Pages

Ads 468x60px

Friday 30 March 2018

ದಾಸವಾಳದ ಸಾರು






ಬೇಲಿಯುದ್ದಕ್ಕೂ ಅರಳಿ ನಿಂತ ದಾಸವಾಳದ ಹೂವುಗಳು, ಹೂವುಗಳನ್ನು ಕಿತ್ತು ಅಡುಗೆಮನೆಗೆ ತಂದಾಯ್ತು.
“ ಹೂವು ದೇವರ ಪೂಜೆಗಲ್ವೇ… ಅಡುಗೆ ಕೋಣೆಯಲ್ಲೇನು ಕೆಲ್ಸ ಹೂವಿನ ಜೊತೆ… “ ಕೇಳಿಯೇ ಕೇಳ್ತೀರಾ.

ಸ್ವಾರಸ್ಯ ಏನಪ್ಪಾ ಅಂದ್ರೆ ಹಿಂದೆ ಸಾರು ಮಾಡಲಿಕ್ಕೆಂದೇ ಒಂದು ಜಾತಿಯ ದಾಸವಾಳ ತೋಟ, ಗುಡ್ಡ ಬದಿಗಳಲ್ಲಿ ತಾನೇ ತಾನಾಗಿ ಸಿಗುತ್ತ ಇತ್ತು. ನಸು ಹಳದಿ ಬಣ್ಣದ ಹೂವು, ನಡುವೆ ಗಾಢವರ್ಣದ ಇದು ಕಾಣಲೂ ಬೆಂಡೆಕಾಯಿ ಹೂವಿನಂತೆ ಅತ್ಯಾಕರ್ಷಕ. ಗೂಗಲ್ ಹುಡುಕಾಟ ನಡೆಸಿದಾಗ ಬಾಲ್ಯದಲ್ಲಿ ಕಾಣ ಸಿಗುತ್ತಿದ್ದ ಹೂವು ಸಿಕ್ಕಿತು. ಸಹಜವಾದ ಹುಳಿ ರುಚಿಯನ್ನೂ ತನ್ನದೇ ಬಣ್ಣವನ್ನೂ ಹೊಂದಿರುವ ಇದರ ಸಾರು ನಮಗೆ ರಜಾ ದಿನಗಳಲ್ಲಿ ಊರಿನ ತೋಟದ ಮನೆಯಲ್ಲಿ ಲಭಿಸುತ್ತಿತ್ತು. ಮಾಮೂಲಿ ದಾಸವಾಳ ದಿನವೂ ಹೂ ಬಿಡುವಂತೆ, ಎಲ್ಲ ಕಾಲಗಳಲ್ಲಿ ಈ ಹೂವು ಲಭಿಸದು. ಕ್ರಿಸ್ಮಸ್ ರಜಾ ದಿನಗಳು ನಮ್ಮ ಹಳ್ಳಿ ವಾಸ್ತವ್ಯದ ಕಾಲ, ಆಗಲೇ ಈ ಸಾರಿನ ಹೂವು ಅರಳಿರುತ್ತಿತ್ತು, ಸಾರು ಮಾಡಲಿಕ್ಕೆ ನಾನೇ ಕಿತ್ತು ತಂದಿದ್ದೂ ಇದೆ. ಕೇವಲ ಸಾರು ಮಾತ್ರವಲ್ಲ, ಶರಬತ್ ಕೂಡಾ ರುಚಿಕರ. Wild Hibiscus, Hill Hemp Bendy, hibiscus hispidissimus ಇತ್ಯಾದಿ ನಾಮಗಳಿಂದ ಶೋಭಿತವಾಗಿರುವ ಈ ಹೂವನ್ನು ಇತ್ತೀಚಿನ ದಿನಗಳಲ್ಲಿ ನಾನು ಕಂಡಿದ್ದಿಲ್ಲ.

ಕನ್ನಡದಲ್ಲಿಯೂ ಹಲವಾರು ನಾಮಕರಣ… ಕೈರ್ಪುಳಿ, ಬೆಟ್ಟ ಬೆಂಡೆ… ಇನ್ನೇನೆಲ್ಲ ಇವೆಯೋ ತಿಳಿಯದು.
Hibiscus hispidissimus Griff, ಎಂಬ ಶಾಸ್ತ್ರಸಮ್ಮತ ಹೆಸರು ಸಸ್ಯವಿಜ್ಞಾನಿಗಳಿಂದ ನೀಡಲ್ಪಟ್ಟಿದೆ.

ಈ ದಿನ ಬೇಸಿಗೆಗೆ ಅಪ್ಯಾಯಮಾನವಾದ ಸಾರು ದಾಸವಾಳದ ಹೂವಿನಿಂದ ಮಾಡೋಣ.

