Pages

Ads 468x60px

Monday 27 May 2013

ಬಾಳೇ ಹಣ್ಣು, ......ವಿಶೇಷ ಖಾದ್ಯಗಳು







ಒಂದು ಬಾಳೆಗೊನೆ ಹಣ್ಣಾದರೆ ಸಾಕು,  ಏನೇನೆಲ್ಲಾ ಮಾಡಬಹುದು, 

  " ಹಾಗೇನೇ ತಿಂದರಾಯಿತು ಮುಗೀತಲ್ಲ ಸಮಸ್ಯೆ "  ಅಂತೀರಾ.

ಅದಕ್ಕೂ ಮನೆಯೊಳಗೆ ಸಾಕಷ್ಟು ಜನ ಇದ್ದರಾದೀತು,  ಇಲ್ಲವೇ ಹಟ್ಟಿಯಲ್ಲಿ ದನ ಇದ್ದರೂ ಆದೀತು.  

 ಈಗ ನಾಳೆ ಮುಂಜಾನೆಗೊಂದು ತಿಂಡಿ ಆಗ್ಬೇಕಿದೆಯಲ್ಲ,  ದೋಸೆ ಮಾಡೋಣ.

ಬೇಕಾಗುವ ಸಾಮಗ್ರಿ:
2 ಕಪ್ ಅಕ್ಕಿ
ಕಾಲು ಕಪ್ ಉದ್ದು
1 ಚಮಚ ಮೆಂತೆ
2 ಕಪ್ ಕತ್ತರಿಸಿಟ್ಟ ಬಾಳೆಹಣ್ಣುಗಳು
ರುಚಿಗೆ ಉಪ್ಪು

ಅಕ್ಕಿ ಬೇಳೆಗಳನ್ನು ನೆನೆ ಹಾಕಿ.  
ಮೊದಲು ಬೇಳೆಗಳನ್ನು ನುಣ್ಣಗೆ ಅರೆಯಿರಿ.   
ಉದ್ದಿನ ಹಿಟ್ಟು ತೆಗೆದಿಡಿ.  
 ಅಕ್ಕಿಯನ್ನು ಅವಶ್ಯವಿದ್ದಷ್ಟು ನೀರೆರೆದು ಮಿಕ್ಸೀಯಲ್ಲಿ ಅರೆಯಿರಿ.  
 ನುಣ್ಣಗಾಗಲು ಒಂದೊಂದೇ ಕಪ್ ಅಕ್ಕಿ ಹಾಕುವುದು ಉತ್ತಮ,  ನುಣ್ಣಗಾಯಿತೇ,  ಈಗ ಒಂದು ಕಪ್ ಬಾಳೆಹಣ್ಣಿನ ಹೋಳುಗಳನ್ನು ಹಾಕಿ ಅರೆಯಿರಿ,  ನೀರು ಪುನಃ ಸೇರಿಸುವ ಅವಶ್ಯಕತೆಯಿಲ್ಲ.  ಉಳಿದ ಅಕ್ಕಿ ಹಾಗೂ ಬಾಳೆಹಣ್ಣನ್ನು ಹೀಗೆ ಅರೆದು ಹಿಟ್ಟಿಗೆ ಉಪ್ಪು ಹಾಕಿ.   ಚೆನ್ನಾಗಿ ಕಲಸಿ 8 ಗಂಟೆಗಳ ಕಾಲ ಮುಚ್ಚಿಡಿ.

ತೆಳ್ಳಗೆ ಪೇಪರ್ ದೋಸೆ ತಯಾರಿಸಿ,  ಒಳಗೆ ಮಸಾಲೆ ಹೂರಣ ತುಂಬಿಸಿ ಮಕ್ಕಳಿಗೆ ಕೊಡಿ.
ಮಸಾಲೆ ಪಲ್ಯ ಮಾಡಿಲ್ಲವೇ,   ತೆಂಗಿನಕಾಯಿ ಚಟ್ನಿ ಮಾಡಿದರಾಯಿತು.
ಇಷ್ಟವಿದ್ದವರಿಗೆ ದಪ್ಪ ದೋಸೆಯನ್ನೂ ಮಾಡಬಹುದು.






