್ಲಿ ದೊಡ್ಡ ಹೋಳುಗಳಿರಬಾರದು, ಮಿಕ್ಸಿಯಲ್ಲಿ ನೀರು ಸೋಕಿಸದೆ ರುಬ್ಬಿಕೊಳ್ಳೋಣ, ಪುಡಿ ಆದರೆ ಸಾಕು.
ಸಕ್ಕರೆಯೂ ಒಂದೂವರೆ ಲೋಟ ಅಳೆಯಿರಿ.
ಅರ್ಧ ಲೋಟ ಹಾಲು.
ಪುಡಿ ಮಾಡಿದ ಏಲಕ್ಕಿ, ಸುವಾಸನೆಗೆ ತಕ್ಕಷ್ಟು.
ಕಾಯಿತುರಿ ಪುಡಿ ಮಾಡುವಾಗಲೇ ಏಲಕ್ಕಿ ಹಾಕಿಕೊಳ್ಳುವುದು ಜಾಣತನ.

ದಪ್ಪ ತಳದ ನಾನ್ ಸ್ಟಿಕ್ ಬಾಣಲೆಗೆ ಸಕ್ಕರೆ ಸುರಿದು, ಹಾಲನ್ನು ಎರೆದು ಸಕ್ಕರೆ ಕರಗಿಸಿ, ಜೊತೆಗೆ ತೆಂಗಿನತುರಿಯನ್ನೂ ಹಾಕಿ, ಮರದ ಸಟ್ಟುಗದಲ್ಲಿ ಕೈಯಾಡಿಸುತ್ತಾ ಇರಬೇಕು.

ತೆಂಗಿನ ತುರಿ, ಹಾಲು, ಸಕ್ಕರೆ ಬೆರೆತು, ಒಂದೇ ಘನಪಾಕವಾಗುವ ಹಂತದಲ್ಲಿ , ತಳ ಬಿಟ್ಟು ಬಂದಾಗ ಕೆಳಗಿಳಿಸಿ, ಇನ್ನೊಂದು ನಾನ್ ಸ್ಟಿಕ್ ತಟ್ಟೆಗೆ ವರ್ಗಾಯಿಸಿ.
ತುಸು ಬಿಸಿ ಆರಲಿ.

ಚೂರಿಯಲ್ಲಿ ಗೆರೆ ಎಳೆಯುತ್ತಿರಬೇಕಾದರೆ ಮೈತ್ರಿ ಒಳ ಬಂದಳು.
" ಆಯಿತೇ ಬರ್ಫೀ.. " ಬಾಯಿಗೆ ಹಾಕ್ಕೊಂಡಿದ್ದೂ ಆಯ್ತು, " ಇದನ್ನು ಫ್ರಿಜ್ ಒಳಗಿಟ್ರೆ ಬೇಗ ಬಿಸಿ ಆರಿ ಗಟ್ಟಿಯಾಗುತ್ತೆ.. "
" ಸರಿ, ಹಾಗೇ ಮಾಡು.. "
ಜಾಡಿಯಲ್ಲಿ ತುಂಬಿದ ಕೊಬ್ಬರಿ ಮಿಠಾಯಿ ಫ್ರಿಜ್ ಒಳಗೆ ಹೋಯ್ತು.

ಇನ್ನೇನು ಅರ್ಧ ಗಂಟೆಯಲ್ಲಿ ಬೆಂಗಳೂರಿಗೆ ಹೊರಡುವ ತುರಾತುರಿ ಮಕ್ಕಳದು.
ಸ್ನಾನ ಆಗಬೇಕು, ಅಲ್ಲಿ ಇಲ್ಲಿ ಎಸೆದ ಬಟ್ಟೆಬರೆಗಳನ್ನು ಜೋಡಿಸಿ, ಬ್ಯಾಗಿನೊಳಗಿಡಬೇಕು. ಬೆಂಳೂರು ಬಸ್ಸು ಹತ್ತಲು ಸಂಜೆ ಏಳಕ್ಕೇ ನಮ್ಮ ಹಳ್ಳಿಮನೆಯಿಂದ ಹೊರಟರೆ ರಾತ್ರಿ ಒಂಭತ್ತು ಗಂಟೆಗೆ ಮಂಗಳೂರು ಬಸ್ಸು ಹತ್ತಬಹುದು.