“ ಈಗ ಕಾಣ ಸಿಗದ ಹೂವನ್ನು ಎಲ್ಲಿಂದ ತರೂದು? “
ಅದೇ ದಾಸವಾಳವನ್ನು ಹುಡುಕಲಿಕ್ಕೆ ಯಾವುದೋ ಬೆಟ್ಟ ಹತ್ತಿ ಸುತ್ತಾಡುವ ಶ್ರಮ ನಮಗೆ ಬೇಡ, ಸಾಧ್ಯವೂ ಇಲ್ಲ ಅನ್ನಿ. ಕಣ್ಣೆದುರು ಅರಳಿ ನಂತಿರುವ ದಾಸವಾಳ ನಮಗೆ ಸಾಕು. ಹುಳಿ ರುಚಿ ಸಿಗಲಿಕ್ಕೆ ಹುಣಸೆ ಹುಳಿ ಇದೆ. ಬೆಲ್ಲ, ಉಪ್ಪು, ನೀರು ಹಾಗೂ ಒಗ್ಗರಣೆ ಸಾಹಿತ್ಯಗಳು ಅಡುಗೆಮನೆಯಲ್ಲಿ ಇದ್ದೇ ಇದೆ.

ಐದು ಎಸಳಿನ ಕೆಂಪು ದಾಸವಾಳ ಯಾ ಬಿಳಿ ದಾಸವಾಳ ನಮ್ಮ ಆಯ್ಕೆ. ಬಿಳಿ ಅಂದ್ರೆ ಅಚ್ಚ ಬಿಳುಪಿನದ್ದು ಆಗದು, ನಸು ಹಳದಿ ಬಣ್ಣದ್ದಾಗಿರಬೇಕು. ಇವೆರಡು ಬಣ್ಣದ ದಾಸವಾಳಗಳು ಮೂಲ ಬಣ್ಣದ ಹೂಗಳು..
ಸಾರು ಮಾಡಲಿಕ್ಕೆ ಕೆಂಪು ಬಣ್ಣದ ಹೂವು ಚೆನ್ನ,  ಗಾಢ ವರ್ಣವನ್ನೂ ನೀಡುವ ಇದರ ಮುಂದೆ ಬಿಳಿ ಹೂವು ಮಾಸಲು ಬಣ್ಣ ಬಿಟ್ಟೀತು.

ಒಗ್ಗರಣೆ ಘಂ ಅನ್ನಬೇಕಿದ್ರೆ ಬೆಳ್ಳುಳ್ಳಿ ಜಜ್ಚಿ ಇಟ್ಕೊಳ್ಳಿ. ಕರಿಬೇವು ಇರಲಿ.

ಐದಾರು ದಾಸವಾಳ ಹೂ ಪಕಳೆಗಳು ಮಾತ್ರ ಸಾಕು, ಹಸಿರು ತೊಟ್ಟು, ಕುಸುಮ ಬೇಡ.

ದಾಸವಾಳದ ಹೂ ಎಸಳುಗಳನ್ನು ಬಿಡಿಸಿ, ನೆಲ್ಲಿ ಗಾತ್ರದ ಹುಣಸೆಹುಳಿ ಗಿವುಚಿ, ಒಂದು ಅಚ್ಚು ಬೆಲ್ಲ ಪುಡಿ ಮಾಡಿಟ್ಟು, ರುಚಿಗೆ ಬೇಕಾದ ಉಪ್ಪು ಎದುರಿಗಿಟ್ಟು, ಎರಡು ಲೋಟ ನೀರು ಪಕ್ಕದಲ್ಲಿಟ್ಟು,

ಸಾರು ಮಾಡಲೆಂದೇ ಇರುವ ನಾನ್ ಸ್ಟಿಕ್ ಪ್ಯಾನ್ ಒಲೆಗೇರಿಸಿ,
ಒಗ್ಗರಣೆ ಸಾಮಗ್ರಿಗಳು ಬಿಸಿಯೇರಿ,
ಸಾಸಿವೆ ಚಟಪಟ ಎಂದಾಗ,
ಬೆಳ್ಳುಳ್ಳಿ ಪರಿಮಳ ಬೀರಿದಾಗ,
ಕರಿಬೇವು ಬೀಳಿಸಿ,
ಚಿಟೆಕೆ ಅರಸಿಣ ಬಿದ್ದು,
ದಾಸವಾಳ, ಹುಳಿ, ಬೆಲ್ಲ, ಉಪ್ಪು, ಹಾಗೂ ನೀರು ಸೇರಿ,
ಕುದಿ ಕುದಿದಾಗ,
ಹೂವಿನ ಸಾರು ಸಿದ್ಧವಾಗದೇ…

ತಂಪು ಗುಣವುಳ್ಳ ದಾಸವಾಳದ ಸಾರು ಸವಿಯೋಣ,
 ನಮ್ಮ ಬೇಸಿಗೆಯ ಬೇಗೆಗೆ ನಿಸರ್ಗದ ಕೊಡುಗೆ ಅನ್ನೋಣ.