ಬೇಳೇಕಾಳುಗಳನ್ನು ಹಾಕದೇ ದೋಸೆ ಮಾಡೋಣ:
2 ಕಪ್ ಅಕ್ಕಿ
1 ಕಪ್ ತೆಂಗಿನ ತುರಿ
2 ಕಪ್ ಹೆಚ್ಚಿಟ್ಟ ಬಾಳೇಹಣ್ಣು
ರುಚಿಗೆ ಉಪ್ಪು

ನುಣ್ಣಗೆ ಅರೆದಿಡಿ.  ಮಾರನೇ ದಿನ ದೋಸೆ ಎರೆದುಕೊಳ್ಳಿ.   ಸಿಹಿ ಬೇಕಿದ್ದರೆ ಬೆಲ್ಲ ಹಾಕಬಹುದು.
ಇದೇ ಹಿಟ್ಟಿನಿಂದ ಗುಳಿಯಪ್ಪ ಬೇಕಿದ್ದರೂ ಮಾಡಬಹುದು,  ಬೆಲ್ಲ ಜಾಸ್ತಿ ಹಾಕಿದರಾಯಿತು.  ಹಿಟ್ಟು ನೀರಾಗಿರಬಾರದು,  ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹಿಟ್ಟನ್ನು ದಪ್ಪಗಟ್ಟುವಂತೆ ಮಾಡಿ. ನಂತರ ಅಪ್ಪದ ಗುಳಿಕಾವಲಿಯಲ್ಲಿ ಎರೆಯಿರಿ. ನಿಮ್ಮ ಅಪ್ಪಂ ಚೆನ್ನಾಗಿ ಗುಳಿಯಿಂದ ಎದ್ದು ಬರುವುದು,  ಹೆಚ್ಚು ಎಣ್ಣೆ ಕುಡಿಯುವುದಿಲ್ಲ.


<><><> <><><> <><><>



ಬಾಳೆಹಣ್ಣಿನಿಂದ ತಯಾರಿಸಬಹುದಾದ ಇನ್ನೊಂದು ಭಕ್ಷ್ಯ ಹಲ್ವಾ.  ಇದರ ತಯಾರಿ ಹೇಗೆಂದು ನೋಡೋಣ.

ಚೆನ್ನಾಗಿ ಹಣ್ಣಾದ ಕದಳೀ ಬಾಳೆ ಹಣ್ಣುಗಳು - 25ರಿಂದ 30
ಚಿಕ್ಕದಾಗಿ ಕತ್ತರಿಸಿ ಇಡಿ.

2 ಕಪ್ ಸಕ್ಕರೆ
1 ಅಚ್ಚು ಬೆಲ್ಲ ( ಮುಸುಂಬಿ ಗಾತ್ರದ್ದು )
4 ಚಮಚಾ ತುಪ್ಪ

ಬಾಣಲೆಗೆ ತುಪ್ಪ ಸವರಿ ಬಾಳೆಹಣ್ಣು ಬೇಯಲಿಡಿ.  ದೊಡ್ಡ ಉರಿಯಲ್ಲಿ ಬೇಯಿಸಲೇಬಾರದು.  ಸೌಟಿನಿಂದ ಮಗುಚುತ್ತಾ ಇದ್ದಂತೆ ರಸಭರಿತ ಹಣ್ಣಿನ ಸುವಾಸನೆ ಬರಲಾರಂಭಿಸುವುದು.  ಈ ಹಂತದಲ್ಲಿ ಬೆಲ್ಲ ಸೇರಿಸಿ.   ಬೆಲ್ಲ ಕರಗಿ,  ಕುದಿದು ಬಾಳೆಹಣ್ಣಿನೊಂದಿಗೆ ಸೇರಿತೇ,  ಈಗ ಸಕ್ಕರೆ ಹಾಕಿ ಬಿಡಿ.  