" ಊಟಕ್ಕೇನು ಮಾಡ್ತೀರಾ? "
" ಹೋಟಲ್ ಉಂಟಲ್ಲ.. "

 "ಟಾಟಾ, ಬೈಬೈ ಜೋಪಾನಾ.. "ಅಂದ್ಬಿಟ್ಟು,
ಸ್ವಲ್ಪ ಹೊತ್ತು ಫೇಸ್ ಬುಕ್ ನೋಡ್ಬಿಟ್ಟು,
ಅಡುಗೆಮನೆಗೆ ಹೋಗಿ ರಾತ್ರಿಯೂಟಕ್ಕಾಗಿ ಅನ್ನ ಬಿಸಿ ಮಾಡಿಟ್ಟು,
ಕೊಬ್ಬರಿ ಮಿಠಾಯಿ ಮಾಡಿದಂತಹ ಬಾಣಲೆ, ತಟ್ಟೆಗಳನ್ನು ಸಿಂಕಿನಲ್ಲಿ ಹಾಕಿಟ್ಟು,
ಊಟದ ಟೇಬಲ್ ಮೇಲೆ ಬಟ್ಟಲು ನೀರು ಇಟ್ಟು,
ಫ್ರಿಜ್ ಒಳಗಿಂದ ಮೊಸರು ಹೊರ ತೆಗೆಯಲು,
ಕಾಣಬೇಕೇ ಕೊಬ್ಬರಿ ಮಿಠಾಯಿ!


Friday 15 March 2019

ಗೌರತ್ತೆಯ ಉಪವಾಸ




“ ಇವತ್ತು ಶಿವರಾತ್ರಿ ಅಲ್ವಾ, ಭಜನಾಮಂದಿರದಲ್ಲಿ ರಾತ್ರಿ ಬೆಳಗಾಗೂ ತನಕ ಭಜನೆ ಉಂಟಂತೆ, ನಾನು ಹಾಗೇ ವಾಕಿಂಗ್ ಹೋಗ್ಬಿಟ್ಟು ಭಜನೆ ಕೇಳ್ಬಿಟ್ಟು ಬರ್ತೇನೆ. " ಎಂದರು ಗೌರತ್ತೆ.

" ಸರಿ, ಆರಾಮವಾಗಿ ಹೋಗಿ.. " ಜಪಸರ ಆಡಿಸುತ್ತ ಸಹಸ್ರನಾಮಾವಳಿ ಲೆಕ್ಕ ಮಾಡುತ್ತ ಇರುವ ಗೌರತ್ತೆ ಹೊರಟಿದ್ದು ನನಗೂ ಸಂತಸ.

ದೂರವೇನಿಲ್ಲ, ಭಜನೆ ಮನೆವರೆಗೂ ಕೇಳಿಸುತ್ತಿದೆ, ಆದ್ರೂ ಅಲ್ಲಿ ಕುಳಿತು ಹತ್ತೂ ಮಂದಿಯೊಂದಿಗೆ ಪಟ್ಟಾಂಗ ಹೊಡೆದು ಆಸರಿಗೆ ಕುಡಿದು ಬರುವ ಖುಷಿಯೇ ಬೇರೆ, ನಾನೂ ಹೊರಟೆ.