ದಾಸವಾಳದ ಪೇಯ 
ಸಾರು ಸವಿದಾಯ್ತು, ದಾಸವಾಳ, ಹುಳಿ, ಬೆಲ್ಲ, ಉಪ್ಪು, ಹಾಗೂ ಮೂರು ಲೋಟ ನೀರನ್ನು ಕುದಿಸಿ, ಕುದಿಯುತ್ತಿರುವಾಗ ಗರಂ ಮಸಾಲಾ ಪ್ಯಾಕೆಟ್ ಬಿಡಿಸಿ, ಲವಂಗ, ಚಕ್ಕೆ, ಏಲಕ್ಕಿ ಇತ್ಯಾದಿಗಳನ್ನು ಸುವಾಸನೆ ಹಾಗೂ ರುಚಿಗೆ ತಕ್ಕಷ್ಟು ಹಾಕಿ ಕುದಿಸಿ. ಮೂರು ಲೋಟ ನೀರು ಹಾಕಿದ್ದೇವೆ, ಕುದಿದು ಒಂದು ಲೋಟದಷ್ಟು ನೀರು ಆರಬೇಕು, ಮಸಾಲಾ ಸಾಮಗ್ರಿಗಳ ಸಾರ ನೀರಿಗೆ ಬಿಟ್ಟುಕೊಳ್ಳಬೇಕು. ಕೆಳಗಿಳಿಸಿ, ಜಾಲರಿಯಲ್ಲಿ ಶೋಧಿಸಿ, ಅರ್ಧ ಚಮಚ ತುಪ್ಪ ಎರೆಯುವಲ್ಲಿಗೆ ದಾಸವಾಳದ ಪೇಯ ಯಾ ಶರಬತ್ ಯಾ ಸೂಪ್ ಸಿದ್ಧವಾಗಿದೆ.  

ದಾಸವಾಳದ ಈ ಪಾನೀಯ ಚೆನ್ನಪ್ಪನಿಗೂ ದಕ್ಕಿತು. ಸಂಜೆ ಅವನು ಮನೆಗೆ ತೆರಳುವ ಮೊದಲು ನನ್ನ ಗೂಗಲ್ ಸಂಪಾದಿತ ಚಿತ್ರವನ್ನು ಅವನೆದುರು ಪ್ರದರ್ಶಿಸಲಾಯಿತು. “ ಕಂಡಿದ್ದೀಯಾ ಈ ಹೂವನ್ನು… ? “

“ ಇಲ್ಲಾ ಅಕ್ಕ, ನಾನೂ ಸುಮಾರು ಸಮಯದಿಂದ ಇದನ್ನು ಹುಡುಕುತ್ತ ಇದ್ದೇನೆ… “
 ಹೌದೂ, ನಾನು ಈ ಮನೆಗೆ ಮದುವೆಯಾಗಿ ಬಂದ ಹೊಸತರಲ್ಲಿ ತೋಟದ ತೋಡಿನ ಬದಿಗೆ ಈ ಹೂ ಕಂಡಿದ್ದೇನೆ, “ ಈ ಹೂವನ್ನು ಸಾರು ಮಾಡ್ತಾರಲ್ವ? “ ಅಂತ ನಾನು ಕೇಳಿದ್ದಕ್ಕೆ ಅಂದಿನ ಕೆಲಸಗಿತ್ತಿಯರು ಸರಿಯಾಗಿ ಸ್ಪಂದಿಸದೇ ಇದ್ದಿದ್ದನ್ನೂ ಅವನಿಗೆ ತಿಳಿಸಿ, “ ತೋಟದ ಆ ಜಾಗದಲ್ಲಿ ಈಗಲೂ ಆ ದಾಸವಾಳ ಇರುವ ಸಾಧ್ಯತೆ ಇದೆ. “ ಆ ಕೊಡಲೇ ಚೆನ್ನಪ್ಪ ಜಾಗೃತನಾದ.

ಅಂತೂ ನಮ್ಮ ತೋಟದೊಳಗೆ ಬೆಟ್ಟ ಬೆಂಡೆಯೆಂದು ಕರೆಯಲ್ಪಡುವ ಗುಡ್ಡೆ ದಾಸಾಳ ಇದೆ, “ ಈಗ ಹೂ ಇಲ್ಲ ಅಕ್ಕ. “ ಎಂದ ಚೆನ್ನಪ್ಪ.
“ ಹೂವು ಸಿಗಬೇಕಾದ್ರೆ ಮುಂದಿನ ನವಂಬರ್ - ಜನವರಿ ತನಕ ಕಾಯಬೇಕು. “ ಗೊತ್ತಾಯ್ತಲ್ಲ.
“ಅದು ಸರಿ. ಹೂವು ಚಟ್ಣಿ ಮಾಡಲಿಕ್ಕೂ ಆಗುತ್ತಂತೆ. “
“ ಓ, ಹೌದಾ… “
“ ಹೂವಿನಲ್ಲೇ ಹುಳಿ ಉಂಟಲ್ಲ. “