ನಿಧಾನಗತಿಯ ಈ ರಸಪಾಕ ಸಿದ್ಧವಾಗಲು ಕನಿಷ್ಠ 3 ಗಂಟೆಗಳ ಕಾಲ ಬೇಕಾಗಿರುವುದರಿಂದ ಇನ್ನಿತರ ಮನೆಕೆಲಸಗಳ ಜೊತೆಯಲ್ಲಿ ಮಾಡುವುದು ಉತ್ತಮ.

ಸಕ್ಕರೆ ಕರಗಿದ ಹಂತದಲ್ಲಿ ಈ ಅರೆ ಬೆಂದ ಪಾಕದಿಂದ  ಒಂದು ಪಾಯಸ ಮಾಡಿಕೊಳ್ಳೋಣ :

2 ಸೌಟು ಹಣ್ಣಿನ ಪಾಕ ತೆಗೆದು ಪಾಯಸ ತಯಾರಿಸುವ ಪಾತ್ರೆಗೆ ರವಾನಿಸಿ.  ಒಂದು ಲೋಟ ತೆಂಗಿನಕಾಯಿ ಹಾಲು ಎರೆದು ಚಿಕ್ಕ ಉರಿಯಲ್ಲಿ ಕುದಿಸಿ.   ಇದಕ್ಕೆ ಯಾಲಕ್ಕಿ ಹಾಕಬೇಕಾಗಿಲ್ಲ.  





ನೀರಿನಂಶವೆಲ್ಲ ಆರಿದ ನಂತರ ಹಲ್ವಾ ತಳ ಬಿಟ್ಟು ಬರಲಾರಂಭಿಸುವುದು.   ಈಗ ಉಳಿದ ತುಪ್ಪ ಹಾಕಿಕೊಳ್ಳಿ.   ಒಂದೇ ಮುದ್ದೆಯಾದ ಹಂತದಲ್ಲಿ ಕೆಳಗಿಳಿಸಿ ತಟ್ಟೆಗೆ ಹಾಕಿ.   ಚೆನ್ನಾಗಿ ಆರಿದ ಮೇಲೆ ಬೇಕಾದಂತೆ ತುಂಡು ಮಾಡಿಟ್ಟು,  ಡಬ್ಬಾದಲ್ಲಿ ತುಂಬಿಸಿ ಮಕ್ಕಳಿಗೆ ಕೊಟ್ಟು ನೀವೂ ತಿನ್ನಿ.











ಸುಟ್ಟವು ಹೀಗೆ ಮಾಡೋಣ:

10ರಿಂದ 15 ಚೆನ್ನಾಗಿ ಹಣ್ಣಾದ ಕದಳೀ ಬಾಳೆಹಣ್ಣು
ಮುಸುಂಬಿ ಗಾತ್ರದ ಬೆಲ್ಲ
1 ಕಪ್ ಮೈದಾ
ಕರಿಯಲು ತೆಂಗಿನೆಣ್ಣೆ
ರುಚಿಗೆ ಚಿಟಿಕೆ ಉಪ್ಪು

ಬಾಳೇಹಣ್ಣುಗಳನ್ನು ಮಿಕ್ಸೀಗೆ ಹಾಕಿ,  ತೆಗೆದಿಡಿ.
ಬೆಲ್ಲಕ್ಕೆ ಸ್ವಲ್ಪ ನೀರೆರೆದು ಕುದಿಸಿ, ಕರಗಿಸಿಕೊಳ್ಳಿ.
ಬೆಲ್ಲದ ಬಿಸಿ ಆರಿತೇ,  ಈಗ ಬಾಳೇಹಣ್ಣಿನ ಮುದ್ದೆ,  ಮೈದಾ, ಚಿಟಿಕೆ ಉಪ್ಪನ್ನೂ ಸೇರಿಸಿ ಬೆಲ್ಲದ ಪಾಕದೊಂದಿಗೆ ಕಲಸಿಕೊಳ್ಳಿ.   ಕಲಸುವಾಗ ಬೇರೆ ನೀರು ಹಾಕಬೇಕಾಗಿಲ್ಲ.  