ಅಲಂಕೃತ ಗಣೇಶ, ಬೆಳಗುತ್ತಿರುವ ದೀಪ, ಹೂವು ಹಣ್ಣುಕಾಯಿ, ಊದುಬತ್ತಿ ಕರ್ಪೂರಗಳ ಸುಗಂಧ. ಭಜನೆಯೆಂದರೆ ಹಾರ್ಮೋನಿಯಂ, ಖಂಜಿರ, ತಬಲಾ ಮೃದಂಗ ವಾದ್ಯಗಳೂ, ತಾಳ ತಂಬೂರಿಗಳೂ, ಮೈಕ್ ಸೆಟ್ಚೂ, ಕೊರತೆಯಿಲ್ಲದಷ್ಟು ಗಾಯಕರೂ ತುಂಬಿದ ಸಭೆ.

ಚಕ್ಕಮಕ್ಕ ಕುಳಿತುಕೊಳ್ಳಲು ಸಾಧ್ಯವಾಗದವರಿಗೆ ಪ್ಲಾಸ್ಟಿಕ್ ಕುರ್ಚಿಗಳೂ ಸಾಲಾಗಿ ಇತ್ತೂ ಅನ್ನಿ, ನಾವು ಭಕ್ತಿಭಾವದಿಂದ ಚಾಪೆಯಲ್ಲಿ ಆಸೀನರಾದೆವು. ಬಂದವರಿಗೆ ಫಲಾಹಾರದ ವ್ಯವಸ್ಥೆಯೂ ಇದೆಯೆಂದು ತಿಳಿಯಿತು.





ಭಜನೆಹಾಡುಗಳ ನಾದಕ್ಕೆ ದನಿಗೂಡಿಸುತ್ತ ಈ ಗಾಯನ ಸಾಹಿತ್ಯಗಳ ರಚಯಿತರು ಯಾರಾಗಿಬಹುದೆಂಬ ಗಾಢ ಚಿಂತನೆಯೂ ಕೂಡಿ ಸಮಯ ಕಳೆದಿದ್ದು ತಿಳಿಯದಂತಿರಲು, " ಅಲ್ಲಿ ಬಾಳೆ ಎಲೆ ಹಾಕ್ತಿದಾರೆ, ಗೌರತ್ತೆ ಎದ್ದು ಆ ಕಡೆ ಹೋದರು. ನಾನು ಹಿಂಬಾಲಕಿ, ಬಾಳೆ ಎಲೆ ಮುಂದೆ ಕುಳಿತುಕೊಳ್ಳುವ ಯೋಗ.

ಮೊದಲಾಗಿ ಇಡ್ಲಿ, ಫಳಾರ ಅಲ್ವೇ, ರವಾ ಇಡ್ಲಿ, ಚಟ್ನಿ... ತೊಂದ್ರೆ ಇಲ್ಲ, ತಿನ್ನೋಣ.

ವಡಾ ಬಂದಿತು, ಅದೂ ಉದ್ದಿನ ವಡೇ.. " ವಾಹ್! ಬೇಕಾದಷ್ಟಾಯ್ತು. " ಕೂರ್ಮಾ, ತರಕಾರಿಗಳ ಕೂಟು ಬಾಳೆ ತುಂಬಿತು. ಇನ್ನೇನು ಚೆನ್ನಾಗಿ ಹೊಡೆಯೋದೇ ಬಾಕಿ.

" ಇಡ್ಲಿ ಬೇಕೇ, ವಡೆ ಬೇಕೇ.. " ಎನ್ನುತ್ತ ಸುಧರಿಕೆ ಮಾಡುವವರಿರುವಾಗ, " ಸಾಕೋ ಇನ್ನೂ ಬೇಕೋ.. " ಕೇಳುವವರಿರುವಾಗ ನಾವು ಇನ್ನಷ್ಟು ಬಾಳೆಗೆ ಹಾಕಿಸ್ಕೊಂಡು ತಿಂದೆವು.