Friday 23 March 2018

ಮಾವಿನಕಾಯಿ ಗೊಜ್ಜು



ಮಾವಿನಕಾಯಿ ಕೊಯ್ದು ತಂದ ಚೆನ್ನಪ್ಪ, ವಿಶೇಷತೆಯೇನೂ ಇಲ್ಲ, ಉಪ್ಪಿನಕಾಯಿ ಹಾಕಬೇಕಾಗಿದೆ ಅಷ್ಟೇ.  

ಮೊದಲನೆಯದಾಗಿ ಮಾವಿನಕಾಯಿ ಹೇಗಿದೆಯೆಂದು ನೋಡುವುದು, ಕೇವಲ ಕಣ್ಣನೋಟ ಸಾಲದು, ಕತ್ತರಿಸಿ, ಉಪ್ಪು ಬೆರೆಸಿ, ಬೇಕಿದ್ದರೆ ಮೆಣಸನ್ನೂ ಹಾಕಿ ತಿನ್ನುವುದು. ಅದೂ ಆಯ್ತು.

ಎರಡನೆಯದಾಗಿ ಮಾವಿನಕಾಯಿ ಗೊಜ್ಜು ತಯಾರಿಸಿ ಅನ್ನದೊಂದಿಗೆ ಸವಿಯುವುದು.

ಹೇಗೆ?
ಎರಡು ಯಾ ಮೂರು ಮಾವಿನಕಾಯಿಗಳನ್ನು ಹೋಳು ಮಾಡಿ,
ಎರಡು ಹಸಿಮೆಣಸು ಸಿಗಿದು ಹಾಕಿ,
ಒಂದು ಲೋಟ ನೀರು ಎರೆದು,
ರುಚಿಗೆ ತಕ್ಕ ಉಪ್ಪು ಬಿದ್ದು,
ಮಾವಿನಕಾಯಿ ಬೇಯಲಿಟ್ಟು,
ಬೆಂದ ಮೇಲೆ ಆರಲು ಬಿಟ್ಟು,
ಮಿಕ್ಸಿ ಯಂತ್ರ ಬೇಡ,
ಕೈಯ ತಂತ್ರದಲ್ಲಿ ಗಿವುಚಿ,
ಗಿವುಚಿದಾಗ,
ಗೊಜ್ಜು ಬಂದೆನೆಂದಿತು,
ಒಗ್ಗರಣೆಯ ಮರೆಯದಿರಿ,
ಬೆಲ್ಲವನ್ನು ಬಿಡದಿರಿ,
" ಅಹಹ... ಸಿಹಿ
ಒಹೊಹೋ ಹುಳಿ "
ಸವಿಯುತ್ತ ಉಣ್ಣಿರಿ.

ಯುಗಾದಿಗೆ ಮಾವಿನಕಾಯಿ ಗೊಜ್ಜು ಮಾಡಿ ತಿಂದೆವು.
ಯುಗಾದಿ ಬರಬೇಕು, ಮಾವಿನಕಾಯಿ ಇರಬೇಕು. ಅಲ್ವೇ?




Friday 16 March 2018

ಹುಣಸೆ ಹಣ್ಣಿನ ಸಾರು



ಬೇಸಿಗೆಯೂ ಬಂತಲ್ಲ, ದಿನವೂ ಏನೋ ಒಂದು ಬಗೆಯ ಸಾರು ಇದ್ದರೇನೇ ಅನ್ನ ಹೊಟ್ಟೆಗೆ ಹೋದೀತು. ಪುಲಾವು, ಗೀರೈಸು ಇತ್ಯಾದಿ ಹಿಡಿಸದು. ಹುಣಸೆಯ ಸವಿರುಚಿಯಲ್ಲಿ ಸಾರು ಮಾಡೋಣ.

ನೆಲ್ಲಿಗಾತ್ರದ ಹುಣಸೆ ಹಣ್ಣು.
ರುಚಿಗೆ ಉಪ್ಪು ಹಾಗೂ ಬೆಲ್ಲ.
ಒಂದು ಲೋಟ ನೀರಿನಲ್ಲಿ ಹುಣಸೆಯ ಹಣ್ಣನ್ನು ಗಿವುಚಿ ರಸ ತೆಗೆದಿರಿಸಿ.
ಒಂದನೆಯ ಸಿದ್ಧತೆ ಆಯ್ತು.