ಬಾಣಲೆಯಲ್ಲಿ ಎಣ್ಣೆ ಬಿಸಿಯೇರಿತೇ,  ಕೈಯಲ್ಲಿ ಹಿಟ್ಟನ್ನು ಒಂದೇ ಗಾತ್ರದಲ್ಲಿ ಎಣ್ಣೆಗೆ ಇಳಿಸುತ್ತಾ ಬನ್ನಿ.   ಬಾಣಲೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಬಹುದು.   ಎರಡೂ ಬದಿ ಕೆಂಪಗಾದೊಡನೆ ತೆಗೆಯಿರಿ.   ಇದನ್ನು ಒಂದೆರಡು ದಿನ ಇಟ್ಟುಕೊಳ್ಳಬಹುದು.





Posted via DraftCraft app

Sunday 19 May 2013

ಸೃಷ್ಟಿ~~~~~ಪ್ರಕ್ರಿಯೆ





ಆಸೆಯಿಂದ ತಂದ ಲಿಲ್ಲಿ ಹೂವು
ನೆಲದಾಳದಿಂದ,  ಮನದಾಳದಿಂದ
ಮೇಲೇಳಲಿಲ್ಲ
ಗೊಬ್ಬರ ಕೊಟ್ಟು  ನೀರು ಹನಿಸಿ
ಮೇಲೆ ಮಣ್ಣು ಮುಚ್ಚಿ
ತರಗೆಲೆಯ ತಂಪು ನೀಡಿ
ಊಹ್ಞೂಂ...
ಗಿಡ ಚಿಗುರಲಿಲ್ಲ |

ಕಣ್ಣಿಗೂ ಕಾಣಿಸದಾಗಿ,  ಮರೆಯಾಗಿ
ಹೋಯಿತೇಕೆ ತಿಳಿಯಲಿಲ್ಲ
ಅದೇನು ಆಗಸದ ಅಬ್ಬರ
ಮಿಂಚು ಗುಡುಗುಗಳ ಮೇಲಾಟ
ಸುರಿಯಿತೇ ವರ್ಷಧಾರೆ
ನೆಲ ತಣಿಯಿತೇ
 ಕವಿಸಮಯ ಬಂದಿತೇ
ಸುರಿಸುರಿದು ಧುಮ್ಮಿಕ್ಕಿ
ಹರಿಹರಿದು ಒಸರುಕ್ಕಿ
ಆಹ್ಹಾ...
ಹೂವರಳಿಯೇ ಬಿಟ್ಟಿತು |










ವರ್ಷಧಾರೆ ಸುರಿಯುತಿದೆ
ಮನ ಗುನುಗುನುಗುತಿದೆ |

ಝಿಲ್ ಝಿಲ್ ಅನಿಸಲಿ ಮಿಂಚು ಸೆಳೆ
ಇಳಿಇಳಿದು ಬಾ ಮಳೆ
ಹಾಡುತಿರುವಳೆ
ಈ ತರಳೆ |










ಮುಗಿಲು ಹಾಕಿ,  ಬೀಸಿ ಗಾಳಿ
ಸುರಿದೇ ಬಿಟ್ಟಿತು ಮಳೆ
ಆಹಾ ....
 ಮಣ್ಣಿಗೂ ಪರಿಮಳ |

ಕವಿತೆಯ ರಸಧಾರೆ ಹರಿದಂತೆ
ಮಳೆಯ ಜಲಧಾರೆ ಸುರಿದಿಲ್ಲವಂತೆ
ಕೆಸರು ಕೊಳೆ ಅಲ್ಲಲ್ಲಿ ಉಳಿಯಿತೇ
ಹೆಚ್ಚಾಯಿತೆ ಮಣ್ಣ ಫಲವತ್ತತೆ  
ಹ್ಞಾ ... 
 ಇದು ಸಂಭ್ರಮದ ಸಂಗತಿ ಗೊತ್ತೇ |