ಹೆಸ್ರು ಪಾಯಸ ಬಂದಿತು, " ಶಿವರಾತ್ರಿ ಪ್ರಯುಕ್ತ ಪಾಯಸ ತಿನ್ನಬೇಡವೇ.. "
ಪಾಯಸದೊಂದಿಗೆ ಬಾಳೆಹಣ್ಣು ರಸಾಯನ ಸೇರಿಕೊಂಡಿತು.
ಸಿಹಿಭಕ್ಷ್ಯವೆಂದು ಜಿಲೇಬಿಯೂ ಉದರದೊಳಗಿಳಿಯಿತು.

ಮೊಸರು, ಉಪ್ಪಿನಕಾಯಿ ಇಲ್ಲದೆ ಆದೀತೇ, ರಸಬಾಳೆಹಣ್ಣು ತಿನ್ನುವಲ್ಲಿಗೆ ಫಲಾಹಾರದ ಸಾರ್ಥಕ್ಯ.

ಬಾದಾಮಿ ಹಾಲು ಕುಡಿದು ಏಳುವಲ್ಲಿಗೆ ಶಿವರಾತ್ರಿಯ ಫಳಾರ ಸಂಪನ್ನಗೊಂಡಿತು.


Saturday 2 March 2019

ಕೋಕನಟ್ ಹಲ್ವಾ





“ ತೆಂಗಿನಕಾಯೀ ಹಲ್ವ ಆಗುತ್ತ? ಲಡ್ಡೂ ಬರ್ಫೀ ಗೊತ್ತು, ಕಾಯಿ ಹೋಳಿಗೆ ತಿಂದೂ ಗೊತ್ತು… “
“ ಇದು ಅಡುಗೆಮನೆಯಲ್ಲಿ ಕುಟುಕುಟು ಮಾಡ್ತಿರಬೇಕಾದ್ರೆ ಅಗಿ ಹೋಯ್ತು, ನಂಗೇ ಗೊತ್ತಿರಲಿಲ್ಲ ಕಣ್ರೀ, ಈ ಸವಿರುಚಿಗೆ ಏನೋ ಒಂದು ನಾಮಕರಣ ಆಗಬೇಕಲ್ಲ. “

ಮುಂಜಾನೆ ಚಪಾತಿ, ಅದಕ್ಕೊಂದು ಕೂಟು ಆಗಬೇಕು. ಬಾಳೆಹಣ್ಣು ಕಾಯಿಸಿದ್ದು ಇದ್ದರೆ ನಾನು ಕೂಟು ಕರಿ್ರಗಳ ಉಸಾಬರಿಗೇ ಹೋಗಲಿಕ್ಕಿಲ್ಲ, ತುಪ್ಪ, ಬಾಳೆಹಣ್ಣು ಸಕ್ಕರೆಗಳ ಮಿಶ್ರಣದ ಕೂಟು ನಮಗಿಬ್ಬರಿಗೂ ಇಷ್ಟ. ಇವತ್ತು ಬಾಳೆಹಣ್ಣು ಕಾಯಿಸಿಟ್ಟಿದ್ದು ಇರಲಿಲ್ಲ, ಬಾಳೆ ಹಣ್ನು ಇದೆ, ದಿಢೀರ್ ಎಂದು ಸಿದ್ಧಪಡಿಸಬೇಕಾಗಿದೆ.

ನಾಲ್ಕು ಬಾಳೆಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ,
ಒಂದು ಹಿಡಿ ಕಾಯಿತುರಿ ಸಿದ್ದಪಡಿಸಿ,
ಒಂದು ಸೌಟು ಸಕ್ಕರೆ ತೆಗೆದಿರಿಸಿ,
ಎರಡು ಚಮಚ ತುಪ್ಪ ಬಾಣಲೆಗೆರೆದು,
ಬಾಳೆಹಣ್ಣುಗಳನ್ನು ತುಪ್ಪದಲ್ಲಿ ಹುರಿದು,
ಕಾಯಿತುರಿಯನ್ನೂ ಜೊತೆಗೆ ಹುರಿದು
ಸಕ್ಕರೆಯೂ ಈ ಘನಪಾಕಕ್ಕೆ ಬಿದ್ದು,
ಸಟ್ಟುಗದಲ್ಲಿ ರಪರಪನೆ ಬಾರಿಸಿದಾಗ,
ಬಾಳೆಹಣ್ಣಿನ ಕೂಟು ಸಿದ್ಧವಾಯಿತು
ಎಳ್ಳು ಹುರಿದು, ಗುದ್ದಿ ಹಾಕಿದಾಗ
ಪರಿಮಳವೂ ಬಂದಿತು.