2 ಚಮಚ ಕಾಯಿತುರಿ
4 ಒಣಮೆಣಸು
1 ಚಮಚ ತೊಗರಿಬೇಳೆ
2 ಚಮಚ ಕೊತ್ತಂಬರಿ
ಪುಟ್ಟ ಚಮಚದಲ್ಲಿ ಜೀರಿಗೆ ಹಾಗೂ ಮೆಂತೆ
ಉದ್ದಿನ ಕಾಳಿನಷ್ಟು ಇಂಗು
ಏಳೆಂಟು ಕಾಳು ಸಾಸಿವೆ
ನಾಲ್ಕಾರು ಕಾಳುಮೆಣಸು
ಒಂದು ಎಸಳು ಕರಿಬೇವು
ಚಿಟಿಕೆ ಅರಸಿಣ
ತುಸು ಎಣ್ಣೆ ಯಾ ತುಪ್ಪದ ಪಸೆಯಲ್ಲಿ ಮಸಾಲಾ ಸಾಮಗ್ರಿಗಳನ್ನು ಹುರಿಯಿರಿ.
ಎರಡು ಕರಬೇವಿನೆಲೆ ಹಾಕಿ ಬಾಡಿಸಿ,
ತೆಂಗಿನತುರಿಯನ್ನೂ ಹಾಕಿ ಸೌಟಾಡಿಸಿ,
ಉರಿ ನಂದಿಸಿ ಆರಲು ಬಿಡಿ,
ಮಿಕ್ಸಿ ಯಂತ್ರದಲ್ಲಿ ನುಣ್ಣಗೆ ಪುಡಿ ಆಯ್ತು ಅನ್ನಿ.

ಬೇಕಿದ್ದರೆ ಮೇಲಿನ ಮಸಾಲಾ ಅಳತೆಯನ್ನು ತುಸು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡು ನಾಲ್ಕಾರು ದಿನಗಳ ಬಳಕೆಗೆ ತಕ್ಕಷ್ಟು ಸಾರಿನ ಹುಡಿ ಮಾಡಿಟ್ಟುಕೊಳ್ಳಲೂ ಸಾಧ್ಯವಿದೆ, ಆದರೆ ತೆಂಗಿನತುರಿ ಹಾಗೂ ತೊಗರಿಬೇಳೆ ಹಾಕುವುದು ಬೇಡ.

ಸಾರು ಮಾಡುವ ತಪಲೆ, ನಾನ್ ಸ್ಟಿಕ್ ಪ್ಯಾನ್ ಆದರೆ ಉತ್ತಮ, ಒಗ್ಗರಣೆ ಶಾಸ್ತ್ರವನ್ನೂ ಅದರಲ್ಲೇ ಮಾಡಿಕೊಳ್ಳಬಹುದಾಗಿದೆ.

ಸಾಸಿವೆ ಕರಿಬೇವಿನ ಒಗ್ಗರಣೆ ಸಿಡಿಸಿ, ಹುಣಸೆರಸ ಎರೆದು, ಬೆಲ್ಲ ಉಪ್ಪು ಹಾಕಿ, ಇನ್ನೂ ಒಂದು ಲೋಟ ನೀರು ಎರೆದು ಕುದಿಯಲು ಬಿಡಿ, ಸಾರಿನ ಪುಡಿ ಹಾಕಿ ಸೌಟಾಡಿಸಿ, ಕುದಿಯಲಿ. ರುಚಿಕರವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿ… “ ಆಹ, ಹುಣಸೆಯ ಸಾರು ಆಯ್ತು. “ ಅನ್ನಿ.

“ ಹೊಸ ಹುಣಸೆ ಹಣ್ಣು ತುಂಬಾ ಉಷ್ಣ… “ ಗೌರತ್ತೆಯ ತಾಜಾ ಕಿವಿ ಮಾತು ತೇಲಿ ಬಂದಿತು.
ಪರವಾ ಇಲ್ಲ, ನಮ್ಮದು ಅಡುಗೆಯ ಉಪಯೋಗ, ಹಾಗೇನೇ ಹುಣಸೆಹಣ್ಣು ತಿನ್ನುವ ಮಕ್ಕಳಾಟಿಕೆಯವರಿಗೆ ಈ ಹಿತವಚನ ಬಂದಿದೆ.