ಅರಳಿಹಳು ಲಿಲ್ಲೀ ಬಿಳಿ ಬಿಳಿ
ನೋಡಿ ಬಿಡಿ ಒಮ್ಮೆ ಇಲ್ಲಿ ಕಣ್ಣರಳಿ
ಹಸಿರೆಲೆಯ ಮೇಲೆ ಬಿಳಿಯರಳಿ
ಇದೇನಿದು ನಿಸರ್ಗದ ಮೈಮಾಟ
ತೆಗೆಯಲು ಉಲ್ಲಾಸದಿ ಚಿತ್ರಪಟ
ಆಗಸವೇ ತಾನ್ ಮೇಲಾಗಿ ಬಿಳಿ ಲಿಲ್ಲಿಯರಳಿ
- ದಂತೆ, ಮುಗಿಲು ಮೇಲೆದ್ದಿಹುದು ಇಳಿ
- ದು ಬಂದಂತೆ ಇಳೆಗೆ 
ನಾಳೆಗೆ ಮುದುಡುವ ಹೂ ನೀನಾಗಿ
ಇಂದೇ ಬಿರಿಯುವ ಮುಗಿಲ್ ತಾನಾಗೆ
ಅರಳಿಹ ಹೂ ಕೆಳ ಬೀಳುವ ಮುನ್ನ
ಕೈ ಹಿಡಿದೆತ್ತಿರಿ ಒಮ್ಮೆ ನನ್ನ
ಮತ್ತೆ ಪುನರಾಗಮನ
ಮುಂದಿನ ವರುಷಕೇ ಚೆನ್ನ
ಓಹ್ಹೋ ....
 ಅಹುದಹುದೆನ್ನಿ |





Posted via DraftCraft app

ಟಿಪ್ಪಣಿ:  ದಿನಾಂಕ 15,  ಮೇ,  2014ರಂದು ಸೇರಿಸಿದ್ದು.

ಗುಡುಗು ಸಿಡಿಲಿನ ಆರ್ಭಟ
ಮೇಲೆದ್ದಿತಲ್ಲ ಹೂ ಕಿರೀಟ
ಮುಂಜಾನೆಯ ಬಯಲಾಟ



ಟಿಪ್ಪಣಿ:  ಬುಧವಾರ,  ತಾರೀಕು 25,  2016ರಂದು ಬರೆದ ಚಿತ್ರಕವನ


                                     

Sunday 12 May 2013

ಹಣ್ಣು ಹಲಸು, ಸವಿ ಸವಿ ತಿನಿಸು








ಸಿಹಿಯಾದ ಬಕ್ಕೆ ಹಲಸಿನ ಹಣ್ಣು ಮನೆಯೊಳಗೆ ಬಂದಿತು.   ಮೊದಲನೆಯದಾಗಿ,  ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು  ತಿಂದು ಮುಗಿಸುವುದು.   ಎಷ್ಟು ತಿನ್ನಬಹುದೂ, ನೀವೇ ಹೇಳಿ,  ಉಳಿಯಿತು.  ದೋಸೆ ಮಾಡಿಕೊಳ್ಳೋಣ.

2  ಕಪ್ ಅಕ್ಕಿ.   ನೆನೆಸಿಡಿ.
10ರಿದ 15 ಬಿಡಿಸಿದ ಹಣ್ಣಿನ ಸೊಳೆಗಳು.
ರುಚಿಗೆ ಉಪ್ಪು.

ಹಣ್ಣುಗಳನ್ನು ಮಿಕ್ಸೀಯಲ್ಲಿ ಪುಡಿ ಪುಡಿ ಮಾಡಿಕೊಳ್ಳಿ.
ಅಕ್ಕಿಯನ್ನು ನುಣ್ಣಗೆ ಅರೆದು ಪುಡಿ ಅಥವಾ ಮುದ್ದೆಯಾದ ಹಣ್ಣನ್ನು ಸೇರಿಸಿ,  ಇನ್ನೆರಡು ಸುತ್ತು ತಿರುಗಿಸಿ, ರುಚಿಗೆ ಉಪ್ಪು ಸೇರಿಸಿ ಮುಚ್ಚಿಡಿ.   ಅರ್ಧ ಗಂಟೆ ಬಿಟ್ಟು ದೋಸೆ ಎರೆಯಿರಿ.   ಖಾರವಾದ ಶುಂಠೀ ಚಟ್ನಿ ಇರಲಿ.