ಚಪಾತಿಯೊಂದಿಗೆ ಈ ಹೊಸ ತಿನಿಸನ್ನು ಸವಿಯುತ್ತಿದ್ದಾಗ ಬಾಳೆಗೊನೆಯಲ್ಲಿ ಇನ್ನೂ ಇರುವ ಹಣ್ಣುಗಳಿಗೊಂದು ಗತಿಗಾಣಿಸಲು ನಿರ್ಧರಿಸಿದ್ದಾಯಿತು.

ನಮ್ಮ ಅಳತೆ ಪಟ್ಟಿ ಹೀಗಿರಲಿ.
2 ಲೋಟ ಹೆಚ್ಚಿಟ್ಟ ಬಾಳೆಹಣ್ಣು
ಒಂದು ಲೋಟ ಕಾಯಿತುರಿ, ಮಿಕ್ಸಿಯಲ್ಲಿ ನೀರು ಹಾಕದೆ ಹುಡಿ ಮಾಡಿಕೊಳ್ಳಿ
ಒಂದು ಲೋಟ ಸಕ್ಕರೆ
4 ಚಮಚ ತುಪ್ಪ
2 ಏಲಕ್ಕಿ ಹಾಗೂ ಗೋಡಂಬಿ ಚೂರುಗಳು

ಬಾಣಲೆಗೆ ತುಪ್ಪ ಎರೆದು ಬಾಳೆಹಣ್ಣುಗಳನ್ನು ಹುರಿಯಿರಿ.
ಸುವಾಸನೆ ಬರುತ್ಕಿದ್ದಂತೆ ತೆಂಗಿನ ತುರಿ ಹಾಕಿ ಸೌಟಾಡಿಸಿ, ತೆಂಗಿನತುರಿ ಹಾಗೂ ಬಾಳೆಹಣ್ಣುಗಳ ಮಿಶ್ರಣ ಹೊಂದಿಕೊಂಡು ಬಂದಾಗ ಸಕ್ಕರೆ ಹಾಕಿ ಸೌಟಾಡಿಸಿ, ನಮ್ಮ ಅಳತೆ ಪ್ರಮಾಣ ಪುಟ್ಟದು, ಬೇಗನೇ ತಳ ಬಿಟ್ಟು ಬರುವಾಗ, ಗೋಡಂಬಿ ಹುರಿದು, ಏಲಕ್ಕಿ ಗುದ್ದಿ ಹಾಕಿರಿ. ಇಂತಹ ಸಿಹಿತಿನಿಸುಗಳನ್ನು ಮಾಡುತ್ತಿರುವಾಗ ನಮ್ಮ ಗಮನ ಬೇರೆಡೆ ಹೋಗದಂತೆ ಜಾಗ್ರತೆ ವಹಿಸುವ ಅಗತ್ಯವೂ ಇದೆ. ಬಾಣಲೆಯೂ ದಪ್ಪ ತಳವುಳ್ಳದ್ದೂ, ಒಲೆಯ ಉರಿಯೂ ಒಂದು ಹದದಲ್ಲಿ ಇರಬೇಕು.



Friday 22 February 2019

ಮೊಸರನ್ನ



ತೋಟದ ತೆಂಗಿನಕಾಯಿಗಳನ್ನು ತೆಗೆಸಿಯಾಗಿದೆ, " ಅಕ್ಕ, ನೀರಾಡುವ ಕಾಯೀಲಿ ಬನ್ನಂಗಾಯಿಯೂ ಉಂಟಲ್ಲ..." ಅಂದ ಚೆನ್ನಪ್ಪ.