ಹುಳಿ ಹಾಗೂ ಸಿಹಿ ಬೆರೆತಿರುವ ಹುಣಸೆಯ ಹಣ್ಣಿನ ರಸದಲ್ಲಿ ಟಾರ್ಟಾರಿಕ್ ಆಮ್ಲ ಇರುವುದು. ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ ಹಾಗೂ ವಿಟಮಿನ್ ಬಿ-ಕಾಂಪ್ಲೆಕ್ಸ್ ಕೊಡಾ ಹುಣಸೆಯ ಹಣ್ಣಿನಲ್ಲಿದೆ. ಹಣ್ಣುಗಳಲ್ಲಿ ಅತಿ ವಿರಳವಾಗಿರುವ ಕ್ಯಾಲ್ಸಿಯಂ ಮಾತ್ರವಲ್ಲದೆ ಐರನ್, ಮೆಗ್ನೇಶಿಯಂ, ಫಾಸ್ಫರಸ್, ಪೊಟಾಶಿಯಂ, ಸೋಡಿಯಂ ಹಾಗೂ ಅಲ್ಪಪ್ರಮಾಣದ ಝಿಂಕ್ ಇರುತ್ತದೆ. ಖನಿಜಾಂಶ ಸಮೃದ್ಧವಾಗಿರುವ ನಿತ್ಯಬಳಕೆಯ ಇಂತಹ ಬೇರೆ ಹಣ್ಣು ನಮ್ಮ ಮುಂದೆ ಇಲ್ಲ. ಅದರಲ್ಲೂ ಹುಣಸೆಯ ಹಣ್ಣು ದಿನನಿತ್ಯವೂ ಅಡುಗೆಗೆ ಉಪಯೋಗಿಸಲ್ಪಡುವಂತದ್ದಾಗಿದೆ.

ಇಷ್ಟೆಲ್ಲ ಪೋಷಕಾಂಶಗಳು ನಾವು ಅಡುಗೆಯಲ್ಲಿ ಬಳಸುವ ಟೊಮ್ಯಾಟೋ ಹಣ್ಣಿನಲ್ಲಿ ಇಲ್ಲ, ಲಿಂಬೆ ಹಣ್ಣಿನಲ್ಲಿ ಗಮನಾರ್ಹ ಜೀವಸತ್ವಗಳು ಇದ್ದರೂ ಬಹುವಿಧ ಅಡುಗೆಯಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಒಮ್ಮೆ ಕೊಯ್ದು ಸಂಸ್ಕರಿಸಿ ಇಟ್ಟಂತಹ ಹುಣಸೆಹುಳಿಯಿಂದ ವರ್ಷಪೂರ್ತಿ ಉಪಯೋಗ ಪಡೆಯಬಹುದಾಗಿದೆ. ಹಳೆಯದಾಯಿತೇ, ನಿರ್ಲಕ್ಷಿಸುವಂತಿಲ್ಲ. ಪಿತ್ತಶಾಮಕವೆಂಬ ಔಷಧಿಯಾಗಿ ಖ್ಯಾತಿ ಹುಣಸೆಯದಾಗಿದೆ. ನಿತ್ಯ ಹರಿದ್ವರ್ಣದ tamarindus indica, ಅರಣ್ಯ ವೃಕ್ಷ, ಇದರ ಉತ್ಪನ್ನವಾದ ಹುಣಸೆಹುಳಿ ಕಾಡು ಉತ್ಪತ್ತಿಗಳ ವರ್ಗಕ್ಕೆ ಸೇರಿದಂತಹುದು.




Saturday 3 March 2018

ಗುಜ್ಜೆ ಉಪ್ಪಿನಕಾಯಿ



" ಅಕ್ಕ, ಹಲಸಿನಕಾಯಿ ತರಲೇ... " ಕೇಳಿದ್ದು ಚೆನ್ನಪ್ಪ.
" ಆದೀತು, ತಂದಿಡು. "

ಸಂಜೆಯ ಹೊತ್ತಿಗೆ ತೋಟದಿಂದ ಎರಡು ಗುಜ್ಜೆಗಳು ಬಂದುವು.

ಈ ವರ್ಷದ ಮೊದಲ ಫಲ ಬಂದಿದೆ. ನಾಳೆ ಪಲ್ಯ ಮಾಡೋಣ.
ಮುಂಜಾನೆಯ ತಿಂಡಿ ಮುಗಿಸಿ, ಚೆನ್ನಪ್ಪ ಬರುವ ಮೊದಲು ನಾನೇ ಖುದ್ದಾಗಿ ಮುತುವರ್ಜಿಯಿಂದ ಹಲಸಿನಕಾಯಿ ಹೆಚ್ಚಿಟ್ಟೆ,