ಇದೇ ಹಿಟ್ಟಿನಿಂದ ಸಿಹಿ ಭಕ್ಷ್ಯ ಮಾಡಿಕೊಳ್ಳೋಣ,  ಹೇಗೇ ಅಂತೀರಾ ?

ದೋಸೆ ಹಿಟ್ಟು ಮಿಕ್ಕಿದ್ದು ಸಾಕು.   ಹಿಟ್ಟು ಹುಳಿ ಬಂದಿರಬಾರದು.

 ದಪ್ಪ ತಳದ ಬಾಣಲೆ ಒಲೆಯ ಮೇಲೆ ಇಟ್ಟು ಒಂದು ಚಮಚ ಎಳ್ಳು ಹುರಿಯಿರಿ.

ಒಂದು ಅಚ್ಚು ಬೆಲ್ಲ ಪುಡಿ ಮಾಡಿ ಅದೇ ಬಾಣಲೆಗೆ ಹಾಕಿಕೊಳ್ಳಿ,  ಸ್ವಲ್ಪವೇ ನೀರೆರೆದು ಕುದಿಸಿ,   ಬೆಲ್ಲ ಕರಗಿ ನೊರೆ ನೊರೆಯಾಗಿ ಮೇಲೆ ಬರುತ್ತಿದ್ದಂತೆ,  ಈ ದೋಸೆಹಿಟ್ಟನ್ನು ಸುರಿದು,  ಸೌಟಿನಲ್ಲಿ ಚೆನ್ನಾಗಿ ಬೆರೆಸಿ,  ಕೆಳಗಿಳಿಸಿ.

ಅಪ್ಪದ ಕಾವಲಿಗೆ ತುಪ್ಪ ಎರೆದು ಒಲೆಯ ಮೇಲೆ ಇಟ್ಟು,  ಬಿಸಿಯಾದ ಗುಳಿಗಳಿಗೆ ಈ ಹಿಟ್ಟು ಎರೆದು ಎರಡೂ ಬದಿ ಕೆಂಪಗಾದೊಡನೆ ತೆಗೆಯಿರಿ.  ಈ ಅಪ್ಪಂ ಎರಡು ದಿನ ಇಟ್ಟುಕೊಳ್ಳಬಹುದು.




                     <><><>     <><><>




ಈಗ ಕಡುಬು ಮಾಡುವ ವಿಧಾನವನ್ನೂ ನೋಡಿಕೊಳ್ಳೋಣ.

ಹಲಸಿನ ಹಣ್ಣಿನ ಕಡುಬು ತಯಾರಿಗೆ ಬಾಳೆ ಎಲೆ ಅವಶ್ಯ.   ಹಬೆಯಲ್ಲಿ ಬೇಯಿಸುವ ಈ ಕಡುಬನ್ನು  2 - 3 ದಿನ ಇಟ್ಟು ಉಪಯೋಗಿಸಬಹುದಾಗಿದೆ.   ಗೆಣಸಲೆ,  ಕೊಟ್ಟಿಗೆ, ಗಟ್ಟಿ,  ಅಡ್ಯ,  ಅಡೆ  ಹೀಗೆ ಹತ್ತು ಹಲವು ಹೆಸರುಗಳೂ ಈ ತಿಂಡಿಗೆ ಇದೆ.   ಈಗ ನಾವು ಸರಳ ವಿಧಾನದಲ್ಲಿ ಮಾಡೋಣ.