" ಹೌದ, ಒಣಗಿದ ಕಾಯಿ ಅಟ್ಟಕ್ಕೆ ಹಾಕು, ಬನ್ನಂಗಾಯಿ ಪ್ರತ್ಯೇಕ ತೆಗೆದಿಡು.. ದೋಸೆಗೂ, ಅವಲಕ್ಕಿ ಬೆರೆಸಿ ತಿನ್ನಲಿಕ್ಕೂ, ಮೇಲಾರಕ್ಕೂ (ಮಜ್ಜಿಗೆಹುಳಿ ) ಆದೀತು. "

" ಪಾಯಸಕ್ಕೂ ಆದೀತು. " ಎಂದರು ಗೌರತ್ತೆ.
" ಹೌದು, ದಿನಾ ಪಾಯಸ ಮಾಡೋರು ಯಾರೂ..." ನನ್ನ ರನ್ನಿಂಗ್ ಕಮೆಂಟ್ರಿ ಮುಂದುವರಿಯುತ್ತಿದ್ದಂತೆ ಎರಡು ಬನ್ನಂಗಾಯಿಗಳನ್ನು ಸುಲಿದು ಇಟ್ಟ ಚೆನ್ನಪ್ಪ.

" ಹ್ಞೂ.. ನಾಳೆ ಬನ್ನಂಗಾಯಿ ದೋಸೆ..." ಅನ್ನುತ್ತ ಎರಡು ಲೋಟ ಬೆಳ್ತಿಗೆ ಅಕ್ಕಿ ತೊಳೆದು ನೀರೆರೆದು ಇಟ್ಟಾಯ್ತು.

ಸಂಜೆಯಾಗುತ್ತಲೂ ಬನ್ನಂಗಾಯಿ ಒಡೆದು, ತುರಿದು, ತೊಳೆದಿರಿಸಿದ ಅಕ್ಕಿಯನ್ನು ಮಿಕ್ಸಿಯ ಜಾರೊಳಗೆ ತುಂಬಿಸಿ, ಬನ್ನಂಗಾಯಿ ತುರಿಯನ್ನೂ, ನೀರನ್ನೂ ಎರೆದು "ಟೊರ್ ಟೊರ್... ಅನ್ನಿಸೋಣ ಎಂದಾಗ ಜಾರು ತಿರುಗಲೊಲ್ಲದು, ಒಳಗೆರೆದ ನೀರು ಹೊರ ಹರಿಯಿತು...

" ಥತ್, ಇದೊಂದು ಗೋಳು... " ಜಾರು ಕೆಟ್ಟಿದೆಯೆಂದು ದೂರು ಮನೆಯ ಚಾವಡಿಕಟ್ಟೆಗೆ ಬಂದಿತು.

" ಹಾಳಾದ್ರೆ ತೆಗೆದಿಡು.. ನಾಳೆ ರಿಪೇರಿ ಮಾಡ್ಸೋಣ... " ತಣ್ಣಗಿನ ಉತ್ತರ ಬಂದಿತು.

ಅಕ್ಕಿಯ ಮೇಲಿದ್ದ ಕಾಯಿತುರಿಯನ್ನು ತೆಗೆದಿರಿಸಿ,
ಅಕ್ಕಿಯನ್ನೂ ಬಸಿದು ತೂತಿನ ತಟ್ಟೆಯಲ್ಲಿ ಬಿಡಿಸಿ ಹಾಕಿದ್ದಾಯ್ತು.