ಹಲಸಿನಕಾಯಿ ಅಂದ್ರೆ ಸುಮ್ಮನೆ ಆಗುತ್ಯೇ, ಟೀವಿ ನೋಡುತ್ತಾ ಟೇಬಲ್ ಮೇಲೆ ಚಾಕು, ಮಣೆ ಇಟ್ಕೊಂಡು ಕೊಚ್ಚಲಿಕ್ಕೆ ಅದೇನು ಈರುಳ್ಳಿಯೇ?
ಮೆಟ್ಟುಗತ್ತಿ ಆಗಬೇಕು, ಹಲಸಿನಕಾಯಿಗೆಂದೇ ದೊಡ್ಡ ಗಾತ್ರದ ಮೆಟ್ಟುಕತ್ತಿ (ಈಳಿಗೆಮಣೆ) ಇದೆ, ಅದು ಹಲಸಿನ ಕಾಲ ಮುಗಿಯುತ್ತಲೂ ಯಾರೂ ಕೇಳುವವರಿಲ್ಲದೆ ಮೂಲೆಗೆ ಒತ್ತರಿಸಲ್ಪಟ್ಟಿದೆ. ಅದನ್ನು ಕಬ್ಬಿಣದ ಆಚಾರಿಯಲ್ಲಿಗೆ ಒಯ್ದು ಸಿಂಗರಿಸದೆ ಇದ್ದರೆ ನಾವು ಹೇಳಿದಂತೆ ಕೇಳದು. ಅದೆಲ್ಲ ಚೆನ್ನಪ್ಪನ ಡ್ಯೂಟಿ, ಮಾಡ್ತಾನೆ ಬಿಡಿ.

ಈಗ ಅಡುಗೆಮನೆಯ ಒಳಗಿರುವ ನಿತ್ಯ ಬಳಸುತ್ತಿರುವ ಮೆಟ್ಟುಗತ್ತಿಯನ್ನು ಹೊರ ಕೊಂಡೊಯ್ಯಲೋ, ಬೇಡ, ಹಲಸಿನ ಗುಜ್ಜೆಯೇ ಒಳಗೆ ಬಂದಿತು.
ಬಕೆಟ್ ತುಂಬ ನೀರು ಇರಲಿ,
ಇಬ್ಭಾಗವಾದ ಹಲಸಿನಿಂದ ಮಯಣ ಹೊರ ಚೆಲ್ಲುವ ಮೊದಲೇ ಸುರಿಯುವ ನೀರಿನ ಕಳಗೆ ಹಿಡಿದು ಸ್ನಾನ ಮಾಡಿಸಿದಾಗ ಮಯಣ ತೊಳೆದು ಹೋಯ್ತು, ಇನ್ನು ಬೇಕಿದ್ದಂತೆ ಹೋಳು ಮಾಡಲು ತೊಂದರೆಯಿಲ್ಲ. ನಮ್ಮ ಕತ್ತಿಗೂ ಮಯಣ ಅಂಟುವ ಭಯವಿಲ್ಲ. ಇದು ಮಯಣ ನಿವಾರಣೆಯ ಸುಲಭೋಪಾಯ. ಆದರೂ ಅಂಗೈಗಳಿಗೆ ತೆಂಗಿನೆಣ್ಣೆ ಸವರಿಕೊಳ್ಳುವುದು ಉತ್ತಮ.

ಅರ್ಧ ಹಲಸಿನ ಗುಜ್ಜೆಯ ಹೋಳುಗಳು ಸಿದ್ಧವಾಗಿವೆ, ಪಲ್ಯಕ್ಕೆ ಬೇಕಾದಷ್ಟಾಯಿತು.
“ ಉಳಿದ ಅರ್ಧ ಗುಜ್ಜೆ ಏನ್ಮಾಡ್ತೀರಾ? ನಾಳೆಗೂ ಪಲ್ಯವೇ? “



ಬೇಡ ಬಿಡಿ, ಉಪ್ಪಿನಕಾಯಿ ಹಾಕೋಣ. ಹೇಗೂ ಈ ವಾರದಲ್ಲಿ ಮಗಳು ಬರುವವಳಿದ್ದಾಳೆ,  
“ ಗುಜ್ಜೆ ಉಪ್ಪಿನಕಾಯಿ ಆಗುತ್ತಾ, ನಮಗೆ ಗೊತ್ತೇ ಇಲ್ಲರೀ… “

ಗುಜ್ಜೆಯ ಆಗಮನದೊಂದಿಗೆ ಹೊಸ ಹುಣಸೆಯ ಹಣ್ಣು ಸಿದ್ಧವಾಗಿರುತ್ತದೆ. ಹುಣಸೆಯ ಹುಳಿಯೂ, ಗುಜ್ಜೆಯೂ ಸೇರಿ, ಉಪ್ಪು ಖಾರ ಕೂಡಿದಾಗ ಉಪ್ಪಿನಕಾಯಿ ಆಗೇ ಹೋಯ್ತು.

ಎಳೆಯ ತರಕಾರಿಗಳನ್ನು ಹಸಿಯಾಗಿ ಉಪ್ಪು ಖಾರ ಸೇರಿಸಿ ತಿನ್ನಲಾಗುವಂತೆ ನಮ್ಮ ಹಲಸಿನ ಗುಜ್ಜೆ ಎಷ್ಟೇ ಎಳೆಯದಾದರೂ ಹಸಿಯಾಗಿ ತಿನ್ನುವಂತಿಲ್ಲ, ಹಾಗೇ ಸುಮ್ಮನೆ ಮಸಾಲೆ ಬೆರೆಸಿ ಉಪ್ಪಿನಕಾಯಿ ಆಯ್ತು ಅನ್ನುವಂತಿಲ್ಲ.