ಬಾಳೆ ಎಲೆಗಳನ್ನು ಬಾಡಿಸಿ ಇಟ್ಟುಕೊಳ್ಳಿ,  ಮೈಕ್ರೋವೇವ್ ಆವೆನ್ ಬಳಸಬಹುದು.
2  ಕಪ್ ಅಕ್ಕಿ.  ಅಕ್ಕಿತರಿಯಾದರೆ ಉತ್ತಮ.  ನೆನೆಸಿಡಿ.
ಒಂದು ಬಟ್ಟಲು ಹಣ್ಣುಗಳನ್ನು  ( ಚಿತ್ರದಲ್ಲಿ ಇರುವಷ್ಟು )  ಮಿಕ್ಸೀಯಲ್ಲಿ ಪುಡಿ ಮಾಡಿ.
ಒಂದು ಅಚ್ಚು ಬೆಲ್ಲದ ಪುಡಿ,  ರುಚಿಗೆ ಉಪ್ಪು,  ನೆನೆಸಿಟ್ಟ ಅಕ್ಕೀತರಿ ಸೇರಿಸಿ ಪುನಃ ಕಡೆಯಿರಿ.   ಹೆಚ್ಚು ನುಣ್ಣಗಾಗುವ ಅಗತ್ಯವಿಲ್ಲ.   ನೀರು ಮಿತವಾಗಿ ಬಳಸಿ.  ಸೌಟಿನಲ್ಲಿ ಮುದ್ದೆಯಾಗಿ ಎತ್ತಲು ಬರುವಂತಿರಬೇಕು.

ಬಾಡಿಸಿದ ಬಾಳೆಲೆಯೊಳಗೆ ಚಿಕ್ಕ ಸೌಟಿನಲ್ಲಿ ಹಿಟ್ಟು ತುಂಬಿ,  ಚೆನ್ನಾಗಿ ಮಡಚಿ ಉಗಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ.

ರಾತ್ರಿ ಮಾಡಿ ಇಟ್ಟುಕೊಂಡಲ್ಲಿ  " ಬೆಳಗಿನ ತಿಂಡಿ ಏನು ಮಾಡಲೀ "  ಎಂದು ಪರದಾಡುವ ಚಿಂತೆಯಿಲ್ಲ.   ಬೇಕಿದ್ದರೆ  ಶುಂಠಿ ಚಟ್ನಿ ಮಾಡಬಹುದು.   ಹಾಗೇನೇ ಮೇಲೆ ತೆಂಗಿನೆಣ್ಣೆ ಎರೆದು ತಿನ್ನುವುದು ವಾಡಿಕೆ,  ತುಪ್ಪವೂ ಆದೀತು.




Posted via DraftCraft app

Sunday 5 May 2013

ಪುಟ್ಟಿಯ ಹಣ್ಣಿನ ಬುಟ್ಟಿ









ಬಂದಿಹುದು ವಸಂತಮಾಸ
ಕಣ್ಮನ ತುಂಬಿದ ಸಂತಸ |

ಹಣ್ಣುಗಳೊಡೆಯ ಇಲ್ಲಿಹನು
ನಾನೇ ರಾಜ ಅನುತಿಹನು |

ಇಲ್ಲಿದೆ ಮಾವಿನಹಣ್ಣಿನ ಬುಟ್ಟಿ
ಎಲ್ಲಿರುವೇ ನೀನು ಪುಟ್ಟಿ |

ಮಾಂಬಳ ಎರೆಯಲೆ
ಚಾಕಲೇಟ್ ಮಾಡಲೆ
ಹೇಳಲೆ ನೀ ಬಾಲೆ |

ಗೊಜ್ಜು,  ಸಾರು ಬೇಡಮ್ಮ
ಹಣ್ಣು ಹಾಗೇ ಸಾಕಮ್ಮ |

ಮಾಂಬಳ ನನಗೆ ಆಗಲ್ಲ
ಚಾಕಲೇಟ್ ಏನೂ ಬೇಕಿಲ್ಲ |

ನೋಡೇ ಅಮ್ಮನ ಮಸಲತ್ತು
ಬಂದಿದೆ ಮಾವಿನ ಶರಬತ್ತು
ಕುಡಿಯೇ ನೀ ಮುದ್ದಿನ ಮುತ್ತು |





Posted via DraftCraft app