" ನಾಳೆಗೇನು ತಿಂಡಿ ಮಾಡ್ತೀಯ? " ಕೇಳಿದ್ದು ಜಪಸರ ಹಿಡಿದು ರಾಮಜಪ ಮಾಡ್ತಿದ್ದ ಗೌರತ್ತೆ.
" ಈ ಅಕ್ಕಿಯಿಂದಾನೇ ಏನೋ ಒಂದು ಮಾಡಿದ್ರಾಯ್ತು ಬಿಡಿ. "
" ಉಪ್ಪಿಟ್ಟು, ಚಿತ್ರಾನ್ನ... " ಹೀಗೆಲ್ಲ ಚಿಂತನೆಗಳೊಂದಿಗೆ ರಾತ್ರಿ ಕಳೆದು ಬೆಳಗಾಯ್ತು.

ದೋಸೆ ಅಕ್ಕಿಯು ಸುಮಾರಾಗಿ ಒಣಗಿದೆ. ಎರಡು ಲೋಟ ಇತ್ತಲ್ಲ, ಐದು ಲೋಟ ನೀರೆರೆದು ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ಎರಡು ಸೀಟಿ ಕೂಗಿಸಿ,
ಎರಡು ಘನಗಾತ್ರದ ನೀರುಳ್ಳಿ ಚಿಕ್ಕದಾಗಿ ಹೆಚ್ಚಿ,
ನಾಲ್ಕು ಹಸಿಮೆಣಸು ಸಿಗಿದು,
ಕರಿಬೇವು ತೋಟದಿಂದ ತಂದು,
ಫ್ರಿಜ್ಜಿನಲ್ಲಿದ್ದ ಬನ್ನಂಗಾಯಿ ತುರಿ ಹೊರ ಬಂದು,
ಅಡುಗೆಯ ಸಿದ್ಧತೆಗಾಗಿ ಇಷ್ಟೆಲ್ಲ ಮಾಡುತ್ತಿರಬೇಕಾದರೆ ಅನ್ನ ಬೆಂದಿದೆ.

ಬಾಣಲೆಗೆ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ, ತೆಂಗಿನೆಣ್ಣೆ, ಸಾಸಿವೆ, ಕಡ್ಲೇಬೇಳೆ, ಒಣಮೆಣಸಿನ ಚೂರುಗಳು...
ಚಟಪಟನೆ ಸಾಸಿವೆ ಸಿಡಿದಾಗ ಕರಿಬೇವು, ನೀರುಳ್ಳಿ, ಹಸಿಮೆಣಸು ಬೀಳಿಸಿ,
ತಟಪಟನೆ ಸೌಟಾಡಿಸಿ, ಬನ್ನಂಗಾಯಿ ತುರಿ ಹಾಕಿ, ಒಂದು ಸೌಟು ಸಕ್ಕರೆ, ಈಗಾಗಲೇ ಅನ್ನಕ್ಕೆ ಉಪ್ಪು ಬಿದ್ದಿದೆ, ನೋಡಿಕೊಂಡು ಬೇಕಿದ್ದರೆ ಮಾತ್ರ ಉಪ್ಪು ಹಾಕುವುದು.
ಸಾಕಷ್ಟು ಅನ್ನ ಸುರಿದು, ಚೆನ್ನಾಗಿ ಬೆರೆಸುವಲ್ಲಿಗೆ ಒಗ್ಗರಣೆ ಅನ್ನ ಸಿದ್ಧವಾಗಿದೆ.

ಬಾಳೆಹಣ್ಣು ಕೂಡಿಕೊಂಡು ಮುಂಜಾನೆಯ ರಸಗವಳ ತಿನ್ನೋಣ.

ಹತ್ತು ಗಂಟೆಯ ಚಹಾ ಸಮಯ, ಒಗ್ಗರಣೆ ಅನ್ನ ತಣಿದಿದೆ. ನಾಲ್ಕು ಸೌಟು ದಪ್ಪ ಮೊಸರು ಹಾಕಿ ಕಲಸಿದಾಗ ಮೊಸರನ್ನವೆಂಬ ತಿನಿಸು ಎದ್ದು ಬಂದಿತು. ಬೇಸಿಗೆಯ ಬೇಗೆಗೆ ಮೊಸರನ್ನವೇ ಹಿತವೆಂದರು ಗೌರತ್ತೆ.