ಬೇಯಿಸಬೇಕು. ಒಂದೇ ಗಾತ್ರದಲ್ಲಿ ಹೆಚ್ಚಿಟ್ಟ ಹೋಳುಗಳನ್ನು ಕುಕ್ಕರ್ ಒಳಗೆ ತುಂಬಿಸಿ, ಒಂದು ಲೋಟ ನೀರು ಎರೆದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನೆಲ್ಲಿ ಗಾತ್ರದ ಹುಣಸೆ ಹುಳಿಯನ್ನೂ ಹಾಕಿ, ಒಂದು ಸೀಟಿ ಕೇಳುವ ತನಕ ಬೇಯಿಸಿ.
ಪ್ರೆಶರ್ ಇಳಿದ ನಂತರವೇ ಮುಚ್ಚಳ ತೆರೆದು, ಹುಣಸೆಯ ರಸ ಹೋಳುಗಳಿಗೆ ದಕ್ಕಿದ್ದು ಸಾಕು, ಬೇಯಲು ಎರೆದಂತಹ ನೀರನ್ನು ಬಸಿಯಿರಿ, ಹುಣಸೆಯನ್ನೂ ತೆಗೆಯಿರಿ.

ಉಪ್ಪಿನಕಾಯಿ ಮಸಾಲೆ ಸಿದ್ಧಪಡಿಸೋಣ.
10 - 12 ಒಣಮೆಣಸು
3 ಚಮಚ ಸಾಸಿವೆ
ಪುಟ್ಟ ಚಮಚ ಅರಸಿಣ
3 ಚಮಚ ಉಪ್ರು
ಒಂದು ಲೋಟ ಕಾದಾರಿದ ನೀರು (ಕುದಿಸಿ ತಣಿದ ನೀರು)
ಮೆಣಸು ಹಾಗೂ ಸಾಸಿವೆಯನ್ನು ಅಗತ್ಯವಿರುವಷ್ಟೇ ನೀರು ಎರೆದು ಅರೆಯಿರಿ, ಉಪ್ಪು, ಅರಸಿಣ ಪುಡಿ ಹಾಕ್ಕೊಳ್ಳಿ.
ಇದೀಗ ಉಪ್ಪಿನಕಾಯಿ ಹಸಿ ಮಸಾಲೆ (ಹೊರಡಿ) ಸಿದ್ಧವಾಗಿದೆ.
ಇನ್ನೇಕೆ ತಡ, ಹಲಸಿನ ಗುಜ್ಜೆಗೆ ಬೆರೆಸಿ, ಶುಭ್ರವಾದ ಜಾಡಿಯಲ್ಲಿ ತುಂಬಿಸಿ, ಎಷ್ಟು ಸುಲಭ ಅಲ್ವೇ…

“ ಉಪ್ಪಿನ್ಕಾಯಿ ಆಯ್ತು… “ ಅನ್ನುತ್ತ ಚೆನ್ನಪ್ಪನ ಹಾಳೆ ಬಟ್ಟಲಿಗೂ ಧಾರಾಳವಾಗಿ ಬಿತ್ತು ಗುಜ್ಜೆ ಉಪ್ಪಿನಕಾಯಿ.

“ ಕುಚ್ಚುಲಕ್ಕಿ ಅನ್ನ, ಪರಿಮಳದ ತುಪ್ಪ, ಗಟ್ಟಿ ಮೊಸರು, ಗುಜ್ಜೆ ಉಪ್ಪಿನಕಾಯಿ ಇರುವಾಗ ಅನ್ನದ ತಪಲೆ ಖಾಲಿಯಾಗಲಿಕ್ಕೆ ಎಷ್ಟು ಹೊತ್ತು? ನೋಡ್ತಿರು… “    
ಹೌದೂ, ರಾತ್ರಿ ಊಟವಾದ ಮೇಲೆ ನೋಡ್ತೀನಿ, ಅನ್ನದ ತಪಲೆ ಖಾಲಿ ಆಗ್ಬಿಟ್ಟಿದೆ!

ಅಂದ ಹಾಗೆ ಈ ಗುಜ್ಜೆ ಉಪ್ಪಿನಕಾಯಿ ಹೆಚ್ಚು ದಿನ ಇಟ್ಟುಕೊಳ್ಳುವಂತದ್ದಲ್ಲ, ಹೆಚ್ಚೆಂದರೆ ಒಂದು ವಾರದ ಬಾಳ್ವಿಕೆ ಬಂದೀತು.